ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಶ್ವತವೇನಲ್ಲ ಶಶಿಗ್ರಹಣ

ಗ್ರಹಣ ಗ್ರಹಚಾರವಲ್ಲ ಅದೊಂದು ಪ್ರಕೃತಿಯ ವಿಸ್ಮಯ!!!

ಹೇಮಾ ಹೆಬ್ಬಗೋಡಿ

ಪ್ರೀತಿಯ ಮಗಳೇ,

ಚಂದ್ರಗ್ರಹಣದ ಈ ಶುಭಸಂದರ್ಭದಲ್ಲಿ ನಿನ್ನೊಂದಿಗೆ ಮಾತಾಡಬೇಕೆನಿಸುತ್ತಿದೆ. ನೀನು ಈ ಗ್ರಹಣದ ಚಿಂತೆಯಿಲ್ಲದೆ ನಿರಮ್ಮಳವಾಗಿ ಮಲಗಿದ್ದಿಯ. ಮಗಳೇ ನಿನ್ನಜ್ಜಿ ತಾತ ಒಂದೇ ಸಮನೆ ಫೋನ್ ಮಾಡುತ್ತಾ ನಿನ್ನ ನಕ್ಷತ್ರಕ್ಕೆ ಈ ಬಾರಿಯ ಗ್ರಹಣ ಪರಿಣಾಮ ಬೀರುತ್ತದೆ ಆದ್ದರಿಂದ ಮಂತ್ರ ಹೇಳಿಸು ಅದು ಮಾಡಿಸು ಇದು ಮಾಡಿಸು ಅಂತ ಹೇಳುತ್ತಿದ್ದಾರೆ. ನಾನಿದಾವುದನ್ನು ಮಾಡುವುದಿಲ್ಲ. ಆದರೆ ಹೂಂಗುಡುತ್ತೇನೆ. ಚಂದ್ರ ಎಂದರೆ ನನಗೂ ಇಷ್ಟ. ಆದರೆ ಈ ಗ್ರಹಣ ಮಾತ್ರ ಚಿಕ್ಕಂದಿನಿಂದ ದೊಡ್ಡವರ ಆಚರಣೆಗಳ ಕಾರಣದಿಂದ ಹಿಂಸೆ ಹುಟ್ಟಿಸುತ್ತದೆ. ಅದನ್ನು ಖುಷಿಯಾಗಿ ನೋಡಲು ಬಿಡದ ದೊಡ್ಡವರ ಬಗ್ಗೆ ಸಿಟ್ಟು ಬರುತ್ತೆ.

“ಸೂರ್ಯನ ಸುತ್ತ ಭೂಮಿ ತಿರುಗುತ್ತದೆ’

‘ಚಂದ್ರನಿಗೆ ಸ್ವಂತ ಬೆಳಕಿಲ್ಲ’

‘ಗ್ರಹಣಗಳಲ್ಲಿ ಎರಡುವಿಧ: ಸೂರ್ಯಗ್ರಹಣ, ಚಂದ್ರಗ್ರಹಣ’

‘ಸೂರ್ಯನಿಗೂ ಚಂದ್ರನಿಗೂ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ, ಭೂಮಿಗೂ ಸೂರ್ಯನಿಗೂ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ.’

ಶಾಲೆಯ ದಿನಗಳಲ್ಲಿ ಓದಿದ ಈ ವಿಸ್ಮಯಗಳು ನನ್ನಲ್ಲಿ ವಿಸ್ಮಯಗಳಾಗಿ ಉಳಿದಿರುವುದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಗ್ರಹಣ, ರಾಶಿ, ನಕ್ಷತ್ರಗಳ ಬಗೆಗಿನ ನಂಬಿಕೆಗಳು ಹೇರಲ್ಪಟ್ಟ ನಂಬಿಕೆಗಳಾಗಿ ಒಪ್ಪಲಾರದೆ ವಿರೋಧಿಸಿ ಬೈಸಿಕೊಂಡು ದ್ವೇಷಿಸುವ ವಿಷಯಗಳಾಗಿ ಉಳಿದಿರುವುದೇ ಜಾಸ್ತಿ ಎಂದೆನಿಸುತ್ತದೆ. ಹೌದು ಪ್ರತಿಬಾರಿ ಗ್ರಹಣವಾದಗಲೂ ಈ ವಿಷಯವಾಗಿ ಮನೆಯಲ್ಲಿ ವಾದ-ವಿವಾದ, ಮೌನ ಪ್ರತಿಭಟನೆ ನಡೆದುಕೊಂಡೇ ಬಂದಿದೆ. ಈಗಲೂ ನಿಂತಿಲ್ಲ. ರಾತ್ರಿ ಆಗಲಿರುವ ಚಂದ್ರಗ್ರಹಣದ ಬಗ್ಗೆ ಆಗಲೇ ಮನೆಯಲ್ಲಿ ಆತಂಕ. ಸಹಜವಾಗಿ ನಡೆಯುವ ಪ್ರಕೃತಿಯ ವಿದ್ಯಮಾನಕ್ಕೆ ಈ ಪರಿಯ ಆತಂಕವೇಕೋ ತಿಳಿಯುತ್ತಿಲ್ಲ. ಪಂಚಾಂಗ ಹಿಡಿದು ತಮ್ಮ ರಾಶಿ ನಕ್ಷತ್ರಗಳು ಗ್ರಹಣದ ಛಾಯೆಯಿಂದ ಮುಕ್ತವೇ ಎಂದು ಹುಡುಕಿಕೊಳ್ಳುತ್ತಿದ್ದಾರೆ. ಇನ್ನೂ ಪುಟ್ಟ ಹೆಜ್ಜೆಗಳಲ್ಲಿ ನಲಿಯುತ್ತಾ ‘ಚಂದಮಾಮ ಓಡಿ ಬಾ…’ ಅಂತ ಹಾಡುತ್ತಾ ಕುಣಿಯುತ್ತಿರುವ ಪುಟ್ಟಮೊಮ್ಮಗಳ ನಕ್ಷತ್ರದ ಮೇಲೆ ಗ್ರಹಣದ ವಕ್ರದೃಷ್ಟಿ ಎಂದು ಆತಂಕ ಪಡುತ್ತಾ ಪರಿಹಾರ ಕಾರ್ಯ ಕೈಗೊಳ್ಳಲು ಸನ್ನದ್ಧರಾಗುತ್ತಿದ್ದಾರೆ.

ಮಗಳೇ ನನಗೆಂದೂ ಇವುಗಳಲ್ಲಿ ನಂಬಿಕೆ ಇರಲಿಲ್ಲ ಈಗಲೂ ಇಲ್ಲ ಮುಂದೆಯೂ ಬರಲ್ಲ. ಸುಮ್ಮನೇ ನಮ್ಮ ದೇಶದ ಹಲವು ಹೆಣ್ಣುಮಕ್ಕಳ ಹಾಗೇ ಸಂಪ್ರದಾಯ, ಆಚಾರ ವಿಚಾರಗಳ ವಿಷಯದಲ್ಲಿ ದೊಡ್ಡವರ ಮಾತಿಗೆ ವಿರೋಧಿಸಿ ಗೆಲ್ಲಲಾಗದೆ ಸುಮ್ಮನಿರುವುದನ್ನು ಮತ್ತು ಅದೇ ಸಂಸಾರದ ಸಾಮರಸ್ಯಕ್ಕೆ ಅನಿವಾರ್ಯ ಎಂದು ಕೊಂಡು ನಡೆಯುತ್ತಿದ್ದೇನೆ. ನಿನ್ನನ್ನು ಇವುಗಳಿಂದ ದೂರವಿಡಲು ಆದಷ್ಟು ಪ್ರಯತ್ನಿಸುತ್ತೇನೆ. ಪುಟ್ಟಿ ಗ್ರಹಣ ಎಂದರೆ ಗ್ರಹಚಾರವಲ್ಲ. ಅದೊಂದು ಸುಂದರವಾದ ಪ್ರಕೃತಿಯ ವಿದ್ಯಮಾನ. ಅದೊಂದು ನೆರಳಿನ ಆಟ ಅಷ್ಟೇ ಮಗಳೇ. ಚಂದ್ರ ಮತ್ತು ಭೂಮಿ ಸೂರ್ಯನ ನೇರಕ್ಕೆ ಬಂದಾಗ ಒಂದರ ನೆರಳು ಇನ್ನೊಂದರ ಮೇಲೆ ಬೀಳುತ್ತದೆ. ಇದೇ ಗ್ರಹಣ.ನೆರಳು- ಬೆಳಕಿನ ಈ ಆಟ ನೋಡಲು ಸುಂದರ.

ಸೂರ್ಯಗ್ರಹಣವೆಂದರೆ ಚಂದ್ರ ಭೂಮಿ ಮತ್ತು ಸೂರ್ಯನ ನಡುವೆ ಬಂದು ಸೂರ್ಯನನ್ನು ಮುಚ್ಚುತ್ತಾನೆ. ಚಂದ್ರ ಸೂರ್ಯನಿಗಿಂತ ಗಾತ್ರದಲ್ಲಿ ಚಿಕ್ಕವನಾದರೂ ಹೀಗೆ ಸೂರ್ಯನನ್ನು ಕೆಲಕಾಲ ತನ್ನ ನೆರಳಿನಲ್ಲಿ ಮರೆ ಮಾಡಬಲ್ಲ! ಇದಕ್ಕೆ ಕಾರಣ ಇವುಗಳ ನಡುವಿರುವ ದೂರ. ಸೂರ್ಯ ಭೂಮಿಯ ಸಮೀಪದಲ್ಲಿದ್ದು ಚಂದ್ರ ಗರಿಷ್ಠ ದೂರದಲ್ಲಿದ್ದಾಗ ಚಂದ್ರ ಸೂರ್ಯನಿಗಿಂತ ಚಿಕ್ಕದಾಗಿರುತ್ತಾನೆ ಆ ಸಮಯದಲ್ಲಿ ಗ್ರಹಣವಾದರೆ ಚಂದ್ರ ಸೂರ್ಯನನ್ನು ಮುಚ್ಚಲಾರ. ಇಂತಹ ಗ್ರಹಣವನ್ನು ಕಂಕಣ ಗ್ರಹಣ ಎನ್ನುತ್ತಾರೆ. ಆಗ ಸೂರ್ಯನನ್ನು ಚಂದ್ರ ಆವರಿಸಿದಾಗ ಸೂರ್ಯನ ಬೆಳಕು ಚಂದ್ರನ ಸುತ್ತ ಬಳೆಯ ಹಾಗೆ ಹೊಳೆಯುತ್ತದೆ. ಇದೊಂದು ಅದ್ಭುತ ನೋಟ. ಹಾಗೆಯೇ ಪೂರ್ಣ ಸೂರ್ಯಗ್ರಹಣ ಕೂಡ ಸುಂದರವಾದದ್ದು. ಪೂರ್ಣತೆಗೆ ಸ್ವಲ್ಪ ಮೊದಲು ಮತ್ತು ಮುಕ್ತಾಯದ ಹಂತದಲ್ಲಿ ಸೂರ್ಯನ ಸ್ವಲ್ಪ ಬೆಳಕು ಚಂದ್ರನ ನೆರಳನ್ನು ತೂರಿ ಬಂದು ಉಂಗುರದ ಹಾಗೇ ಹೊಳೆಯುತ್ತದೆ. ಓಹ್! ಭೂಮಿಗೆ ಆಕಾಶರಾಯ ನೀಡುವ ವಜ್ರದುಂಗುರ ಮತ್ತು ಬಳೆ ಎಷ್ಟು ಮನೋಹರವಾದದ್ದು!

ಹುಣ್ಣಿಮೆಯ ರಾತ್ರಿಗಳಂದು ಮಾತ್ರ ಘಟಿಸುವ ಚಂದ್ರಗ್ರಹಣಕ್ಕೆ ಭೂಮಿಯೇ ಕಾರಣ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಹಾದು ಹೋಗುವಾಗ ಅದು ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ತಡೆಯುತ್ತದೆ ಇದೇ ಚಂದ್ರಗ್ರಹಣ. ಹೀಗೆ ಭೂಮಿಯ ನೆರಳಿನಲ್ಲಿ ಚಂದ್ರ ಕಂದು ಅಥವ ಕಿತ್ತಳೆ ಬಣ್ಣದಲ್ಲಿರುತ್ತಾನೆ. ಪ್ರತಿ ವರ್ಷವೂ ಗ್ರಹಣಗಳಾಗುತ್ತಲೇ ಇರುತ್ತದೆ. ಒಂದು ವರ್ಷದಲ್ಲಿ ಗರಿಷ್ಠ ಎಂದರೆ 7 ಗ್ರಹಣಗಳಾಗಬಹುದು ಅದರಲ್ಲಿ 2 ಸೂರ್ಯಗ್ರಹಣಗಳಿರುತ್ತವೆ. ಕನಿಷ್ಠ ಎಂದರೆ 2 ಗ್ರಹಣಗಳಾಗುತ್ತವೆ. ಅವೆರಡೂ ಸೂರ್ಯಗ್ರಹಣಗಳೇ ಆಗಿರುತ್ತವೆ. ಭೂಮಿ, ಸೂರ್ಯ, ಚಂದ್ರರ ಈ ನೆರಳಿನಾಟವನ್ನು ಪ್ರಕೃತಿಯ ಒಂದು ವಿದ್ಯಮಾನವಾಗಿ ಗಮನಿಸು. ಖುಷಿಪಡು. ಮಗಳೇ ಗ್ರಹಣದ ಬಗ್ಗೆ ಹಲವು ಮೂಢನಂಬಿಕೆಗಳಿವೆ. ಗ್ರಹಣದ ಅವಧಿಯಲ್ಲಿ ತಿನ್ನಬಾರದು, ಗರ್ಭಿಣಿಯರಿಗೆ ಗ್ರಹಣದ ಬೆಳಕಿನಿಂದ ತೊಂದರೆ, ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಬರಬಾರದು ಏಕೆಂದರೆ ಆ ಸಮಯದಲ್ಲಿ ಅಪಾಯಕಾರಿ ಕಿರಣಗಳು ಹೊರಹೊಮ್ಮುತ್ತಿರುತ್ತವೆ ಇತ್ಯಾದಿ ಇತ್ಯಾದಿ.. ಇದ್ಯಾವುದು ನಿಜವಲ್ಲ.

ಗ್ರಹಣದ ಸಮಯದಲ್ಲಿ ಮನೆಯಲ್ಲಿನ ಆಹಾರ ಉಳಿದಿರಬಾರದು, ಹಾಲು,ನೀರು ಮೊದಲಾದವುಗಳ ಮೇಲೆ ದರ್ಭೆ ಹಾಕಬೇಕು, ದೇವರಿಗೂ ಕೂಡ ಗ್ರಹಣ ತೊಂದರೆ ನೀಡುತ್ತದೆ ಆದ್ದರಿಂದ ದೇವರ ಮೇಲೂ ದರ್ಭೆ ಹಾಕಬೇಕು, ಗ್ರಹಣ ಬಿಟ್ಟ ನಂತರ ಸ್ನಾನ ಮಾಡಿ ಆಮೇಲೆ ಏನಾದರೂ ತಿನ್ನಬೇಕು. ಹೀಗೆ ಹಲವು ಆಚರಣೆಯ ನಂಬಿಕೆಗಳು. ಚಿಕ್ಕಂದಿನಿಂದ ನನ್ನ ಕಾಡುತ್ತಿರುವ ಪ್ರಶ್ನೆಯೆಂದರೆ ನದಿ, ಸಮುದ್ರ, ಬೆಟ್ಟ, ಕಾಡು, ಅಲ್ಲಿನ ಅಸಂಖ್ಯ ಜೀವಿಗಳು ಇವ್ಯಾವುವು ನಮ್ಮಷ್ಟು ಗ್ರಹಣದ ಬಗ್ಗೆ ತಲೆಕೆಡಿಸಿಕೊಂಡಿದೆಯಾ? ಅವೆಲ್ಲಕ್ಕೂ ಆಗದ ಹಾನಿ ನಮಗೆ ಹೇಗೆ ಆಗಲು ಸಾಧ್ಯ? ಇಷ್ಟಕ್ಕೂ ಗ್ರಹಣದ ನಂತರ ಸ್ನಾನ ಮಾಡ್ತಿವಲ್ಲ ಆ ನೀರು ನದಿಯದೋ ಬಾವಿಯದೋ ಬೋರಿನದೋ ಅದರೊಳಗೆ ಯಾರು ದರ್ಭೆ ಹಾಕಿ ಪವಿತ್ರತೆ ಕಾಪಾಡುತ್ತಾರೆ? ಆ ದರ್ಭೆಯಾದರೂ ದರ್ಭೆಯಾಗುವ ಮುನ್ನ ಅಂತಹ ಗ್ರಹಣಗಳನ್ನು ನೋಡಿತ್ತು ಅಲ್ಲವೆ?

ಆದರೆ ಗ್ರಹಣದ ಸಮಯದಲ್ಲಿ ಮಾಡಬಾರದ ಒಂದೇ ಒಂದು ಕೆಲಸವೆಂದರೆ ಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು. ಇದೊಂದನ್ನು ಬಿಟ್ಟು ಬೇರೇನೂ ಬೇಕಾದರೂ ಮಾಡು. ಗ್ರಹಣವನ್ನು ನೋಡಲು ಒಂದಿಷ್ಟು ಮುನ್ನೆಚ್ಚರಿಕೆ ಅಂದರೆ ಸರಿಯಾದ ಉಪಕರಣ ಅಥವ ಕನ್ನಡಕ ಅತ್ಯಗತ್ಯ. ಪುಟ್ಟ ನೀನು ಸ್ವಲ್ಪ ದೊಡ್ಡವಳಾದ ಮೇಲೆ ನಿನಗೆ ಪ್ರಕೃತಿಯ ಈ ವಿದ್ಯಮಾನವನ್ನು ತೋರಿಸುತ್ತೇನೆ. ಆಗ ನೀನೇ ಹೇಳುತ್ತೀಯಾ ಆಕಾಶರಾಯ ಎಷ್ಟು ಚೆಂದದ ಗಿಫ್ಟ್ ಭೂಮಿಗೆ ನೀಡುತ್ತಾನೆ ಅಂತ.

ಇತಿ ನಿನ್ನ ಪ್ರೀತಿಯ

ಅಮ್ಮ

 

 

‍ಲೇಖಕರು avadhi

1 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading