ಶುರು ಶುರು ಈ ಪ್ರೀತಿಯು…

ಅಮರದೀಪ್

‘ಮನೆ ತುಂಬಾ ದೊಡ್ಡದಾಯ್ತು ಮಾರಾಯ. ಬರೀ ಕಸ ಗುಡ್ಸಿ, ಬಂಡೆ ಒರ್ಸಿ, ಬಾಕಿ ಕೆಲಸ ಮಾಡಿ, ಬಟ್ಟೆ ಒಗ್ದು ಮಾಳಿಗೆ ಮೇಲೆ ಒಣ ಹಾಕೋ ಹೊತ್ಗೆ ಹೈರಾಣಾಗಿರುತ್ತೆ. ಬಡ್ಕೊಂಡೆ ನೀವೆಲ್ ಕೇಳ್ತೀರಾ? ಮೊದ್ಲು ಬಾಡ್ಗೆ ಮನೇ ಸಾವಾಸ್ದಿಂದ ಹೊರಗೆ ಬಂದ್ರೆ ಸಾಕೆನ್ಸಿತ್ತು. ಈಗೀಗ ನಮ್ ಮನೇನೇ…. ಈ ಕೆಲಸ ನೋಡಿದ್ರೆ ಒಂದೊಂದ್ಸಲಾ ಹಂಗನ್ಸುತ್ತೆ…’

ಹೀಗೆ ದಿನಬೆಳಗಾದ್ರೆ ಹೆಂಡ್ತಿ ಸುಪ್ರಭಾತ ಕೇಳ್ತಾನೆ ಇರೋ ಸ್ಥಿತಿ ಶರು ಗಂಡನದು. ಅದು ಕಂಠಪಾಠ. ಮಕ್ಕಳ ಪರೀಕ್ಷೆ ಗದ್ದಲದಲ್ಲಿ ತರಾತುರಿಯ ಕೆಲಸ, ಶಾಲೆಗೆ ಕಳ್ಸೋದು, ಗಂಡನ್ನ ಆಫೀಸಿಗೆ ಕಳ್ಸೋದು, ಬುತ್ತಿ ಡಬ್ಬಿ, ಮಕ್ಳ ಬ್ಯಾಗು ಬರೀ ಇವೇ ಆದವು.

ಒಂದಿನ ಗಂಡ, ಮಕ್ಳು ಎಲ್ಲಾ ಹೋದ ಮೇಲೆ ಹೆಂಡತಿ ಶರು ಅಡುಗೆ ಮನೆ ಕ್ಲೀನ್ ಮಾಡ್ಕೊಂಡು, ಮನೆ ಸ್ವಚ್ಚ ಮಾಡಿ, ಬಟ್ಟೆ ಒಗೆಯಲು ಹೋಗ್ತಾಳೆ. ಪಕ್ಕದ ಮನೆ ಬಿಂಕಮ್ಮನಿಗೂ ಈಕೆಗೂ ಬಟ್ಟೆ ಒಗೆಯೋದ್ರಲ್ಲಿ ಸ್ಪರ್ಧೆ…. ಮೊದ್ಲು ಯಾರು ಬಟ್ಟೆ ಒಗ್ದು ಮಾತಾಡ್ಸಿ…. ‘ಏನ್ರೀ, ನೀವಿನ್ನೂ ಬಟ್ಟೆ ತೊಳ್ದು, ಪಾತ್ರೆ ಬೆಳಗೋದು ಮುಗ್ಸಿಲ್ವಾ?….’ ಅಂಥ ರಾಗವಾಗಿ ಮಾತಿಗೆ ಕುಂತು ಒಂದ್ಮುಕ್ಕಾಲು ಗಂಟೆ ಅಕ್ಕಪಕ್ಕದ ಮನೆ ಸುದ್ದಿ ಬಿಟ್ಟು ಎಲ್ಲೋ ಇರೋ ಯಾರ್ ಯಾರ್ದೋ ವಿಷ್ಯ ಎತ್ಗೊಂಡ್ ಸಂಹಾರ ಮಾಡಿ ‘ಮತ್ತೆ ಮಧ್ಯಾಹ್ನ ಎಷ್ಟ್ ಬೇಗ ಆಗ್ಬಿಡ್ತು ರೀ…… ಪುರ್ಸೊತ್ತೇ ಇಲ್ಲ…. ಈಗ ನಮ್ಮೆಜಮಾನ್ರು ಬರ್ತಾರೆ, ಅಡುಗೆಗೆ ಇಡ್ತೀನಿ…..’ ಅಂದು ಜಾಗ ಖಾಲಿ ಮಾಡ್ತಾರೆ.

ಇನ್ನೇನು ಶರು ಹೊಸ್ತಿಲು ಒಳಗೆ ಬರಬೇಕು.. ಬಟ್ಟೆ ಒಗ್ದಿದ್ದಷ್ಟೇ ಬಂತು ಹಿಂಡಿದ ನಂತ್ರ ಮಾಳಿಗೆ ಏರಿ ಒಣ ಹಾಕಿದ್ದಿಲ್ಲದ್ದು ಅರಿವಿಗ ಬಂತು. ಗ್ಯಾಸ್ ಹಚ್ಚಿ ಕುಕ್ಕರ್ ಇಟ್ಟು ಹಸಿ ಬಟ್ಟೆ ಇದ್ದ ಬಕೆಟ್ ತಗೊಂಡ್ ಮೆಟ್ಲು ಹತ್ತಿ ಮಾಳಿಗೆ ಏರಿ, ತನ್ನಷ್ಟಕ್ಕೆ ತಾನೇ ಝೀ ಟೀವಿ ಸೀರಿಯಲ್ ಪತ್ತೇದಾರಿ ಪ್ರತಿಭಾ ಅದೆಷ್ಟು ಸರ್ಸರಾಂತ ಇರ್ತಾಳಲ್ಲ?! ಅಂದ್ಕಂಡು ದಡಾಬಡಾ ಕೊಡವಿ ಬಟ್ಟೆ ಒಣಾ ಹಾಕಿ ಗ್ರಿಲ್ ಡೋರ್ ಎಳ್ದು ಇನ್ನೇನು ಮೆಟ್ಲು ಇಳಿಬೇಕು. ಕಾಲಿಗೆ ಸೀರೆ ಸಿಕ್ಕು, ಹಿಡಿತದಿಂದ ಕಂಬಿ ಕೈ ಜಾರಿ, ಕಾಲೊರೆಸೋ ಗೋಣಿ ಚೀಲದ ಮೇಲೆ ಕಾಲಿಟ್ಟಿದ್ದೇ ತಡ ನಾಲ್ಕಾರು ಮೆಟ್ಲು ಜಾರಿ ಶರು ಧಡ್ಡಂತ ಕುಸಿದು ಕುಂತಳು.

ಎಲ್ಲಿ ತಲೆ ಒಡೆಯುತ್ತೋ ಎನ್ನೋ ಗಾಬರಿ ಒಂದ್ಕಡೆ, ಒಲೆ ಮೇಲೆ ಕುಕ್ಕರ್ ನಾಲ್ಕು ವಿಜಿಲ್ ಹೊಡ್ದದ್ದು ಕೇಳಿ ಗ್ಯಾಸ್ ಆಫ್ ಮಾಡಬೇಕಿತ್ತು, ಇಲ್ಲಾಂದ್ರೆ ಪಾತ್ರೆ ಕರ್ಕಲಾದ್ರೆ ಮತ್ತೆ ತಿಕ್ಕೋತಾ ಕೂಡೋದು ತಾನೆ ಅಂತೆಲ್ಲಾ ಯೋಚನೆ ಮಾಡ್ತಾ ಹಗುರಕ್ಕೆ ಇಳಿದಳು. ಮಧ್ಯಾಹ್ನ ಗಂಡ ಊಟಕ್ಕೆ ಬಂದಾಗ ನೋಡ್ತಾನೆ, ಹೆಣ್ತಿ ಮುಖ ಸಪ್ಪೆ ಸಪ್ಪೆ. ‘ಯಾಕೇ, ಏನಾಯ್ತು, ಯಾಕ್ ಹಿಂಗಿದೀಯಾ?…’ ಗಂಡ ಕೇಳಿದ್ದಕ್ಕೆ, ಹೇಳಿ ಮತ್ತೆ ಬೈಸ್ಕೊಳ್ಳೋದು ಯಾಕಂದು ಶರು ‘ಏನಿಲ್ಲಾ…ರೀ’ ಅಂದಳು.

ಆದ್ರೂ ಗಂಡ ಇನ್ನೊಂದ್ಸಲಾ ಒತ್ತಾಯ ಮಾಡಿದ್ರೆ ಹೇಳ್ಲೇಬೇಕು ಅಂದ್ಕಂಡು ಕಾದು ಕುಳಿತಳು ಶರು. ಗಂಡನಿಗೂ ತಡ್ಕಳ್ಳಾದಾಗ್ಲಿಲ್ಲ. ಮತ್ತೆ ಕೇಳ್ದಾ. ‘ಏನಿಲ್ಲಾ….ರೀ, ನೀವೆಲ್ರೂ ಹೋದ ಮೇಲೆ, ಬಟ್ಟೆ ಒಗ್ದು, ಪಕ್ಕದ ಮನೆ ಬಿಂಕಮ್ಮನ ಜೊತೆ ನಾಲ್ಕು ಮಾತಾಡಿ, ಮಾಳಿಗೆ ಏರಿ ಬಟ್ಟೆ ಒಣ ಹಾಕಿ, ಗ್ರಿಲ್ ಡೋರ್ ಎಳ್ದು ಬರ್ತಾ ಇದ್ನಾ?…… ಅಂದ್ಲು ಶರು.
ಮುಂದಾ?

‘ಕಾಲು ಜಾರಿ ಬಿದ್ದು ಬಿಟ್ಟೆ ರೀ…’ ಶರು ಹೀಗನ್ನುತ್ತಿದ್ದಂತೆಯೇ ಗಾಬರಿಯಾದ ಗಂಡ ‘ಏನೂ ಆಗಿಲ್ಲೇನೇ ಮಾರಾಯ್ತಿ?……. ಅಂದು ಗಟ್ಟಿಯಾಗಿ ತಬ್ಬಿದ. ಶರುಗೆ ಕಣ್ಣಲ್ಲಿ ನೀರು ತಡೀಲಿಲ್ಲ. ಉದುರೇ ಬಿಟ್ವು. ‘ರೀ…. ನಾನಂದ್ರೆ ನಿಮ್ಗೆ ಅದೆಷ್ಟು ಪ್ರೀತೀರಿ….’ ಅನ್ನುತ್ತಾ ಗದ್ಗದಿತಳಾದಳು. ಗಂಡ ಹಂಗೇ ತಬ್ಬಿದ ಮೋಡ್ ನಲ್ಲೇ ಕೂಲಾಗಿ ಹೇಳ್ದ.

ನೋಡೇ, ನೀನು ಅಪ್ಪಿತಪ್ಪಿ ಮೆಟ್ಲು ಮೇಲಿಂದ ಬಿದ್ದು, ತಲೆ ಒಡ್ದು, ಕೋಮಾಗೆ ಹೋಗಿ, ಆಸ್ಪತ್ರೆಗೆ ಅಡ್ಮಿಟ್ ಮಾಡಿ, ಇನ್ನೇನು ಜೀವ ಉಳಿಯಲ್ಲ ಅಂತ ಡಾಕ್ಟ್ರು ಹೇಳ್ದನೇ ಚಾಳೀಸು ತೆಗೆದು ಐ.ಸಿ.ಯೂ ನಿಂದ ಹೊರಗೆ ಬರಬೇಕು, ಆಗ ನೀನೇನೋ ಗಾಳಿಯಲ್ಲಿ ಕೈಯಾಡ್ಸಿ ತೋರ್ಸೋಕೆ ನೋಡ್ತಿಯಾ…. ನಾನು ಪಕ್ಕದಲ್ಲಿ ನೋಡ್ತಿರ್ತೀನಿ, ಯಾರೂ ಇರಲ್ಲ. ನಿನ್ ತಲೆ ಪಕ್ಕ ನಿಮ್ಮಮ್ಮ, ಅಪ್ಪ ಕೂತಿರ್ತಾರೆ. ಅವರಿಗೂ ಗೊತ್ತಾಗಲ್ಲ, ನೀನೇನ್ ಹೇಳ್ತಿಯಾಂತ. ಪಲ್ಸ್ ಹಂಗೆ ನಿಂತ್ಕೊಳ್ಳುತ್ತೆ. ನಿನ್ ಕಣ್ಣು ಹಂಗೆ ತೆರದೇ ಇರ್ತವೆ. ನಾನೂ ಹಂಗೆ ಗರಾ ಬಡದವನಂತೆ ನಿಂತಿರ್ತೀನಿ. ನಿಮ್ಮಮ್ಮ ಅಪ್ಪ ನಿನ್ ಕಣ್ಣು ಮುಚ್ಚಿ ನನ್ನ ಪಕ್ಕ ನಿಂತು ನನ್ನ ಭುಜ ಹಿಡ್ದು, ನೋಡಿ ಅಳಿಯಂದ್ರೆ, ಹೀಗಾಗುತ್ತಂತಾ ಯಾರಿಗ್ಗೊತ್ತು…. ಸಮಾಧಾನ ಮಾಡ್ಕಳಿ. ನಿಮ್ ಸಂಕಟ ನಮಗೆ ಅರ್ಥ ಆಗುತ್ತೆ. ಆದ್ರೆ ನಮ್ ಸಂಕಟಾನೂ ಚೂರು ಅರ್ಥ ಮಾಡ್ಕೊಳ್ಳಿ- ಶರು ಹೋಗೋದ್ ಹೋದ್ಲು, ಆದ್ರೆ ನಿಮಗೇ ಕೊಟ್ಟು ಮದ್ವಿ ಮಾಡೋಕೆ ನಮ್ಗೆ ಇನ್ನೊಬ್ಳು ಮಗಳಿಲ್ಲ ಅಂದ್ಬಿಟ್ರೆ ನನ್ ಗತಿ ಏನೇ.

‘ನಲ್ವತ್ತಾಗಿರೋ ನಂಗೆ ಚಲೋತ್ನಾಗಿ 1994ರ ಹಮ್ ಆಪ್ಕೆ ಹೈ ಕೌನ್ ಸಿನ್ಮಾದ ಮಾಧುರಿ ದೀಕ್ಷೀತ್ ಥರಾ ಇನ್ನೊಬ್ಳು ಯಾರೇ ಸಿಗ್ತಾರೆ ನಂಗೆ……. ಅದಕ್ಕೆ ಇನ್ಮೇಲೆ ಓಡಾಡ್ವಾಗ ಕಣ್ಣು, ಪ್ರಜ್ಞೆ ಜೊತೆಗಿಟ್ಕಂಡಿರು… ಹಾಳಾದ್ದು ಸೀರಿಯಲ್ಗಳ ಸಾವಾಸ ಬಿಡು. ಅದು ಬಿಟ್ಟು ಮಹಾನದಿ ಸೀರಿಯಲ್ಲಲ್ಲಿ ಬರೋ ಸಖತ್ ಸುಂದರವಾಗಿರೋ ಹೆಣ್ ದೆವ್ವದ ಥರಾ ನೀನೂ ಆಗಬೇಡ….’ ಗಂಡ ಹಿಂಗಂದಿದ್ದೇ ತಡ, ಶರು ಕರ್ಕಲಾಗಿರೋ ಕುಕ್ಕರ್ ಗಂಡನ ಮುಂದೆ ಕುಕ್ಕರಿಸಿ ಬಡ್ದು – ತಿಂದ್ಕಂಡ್ ಎದ್ದೋಗಿ ಅಂದು ರೂಮ್ ಬಾಗ್ಲು ಹಾಕೊಂಡುಬಿಟ್ಲು……..

‍ಲೇಖಕರು Avadhi

March 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: