‘ಶಿಕಾರಿ ಎಂಬ ಮಾಯೆ’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಬೇಟೆಯ ಕಣ್ಣುಗಳಲ್ಲಿ ಶವಗಳಿರುತ್ತವೆ ವೃತ್ತಿಯೇ ಬೇಟೆಯಾಗಿರುವಾಗ ಅದನ್ನು ನೈಸರ್ಗಿಕ ಸಮತೋಲನ ಎಂದರೆ ತಪ್ಪಾಗಲಾರದ? ಪ್ರಾಬಲ್ಯ ದೌರ್ಬಲ್ಯಗಳ ನಡುವೆ ಸಂಘರ್ಷ ಸಹಜವಾಗಿದ್ದು ಜೀವಕುಲದೊಳಗೆ ಮಿಶ್ರಗೊಂಡು ಹಲವು ತರ್ಕಗಳ ಹಿಡಿತಕ್ಕೆ ಸಿಕ್ಕು ನಾನಾರ್ಥಗಳ ಒಡನೆಯೇ ಸಾಗುತ್ತಿದೆ. ನನ್ನ ಊರಿನ ಬಹುಪಾಲು ಎಲ್ಲಾ ಮನೆಗಳಲ್ಲೂ ಶಿಕಾರಿಗೆ ಆತುಕೊಂಡವರಿದ್ದಾರೆ. ಅಡವಿ ಹಂದಿ, ಉಳ್ಳುಬಿಟ್ಟು ಕುಂದ್ಲಿ ಹಿಡಿಯುವುದು, ಸಿಡಿ ಒಡ್ಡಿ ಬೆಳ್ವ ಉರ್ತೆ ಹಿಡಿಯೋದು ಇವೆಲ್ಲ ಉಸಿರಾಟದಷ್ಟೇ ಸಾರಾಸಗಟಾಗಿ ನಡೆಯುವಂತವುಗಳು.

ಹೇ ದನಿನ್ ಮಂದೆತಗಿರೋ ತಿಪ್ಪೆಗಡ್ಡೆಗೆ ಮುತ್ತಿನ್ ಶೆಟ್ಟಿ ಮೆಯ್ತಾವಂತೆ ನೋಡ್ರೋ  ಅನ್ನೋ ಸುದ್ದಿ ಸಿಕ್ರೆ ಸಾಕು ತೆನೆಜೋಳ ಸುರ್ದು ಸಿಡಿ ಒಡ್ಡಿ ಹಿಡಿದೇ ತೀರೋದು..ಈ ಮುತ್ತಿನ ಶೆಟ್ಟಿ ಬೆಳವಗಳಲ್ಲಿ ಒಂದು ಪ್ರಭೇದ. ಬೂದ್ ಬೆಳ್ವೆ ಕೂಡ ಒಂದು.. ಕೇಜ್ಗೆ ಮೆಳೆತವಿರೋ ಕಲ್ಲಣೆತವ ಜತಿ ಆಕ್ಕೆಂಡು ಆಡ್ತಾವೆ ಬಲೆಬಿಟ್ಟಿದ್ರೆ ಓಸು ಒಮ್ಮಕೆ ಸಿಗವು ಅಂದ್ರೆ ಸಾಕು ಆ ದಾರೆಗೆ ಓಡಾಡೋ ಯಾರಾದರೂ ಊರ್ನೋರು; ಊರಗಿರೋ ಬಲೆ ಸಿಡಿಗಳಿಗೆಲ್ಲ ಪ್ರಾಣ ಬಂದ್ಬಿಡುತ್ತೆ ….

ಹೆಚ್ಚು ಕಡಿಮೆ ಎಲ್ಲಾ ಮನೆಗಳಲ್ಲೂ ಮಾಂಸದಡುಗೆಗೆಂದೇ ಇರುವ ಹೊರಗ್ಳು ಸೌದೆ ಒಲೆ ಗಮಲಿಡಿದು ದಗದಗ ಉರಿದೇ ತೀರೋದು… ನಮ್ಮ ಊರಿನ ಕಮ್ಮಾರಿಕೆಯ ಅಯ್ಯಣ್ಣನ ಮಗ ಭೂತಣ್ಣ ಬಲೆತಗಂಡು ಮೂಡ್ಗಡಿಕೆ ಒಲ್ಟ ಅಂದ್ರೆ ಅವನ ಜೋಳಿಗೆಗೆ ಅದೆಷ್ಟು ಗೌಜಗಳು ಸೇರುತ್ತವೋ ಲೆಕ್ಕವಿಲ್ಲ. ಗ್ಯಾರೆಬುಡ್ಡ ಇದಾವಂತೆ ನಡೀರಿ ನಡೀರಿ ಮಣ್ಕಾಲ್ ನೌವು ಕಿತ್ಕಂಡೋಗುತ್ತೆ ವರ್ಷುಕೊಂದ್ಪಟು ತಿಂದ್ರೆ ಸಾಕು ಹೇಳಿ ಹಿಡಿದು ತಿಂದ ಮೇಲೆ ಉದರಕ್ಕೆ ತೃಪ್ತಿ ಅನೇಕರಿಗೆ.

ಶಿಕಾರಿಯನ್ನೇ ಮನೆಗೆ ತೋರಣ ಮಾಡಿಕೊಂಡು ಇಡೀ ಊರು ಬಾಡಿಗೆ ಜೋತುಬಿದ್ದು ಅದನ್ನೇ ಬಾಳಿಗೆ ಅಲಂಕಾರ ಮಾಡಿಕೊಂಡಂತೆ ಓಲಾಡುವುದೆ ಸಿರಿ ಸೊಬಗು ಇಲ್ಲಿನ ಜನಕ್ಕೆ…. ಕೃಷಿಯನ್ನೇ ಅಪೂರ್ವ ಬಲವೆಂದುಕೊಂಡ ಮನೆಗಳಿಗೇನು ಇಲ್ಲಿ ಕೊರತೆ ಇಲ್ಲ. ಅವರುಗಳ ಮಾತುಗಳು ಆಗಾಗ ಕಿರಿಯರ ಕಿವಿಗೆ ನುಗ್ಗುವ ಅಲೆಗಳಂತೆ ಆಬ್ಬರಿಸುತ್ತವೆ..ಬಿತ್ನೆ ಕಾಲ್ದಗೆ ಈಟ ಓಟೋ ಬೆಳ್ಕಡ್ರೊ ಮಕ್ಳುಮರಿ ಇರ ಮನೆಗೆ ನೀವು ಇಂಗೆ ಬಿಡ್ಗೆಟ್ಟರಂಗೆ ನಾಯಿ ಇಡ್ಕಂಡು ಓದ್ರೆಂಗೆ? ಕಾಳುಕಡ್ಡಿ ಬ್ಯಾಡ್ವ…. ಎಂಥದೇ ಕಡುವಿರೋದಗಳಿಗೂ ಜಗ್ಗದೆ ಶಿಕಾರಿಯ ಧ್ಯಾನ ಮಾಡುವವರು ಹೆಚ್ಚುತ್ತಲೇ ಇರುತ್ತವೆ.

ಬರ್ಸಿ, ಬಂದೂಕ, ನಾಯಿ ಎಲ್ಲವೂ ಒಂದಾಗಿ ಪಾಲ್ವಾಣದ ಗುಡ್ಡ ಹೊಕ್ಕು, ಕರೇಕಲ್ಲಿನ ಮೇಲೆ ಬಿಸಿಲು ಕಾಸಿ, ಈಸ್ಲು ಗಿಡ್ದಗೆ ಇಣುಕ್ ನೋಡಿ, ಮುಂಗಾರ್ ಗುಡ್ಡಗೆ ಪರದಾಡಿ ಜಲ್ಗಿನ್ ಗುದ್ರುದಗೆ ದುಮ್ಕಿ ಅಡವಜ್ಜನ ಕಟ್ಟೆಗೆ ನೀರು ಕುಡ್ದು, ಉಲ್ಲೀಸ್ಲು ಮಲ್ಢೆಗೆ ಸುಧಾರಿಸ್ಕೊಂಡು ದೊಡ್ಡಮದ್ಗುದ್‌ಕಡೆಕೆ ಹೋಗೆವಂತೆ ಒಂದಿಂಡು; ನಡೀರಿ ನಡೀರಿ ದೊಡ್ಡೇಜ್ಜೇ ಮೇಲೆ ಇನ್ನೊಂದಿನ ಬಿಕ್ಕೇಮಲ್ಡಿ, ಕಣಿವೆ ಗುಡ್ಡದ್ ಕಡೀಕೆ ಹೋದ್ರಾಯ್ತು.

ಇವತ್ತು ಗುಡ್ಲುಕುಂಟೆ ಗಿಡದ್ಕಡಿಕೆ ಬ್ಯಾಡವೇ ಬ್ಯಾಡ. ಸೀಮೆ ಜಾಲಿ ತಟಾದು ಹೋದ್ರೆ ಅತ್ತಿನ್ನೇನು ಮದ್ಗಾ ಸಿಕ್ಕೇಬಿಡುತ್ತೆ. ಬರೇಕೈಯ್ಲಿ ಹೋಗ್ಲೇಬರದು. ಬಿಳ್ಯ, ಕೆಂದ, ರಂಗ, ರಾಮ, (ಬೇಟೆ ನಾಯಿಗಳು) ನಾಲಾರು ಹಿಡದ್ರು ಅಂದ್ರೆ ಎಂಥಾ ಸಲ್ಗಾದ್ರೂ ತಪ್ಪಿಸ್ಕಮಕಾಗಲ್ಲ. ಹೀಗೆ ದಾರಿಯುದ್ದಕ್ಕೂ ಮಾತಾಡೋ ಶಿಕಾರಿಯ ಅನುಭವಗಳ ಗೊಂಚ್ಲನ್ನು ದೊಡ್ಡಪ್ಪನ ಬಾಯಲ್ಲಿ ಕೇಳಿದ್ದೇನೆ. ಊರಿನ ಸುತ್ತಮುತ್ತ ಹತ್ತು ಫರ್ಲಾಂಗು ದೂರದ ದಟ್ಟ ಗಿಡ ಬಾದೆ ಹುಲ್ಲಿನ ಮಲ್ಡಿ ಶಿಕಾರಿಯವರ ಮಾತುಗಳನ್ನೆಲ್ಲಾ ಆಲಿಸುತ್ತಲೆ ತಣ್ಣಗೆ ನಿಂತಿವೆ.

ನನ್ನೂರಿನ ಶಿಕಾರಿಗೆ ಸುತ್ತಲಿನ ಈ ನೆಲವೆ ಆಸರೆ. ಬಾಡಿನ ಚಪಲಕ್ಕೆ ಅಂಟಿಕೊಂಡವರೆಲ್ಲಾ ‘ಜಾರಿರೆ ಊರಲ್ಲ, ಊರಿರೆ ಜಾರಲ್ಲ’ ಅಂಗೆ ಚುರುಕಾಗಿ ಬೇಟೆಯಾಡುವುದರಲ್ಲಿ ನಿಸ್ಸೀಮರು. ನಾಯಿಗಳ ಜೊತೆಗೂಡಿ ಗಿಡಸುತ್ತುವಾಗ ಇವರ ನಾಲಿಗೆಗಳಿಗೆ ರಸಶಕ್ತಿ ಬಂದು ಬಿಡುತ್ತದಂತೆ. ಊರೊಳಗಿನ ಸುದ್ದಿನೆಲ್ಲ ‘ಬೆಂದಿದ್ಯಾವ್ದು ಬೇಯುದ್ದಾಂಯವ್ದು’ ಅಂತ ಅಗ್ದು ಅಗ್ದು ಎಲ್ಲಾ ಮನೆಗಳ ವರ್ತಮಾನದ ರಸ ಕುಡಿದೇ ಬಿಡಲ್ಲ ಗುಂಪಿನಲ್ಲಿ.

ಆ ಊರಿಂದ್ಲು ಅಂಗಡಿ ಸೋಮಣ್ಣ ಗುಂಡಣ್ಣನ ಮಗಳು ಬಸಮ್ಮನ್ನ ಒಡ್ಕಂಡೋಗಿ ಹೊರಗ್ಲು ಗುಡಿತಗೆ ತಾಳಿ ಕಟ್ಟೆವ್ನಂತೆ ಮಾನ್ಗೆಟ್ಟವನು. ಮದುವೆಗ್ ಬಂದಿರೊ ನಾಲ್ಕು ಮಕ್ಕಳಿದಾವೆ. ಎಲ್ಲಾ ಬಿಟ್ಟು ತರಗಾ‍ ಲಗ್ನವಾದನಂತೆ. ಅರಾಸ್ಗೆಟ್ಟನು. ಹೀಗೆ ಒಂದೊಂದು ದಿನವೂ ಹತ್ತು ಹಲವು ವಾರ್ತೆಗಳು ಬೇಟೆಯ ಒಂದು ಭಾಗವಾಗಿ ಮುಳುಗೇಳುವುದನ್ನು ಕೇಳುತ್ತಲೇ ಇರುತ್ತೇವೆ.

ದನ ಕುರಿಯವರ ಸೂಚನೆಯ ಮೇಲೆ ಹಂದಿಬೇಟೆಯವರು ನಾಯಿ ಬಿಡುವುದು. ಕೆಲವು ಸಲ ಸಲಗಗಳು ಸರಿಯಾಗಿ ಹೊಡೆದು ನಾಯಿಗಳೇ ಸತ್ತದ್ದುಂಟು. ಮೂರಾಳಿಂದು ನಾಲ್ಕಾಳಿಂದು ಐದು, ಆರು, ಹತ್ತು ಆಳಿಂದು ಹೀಗೆ ಹದಿಗಳ ಗಾತ್ರವನ್ನು ಅಳೆಯುತ್ತಾರೆ. ಅಡವಿ ಹಂದಿ ಶಿಕಾರಿ ನನ್ನ ಊರಿನ ಪ್ರಧಾನ ವೃತ್ತಿಯಂತಾಗಿದೆ. ಮಳೆಗಾಲ ಆರಂಭವಾದ ಕೂಡಲೆ ಇಡೀ ಊರು ಲಘುಬಗೆಯಿಂದ ಬೇಟೆಗೆ ಸಜ್ಜಾಗುತ್ತದೆ.

ಹಂದಿ ಹೆಜ್ಜೆ ಎತ್ಬಿದ್ದವೆ. ಇವತ್ತು ಇಲ್ಲೇ ಊರ್ ಮಗ್ಲಾಗಿರೋ ಹುಣಸೇ ಬೀಳಗೆ ಒಂದಿಂಡೇ ಹೋಗವೆ ಕಣ್ರುಲಾ ಈ ಜಾಡು ಹಿಡ್ಕೊಂಡ್ ಹೋಗ್ರಿ ಎತ್ತೋಗ್ತವೆ ಸಿಕ್ಕೇ ಸಿಕ್ತವೆ. ಗುಡಿಯಪ್ಪಾರಾ ತ್ವಾಟ ತಟಾದು ಮುಂದ್ಕೆ ಹೋಗವೆ ಅಂದ್ರೆ ಹೋಬ್ಳು ಮಲ್ಡಿ ಕಡೀಕೆ ಹೋಗರಬೇಕು ಇಂಥಾ ಮಾತುಕತೆ ನಿತ್ಯ ನಡೀತಾನೇ ಇರುತ್ತದೆ. ಮಳೆಗಾಲವೆಂದರೆ ನಮ್ಮ ಕಡೆಗೆ ನೇರ ಅಡವಿ ಹಂದಿಗಳ ಕಡೆಗೆ ತಿರುಗುತ್ತದೆ. ಇಡೀ ಊರಿನ ನಾಯಿಗಳು ಅಡವಿ ಹಂದಿ ಬೇಟೆಯಲ್ಲಿ ಮನುಷ್ಯರಿಗಿಂತ ಹೆಚ್ಚು ಪಳಗಿವೆ. ಭರ್ಚಿ ಆಚೆ ಬರುತ್ತವೆ. ಬೇಟೆಗೆ ಹೋಗುವ ಹಿಂದಿನ ದಿನ ದೊಡ್ಡಪ್ಪ ಹಲವರನ್ನು ಸೇರಿಸಿಕೊಂಡು ಮದ್ದು ಸಿದ್ದಮಾಡುವುದನ್ನು ತಪಸ್ಸಿನಂತೆ ನೋಡಿದ್ದೇನೆ.

ಪಟ್ಲುಪ್ಪು ಐದು ತೂಕ, ಗಂಧಕ ಒಂದು ತೂಕ, ಮೆಣಸಿನ ಗಿಡದ ಇದ್ದಿಲು ಒಂದು ತೂಕ ಸೇರಿಸಿ ಮದ್ದು ಅರೆಯುತ್ತಾರೆ. ಮಣ್ಶಿಲೆ, ರಂಜಕ ಬೇರೆ ಬೇರೆ ಅರೆದು ಬಳಸಿ ಬಿಸಾಡಿದ ಬ್ಯಾಟರಿಯ ಶೆಲ್‌ಗಳ ಸೀಸದಲ್ಲಿ ಸಣ್ಣ ಸಣ್ಣ ಗುಂಡು ಮಾಡಿ ಬೇವಿನ ಹಣ್ಣಿನ ಬೀಜ ಕೊಡವಿ ಆ ಗೊಳ್ಳೆಯಲ್ಲಿ ಮಾಡಿದ ಗುಂಡುಗಳನ್ನು ತುಂಬುತ್ತಾರೆ. ಇದಿಷ್ಟು ಕುರಮದ್ದಿನ ಬಂದೂಕಕ್ಕೆ ಬೇಕಾಗುವುದು. ಮನೆಗೊಬ್ಬರಂತೆ ಬೇಟೆಗೆ ಸಜ್ಜಾಗಿ ನಾಯಿ, ಬಂದೂಕ, ಬರ್ಜಿಯ ಜೊತೆಗೆ ಹೊರಡುವುದು.

ಹಂದಿ ಸಿಗುವವರೆಗೆ ಊರಿನ ಮಕ ನೋಡಲ್ಲ. ಹೋಗುವಾಗ ಯಾರಾದರೂ ಗಿಡ ಸೇರುವ ಮೊದಲೆ ಅಡ್ಡ ಸಿಕ್ಕರೆ ಅವರ ಚಿತ್ರವೆಂದು ಒಂದು ಆಕೃತಿ ಬರೆದು ಮೂರು ಏಟು ಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಮುಂದೆ ಹೋಗುತ್ತಾರೆ. ಕಾರಣ ಮನುಷ್ಯರು ಅಡ್ಡಸಿಕ್ರೆ ಹಂದಿ ಸಿಗೋಲ್ಲ ಅನ್ನೋ ನಂಬಿಕೆ. ಊರಿನ ಕಣ್ಣಿನಂತಿರುವ ಮುಂಗಾರು ಗುಡ್ಡದ ನೆತ್ತಿಯಲ್ಲಿ ಶಿಕಾರಿ ಆಗಿ ಊರಿಗೆ ತಂದರೆ ಊರ ಜನವೇ ತೆಂಗಿನ ಗರಿಯಲ್ಲಿ ಮಂದ್ಲಿಕೆ ಮಾಡಿ ಅಲ್ಲೇ ಸುಟ್ಟು ಚೊಕ್ಕ ಮಾಡಿ ಪಾಲು ಹಾಕುವುದು. ಬಂದೂಕ, ನಾಯಿ, ಬರ್ಸಿ, ಆಳು ಎಲ್ಲಕ್ಕೂ ಒಂದೊಂದು ಗುಡ್ಡೆಯಂತೆ ಲೆಕ್ಕ.

ಈ ಅಡವಿ ಹಂದಿಗಳು ನಮ್ಮ ಕಡೆ ಶೇಂಗಾ ಹೊಲಗಳನ್ನು ಊಟಿ ಒಮ್ಮೊಮ್ಮೆ ಇಡೀ ಬೆಳೆ ನಾಶವಾಗುತ್ತದೆ. ಭತ್ತದ ಗದ್ದೆಯನ್ನು ಕೆಲವೊಮ್ಮೆ ಗುರುತೇ ಸಿಗದಂತೆ ತುಳಿದು ಬಿಟ್ಟಿರುತ್ತವೆ. ಊರಿನ ಸೊಟ್ಟಮಾದಣ್ಣನಿಗೆ ಪೊರಕೆ ಕಟ್ಟಲು ಈಚಲು ಗರಿ ಒದಗಿಸುವ ಜಲ್ಗಿನ ಗುದ್ರದ ತುಂಬಾ ಬಲು ಸ್ಯಾದ್ರೆ ಎತ್ತ ನೋಡಿದರೂ ಈಚಲು ಗಿಡವೇ ಬೆಳೆದು ನಿಂತಿವೆ. ಈ ಜಾಗವನ್ನು ಹಂದಿಗಳು ಮನೆ ಮಾಡಿಕೊಂಡಿವೆ. ನನ್ನ ಊರಿನ ಜನ ಹಗಲು ಇರುಳು ಕಳೆಯುವುದು ಹಂದಿಯ ಸುದ್ದಿ ಹಿಡಿದೆ.

ಹಿರಿಯರು, ಕಿರಿಯರು ಹಂದಿಯನ್ನು ಮಾತಿನಲ್ಲೇ ಸುತ್ತಿಕೊಂಡು ಕಾಲಕ್ಕೆ ರಂಗು ಬರುತ್ತದೆ. ಮನೆಯ ಹೆಂಗಸರು ಮೂರೊತ್ತು ಹಂದಿದೆ ಚಿಂತೆ ‘ಮಾಡ ಬದುಕಬಿಟ್ಟು ಆಡ ದಾಸಯ್ನಿಂದೆ ಹೋದ್ರಂತೆ’ ಅಂದಂಗೆ ಹಂದಿ ಜಪ ಮಾಡ್ಕಂಡೆ ಬಿದ್ದಿರಿ, ಕುಂಟೆ, ಕರಗೆ, ಮಡ್ಕೆ ವಂಚ್ಕಂಡು ಬೀಜ ಬಿತ್ತನ ಅಂದ್ರೆ ನಾಯಿ ಇಡ್ಕಂಡು ನೆಗುದ್ಬಿಡ್ತವೆ ಹೊತ್ತು ಉಟ್ಟದ್ರೊಳ್ಗೆ. ಯಾವಾಗ್ಲೂ ಬಾಡ್ ತಿಂದ್ಕೊಂಡು ಲೆಗ್ಗಿಕ್ರಿ ಅಂದ್ರೆ ಇನ್ಯಾತ್ರುದೂ ಬ್ಯಾಡ. ಹೀಗೆ ಸಣ್ಣ ಜಗಳ ನಡೀತಾನೇ ಇರುತ್ವೆ. ನನ್ನ ಊರಿನಲ್ಲಿ ಬೇಟೆ ಕಾಲವನ್ನು ತನಗೆ ಬೇಕಾದಂತೆ ಎಳೆದುಕೊಂಡೇ ಸಾಗುತ್ತಿದೆ.

ಪಾಲ್ವಾಣದ ಹಕ್ಕಿಗಳು ವಾಸವಿರುವ ಪಾಲ್ವಾಣದ ಗುಡ್ಡ ಅಂದ್ರೆ ನಮ್ಮ ಊರಿನ ಜನಕ್ಕೆ ಬಲು ಹಿಗ್ಗು. ಸ್ವೇಚ್ಚೆಯಿಂದ ಸುಧಾರಿಸಿಕೊಳ್ಳಲು, ಕಟ್ಟಿಕೊಂಡು ಹೋದ ಬುತ್ತಿ ಕರಗಿಸಲು ಇಲ್ಲಿನ ಹಸಿರು ಎಲ್ಲರನ್ನೂ ತನ್ನ ಮಡಿಲಿಗೆ ಸುರಿದುಕೊಂಡು ಸಾಕುತ್ತಲೇ ಬಂದಿದೆ. ಕೆಲವೊಮ್ಮೆ ಇಲ್ಲಿಯೂ ಹಂದಿಗಳ ಶಿಕಾರಿಯಾಗುವುದುಂಟು. ಹಲವು ರೂಪದ ಬೇಟೆಗಳಿಗೆ ಪ್ರಸಿದ್ದಿಯಾಗಿರುವ ನನ್ನ ಊರು ಕೆಲವೊಮ್ಮೆ ಮಂಕಾಗಿ ಬಿಡುತ್ತದೆ. ಬ್ಯಾಟೆ ಬ್ಯಾಟೆ ಅಂತಾ ವಯಸ್ಸಿನ ಹುಡುಗ್ರೆಲ್ಲಾ ಬ್ಯಾಸಾಯ ಮಾಡದೆ ಹೊಲ ಬೀಳ್ ಬಿದ್ವವೆ ಕಣವ್ವ ಅಂತ ಇತ್ತೀಚೆಗೆ ನನ್ನ ಊರಿನ ಹಿರಿಯ ತಲೆ ಬಡರಾಮಜ್ಜ ಸಿಕ್ಕಿ ಕಣ್ಣೀರಿಟ್ಟರು.

ಒಡೆದ ಕಾಲುವೆಗಳಲ್ಲಿ ಒಣಗಿದ ಆವ್ಸೆ ಇನ್ನೂ ತನ್ನೊಳಗೆ ಬೆಳಗ ಬಚ್ಚಿಟ್ಟುಕೊಂಡಿವೆ. ಅದೇ ಜಾಡುಹಿಡಿದು ಸಾಗುವ ಕುರಿಮರಿಗಳು ಸುಣ್ಣದ ಕಲ್ಲಿನ ಕಾಲುವೆಯನ್ನು ಮೂಸುತ್ತವೆ. ಎಂದೋ ನಿಂತು ಹೋದ ನೀರಿನ ವಾಸನೆ ಆ ಜೀವಿಗಳ ಮೂಗಿಗೆ ನುಗ್ಗಿ ಪರದಾಡುವುದನ್ನು ಕೆಲವೊಮ್ಮೆ ಕಾಣುವ  ನನಗೆ ಸಂಜೆ ಕೃಷವಾದಂತೆನಿಸಿ ಬೇಟೆಗಳ ಉಮೇದಿನ ಹಿಂದೆ ಬಿದ್ದು ಕೆಲವಾರು ಏರಿಳಿತಗಳನ್ನು ನನ್ನೂರು ಅನುಭವಿಸುವುದನ್ನು ನೋಡಿದರೆ ಒಂದಷ್ಟು ಪ್ರಶ್ನೆಗಳು ಪ್ರಶ್ನಿಸಿದಂತಾಗುತ್ತದೆ.

September 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಥ್ಯಾಂಕ್ಸ್ ಮೇಡಮ್…

    ಪ್ರತಿಕ್ರಿಯೆ
  2. Kavishree

    Tumba sogasagi mudibandide. Aa sundara sumadura kshanagalu mathe marukalisi manasige muda nidithu

    ಪ್ರತಿಕ್ರಿಯೆ
  3. Vishwas

    ‘ಶಿಕಾರಿ ಎಂಬ ಮಾಯೆ’ : ಶೀರ್ಷಿಕೆಯ ಮೂರು ಪದಗಳ ತೂಕವೆಷ್ಟೆಂದರೆ, ‘ಇಡೀ ಜೀವನ’ ಎನ್ನಬಹುದು.ಇಲ್ಲಿ ಅರ್ಥವಾದುದು ಜೀವನವೆಂಬ ಬೇಟೆಯಲ್ಲಿ, ಕಾಲಕ್ಕನುಗುಣವಾಗಿ ಬೇಟೆಯೇ ಜೀವನವನ್ನಾಗಿಸಿಕೊಂಡವರ ಭಿನ್ನ ಬದುಕುಗಳು, ಶಿಕಾರಿ ಎಂಬ ವಿಚಾರ ಬಂದಾಗ, ಅವರ ವಿಭಿನ್ನ ಮನಸ್ಥಿತಿಗತಿಗಳು.

    ಅಕ್ಕನ ಬೇಟೆಯ ಬಗೆಗಿನ ಲೇಖನ ಓದು ಓದುತ್ತಾ, ಮನದಲ್ಲೊಂದು ಪುಟ್ಟ ಕವನ ಮೂಡಿತು ಹೀಗೆ.

    *ನಡೆದು ನಿಂತರು ಜನರೆಲ್ಲರು, ಬೇಟೆಗೆ.
    ಮದ್ದುಗುಂಡು, ಬಂದೂಕುಗಳನ್ನು ತುಂಬ್ಕೊಂಡು ಮೂಟೆಗೆ.
    ಹಂದಿಗಳು ಅವಿತು ಮಾಡಿದ, ತಂಟೆಗೆ.
    ವಯೋಮಿತಿ ಇಲ್ವೆಂಬಂತೆ ಹೊರಟರೆಲ್ಲರೂ, ಸೊಟ್ಮಾದಣ್ಣನ ಪೊರಕೆ ಗರಿ, ಕೋಟೆಗೆ.
    ಬಲಿಯಾದವು ಹಂದಿಗಳು, ನಾಯಿಗಳ ದಾಳಿ ಎಂಬ, ಈಟಿಗೆ.
    ನಂತರ ಬೇಟೆಯೊಂದಿಗೆ ಮರಳಿದರೆಲ್ಲರೂ, ಪೇಟೆಗೆ.*

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: