ಕಪ್ಪುಬಾವುಟ ಪ್ರದರ್ಶನ ನಡೆದಿದ್ದು ನಿಜ
ಬಿ ಆರ್ ಸತ್ಯನಾರಾಯಣ
ಯುಗಾದಿಯನ್ನು ಮುಗಿಸಿಕೊಂಡು ಬಂದ ಮೇಲೆ ಆ ಅವಧಿಯ ಯಾವುದೇ ಪತ್ರಿಕೆಯನ್ನು ಓದಲಾಗಿರಲಿಲ್ಲ. ದಿನಾಂಕ 7.4.14ರಂದು ಪ್ರಜಾವಾಣಿಯ ವಾಚಕರವಾಣಿ ವಿಭಾಗದಲ್ಲಿ ಕಣ್ಣಾಡಿಸುತ್ತಿದ್ದಾಗ ಕಣ್ಣಿಗೆ ಬಿದ್ದುದು, ‘ಕಪ್ಪುಬಾವುಟ ಪ್ರದರ್ಶಿಸಿದ್ದು ಎಲ್ಲಿ?’ ಎಂಬ ತಲೆಬರಹ! ತಲೆ ಬರಹಕ್ಕಿಂತ ಹೆಚ್ಚಾಗಿ, ಅದರ ಕೆಳಗೆ ಕಂಡ ತೇಜಸ್ವಿ ಮತ್ತು ಶಾಮಣ್ಣ ಎಂಬ ಹೆಸರುಗಳು ನನ್ನನ್ನು ಹೆಚ್ಚು ಸೆಳೆದವು. ಕಡಿದಾಳು ಮಂಜಪ್ಪನವರ ಮಗಳ ಮದುವೆಯ ಸಂದರ್ಭದಲ್ಲಿ ಕಪ್ಪುಬಾವುಟ ಪ್ರದರ್ಶನ ನಡೆದಿದ್ದು ಸುಳ್ಳು ಎಂಬುದಷ್ಟೇ ಪ್ರತಿಪಾದಿತವಾಗಬೇಕಿದ್ದ ಆ ಪ್ರತಿಕ್ರಿಯೆಯಲ್ಲಿ, ಶಾಮಣ್ಣನವರ ಹೇಳಿಕೆ ಅಪ್ಪಟ ಸುಳ್ಳು, ಸುಳ್ಳುಗಳ ಸರಮಾಲೆ ಮುಂತಾದ ಮಾತುಗಳು ಒಂದು ರೀತಿಯ ಕಸಿವಿಸಿಯನ್ನುಂಟು ಮಾಡಿದ್ದು ಸುಳ್ಳಲ್ಲ. ಮಂಜಪ್ಪನವರ ಎದುರಿಗೆ ಕಪ್ಪುಬಾವುಟ ಪ್ರದರ್ಶನ ನಡೆದಿದ್ದು ನಿಜ. ಆದರೆ, ಅದು ಅವರ ಮಗಳ ಮದುವೆಯ ಸಂದರ್ಭದಲ್ಲಿ ಅಲ್ಲ; ಅವರ ತಮ್ಮಂದಿರ ಮಕ್ಕಳ ಮದುವೆ ನಿಶ್ಚಿತಾರ್ಥದ ಸಮಯದಲ್ಲಿ ಎಂಬುದರ ಅರಿವು ನನಗಿತ್ತು.
ತಮ್ಮ ಸಾರ್ವಜನಿಕ ಬದುಕಿನುದ್ದುಕ್ಕೂ ಸಚ್ಚಾರಿತ್ರ್ಯವನ್ನೇ ಹಾಸಿ ಹೊದ್ದು ಬದುಕುತ್ತಿರುವ ಶಾಮಣ್ಣನವರ ವಿಷಯದಲ್ಲಿ ಸುಳ್ಳುಗಾರ ಎಂಬ ಮಾತೇಕೆ? ಮಂಜಪ್ಪನವರನ್ನು ದೊಡ್ಡಪ್ಪ ಎಂದು ಕರೆದಿರುವುದನ್ನೇ ಹಾಸ್ಯಾಸ್ಪದ ಎನ್ನುವಂತೆ, ‘ಕಡಿದಾಳ್’ ಎಂದು ಹೆಸರಿನ ಜೊತೆ ಸೇರಿಸಿಕೊಂಡಿರುವುದೇ ತಪ್ಪು ಎನ್ನುವಂತೆ ಬಿಂಬಿಸಿರುವ ಸಾಲುಗಳು ಮನಸ್ಸಿಗೆ ವೇದನೆಯನ್ನುಂಟು ಮಾಡಿದವು.
ಆ ಪ್ರತಿಕ್ರಿಯೆಯಲ್ಲಿಯೇ ಸೂಚಿಸಿದ್ದ ದಿನಾಂಕದ (ಮಾ 31) ಪತ್ರಿಕೆಯನ್ನು ತೆರೆದು ‘ತೇಜಸ್ವಿ ನೆನಪುಗಳಿಗೆ ಜಾರಿದ ಕಡಿದಾಳ್ ಶಾಮಣ್ಣ’ ಎಂಬ ತಲೆಬರಹದ ವರದಿಯನ್ನು ಪೂರ್ಣ ಓದಿದೆ. ಅದು, ಮಾರ್ಚ್ 30ರಂದು ರಂಗಶಂಕರದಲ್ಲಿ ನಡೆದ ‘ರಂಗಯುಗಾದಿ – ಪೂರ್ಣಚಂದ್ರ ತೇಜಸ್ವಿ’ ಕಾರ್ಯಕ್ರಮದ ವರದಿಯಾಗಿತ್ತು. ನಾನು ಅಂದು ನನ್ನ ಊರಿನಲ್ಲಿ ಇರಬೇಕಾಗಿದ್ದುದರಿಂದ ಆ ಕಾರ್ಯಕ್ರಮಕ್ಕೆ ಹೋಗಲಾಗಿರಲಿಲ್ಲ.
ವರದಿಯಲ್ಲಿ ಬರೆಯಲಾಗಿದ್ದ “ಒಮ್ಮೆ ನನ್ನ ದೊಡ್ಡಪ್ಪ ಕಡಿದಾಳ್ ಮಂಜಪ್ಪ ಅವರು ಮಗಳಿಗೆ ಮದುವೆ ಮಾಡಲು ಹೊರಟಿದ್ದರು. ಆಗ ಮಂತ್ರಮಾಂಗಲ್ಯ ಪದ್ಧತಿಯ ಅನುಸಾರ ಮದುವೆ ಮಾಡಿಸಬೇಕೆಂದು ತೇಜಸ್ವಿಯ ನೇತೃತ್ವದಲ್ಲಿ ಅವರ ಮನೆಯ ಎದುರು ಕಪ್ಪುಬಾವುಟ ಪ್ರದರ್ಶಿಸಿ, ಮನೆಯವರಿಂದ ಬೈಗುಳ ತಿಂದಿದ್ದೆವು” ಎಂಬ ಸಾಲುಗಳು ಬಹುಶಃ ವಾಚಕರವಾಣಿಯ ಖಾರದ ಪ್ರತಿಕ್ರಿಯೆಗೆ ಕಾರಣವಾಗಿದ್ದವು ಅನ್ನಿಸುತ್ತೆ.
ಆನಂತರ ನಾನು ಶಾಮಣ್ಣನವರ ಪರಿಚಿತರಲ್ಲಿ, ಕಾರ್ಯಕ್ರಮದಲ್ಲಿ ಹಾಜರಿದ್ದವರಲ್ಲಿ ವಿಚಾರಿಸಿದಾಗ ತಿಳಿದು ಬಂದ ವಿಚಾರದ ಒಟ್ಟು ತಾತ್ಪರ್ಯ ಇಷ್ಟು: ಈ ವಿಷಯವನ್ನು ಮೊದಲು, ‘ಕಾಡು ತೊರೆಯ ಜಾಡು’ ಪುಸ್ತಕದಲ್ಲಿ ಓದಿದ ನೆನಪಿನಿಂದ ನಿರೂಪಕರು ಪ್ರಸ್ತಾಪಿಸಿದರು. ಹಾಗೆ ಪ್ರಸ್ತಾಪಿಸುವಾಗ, ಮಂಜಪನ್ನವರ ಮಗಳ ಮದುವೆಯ ಸಂದರ್ಭದಲ್ಲಿ ಎಂದು ಹೇಳಿದರು. ನಂತರ ಶಾಮಣ್ಣ, ಅವರ ಮಗಳ ಮದುವೆಯಲ್ಲಿ ಅಲ್ಲ; ಅವರ ತಮ್ಮಂದಿರ ಮಕ್ಕಳ ಮದುವೆಯ ಸಂದರ್ಭದಲ್ಲಿ ಎಂದು ಹೇಳಿದರೂ, ಒಟ್ಟಾರೆ ವಿಷಯ ಪ್ರಸ್ತಾಪವಾಗುವಾಗ ಅದು ಮಂಜಪ್ಪನವರ ಮಗಳ ಮದುವೆಯ ಸಂದರ್ಭ ಎಂಬಂತೆಯೆ ಬಿಂಬಿತವಾಗಿತ್ತು.
ಇದು ಒಂದು ಸಹಜವಾದ ಪ್ರಕ್ರಿಯೆ ಕೂಡಾ. ಕಡಿದಾಳ್ ಮಂಜಪ್ಪನವರದು ಕೂಡುಕುಟುಂಬ. ಅವರೇ ಮನೆತನದ ಹಿರಿಯರು ಹಾಗೂ ಯಜಮಾನರು. ಅವರೇ ಮುಂದೆ ನಿಂತು ತಮ್ಮಂದಿರ ಮಕ್ಕಳ ಮದುವೆ ಮಾಡುತ್ತಿದ್ದಾರೆ. ತಮ್ಮಂದಿರ ಮಕ್ಕಳಾದರೂ ಅವರು ಅವರಿಗೆ ಮಕ್ಕಳ ಸಮಾನವಲ್ಲವೆ? ಅವರ ಮಗಳ ಮದುವೆ ಎಂದು ನಿರೂಪಕರು ಪ್ರಾಸ್ತಾವಿಕವಾಗಿ ಹೇಳುವುದರಲ್ಲಿಯೂ, ಶಾಮಣ್ಣ ಅದೇ ಮಾತುಗಳನ್ನು ಬಳಸಿದ್ದರೂ ಅದರಲ್ಲಿ ತಪ್ಪೇನಿದೆ? ವಾಕ್ಯರಚನೆಯಲ್ಲಿ, ಪ್ರಸ್ತುತಿಯಲ್ಲಿ ತಪ್ಪಿದ್ದ ಮಾತ್ರಕ್ಕೆ, ನಡೆದಿದ್ದ ಘಟನೆಯನ್ನೇ ಸುಳ್ಳು ಎಂದು ಹೇಳಲಿಕ್ಕಾದೀತೆ? ಆ ನೆಪದಲ್ಲಿ ಶಾಮಣ್ಣವರನ್ನು ಸುಳ್ಳುಗಾರ ಎನ್ನಲಾದೀತೆ?

ಶಾಮಣ್ಣನವರ ‘ಕಾಡುತೊರೆಯ ಜಾಡು’ ಪುಸ್ತಕವನ್ನು ಓದಿದ್ದವರಿಗೆ ಅವರ ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ಹೋರಾಟದ ಬದುಕು ಎಲ್ಲವೂ ಗೊತ್ತಿರುತ್ತದೆ. ಆ ಪುಸ್ತಕದ ಪುಟ 31ರಿಂದ 41ರವರೆಗೆ ಓದಿದವರಿಗೆ ಈ ಘಟನೆಯ ಪೂರ್ಣ ಚಿತ್ರಣವೂ ಗೊತ್ತಿರುತ್ತದೆ. ಅದರ ತಾತ್ಪರ್ಯ ಇಷ್ಟು: ಕಡಿದಾಳು ಮಂಜಪ್ಪನವರ ತಮ್ಮಂದಿರ ಇಬ್ಬರು ಹೆಣ್ಣುಮಕ್ಕಳು – ಶಾಂತ ಮತ್ತು ವೇದಾ ಅವರಿಗೆ ಮದುವೆ ನಿಕ್ಕಿಯಾಗಿರುತ್ತದೆ. ಅದರ ನಿಶ್ಚಿತಾರ್ಥದ ಕಾರ್ಯಕ್ರಮಕ್ಕೆ ಪುರೋಹಿತರು ಬಂದು ನಡೆಸಿಕೊಡುವುದು ಮತ್ತು ಮದುವೆಯ ದಿನಾಂಕವನ್ನು ನಿಗಧಿಪಡಿಸುವುದು ಎಂದೂ ತೀರ್ಮಾನವಾಗಿರುತ್ತದೆ. ಆದರೆ ಈ ಹಿಂದೆ ಕಡಿದಾಳು ಕುಟುಂಬುದಲ್ಲೇ ಎರಡು ಮದುವೆಗಳು ಮಂತ್ರಮಾಂಗಲ್ಯದ ರೀತಿ ಸರಳವಾಗಿ ನಡೆದಿರುತ್ತವೆ. ಅದರಿಂದ ಪ್ರಭಾವಿತರಾಗಿದ್ದ ಶಾಂತ ಮತ್ತು ವೇದಾ ಶಾಮಣ್ಣನವರಿಗೆ ಈ ವಿಷಯ ತಿಳಿಸಿ, ‘ನಮ್ಮಿಬ್ಬರಿಗೂ ಸುರೇಂದ್ರಣ್ಣನ ಹಾಗೆ ಸರಳವಾಗಿ, ಪುರೋಹಿತರು, ಶಾಸ್ತ್ರ, ಆಡಂಬರ ಯಾವುದು ಇಲ್ಲದಂಗೆ ಮದುವೆ ಮಾಡ್ಕಳಕೆ ಇಷ್ಟ….. ನೀ ಬಂದು ಈ ಬಗ್ಗೆ ದೊಡ್ಡಪ್ಪಯ್ಯನ ಹತ್ತಿರ ಮಾತನಾಡು. ನಮಗೆ ಎಷ್ಟೇ ಆಸೆ ಇದ್ದರು ಅವರೆದುರಿಗೆ ನಿಂತು ಮಾತನಾಡುವ ಧೈರ್ಯ ಇಲ್ಲ’ ಎಂದಿರುತ್ತಾರೆ. ಮದುಮಕ್ಕಳೇ ಆಸೆ ಪಡುತ್ತಿರುವಾಗ, ಸುಮ್ಮನಿರಲಾದೀತೆ ಎಂದು ಶಾಮಣ್ಣ ಈ ವಿಷಯವನ್ನು ಮಂಜಪ್ಪನವರಲ್ಲಿ ಪ್ರಸ್ತಾಪಿಸುವ ಭರವಸೆ ಕೊಟ್ಟು ರಂಗಕ್ಕಿಳಿಯುತ್ತಾರೆ. ಶಾಮಣ್ಣನ ಬೇಡಿಕೆಯನ್ನು, ಈ ಹಿಂದೆಯೇ ಕುಟುಂಬದಲ್ಲಿ ಸರಳವಿವಾಹವನ್ನು ಮಾಡಿದ್ದರೂ, ಈ ಬಾರಿ ಮಂಜಪ್ಪನವರು ಅವರದೇ ಆದ ಕಾರಣಗಳನ್ನು ಕೊಟ್ಟು ತಿರಸ್ಕರಿಸುತ್ತಾರೆ. ಆದರೆ ಶಾಮಣ್ಣ ಎಲ್ಲಿಯೂ, ಇದು ಆ ಮದುಮಕ್ಕಳದೇ ಆಲೋಚನೆ ಎಂದು ಹೇಳಿ, ಅವರನ್ನು ಪೇಚಿಗೆ ಸಿಲುಕಿಸುವ ಗೋಜಿಗೆ ಹೋಗಲಿಲ್ಲ ಎಂಬುದು ಗಮನಾರ್ಹ.
ಶಾಂತ ಮತ್ತು ವೇದಾ ಅವರಿಗೆ ವಿಷಯ ತಿಳಿಸಿದ ಶಾಮಣ್ಣ, ‘ನಾವು ಅನ್ಕಂಡಂಗೆ ಆಗೋ ಹಂಗೆ ಕಾಣ್ತಾ ಇಲ್ಲ. ಬೇಜಾರು ಮಾಂಡ್ಕಂಬೇಡಿ. ನಿಮ್ಮ ಕಾಲದಲ್ಲಿ ನಡ್ಸಕಾಗದೇ ಇದ್ದಿದ್ದು ನಿಮ್ಮ ಮಕ್ಕಳ ಕಾಲದಲ್ಲಾದರೂ ನಡೆಯೋ ಹಂಗಾಗ್ಲಿ’ ಎಂದು ಸಮಾಧಾನ ಹೇಳುತ್ತಾರೆ.
ಆಗ ನಂಬಳಕ್ಕೆ ಬಂದಿದ್ದ ತೇಜಸ್ವಿ, ರಾಮದಾಸ್, ಸುಂದರೇಶ್ ಮೊದಲಾದವರಿಗೆ ಈ ವಿಷಯ ತಿಳಿದು, ಮದುಮಕ್ಕಳೇ ಇಷ್ಟಪಡುತ್ತಿರುವಾಗ ನಾವು ಅವರಿಗೆ ಸಪೋರ್ಟ್ ಮಾಡಬೇಕು ಎಂದು ತೀರ್ಮಾನಿಸಿ ತೇಜಸ್ವಿಯೇ ಒಂದು ಮನವಿಪತ್ರ ಸಿದ್ಧಪಡಿಸುತ್ತಾರೆ. ಹಳೆಯ ಕೊಡೆಯಿಂದ ಕಪ್ಪುಬಟ್ಟೆಯನ್ನು ಕಿತ್ತು, ಅದನ್ನೇ ಕೋಲಿಗೆ ಸಿಕ್ಕಿಸಿ ಬಾವುಟವನ್ನಾಗಿಸಿ ಮಂಜಪ್ಪನವರ ಮನೆಗೆ ಹೋಗುತ್ತಾರೆ. ತೇಜಸ್ವಿ ಮನವಿ ಪತ್ರವನ್ನು ಜೋರಾಗಿ ಓದುತ್ತಾರೆ. ಕಪ್ಪುಬಾವುಟವನ್ನು ಅವರ ಮುಂದೆಯೇ ನೆಟ್ಟು ಅಲ್ಲಿಂದ ನಿರ್ಗಮಿಸುತ್ತಾರೆ. ಇದರ ಬಗ್ಗೆ ಏನೂ ಗೊತ್ತಿರದ ಮಂಜಪ್ಪನವರ ತಮ್ಮ ಅಣ್ಣೇಗೌಡರು, ಶಾಮಣ್ಣ ತೇಜಸ್ವಿ ಸುಂದರೇಶ್ ಅವರನ್ನೆಲ್ಲಾ ಊಟಕ್ಕೆ ಕರೆತಂದಿದ್ದಾನೆ ಎಂದುಕೊಂಡು ಉಪಚಾರಕ್ಕೆ ನಿಲ್ಲುತ್ತಾರೆ. ಎಲ್ಲರೂ ನಿರ್ಗಮಿಸಿ ಶಾಮಣ್ಣ ಒಬ್ಬರೇ ಏನು ತೋಚದೆ ನಿಂತಾಗ, ‘ಅವರೆಲ್ಲ ಹೋದ್ರೆ ಹೋಗ್ಲಿ ನೀ ಮಾತ್ರ ಊಟ ಮಾಡ್ಕಂಡೆ ಹೋಗು ಬಾ’ ಎಂದು ಎಳೆದು ತಂದು ಕೂರಿಸಿ ಊಟ ಮಾಡುವಂತೆ ಮಾಡುತ್ತಾರೆ!!
ಈ ಘಟನೆಯ ಉದ್ದಕ್ಕೂ ಶಾಮಣ್ಣನವರು ವಹಿಸುವ ತಾಳ್ಮೆ, ಬಳಸುವ ವಿವೇಕ ಎಂತವರನ್ನೂ ತಟ್ಟುತ್ತದೆ. ಈ ಘಟನೆ ‘ಬೃಹಸ್ಪತಿವಾಣಿ’ ಎಂಬ ಸ್ಥಳೀಯ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವೂ ಆಗುತ್ತದೆ. ಮಂಜಪ್ಪನವರ ಮನೆಯಿಂದ ಕರೆ ಬಂದಾಗ, ಅವರ ತಂದೆ ನೀನು ಹೋಗುವುದ ಬೇಡ. ಮಾತಿಗೆ ಮಾತು ಬೆಳೆಯುತ್ತದೆ. ನಾನೇ ಅವರಿಗೆ ವಿಷಯ ತಿಳಿಸುತ್ತೇನೆ ಎಂದಾಗ ಶಾಮಣ್ಣ ನೀಡುವ ಪ್ರತಿಕ್ರಿಯೆ ಅತ್ಯಂತ ಗಮನಾರ್ಹ. ಕೆಲ್ಸ ತುಸು ಒರಟುತನದ್ದಾಗಿದ್ದರೂ ನಡೆಯಬೇಕಾಗಿದ್ದುದೇ ಎಂಬ ತೀರ್ಮಾನಕ್ಕೆ ಬಂದಿದ್ದ ಶಾಮಣ್ಣ ‘ನನಗೆ ನೀವು ಬೇರೆಯಲ್ಲ, ಮಂಜಪ್ಪಣ್ಣಯ್ಯ ಬೇರೆಯಲ್ಲ’ ಎಂದು ಹೇಳಿ ಅವರೇ ಮಂಜಪ್ಪನವರ ಮನೆಗೆ ಹೋಗುತ್ತಾರೆ. (ಶಾಮಣ್ಣನವರ ಮಾತು-ಕೃತಿ ಒಂದೇ ಆಗಿತ್ತು ಎನ್ನುವುದಕ್ಕೆ, ಅವರ ಒಬ್ಬ ತಮ್ಮನ ಮದುವೆ ಭರ್ಜರಿಯಾಗಿ ನಡೆದಾಗ ಅವರು ಆ ಮದುವೆಗೆ ಹೋಗದಿರುವುದೇ ಸಾಕ್ಷಿ! ಶಾಮಣ್ಣನನ್ನು ಅವರೆಲ್ಲರೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು ಎಂಬುದಕ್ಕೆ, ಹುಡುಗಿಯರ ಮನೆಯವರೂ ಸೇರಿ ಯಾರೂ ಅವರ ಬಗ್ಗೆ ತಪ್ಪು ಅಭಿಪ್ರಾಯ ತಾಳಲಿಲ್ಲ ಎಂಬುದೂ ಸಾಕ್ಷಿ!!)
“ಬಹುಶಃ ಆ ಸಮಯದಲ್ಲಿ ಕಡಿದಾಳ್ ಮಂಜಪ್ಪನವರ ವಿರುದ್ಧ ಕಪ್ಪುಬಾವುಟ ಹಾರಿಸುವುದಿರಲಿ, ಅವರೆದುರು ನಿಲ್ಲುವ ಛಾತಿಯೂ ಬಹುಶಃ ಶಾಮಣ್ಣನವರಿಗಿರಲಿಕ್ಕಿಲ್ಲ” ಎಂಬ ಅನಾವಶ್ಯಕವಾದ ಮಾತುಗಳು ಪ್ರತಿಕ್ರಿಯೆಯಲ್ಲಿ ಇವೆ. ಈ ಮಾತುಗಳು ಮಂಜಪ್ಪನವರ ಮಾನವೀಯ ಮುಖ, ಪ್ರಜಾಪ್ರಭುತ್ವವಾದಿ ನಿಲುವು ಇವುಗಳನ್ನು ತೆರೆದಿಡುವ ಬದಲು ಅವರೊಬ್ಬ ಸರ್ವಾಧಿಕಾರಿಯಾಗಿದ್ದರೆಂದೇ ಧ್ವನಿಸುತ್ತವೆ. ಇದು ಅವರಿಗೆ ಎಸಗಿದ ಅಪಚಾರವೇ ಹೊರತು ಉಪಚಾರವಲ್ಲ! ಮಂಜಪ್ಪನವರ ಬದುಕನ್ನು ಬಲ್ಲವರಿಗೆ, ಅವರ ಬಗ್ಗೆ ಓದಿದವರಿಗೆ ತಿಳಿದವರಿಗೆ ಅವರು ಎಂತಹ ಸಮಾಜಮುಖಿ ವ್ಯಕ್ತಿಯಾಗಿದ್ದರು, ವಿಚಾರಪರರಾಗಿದ್ದರು ಎಂಬುದು ಗೊತ್ತೇ ಇರುತ್ತದೆ. ಈ ಎಲ್ಲಾ ಘಟನೆ ನಡೆದು ಕೇವಲ ಐದಾರು ತಿಂಗಳಲ್ಲಿ ಎಲ್ಲವೂ ತಿಳಿಯಾದ ಮೇಲೆ, ಮಂಜಪ್ಪನವರು ಮತ್ತೆ ಮೊದಲಿನಂತೆ ಶಾಮಣ್ಣನವರನ್ನು ‘ಗಡ್ಡದ ಉಪಾದ್ಯಾಯ’ ‘ಕರಿಗಡ್ಡದ ಶಾಮಯ್ಯ’ ಎಂದು ಪ್ರೀತಿಯಿಂದಲೇ ಕರೆಯಲಾರಂಭಿಸುತ್ತಾರೆ ಎಂಬುದೇ ಅವರ ವ್ಯಕ್ತಿತ್ವವನ್ನು ನಮಗೆ ಪರಿಣಾಮಕಾರಿಯಾಗಿ ಪರಿಚಯಿಸುತ್ತದೆ.
ಈ ಘಟನೆ ಕುವೆಂಪು ಅವರ ಗಮನಕ್ಕೂ ಬರುತ್ತದೆ. ಅವರು, ಎಲ್ಲವೂ ಒಮ್ಮೆಲೆ ಬದಲಾಗಬೇಕು ಅನ್ನೊ ಹಠ ಬೇಡ. ನಿಮ್ಮ ಧ್ಯೇಯ ಧೋರಣೆಗಳೇನೊ ಸರಿ. ಆದರೆ ತಂತಿ ಹರಿಯುವವರೆಗೂ ಎಳೆಯಬಾರದು. ಕಂದಾಚಾರಗಳಿಲ್ಲದ ಒಂದು ಸರಳ ಮದುವೆ ಮಾಡೋದಿಕ್ಕೆ ನಾನು ತೇಜಸ್ವಿ ಮದುವೆಯವರೆಗೆ ಕಾಯಬೇಕಾಯಿತು ಎಂದೆಲ್ಲಾ, ತಮ್ಮದೇ ಆದ ರೀತಿಯಲ್ಲಿ ಸಮಾಧಾನ, ಬುದ್ಧಿವಾದ ಹೇಳುತ್ತಾರೆ.
ಈ ಘಟನೆಯಿಂದ ಮಂಜಪ್ಪನವರಾಗಲೀ, ಶಾಮಣ್ಣನವರಾಗಲೀ ಯಾರೂ ಸೋಲುವುದಿಲ್ಲ. ಆದರೆ, ಇಷ್ಟು ವರ್ಷಗಳ ನಂತರ, -ಪುಸ್ತಕ ರೂಪದಲ್ಲಿ ಬಂದೇ ಮೂರ್ನಾಲ್ಕು ವರ್ಷಗಳ ನಂತರ,- ಸಭೆಯಲ್ಲಿ, ಪ್ರಾಸ್ತಾವಿಕವಾಗಿ, ಸ್ಥೂಲವಾಗಿ ಪ್ರಸ್ತಾಪವಾದಾಗ, ಅದು ವರದಿಯಾದಾಗ, ಅದರಲ್ಲಿರುವ ಒಂದು ದೋಷವನ್ನೇ (ತಮ್ಮಂದಿರ ಮಕ್ಕಳ ಮದುವೆ ನಿಶ್ಚಿತಾರ್ಥ ಎಂಬುದರ ಬದಲು, ಮಗಳ ಮದುವೆಯ ಸಂದರ್ಭ ಎಂಬ ವರದಿಯ ಮಾತುಗಳನ್ನೇ) ಹಿಡಿದು ಇಡೀ ಘಟನೆ ನಡೆದಿದ್ದು ಸುಳ್ಳು, ಸುಳ್ಳಿನ ಸರಮಾಲೆ ಎಂದು ಕರೆಯುವುದು ಸರಿಯೇ? ಇಂದಿಗೂ ತಮ್ಮ ಹೋರಾಟಗಳಿಂದ ಕ್ರಿಯಾಶೀಲರಾಗಿರುವ, ಯುವಜನತೆಗೆ ಮಾದರಿಯಾಗಿರುವ ಶಾಮಣ್ಣನವರನ್ನೇ ಸುಳ್ಳುಗಾರರೆಂಬಂತೆ ಬಿಂಬಿಸಲು ಯತ್ನಿಸುವುದು ಸರಿಯೆ?
ಈ ವಿಷಯವಾಗಿ ನಾನು ಎಡತಾಕಿದ ನಾಲ್ಕೈದು ಮಂದಿ ವ್ಯಕ್ತಪಡಿಸಿದ ಒಂದು ಸಮಾನ ಅಭಿಪ್ರಾಯವೆಂದರೆ, ‘ಶಾಮಣ್ಣ ಇಂತದ್ದಕ್ಕೆಲ್ಲ ತಲೆ ಕೆಡಸಿಸ್ಕೋಳೋದು ಇಲ್ಲ. ಪ್ರತಿಕ್ರಿಯೇನೂ ನೀಡಲ್ಲ.’ ಎಂಬುದು. ಸದಾ ಕಾರ್ಯಶೀಲರಾಗಿರುವ ಶಾಮಣ್ಣನವರಿಗೆ, ವೃಥಾ ಆರೋಪಗಳಿಗೆ, ಉತ್ತರಿಸುವ, ಪ್ರತಿಕ್ರಿಯಿಸುವ ಅವಶ್ಯಕತೆ ಖಂಡಿತಾ ಇಲ್ಲ. ಆದರೆ, ಅವರ ಪ್ರೇರಣೆ ಪ್ರಭಾವಕ್ಕೆ ಒಳಗಾಗಿರುವ ನಮ್ಮಂತವರಿಗೆ, ಇಂತಹ ಸುಳ್ಳು ಶಾಶ್ವತವಾಗಿ ಉಳಿದುಬಿಟ್ಟರೆ ಎಂಬ ಭಯ ಕಸಿವಿಸಿ ನನ್ನನ್ನು ಕಾಡಿದ್ದರಿಂದ ಇಲ್ಲಿ, ನನ್ನ ಸಮಾಧಾನಕ್ಕಾಗಿ ಬರೆಯುತ್ತಿದ್ದೇನೆಯೇ ಯಾರನ್ನೂ ಖಂಡಿಸುವ ಉದ್ದೇಶ ನನಗೂ ಇಲ್ಲ!
ಈಗ, ಆ ಘಟನೆ ನಡೆದು ಹೆಚ್ಚು ಕಡಿಮೆ ಅರ್ಧ ಶತಮಾನವೇ ಕಳೆದು ಹೋಗಿರುವ ಈ ಹೊತ್ತಿನಲ್ಲಿ, ಶಾಮಣ್ಣ ಸುಳ್ಳು ಹೇಳಬೇಕಾದ ಅಗತ್ಯ ಖಂಡಿತಾ ಇಲ್ಲ; ಸುಳ್ಳು ಹೇಳಿ ಶಾಮಣ್ಣ ಸಾಧಿಸಬೇಕಾದ್ದು ಏನೂ ಎಲ್ಲ ಎಂದು ಮಾತ್ರ ದೃಢವಾಗಿ ಹೇಳಬಲ್ಲೆ.







Kelavu kshudra jeevigalu yavagaloo idde iruttave bidi sir, but the problem is whenever these people tell lies others have to take time to tell the society about the lie in case people might tend to believe it!