ಶ್ರವಣಕುಮಾರಿ ಸರಣಿ: ನನಗೆ ಆ ದುಡ್ಡು ಬಂದೇ ಇಲ್ಲ…

ಸ್ವಯಂ ಸರಾಫ ಯಂತ್ರ ಸ್ವಾರಸ್ಯಕರ ಪ್ರಸಂಗಗಳು

ಸಾಮಾನ್ಯವಾಗಿ ಸ.ನಿ.ಹ.ದಲ್ಲಿ ವ್ಯವಹರಿಸುವಾಗ ಮೂರು ರೀತಿಯ ತೊಂದರೆಗಳು ಎದುರಾಗಬಹುದು. ಮೊದಲನೆಯದು ಗ್ರಾಹಕನ ಖಾತೆಯಲ್ಲಿ ಹಣ ಕಡಿತವಾಗಿರುತ್ತದೆ, ಆದರೆ ಸ.ನಿ.ಹ.ದಲ್ಲಿ ಹಣ ಬಂದಿರುವುದಿಲ್ಲ. ಎರಡನೆಯದು ಕಡಿಮೆ/ಜಾಸ್ತಿ ಹಣ ಬಂದಿರುತ್ತದೆ, ಆದರೆ ಕೇಳಿದ ಪೂರ್ಣಮೊತ್ತ ಖಾತೆಯಲ್ಲಿ ಕಡಿತವಾಗಿರುತ್ತದೆ. ಮೂರನೆಯದು ಹಣ ಬಂದಿರುತ್ತದೆ; ಆದರೆ ಖಾತೆಯಲ್ಲಿ ಹಣ ಕಡಿತವಾಗಿರುವುದಿಲ್ಲ.

ಮೊದಲನೆಯ ತೊಂದರೆ ಬಂದಾಗ ಗ್ರಾಹಕ ತಕ್ಷಣವೇ ಬ್ಯಾಂಕಿಗೆ ಓಡಿ ಬಂದು ದೂರು ಸಲ್ಲಿಸುತ್ತಾನೆ. ಎರಡನೆಯ ತೊಂದರೆಯಲ್ಲಿ ಕಡಿಮೆ ಬಂದಿದ್ದರೆ ಮಾತ್ರ ಬಂದು ದೂರು ಕೊಡುತ್ತಾನೆ, ಹೆಚ್ಚಿದ್ದರೆ ಹೆಚ್ಚಾಗಿ ಅವನ ಜೋಬಿಗೆ, ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು (ಕೋಶಾಧಿಕಾರಿಯ, ಲೆಕ್ಕಾಧಿಕಾರಿಯ ಅದೃಷ್ಟ ಚೆನ್ನಾಗಿದ್ದರೆ) ಬಂದು ಹೇಳಿ ಹೆಚ್ಚಾದ ಮೊತ್ತವನ್ನು ಮರಳಿ ಕೊಡುವುದಿದೆ. ಮೂರನೆಯ ತೊಂದರೆ ಬರುವುದು ಬ್ಯಾಂಕಿನ ಪಾಲಿಗೆ.

ಗ್ರಾಹಕನ ಖಾತೆಯಲ್ಲಿ ಹಣವಿದ್ದರೇನೋ ಪರವಾಗಿಲ್ಲ; ತಕ್ಷಣ ಋಣಿಸಿಬಿಡಬಹುದು. ಇಲ್ಲವಾದರೆ ಅವನ ಹಿಂದೆ ಬಿದ್ದು ಮರಳಿ ಪಡೆಯುವುದು ಒಂದು ಸಾಹಸವೇ. ಕೆಲವಷ್ಟು ಪ್ರಸಂಗಗಳಲ್ಲಿ ಹಣ ಪಡೆದ ತಕ್ಷಣ ಖಾತೆಯ ವಿವರವನ್ನು ನೋಡಿಕೊಳ್ಳುವ ಗ್ರಾಹಕ ಇನ್ನೂ ಹಣ ಕಡಿತವಾಗದಿದ್ದಲ್ಲಿ ತಕ್ಷಣವೇ ಅಲ್ಲಿ ಸಾಧ್ಯವಿರುವಷ್ಟು ಮೊತ್ತವಷ್ಟನ್ನೂ ಒಮ್ಮೆಲೇ ತೆಗೆದುಬಿಡುತ್ತಾನೆ.

ಗ್ರಾಹಕ ಪ್ರಾಮಾಣಿಕನಾಗಿದ್ದಲ್ಲಿ, ಇಲ್ಲವೇ ಸಂಬಳ ಜಮೆಯಾಗುವ ಖಾತೆಯಾಗಿದ್ದಲ್ಲಿ, ಮುಂದಿನ ಸಂಬಳದ ದಿನ ವಾಪಸ್ಸು ಬರುವ ಖಾತ್ರಿಯಾದರೂ ಇರುತ್ತದೆ; ಇಲ್ಲದೇ ಬರಿಯ ಸಾಧಾರಣ ಖಾತೆಯಾದರೆ ಮರಳಿ ಬಂದರೆ ಶಾಖಾ ವ್ಯವಸ್ಥಾಪಕರ, ಲೆಕ್ಕಾಧಿಕಾರಿಯ ಪುಣ್ಯ. ಆ ಪುಣ್ಯಸಂಚಯ ಕಡಿಮೆಯಾಗಿದ್ದರೆ ಒಂದು ಕಡೆ ಆ ಗ್ರಾಹಕನಿಗೆ ಕರೆ ಮಾಡುತ್ತಿರಬೇಕು, ಇನ್ನೊಂದೆಡೆ ಮೇಲಿನವರಿಂದ (ಒಂದು ಕಡೆಯಿಂದಲ್ಲ; ಮೂರ್ನಾಲ್ಕು ದಿಗ್ದೆಸೆಗಳಿಂದ) ಬರುವ ಜಬರ್ದಸ್ತಿ ಕರೆಗಳಿಗೆ ಹಣವನ್ನು ಮರಳಿ ಪಡೆಯುವವರೆಗೆ ತಮ್ಮಿಂದಲೇ ಈ ಪ್ರಮಾದ ಜರುಗಿದಂತೆ ತಪ್ಪಿತಸ್ತ ಭಾವದಿಂದ ಉತ್ತರಿಸುತ್ತಲೇ ಇರಬೇಕು!

ಇಂತಹ ಗ್ರಾಹಕನ ಖಾತೆಯಲ್ಲಿ ಕಡಿತವಾಗದೆ ಹಣ ಸಂದಾಯವಾಗಿಬಿಟ್ಟಿದ್ದರೆ ಆ ಮೊತ್ತ ಬ್ಯಾಂಕಿನಲ್ಲಿ ಅದಕ್ಕಾಗೇ ಇರುವ ಋಣದ ಖಾತೆಯಲ್ಲಿ ಋಣಿಸಲಾಗುತ್ತದೆ. ಹಾಗೆಯೇ ಗ್ರಾಹಕನ ಖಾತೆಯಲ್ಲಿ ಹಣ ಕಡಿತವಾಗಿದೆ, ಆದರೆ ಅವನಿಗೆ ದುಡ್ಡು ಬಂದಿಲ್ಲ ಎನ್ನುವಂತಹ ಮೊತ್ತಗಳನ್ನು ಸ್ವಿಚ್‌ ಕೇಂದ್ರದಿಂದ ನೇರವಾಗಿ ಗ್ರಾಹಕನ ಖಾತೆಗೆ ವಾಪಸ್ಸು ಮಾಡುತ್ತಾರೆ. ಕೆಲವೊಮ್ಮೆ ನೇರವಾಗಿ ಗ್ರಾಹಕನ ಖಾತೆಗೆ ಹಾಕಲಾಗದೆ ಇದ್ದಾಗ ಅದಕ್ಕಾಗೆ ಇರುವ ಜಮಾ ಖಾತೆಗೆ ಜಮಾ ಮಾಡಿರುತ್ತಾರೆ.

ಇವೆರಡೂ ಖಾತೆಗಳು ಯಾವಾಗಲೂ ಶೂನ್ಯ ಮೊತ್ತವನ್ನು ತೋರಿಸುತ್ತಿರಬೇಕು ಹಾಗೆಯೇ ಗ್ರಾಹಕರ ದೂರು ನಿರ್ವಹಣೆಯೂ ಕೂಡಾ ನಿರ್ದಿಷ್ಟ ಸಮಯದೊಳಗೆ ಸಮರ್ಪಕವಾಗಿ ಈಡೇರಬೇಕು ಎನ್ನುವುದು ಮೇಲಿನವರ ಅಪೇಕ್ಷೆ (ಶಾಖಾ ವ್ಯವಸ್ಥಾಪಕ, ಲೆಕ್ಕಾಧಿಕಾರಿಯದೂ ಕೂಡಾ). ಈ ಗುರಿಯನ್ನು ಸಾಧಿಸುವಲ್ಲಿ ನಾನು ಕಂಡ ಕೆಲವು ಸ್ವಾರಸ್ಯಕರ ಪ್ರಸಂಗಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ನನಗೆ ಆ ದುಡ್ಡು ಬಂದೇ ಇಲ್ಲ

ನಮ್ಮ ಶಾಖೆಯ ಗ್ರಾಹಕರೊಬ್ಬರು (ಬಹುವಚನ ಏಕೆಂದರೆ ಅವರು ತಮ್ಮ ಆಮದು, ರಫ್ತಿನ ವ್ಯಾಪಾರದ ವಹಿವಾಟುಗಳನ್ನೂ ನಮ್ಮಲ್ಲಿನ ವ್ಯವಹಾರ ಖಾತೆಯಿಂದಲೇ ಮಾಡುತ್ತಿದ್ದ ಹಾಗೂ ಬ್ಯಾಂಕೆಂದರೆ ತಾನು ಸಂಪರ್ಕಿಸಬೇಕಾದ್ದು ಕೇವಲ ವಿದೇಶಿ ವ್ಯವಹಾರಗಳ ವಿಭಾಗ ಮತ್ತು ಶಾಖಾ ವ್ಯವಸ್ಥಾಪಕರನ್ನು ಮಾತ್ರ ಎಂದು ತಮಗೆ ತಾವೇ ಅಂದುಕೊಂಡಿದ್ದ ಅತಿ ಮುಖ್ಯ ಗ್ರಾಹಕರಲ್ಲೊಬ್ಬರು! ಎಂದರೆ ದೊಡ್ಡವರಲ್ಲವೇ?!) ದಿಲ್ಲಿಯಲ್ಲಿನ ಸ್ವಯಂ ಸರಾಫ ಯಂತ್ರವೊಂದರಿಂದ 20000/- ನಗದನ್ನು ಎರಡು ಬಾರಿ ತಮ್ಮ ಉಳಿತಾಯ ಖಾತೆಯಿಂದ ತೆಗೆದುಕೊಂಡಿದ್ದರು. ಆದರೆ ಖಾತೆಯಲ್ಲಿ ಒಮ್ಮೆ ಮಾತ್ರ ಕಡಿತವಾಗಿ, ಇನ್ನೊಂದು ಮೊತ್ತವನ್ನು ಋಣಿಸುವ ಮೊದಲೇ ತಾಂತ್ರಿಕ ತೊಂದರೆಯಿಂದಾಗಿ ಅವರಿಗೆ ಹಣ ಸಂದಾಯವಾಗಿತ್ತು; ಆದರೆ ಋಣಿಸುವಷ್ಟು ಮೊತ್ತ ಅವರ ಖಾತೆಯಲ್ಲಿರಲಿಲ್ಲ. ಹಿಂದೆಯೇ ನಮ್ಮ ಋಣದ ಖಾತೆಗೆ ಬಂದು ಬಿತ್ತು.

ನಮ್ಮಲ್ಲಿ ವಿದೇಶಿ ವಿನಿಮಯ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗೆ ಆ ಗ್ರಾಹಕರನ್ನು ಸಂಪರ್ಕಿಸಿ, ವಿಷಯವನ್ನು ತಿಳಿಸಿ ಇದನ್ನು ಸರಿಪಡಿಸಲು ಹೇಳಲು ಕೋರಿಕೊಂಡೆ. ಅತಿ ಪ್ರಮುಖ ಗ್ರಾಹಕರನ್ನು ಸಂಪರ್ಕಿಸುವಾಗ ನಮ್ಮ ಹಿತ ದೃಷ್ಟಿಯಿಂದ ಕೆಲವು ನೀತಿ ನಿಯಮಗಳನ್ನು ಇಟ್ಟುಕೊಳ್ಳುವುದು ನಮಗೇ ಒಳಿತು. ಅಧಿಕಾರಿಯೂ ನಾಜೂಕಾಗಿ ಆ ಗ್ರಾಹಕರಿಗೆ ಪರಿಸ್ಥಿತಿಯನ್ನು ವಿವರಿಸಿ ಖಾತೆಗೆ ಹಣವನ್ನು ಜಮೆ ಮಾಡಲು ಕೋರಿಕೊಂಡರು. ಆದರೆ ಆ ಗ್ರಾಹಕರು ʻತಾನು ಎರಡು ಬಾರಿ ಹಣ ತೆಗೆಯಲು ಪ್ರಯತ್ನಿಸಿದ್ದು ನಿಜ; ಆದರೆ ಹಣ ಬಂದದ್ದು ಒಂದೇ ಬಾರಿ; ಹಾಗಾಗಿ ವಾಪಸ್ಸು ಕೊಡುವಂತದೇನೂ ಇಲ್ಲʼ ಎಂದು ಸಾರಾಸಗಟಾಗಿ ನಮ್ಮ ಮನವಿಯನ್ನು ತಿರಸ್ಕರಿಸಿದರು.

ಸ.ನಿ.ಹ.ದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಯನ್ನು ಇ.ಜೆ.ಲಾಗ್‌ ಎನ್ನುವ ತಂತ್ರಾಂಶ ದಾಖಲಿಸುತ್ತದೆ. ಅವರು ಹಣ ಪಡೆದ ಸ.ನಿ.ಹ.ದ ಇ.ಜೆ.ಲಾಗನ್ನು ನೋಡಿದರೆ ಪ್ರತಿ ವಿವರವೂ ಕಣ್ಣಿಗೆ ಕಟ್ಟಿದ ಹಾಗಿದೆ. ಉದಾಹರಣೆಗೆ ವಹಿವಾಟು ಆರಂಭವಾಗಿದೆ…(ಸಮಯ ಗಂಟೆ 10, ನಿಮಿಷ 20, ಸೆಕೆಂಡು 15); ಕಾರ್ಡನ್ನು ತೂರಿಸಲಾಗಿದೆ (ಗಂ.10 ನಿ.20 ಸೆ.50 ) ಪಿನ್‌ ಸಂಖ್ಯೆಯನ್ನು ನಮೂದಿಸಲಾಗಿದೆ (ಗಂ.10 ನಿ.21 ಸೆ.15) ಬ್ಯಾಂಕಿಂಗ್‌ ವ್ಯವಹಾರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ (ಗಂ.10 ನಿ.21 ಸೆ.55) ಹಣ ಪಡೆಯಲು ಕೋರಲಾಗಿದೆ (ಗಂ.10 ನಿ.22 ಸೆ.10) ಹಣದ ಮೊತ್ತ 20000 ನಮೂದಿಸಲಾಗಿದೆ (ಗಂ.10 ನಿ.22 ಸೆ.50) ಹಣ ಹೊರತಳ್ಳಲ್ಪಟ್ಟಿದೆ (ಗಂ.10 ನಿ.23 ಸೆ.50) 19,1,5 (ಅಂದರೆ 1000 ರೂಪಾಯಿನ 19 ನೋಟುಗಳು, 500 ರೂಪಾಯಿನ 1 ನೋಟು, 100 ರೂಪಾಯಿನ 5 ನೋಟುಗಳು ನಂತರ ಷರಾ: ವ್ಯವಹಾರ ಫಲಪ್ರದವಾಗಿದೆ (ಆಗ ಸಾವಿರ ರೂಪಾಯಿ ಇನ್ನೂ ಚಾಲ್ತಿಯಲ್ಲಿದ್ದ ಕಾಲ).

ಈ ರೀತಿ ಅವರು ನಡೆಸಿದ ಎರಡೂ ವಹಿವಾಟುಗಳ ವಿವರದ ಕ್ಷಣಕ್ಷಣದ ಚರಿತ್ರೆ ಸ್ಫುಟವಾಗಿ ತೋರುತ್ತಿದೆ. ಮಧ್ಯೆ ಕೆಲ ಕ್ಷಣಗಳು ತಾಂತ್ರಿಕ ತೊಂದರೆಯಿಂದಾಗಿ ಸ್ವ.ಸ.ಯಂ ಕೆಲಸ ಮಾಡಿಲ್ಲ. ಅಂದರೆ ಇವರ ಮೊದಲನೇ ವಹಿವಾಟನ್ನು ಖಾತೆಗೆ ಋಣಿಸಲು ಸಾಧ್ಯವಾಗಿಲ್ಲ. ನಂತರ ವಹಿವಾಟಿನ ವಿವರವನ್ನು ಪಡೆದುಕೊಂಡು ಎರಡನೆಯ ಬಾರಿ ಮತ್ತೆ ಪ್ರಯತ್ನಿಸಿದ್ದಾರೆ. ಅದೂ ಫಲಪ್ರದವಾಗಿದೆ.

ನಾನು ನಮ್ಮ ತಂತ್ರಾಂಶದಲ್ಲಿ ಪ್ರತಿ ನಿಮಿಷದ ವಿವರಗಳೂ ದಾಖಲಾಗಿದೆ, ವಹಿವಾಟಿನ ಪ್ರತಿ ವಿವರಗಳೂ ಹೀಗಿವೆ. ಹಾಗಾಗಿ ಆದಷ್ಟು ಬೇಗನೆ ಖಾತೆಗೆ ಹಣ ಜಮಾ ಮಾಡಿ ಎಂದು ಕೋರಿ ಪತ್ರವನ್ನು ಬರೆದು ಶಾಖಾ ವ್ಯವಸ್ಥಾಪಕರ ರುಜುವಿನೊಂದಿಗೆ ರವಾನಿಸಿದೆ.

ಮರುದಿನವೇ ಅವರು ಶಾಖಾ ವ್ಯವಸ್ಥಾಪಕರಿಗೆ ಕರೆ ಮಾಡಿ ಹಣ ತೆಗೆದುಕೊಳ್ಳಲು ತಮ್ಮ ಪತ್ನಿಯು ಹೋಗಿದ್ದು, ಎರಡು ಬಾರಿ ಹಣ ಪಡೆದಿರುವ ವಿಷಯ ಈಗಷ್ಟೇ ಆಕೆಯಿಂದ ತಿಳಿದು ಬಂತು. ಸಂವಹನ ಕೊರತೆಯಿಂದಾಗಿ ಇಂತಹ ಒಂದು ಪ್ರಸಂಗ ನಡೆದಿದೆ ಎಂದು ವಿಷಾದ(?) ವ್ಯಕ್ತಪಡಿಸಿ ಒಂದೆರಡು ದಿನಗಳಲ್ಲೇ ಹಣವನ್ನು ಜಮೆ ಮಾಡುತ್ತೇನೆಂದು ಹೇಳಿ ಈ ಪ್ರಸಂಗವು ನೆಮ್ಮದಿಯಾಗಿ ಮುಕ್ತಾಯವಾಯಿತು. ಇಂತಹ  ಪ್ರಸಂಗಗಳಲ್ಲಿ ಇ.ಜೆ.ಲಾಗ್‌ ಬ್ಯಾಂಕರನ ಪಾಲಿಗೆ ಭಗವದ್ಗೀತೆಯೇ. ಅತಿ ಮುಖ್ಯ ಗ್ರಾಹಕರೆಲ್ಲರೂ ಪ್ರಾಮಾಣಿಕರಾಗೇ ವ್ಯವಹರಿಸುತ್ತಾರೆ ಎನ್ನುವಂತಿಲ್ಲ.

ಹೀಗಾದರೇನು ಗತಿ…..!

ಗ್ರಾಹಕನೂ ನಮ್ಮ ಬ್ಯಾಂಕಿನವನೇ ಆಗಿದ್ದು, ಸ್ವ.ಸ.ಯಂ. ಕೂಡಾ ನಮ್ಮದೇ ಆಗಿದ್ದರೆ ಆಗ ಹೇಗಾದರೂ ಜಾಡನ್ನು ಹಿಡಿಯಬಹುದು. ಕೆಲವು ಬಾರಿ ಬೇರೆ ಬ್ಯಾಂಕಿನ ಗ್ರಾಹಕರು ನಮ್ಮ ಸ.ನಿ.ಹ.ವನ್ನು ಉಪಯೋಗಿಸಿದಾಗ ಇಂತಹ ತೊಂದರೆಗಳಾದಲ್ಲಿ ದುಡ್ಡನ್ನು ಮರಳಿ ತರುವಲ್ಲಿನ ಕಷ್ಟ ದೇವರಿಗೇ ಪ್ರೀತಿ.

ಒಮ್ಮೆ ಹೀಗಾಯಿತು. ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌ನ ಗ್ರಾಹಕನೊಬ್ಬನು ನಮ್ಮ ಸ.ನಿ.ಹ.ದಿಂದ ಪಡೆಯಲು ಯತ್ನಿಸಿದ. ಹಣ ಬಾರದೆ ಅವನ ಖಾತೆಯು ಮಾತ್ರ ಋಣಿತವಾಗಿತ್ತು. ತಕ್ಷಣವೇ ಅವನು ಕರೆ ಕೇಂದ್ರಕ್ಕೆ ಕರೆಮಾಡಿ ದೂರು ಸಲ್ಲಿಸಿದ. ಆ ದೂರನ್ನು ಪರಿಹರಿಸಲು ಸ್ವಿಚ್‌ ಕೇಂದ್ರದವರು  20000/- ರೂಪಾಯಿಗಳ ಮೊತ್ತವನ್ನು ನಮ್ಮ ಶಾಖೆಗೆ ಋಣಿಸಿದ್ದರು. ಗ್ರಾಹಕ ಆ ಬ್ಯಾಂಕಿನವನು. ಆತನ ಖಾತೆಯಲ್ಲಿ ನಡೆದ ವಹಿವಾಟಿನ ಯಾವ ವಿವರವೂ ನಮಗೆ ದೊರೆಯುವುದಿಲ್ಲ.

ಇ ಜೆ ಲಾಗ್‌ನಲ್ಲಿ ಆ ವಹಿವಾಟಿನಲ್ಲಿ ಏನೋ ತೊಂದರೆಯಿದೆಯೆಂದು ಹೇಳುತ್ತಿದೆ. ಆದರೆ ನಮ್ಮ ಸ.ನಿ.ಹ.ದಲ್ಲಿ ಆ ದಿನ ಪಾವತಿಯಾಗದ ಮೊತ್ತ ಬಂದು ಬೀಳುವ ಕೋಶದಲ್ಲಿ ಯಾವುದೇ ಹಣ ಬಿದ್ದಿಲ್ಲ. ಹಾಗಾಗಿ ಈ ಮೊತ್ತ ಸುಮಾರು ದಿನಗಳು ನಮ್ಮ ಖಾತೆಯಲ್ಲಿ ಬಿಡಿಸಲಾಗದ ಕಗ್ಗಂಟಾಗಿ ಉಳಿದುಕೊಂಡಿತ್ತು.

ನಾವು ನಮ್ಮ ಮೇಲಿನವರನ್ನು ಸಂಪರ್ಕಿಸಿದಾಗ ನಮ್ಮ ಸ್ವ.ಸ.ಯಂ.ನಲ್ಲಿ ಆ ದಿನ ಹೆಚ್ಚುವರಿ ಹಣ ಬಂದಿರಲೇಬೇಕೆಂಬ ವಾದ ಅವರದ್ದು. ಇಲ್ಲದ ಹಣವನ್ನು ಎಲ್ಲಿಂದ ತರುವುದು?! ಪ್ರತಿ ಬಾರಿ ಆ ಖಾತೆಯನ್ನು ತೆರೆದಾಗಲೂ ಅದು ನನ್ನ ಕಣ್ಮುಂದೆ ಕುಣಿಯುತ್ತಾ ಅಣಕಿಸತೊಡಗಿತು.

ಇದ್ದಕ್ಕಿದ್ದಂತೆ ಒಂದು ದಿನ ಒಂದು ಉಪಾಯ ಹೊಳೆದು ಮೈಸೂರಿನ ನನ್ನ ಮಳೆಯಾಳಿ ಗೆಳತಿಗೆ ಫೋನಾಯಿಸಿ ವಿಷಯ ತಿಳಿಸಿ, ಅವಳಿಗೆ ʻಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌ʼನಲ್ಲಿ ಕೆಲಸ ಮಾಡುತ್ತಿರುವವರು ಯಾರಾದರೂ ಗೊತ್ತೇʼ ಎಂದು ವಿಚಾರಿಸಿದೆ. ಅವಳು ತನ್ನ ಗೆಳತಿಯೊಬ್ಬಳ ಸಂಪರ್ಕ ಸಂಖ್ಯೆಯನ್ನು ಕೊಟ್ಟಳು. ನಾನು ಆಕೆಯನ್ನು ಸಂಪರ್ಕಿಸಿ, ಆ ಗ್ರಾಹಕನ ಖಾತೆಯ ಸಂಖ್ಯೆಯನ್ನು ನೀಡಿ ಆ ದಿನದ ವಹಿವಾಟಿನ ವಿವರವನ್ನು ನೀಡುವಂತೆ ಕೋರಿಕೊಂಡೆ.

ಗ್ರಾಹಕನಿಗೆ ಬಾರದೇ ಅವನ ಖಾತೆಯಲ್ಲಿ ಋಣಿತವಾಗಿದ್ದ ಮೊತ್ತ ಮಾರನೆಯ ದಿನವೇ ಸ.ನಿ.ಹ.ದ ಸ್ವಿಚ್‌ ಕೇಂದ್ರದಿಂದ ಮರಳಿ ಜಮೆಯಾಗಿತ್ತು. ಅಷ್ಟರೊಳಗೇ ಅವನು ದೂರು ಸಲ್ಲಿಸಿದ್ದರಿಂದ ʻನಮ್ಮ ಬ್ಯಾಂಕಿನಿಂದಲೂ ಅವರ ಬ್ಯಾಂಕಿನ ಸ್ವ.ಸ.ಯಂ.ದ ದೂರು ನಿರ್ವಹಣಾ ಕೇಂದ್ರಕ್ಕೆ ಹಣ ಪಾವತಿಯಾಗಿರಬಹುದುʼ ಎಂದು ಊಹಿಸಿ ಅವಳಿಂದ ಆ ಕೇಂದ್ರದ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡೆ.

ಅವರಿಗೆ ಫೋನಾಯಿಸಿ, ವಹಿವಾಟಿನ ವಿವರಗಳನ್ನು ನೀಡಿ ʻಇಂತಹ ಮೊತ್ತವೊಂದು ಅವರಲ್ಲಿ ಉಳಿದುಕೊಂಡಿದೆಯೇʼ ಎಂದು ಕೇಳಿದೆ. ಗ್ರಾಹಕನ ಖಾತೆಗೆ ಜಮೆ ಮಾಡುವ ಮುನ್ನವೇ ಅದು ಮರಳಿ ಬಂದಿತ್ತಾದ್ದರಿಂದ, ಅವರೂ ತಮ್ಮ ಖಾತೆಯಲ್ಲೂ ಜಮೆಯಾಗಿದ್ದ ಆ ಮೊತ್ತವನ್ನು ಹಾಗೆಯೇ ಉಳಿಸಿಕೊಂಡಿದ್ದರು. ಆದರೂ ಮತ್ತೊಮ್ಮೆ ಗ್ರಾಹಕನ ಖಾತೆಯನ್ನು ನೋಡಿ ವಹಿವಾಟಿನ ಸಂಖ್ಯೆ, ಸ.ನಿ.ಹ.ದ ಸಂಖ್ಯೆ, ಮೊತ್ತ, ದಿನಾಂಕ ಎಲ್ಲವನ್ನೂ ಪರಿಶೀಲಿಸಿಕೊಂಡು ಆ ಮೊತ್ತ ತಮಗೆ ಹೆಚ್ಚುವರಿಯಾಗಿ ಬಂದಿದೆ ಎಂದು ದೃಢಪಡಿಸಿದರು.

ನಂತರ ಶಾಖಾ ವ್ಯವಸ್ಥಾಪಕರಿಂದ ಅಧಿಕೃತವಾಗಿ ಅವರಿಗೆ ಪತ್ರ ಕಳುಹಿಸಿ ಆ ಮೊತ್ತವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದೆವು. ತಲೆನೋವಾಗಿ ಕುಳಿತಿದ್ದ ಈ ಮೊತ್ತ ಬಗೆಹರಿದ ರೀತಿಗೆ ಶಾಖಾ ವ್ಯವಸ್ಥಾಪಕ, ಲೆಕ್ಕಾಧಿಕಾರಿ ಮತ್ತು ಕೋಶಾಧಿಕಾರಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟು ಸಂತೋಷಪಟ್ಟರೆಂದು ಬೇರೆ ಹೇಳಬೇಕಿಲ್ಲ. ಈ ಪ್ರಸಂಗ ಮುಂದೆ ಹೀಗೆ ಎದುರಾದ ಕೆಲವು ಸಮಸ್ಯೆಗಳನ್ನು ಬಿಡಿಸಲು ಸಹಾಯವಾಯಿತು.

ತಪ್ಪು ನನ್ನದಲ್ಲ, ಮುಂಗಟ್ಟೆಯಲ್ಲಿದ್ದವನದು….

ನಮ್ಮ ಗ್ರಾಹಕನೊಬ್ಬ ಒಂದು ಮಾಲ್‌ನಲ್ಲಿ ಮಾಡಿದ್ದ ವಹಿವಾಟಿಗೆ ತನ್ನ ಕಾರ್ಡನ್ನು ಬಳಸಿದ್ದ. ಮುಂಗಟ್ಟೆಯಲ್ಲಿದ್ದ ಸಿಬ್ಬಂದಿ ಕಣ್ತಪ್ಪಿನಿಂದಾಗಿ ರೂ.5655/-ರ ಬದಲು ರೂ.565.50ನ್ನು ಪಡೆದುಕೊಂಡಿದ್ದ. ಅದು ಮಾಲ್‌ನವರ ಗಮನಕ್ಕೆ ಬಂದ ಮೇಲೆ ಮಿಕ್ಕ ರೂ.5089.50ಗೆ ತಮ್ಮ ಬ್ಯಾಂಕಿನಿಂದ ದೂರು ದಾಖಲಿಸಿ ನಮ್ಮ ಬ್ಯಾಂಕಿನಿಂದ ಪಡೆದುಕೊಂಡರು. ಅದು ಸೀದಾ ಬಂದು ನಮ್ಮ ಶಾಖೆಗೆ ಋಣಿತವಾಯಿತು.

ಇಷ್ಟೆಲ್ಲಾ ಆಗುವಾಗ ಈ ವಹಿವಾಟು ನಡೆದು ಒಂದೂವರೆ ತಿಂಗಳಾಗಿದೆ. ಕಾರ್ಡನ್ನು ಉಪಯೋಗಿಸಿ, ವ್ಯಾಪಾರ ಕೇಂದ್ರಗಳಲ್ಲಿ ಮಾಡುವ ವಹಿವಾಟಿನ ಸಮಾಪ್ತಿಗೆ ಆರು ವಾರಗಳ ಅವಧಿಯಿರುತ್ತದೆ. ಆತನ ಖಾತೆಗೆ ಋಣಿಸಬೇಕೆಂದರೆ ತನ್ನ ಖಾತೆಯಲ್ಲಿ 325 ರೂಪಾಯಿಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ತೆಗೆದುಬಿಟ್ಟಿದ್ದ. ಅಲ್ಲಿಯವರೆಗೂ ತಿಂಗಳಲ್ಲಿ ಏಳೆಂಟು ಬಾರಿಯಾದರೂ ಹಾಕುವ, ತೆಗೆಯುವ ವಹಿವಾಟುಗಳು ನಡೆಯುತ್ತಿದ್ದ ಆ ಖಾತೆಯಲ್ಲಿ ಅಂದಿನಿಂದ ಒಂದು ವಹಿವಾಟೂ ನಡೆದಿಲ್ಲ. ಅಂದರೆ ಬುದ್ಧಿಪೂರ್ವಕವಾಗಿ ಖಾತೆಯ ವಹಿವಾಟನ್ನು ನಿಲ್ಲಿಸಿದ್ದಾನೆ.

ಅವನು ಹಾಗೆ ಮಾಡಿದನೆಂದು ನಾವು ಸುಮ್ಮನಿರುವಂತಿಲ್ಲವಲ್ಲ!! ಕರೆ ಮಾಡಿ, ಇಂತಹ ಬ್ಯಾಂಕಿನ, ಇಂತಹ ಶಾಖೆಯಿಂದ ಕರೆಮಾಡುತ್ತಿದ್ದೀನಿ ಎಂದು ಪರಿಚಯಿಸಿಕೊಂಡು ಮೊದಲಿಗೆ “ನಿಮ್ಮ ಖಾತೆಯ ವಹಿವಾಟುಗಳನ್ನು ನೋಡುತ್ತಿದ್ದರೆ ನೀವು ಖಾತೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೀರಿ. ಎಂದೂ ಕನಿಷ್ಠ ಮೊತ್ತಕ್ಕಿಂತ ಕೆಳಗೆ ಹೋಗಿರಲಿಲ್ಲ. ಆದರೆ ಈಗ ಅದು ಏಕೋ ಕಡಿಮೆಯಾಗಿದೆ” ಎಂದೆ.

“ಹೌದೇ… ಓ… ಇತ್ತೀಚೆಗೆ ಬ್ಯಾಂಕಿಗೆ ಬರಲು ಪುರುಸೊತ್ತೇ ಆಗಿಲ್ಲ. ಆದಷ್ಟು ಬೇಗನೇ ಸರಿಪಡಿಸುತ್ತೇನೆ”ಎಂದ. “ಇರಬಹುದು, ಹಾಗಾಗಿಯೇ ಇದೂ ನಿಮ್ಮ ಗಮನಕ್ಕೆ ಬಂದಿಲ್ಲ” ಎಂದೆ. “ಏನಾಗಿದೆ. ಏನು ನನ್ನ ಗಮನಕ್ಕೆ ಬಂದಿಲ್ಲ?” ಸ್ವಲ್ಪ ಆತಂಕದಲ್ಲಿ ಕೇಳಿದ.  ಮಾಲ್‌ನ ವಹಿವಾಟಿನ ಕುರಿತಾಗಿ ಕೇಳಿದೆ. ತನಗದರ ಬಗ್ಗೆ ಏನೂ ತಿಳಿದಿಲ್ಲವೆಂದ. ಇನ್ನೂ ವಿವರವಾಗಿ ಕೇಳಿದಾಗ, “ಆ ದಿನ ನನ್ನ ಹೆಂಡತಿ ಕಾರ್ಡನ್ನು ಉಪಯೋಗಿಸಿರುವುದು. ಅವಳು ತಪ್ಪು ಮಾಡಲು ಸಾಧ್ಯವೇ ಇಲ್ಲ” ಎಂದು ಸಾಧಿಸತೊಡಗಿದ.

ಇಂತಹ ಪ್ರಸಂಗಗಳಲ್ಲಿ ಹೆಂಡತಿಯ ಹೆಸರು ಬಲು ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ! ನಾನು ಮತ್ತೂ, ಮತ್ತೂ ಮನವರಿಕೆ ಮಾಡಿಕೊಡುತ್ತಿರುವಾಗ ಕಡೆಗೆ “ಆಕೆಯನ್ನು ಕೇಳಿ ಹೇಳುತ್ತೇನೆ” ಎಂದ. “ಆಕೆಯ ನಂಬರನ್ನು ಕೊಡಿ, ನಾನೇ ಕೇಳಿ ನೋಡುತ್ತೇನೆ” ಎಂದಾಗ “ಹಾಗೆಲ್ಲಾ ಯಾರೆಂದರೆ ಅವರಿಗೆ ಕೊಡಲಾಗುವುದಿಲ್ಲ” ಎಂದು ದಬಾವಣೆ ಮಾಡಿದ. “ಸರಿ ಕೇಳಿಟ್ಟುಕೊಳ್ಳಿ; ನಾನು ಮತ್ತೆ ನಾಳೆ ಕರೆ ಮಾಡುತ್ತೇನೆ” ಎಂದೆ.

ಮರುದಿನ ಕರೆ ಮಾಡಿದರೆ, ಸ್ವೀಕರಿಸಲೇ ಇಲ್ಲ. ಒಂದೆರಡು ಗಂಟೆಗಳ ನಂತರ ಶಾಖೆಯ ಇನ್ನೊಂದು ದೂರವಾಣಿಯಿಂದ ಕರೆ ಮಾಡಿದಾಗ ಸ್ವೀಕರಿಸಿದ. “ಅವಳಿಗೂ ಏನೂ ಗೊತ್ತಿಲ್ಲ. ಸರಿಯಾಗಿ ದುಡ್ಡು ತೆಗೆದುಕೊಳ್ಳಬೇಕಾದ್ದು ಮುಂಗಟ್ಟೆಯಲ್ಲಿದ್ದವನ ಕರ್ತವ್ಯ. ಅವನ ಕರ್ತವ್ಯ ಲೋಪಕ್ಕೆ ನಮ್ಮನ್ನೇಕೆ ಹೊಣೆ ಮಾಡುತ್ತೀರಿ?” ಎಂದು ತನ್ನ ಪ್ರಾಮಾಣಿಕತೆಯನ್ನು ಮೆರೆದ!

“ಸರಿಯಾಗಿ ದುಡ್ಡು ಪಡೆದುಕೊಳ್ಳುವುದು ಹೇಗೆ ಮುಂಗಟ್ಟೆಯವನ ಕರ್ತವ್ಯವೋ, ಅದನ್ನು ಪಾವತಿ ಮಾಡುವುದೂ ನಿಮ್ಮ ಕರ್ತವ್ಯವಾಗಿತ್ತಲ್ಲವೇ? ಆ ವಹಿವಾಟು ನಡೆದ ತಕ್ಷಣವೇ ನಿಮ್ಮ ಮೊಬೈಲ್‌ಗೆ ಖಂಡಿತವಾಗಿಯೂ ಸಂದೇಶ ಬಂದಿರುತ್ತದೆ. ಆಗ ನಿಮಗೆ ಗೊತ್ತಾಗಿರಲೇ ಬೇಕಲ್ಲವೇ” ಎಂದರೆ ಅವನಿಗೆ ಕೋಪವೇ ಬಂತು. “ನಾನು ಎಲ್ಲಾ ಸಂದೇಶಗಳನ್ನೂ ನೋಡುತ್ತಾ ಕೂರುವುದಿಲ್ಲ. ಕೆಲಸಕ್ಕೆ ಬಾರದವನ್ನು ಆಗಲೇ ಅಳಿಸಿಬಿಡುತ್ತೇನೆ” ಎಂದು ಸಾಧಿಸಿದ.

“ನಿಮ್ಮ ದುಡ್ಡನ್ನು ಮುಂಗಟ್ಟೆಯ ನೌಕರನಿಂದ ಪಡೆದುಕೊಳ್ಳಿ. ಹೀಗೆ ಒಂದೆರಡು ಸಲ ಆದರೆ ಅವರು ಹುಷಾರಾಗಿರುತ್ತಾರೆ” ಎಂದು ತನ್ನ ತರ್ಕವನ್ನು, ಜೊತೆಗೆ ಸಲಹೆಯನ್ನು ಮುಂದಿಟ್ಟ. “ಬ್ಯಾಂಕಿನಿಂದ ತಗಾದೆ ಪತ್ರ ಬರುತ್ತದೆ” ಎಂದೆ. “ಬರಲಿ ಬಿಡಿ, ಹರಿದು ಹಾಕಲು ನನಗೆ ಬರುವುದಿಲ್ಲವೇ?” ಎಂದು ಮರುಪ್ರಶ್ನಿಸಿದ. ನಾನು ನನ್ನ ಕಡೆಯ ಅಸ್ತ್ರವನ್ನು ಪ್ರಯೋಗಿಸಿದೆ.

“ನೋಡಿ ನಿಮ್ಮ ಖಾತೆಯ ಇಲ್ಲಿನವರೆಗಿನ ವ್ಯವಹಾರಗಳನ್ನು ನೋಡಿದರೆ ಒಂದು ಒಳ್ಳೆಯ ಸಂದೇಶ ಕೊಡುತ್ತಿದೆ. ಸದಾ ಕನಿಷ್ಠ ಮೊತ್ತ ಐದಂಕೆಯಲ್ಲಿಟ್ಟಿದ್ದೀರಿ. ಇದು ಹೇಗೋ ಏನೋ ನಿಮಗೂ ಅರಿವಿಲ್ಲದೆ ತಪ್ಪಾಗಿದೆ. ಇದನ್ನು ಸರಿಪಡಿಸದಿದ್ದರೆ ನಿಮ್ಮ ಹೆಸರು ಸಿಬಿಲ್‌ ವರದಿಯಲ್ಲಿ ತನ್ನ ಅಂಕವನ್ನು ಕಳೆದುಕೊಳ್ಳುತ್ತದೆ. ಆಗ ನಾವೇನೂ ಮಾಡಲಾಗುವುದಿಲ್ಲ. ಆ ರೀತಿಯಾದರೆ ಮುಂದೆ ನಿಮಗೆ ಯಾವುದೇ ರೀತಿಯ ಸಾಲ ಸೌಲಭ್ಯಗಳು ಯಾವುದೇ ಬ್ಯಾಂಕಿನಿಂದಾಗಲೀ ಆರ್ಥಿಕ ಸಂಸ್ಥೆಗಳಿಂದಾಗಲೀ ದೊರೆಯುವುದಿಲ್ಲ. ಇಷ್ಟರ ಮೇಲೆ ನಿಮ್ಮಿಷ್ಟ” ಎಂದೆ.

“ಹಾಳಾಗಿ ಹೋಗಲಿ ಕಟ್ಟುತ್ತೇನೆ ಬಿಡಿ. ಒಂದು ವಾರ ಸಮಯ ಕೊಡಿ” ಎಂದ. “ಸರಿ” ಎಂದೆ. ವಾರವಾಯಿತು, ಹದಿನೈದು ದಿನವಾದರೂ ಇಲ್ಲ. ನಿರಂತರವಾಗಿ ಬೇರೆ ಬೇರೆ ಸಹೋದ್ಯೋಗಿಗಳಿಂದ, ಕೋಶಾಧಿಕಾರಿ, ಲೆಕ್ಕಾಧಿಕಾರಿ, ಶಾಖಾ ವ್ಯವಸ್ಥಾಪಕ… ಹೀಗೆ ಬೇರೆ ಬೇರೆಯವರಿಂದ ಕರೆ ಮಾಡಿಸುತ್ತಲೇ ಹೋದೆ. ಅಂತೂ ಆ ತಿಂಗಳು ಮುಗಿಯುವುದರ ಒಳಗೆ ತನ್ನ ಖಾತೆಗೆ ಹಣ ಹಾಕಿದ. ಬೆಳಗಾದರೆ ದೇವರ ಫೋಟೋ ನೋಡುವಂತೆ ಬ್ಯಾಂಕಿಗೆ ಬಂದ ತಕ್ಷಣ ಅವನ ಖಾತೆಯನ್ನು ತೆರೆಯುತ್ತಿದ್ದವಳಿಗೆ ಅದು ಕಂಡ ತಕ್ಷಣ ಸಂಭ್ರಮ! ತಕ್ಷಣವೇ ಬಡಿದು ಬಾಚಿ ನಮ್ಮ ಖಾತೆಗೆ ಸಂದಾಯ ಮಾಡಿಕೊಂಡು ಈ ಪ್ರಕರಣಕ್ಕೆ ಮುಕ್ತಾಯ ಹಾಡಿದೆ!!

‍ಲೇಖಕರು Avadhi

September 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಧನ್ಯವಾದಗಳು ಮೋಹನ್ ಸರ್
    ಧನ್ಯವಾದಗಳು ಟೀಮ್ ಅವಧಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: