ಶ್ರವಣಕುಮಾರಿಯವರ ವಿಶೇಷ ಸರಣಿ- ಎ ಟಿ ಎಂ ಎಂಬ ಯಂತ್ರಮಾನವ

ಟಿ ಎಸ್ ಶ್ರವಣಕುಮಾರಿ ಅವರ ವಿಶೇಷ ಲೇಖನ ಸರಣಿಯನ್ನು ಇಂದಿನಿಂದ ಪ್ರಾರಂಭಿಸುತ್ತಿದ್ದೇವೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಶ್ರವಣಕುಮಾರಿಯವರು ಬರಹ ಕ್ಷೇತ್ರಕ್ಕೆ ಕಾಲಿಟ್ಟದ್ದು ತಮ್ಮ ಬ್ಯಾಂಕಿಂಗ್ ನ ಕೊನೆಯ ದಿನಗಳಲ್ಲಿ. ಅದೂ ಬ್ಯಾಂಕ್ ನ ಕನ್ನಡ ಸಂಘದ ಒತ್ತಾಸೆಯ ಮೇರೆಗೆ.

‘ಅವಧಿ’ಯ ಮೂಲಕ ತಮ್ಮ ಬರಹಗಳನ್ನು ಆರಂಭಿಸಿದ ಇವರ ಎರಡು ಕೃತಿಗಳು ಈಗಾಗಲೇ ಓದುಗರ ಕೈನಲ್ಲಿದೆ. ಇವರ ಕಥಾ ಸಂಕಲನ ‘ಅಸ್ಪಷ್ಟ ತಲ್ಲಣಗಳು’ ಮೈತ್ರಿ ಪುಸ್ತಕ ಬಹುಮಾನ ಪಡೆದಿದೆ. ಈಗ ‘ಅವಧಿ’ಯಲ್ಲಿ ಪ್ರಸಾರವಾದ ಅಮೆರಿಕಾ ಪ್ರವಾಸ ಕಥನ ಪುಸ್ತಕವಾಗಿದೆ.

ಬ್ಯಾಂಕಿಂಗ್ ಕ್ಷೇತ್ರದ ತಮ್ಮ ಅಪಾರ ಅನುಭವದ ಹಿನ್ನೆಲೆಯಲ್ಲಿ ಶ್ರವಣಕುಮಾರಿ ಅವರು ಎ ಟಿ ಎಂ ನ ಅಂತರಂಗವನ್ನು ‘ಅವಧಿ’ ಓದುಗರಿಗಾಗಿ ತಿಳಿ ಹೇಳಿದ್ದಾರೆ.

ರೂಢಿಗತವಾಗಿ ಬಂದ ನಗದು ಗುಮಾಸ್ತನ ಕೆಲಸ ಹಣವನ್ನು ಜಮೆ ಮಾಡಿಕೊಳ್ಳುವುದು ಇಲ್ಲವೇ ಪಾವತಿ ಮಾಡುವುದು ಅಷ್ಟೇ. ಹಣದ ಜಮೆ ಮಾಡುವುದಾದರೆ, ಗ್ರಾಹಕ ನೇರವಾಗಿ ಆ ಮುಂಗಟ್ಟೆಗೆ ಹೋದರೆ ಜಮಾ ಚೀಟಿಯನ್ನು ಪರಿಶೀಲಿಸಿ, ಹಣವನ್ನು ಎಣಿಸಿಕೊಂಡು ಅದಕ್ಕೆ ಸಂಬಂಧಿಸಿದ ರಸೀತಿಯನ್ನು ಹರಿದು ಗ್ರಾಹಕನಿಗೆ ನೀಡಿ, ಹಣಸಂದಾಯದ ಚೀಟಿಯ ವಿವರಗಳನ್ನು ಅದಕ್ಕಾಗಿಯೇ ಇದ್ದ ಒಂದು ಹಾಳೆಯಲ್ಲಿ ಬರೆದುಕೊಂಡು ಮುಂಗಟ್ಟೆಗೆ ಕಳುಹಿಸಿದರೆ ಅಲ್ಲಿನ ಒಬ್ಬ ಗುಮಾಸ್ತ ಅದನ್ನು ಒಂದು ಪುಸ್ತಕದಲ್ಲಿ ಸಂಕ್ಷಿಪ್ತ ವಿವರದೊಂದಿಗೆ ಬರೆದಿಟ್ಟುಕೊಳ್ಳುತ್ತಿದ್ದ. ನಂತರ ಅದು ಆ ಗ್ರಾಹಕನ ಖಾತೆಗೆ ಸೇರಿಸಲ್ಪಡುತ್ತಿತ್ತು.

ಹಣವನ್ನು ಹಿಂಪಡೆಯುವುದಾದರೆ ಮುಂಗಟ್ಟೆಗೆ ಹೋಗಿ ಚೆಕ್ಕನ್ನು ಇಲ್ಲವೇ ಹಿಂಪಡೆತದ ಚೀಟಿಯನ್ನು ಪಾಸ್‌ ಪುಸ್ತಕದೊಂದಿಗೆ ನೀಡಿದರೆ ಒಂದು ಟೋಕನ್‌(ಹಿತ್ತಾಳೆಯ ಬಿಲ್ಲೆ)ಅನ್ನು ನೀಡಲಾಗುತ್ತಿತ್ತು. ನಂತರ ಆ ಚೆಕ್ಕು ಅಥವಾ ಹಿಂಪಡೆತದ ಚೀಟಿ ಎಲ್ಲ ವಿಧದಿಂದಲೂ (ದಿನಾಂಕ, ಮೊತ್ತ ಅಂಕೆಯಲ್ಲಿ ಮತ್ತು ಅಕ್ಷರಗಳಲ್ಲಿ ಹಾಗೂ ಖಾತೆದಾರನ ರುಜು, ಹಿಂಬಾಗದ ರುಜು) ಸರಿಯಾಗಿದ್ದಲ್ಲಿ, ಲೆಡ್ಜರಿನಲ್ಲಿರುವ ಆ ಗ್ರಾಹಕನ ಖಾತೆಯಲ್ಲಿ ಇರುವ ಮೊತ್ತದಲ್ಲಿ ಕಡಿತವಾಗಿ ನಂತರ ಹಿಂಬದಿಯಲ್ಲಿ ಕುಳಿತಿರುವ ಅಧಿಕಾರಿಯ ಅವಗಾಹನೆಗಾಗಿ ಕಳುಹಿಸಲ್ಪಡುತ್ತಿತ್ತು.

ಅಧಿಕಾರಿಯು ಅದನ್ನು ಮತ್ತೊಮ್ಮೆ ಪರಿಶೀಲಿಸಿ, ಖಾತೆದಾರನ ಸಹಿಯನ್ನು ಹೊಡೆದು ಹಾಕಿ ಅದು ಪಾವತಿಗೆ ಯೋಗ್ಯವಾಗಿದೆ ಎನ್ನುವುದನ್ನು ದೃಢೀಕರಿಸುತ್ತಿದ್ದ. ನಂತರ ಒಂದು ಚಿಕ್ಕ ಪುಸ್ತಕದಲ್ಲಿ ಆ ಟೋಕನ್ನಿನ ಸಂಖ್ಯೆಯನ್ನು ಬರೆದು ಅದರೊಂದಿಗೆ ಚೆಕ್ಕನ್ನು ಅಥವಾ ಹಿಂಪಡೆತದ ಚೀಟಿಯನ್ನು ಇರಿಸಿ ಪಾವತಿ ಮಾಡುವ ನಗದು ಗುಮಾಸ್ತನಿಗೆ ಕಳುಹಿಸುತ್ತಿದ್ದ. ನಗದು ಗುಮಾಸ್ತ ಆ ಟೋಕನ್ನಿನ ಸಂಖ್ಯೆಯನ್ನು ಕರೆದು ಹಣ ಪಾವತಿ ಮಾಡುತ್ತಿದ್ದ. ಮೊತ್ತ ಒಂದು ಮಿತಿಯನ್ನು ದಾಟಿದರೆ ಲೆಡ್ಜರಿನ ಸಮೇತ ಹಿಂಬದಿಯ ಅಧಿಕಾರಿಗೆ ಕಳುಹಿಸಬೇಕಿತ್ತು. ಆಗ ಆ ಅಧಿಕಾರಿ ತನ್ನ ಗಮನಕ್ಕೆ ಬಂದದ್ದನ್ನು ದೃಢೀಕರಿಸಲು ಅಲ್ಲೊಂದು ಚಿಕ್ಕ ಸಹಿಯನ್ನು ಹಾಕುತ್ತಿದ್ದ.

ಇಷ್ಟೆಲ್ಲಾ ಕೆಲಸವಾಗುವಾಗ ಗ್ರಾಹಕ ಟೋಕನ್ನನ್ನು ತನ್ನ ಕೈಯಲ್ಲಿಟ್ಟುಕೊಂಡು ನಗದು ಮುಂಗಟ್ಟೆಯ ಕಡೆಗೆ ನೋಡುತ್ತಾ ಒಂದು ಧ್ಯಾನಸ್ತ ಸ್ಥಿತಿಯಲ್ಲಿ ಕುಳಿತು ಅಲ್ಲಿಂದ ತನ್ನ ಟೋಕನ್ನಿನ ಸಂಖ್ಯೆಯನ್ನು ಕರೆಯುವ ಒಂದು ಅಮೃತವಾಣಿಗೆ ಕಾಯಬೇಕಿತ್ತು! ಬಹಳಷ್ಟು ಗ್ರಾಹಕರಿಲ್ಲದ ವೇಳೆ ಈ ಸಮಯ ಬೇಗನೇ ಸರಿಯುತ್ತಿದ್ದರೂ, ಸಂಬಳದ ದಿನ, ಹಬ್ಬದ ಹಿಂದಿನ ಕೆಲವು ದಿನಗಳು ಇಂತಹ ಜನನಿಬಿಡ ದಿನಗಳಲ್ಲಿ ಕಾಯದೇ ಗತ್ಯಂತರವಿಲ್ಲ. ಹೀಗೆ ಕಾಯುವ ಸಮಯದಲ್ಲಿ ಕೆಲವು ಗ್ರಾಹಕರು ಧ್ಯಾನಸ್ತ ಸ್ಥಿತಿಯಿಂದ ಮಂಪರಿಗೆ ಜಾರಿ, ಕೈಯಲ್ಲಿದ್ದ ಟೋಕನ್ನು ಕೆಳಗೆ ಬಿದ್ದು ʻಠಣ್ʼ ಎಂದು ಸದ್ದಾದಾಗ ಅಥವಾ ತನ್ನ ಅದೃಷ್ಟ ಸಂಖ್ಯೆಯ ಕರೆಯು ಬಂದಾಗ ಎಚ್ಚರಗೊಳ್ಳುತ್ತಿದ್ದ ಸಂದರ್ಭಗಳು ಇದ್ದವು.

ಇನ್ನು ಕೆಲವು ಗ್ರಾಹಕರು ಮುಂಗಟ್ಟೆಯಲ್ಲೇ ಸರಿ ಸುಮಾರು ತಗುಲಬಹುದಾದ ಸಮಯವನ್ನು ವಿಚಾರಿಸಿಕೊಂಡು ತಮ್ಮ ಬೇರೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದರು. ಇಲ್ಲವೇ ಸಮೀಪದಲ್ಲಿದ್ದ ಹೋಟೆಲ್ಲಿನಲ್ಲಿ ಕಾಫಿಯನ್ನು, ಇನ್ನೂ ಸ್ವಲ್ಪ ಅವಕಾಶವಿದ್ದರೆ ಅಲ್ಪಾಹಾರವನ್ನು ಸೇವಿಸಿ ಕಾಯುವುದಕ್ಕೆ ಸನ್ನದ್ದರಾಗಿ ಬಂದು ಕುಳಿತುಕೊಳ್ಳುವವರೂ ಇದ್ದರು. ಕೆಲವರು ಟೋಕನ್‌ ಪಡೆದ ತಕ್ಷಣ ಆವರಣದಲ್ಲಿರುವ ವೃತ್ತ ಪತ್ರಿಕೆ ಕೈಗೆ ಸಿಕ್ಕರೆ ಅದರಲ್ಲಿ ಮುಳುಗಿರುತ್ತಿದ್ದರು. ಕ್ರಿಕೆಟ್‌ ಟೆಸ್ಟ್‌ ಪಂದ್ಯಗಳು ನಡೆಯುತ್ತಿದ್ದರೆ ಕಿವಿಗೆ ಒಂದು ಸಣ್ಣ ಟ್ರಾನ್ಸಿಸ್ಟರ್‌ ಇಟ್ಟುಕೊಂಡು ವೀಕ್ಷಕ ವಿವರಣೆ ಕೇಳುತ್ತಾ ಕುಳಿತಿರುತ್ತಿದ್ದ ಪ್ರಭುತಿಗಳೂ ಇದ್ದರು. ಇಂಥ ಯಾವುದೂ ಇಲ್ಲದ ಇನ್ನು ಕೆಲವು ಗ್ರಾಹಕರು ಗುರುತಿನವರೇನಾದರೂ ಸಿಕ್ಕರೆ ನಿಧಿ ಸಿಕ್ಕ ಹಾಗಾಗಿ ಅಲ್ಲೇ ತಮ್ಮ ಮಾತಿನ ಟೆಂಟನ್ನು ಹಾಕಿಕೊಂಡು ಕಳೆದ ಸಲ ಭೇಟಿಯಾದಾಗಿನಿಂದ ಇಂದಿನ ವಿದ್ಯಮಾನದವರೆಗೆ ಸಾಂಸಾರಿಕ ತಾಪತ್ರಯದಿಂದ ಹಿಡಿದು ಜಗತ್ತಿನ ಎಲ್ಲ ವಿದ್ಯಮಾನಗಳ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ತಮ್ಮ ಟೋಕನ್‌ ಸಂಖ್ಯೆಯನ್ನು ಕರೆದಾಗ ʻಅಯ್ಯೋ ಬಂದೇಬಿಟ್ಟಿತುʼ ಎನ್ನುವಂತೆ ʻಬಂದೆ, ಬಂದೆʼ ಎನ್ನುತ್ತಾ ಮುಂಗಟ್ಟೆಗೆ ಧಾವಿಸುತ್ತಿದ್ದುದೂ ಇತ್ತು. ಇಂತಹ ಯಾವ ಹವ್ಯಾಸವೂ ಇಲ್ಲದ ಗ್ರಾಹಕನ ಪಾಡೇನು?!

ಏನಾದರೂ ತಕರಾರುಗಳಿದ್ದರೆ, ಇಲ್ಲವೇ ಪಾವತಿಗಳ ಒತ್ತಡ ಹೆಚ್ಚಿದ್ದರೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯೂ ಇತ್ತು. ದೊಡ್ಡ ಮೊತ್ತಗಳಿದ್ದರೆ ಹೀಗೆ ಕಾಯುವ ವೇಳೆಗೆ ಸ್ವಲ್ಪವಾದರೂ ನ್ಯಾಯವಿತ್ತು. ಕೇವಲ ಮೂರಂಕೆಯ ಅಥವಾ ಒಂದೆರಡು ಸಾವಿರಗಳಿಗಾಗಿ ಹೀಗೆ ಕಾಯುವ ಪರಿಸ್ಥಿತಿ ಇದ್ದಾಗ ಗ್ರಾಹಕನ ಪಾಡು ನಿಜಕ್ಕೂ ಶೋಚನೀಯ. ಆಗೇನೋ ಕಾಲವೂ ಆಮೆಯಂತೆ ನಿಧಾನವಾಗಿ ತೆವಳುತ್ತಿತ್ತು. ಕಾಯಲು ಸಿದ್ಧರಾಗೇ ಬಂದವರು ನಿರುಪಾಯರಾಗಿ ಕುಳಿತಿರುತ್ತಿದ್ದರು. ಈಗಲೋ ಕಾಲ ಚಿರತೆಯಿಂದ ತಪ್ಪಿಸಿಕೊಳ್ಳುವ ಜಿಂಕೆಯಂತೆ ಓಡುತ್ತಿದೆ. ಸಮಯವೇ ಹಣ! ಗ್ರಾಹಕ ಅಸಹನೆ ತೋರತೊಡಗಿದ. ಬ್ಯಾಂಕು ಪರಿಹಾರೋಪಾಯಗಳನ್ನು ಹುಡುಕತೊಡಗಿತು.

ಇಂತಹ ಪರಿಸ್ಥಿತಿಗೆ ಪರಿಹಾರವಾಗಿ ಬಂದಿದ್ದು ʻಟೆಲ್ಲರ್‌ʼ ಎಂಬ ವಿಶಿಷ್ಟ ಆವಿಷ್ಕಾರ. ಸಣ್ಣ ಮೂರಂಕೆಯ ಇಲ್ಲವೇ ಒಂದೆರಡು ಸಾವಿರಗಳ ಪಾವತಿಯನ್ನು ನೇರವಾಗಿ ಟೆಲ್ಲರ್‌ ಮಾಡಬಹುದಿತ್ತು. ಸಣ್ಣ ಮೊತ್ತದ ಜಮೆಯನ್ನು ಪಡೆದುಕೊಳ್ಳಬಹುದಿತ್ತು. ಈ ಸ್ಥಾನದಲ್ಲಿ ಸಾಮಾನ್ಯವಾಗಿ ಶಾಖೆಯ ಹಿರಿಯ ಗುಮಾಸ್ತರು ಕುಳಿತುಕೊಳ್ಳುತ್ತಿದ್ದರು. ಅವರಿಗೆ ಆಗಾಗ್ಗೆ ಬರುವ ಗ್ರಾಹಕರು, ಅವರ ಖಾತೆಯ ಸ್ಥಿತಿಗತಿ, ವಹಿವಾಟಿನ ರೀತಿ ಹಾಗೂ ಸಹಿಯ ಪರಿಚಯ ಇರುತ್ತಿತ್ತು. ಹಾಗಾಗಿ ಅವರು ಇಂತಹ ಸಣ್ಣ ಮೊತ್ತಗಳನ್ನು ನೇರವಾಗಿ ಪಾವತಿ ಮಾಡಿ ನಂತರ ಖಾತೆಯಲ್ಲಿ ಋಣಿಸುವುದಕ್ಕಾಗಿ ಕಳುಹಿಸುತ್ತಿದ್ದರು. ಈ ಟೆಲ್ಲರ್‌ನ ದೆಸೆಯಿಂದ ಸಣ್ಣ ಪುಟ್ಟ ಪಾವತಿಗಳು ಬಹು ಬೇಗನೇ ಸಾಗುವಂತಾಗಿ ಗ್ರಾಹಕರು ಸಂತುಷ್ಟರಾಗಿದ್ದರು.

ಆದರೆ ಯಾವುದೇ ಆವಿಷ್ಕಾರಕ್ಕೂ ಕೊನೆಯೆಂಬುದಿಲ್ಲವಲ್ಲ! ಗ್ರಾಹಕರು ಹಣವನ್ನು ಜಮಾ ಮಾಡಲಾಗಲೀ, ಹಿಂಪಡೆಯುವುದಕ್ಕಾಗಲೀ ವ್ಯವಹಾರದ ವೇಳೆ ಎನ್ನುವ ಒಂದು ನಿಯಂತ್ರಣವಿತ್ತು. ವ್ಯವಹಾರದ ವೇಳೆ ಮುಗಿದ ನಂತರ ಯಾವ ಗ್ರಾಹಕನಿಗೂ ಹಣವನ್ನು ಹಿಂಪಡೆಯುವ ಸೌಕರ್ಯವಿರಲಿಲ್ಲ. ಬೇರೆ ಬೇರೆ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿರುವವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಹಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ತಮ್ಮ ಮೇಲಧಿಕಾರಿಗಳ ಅನುಮತಿಯನ್ನು ಪಡೆದು, ಇಲ್ಲವೇ ಚೆಕ್‌ ಮುಖಾಂತರ ಇನ್ನೊಬ್ಬರ ಸಹಾಯದಿಂದ, ಹಣವನ್ನು ಪಡೆದುಕೊಳ್ಳಬೇಕಾಗಿತ್ತು. ಗ್ರಾಹಕನ ಈ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ, ಗ್ರಾಹಕರ ಸೇವೆಯನ್ನೂ ಇನ್ನೂ ಉತ್ತಮವಾಗಿ, ಕ್ಷಿಪ್ರವಾಗಿ ಮಾಡುವ ಸಲುವಾಗಿ ಈ ಎ.ಟಿ.ಎಂ. ಯಂತ್ರಗಳು ಬಾಗಿಲಲ್ಲಿ ಸೇರು ಚಿಮ್ಮಿ ಬಲಗಾಲಿಟ್ಟು ಒಳಬರುವ ಮನೆಸೊಸೆಯಂತೆ ಬ್ಯಾಂಕಿನ ಬಾಗಿಲಿಗೆ ಬಂದವು; ಹಾಗೆಯೇ ಪ್ರಮುಖ ಸ್ಥಳಗಳಲ್ಲಿ ʻನಿಮ್ಮ ಸೇವೆಗೆ ಸದಾ ಸಿದ್ಧʼ ಎಂಬಂತೆ ಸ್ವಾಗತಿಸುತ್ತಾ ನಿಂತವು. ಈಗ ಗ್ರಾಹಕನಿಗೆ ಇಪ್ಪತ್ನಾಲ್ಕು ಗಂಟೆಯೂ ಹಣ ಹಿಂಪಡೆಯುವ ಸೌಲಭ್ಯ ದೊರಕಿದಂತಾಯಿತು. ಈ ಯಂತ್ರಗಳು ಕನ್ನಡದಲ್ಲಿ ʻಸ್ವಯಂ ಸರಾಫ ಯಂತ್ರʼ (ಸ್ವ.ಸ.ಯಂ.) ಎಂದು ಹೆಸರಿಟ್ಟುಕೊಂಡವು; ಹಾಗೂ ಜನಪ್ರಿಯವಾಗಿ ಸದಾ ನಿಮಗೆ ಹಣ (ಸ.ನಿ.ಹ.) ಎಂದೂ ಅಚ್ಛೆಯಿಂದ ಕರೆಸಿಕೊಂಡವು.

ಹಣವನ್ನು ಹಿಂಪಡೆಯುವುದಕ್ಕೆ ಮಾತ್ರಾ ಈ ಸ್ವ.ಸ.ಯಂ.ಗಳನ್ನು ಬಳಸಬಹುದಿತ್ತು. ಖಾತೆಗೆ ಜಮೆ ಮಾಡುವುದಾದರೆ ಮತ್ತೆ ಶಾಖೆಗೇ ಹೋಗಿ ಮಾಡುವ ಕಷ್ಟ ಹಾಗೆಯೇ ಉಳಿದು ಹೋಯಿತು. ಈ ನಿಟ್ಟಿನಲ್ಲೂ ಸಾಕಷ್ಟು ಅನ್ವೇಷಣೆಗಳು ನಡೆದ ನಂತರ ʻಸಿ.ಡಿ.ಎಂ.ʼ ಎಂದರೆ ʻಹಣ ಜಮಾಮಾಡುವ ಯಂತ್ರʼಗಳು ತಮ್ಮ ಅಣ್ಣ ಎ.ಟಿ.ಎಂ.ಗಳ ಪಕ್ಕದಲ್ಲೇ ಜಾಗ ಮಾಡಿಕೊಂಡು ಸಹಕಾರ ಭಾವದಿಂದ ಕಾರ್ಯ ನಿರ್ವಹಿಸತೊಡಗಿದವು. ಕಡೆಗೆ ಇನ್ನೂ ಮುಂದುವರೆದು ಹಣ ಪಡೆಯುವ ಮತ್ತು ನೀಡುವ ಎರಡೂ ಕಾರ್ಯವನ್ನು ʻರಿಸೈಕ್ಲರ್‌ʼ ಎನ್ನುವ ಒಂದೇ ಯಂತ್ರ ನಿರ್ವಹಿಸತೊಡಗಿತು. ಒಂದು ನಿರ್ದಿಷ್ಟ ಮೊತ್ತದವರೆಗಿನ ವಹಿವಾಟನ್ನು ಗ್ರಾಹಕ ತನಗೆ ಅನುಕೂಲವಾದ ಸಮಯದಲ್ಲಿ ಮಾಡಿಕೊಳ್ಳಲು ಇದರಿಂದ ಅನುಕೂಲವಾಯಿತು.

ಇಲ್ಲಿಗೆ ಗ್ರಾಹಕನಿಗೆ ತೃಪ್ತಿಯಾಯಿತೆ? ಖಂಡಿತಾ ಇಲ್ಲ! ಮನುಷ್ಯನ ನಿರೀಕ್ಷೆಗಳಿಗೆ ಮಿತಿಯೆಂಬುದಿಲ್ಲ. ಹಣ ಪಡೆದು, ಜಮಾ ಮಾಡಿದರಷ್ಟೇ ಆಯಿತೆ? ಮಿಕ್ಕೆಲ್ಲಾ ಕೆಲಸಗಳಿಗೂ ಶಾಖೆಗಳಿಗೆ ಎಡತಾಕುವುದು ತಪ್ಪಲಿಲ್ಲವಲ್ಲ! ಹೊಸ ಠೇವಣಿಗಳನ್ನು ಮಾಡಬೇಕು; ಸಂಚಯ ಖಾತೆಗಳನ್ನು ತೆರೆಯಬೇಕು; ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಬೇಕು; ಚೆಕ್‌ ಬುಕ್ಕಿಗೆ ಮನವಿ ಸಲ್ಲಿಸಬೇಕು; ದೇಶದ ಯಾವುದೋ ಮೂಲೆಯಲ್ಲಿರುವ ತಾಯಿ ತಂದೆಯರಿಗೋ, ಸಂಬಂಧಿಗಳಿಗೋ, ಸ್ನೇಹಿತರಿಗೋ ಅನಂತ ಕೋಟಿ ಜನರಲ್ಲಿ ಯಾವುದೋ ಬ್ಯಾಂಕಿನ, ಯಾರದೋ ಖಾತೆಗೆ ತಮ್ಮ ಖಾತೆಯಿಂದ ಹಣ ವರ್ಗಾವಣೆಯನ್ನು ಕುಳಿತಲ್ಲಿಂದಲೇ ಮಾಡಬೇಕು; ತಮ್ಮ ಖಾತೆಯ ವಹಿವಾಟುಗಳನ್ನು ನೋಡಿಕೊಳ್ಳಬೇಕು… ಇನ್ನೂ ಇಂತಹ ಏನೇನೋ ಹಲವು ಹತ್ತು ಕೆಲಸಗಳನ್ನು ಮಾಡಿಕೊಳ್ಳಲು ಬ್ಯಾಂಕಿಗೆ ಬಂದು ಕಾಯಲು ಸಮಯವಿಲ್ಲ. ಹೌದು… ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಜನಜೀವನದಲ್ಲಿ ಹಣಕ್ಕಿಂತಲೂ ವೇಳೆಯೇ ತುಟ್ಟಿ.

ಈ ದಿಸೆಯಲ್ಲಿ ಮೂಡಿದ ಇನ್ನೊಂದು ಆವಿಷ್ಕಾರ ʻನೆಟ್‌ ಬ್ಯಾಂಕಿಂಗ್‌ʼ. ಕುಳಿತಲ್ಲಿಂದಲೇ ಗಣಕಯಂತ್ರದ ಸಹಾಯದಿಂದ ಈ ಎಲ್ಲ ಕೆಲಸಗಳನ್ನೂ ಮಾಡಿಕೊಳ್ಳಲು ಸಾಧ್ಯವಾಯಿತು. ಅಲ್ಲಿಗೆ ಮುಗಿಯಿತೇ? ಹೇಗೆ ಸಾಧ್ಯ ಸ್ವಾಮಿ? ನಾವು ಓಡಾಡುವ ಕಡೆಗೆಲ್ಲಾ ಕಂಪ್ಯೂಟರನ್ನು ಹೊತ್ತೊಯ್ಯಲು ಸಾಧ್ಯವೇ? ಮೊಬೈಲಾದರೆ ಅಷ್ಟು ಅವಸರವಿದ್ದರೆ ಶೌಚಾಲಯಕ್ಕೂ ತೆಗೆದುಕೊಂಡು ಹೋಗಿ ಅಲ್ಲಿಯೂ ಸಮಯ ವ್ಯರ್ಥಮಾಡದೆ ಇಂತಹ ಕೆಲಸ ಮಾಡಿಕೊಳ್ಳಲು ಸಾಧ್ಯವಲ್ಲವೇ?! ಸರಿ ಮೊಬೈಲಿಗೆ ಇಳಿದುಬಂತು ಈ ಸೇವೆ. ಇನ್ನು ಮುಂದೆ… ತಿಳಿದಿಲ್ಲ ನಿರೀಕ್ಷೆಗಳು ಆಕಾಶ, ಆವಿಷ್ಕಾರಗಳು ಅನಂತ!! ಯಾವುದು ಬಂದರೂ ರಿಲೇ ರೇಸಿನಂತೆ ಅದನ್ನು ಕೈಯಲ್ಲಿಟ್ಟುಕೊಂಡು ಓಡುತ್ತಿರುವುದು, ಇನ್ನೊಂದು ಹೊಸತು ಬಂದರೆ ಅದನ್ನು ಹಿಡಿದುಕೊಳ್ಳುವುದು… ನಿಜಕ್ಕೂ ಹೇಳಬೇಕೆಂದರೆ ಈ ನಲವತ್ತು ವರ್ಷಗಳಲ್ಲಿ ಬ್ಯಾಂಕಿನಲ್ಲಿ ಕೆಲಸ ಮಾಡಿದವರು ಸಾಂಪ್ರದಾಯಿಕ ಬ್ಯಾಂಕಿಂಗ್‌ನಿಂದ ಮೊದಲುಗೊಂಡು ಇಂದಿನವರೆಗಿನ ಎಲ್ಲ ಬದಲಾವಣೆಗಳಲ್ಲೂ ತೊಡಗಿಕೊಂಡ ಅದೃಷ್ಟವಂತರು. ಈಗ ನಾನು ಬರೆಯುತ್ತಿರುವ ಈ ಲೇಖನ ಇನ್ನು ಕೆಲವೇ ವರ್ಷಗಳಲ್ಲಿ ಗತಕಾಲದ ಕತೆಯೆಂದು ಕರೆಸಿಕೊಂಡರೂ ಅಚ್ಚರಿಯಿಲ್ಲ.

ಈಗ ಮತ್ತೆ ಎ.ಟಿ.ಎಂ. ಅಥವಾ ಸ್ವ.ಸ.ಯಂ. ಕಡೆಗೆ ನೋಡೋಣ. ಎ.ಟಿ.ಎಂ.ನಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ಪ್ರಥಮ ಅವಶ್ಯಕತೆ ಎ.ಟಿ.ಎಂ.ಕಾರ್ಡು ಅಥವಾ ಉದರಿ ಕಾರ್ಡು. ಕಾರ್ಡಿನ್ನು ಉಪಯೋಗಿಸಲು ಒಂದು ಗುಟ್ಟಾಗಿ ಇಟ್ಟುಕೊಳ್ಳಬೇಕಾದ ವೈಯಕ್ತಿಕ ಗುರುತಿನ ಸಂಖ್ಯೆ. ಈಗ ಈ ಉದರಿ ಕಾರ್ಡನ್ನು ತೆಗೆದುಕೊಂಡು ಸ್ವ.ಸ.ಯಂ. ಕೋಶದೊಳಗೆ ಹೋಗೋಣ. ಎ ಟಿ ಎಂ ನ ಮೂಲ ಪರದೆಯು ಕಾಣಬೇಕು. ಹಾಗಿಲ್ಲದಿದ್ದರೆ ಬೇರೆ ಪರದೆಗಳನ್ನು ತೊಡೆದು ಹಾಕಿ ಅದನ್ನು ಮೂಲ ಪರದೆಗೆ ತರಬೇಕು. ನಂತರ ಕಾರ್ಡನ್ನು ತಳ್ಳುವ ಕಿಂಡಿಯಲ್ಲಿ ಬೆಳಕಿನ ಮಿಣುಕು ಕಾಣುವ ಭಾಗದಲ್ಲಿ ಕಾರ್ಡಿನ ಮ್ಯಾಗ್ನೆಟಿಕ್‌ ಪಟ್ಟಿಯಿರುವ ಭಾಗ ಬರುವಂತೆ ಕಾರ್ಡನ್ನು ತಳ್ಳಿ ಒಂದೆರಡು ಕ್ಷಣಗಳ ನಂತರ ಹೊರಗೆಳೆದುಕೊಳ್ಳಬೇಕು. ಪರದೆಯು ನಿಮ್ಮ ಹೆಸರನ್ನು ತೋರುತ್ತಾ ಸ್ವಾಗತವನ್ನು ಬಯಸಿ ಪಿನ್‌ ಸಂಖ್ಯೆಯನ್ನು ಕೇಳುತ್ತದೆ. ಗುಟ್ಟಾಗಿ ನೆನಪಿನಲ್ಲಿ ಮಾತ್ರವೇ ಇಟ್ಟುಕೊಂಡಿರುವ ಆ ಸಂಖ್ಯೆಯನ್ನು ನಮೂದಿಸಬೇಕು. ಪಿನ್‌ ಸಂಖ್ಯೆಯನ್ನು ಹಾಕಲು ಮೂರು ಬಾರಿ ಮಾತ್ರ ಅವಕಾಶವಿದೆ. ಮೂರು ಸಲ ತಪ್ಪಾಗಿ ಹಾಕಿದಿರೋ ನಂತರದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕಾರ್ಡನ್ನು ಸ್ವಸ್ಥಾನದಲ್ಲಿಟ್ಟು, ಕೈಮುಗಿದು ಕುಳಿತುಕೊಳ್ಳಬಹುದು.

ಪಿನ್‌ಸಂಖ್ಯೆಯನ್ನು ಹಾಕಿದ ನಂತರ ಯಂತ್ರ ಹಲವು ಆಯ್ಕೆಗಳನ್ನು ನೀಡುತ್ತದೆ. ಹಣ ಹಿಂಪಡೆಯಬೇಕೆ? ಶಿಲ್ಕು ಮೊತ್ತವನ್ನು ನೋಡಬೇಕೆ? ಇತ್ತೀಚಿನ ವಹಿವಾಟುಗಳನ್ನು ನೋಡಬೇಕೆ? ಈ ಕಾರ್ಡಿನ ಖಾತೆಯಿಂದ ಇನ್ನೊಂದು ಕಾರ್ಡಿನ ಖಾತೆಗೆ ಹಣ ವರ್ಗಾವಣೆ ಮಾಡಬೇಕೆ? ಪಿನ್‌ ಸಂಖ್ಯೆಯನ್ನು ಬದಲಾಯಿಸಬೇಕೆ ಹೀಗೆ ಹಲವು ಆಯ್ಕೆಗಳು ಬರುತ್ತವೆ. ಬ್ಯಾಂಕಿಂಗ್‌ ಅನ್ನು ಆಯ್ದುಕೊಂಡು ಅಲ್ಲಿ ಹಣ ಹಿಂಪಡೆತವನ್ನು ಆಯ್ಕೆ ಮಾಡಿಕೊಂಡರೆ ಅದು ʻಚಾಲ್ತಿ ಖಾತೆಯಿಂದಲೋ ಇಲ್ಲವೇ ಉಳಿತಾಯ ಖಾತೆಯಿಂದಲೋʼ ಎನ್ನುವ ಪ್ರಶ್ನೆಯನ್ನು ಮುಂದಿಡುತ್ತದೆ. ಅದರಲ್ಲಿ ಬೇಕಾದ್ದನ್ನು ಆಯ್ಕೆ ಮಾಡಿಕೊಂಡರೆ ನಂತರ ಎಷ್ಟು ಮೊಬಲಗು ಎನ್ನುವುದನ್ನು ಕೇಳುತ್ತದೆ. ಅದನ್ನು ನಮೂದಿಸಿದ ನಂತರ ಒಂದೆರಡು ಕ್ಷಣಗಳಲ್ಲಿ ಯಂತ್ರದೊಳಗೆ ಹಣ ಎಣಿಕೆಯಾಗುತ್ತಿರುವ ಸದ್ದು ಕೇಳಿಸಿ ಅದನ್ನು ಪಾವತಿಮಾಡುವ ಕಿಂಡಿಯಿಂದ ಹಣವನ್ನು ಹೊರತಳ್ಳುತ್ತದೆ. ಯಂತ್ರದಲ್ಲಿ ಹಣ ಬರುವ ಕ್ಷಣಗಳ ಮೊದಲೇ ಖಾತೆಯಲ್ಲಿ ಆ ಮೊತ್ತ ಕಡಿತವಾಗಿಬಿಟ್ಟಿರುತ್ತದೆ. ಹಣ ಪಡೆದುಕೊಂಡ ನಂತರ ಬೇಕಿದ್ದರೆ ವಹಿವಾಟಿನ ವಿವರದ ಚೀಟಿ ಬರುತ್ತದೆ. ಹಣ ಆ ಕಿಂಡಿಯಲ್ಲಿ ನಿಲ್ಲವುದು ಒಂದೆರಡೇ ಕ್ಷಣ. ತಡಮಾಡದೆ ತೆಗೆದುಕೊಂಡುಬಿಡಬೇಕು. ಅದೇ ಹೊತ್ತಿಗೆ ಮೊಬೈಲ್‌ ಕರೆ ಬಂತೆಂದು ʻಹಲೋ…ʼ ಎಂದು ಉತ್ತರಿಸುತ್ತಾ ನಿಂತಿರೋ… ಅಷ್ಟರಲ್ಲಿ ಯಂತ್ರವು ಹಣವನ್ನು ಒಳಗೆಳೆದುಕೊಂಡು ಬಿಡುತ್ತದೆ. ಕರೆ ಕೇಂದ್ರಕ್ಕೆ ಕರೆಮಾಡಿಯೋ, ಶಾಖೆಗೆ ಹೋಗಿಯೋ ದೂರು ದಾಖಲಿಸುವ ಸ್ಥಿತಿ ನಿಮ್ಮದಾಗುತ್ತದೆ. ಆದರೆ ಇತ್ತೀಚೆಗೆ ಆದ ಬದಲಾವಣೆಯಿಂದ ಹಣ ಒಳಗೆಳೆದುಕೊಳ್ಳದೆ ಹಾಗೆಯೇ ಇರುತ್ತದೆ

ಸ್ವ.ಸ.ಯಂ.ಗೆ ಸಂಬಂಧಪಟ್ಟ ಕೆಲಸಗಳ ಕುರ್ಚಿಯಲ್ಲಿ ಕುಳಿತಿದ್ದಾಗ, ನನ್ನ ಕೆಲಸದ ಪರಿಧಿಯೊಳಗೆ ಬಂದ ಪ್ರತಿಯೊಬ್ಬ ಗ್ರಾಹಕನಿಗೂ ಕೆಲವು ಸಲಹೆಗಳನ್ನು ತಪ್ಪದೇ ಹೇಳುತ್ತಿದ್ದೆ. ಹಾಗೆಯೇ ಅವರಿಗೆ ಬೇಕಿದ್ದರೆ ಅದರ ನೆರಳಚ್ಚಿನ ಚೀಟಿಯನ್ನೂ ಕೊಡುತ್ತಿದ್ದೆ.

1. ಕಾರ್ಡನ್ನು ಅತ್ಯಂತ ಜಾಗರೂಕತೆಯಿಂದ ಇರಿಸಿಕೊಳ್ಳಿ.

2. ನಿಮಗೆ ಸುಲಭವಾಗಿ ನೆನಪಿನಲ್ಲಿ ಉಳಿಯುವಂತಹ ಸಂಖ್ಯೆಯನ್ನು ಮಾತ್ರಾ ಪಿನ್‌ ಸಂಖ್ಯೆಯಾಗಿ ಬಳಸಿ. ಹಾಗೆಂದು ಅದು ನಿಮ್ಮ ಹುಟ್ಟಿದ ಇಸವಿಯೋ, ಹುಟ್ಟು ಹಬ್ಬದ ದಿನವೋ, ಇಲ್ಲವೇ ಒಂದೇ ಅಂಕೆಯನ್ನು ನಾಲ್ಕು ಬಾರಿ ಬಳಸುವುದೋ… ಹೀಗೆ ಬೇರೆಯವರಿಗೆ ಸುಲಭವಾಗಿ ಊಹೆ ಮಾಡಲು ಬರುವಂತ ಸಂಖ್ಯೆಯನ್ನು ಖಂಡಿತವಾಗಿ ಇಟ್ಟುಕೊಳ್ಳಬೇಡಿ.

3. ಆ ಸಂಖ್ಯೆಯನ್ನು ಕೇವಲ ನೆನಪಿನಲ್ಲಿ ಇರಿಸಿಕೊಳ್ಳಿ; ಯಾವ ಕಾರಣಕ್ಕೂ ಕಾರ್ಡಿನ ಹಿಂದುಗಡೆ, ಮೊಬೈಲ್‌ನಲ್ಲಿ, ಅಥವಾ ಪರ್ಸಿನಲ್ಲಿ ಇಟ್ಟುಕೊಂಡಿರುವ ಪುಟ್ಟ ಪುಸ್ತಕದಲ್ಲೋ, ಚೀಟಿಯಲ್ಲೋ ಅದನ್ನು ಬರೆದಿಡಬೇಡಿ. ಅಷ್ಟು ಬೇಕಾದರೆ ಮನೆಯಲ್ಲಿನ ಸುಭದ್ರವಾದ ಜಾಗದಲ್ಲಿ ಬರೆದಿರಿಸಿ.

4. ಪಿನ್‌ ಸಂಖ್ಯೆಯನ್ನು ಆಗಾಗ ಮತ್ತು ಬೇರೆಯವರಿಗೆ ತಿಳಿಯಿತೆಂಬ ಅನುಮಾನ ಬಂದಾಗ ತಕ್ಷಣವೇ ಬದಲಾಯಿಸಿ.

5. ಬೇರೆಯವರ ಕೈಯಲ್ಲಿ ಕಾರ್ಡನ್ನು ಕೊಟ್ಟು ಹಣ ತರಿಸಿಕೊಳ್ಳುವ ಅತಿಯಾದ ನಂಬಿಕೆ ಒಳ್ಳೆಯದಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಈ ಸೇವೆ ಲಭ್ಯವಿರುವುದರಿಂದ ನಿಮಗೆ ಅನುಕೂಲವಾದ ಸಮಯದಲ್ಲಿ ಖುದ್ದಾಗಿ ಹೋಗಿ ವಹಿವಾಟನ್ನು ನಡೆಸಿ. 

6. ಗುಂಪು ಗುಂಪಾಗಿ ಹೋಗಿ ನಿಮ್ಮ ವಿವರಗಳು ಇತರರಿಗೆ ತಿಳಿಯುವಂತೆ ಮಾಡಬೇಡಿ.

7. ನಿಮ್ಮ ಖಾತೆಗೆ ಋಣಿತವಾಗಿಯೂ ಹಣ ಬಾರದಿದ್ದರೆ, ಕಡಿಮೆ ಬಂದರೆ ತಕ್ಷಣವೇ ಕರೆ ಕೇಂದ್ರಕ್ಕೆ ಕರೆಮಾಡಿ ದೂರು ದಾಖಲಿಸಿ.

8. ನಿಮ್ಮ ವಹಿವಾಟು ಮುಗಿದ ತಕ್ಷಣ ಅದರ ವಿವರಗಳ ಚೀಟಿಯನ್ನು ಪಡೆದುಕೊಂಡು ಯಂತ್ರದ ಪರದೆಯನ್ನು ಮೂಲ ಪರದೆಗೆ ತಂದು ನಿಲ್ಲಿಸಿ ನಂತರ ನಿರ್ಗಮಿಸಿ.

9.  ಕಾರ್ಡು ಕಳೆದುಹೋದರೆ ತಕ್ಷಣವೇ ಕರೆ ಕೇಂದ್ರಕ್ಕೆ ಕರೆಮಾಡಿ ಕಾರ್ಡನ್ನು ನಿರ್ಬಂಧಗೊಳಿಸಿ.

10. ಎ.ಟಿ.ಎಂ ಕೋಶದೊಳಗೆ ಹೋದಾಗ ಮೊಬೈಲ್‌ ಕರೆಗಳನ್ನು ಸ್ವೀಕರಿಸುವ ಅಭ್ಯಾಸ ಒಳ್ಳೆಯದಲ್ಲ.

11. ಬ್ಯಾಂಕಿನವರು ನಿಮ್ಮ ಕಾರ್ಡ್, ಪಿನ್‌ ಅಥವಾ ಸಿವಿವಿ ಸಂಖ್ಯೆಯನ್ನು ಕೇಳಿ ಕರೆ ಮಾಡುವುದಿಲ್ಲ. ಅಂತಹ ಕರೆಗಳು ಬಂದರೆ ಎಚ್ಚರಿಕೆಯಿಂದಿರಿ, ಮೋಸ ಹೋಗಬೇಡಿ. ಅದನ್ನೆಷ್ಟು ಜನ ಪಾಲಿಸುತ್ತಿದ್ದರೋ ಇಲ್ಲವೋ, ನಾನಂತೂ ಊದುವ ಶಂಖವನ್ನು ಪ್ರತಿಬಾರಿಯೂ ಊದುತ್ತಿದ್ದೆ. ನನಗೆ ಈ ಅವಕಾಶ ಒದಗಿದ ಸಂದರ್ಭ ಹಾಗೂ ಈ ಕೆಲಸದ ಅವಧಿಯಲ್ಲಿ ನನ್ನ ಅನುಭವಕ್ಕೆ ಬಂದ ಕೆಲವು ಸ್ವಾರಸ್ಯಕರ ಪ್ರಸಂಗಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

‍ಲೇಖಕರು Avadhi

September 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಅವಧಿಯಲ್ಲಿ ಓದುವ ಖುಷಿಯೇ ಬೇರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: