-ಶೋಭಾ ದಿನೇಶ್
*
ಇತ್ತೀಚೆಗೆ ತರಕಾರಿ ಕತ್ತರಿಸುವುದೆಂದರೆ ಅವಳಿಗೆ ಧ್ಯಾನ
ಅದಕ್ಕಾಗಿಯೇ ಅವಳು ವಿಶಿಷ್ಟವಾದ ಚಾಕುವೊಂದನ್ನು ತಂದಿರಿಸಿದ್ದಾಳೆ,
ಉಳಿದ್ದೆಲ್ಲಾ ಹತಾರಗಳಿಗಿಂತ ಈ ಚಾಕುವಿನ ಮೇಲೆ ತುಸು ಹೆಚ್ಚೇ ಕಾಳಜಿ
ಆಗಾಗ ಚಾಕುವಿನ ತಲೆ ನೇವರಿಸಿ ವಿಶೇಷವಾಗಿ ಉಪಚರಿಸುತ್ತಾಳೆ
ಚಾಕುವನ್ನು ತಾಗಿದಾಗಲೆಲ್ಲಾ ಇನ್ನಿಲ್ಲದ ಧ್ಯರ್ಯ ಅವಳ ರಕ್ತನಾಳಗಳಿಗೆ ನುಗ್ಗುತ್ತದೆ
ಸಣ್ಣ ವಿದಾಯವೂ ಹೇಳದೇ ಹೋದ ಅವನು
ಕಾರಣವಿಲ್ಲದೇ ಸಿಡುಕುವ ಹೊಸ ಪ್ರಾಜೆಕ್ಟಿನ ಬಾಸೂ
ಕಾಫಿ ಕೊಡುವ ನೆಪದಲ್ಲಿ ಕೈ ತಾಕುವ ಆಫೀಸಿನ ಹುಡುಗ
ಸದಾ ಸೊಂಟವನ್ನೇ ನಿರುಕಿಸುವ ಪಕ್ಕದಮನೆ ಅಂಕಲ್
ಹೀಗೆ ಪಟ್ಟಿ ದೊಡ್ಡದಿದೆ ಮತ್ತು ಅವರೆಲ್ಲ ತರಕಾರಿ ಕತ್ತರಿಸುವಾಗ ನೆನಪಾಗುತ್ತಾರೆ
ತರಕಾರಿ ಕತ್ತರಿಸಲು ಅದೆಲ್ಲಿಂದಲೋ ಆರಿಸಿ ಗಟ್ಟಿ ಮಣೆಯೊಂದನ್ನು ತಂದಿದ್ದಾಳೆ
ತರಕಾರಿಗಳನ್ನು ಮಟ್ಟಸವಾಗಿ ಮಡಚಿ, ಅಲುಗಾಡದಂತೆ ಬಿಗಿ ಹಿಡಿದು
ಕಚ ಕಚನೇ ಕತ್ತರಿಸುತ್ತಾಳೆ, ಯಾವುದೂ ತಪ್ಪಿಸಿಕೊಳ್ಳದಂತೆ ನಿಗಾ ವಹಿಸುತ್ತಾಳೆ
ಆಗೆಲ್ಲಾ ಅವಳಲ್ಲಿ ಅಡ್ರಿಲಿನ್ ಮತ್ತು ಸೆರೋಟಿನ್ ಹಾರ್ಮೋನ್ ಉಕ್ಕಿ ಹರಿಯುತ್ತದೆ
ಅವಳ ಮುಖದಲ್ಲಿನ ನಿರಾಳತೆಯನ್ನ ನೋಡುವುದೇ ಚಂದ ಆಗೆಲ್ಲಾ
ಅಷ್ಟಕ್ಕೆ ಮುಗಿಯುವುದಿಲ್ಲ ಅವಳ ಧ್ಯಾನ
ಕೊಚ್ಚಿದ ತರಕಾರಿಗಳನ್ನೆಲ್ಲಾ ಧಗ ಧಗನೆ ಉರಿವ ಬಾಣಲೆಗೆ ಸುರಿಯುತ್ತಾಳೆ
ಮೇಲೆ ಒಂದಷ್ಟು ಉಪ್ಪು, ಖಾರದ ಪುಡಿ ರಾಚುತ್ತಾಳೆ, ಕೆಂಪಾಗುವವರೆಗೂ ಉರಿಯುತ್ತಾಳೆ
ಆಗೆಲ್ಲಾ ಅವಳು ಗುನುಗುವ ಹಾಡು
ಈ ಶತಮಾನದ ಮಾದರಿ ಹೆಣ್ಣು…..
ಇತ್ತೀಚೆಗೆ ತರಕಾರಿ ಹಚ್ಚುವುದೆಂದರೆ ಅವಳಿಗೆ ಧ್ಯಾ ನ ಕೆಲವೊಮ್ಮೆ ರಣೋತ್ಸಾಹ






0 Comments