'ಶಿನೇಶ್.. ಶಿನೇಶ್..' 'ಚೈನೀಸ್..' 'ಚೈನೀಸ್..'


ಚಿಣ್ಣರ ಲೋಕದ ಚಿನ್ನಚಿನ್ನ ಆಸೈ
”ಶಿನೇಶ್… ಶಿನೇಶ್…”, ಎಂದು ನನ್ನನ್ನು ನೋಡುತ್ತಾ ಖುಷಿಯಿಂದ ಕೂಗುತ್ತಲೇ ಇದ್ದರು ಆ ಮಕ್ಕಳು.
‘ಶಿನೇಶ್’ ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ‘ಚೈನೀಸ್’ ಎಂದರ್ಥ. ನಾನು ಅದ್ಯಾವ ಕೋನದಲ್ಲಿ ಚೀನೀಯನಂತೆ ಇವರಿಗೆ ಕಾಣುತ್ತೀನಪ್ಪಾ ಎಂದು ಯಾವತ್ತೂ ನಗೆಯಾಡುವವನು ನಾನು.

ಆದರೆ ಈ ಚಿಣ್ಣರಿಗೇನು ಗೊತ್ತು ಈ ದೇಶ-ಭಾಷೆ-ಸರಹದ್ದುಗಳೆಲ್ಲಾ? ತಮ್ಮಂತೆ ಕಾಣುವವರನ್ನು ಬಿಟ್ಟರೆ ಅವರು ನೋಡಿರುವುದು ಅಂಗೋಲಾದಲ್ಲೆಲ್ಲಾ ತುಂಬಿಕೊಂಡಿರುವ ಚೀನೀಯರನ್ನು ಮಾತ್ರ. ಹೀಗಾಗಿ ಯಾರು ತಮ್ಮಂತೆ ಕಾಣುತ್ತಿಲ್ಲವೋ ಅವರೆಲ್ಲರೂ ಈ ಮಕ್ಕಳಿಗೆ ‘ಶಿನೇಶ್’. ವಿದೇಶೀಯರನ್ನು ಕಂಡರೆ ಅವರಿಗೊಂಥರಾ ವಿಚಿತ್ರವಾದ ಆಕರ್ಷಣೆ. ಹೀಗಾಗಿಯೇ ಈ ಖುಷಿ, ಹುಮ್ಮಸ್ಸು, ನಗುವಿನ ಉಲ್ಲಾಸವೆಲ್ಲಾ!
ನಾನು ಪ್ರತೀಬಾರಿ ಮನೆಯಿಂದ ಹೊರಗಡೆ ಹೋದಾಗಲೆಲ್ಲಾ ನನಗೆ ಹೆಚ್ಚಾಗಿ ಎದುರಾಗುವುದು ಇಲ್ಲಿಯ ಮಕ್ಕಳೇ. ಎತ್ತ ನೋಡಿದರೂ ಮಕ್ಕಳ ಗುಂಪು. ಹೊಸದಾಗಿ ಬಂದ ಒಂದೆರಡು ತಿಂಗಳಿನ ಅವಧಿಯಲ್ಲಿ ಯಾವ ಹೊತ್ತಿನಲ್ಲೂ ಕಾಣಸಿಗುವ ಮಕ್ಕಳ ದಂಡನ್ನು ಕಂಡು ನಾನು ಅಚ್ಚರಿಪಡುತ್ತಿದ್ದೆ. ಇವರುಗಳು ಶಾಲೆಗೆ ಹೋಗೋಲ್ವಾ ಹೇಗೆ ಎಂಬುದು ನನ್ನ ಯೋಚನೆ.
ಇಲ್ಲಿಯ ಶಾಲೆಗಳು ಪಾಳಿಗಳಲ್ಲಿ ನಡೆಯುತ್ತವೆ ಎಂಬ ಸತ್ಯವು ನನಗೆ ಗೊತ್ತಾಗಿದ್ದು ನಂತರವೇ. ಹೀಗಾಗಿ ರಾತ್ರಿಯ ಪಾಳಿಯಲ್ಲಿ ಶಾಲೆಗೆ ಹೋಗಬೇಕಾಗಿರುವ ಮಕ್ಕಳು ದಿನದ ಹೊತ್ತಿನಲ್ಲಿ ಆಡುತ್ತಿದ್ದರು. ಇನ್ನು ದಿನದ ಪಾಳಿಯಲ್ಲಿ ಶಾಲೆಗೆ ಹೋಗುವ ಮಕ್ಕಳ ಶಾಲಾ ಅವಧಿಯು ತೀರಾ ಚಿಕ್ಕದಾಗಿದ್ದರಿಂದ ಅವರುಗಳೂ ಹೆಚ್ಚಾಗಿ ಕಾಣಸಿಗುವುದು ಸಾಮಾನ್ಯವಾಗಿತ್ತು. ಅಷ್ಟಿಷ್ಟು ಸಂಜೆಯ ಪಾಳಿಯವರೂ ಇದ್ದರು. ಒಟ್ಟಾರೆಯಾಗಿ ಎತ್ತ ಕಣ್ಣುಹಾಯಿಸಿದರೂ ಮಕ್ಕಳದ್ದೇ ಸೈನ್ಯ.
ಮೂರರಿಂದ ನಾಲ್ಕು ತಾಸುಗಳ ಶಾಲಾ ಅವಧಿಯನ್ನಷ್ಟೇ ಹೇಗೋ ಮುಗಿಸಿ ಮನೆಗೆ ಮರಳುವ ಮಕ್ಕಳನ್ನು ಕಂಡರೆ ನನ್ನಂಥವರಿಗೆ ಅಚ್ಚರಿ. ನಮ್ಮ ಶಾಲೆಗಳು ಆಫೀಸಿನಂತೆ ಇಡೀ ದಿನ ಇರುತ್ತಿತ್ತು ಮಾರಾಯ ಎಂದು ನನ್ನ ಪೋರ್ಚುಗೀಸ್ ಗೆಳೆಯನೊಬ್ಬನ ಬಳಿ ಯಾವತ್ತೂ ಹೇಳುವವನು ನಾನು. ಅದೇನು ಓದ್ತಾರೋ ಅವರಿಗೇ ಗೊತ್ತು ಎನ್ನುವ ಭಾವದ ನಿಟ್ಟುಸಿರು ಅವನದ್ದು. ಹೊರಗಿನಿಂದ ಬಂದವರಿಗೆ ಇವೆಲ್ಲಾ ವಿಚಿತ್ರವೇ.
ಇಪ್ಪತ್ತು ವರ್ಷಗಳ ಹಿಂದೆ ನಾನು ಶಾಲೆಗೆ ಹೋಗುತ್ತಿದ್ದಾಗ ಕೋಚಿಂಗ್ ಕ್ಲಾಸುಗಳು ಆಗಷ್ಟೇ ಕಣ್ಣುಬಿಡುತ್ತಿದ್ದರೂ ಕೂಡ ಶಾಲೆಗಳಲ್ಲೇ ನಡೆಯುವ ವಿಶೇಷ ತರಗತಿಗಳು ಜೋರಾಗಿಯೇ ನಡೆಯುತ್ತಿದ್ದವು. ಇವುಗಳೂ ಕೂಡ ವಿವಿಧೋದ್ದೇಶ ಯೋಜನೆಗಳಂತಿದ್ದ ತರಗತಿಗಳು. ಆದರೆ ಲಾಭಾರ್ಥಿಗಳು ಮಾತ್ರ ಎಲ್ಲರೂ. ವಿಜ್ಞಾನ, ಗಣಿತಗಳಂತಹ ಕಠಿಣ ವಿಷಯಗಳಲ್ಲಿ ಒದ್ದಾಡುತ್ತಿದ್ದವರಿಗೆ, ಹೇಗಾದರೂ ಮಾಡಿ ನೂರಕ್ಕೆ ಮೂವತ್ತೈದು ಗಳಿಸಿ ಪಾಸಾಗಬೇಕಾಗಿರುವ ವಿದ್ಯಾರ್ಥಿಗಳಿಗೆ, ನೋಟ್ಸ್ ಬರೆಯಲಿಲ್ಲವೆಂದೋ ಇನ್ಯಾವುದೋ ತಪ್ಪಿಗೋ ಶಿಕ್ಷೆಯನ್ನು ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ… ಹೀಗೆ ಒಂದು ಕೆಟಗರಿ.
ಇನ್ನೊಂದು ಸ್ವಲ್ಪ ಭಿನ್ನ ಬಗೆಯದ್ದು. ತನ್ನ ತರಗತಿಯ ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತರಬೇಕೆಂದು, ಪ್ರಿಪರೇಟರಿ-ಪಬ್ಲಿಕ್ ಪರೀಕ್ಷೆಯಂತಹ `ಸ್ಟಾರ್’ ಪರೀಕ್ಷೆಗಳ ತಯಾರಿಗೆಂದು, ಶಾಲಾವಾರ್ಷಿಕೋತ್ಸವದ ತಯಾರಿಗೆ ಹೆಚ್ಚಿನ ತರಗತಿಗಳು ಪೋಲಾದವೆಂದು ನಡೆಸಲಾಗುತ್ತಿದ್ದ ತರಗತಿಗಳು… ಇವುಗಳು ಇನ್ನೊಂದು ಕೆಟಗರಿ. ಈ ತರಗತಿಗಳನ್ನು ಶಿಕ್ಷಕರು ತಮ್ಮ ಸ್ವಇಚ್ಛೆಯಿಂದ ನಡೆಸುತ್ತಿದ್ದರೇ ಹೊರತು ಅವುಗಳೇನೂ ಮನೆಪಾಠದ ಕಸರತ್ತಾಗಿರಲಿಲ್ಲ.
ಶಾಲೆಯಲ್ಲೇ ಸಂಜೆ ಒಂದು ತಾಸು ಹೆಚ್ಚುವರಿಯಾಗಿ ಕಲಿಸೋದಷ್ಟೇ. ಒಟ್ಟಾರೆಯಾಗಿ ಇಡೀ ದಿನದ ತರಗತಿಗಳ ನಂತರವೂ ವಿದ್ಯಾರ್ಥಿಯು ತನಗಿಷ್ಟವಿದ್ದೋ ಇಲ್ಲದೆಯೋ ಇಂಥಾ ತರಗತಿಗಳಲ್ಲಿ ತೊಡಗಿಕೊಂಡಿರುತ್ತಿದ್ದ. ನಂತರ ಮನೆಗೆ ಬಂದರೆ ಅಷ್ಟೂ ವಿಷಯಗಳ ರಾಶಿ ಹೋಂ-ವರ್ಕ್‍ಗಳು. ಹೆತ್ತವರಿಂದ ಮತ್ತೆ ಪ್ರತ್ಯೇಕವಾಗಿ ಓದು ಓದು ಎಂಬ ಒತ್ತಡ. ಒಟ್ಟಿನಲ್ಲಿ ಇವೆಲ್ಲಾ ಅದ್ಯಾವಾಗ ಮುಗಿದುಹೋಗುತ್ತದೋ ಎಂದು ಹಳಹಳಿಸುತ್ತಿದ್ದ ದಿನಗಳು ಒಂದು ಕಾಲದಲ್ಲಿ ನಮಗಿದ್ದವು.
ಇಂಥಾ ಯಾವ ಗೋಜಲುಗಳೇ ಇಲ್ಲದೆ ಹಾಯಾಗಿರುತ್ತಿದ್ದ ಇಲ್ಲಿಯ ಚಿಣ್ಣರನ್ನು ಕಂಡು ನನಗಂತೂ ಅಚ್ಚರಿ. ಶಾಲೆಗಳಲ್ಲಿ ತರಗತಿಗಳೇನೋ ನಡೆಯುತ್ತಿದ್ದವು. ಆದರೆ ಶಿಕ್ಷಣದ ಗುಣಮಟ್ಟವು ಅಷ್ಟೇನೂ ಚೆನ್ನಾಗಿಲ್ಲ ಎಂಬ ಅಭಿಪ್ರಾಯಗಳು ದಟ್ಟವಾಗಿವೆ. ಮೇಲಾಗಿ ದಿನಕ್ಕೆ ಕೇವಲ ಮೂರ್ನಾಲ್ಕು ತಾಸುಗಳ ತರಗತಿಗಳಷ್ಟೇ. ನಾನು ನನ್ನ ಕೆಲಸಕ್ಕೆ ಸಂಬಂಧಪಟ್ಟಂತೆ ಕೆಲ ಸಾಮಾಜಿಕ ಅಧ್ಯಯನದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ದಿನಗಳಲ್ಲಿ ಒಂದು ವಿಷಯವಂತೂ ನನಗೆ ಸ್ಪಷ್ಟವಾಗಿತ್ತು. ಪ್ರತೀಮನೆಯಲ್ಲೂ ಮೂರರಿಂದ ಆರು ಮಕ್ಕಳ ಸಂಖ್ಯೆಯಿತ್ತು.
ಬೆಂಕಿಪೊಟ್ಟಣದಂತಿನ ಪುಟ್ಟ ಮನೆಯಲ್ಲಿ ಮಕ್ಕಳನ್ನೂ ಸೇರಿದಂತೆ ಒಟ್ಟು ಎಂಟರಿಂದ ಹತ್ತು ಮಂದಿ ಸದಸ್ಯರು. ಸರಾಸರಿ ಏಳು ಅಥವಾ ಎಂಟು. ವಿವಿಧ ಕಾರಣಗಳಿಂದಾಗಿ ಇಲ್ಲಿಯ ಹೆಣ್ಣುಮಕ್ಕಳು ಬೇಗನೇ ಗರ್ಭ ಧರಿಸುವುದು ಒಂದು ಮಾತಾದರೆ ಬೆನ್ನುಬೆನ್ನಿಗೇ ಮಕ್ಕಳನ್ನು ಹಡೆಯುವುದು ಇನ್ನೊಂದು ಸಂಗತಿ. ಹೀಗಾಗಿಯೇ ಕೈಗೊಂದು ಕಂಕುಳಿಗೊಂದು ಎಂಬಂತೆ ಮಕ್ಕಳನ್ನು ಸದಾ ಹಿಡಿದುಕೊಂಡಿರುವ ಹೆಂಗಸರನ್ನು, ತರುಣಿಯರನ್ನು ಅಂಗೋಲಾದಲ್ಲಿ ಕಾಣುವುದು ಸಾಮಾನ್ಯ. ಆದರೆ ಖಾಯಿಲೆ ಮತ್ತಿತರ ಸಮಸ್ಯೆಗಳಿಂದಾಗಿ ಅವುಗಳಲ್ಲಿ ಎಷ್ಟು ಮಕ್ಕಳು ನಿಜಕ್ಕೂ ಉಳಿಯುತ್ತಾರೆ ಎಂಬುದು ಮಾತ್ರ ಬೇರೆ ವಿಷಯ.
ಇನ್ನು ಇಲ್ಲಿಯ ಮಕ್ಕಳ ಆಟದ ಲೋಕವೂ ಕೂಡ ಸಮೃದ್ಧ. ಕೆಲವಾರಗಳ ಹಿಂದೆ ಮಿತ್ರರೊಬ್ಬರು ನನ್ನೊಂದಿಗೆ ಮಾತನಾಡುತ್ತಾ ಅಲ್ಲಿಯ ಮಕ್ಕಳ ಆಟಿಕೆಗಳು ಹೇಗಿರುತ್ತವೆ ಎಂದು ಕೇಳಿದ್ದರು. ಇಲ್ಲಿಯ ಸೂಪರ್ ಮಾರ್ಕೆಟ್ಟುಗಳಲ್ಲಿ ಬಗೆಬಗೆಯ ಬಣ್ಣಬಣ್ಣದ ದುಬಾರಿ ಆಟಿಕೆಗಳು ಲಭ್ಯವಿದ್ದರೂ ಅಂಥಾ ಯಾವ ಆಟಿಕೆಗಳನ್ನೂ ಕೂಡ ಇಲ್ಲಿಯ ಹಳ್ಳಿಗಳ ಮಕ್ಕಳ ಕೈಯಲ್ಲಿ ನಾನು ನೋಡಿದವನಲ್ಲ. ಅವರ ಕೈಚಳಕವೇನಿದ್ದರೂ ಒದ್ದೆ ಮಣ್ಣಿನೊಂದಿಗೇ. ಇಲ್ಲಿ ಮುಖ್ಯರಸ್ತೆಗಳನ್ನು ಬಿಟ್ಟರೆ ಒಳದಾರಿಗಳೆಲ್ಲವೂ ಕಚ್ಚಾರಸ್ತೆಯೇ ಆಗಿರುವುದರಿಂದ ಮುಖ್ಯರಸ್ತೆಯಿಂದ ದೂರವಿರುವ, ಒಳಭಾಗದ ಮನೆಗಳ ಅಕ್ಕಪಕ್ಕದಲ್ಲೆಲ್ಲಾ ಮಣ್ಣಲ್ಲದೆ ಇನ್ನೇನೂ ಇಲ್ಲ.
ಬೇಸಿಗೆಯ ದಿನಗಳಲ್ಲಿ ಇತ್ತ ವಾಹನವೊಂದು ಬಂತೆಂದರೆ ಹವೆಯಲ್ಲೆಲ್ಲಾ ಧೂಳೇ ಧೂಳು. ತೀರಾ ಹಸಿರು ಎಲೆಗಳೂ ಕೂಡ ಕೆಂಪಗಾಗುವಷ್ಟು. ಇನ್ನು ಮಳೆಗಾಲದಲ್ಲಿ ಭರ್ಜರಿಯಾಗಿ ಬೀಳುವ ಮಳೆಯಿಂದಾಗಿ ಬರೀ ಕೆಸರು. ಉಬ್ಬುತಗ್ಗುಗಳ ಭೂಪ್ರದೇಶಗಳಾಗಿರುವುದರಿಂದ ಕೆಳಭಾಗದಲ್ಲಿದ್ದವರಿಗೆ ನೆರೆಯ ಹೊರೆ. ಅಂದಹಾಗೆ ಮುಖ್ಯರಸ್ತೆಯ ಬಳಿಯಿದ್ದವರಿಗಂತೂ ಎಡೆಬಿಡದೆ ಸಾಗುವ ವಾಹನಗಳ ಧೂಳು, ಹೊಗೆಗಳ ಕೃಪೆಯು ಇದ್ದೇ ಇರುತ್ತದನ್ನಿ.
ಹೀಗಾಗಿ ಇಲ್ಲಿಯ ಮಕ್ಕಳ ಆಟ, ಓಟ, ಒದ್ದಾಟಗಳೆಲ್ಲವೂ ಮಣ್ಣಿನಲ್ಲಿಯೇ. ಆದರೆ ಆ ಮಣ್ಣನ್ನೇ ಒದ್ದೆ ಮಾಡಿ ತಮ್ಮ ಪುಟ್ಟ ಎಸಳಿನಂತಹ ಕೈಗಳಿಂದ ವಿವಿಧ ಆಕೃತಿಗಳನ್ನು ಮಾಡುತ್ತಾ ಅದರಲ್ಲೇ ಆಟವಾಡುವ ಪರಿಯನ್ನೊಮ್ಮೆ ನೋಡಬೇಕು. ಕೆಲ ಮಕ್ಕಳಂತೂ ಮನೆಯ ಒಳಾಂಗಣದ ಚಿಕ್ಕ ಪ್ರತಿಕೃತಿಯನ್ನೇ ಮಣ್ಣಿನಿಂದ ಮಾಡಿಬಿಡೋರು. ಎರಡು ಸೋಫಾ, ಮಧ್ಯದಲ್ಲೊಂದು ಟೀಪಾಯಿ, ಮೂಲೆಯಲ್ಲೊಂದು ಟಿ.ವಿ, ಎದುರಿಗೊಂದು ಬಾಗಿಲು, ಇನ್ನು ಮನೆಯ ಸದಸ್ಯರಾಗಿ ಮನುಷ್ಯನನ್ನು ಹೋಲುವ ಒಂದಿಂಚು ಉದ್ದದ ಮಣ್ಣಿನ ಪ್ರತಿಕೃತಿಗಳು.
ಇಂಥದ್ದೊಂದು ಪ್ರತಿಕೃತಿಯನ್ನು ಮಾಡಿಬಿಟ್ಟರೆ ಅದರಲ್ಲೇ ಒಂದು ಗುಂಪಿನ ಆಟ. ಹುಟ್ಟಾ ಕಲಾವಿದರಂತೆ, ಶಿಲ್ಪಿಗಳಂತೆ ಕಡ್ಡಿ, ಬಾಟಲಿಯ ಮುಚ್ಚಳ ಇತ್ಯಾದಿ ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ಬಳಸಿಕೊಂಡು ಈ ಮಕ್ಕಳು ಒದ್ದೆ ಮಣ್ಣನ್ನು ಪಳಗಿಸುವುದನ್ನು ಕಂಡರೆ ಯಾರಾದರೂ ಹುಬ್ಬೇರಿಸಲೇಬೇಕು.
ಸುಮಾರು ಎಂಟು ವರ್ಷದೊಳಗಿನ ಮಕ್ಕಳ ಆಟಗಳೆಲ್ಲಾ ಇಂಥವೇ. ಪೆಡ್ರೇರಾ ಎಂಬ ಬೈರೋ (ಹಳ್ಳಿ) ಒಂದರಲ್ಲಿ ಮಕ್ಕಳ ಚಿಕ್ಕ ಗುಂಪೊಂದು ತಮ್ಮ ಆಟದಲ್ಲಿ ಬ್ಯುಸಿಯಾಗಿದ್ದರೆ ನಾನು ಹಿಂದೆ ನಿಂತುಕೊಂಡು ಮೆತ್ತಗೆ ನನ್ನ ತಲೆಯನ್ನೂ ಒಳಗೆ ನುಗ್ಗಿಸಿದ್ದೆ. ಕೂಡಲೇ ಮಕ್ಕಳೆಲ್ಲಾ ಹೋ ಎಂದು ಬೊಬ್ಬೆ ಹಾಕುತ್ತಾ ”ಅಮೀಗು… ಅಮೀಗು…” ಎನ್ನುತ್ತಾ ನನ್ನ ಸುತ್ತ ಗುಂಪುಗೂಡಿದರು. ಅಂದಹಾಗೆ ಪೋರ್ಚುಗೀಸ್ ಭಾಷೆಯಲ್ಲಿ ‘ಅಮೀಗು’ ಎಂದರೆ ‘ಗೆಳೆಯ’ ಎಂಬರ್ಥವಿದೆ. ”ಏನಿದೆಲ್ಲಾ, ನನಗೂ ಹೇಳಿಕೊಡಿ”, ಎಂದರೆ ಮಗುವೊಂದು ಎಲ್ಲವನ್ನೂ ಬೊಟ್ಟು ಮಾಡಿ ತೋರಿಸುತ್ತಾ ಇದು ಅಡುಗೆಮನೆ ಎಂದಿತು. ಈ ಅಡುಗೆಮನೆಯಲ್ಲಿ (ಬಹುಷಃ ಔಷಧಿಗಳದ್ದು) ಪುಟ್ಟ ಮುಚ್ಚಳಗಳನ್ನು ಸಾಲಾಗಿ ಇರಿಸಲಾಗಿತ್ತು. ಅವುಗಳು ಪಾತ್ರೆಗಳಂತೆ. ಒಂದೊಂದು ಪಾತ್ರೆಯಲ್ಲೂ ಒಂದೊಂದು ಖಾದ್ಯ.
ಮೊದಲ ಮುಚ್ಚಳದಲ್ಲಿದ್ದಿದ್ದು ಒದ್ದೆಯಾದ ಒಂದೆರಡು ಚಮಚದಷ್ಟು ಜಲ್ಲಿಯ ಪುಡಿ. ಅದು ಬೇಯಿಸಿದ ಅನ್ನವಂತೆ. ಯಾರೋ ಎಸೆದಿದ್ದ ಗೋಂದಿನ ಬಾಟಲಿಯ ತಳದಿಂದ ತೆಗೆದ ಅರ್ಧ ಚಮಚ ಗೋಂದು ಮತ್ತೊಂದು ಮುಚ್ಚಳದಲ್ಲಿ. ಅದು ‘ಫೂಂಜ್’ (ಅಂಗೋಲಾದ ಜನಪ್ರಿಯ ಆಹಾರ) ಎಂದಳು ಅವಳು. ತಮಾಷೆಯೆಂದರೆ ಫೂಂಜ್ ನೋಡಲು ನಿಜಕ್ಕೂ ಬಿಳಿಯ ಗೋಂದಿನಂತಿರುತ್ತದೆ. ಸ್ವಲ್ಪ ದೊಡ್ಡ ಗಾತ್ರದ ಕೆಂಪುಕಲ್ಲುಗಳು ಮತ್ತೊಂದರಲ್ಲಿ. ಅದು ಕ್ಯಾರೆಟ್ ಪಲ್ಯವಂತೆ. ಊಟದ ಮೆನು ತುಂಬಾ ಅದ್ದೂರಿಯಾಗಿದೆ ಎನ್ನುತ್ತಾ ಅವಳ ಆತಿಥ್ಯವನ್ನು ಮೆಚ್ಚಿಕೊಂಡೆ ನಾನು.
ಹಾಗೆಯೇ ಆ ಅಡುಗೆಮನೆಗೆ ಒಬ್ಬ ಯಜಮಾನ ಮತ್ತು ಒಡತಿಯೂ ಇದ್ದಳು. ಹೆಣ್ಣುಗೊಂಬೆಯೊಂದು ಆಗಲೇ ಇದ್ದಿದ್ದರಿಂದ ಅದನ್ನು ಮಾಡುವ ಶ್ರಮದ ಉಳಿತಾಯವಾಗಿತ್ತು. ಸುಮಾರು ಹದಿನೈದು ಸೆಂಟಿಮೀಟರ್ ಉದ್ದದ ಕೋಲಿಗೆ ಕಪ್ಪುಬಟ್ಟೆಯನ್ನು ಬಟ್ಟೆಯಾಗಿ ಸುತ್ತಿ, ಅದರ ತುದಿಗೆ ತೆಳ್ಳನೆಯ ತಾಮ್ರದ ನೂಲಿನಂಥದ್ದನ್ನು ಕೂದಲಿನಂತೆ ದಟ್ಟವಾಗಿ ಹೆಣೆದು ಅದನ್ನು ಆಕೆಯ ಪತಿಯಾಗಿ ಮಾಡಿಬಿಟ್ಟಿದ್ದರು ಈ ಮಕ್ಕಳು. ಇಬ್ಬರದ್ದೂ ಒಂದೇ ಎತ್ತರ ಬೇರೆ. ಸುಬ್ರಹ್ಮಣ್ಯ ಜೋಡಿ! ಅತ್ತ ಚಿಕ್ಕದೊಂದು ಬಾಟಲಿಯನ್ನು ಮಗುವಿನಂತೆ ಮಾಡುವ ಗಂಭೀರ ಪ್ರಯತ್ನದಲ್ಲಿ ತೊಡಗಿತ್ತು ಮತ್ತೊಂದು ಮಗು.
ಒಟ್ಟಾರೆಯಾಗಿ ಆಟದಲ್ಲೂ ‘ನಮ್ಮ ಸಂಸಾರ, ಆನಂದ ಸಾಗರ’ದ ಲೋಕ ಇವರದ್ದು. ಹೀಗೆ ಮಣ್ಣಿನಲ್ಲೇ ಏನೇನೋ ಮಾಡುತ್ತಿರುವ ಮಕ್ಕಳು ಮಣ್ಣನ್ನೇ ಮೈತುಂಬಾ ಮೆತ್ತಿಕೊಂಡು ಸ್ವತಃ ಮಣ್ಣಗೊಂಬೆಗಳಂತೆ ಕಾಣುವುದು ಸಾಮಾನ್ಯ. ಹೀಗಾಗಿ ಅವರನ್ನು ಸುಮ್ಮನೆ ಎತ್ತಿಕೊಳ್ಳುವುದಾಗಲೀ, ತಬ್ಬಿಕೊಳ್ಳುವುದಾಗಲೀ ಕಷ್ಟ. ಈ ಚಿಣ್ಣರೊಂದಿಗೆ ನಿಮಗೆ ಆಡುವ ಉಮೇದೇನಾದರೂ ಇದ್ದಲ್ಲಿ ‘ದಾಗ್ ಅಚ್ಛೇ ಹೇಂ’ ಎನ್ನುತ್ತಲೇ ಹೋಗಬೇಕಷ್ಟೇ. ಸದಾ ಶುದ್ಧವಾಗಿರಲು ಅವರು ಶಹರದ ಮಕ್ಕಳಲ್ಲವಲ್ಲಾ? ಅವರಾದರೂ ಏನು ಮಾಡಿಯಾರು!
ಇವುಗಳಲ್ಲದೆ ಬಟ್ಟೆಗಳನ್ನು ಸುತ್ತಿ ಮಾಡಿರುವ ಫುಟ್ಬಾಲ್ ಇವರ ಆಟಗಳಲ್ಲಿ ಮುಖ್ಯವಾದದ್ದು. ಭಾರತೀಯರಿಗೆ ಕ್ರಿಕೆಟ್ ಇರುವಂತೆ ಇಲ್ಲಿಯವರಿಗೆ ಫುಟ್ಬಾಲ್ ಹುಚ್ಚಿರುವುದರಿಂದ ಇದು ಸಹಜವೇ ಅನ್ನಿ. ಉಳಿದಂತೆ ಕುಣಿದು ಕುಪ್ಪಳಿಸುವ ಕೆಲ ಆಟಗಳಂತೂ ಇದ್ದೇ ಇವೆ. ಒಟ್ಟಾರೆಯಾಗಿ ನೋಡಿದರೆ ಎದ್ದು ಬಿದ್ದು ಆಡುತ್ತಾ ಹಾಯಾಗಿರುವ ಈ ಮಕ್ಕಳನ್ನು ನೋಡುವುದೇ ಒಂದು ಖುಷಿ. ಏಕೆಂದರೆ ಅವರ ಬಾಲ್ಯವು ಈ ಜಗತ್ತಿನ ಉಳಿದ ಭಾಗದ ಮಕ್ಕಳಂತೆ ಆರಿಂಚಿನ ಸ್ಮಾರ್ಟ್‍ಫೋನಿನಲ್ಲೋ, ಪ್ಲೇ-ಸ್ಟೇಷನ್ ಗಳಲ್ಲೋ, ಟ್ಯಾಬ್ ಗಳಲ್ಲೋ ಕಳೆದುಹೋಗುತ್ತಿಲ್ಲ.
ಪ್ರಕೃತಿಯ ಸಖ್ಯವು ಅವರನ್ನು ಉತ್ಸಾಹಿಗಳನ್ನಾಗಿಸಿದೆ, ಕುತೂಹಲಿಗಳನ್ನಾಗಿಸಿದೆ. ಇನ್ನು ಅಂಗೋಲಾದಲ್ಲಿ ಹೆಚ್ಚಿನ ಶಾಲೆಗಳಲ್ಲೂ, ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ನಿಗದಿಯಾಗಿರುವುದು ಒಂದೇ ಸಮವಸ್ತ್ರ (ಚರ್ಚಿನಂತಹ ಖಾಸಗಿಯವರು ನಡೆಸುವ ವಿದ್ಯಾಸಂಸ್ಥೆಗಳನ್ನು ಬಿಟ್ಟು). ಬಿಳಿಯ ಬಣ್ಣದ ದೊಗಲೆ ಕೋಟುಗಳಂತಿರುವ ಅಂಗಿಗಳು. ತರಹೇವಾರಿ ಆಟೋಟಗಳಲ್ಲಿ ಮಗ್ನರಾಗಿರುವ ಚಿಣ್ಣರು ಈ ಬಿಳಿಯ ವಸ್ತ್ರವನ್ನು ಯಾವ ಬಣ್ಣಕ್ಕೆ ತಂದಾರು ಎಂಬುದನ್ನು ಈಗ ನೀವೇ ಊಹಿಸಿಕೊಳ್ಳಬಹುದು!
ಈ ಸಾಮಾಜಿಕ ಅಧ್ಯಯನದ ನೆಪವು ಇಲ್ಲಿಯ ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳನ್ನು ಹತ್ತಿರದಿಂದ ಕಾಣುವ ಅವಕಾಶವನ್ನು ನನಗೆ ಒದಗಿಸಿಕೊಟ್ಟಿತ್ತು. ನಾನು ಅಪರೂಪಕ್ಕೊಮ್ಮೆ ಶಾಲೆಗಳತ್ತ ಹೋದಾಗಲೆಲ್ಲಾ ಯಾವುದಾದರೂ ಮಗುವೊಂದರ ನೋಟ್ ಬುಕ್ಕಿನ ಕೊನೆಯ ಪುಟದಲ್ಲಿ ಚಕಚಕನೆ ಕಾರ್ಟೂನ್ ಚಿತ್ರವೊಂದನ್ನು ಬರೆದರೆ ಎಲ್ಲರೂ ಹೋ ಎಂದು ಖುಷಿಯಿಂದ ಅಬ್ಬರಿಸುತ್ತಾ ಗುಂಪುಗಟ್ಟೋರು. ನಂತರ ನನಗೂ ಬೇಕು, ನನಗೂ ಬೇಕು ಎಂದು ಮುಗಿಬಿದ್ದು ತಮ್ಮ ತಮ್ಮ ಪುಸ್ತಕಗಳನ್ನು ಕೊಡೋರು.
ಬಾಕ್ಸಿಂಗ್ ಮಾಡುತ್ತಿರುವ ಎಮ್ಮೆ, ಗಿಟಾರ್ ಬಾರಿಸುತ್ತಿರುವ ಕಪ್ಪೆ, ಸಾಗರತೀರದಲ್ಲಿ ಹಾಯಾಗಿ ಮೈಚೆಲ್ಲಿ ಕೂಲ್ ಡ್ರಿಂಕ್ ಕುಡಿಯುತ್ತಿರುವ ಹೆಬ್ಬಾವು… ಹೀಗೆ ಮಕ್ಕಳಿಗಾಗಿ ಏನೇನೋ ತಮಾಷೆಯ ಚಿತ್ರಗಳು! ಒಂದೊಂದು ಚಿತ್ರಕ್ಕೂ ಒಂದಕ್ಕಿಂತ ಹೆಚ್ಚು ನಿಮಿಷವನ್ನು ತೆಗೆದುಕೊಳ್ಳುವ ಪ್ರಮೇಯವಿಲ್ಲದಿದ್ದರಿಂದ ಬಹುತೇಕ ಎಲ್ಲರಿಗೂ ಒಂದೊಂದು ಸೂಪರ್ ಫಾಸ್ಟ್ ರೇಖಾಚಿತ್ರವು ಸಿಕ್ಕೇ ಸಿಗುತ್ತಿತ್ತು. ನನಗೋ ಪಟಪಟನೆ ಮಾತಾಡುವಷ್ಟು ಪೋರ್ಚುಗೀಸ್ ಬಾರದು. ಅವರಿಗೋ ಅಷ್ಟಾಗಿ ಇಂಗ್ಲಿಷ್ ಬಾರದು. ಹೀಗಾಗಿ ಇಂಥಾ ಸಮಯದಲ್ಲೆಲ್ಲಾ ನನ್ನ ‘ಒನ್ ಮಿನಿಟ್’ ಚಿತ್ರಗಳೇ ನಮ್ಮ ಎದೆಗಳನ್ನು ಬೆಸೆಯುವ ಸೇತುವೆಗಳು.
ಮೊನ್ನೆ ಭಾರತದಿಂದ ಅಂಗೋಲಾಕ್ಕೆ ಮರಳಿಬಂದಾಗ ಏನೋ ಕೆಲಸವೆಂದು ನನ್ನ ಕಾರುಚಾಲಕನಾದ ಅಗುಸ್ಟೋನ ಮನೆಗೆ ಹೋದರೆ ಆತನ ಮಗಳು, ಆರರ ಬಾಲೆ ಸೋಫಿಯಾ ಓಡಿಬಂದು ”ನಿಕ್… ನಿಕ್…” ಎನ್ನುತ್ತಾ ಬಿಗಿದಪ್ಪಿಕೊಂಡಳು. ಎಂದಿನಂತೆ ನಾವಿಬ್ಬರೂ ನಮಗಿಬ್ಬರಿಗೂ ಗೊತ್ತಿರುವಷ್ಟು ಭಾಷೆಯಲ್ಲಿ ಅದೇನೋ ಮಾತಾಡಿಕೊಂಡೆವು. ಅವಳೋ ತನ್ನದೇ ವಯಸ್ಸಿನ ಇನ್ನೂ ನಾಲ್ಕೈದು ಮಕ್ಕಳನ್ನು ಕರೆತಂದು ”ಅಕೆಲ ಎವು ಅಮೀಗು ನಿಕ್ (ಇಂವ ನನ್ನ ಗೆಳೆಯ ನಿಕ್)” ಎಂದು ಎದೆಯುಬ್ಬಿಸಿ ಧಿಮಾಕಿನಿಂದ ಪರಿಚಯಿಸಿಕೊಂಡಳು.
ಅವರಿಗೆ ಅದೆಷ್ಟು ಅರ್ಥವಾಯಿತೋ. ನಾನೊಬ್ಬ ಅನ್ಯಗ್ರಹವಾಸಿಯಂತೆ ಅವರೆಲ್ಲರೂ ಪಿಳಿಪಿಳಿ ಕಣ್ಣುಬಿಟ್ಟು ನೋಡಿದ್ದಾಯಿತು. ಇನ್ನು ಸೋಫಿಯಾ ನನಗೆ ಅಂಟಿಕೊಂಡಿಯೇ ಇದ್ದುದರಿಂದಲೇ ಏನೋ ಇತರರೂ ಬಹುಬೇಗ ಮೈಚಳಿ ಬಿಟ್ಟು ನನ್ನೊಂದಿಗೆ ಬೆರೆತರು. ಇವರೊಂದಿಗೆ ಒಂದಿಷ್ಟು ಆಟವಾಡಿ ಸುಸ್ತಾದ ನಂತರ ನಾನು ಮನೆಯತ್ತ ಹೊರಡಲು ಕಾರಿನಲ್ಲಿ ಕುಳಿತೆ. ನಂತರ ಮನೆಗೆ ಬಂದ ಸೋಫಿಯಾಳ ಹಿರಿಯಣ್ಣ ಅರುಣ ನಾನು ಬಂದಿದ್ದ ವಿಷಯವನ್ನು ತನ್ನ ಅಮ್ಮನಿಂದ ಕೇಳಿ ನನ್ನನ್ನೂ ಕೂಡ ಕರೆಯೋದಲ್ವಾ ಎಂದು ತನ್ನ ತಂಗಿಯನ್ನು ದಬಾಯಿಸಿದನಂತೆ.
ಬರೆಯುತ್ತಾ ಹೋದರೆ ಇಲ್ಲಿಯ ಮಕ್ಕಳದ್ದೇ ಒಂದು ಲೋಕ. ಇದರಲ್ಲಿ ದಕ್ಕಿದ್ದು ಒಂದಿಷ್ಟಾದರೂ ಇವುಗಳು ಸದಾ ನೆನಪಿನಲ್ಲುಳಿಯುವಂಥವು, ಎಡೆಬಿಡದೆ ಕಾಡುವಂಥವು. ಹೇಳುವುದು ಇನ್ನಷ್ಟಿದೆ. ಮತ್ತೆ ಸಿಗೋಣ ಮುಂದಿನ ಭಾಗದಲ್ಲಿ!

‍ಲೇಖಕರು avadhi

April 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. ರಾಜೀವ ನಾಯಕ

    ವಿಷಾದವನ್ನು ವಿನೋದದ ಎಳೆಗಳಲ್ಲಿ ಹೆಣೆದು ಒಳ್ಳೆಯ ಲೇಖನ ಮಾಡಿದ್ದೀರಿ ಪ್ರಸಾದ್…
    “…ಎದ್ದು ಬಿದ್ದು ಆಡುತ್ತಾ ಹಾಯಾಗಿರುವ ಈ ಮಕ್ಕಳನ್ನು ನೋಡುವುದೇ ಒಂದು ಖುಷಿ. ಏಕೆಂದರೆ ಅವರ ಬಾಲ್ಯವು ಈ ಜಗತ್ತಿನ ಉಳಿದ ಭಾಗದ ಮಕ್ಕಳಂತೆ ಆರಿಂಚಿನ ಸ್ಮಾರ್ಟ್‍ಫೋನಿನಲ್ಲೋ, ಪ್ಲೇ-ಸ್ಟೇಷನ್ ಗಳಲ್ಲೋ, ಟ್ಯಾಬ್ ಗಳಲ್ಲೋ ಕಳೆದುಹೋಗುತ್ತಿಲ್ಲ….” ಕಾಡುವ ಸಾಲು 🙁
    ನೀವು ಅಕ್ಷರಗಳಲ್ಲಿ ಕಟ್ಟಿಕೊಟ್ಟ ಅಂಗೋಲಾ ಮಕ್ಕಳ ಚಿಮ್ಮುವ ಉತ್ಸಾಹದ ವಿವರಗಳು ಚಿತ್ರಗಳಲ್ಲೂ ಪ್ರತಿಫಲಿಸಿವೆ.

    ಪ್ರತಿಕ್ರಿಯೆ
    • Prasad

      ಥ್ಯಾಂಕ್ಯೂ ಸರ್. ಇಡೀ ದಿನ ಗ್ಯಾಡ್ಜೆಟ್ ಗಳಲ್ಲೇ ಮುಳುಗಿರುವ ಮಕ್ಕಳನ್ನು ಕಂಡರೆ ನನಗೆ ವಿಚಿತ್ರ ಅನ್ನಿಸೋದು. ಹಾಗೆಯೇ ಈ ಬಗ್ಗೆ ಹೆಮ್ಮೆಯಿಂದ ಕೊಚ್ಚಿಕೊಳ್ಳುವ ಪೋಷಕರನ್ನು ಕಂಡಾಗಲೂ! ಈ ಅಂಗೋಲನ್ ಮಕ್ಕಳ ಕ್ರಿಯೇಟಿವಿಟಿ ನನಗೆ ತುಂಬಾ ಹಿಡಿಸಿತು. ದುಬಾರಿ ಆಟಿಕೆಗಳಿರದಿದ್ದರೂ ಸಮೃದ್ಧ ಬಾಲ್ಯ ಈ ಮಕ್ಕಳದ್ದು 🙂

      ಪ್ರತಿಕ್ರಿಯೆ
  2. Vijayavaman

    Beautiful. I was wondering whether we would be able to come out of our stupid politico social blabberings. This is so refreshing.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: