ಅಂಬಲಪಾಡಿಯಿಂದ ವಿಸ್ತರಿಸಿದ ‘ಓಶೋ’ ದರ್ಶನ
ಶೂದ್ರ ಶ್ರೀನಿವಾಸ
ಎಂಬತ್ತು ಮತ್ತು ತೊಂಬತ್ತು ದಶಕಗಳು ಕಳೆದ ಶತಮಾನದಲ್ಲಿ ಕರ್ನಾಟಕದ ಸಾಂಸ್ಕೃತಿಕ ಲೋಕ ವೈವಿಧ್ಯಮಯವಾಗಿ ತೆರೆದುಕೊಂಡಿತ್ತು. ಎಲ್ಲೆಲ್ಲೋ ಏನೇನೋ ನಡೆಯುತ್ತಿತ್ತು. ಎಂತೆಂಥದೋ ವಾಗ್ವಾದಗಳು, ಮತೀಯವಾದಿಗಳು ಮುಸುಕು ಹಾಕಿಕೊಂಡು ನಿದ್ದೆಯ ನೆಪದಲ್ಲಿದ್ದರು. ಇಂಥ ಕಾಲಘಟ್ಟದಲ್ಲಿ ನನ್ನಂಥವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಆಕರ್ಷಕ ಕೇಂದ್ರವಾದ ಉಡುಪಿ ನಮ್ಮನ್ನು ಪ್ರತಿವರ್ಷ ಬರಮಾಡಿಕೊಳ್ಳುತ್ತಿತ್ತು. ಇಲ್ಲಿ ‘ರಥ ಬೀದಿ ಗೆಳೆಯರು’ ಎಂಬ ಸಂಘಟನೆ ಗರಿಗೆದರಿ ನಿಂತಿತ್ತು. ಇದರಲ್ಲಿ ಪ್ರೊ. ಹರಿದಾಸ ಭಟ್ಟರು, ಜಿ.ರಾಜಶೇಖರ್, ಮುರಾರಿ ಬಲ್ಲಾಳ್, ಮುರಳೀಧರ ಉಪಾಧ್ಯ, ಬೋಳವಾರು ಮಹಮ್ಮದ್ ಕುಂಞಿ ಮತ್ತು ವೈದೇಹಿಯಂಥವರು ಲವಲವಿಕೆಯಿಂದ ಸಂಘಟಿಸಿದ್ದರು. ಒಂದು ವರ್ಷ ತಪ್ಪಿಸಿಕೊಂಡರೂ; ಎಂಥದ್ದೋ ಅಪೂರ್ವವಾದದ್ದನ್ನು ಕಳೆದುಕೊಳ್ಳುತ್ತೇವೆ ಎಂಬ ಮನಸ್ಥಿತಿ ನನ್ನಲ್ಲಿ ರೂಪುಗೊಂಡಿತ್ತು. ಎಂಜಿಎಂ ಕಾಲೇಜಿನ ಸಭಾಂಗಣ ಒಂದು ರೀತಿಯಲ್ಲಿ ಅನುಭವ ಮಂಟಪವಾಗಿತ್ತು. ನಮ್ಮ ಪುರಾಣಗಳಿಂದ ಮೊದಲ್ಗೊಂಡು ಜಗತ್ತಿನ ಮೂಲೆ ಮೂಲೆಯ ಚಿಂತನಾಕ್ರಮಗಳು ಇಲ್ಲಿ ಚರ್ಚೆಯಲ್ಲಿ, ಸಂವಾದದಲ್ಲಿ ನುಸುಳಿ ಹೋಗುತ್ತಿದ್ದವು.
ಯು.ಆರ್.ಅನಂತಮೂರ್ತಿ, ಲಂಕೇಶ್, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಕುರ್ತುಕೋಟಿ, ಕೆ.ವಿ. ತಿರುಮಲೇಶ್, ಲಕ್ಷ್ಮೀಶ್ ತೊಳ್ಬಾಡಿ, ಡಿ.ಆರ್.ನಾಗರಾಜ್, ಕವಿ ಸಿದ್ದಲಿಂಗಯ್ಯ, ಬಿ.ಸಿ.ರಾಮಚಂದ್ರ ಶರ್ಮ, ಕೆ.ವಿ. ಸುಬ್ಬಣ್ಣ, ಜಿ.ಜಿ.ಜೋಶಿ, ಕಿ.ರಂ.ನಾಗರಾಜ್, ಕೆ.ಮರುಳಸಿದ್ದಪ್ಪ, ಬನ್ನಂಜೆ ಗೋವಿಂದಚಾರ್ಯ, ಟಿ.ಪಿ.ಅಶೋಕ್ ಮತ್ತು ಗೋಪಾಲಕೃಷ್ಣ ಅಡಿಗ ಮುಂತಾದವರು ಭಾಗವಹಿಸುತ್ತಿದ್ದ ದಿನಗಳು. ಅಲ್ಲಿಂದ ವಾಪಸ್ ಬಂದ ಮೇಲೆ ಎಷ್ಟೊ ದಿವಸ ಇಲ್ಲಿಯ ಸಂವಾದಗಳು ನಮ್ಮ ಮಾನಸಿಕ ಗುನುಗುನವಿಕೆಗೆ ಕಾರಣವಾಗಿತ್ತು.
ಒಂದು ದೃಷ್ಟಿಯಿಂದ ಡಿ.ಆರ್.ನಾಗರಾಜ್ ಅಲ್ಲಿ ‘ಸಾಂಸ್ಕೃತಿಕ ಹೀರೋ’ ಆಗಿದ್ದ. ಒಮ್ಮೆ ಅವನ ಮಾತುಗಳನ್ನು ಆಲಿಸಿ ಕೊಂಡು ಪಪುಲ್ ಜಯಕರ್ ಅಂಥ ಮಹಾನ್ ಚಿಂತಕ ಹಾಗೂ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಎಂ.ಜೆ.ಅಕ್ಬರ್ ಎಷ್ಟು ಚೆನ್ನಾಗಿ ಪ್ರತಿಕ್ರಿಯಿಸಿದ್ದರು. ಈಗ ಇದನ್ನೆಲ್ಲ ನೆನಪು ಮಾಡಿಕೊಂಡರೆ; ಉಡುಪಿ ಬರಡು ಅನ್ನಿಸುತ್ತದೆ. ಇಂಥ ಸಾಂಸ್ಕೃತಿಕ ಉತ್ತುಂಗದ ದಿನಗಳಲ್ಲಿ ಒಮ್ಮೆ ಗೆಳೆಯ ಮುರಾರಿ ಬಲ್ಲಾಳರು ಆಗ ತಾನೇ ಹೊಸದಾಗಿ ನಿರ್ಮಿಸಿದ್ದ ಅಂಬಲಪಾಡಿ ಮನೆಗೆ ಕರೆದುಕೊಂಡು ಹೋದರು. ಮುರಾರಿಯವರ ಮನಸ್ಥಿತಿಯನ್ನು ಅರ್ಥಪೂರ್ಣ ವಾಗಿ ಬಿಂಬಿಸುವಂಥ ಮನೆ.
ಚರ್ಚೆ, ಸಂವಾದ ಮತ್ತು ಅಧ್ಯಯನಕ್ಕೆ ಬೇಕಾದ ಕೊಠಡಿಗಳು, ದಕ್ಷಿಣ ಕನ್ನಡದ ಪಾರಂಪರಿಕ ಮನೆಗಳ ವಾಸ್ತುಶಿಲ್ಪವನ್ನು ಮಿಕ್ಸ್ಮಾಡಿ ನಿರ್ಮಿಸಿದ ಆಧುನಿಕ ಮನೆ. ಹತ್ತಾರು ಸಾಂಸ್ಕೃತಿಕ ಕನಸುಗಳು ಸದಾ ಚಿಗುರಿರಬೇಕೆಂದು ಪ್ರೀತಿಯಿಂದ ಮುರಾರಿಯವರು ನಿರ್ಮಿಸಿದ ಮನೆ. ಮಾತಿನಲ್ಲಿ ಮತ್ತು ಕೃತಿಯಲ್ಲಿ ಸದಾ ಪುಟಿಯುತ್ತಿದ್ದ ಅವರ ಹೃದಯವಂತಿಕೆ ಎಂಥ ವಿಶಾಲವಾದದ್ದು. ಏನೋ ಹೊಸ ಚಿಂತನೆ ಎಮರ್ಜ್ ಆಗುತ್ತಿದೆಯೆಂದರೆ ಅಲ್ಲಿಗೆ ಜಿಗಿಯುತ್ತ ಹೋಗಿ ಗಂಭೀರವಾಗಿ ಕೇಳಿಸಿ ಕೊಳ್ಳುತ್ತಿದ್ದವರು. ಅಗಾಧವಾದ ಆತ್ಮಸ್ಥೈರ್ಯವಿದ್ದವರು.
ಸಾಹಿತ್ಯ, ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರವನ್ನು ಅರ್ಥಪೂರ್ಣವಾಗಿ ಬೆಸೆಯುತ್ತಿದ್ದವರು. ಆದ್ದರಿಂದಲೇ ತಮ್ಮೆಲ್ಲ ಆಂತರಿಕ ಒಳಗುದಿಗಳನ್ನು ಮರೆಯಲು ಸದಾ ಹಸನ್ಮುಖಿಯಾಗಿ ಕ್ರಿಯಾಶೀಲರಾಗಿದ್ದವರು. ಈ ರೀತಿಯ ಮುರಾರಿಯವರು ಎಂ.ಜಿ.ಎಂ. ಕಾಲೇಜಿನ ಸಭಾಂಗಣದಿಂದ ನಮ್ಮನ್ನೆಲ್ಲ ಬರಮಾಡಿಕೊಂಡಿದ್ದರು. ಊಟದ ವ್ಯವಸ್ಥೆಯನ್ನು ಅದ್ದೂರಿಯಾಗಿ ಮಾಡಿಸಿದ್ದರು. ಊಟವಾದ ಮೇಲೆ ಮನೆಯ ಒಂದೊಂದು ಭಾಗವನ್ನು ಪರಿಚಯಿಸುತ್ತ ಹೋದರು. ಹೀಗೆ ಪರಿಚಯಿಸು ವಾಗ ತಾವು ಆಡಿ ಬೆಳೆದ ಮನೆಯನ್ನು ಮರೆಯಲಿಲ್ಲ. ಅದು ಬಲ್ಲಾಳ ಕುಟುಂಬದವರು ಬಾಳಿ ಬುದಕಿದ ನೂರಾರು ವರ್ಷಗಳ ಮನೆ. ಅದೂ ಕೂಡ ಅಪರೂಪದ ಮನೆ.
ಹಿರಿಯ ಕಾದಂಬರಿಕಾರರಾದ ವ್ಯಾಸರಾಯ ಬಲ್ಲಾಳರೂ ತಮ್ಮ ಬಾಲ್ಯವನ್ನು ಶ್ರೀಮಂತಗೊಳಿಸಿಕೊಂಡ ಮನೆ. ಆದರೆ ಈಗ ಕುಟುಂಬದ ಸದಸ್ಯರ ಕೊರತೆಯಿಂದ ಎರಡೂ ಮನೆಗಳೂ ಒಂದು ರೀತಿಯಲ್ಲಿ ವಿಷಾಧದ ಗೂಡುಗಳಾಗಿದ್ದವು. ಈ ಕೊರತೆಯನ್ನು ಮುಚ್ಚುವುದಕ್ಕಾಗಿಯೇ ಎಂಬಂತೆ; ಮುರಾರಿಯವರು ಹತ್ತಾರು ಪಾತ್ರವಾಗಿ ಬಿಡು ತ್ತಿದ್ದರು. ಅವರ ವೈಯಕ್ತಿಕೆ ಬದುಕಿನ ವಿಷಾದದ ಸಂಗತಿಗಳನ್ನು ನಾವು ಒಂದು ದಿವಸವೂ ಕೇಳಲಾಗಲಿಲ್ಲ. ಹೀಗೆ ಕೇಳಲಾಗದಿದ್ದರೂ ಎಂತೆಂಥದೋ ವಿಷಯಗಳು ನಮ್ಮ ಕಿವಿಗೆ ತಲುಪುತ್ತಿದ್ದವು. ಇದರಿಂದ ಮುರಾರಿಯವರು ನಮಗೆ ಮತ್ತಷ್ಟು ಪ್ರಿಯರಾದರು. ಯಾಕೆಂದರೆ ಒಂದು ರೀತಿಯ ನೊಂದ ಜೀವ ಎಂದು.
ಈ ಎಲ್ಲ ವಿಷಾದಗಳ ಮೊತ್ತವಾಗಿದ್ದರಿಂದಲೇ ಅವರು ಓಶೋ ಮತ್ತು ಜೆ.ಕೃಷ್ಣಮೂರ್ತಿಯವರಂಥ ಮಹಾನ್ ದಾರ್ಶನಿಕರ ಚಿಂತನೆಗಳಿಗೆ ತುಂಬ ಆಪ್ತರಾಗುತ್ತಾ ಹೋಗುತ್ತಿದ್ದುದು ಅನ್ನಿಸುತ್ತದೆ.ಈ ಎಲ್ಲ ಕಾರಣಗಳಿಗಾಗಿ ಅವರ ಗ್ರಂಥ ಭಂಡಾರ ಶ್ರೀಮಂತವಾಗಿತ್ತು. ಅದನ್ನು ತೋರಿಸಲು ಲಂಕೇಶ್ ಅವರನ್ನು ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ದರು. ಮುರಾರಿ ಯವರಿಗೆ ಲಂಕೇಶ್ ಮತ್ತು ಅನಂತಮೂರ್ತಿ ಯವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಮತ್ತು ಅಭಿಮಾನ. ಅವರ ಗ್ರಂಥ ಭಂಡಾರವನ್ನು ತೋರಿಸುವಾಗ; ಓಶೋ ಅವರನ್ನು ಕುರಿತ ಕೃತಿಗಳ ಬಗ್ಗೆ ಹೆಚ್ಚು ಒತ್ತುಕೊಟ್ಟು ವಿವರಿಸುತ್ತ ಹೋದರು.
ಲಂಕೇಶ್ ಅವರು ಓಶೋ ಬಗ್ಗೆ ಅಷ್ಟೊಂದು ಒಲವನ್ನು ಹೊಂದಿರಲಿಲ್ಲ. ನಾನಂತೂ ತುಂಬ ಆಕರ್ಷಿತನಾದೆ. ಎರಡು ಮೂರು ಗಂಟೆ ಅಲ್ಲೇ ಕೂತು ಓಶೋ ಅವರನ್ನು ಕುರಿತು ಬಂದಿರುವ ಕೃತಿಗಳ ಒಂದಷ್ಟು ಬೆನ್ನುಡಿಗಳನ್ನು ಓದುತ್ತಾ ಹೋದೆ. ಇದರಿಂದ ಕೆಲವು ಕೃತಿಗಳ ಒಳಗಿನ ಪುಟಗಳಿಗೂ ಹೋಗಲು ಸಾಧ್ಯ ವಾಯಿತು. ಆ ಸಮಯಕ್ಕೆ ಡಿ.ಆರ್.ನಾಗರಾಜ್ ಕೂಡ ಈ ಮಹಾನ್ ಚಿಂತಕನನ್ನು ಕುರಿತು ಸಾಕಷ್ಟು ಓದಿಕೊಂಡಿದ್ದ. ನನ್ನನ್ನು ಅಲ್ಲಿಯೇ ಬಿಟ್ಟು ಡಿ.ಆರ್. ಮತ್ತು ಲಂಕೇಶ್ ಅವರು ಎಂಜಿಎಂ ಕಾಲೇಜಿನ ಸಭಾಂಗಣಕ್ಕೆ ಎಲ್ಲರೊಡನೆ ಹೊರಟರು.
‘‘ಶೂದ್ರ, ನೀವು ಇಲ್ಲಿಯೇ ಎಷ್ಟು ಸಮಯವಿರಲು ಸಾಧ್ಯವೋ, ಅಷ್ಟು ಸಮಯ ಇರಲು ಪ್ರಯತ್ನಿಸಿ. ನಾನು ವಾಹನ ಕಳಿಸಿಕೊಡುವೆ ಆಮೇಲೆ ಬರುವಿರಂತೆ’’ ಎಂದು ಮನೆ ಕೆಲಸಗಾರನಿಗೆ ತಿಳಿಸಿ ಹೊರಟರು. ನನಗೆ ತುಂಬ ಖುಷಿ ಯಾಯಿತು. ನಿಜವಾಗಿಯೂ ಆ ಎರಡು ಮೂರು ಗಂಟೆ ಓಶೋ ನನಗೆ ಏನೋ ಒಂದು ರೀತಿಯ ಚೈತನ್ಯವನ್ನು ತುಂಬಿದರು ಎಂಬ ಭಾವನೆ ಈಗಲೂ ದಟ್ಟವಾಗಿದೆ. ಅಲ್ಲಿಯವರೆಗೂ ನನು ಜೆ.ಕೃಷ್ಣಮೂರ್ತಿ ಯಂಥವರ ಚಿಂತನೆಗಳಲ್ಲಿ ಕರಗಿ ಹೋಗಿದ್ದವನು. ನಿಧಾನವಾಗಿ ಓಶೋ ಅವರ ಚಿಂತನೆ ಆ ರೀತಿಯಲ್ಲಿ ಹತ್ತಿರಕ್ಕೆ ಸೆಳೆದುಕೊಳ್ಳುವ ಅನಂತತೆಯನ್ನು ತುಂಬಿ ಕೊಂಡಿದ್ದರು. ಒಂದು ದೃಷ್ಟಿಯಿಂದ ಈ ಬಾರಿಯ ಉಡುಪಿಯ ಭೇಟಿ ಸ್ಮರಣೀಯ ವಾದದ್ದು ಅನ್ನಿಸಿಬಟ್ಟಿತು.
ಬೆಂಗಳೂರಿಗೆ ವಾಪಸ್ಸು ಬರುವಾಗಲೂ ಓಶೋ ಕುರಿತ ಒಂದಷ್ಟು ಕೃತಿಗಳ ಪಟ್ಟಿಯನ್ನು ಜೊತೆಯಲ್ಲಿ ತಂದಿದ್ದೆ. ಅಂಬಲಪಾಡಿಯ ಆ ಮನೆಯನ್ನು ಬಿಡುವ ಸಮಯದಲ್ಲಿ ಓಶೋ ನನ್ನಲ್ಲಿ ಸಾಕಷ್ಟು ಆವರಿಸಿಕೊಂಡಿದ್ದರು. ಬೆಂಗಳೂರಿಗೆ ವಾಪಸ್ಸು ಬರುವಾಗ, ಲಂಕೇಶ್ ಅವರು ‘‘ಶೂದ್ರ, ನೀನು ಹಾಗೆಯೇ ಉಡುಪಿಯಿಂದ ಪೂನಾಗೆ ಓಡಿ ಹೋಗುತ್ತೀಯ ಎಂದು ತಿಳಿದಿದ್ದೆ’’ ಎಂದಿದ್ದರು. ಇಷ್ಟು ವರ್ಷಗಳ ನಂತರವೂ ಲಂಕೇಶ್ ಅವರ ಆ ನುಡಿ ನನ್ನಲ್ಲಿ ಗುನುಗುನಿಸುತ್ತಲೇ ಇದೆ. ಯಾಕೆಂದರೆ; ಒಂದಲ್ಲ ಒಂದು ವಿಧದಲ್ಲಿ ಓಶೋ ಕುರಿತ ಓದು ಮತ್ತು ಅವರ ಸಿಡಿಗಳಲ್ಲಿ ಅವಿತುಕೂತು ಧ್ವನಿಸುತ್ತಿರುವ ನುಡಿಗಳು ಮುಖಾಮುಖಿಯಾಗುತ್ತಲೇ ಇರುತ್ತದೆ. ಇದರ ಜೊತೆಗೆ ನನ್ನ ಬಹುಪಾಲ ಗೆಳೆಯರು ಓಶೋ ಅಭಿಮಾನಿಗಳು.
ಬೆಂಗಳೂರಿಗೆ ಬಂದ ತಕ್ಷಣ ಓಶೋ ಕುರಿತ ಕೃತಿಗಳನ್ನು ಪಡೆಯಲು ಕಷ್ಟವಾಗಲಿಲ್ಲ. ಇದರ ಜೊತೆಗೆ ಮುರಾರಿ ಬಲ್ಲಾಳರು ವಾರಕ್ಕೆ ಮೂರು ನಾಲ್ಕು ಬಾರಿಯಾದರೂ; ದೂರವಾಣಿಯಲ್ಲಿ ಸಾಕಷ್ಟು ಸಮಯ ಸಂಪರ್ಕದಲ್ಲಿರುತ್ತಿದ್ದರು. ಆಗ ಅವರು ಎಷ್ಟೊಂದು ಮಾತಾಡುತ್ತಿದ್ದರು. ಅವರು ಒಂದು ರೀತಿಯಲ್ಲಿ ತುಂಬ ವಾಚಾಳಿಯಾದರೂ; ಆ ಮಾತುಗಳಲ್ಲಿ ಕಿರಿಕಿರಿ ಇರುತ್ತಿರಲಿಲ್ಲ. ಅವರ ವ್ಯಕ್ತಿತ್ವವೇ ಹೆಚ್ಚು ಪ್ರಿಯವಾದದ್ದು ಆಗಿತ್ತು. ಸಿಂಡಿಕೇಟ್ ಬ್ಯಾಂಕ್ ಅಂಥ ಬೃಹತ್ ಹಣಕಾಸು ಸಂಸ್ಥೆಯ ಆರ್ಥಿಕ ಸಲಹೆಗಾರ ರಾಗಿದ್ದುಕೊಂಡು; ಹತ್ತಾರು ಅಮೂಲ್ಯ ಚಿಂತಕರನ್ನು ಮನದೊಳಗೆ ಬಿಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಎಂಬ ಕಾರಣಕ್ಕಾಗಿ ಇದನ್ನು ಪ್ರಸ್ತಾಪಿಸುತ್ತಿರುವೆ ಓಶೋ ಅವರ ಕೃತಿಗಳ ಹುಡುಕಾಟದಲ್ಲಿ; ಅವರ ‘ಸೈಲೆನ್ಸ್’ ಮತ್ತು ‘ಮನಿ’ ಕುರಿತ ಕ್ಯಾಸೆಟ್ ಮತ್ತು ಸಿಡಿಗಳೂ ದೊರಕುತ್ತ ಹೋದವು.
‘ಸೈಲೆನ್ಸ್’ ಕುರಿತ ಅವರ ನುಡಿಮುತ್ತುಗಳನ್ನು ಕೇಳುತ್ತಲೇ ಇದ್ದೇನೆ. ಜಗತ್ತನ್ನು ಹಾಗೂ ಮನುಷ್ಯ ಸಂಬಂಧಗಳನ್ನು ವಿಸ್ತರಿಸಿದಂತೆ ಎಂತೆಂಥದೋ ಒಳನೋಟಗಳು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ. ಅಷ್ಟೇ ಏಕೆ ಓಶೋ ಅಂಥ ಮಹಾನುಭಾವನ ನುಡಿ ಮತ್ತು ಧ್ವನಿಯ ಲಯ ಅಥವಾ ಆಲಾಪನೆ ಪಂಡಿತ್ ಕುಮಾರ್ ಗಂಧರ್ವ, ವಿದುಷಿ ಪರ್ವಿನ್ ಸುಲ್ತಾನ್, ಉಸ್ತಾದ್ ಬಡೇ ಗುಲಾಂ ಅಲಿಖಾನ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ವಿದುಷಿ ಪ್ರಭಾಅತ್ರೆ, ವಿದುಷಿ ರೋಷನ್ ಅರಾ ಬೇಗಂ, ಪಂಡಿತ್ ಜಸ್ರಾಜ್, ಪಂಡಿತ್ ಭೀಮಸೇನ ಜೋಶಿ, ಕಿಶೋರಿ ಅಮಾನ್ಕರ್, ಗಂಗೂಬಾಯಿ ಹಾನಗಲ್ ಮತ್ತು ಬಾಂಬೆ ಜಯಗ್ರಿ ಮುಂತಾದವರ ಧ್ವನಿ ತರಂಗಗಳಲ್ಲಿ ಮಿಕ್ಸ್ ಆಗುತ್ತ ಹೋಗುತ್ತದೆ.
ತುಂಬ ಬೇಸರವಾದಾಗ ಅವರ ‘ಸೈಲೆನ್ಸ್’ ಸಿ.ಡಿ.ಯನ್ನು ಕೇಳಲು ಯಾಕೆ ಹೋಗುತ್ತೇನೆ ಎಂಬುದು ಬಹಳಷ್ಟು ಬಾರಿ ಅವ್ಯಕ್ತವಾದುದು.ಸಂತನೊಬ್ಬನು ತಲೆನೇವರಿಸುತ್ತ; ‘‘ಅಯಾ ಜಗತ್ತೆಂದರೆ ನಾನಾ ರೀತಿಯ ಕ್ಲಿಷ್ಟತೆಗಳಿಂದ ಕೂಡಿರುವಂಥದ್ದು; ಅದನ್ನು ಅತ್ಯಂತ ನಾದಮಯತೆಯಿಂದ ಕೂಡಿರುವಂಥದ್ದು ಎಂದು ಒಳಗೆ ನಿರಂತರ ಬಿಟ್ಟುಕೊಳ್ಳದಿದ್ದರೆ; ನಾವು ನಾಶವಾಗಿ ಹೋಗುತ್ತೇವೆ’’ ಎಂಬುದನ್ನು ಪಿಸುಗುಡುತ್ತಿದ್ದಾರೆ ಅನ್ನಿಸುತ್ತದೆ. ಯಾಕೆಂದರೆ ವ್ಯಾಪಾರಿ ಸಂಸ್ಕೃತಿ ವಿವಿಧ ವೇಷಗಳಲ್ಲಿ ನಮ್ಮ ಮನೆಯ ಬಾಗಿಲಲ್ಲಿ ಕುಣಿದು ಕುಪ್ಪಣಿಸುತ್ತಿರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ; ಮನೆಯೊಳಗೆ ನುಗ್ಗಿ ಎಷ್ಟೊಂದು ರೀತಿಯಲ್ಲಿ ಗಬ್ಬೆಬ್ಬಿಸಬೇಕೋ ಅಷ್ಟನ್ನೂ ಮಾಡಿ ಹೋಗುತ್ತಿರುತ್ತದೆ. ನಿಜವಾಗಿಯೂ ಓಶೋ ಅಂಥವರು ನಮ್ಮನ್ನು ಕಾಪಾಡಿದ್ದಾರೆ ಅನ್ನಿಸುತ್ತದೆ. ಜಗತ್ತಿನಾದ್ಯಂತ ಕೋಟ್ಯಾನು ಕೋಟಿ ಚಿಂತಕರಿಗೆ ಹೊಸ ರೀತಿಯ ಉತ್ಸಾಹವನ್ನು ವಿವಿಧ ರೂಪದಲ್ಲಿ ತುಂಬುತ್ತಲೇ ಇರುವ ಹಿರಿಯ ಚೈತನ್ಯವೇ ಸರಿ







well said sir!
tumba arthapoorna lekhana
ಡಿಯರ್ ಶ್ರೀನಿವಾಸ್,
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
ದಯಮಾಡಿ ನಮ್ಮ ಮೈಸೂರಿನಲ್ಲಿರುವ ಓಶೋ ಸನ್ನಿಧಿಗೆ ಒಮ್ಮೆ ಬನ್ನಿ. ಮತ್ತು ನಿಮಗೆ ಬೇಕಾದರೆ ಹೇಳಿ,ನಿಮ್ಮ ವಿಳಾಸಕ್ಕೆ ಸಾಕಷ್ಟು ಓಶೋ ಸಿಡಿ ಗಳನ್ನೂ ಕಳಿಸುತ್ತೇನೆ.
ಪ್ರೀತಿಯಿಂದ,
venugopal