ಶರತ್ ಚಕ್ರವರ್ತಿ ಬರೆದ ’ಸಿಬಿರು’

ಸಿಕ್ಕು ಬಿಡಿಸುವ ಸಿಬಿರು

ಶ್ರೀದೇವಿ ಕೆರೆಮನೆ

( ಅಕ್ಕಾ, ಬರ್ದಾ? ಯಾವಾಗ ಮಾತಿಗೆ ನಿಂತರೂ ಶರತ್ ಕೇಳುವ ಪ್ರಶ್ನೆ ಇದು. ಬಿಡಿ. ಇದು ಆತನ ತಪ್ಪಲ್ಲವೇ ಅಲ್ಲ. ನಿನ್ನ ಪುಸ್ತಕ ಓದ್ತಿದ್ದೀನಿ ಕಣೋ, ನಾಲ್ಕಾರು ದಿನದಲ್ಲೇ ಬರೀತೀನಿ ಎಂದು ಆಸೆ ತೊರಿಸಿ ತುಂಬಾ ದಿನಗಳೇ ಆಗಿದೆ. ಮಂಡ್ಯ ಜಿಲ್ಲಾ ಸಮ್ಮೇಳನಕ್ಕೆ ಹೋದಾಗ ಭರವಸೆಯ ಕವಿ ರಾಜೇಂದ್ರ ಪ್ರಸಾದನಿಂದ ರಾಜೇಂದ್ರ, ಪ್ರವರ ಹಾಗೂ ಶರತ್ ಇವರು ಮೂವರ ಪುಸ್ತಕಗಳನ್ನು ಹಕ್ಕೊತ್ತಾಯದಿಂದ ಕಿತ್ತು ತಂದಿದ್ದೆ. ನನ್ನ ಆಲಸ್ಯದಿಂದಾಗಿ ಅರ್ಧ ಬರೆದಿಟ್ಟ ಲೇಖನ ಹಾಗೆಯೇ ಉಳಿದುಬಿಟ್ಟಿತ್ತು.ಈಗಲೂ ಇದನ್ನು ಬರೆದು ಮುಗಿಸದಿದ್ದರೆ ಆಗದು ಎಂದು ತೀರ್ಮಾನಿಸಿ ಹಟ ಹಿಡಿದು ಕುಳಿತಿದ್ದೇನೆ.)
ಸುಮಾರು ಮೂವತ್ತೊಂದು ಕವನಗಳು ಹಾಗೂ ಮತ್ತು ಆರೆಂಟು ಸಣ್ಣ ಕವನಗಳನ್ನು ಕಟ್ಟು ಹಾಕಿ ಮಾಡಿರುವ ಸಿಬಿರು ಕವಿತೆಯ ದೃಷ್ಟಿಯಿಂದ ನೋಡಿದಾಗ ಹೊಸ ಪ್ರಯೋಗ ಎಂದೇ ಹೇಳಬೇಕು.
ಮೊದಲ ಸಾಲು ಬಿಟ್ಟು ಎರಡನೆಯದರಲ್ಲಿ ಎಡವಿದ್ದೇನೆ
ಉಗಮ ತಾಣ ಗೊತ್ತಿಲ್ಲವಾದ್ದರಿಂದ; (ಮೊದಲ ಸಾಲು?)
ಎನ್ನುವ ಶರತ್ ಕಾವ್ಯದ ಹೊಳಹುವಿನ ಜೊತೆಗೆ ಚಿಂತನೆಗೆ ಪ್ರಚೋದಿಸುವ ಯುವಕವಿ. ಹಾಗೆಂದೇ ಇಡಿ ಸಂಕಲನ ಹಲವಾರು ಇಂತಹ ರೂಪಕಗಳನ್ನು ಒಳಗೊಂಡಿದೆ. ಹೀಗಾಗಿ ಕಣ್ಣೀರು ಸುರಿಸುವ ಮೇಘ ಹೆಣ್ಣಾಗದೇ ಗಂಡು ರೂಪ ತಾಳಿದ್ದಾನೆ.
ಮೇಘನು ಒಮ್ಮೊಮ್ಮೆ ನಗುತ್ತಾನೆ; ಮಳೆ ಸುರಿಸಿ
ಕೆಲವೊಮ್ಮೆ ಬಿಕ್ಕಳಿಸುತ್ತಾನೆ
ಮಳೆ ಸುರಿಸುತ್ತಲೇ
ಮತ್ತೂ ಒಮ್ಮೆ ಮಂಕಾಗುತ್ತಾನೆ
ಮರುಳನಾಗುತ್ತಾನೆ
ತಲೆ ಕೆದರಿ ಹುಚ್ಚನಾಗುತ್ತಾನೆ (ತ್ರಿಶಂಕು)

ಎಂದು ಎಲ್ಲಾ ಸಾಂಪ್ರದಾಯಿಕ ನಂಬಿಕೆಗಳನ್ನು ಬುಡ ಮೇಲೆ ಮಾಡುವ ಕವಿ ತನ್ನ ಉಳಿದ ಕವನಗಳಲ್ಲೂ ಸಂಪ್ರದಾಯಕ್ಕೆ ಸವಾಲು ಹಾಕುತ್ತಲೇ ಹೊಗುತ್ತಾರೆ. ಹೂವು ಒಂದು ಸುಮಧುರ ಕಲ್ಪನೆಯಾಗಿರುವಾಗ ಅದೆಲ್ಲ ಕಲ್ಪನೆಗಳನ್ನು ಒಮ್ಮೆಲೆ ಗುಡಿಸಿ ಹಾಕಿ ಹೂವಿನ ನಿರ್ಗಂಧತೆಯನ್ನು ಅನಾವರಣಗೊಳಿಸುವ ಕವಿ ಒಂದು ನಿರ್ಗಂಧ ಹೂವಿನ ಹಳಹಳಿಕೆಯನ್ನು ಮನಮುಟ್ಟುವಂತೆ ವಿವರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾರಿಹೋಕನೇ ಇನ್ನಾದರೂ ತುಳಿದು ಹೋಗು
ದೊರಕಲಿ ಜೀವನ್ಮುಕ್ತಿ (ಯುಗಾದಿ)
ಎನ್ನುವ ಸಾಲುಗಳು ಯಾರೂ ಮುಟ್ಟದ ಹೂವಿನ ನೋವನ್ನು ವಿವರಿಸುವಲ್ಲಿ ಯಶಸ್ವಿಯಾಗಿದೆ.
ಹಾಳೆ ನಿನ್ನದೇ ಆದರೂ
ಹರಡಿ ಬಿದ್ದ ಅಕ್ಷರಗಳಿವು ನನ್ನವೇ
ನಿಟ್ಟುಸಿರ ಸ್ಖಲಿಸಿ ಅಕ್ಷರವಾಗಿಸಿ
ನಿನ್ನ ಮುನಿಸಲೇ ಗರ್ಭಕಟ್ಟಿ
ಹಡೆದ ಇದು; ನಿನ್ನದಾಏ ಕೂಸು
ನಡುಬೀದಿಯಲ್ಲೇ ಬಿಟ್ಟು ಹೊರಟಿದ್ದೇನೆ (ಹೇಳಲೇಬೇಕೆ ಕಾರಣ)
ಕವನದ ಸಾಲುಗಳು ವಿಶಿಷ್ಟವಾಗಿ ಧ್ವನಿಸುತ್ತದೆ. ಸಾಂಪ್ರದಾಯಿಕ ನಂಬಿಕೆಗಳನ್ನು ಅಲ್ಲಾಡಿಸಿ ಬೇರೆಯದನ್ನೇ ಹೇಳಲು ಯಶಸ್ವಿಯಾಗುತ್ತದೆ.
ಕವನಗಳು ಎಂದೂ ಬದುಕನ್ನು ಬಿಟ್ಟು ರಮ್ಯ ಕಲ್ಪನೆಯತ್ತ ಮುಖ ಮಾಡದಂತೆ ನೋಡಿಕೊಂಡಿರುವುದು ಇಲ್ಲಿಯ ಎಲ್ಲಾ ಕವನಗಳಲ್ಲಿ ಎದ್ದು ಕಾಣಿಸುತ್ತದೆ. ಕಲ್ಪನೆಯ ಜಗತ್ತಿನಲ್ಲಿ ಮೈಮರೆಯುವುದಕ್ಕಿಂತ ಇಲ್ಲಿ ನೊಂದಿರುವವರ ನೋವಿಗೆ ಧ್ವನಿಯಾಗುವುದು ಕವಿಯ ಆಶಯ ಎನ್ನುವುದು ಎದ್ದು ಕಾಣಿಸುವಂತಿರುವ ಕವನಗಳು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಎಲ್ಲಾ ಮುಗಿಯಿತೆನ್ನುವಲ್ಲಿಗೆ
ನಗುನಗುತ ಚಂದಿರನು ಬರುವನು
ತಾರೆಗಳ ಶಾಲೆಯ ಮಾಸ್ತರ್ ಅವನು
ಅವನೊಡಗೂಡಿ ಮತ್ತೆ ಕ್ರೀಯೆಗೆ ತೊಡಗಿಕೊಳ್ಳುವವು (ನಿನದೇ ಕನಸು)
ಕರಿ ಟಾರಿನ ಮೇಲೆ ಮತ್ತೊಂದಿಷ್ಟು ಬಿಳಿ ಬಿಂಬ
ಅದು ಆ ಕಳ್ಳ ಹೆಜ್ಜೆಯ ಚಂದಿರನೇ ಇರಬೇಕು (ಹೀರುವ ದೀರ್ಘತೆಗೆ ಕತ್ತಲೇ ಬೆಚ್ಚಲಿ)
ಇಲ್ಲಿ ಚಂದ್ರ ತಾರೆಯರು ನಮ್ಮಂತೆ ಸಾಮಾನ್ಯ ಮನುಷ್ಯರೇ ಹೊರತೂ ಯಾವುದೋ ಲೋಕದ ಬಣ್ಣದ ಕನಸು ಹರಡುವ ರಾಯಭಾರಿಗಳಲ್ಲ.
ಅದ್ಯಾವ ಸಿಂಡ್ರೆಲಾ ಬಿಟ್ಟು ಹೋದ ಚಪ್ಪಲಿಯೋ
ಒಂಟಿಯಾಗಿ ನೇತಾಡುತ್ತಿದೆ ಚಮ್ಮಾರನರಮನೆಯಲ್ಲಿ (ಒಂದು ಪೋರ್ಟ ಬಾಟಂನ ಸುತ್ತ)
ಎನ್ನುತ್ತ ಸಂಪ್ರದಾಯಿಕ ಸಿಂಡ್ರೆಲ್ಲಾ ಚಮ್ಮಾರನ ಅಂಗಡಿಯಲ್ಲಿ ಗೋಡೆಗೆ ನೇತಾಡುವ ಚಪ್ಪಲಿಯಾಗುತ್ತಾಳೆ.
‘ಹೀಗೆಂದೇ ಬೆದೆಯೆ ಹಾವಿಗೆ ಕಿವಿಗಳಿಲ’್ಲ ಕವನವಾಗಲಿ ‘ನಿತ್ಯ ಸುಮಂಗಲಿ’ ಕವನವಾಗಲಿ, ಹೀರುವ ದೀರ್ಘತೆಗೆ ಕತ್ತಲೇ ಬೆಚ್ಚಲಿ’ ಕವನವಾಗಲಿ ಕೇವಲ ಕವನಗಳು ಎಂದೆನಿಸದೇ ನಮ್ಮ ಹತ್ತಿರದ ಸುತ್ತ ಮುತ್ತಲಿನ ಕಥೆ ಹೇಳುತ್ತವೆ. ‘ನಿವರ್ೀರ್ಯ ಪರಿತ್ಯಾಗಿಯ ಕಂಡು ಗೊರವಗಳು ನಕ್ಕಿವೆ’ ಎನ್ನುವ ಸಾಲು ಕವನಗಳು ಹೇಗೆ ಜೀವನಕ್ಕೆ ಹತ್ತಿರದಲ್ಲಿ ಬಿಂಬಿತವಾಗಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗುತ್ತದೆ.
ಎಲ್ಲವನ್ನೂ ಇದ್ದದ್ದು ಇದ್ದ ಹಾಗೆ ಬಿಚ್ಚಿಡಬೇಕು ಎಂಬ ಹಟಕ್ಕೆ ಬಿದ್ದವನಂತೆ ಕವಿ ಅನಾವರಣಗೊಳಿಸುವ ಪರಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಹೀಗಾಗಿಯೇ ಪ್ರೀತಿ, ಪ್ರೇಮ, ಕಾಮ, ಕ್ರೋಧ, ಆಕ್ರೋಶಗಳು ಮನುಷ್ಯನೊಳಗಿಂದ ಆಗ ತಾನೇ ಎದ್ದು ಬಂದಂತೆ ರಾಚುತ್ತದೆ. ಕೆಲವೊಮ್ಮೆ ನಾವು ಮನದೊಳಗೆ ಅಂದುಕೊಂಡಿದ್ದು, ಹೇಳಲಾಗದೇ ಅದುಮಿಟ್ಟುಕೊಂಡಿದ್ದು ಇಲ್ಲಿ ಧುತ್ತನೆ ಎದುರು ನಿಂತು ಮುಗುಳ್ನಗುತ್ತ ಕೆಲವೊಮ್ಮೆ ಆಪ್ಯಾಯಮಾನವೆನಿಸಿದರೂ ಬಹಳಷ್ಟು ಸಲ ಅರಳುಗಣ್ಣು ಬಿಟ್ಟು ಹೆದರಿಸುತ್ತಿರುವಂತೆ ಭಾಸವಾಗುತ್ತದೆ.
ಈ ಎಲ್ಲ ಪ್ಲಸ್ ಪಾಯಿಂಟುಗಳ ಜೊತೆಯಲ್ಲಿ ಕವಿಯೇ ಹೇಳಿಕೊಂಡಿರುವಂತೆ ಕೆಲವು ಅನ್ಪಾಲಿಶ್ಡ ಕವನಗಳಿವೆ. ಸಾಲುಗಳಲ್ಲೊಂದಿಷ್ಟು ಸರಳತೆ ಬೇಕಿದೆ. ತೀರಾ ಗದ್ಯರೂಪವನ್ನು ಬಿಟ್ಟು ಮತ್ತೊಂದಿಷ್ಟು ಕವನದ ಅಚ್ಚಿಗೆ ಸುರಿಯಬೇಕಿದೆ. ಮೊದಲ ಸಂಕಲನವಾದ್ದರಿಂದ ಈ ಎಲ್ಲಾ ಆರೋಪಗಳಿಗೆ ವಿನಾಯಿತಿ ಇದೆ. ಇಲ್ಲಿನ ಹಸಿ ಹಸಿ ಚಿತ್ರಗಳನ್ನು ಹಾಗೂ ಮಾಮೂಲಿತನವನ್ನು ಬಿಟ್ಟು ಎಲ್ಲವನ್ನೂ ಜೀವನಕ್ಕೆ ಅಳವಡಿಸಿಕೊಳ್ಳುವ ತುಡಿತವನ್ನು ತಳ್ಳಿ ಹಾಕುವಂತಿಲ್ಲ. ಮುಂದಿನ ಸಂಕಲನದಲ್ಲಿ ಭರವಸೆ ಹುಟ್ಟಿಸಬಲ್ಲ ನಿರೀಕ್ಷೆಗಳನ್ನು ಈಗಾಗಲೇ ಸೃಷ್ಟಿಸಿರುವ ಶರತ ಚಕ್ರವತರ್ಿಯ ‘ಸಿಬಿರು’- ಕವನವನ್ನು ಇಷ್ಟಪಡುವವರೆಲ್ಲರೂ ಒಮ್ಮೆಯಾದರೂ ಓದಲೇ ಬೇಕಾದ ಸಂಕಲನ.
 

‍ಲೇಖಕರು G

January 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: