ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೪

(ಭಾಗ ೩ ಇಲ್ಲಿದೆ)

 

ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯಾ!
ತರ್ಕ ತರ್ಕಿಸಲರಿಯದೆ ಮೂಗುವಟ್ಟೆದ್ದಿತ್ತಯ್ಯಾ!
ಆಗಮ ಹೊರತೊಲಗಿ ಅಗಲಿದ್ದಿತ್ತಯ್ಯಾ!
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
-ಬಸವಣ್ಣ
ಭಾರತೀಯ ಧರ್ಮ ಮತ್ತು ದರ್ಶನ ಪರಂಪರೆಯಲ್ಲಿ ದೇವರ ವಿಷಯದಲ್ಲಿ ಸ್ಥೂಲವಾಗಿ ಆರುಪ್ರಕಾರಗಳಿವೆ. ಇವೆಲ್ಲವುಗಳಿಗಿಂತ ವಿಶಿಷ್ಟವಾದ ದೇವರ ಕಲ್ಪನೆಯನ್ನು ಬಸವಣ್ಣನವರು ಹೊಂದಿದ್ದಾರೆ. ಬಸವಣ್ಣನವರ ದೇವರು ನಮ್ಮೊಳಗೇ ಇದ್ದಾನೆ. ಸಕಲಜೀವಪ್ರಿಯನಾದ ಆತ ಜಾತೀಯತೆಯಿಂದ ಕೂಡಿದ ವರ್ಣ ವ್ಯವಸ್ಥೆಯನ್ನು ಸಹಿಸುವುದಿಲ್ಲ. ವೈದಿಕ ವ್ಯವಸ್ಥೆಯ ಶ್ರೇಣೀಕೃತ ಸಮಾಜದ ಕಟ್ಟ ಕಡೆಯ ಜಾತಿಯಾದ ಮಾದಾರ ಜಾತಿಯ ಚನ್ನಯ್ಯನವರ ಮನೆಯಲ್ಲಿ ಅಂಬಲಿಯನ್ನು ಕುಡಿಯುವುದರ ಮೂಲಕ ಬಸವಣ್ಣನವರ ದೇವರು ವೈದಿಕ ವ್ಯವಸ್ಥೆಗೆ ಕೊಡಲಿಪೆಟ್ಟು ಹಾಕಿದ್ದಾನೆ.
ವೈದಿಕರ ಬಹುದೇವತಾವಾದ: ವೈದಿಕರ ಕರ್ಮಕಾಂಡವಾದ ವೇದಗಳಲ್ಲಿ ನಿಸರ್ಗ ಮೂಲದ ಅಗ್ನಿ, ವರುಣ, ವಾಯು ಮುಂತಾದವುಗಳ ಜೊತೆ ಗೋವಿನ ದೇಹದಲ್ಲೇ 33 ಕೋಟಿ ದೇವತೆಗಳಿವೆ! ಋಗ್ವೇದದ ಪುರುಷಸೂಕ್ತದ ಪ್ರಕಾರ ನಾಲ್ಕು ವರ್ಣಗಳಾಗಿವೆ. ಹೀಗೆ ಬಹುದೇವತೆಗಳನ್ನು ಮತ್ತು ಬಹುವರ್ಣೀಯ ಜನರನ್ನು ವೈದಿಕ ದರ್ಶನ ಸೃಷ್ಟಿಸಿದೆ. ಬಹುದೇವೋಪಾಸನೆ ವೈದಿಕದ ವಿಧಾನವಾಗಿದೆ. ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ (ಸತ್ಯ ಒಂದೇ ಇದೆ. ಜ್ಞಾನಿಗಳು ಅದನ್ನುವಿವಿಧ ರೀತಿಯಲ್ಲಿ ವರ್ಣಿಸಿದ್ದಾರೆ) ಎಂದು ಋಗ್ವೇದ ಹೇಳಿದರೂ ವೇದ ಸಂಸ್ಕೃತಿ ದ್ವೈತದಮೇಲೆಯೆ ಅವಲಂಬಿತವಾಗಿದೆ. ‘ದೇವನೊಬ್ಬ ನಾಮ ಹಲವು’ ಎಂದು ಬಸವಣ್ಣನವರು ಹೇಳುವುದರ ಮೂಲಕ ಬಹದೇವತಾವಾದ ಎಂಬುದೊಂದು ಭ್ರಮೆ ಎಂದು ಎಚ್ಚರಿಸಿದ್ದಾರೆ.
ಶೈವರ ಏಕದೇವತಾವಾದ: ಸಗುಣ, ಸಾಕಾರ ಮತ್ತು ಹೆಂಡಿರು ಮಕ್ಕಳುಳ್ಳ ಶಿವನು ಶಿವಗಣಗಳೊಂದಿಗೆ ಇರುವ ಏಕದೇವತಾವಾದ. ಸಾಕಾರ ಮೂರ್ತಿ ಸ್ಥಾಪನೆ ಮಾಡುವುದರ ಮೂಲಕ ಮತ್ತು ಸೃಷ್ಟಿಕ್ರಿಯೆಯ ಸಂಕೇತವಾದ ಸ್ಥಾವರಲಿಂಗದ ಮೂಲಕ ಈತನ ಆರಾಧನೆ. ಶೂನ್ಯಧ್ಯಾನ ಪರಂಪರೆಯಲ್ಲಿ ಬರುವ ಯೋಗಿ ಶಿವ ಈತ ಎಂಬ ವಾದವೂ ಇದೆ.ಇತಿಹಾಸ ಪುರಾಣವಾಗುವ ಮತ್ತು ಪುರಾಣ ಇತಿಹಾಸವಾಗುವ ಇಂಥ ಪ್ರಕ್ರಿಯೆಯಲ್ಲಿ ವಿವಿಧ ಆಯಾಮಗಳಿಂದ ಈ ಒಗಟುಗಳನ್ನು ಬಿಡಿಸಬೇಕಾಗುತ್ತದೆ. ಪುರಾಣದ ಶಿವದೇವನಾಗಲೀ, ಐತಿಹಾಸಿಕ ಯೋಗಿ ಶಿವನಾಗಲಿ ಈ ಲೋಕದ ಜೀವರುಗಳ ಪರವಾಗಿಯೇ ಇರುವುದು ಮುಖ್ಯವಾದದು. ಆದರೆ ಹುಟ್ಟು, ಸಾವುಗಳಿಲ್ಲದ ಬಸವಣ್ಣನವರ ನಿರಾಕಾರ ಶಿವನಿಗೂ ಈ ಶಿವನಿಗೂ ಸಂಬಂಧವಿಲ್ಲ. ವಚನಗಳು ಸೃಜನಶೀಲ ಸಾಹಿತ್ಯವೂ ಆಗಿರುವುದರಿಂದ ತತ್ತ್ವ ಪ್ರತಿಪಾದನೆಗಾಗಿ ಬಸವಣ್ಣನವರು ಪೌರಾಣಿಕ ಶಿವನನ್ನೂ ಸಾಂಕೇತಿಕವಾಗಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿದಾಗ ಅಪಾರ್ಥಕ್ಕೆ ಎಡೆಯಾಗುವುದಿಲ್ಲ.

ಉಪನಿಷತ್ತುಕಾರರ ಏಕದೇವತಾವಾದ: ಜ್ಞಾನಕಾಂಡವಾದ ಉಪನಿಷತ್ತುಗಳು’ವೇದಾಂತ’ ಎನಿಸಿಕೊಂಡಿವೆ. ‘ನಿರ್ಗುಣ, ನಿರಾಕಾರಬ್ರಹ್ಮ’ನೆಂಬ ಏಕದೇವನ ಉಪಾಸನೆಯ ಮೂಲಕ ಅದ್ವೈತವನ್ನು ಸಾಧಿಸಿವೆ. ಏಕದೇವೋಪಾಸನೆಯ ಮೂಲ ಉಪನಿಷತ್ತುಗಳಲ್ಲಿದೆ.(ಆದರೆ ಇದು ವಾಗದ್ವೈತ ಅಂದರೆ ಮಾತಿನ ಅದ್ವೈತದಲ್ಲೇ ಕೊನೆಗೊಳ್ಳುವುದು ಎಂದು ಶರಣ ನಗೆಯ ಮಾರಿತಂದೆ ಹೇಳುತ್ತಾನೆ.) ನಿರ್ಗುಣನೂ ನಿರಾಕಾರನೂ ಆದ ಬಸವಣ್ಣನವರ ತತ್ತ್ವರೂಪಿ ಶಿವ ತುಳಿತಕ್ಕೊಳಗಾದವರ ಪರ ಇದ್ದಾನೆ!
ಜೈನರ ಸ್ವಯಂ ದೇವತಾವಾದ: ಜೈನ ತತ್ತ್ವಜ್ಞಾನದ ಪ್ರಕಾರ ಮಾನವ ಜಿತೇಂದ್ರನಾಗುತ್ತ ಸ್ವಯಂ ದೇವರಾಗುವನು ಹೊರತಾಗಿ ಬೇರೆ ದೇವರಿಲ್ಲ. ಬಸವಣ್ಣನವರ ದೇವರು ಕೂಡ ನಮ್ಮೊಳಗೇ ಇದ್ದು ಅನ್ಯಾಯದ ವಿರುದ್ಧ ಹೋರಾಡಲು ಆದೇಶಿಸುತ್ತಾನೆ. ನಾವು ನಮ್ಮೊಳಗಿನ ದೇವರಿಗೆ ಶರಣಾಗತರಾದಾಗ ಈ ಜಗತ್ತಿನಲ್ಲಿ ಯಾರಿಗೂ ಶರಣಾಗತರಾಗಬೇಕಿಲ್ಲ. ನಮ್ಮ ಮುಂದೆ ಇರುವುದು ಸರ್ವ ಸಮತ್ವಕ್ಕಾಗಿ ಮಾಡಬೇಕಾದ ಹೋರಾಟ ಮಾತ್ರ ಎಂಬುದು ಬಸವಣ್ಣನವರ ನಿಲವಾಗಿದೆ.
ಲೋಕಾಯತರ ನಿರೀಶ್ವರವಾದ: ಭೌತಿಕವಾದವನ್ನು ಪ್ರತಿಪಾದಿಸುವ ಲೋಕಾಯತರು ನಿರೀಶ್ವರವಾದಿಗಳು. ಈ ಲೋಕ ಮತ್ತು ಲೋಗರ ಬಗ್ಗೆ ಲೋಕಾಯತರು ಸುಂದರವಾಗಿ ಮಾತನಾಡುತ್ತ ‘ಚಾರ್ವಕರು’ ಎನ್ನಿಸಿಕೊಂಡರು. ಬಸವಣ್ಣನವರು ಮಂದಿರವಿಲ್ಲದ, ಮೂರ್ತಿ ಇಲ್ಲದ, ಪೂಜಾರಿಗಳಿಲ್ಲದ ವ್ಯವಸ್ಥೆಗೆ ನಮ್ಮನ್ನು ಆಹ್ವಾನಿಸಿ, ನಮ್ಮೊಳಗಿರುವ ಅಂತಃಸಾಕ್ಷಿಯೆಂಬ ದೇವರ ಸಹಾಯದಿಂದ ಲೋಕದಲ್ಲಿ ನಡೆಯುತ್ತಿರವ ಅನ್ಯಾಯದ ವಿರುದ್ಧ ಹೋರಾಡಲು ಕಲಿಸಿದರು.
ಬುದ್ಧನ ಅಜ್ಞೇಯವಾದ: ‘ದೇವರು ಮತ್ತು ಆತ್ಮ ಇವೆಯೊ, ಇಲ್ಲವೊ ಎಂಬದು ಮುಖ್ಯವಲ್ಲ; ಬದುಕು ಮುಖ್ಯ’ಎಂಬ ಈ ವಾದಕ್ಕೆ ಅಜ್ಞೇಯ (ಗೊತ್ತಿಲ್ಲ) ವಾದ ಎಂದು ಕರೆಯುತ್ತಾರೆ.ಲೋಕದ ಜನರ ದುಃಖದ ಮೂಲವನ್ನು ಕಂಡುಹಿಡಿದು ನಿವಾರಣೆ ಮಾಡುವ ಈ ಕ್ರಮವನ್ನು ಭಗವಾನ ಬುದ್ಧ ಅರುಹಿದ್ದಾರೆ.’ಎರೆದಡೆನನೆಯದು, ಮರೆದಡೆಬಾಡದು, ಹುರುಳಿಲ್ಲಹುರುಳಿಲ್ಲ ಲಿಂಗಾರ್ಚನೆ; ಕೂಡಲ ಸಂಗಮ ದೇವಾ ಜಂಗಮಕ್ಕೆರೆದಡೆ ಸ್ಥಾವರ ನನೆಯಿತ್ತು.’ ಎಂದು ಬಸವಣ್ಣನವರು ಹೇಳುವ ಮೂಲಕ ಜಂಗಮ (ಲೋಕ)ದ ದುಃಖ ನಿವಾರಣೆಯೇ ನಮ್ಮ ಗುರಿಯಾಗಿರಬೇಕೆಂದು ಸ್ಪಷ್ಟಪಡಿಸಿದ್ದಾರೆ. ‘ಇನ್ನು ಜಂಗಮವೇ ಲಿಂಗವೆಂದು ನಂಬಿದೆ’ ಎಂದು ಬಸವಣ್ಣಮನವರು ಹೇಳುವ ಮೂಲಕ ಜೀವಜಗತ್ತನ್ನು ಕಾಪಾಡುವುದೇ ನಿಜವಾದ ಪೂಜೆ ಎಂದು ಸೂಚಿಸಿದ್ದಾರೆ.
ತಮ್ಮ ಮೇಲೆ ಪ್ರಭಾವ ಬೀರಿದ ಹಿಂದಿನ ಎಲ್ಲ ದಾರ್ಶನಿಕರ ಚಿಂತನೆಗಳನ್ನು ಬಸವಣ್ಣನವರು ‘ಆದ್ಯರವಚನಗಳು’ ಎಂದು ಕರೆದಿದ್ದಾರೆ.ಶೈವ, ಲೋಕಾಯತ, ಜೈನ, ಬೌದ್ಧಮತ್ತು ಉಪನಿಷತ್ಪರಂಪರೆಯ ಮಹತ್ವದ್ದನ್ನು ಸ್ವೀಕರಿಸುವುದರ ಮೂಲಕ ತಮ್ಮದೇ ಆದ ‘ಚೈತನ್ಯಾತ್ಮಕ ಭೌತಿಕವಾದ’ ಎಂಬ ‘ಬಸವಾದ್ವೈತ’ ತತ್ತ್ವವನ್ನು ಸೃಷ್ಟಿಸಿ ಲೋಕಕ್ಕೆ ನೀಡಿದರು. ಇತರ ವಸ್ತುಗಳಂತೆ ಮಾನವರೂ ಸ್ಥಾವರರೇ. ಒಳಗಿನ ಚೈತನ್ಯ ಮಾತ್ರ ಜಂಗಮ. ಚೈತನ್ಯಕ್ಕೆ ಜಂಗಮ ಎಂದೂ ಕರೆಯುವರು. ಜಂಗಮ ಮಾತ್ರ ಚಲನಶೀಲವಾದುದು.ಹಾರುವ ವಿಮಾನವೂ ಸ್ಥಾವರವೇ ಒಳಗಿರುವ ಇಂಧನವೆಂಬುದು ಚೈತನ್ಯ. ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ’ ಎಂದು ಬಸವಣ್ಣನವರು ತಿಳಿಸಿದ್ದಾರೆ. ನಾವು ನಮ್ಮೊಳಗಿನ ಚೈತನ್ಯಕ್ಕೆ ಶರಣಾಗಿರಬೇಕು. ಆ ಮೂಲಕ ಚೈತನ್ಯದ ಜೊತೆ ಅದ್ವೈತವನ್ನು ಸಾಧಿಸಬೇಕು. ಆಗ ನಾವು ಸಕಲಜೀವಾತ್ಮರ ಜೊತೆ ಅದೈತ ಸಾಧಿಸಲು ಸಾಧಿಸಲು ಸಾಧ್ಯ. ಹೀಗೆ ಬಸವಣ್ಣನವರು ಲೋಕಮುಖಿಯಾದ ತತ್ವದ ಪ್ರತಿಪಾದಕರಾಗಿದ್ದಾರೆ.
ಲೋಕಾಯತದ ಭೂಮುಖಿ ಚಿಂತನೆ. ಶೈವದ ಗಣಸಂಸ್ಕೃತಿ, ಸಾಕಾರ ನಿರಾಕಾರ ಮಧ್ಯದ ಕುರುಹಾದ ಇಷ್ಟಲಿಂಗ ಸೃಷ್ಟಿಸುವ ಮೂಲಕ ದೇವರ ಪರಿಕಲ್ಪನೆ ಕೊಡುವ ಮೂಲಕ ಉಪನಿಷತ್ತಿನ ನಿರ್ಗುಣ, ನಿರಾಕಾರನಾದ ಏಕದೇವ ಉಪಾಸನೆ. ಜೈನರ ಅಹಿಂಸೆ, ಬೌದ್ಧರ ‘ಬಹುಜನ ಹಿತಾಯ, ಬಹುಜನ ಸುಖಾಯ’ತತ್ತ್ವದಿಂದ ಕೂಡಿದ ಪ್ರಜ್ಞೆ, ಶೀಲ ಮತ್ತು ಕರುಣಾಭಾವ ಮುಂತಾದವು ಬಸವ ದರ್ಶನದಲ್ಲಿ ಮೇಳೈಸಿವೆ. ಇವೆಲ್ಲವುಗಳ ಸಹಾಯದೊಂದಿಗೆ ಬಸವಣ್ಣನವರು ತಮ್ಮ ಕಾಲದ ಸಮಾಜದ ವಿಶ್ಲೇಷಣೆ ಮಾಡಿದರು. ಆ ಸಮಾಜದೊಳಗಿನ ವೈರುಧ್ಯಗಳನ್ನು ಕಂಡುಹಿಡಿದರು.

ಕಾರ್ಲ್ ಮಾರ್ಕ್ಸ್ ಹೇಳಿದಂತೆ ಮಾನವ ಸಮಾಜದ ಇತಿಹಾಸವು ವರ್ಗಹೋರಾಟಗಳ ಇತಿಹಾಸವೇ ಆಗಿದೆ. ಸಮಾಜದೊಳಗಿನ ವರ್ಗಗಳನ್ನು ಕಂಡುಹಿಡಿದು ಶೋಷಣೆಯ ವಿರುದ್ಧ ವಿಜಯ ಸಾಧಿಸಿದಾಗಲೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂಬುದು ಬಸವಣ್ಣನವರ ದೃಢ ನಿರ್ಧಾರವಾಗಿತ್ತು. ವೈದಿಕರ ಕುತಂತ್ರದಿಂದಾಗಿ ಜಾತಿಗಳ ಒಳಗೆ ಬಡ ಮತ್ತು ಶ್ರೀಮಂತ ವರ್ಗಗಳು ಅಡಗಿ ಕುಳಿತದ್ದನ್ನು ಬಸವಣ್ಣನವರು ಗುರುತಿಸಿದರು. ಜಾತಿಗಳನ್ನು ಒಡೆದರು.ಕೆಳಜಾತಿಗಳ ಒಳಗೆ ಬಡವರ್ಗ ಮತ್ತು ಮೇಲ್ಜಾತಿಗಳ ಒಳಗೆ ಶ್ರೀಮಂತ ವರ್ಗ ಇರುವುದನ್ನು ಬಹಿರಂಗ ಪಡಿಸಿದರು. ತಾವು ಉಳ್ಳವರ ಜೊತೆ ಇರುವವರಲ್ಲ, ಬಡವರ ಜೊತೆ ಇರುವವರು ಎಂಬುದನ್ನು ಸಾರಿ ಹೇಳಿದರು. ಈ ಬಡವರೇ ಅಸ್ಪೃಶ್ಯರು ಮತ್ತು ವಿವಿಧ ಕಾಯಕಗಳನ್ನು ಮಾಡುತ್ತಿದ್ದ ಶೂದ್ರರು. ತಾವು ಕೆಳಜಾತೀಕರಣ ಹಾಗೂ ಕೆಳವರ್ಗೀಕರಣಗೊಂಡು ಬದುಕಿ ತೋರಿಸುವುದರ ಮೂಲಕ ದಲಿತರು ಮತ್ತು ಬಡವರ ಪರವಾಗಿ ಹೋರಾಡುವುದನ್ನು ಕಲಿಸಿದರು.
ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ,
ನಂಟರು ಬಂದಡೆ ಸಮಯವಿಲ್ಲೆನ್ನಿ,
ಅಂದೇಕೆ ಬಾರರು?
ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು.
ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು.
ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ?
-ಬಸವಣ್ಣ
 
ಶೋಷಣೆ ಇಲ್ಲದ ನವಸಮಾಜ ನಿರ್ಮಾಣದ ತತ್ತ್ವಗಳನ್ನು ಸಾರುವ ಬಡ ನೀತಿಜಂಗಮರೇ ಬಸವಣ್ಣನವರ ಒಡೆಯರು. ಅವರು ಬಂದಾಗ ಧ್ವಜ ಹಿಡಿದು ಮತ್ತು ತೋರಣ ಕಟ್ಟಿ ಸ್ವಾಗತಿಸಲು ತಿಳಿಸುವ ಅವರು, ತಮ್ಮ ರಕ್ತ ಸಂಬಂಧಿಕರು ಬಂದರೆ ಸಮಯ (ಧರ್ಮ) ಇಲ್ಲ ಎಂದು ಹೇಳಬೇಕೆನ್ನುತ್ತಾರೆ. ಕಂದಾಚಾರದಿಂದ ಹೊರಗಾಗಿ ಮಾನವೀಯ ಧರ್ಮದ ಆಚರಣೆಗೆ ಒಳಗಾದಾಗ ಅವರೇಕೆ ರಕ್ತಸಂಬಂಧವನ್ನು ಹಿಡಿದುಕೊಂಡು ಬರಲಿಲ್ಲ. (ಈಗ ಪ್ರಧಾನಿಯಾದ ಮೇಲೆ ಬಂದದ್ದೇಕೆ?) ನಾನಂದು ವೈದಿಕ ವ್ಯವಸ್ಥೆಯಲ್ಲಿ ಕಬ್ಬಿಣವಾಗಿದ್ದೆ. ಈಗ ಮಾನವೀಯ ತತ್ತ್ವವೆಂಬ ಪರುಷ ಮುಟ್ಟಿದ ಕಾರಣ ಚೊಕ್ಕ ಚಿನ್ನವಾಗಿದ್ದೇನೆ. ಈಗ ನನಗೆ ವೈದಿಕ ಬಂಧುಗಳಿಲ್ಲ. ಜಾತಿಸಂಕರವಾಗಿ ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಕೂಡಲಸಂಗನ ಶರಣರೇ ನನ್ನ ಬಂಧುಗಳು ಎಂಬುದನ್ನು ದೃಢನಿರ್ಧಾರದ ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ.
ವೈದಿಕ ವ್ಯವಸ್ಥೆಯಿಂದ ಹೊರಬಂದ ಬಸವಣ್ಣನವರು ಲೋಕಾಯತ, ಬುದ್ಧ ಮುಂತಾದ ಅವೈದಿಕ ಪರಂಪರೆಯ ಮುಂದುವರಿದ ಭಾಗವಾಗುತ್ತಾರೆ.ಈ ಅವೈದಿಕ ಪರಂಪರೆಯ ಕೊಂಡಿಯನ್ನು ಮಾನವಕುಲ ಕಳಚಿಕೊಂಡರೆ ವೈದಿಕರ ಗುಲಾಮಗಿರಿಯಲ್ಲಿ ಬೀಳುವುದು ಅನಿವಾರ್ಯವಾಗುತ್ತದೆ.ಹಿಂದು ಎಂಬ ಶಬ್ದ ಯಾವುದೇ ವೇದ, ಶಾಸ್ತ್ರ ಮತ್ತು ಪುರಾಣಗಳಲ್ಲಿ ಇಲ್ಲ. ಸಿಂಧು ನದಿಯ ಪ್ರದೇಶದಲ್ಲಿರುವವರಿಗೆಲ್ಲ ಅರಬರು ‘ಹಿಂದು’ ಎಂದು ಕರೆದರು.ಅರಬಿ ಭಾಷೆಯಲ್ಲಿ ‘ಸ’ ಅಕ್ಷರ’ಹ’ ಆಗಿ ಪರಿವರ್ತನೆ ಆಗುವುದರಿಂದ.ಸಿಂಧು ಹೋಗಿ ಹಿಂದು ಆಯಿತು.ಆದ್ದರಿಂದ ಹಿಂದು ಧರ್ಮವು ನಿಜವಾದ ಅರ್ಥದಲ್ಲಿ ವೈದಿಕ ಧರ್ಮವೇ ಆಗಿದೆ.ಇಂದು ಶೈವ ಮುಂತಾದ ಅವೈದಿಕ ಪಂಥಗಳು ಸಾಮಾನ್ಯ ಅರ್ಥದಲ್ಲಿ ಜಾತಿ, ಕುಲ, ಮತ, ಪಂಥಗಳಿಂದ ಕೂಡಿದ ಹಿಂದುಧರ್ಮದ ಭಾಗಗಳಾಗಿ ಹೋಗಿವೆ. ಈ ಭಾಗವಿಭಾಗಗಳಿಗೆ ಸೇರಿದವರೆಲ್ಲ ವೈರುಧ್ಯಗಳಿಂದ ಬದುಕುತ್ತಿದ್ದರೂ ಹಿಂದುಧರ್ಮ ಎಂಬ ಪರಿಧಿಯಲ್ಲಿ ಬರುವಂತೆ ವೈದಿಕರು ಸಹಸ್ರಾರು ವರ್ಷಗಳಿಂದ ವ್ಯವಸ್ಥಿತವಾಗಿ ನೋಡಿಕೊಂಡು ಬಂದಿದ್ದಾರೆ.ಶೂದ್ರರು, ಅಂದರೆ ಜನಿವಾರ ಇಲ್ಲದವರು ‘ಅವೈದಿಕ ಹಿಂದುಗಳು’ ಎಂದು ಕರೆದುಕೊಳ್ಳುವುದುಹೆಚ್ಚುಸೂಕ್ತ.ಯಾವುದೇ ದೃಷ್ಟಿಯಿಂದಲೂ ಅವರು ವೈದಿಕ ಹಿಂದುಗಳಲ್ಲ. ವೈದಿಕವನ್ನು ಅವರ ಮೇಲೆ ಹೇರಲಾಗುತ್ತಿದೆ ಅಷ್ಟೆ.ಆದರೆ ಬಸವಧರ್ಮವಾದ ಲಿಂಗವಂತ ಧರ್ಮವು ಜೈನ, ಬೌದ್ಧ, ಸಿಖ್, ಪಾರ್ಸೀ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಂತೆ ಸ್ವತಂತ್ರವಾದ ಅಲ್ಪಸಂಖ್ಯಾತ ಧರ್ಮವಾಗಿದೆ.
ಶರಣರ ವಚನಗಳಲ್ಲಿನ ಅನುಭಾವ (‘ಅಧ್ಯಾತ್ಮ’ ಪದ ಪ್ರಯೋಗ ಶರಣರಿಗೆ ಹಿಡಿಸುವುದಿಲ್ಲ. ಅದು ಮನುಷ್ಯರನ್ನು ಭೌತಿಕ ಜಗತ್ತಿನಿಂದ ದೂರ ಒಯ್ಯುತ್ತದೆ.ಆದರೆ ಶರಣರ ‘ಅನುಭಾವ’ ಭೌತಿಕ ಜಗತ್ತಿನ ಅನುಭವದ ಮೇಲೆ ನಿಂತಿದೆ.’ಮತ್ರ್ಯ ಲೋಕವೆಂಬುದು ಕರ್ತಾರನ ಕಮ್ಮಟ’ ಎಂದು ಬಸವಣ್ಣನವರು ತಿಳಿಸಿದ್ದಾರೆ).  ಭೌತಿಕ ಜಗತ್ತಿನ ಮಹತ್ವವನ್ನು ಎತ್ತಿಹಿಡಿಯುತ್ತದೆ ಮತ್ತು ಅದನ್ನು ಮಾನವೀಯಗೊಳಿಸುತ್ತದೆ.ಆದರೆ ವೈದಿಕರ ಅಧ್ಯಾತ್ಮದಲ್ಲಿ ಭೌತಿಕ ಜಗತ್ತಿಗೆ ಸ್ಥಾನವಿಲ್ಲ. ಇಂಥ ಮೋಸದ ಅಧ್ಯಾತ್ಮವನ್ನು ಸಾರುವ ಬ್ರಾಹ್ಮಣ್ಯವನ್ನು ಬಸವಣ್ಣನವರು ಅಲ್ಲಗಳೆದಿದ್ದಾರೆ.
ಎಲ್ಲವೂ ಬಯಲಿನಿಂದ ಸೃಷ್ಟಿಯಾಗಿದೆ ಎಂಬ ಬಸವಣ್ಣನವರ ವಾದ ವೈಜ್ಞಾನಿಕವಾಗಿದೆ.ಕಣ್ಣಿಗೆ ಕಾಣದ ಚೈತನ್ಯದಿಂದ ಒಡಮೂಡಿದ ವಿಶ್ವವೆಂಬ ವಸ್ತು ಕಣ್ಣಿಗೆ ಕಾಣುವ ಚೈತನ್ಯವಾಗಿದೆ. ಕಣ್ಣಿಗೆ ಕಾಣುವ ಚೈತನ್ಯವೇ ಸ್ಥಾವರ. ಕಣ್ಣಿಗೆ ಕಾಣದ ಚೈತನ್ಯವೇ ಜಂಗಮ. ಈ ಕಾರಣದಿಂದಲೇ ಬಸವಣ್ಣನವರು ‘ಸ್ಥಾವರ ಜಂಗಮ ಒಂದೇ’ ಎಂದಿದ್ದಾರೆ. ಆಯುಷ್ಯ ಮುಗಿದ ಮೇಲೆ ಸ್ಥಾವರವು ತನ್ನ ರೂಪ ಕಳೆದುಕೊಳ್ಳುವುದರಿಂದ ‘ಸ್ಥಾವರಕ್ಕಳಿವುಂಟು’ ಎಂದು ತಿಳಿಸಿದ್ದಾರೆ. ಸ್ಥಾವರವು ತನ್ನ ಅಸ್ತಿತ್ವ ಕಳೆದುಕೊಂಡಮೇಲೆ ಜಂಗಮವಾಗುತ್ತದೆ. ಅಂದರೆ ಕಣ್ಣಿಗೆ ಕಾಣುವ ಚೈತನ್ಯವು ತನ್ನ ಮೂಲಸ್ವರೂಪವಾದ ಕಣ್ಣಿಗೆ ಕಾಣದ ಚೈತನ್ಯವಾಗುತ್ತದೆ.
ಈ ಕಣ್ಣಿಗೆ ಕಾಣುವ ಚೈತನ್ಯವು ಒಂದು ದಿನ ಮಾಯವಾಗಿ ಕಣ್ಣಿಗೆ ಕಾಣದ ಚೈತನ್ಯದಲ್ಲಿ ಲೀನವಾಗುವುದು ಎಂದರೆ ಸೂರ್ಯ ಮುಂತಾದ ನಕ್ಷತ್ರಗಳು ಕೂಡ ಮಾಯವಾಗುವವು ಎಂದರ್ಥ. ಕಣ್ಣಿಗೆ ಕಾಣುವ ಚೈತನ್ಯದೊಳಗೆ ಅಂದರೆ ವಸ್ತುವಿನೊಳಗೂ ಕಣ್ಣಿಗೆ ಕಾಣದ ಚೈತನ್ಯವಿರುವದು. ಆ ಚೈತನ್ಯ ಒಳಗೆ ಇರುವ ವರೆಗೆ ಕಣ್ಣಿಗೆ ಕಾಣುವಂಥದ್ದು ಜೀವಂತವಗಿರುವುದು.ಪ್ರಾಣ ಹೋದಮೇಲೆ ದೇಹವು ಮೃತದೇಹವಾಗುವ ಹಾಗೆ ಅಣು ಕೂಡ ಒಂದು ದಿನ ಚೈತನ್ಯವನ್ನು ಕಳೆದುಕೊಂಡು ಬಯಲಾಗುವುದು. ಅಂದರೆ ಮೂಲಚೈತನ್ಯದಲ್ಲಿ ಒಂದಾಗುವುದು. ಈ ಮೂಲ ಚೈತನ್ಯವನ್ನೇ ಬಸವಣ್ಣನವರು ದೇವರು ಎಂದು ಕರೆದಿದ್ದಾರೆ. ಹೀಗೆ ವಚನಸಾಹಿತ್ಯವು ವೈಜ್ಞಾನಿಕ ಮನೋಭಾವದಿಂದ ಕೂಡಿದ ಆಧುನಿಕ ಸಮಾಜದ ಕನಸುಗಳನ್ನು ಬಿತ್ತುವ ಸಾಹಿತ್ಯವಾಗಿದೆ.
ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು
ವಿದ್ಯಾಸಾಧಕರೆಲ್ಲ ಬುದ್ಧಿಗೆಟ್ಟರು
ತತ್ತ್ವ ಸಾಧಕರೆಲ್ಲ ಭಕ್ತಿಹೀನರಾದರು
ಲಿಂಗಸಾಧಕರೆಲ್ಲ ಭೂಭಾರಕರಾದರು
ಕೂಡಲಚನ್ನಸಂಗಮದೇವಾ ನಿಮ್ಮ ಬಸವಣ್ಣ
ಜಂಗಮಸಾಧಕನಾಗಿ ಸ್ವಯಂಲಿಂಗವಾದನು.
-ಚನ್ನಬಸವಣ್ಣ
ಕಾವ್ಯದಲ್ಲಿ ಕರುಣಾರಸ ಹರಿಸಬಹುದು.ಆದರೆ ನಿಜಜೀವನದಲ್ಲಿ ಹಾಗೆ ಕ್ರಿಯಾಶೀಲವಾಗಿ ಜನರ ಕಣ್ಣೀರನ್ನು ಒರೆಸುವಂಥ ಸಾಧನೆ ಮಾಡುವುದು ಅವಶ್ಯವಾಗಿದೆ. ವಿದ್ಯೆಯನ್ನು ಸ್ವಾರ್ಥಕ್ಕಾಗಿ ಬಳಸುವ ಸಂಪ್ರದಾಯ ನಮ್ಮಲ್ಲಿದೆ. ಅದೇ ಕಾರಣದಿಂದ ಶೂದ್ರರಿಗೆ ಮತ್ತು ಅತಿಶೂದ್ರರಿಗೆ ಅಕ್ಷರ ಜ್ಞಾನ ಸಿಗಲಿಲ್ಲ. ಸಿಕ್ಕಿದ್ದು ಅಲ್ಪಸಂಖ್ಯಾತರಾದ ಬ್ರಾಹ್ಮಣರು ಮತ್ತು ಇತರ ಸವರ್ಣೀಯರಿಗೆ ಮಾತ್ರ!  ಹೀಗೆ ವಿದ್ಯಾಸಾಧಕರು ಕ್ರೂರಿಗಳಾಗಿ ಬದುಕುತ್ತ ಬುದ್ಧಿಗೆಟ್ಟು ಹೋದರು.ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಎಂಬ ತ್ರಿಮತಸ್ಥರು ಸದಾ ತಮ್ಮ ಮತ ಶ್ರೇಷ್ಠ ಎನ್ನುವುದರಲ್ಲೇ ಕಾಲ ಕಳೆದರು. ಇಂಥ ತತ್ತ್ವ ಸಾಧನೆಯಲ್ಲಿ ಮಾನವೀಯತೆ ಎಂಬ ಭಕ್ತಿಭಾವ ಮರೆತು ಭಕ್ತಿಹೀನರಾದರು.ಸರ್ವಸಮತ್ವದಿಂದಿರುವುದೇ ಭಕ್ತಿ ಎಂಬುದು ಅವರಿಗೆ ಹೊಳೆಯಲೇ ಇಲ್ಲ. ಲಿಂಗಸಾಧಕರು ಕೂಡ ಧಾರ್ಮಿಕ ಸಂಪ್ರದಾಯಗಳಲ್ಲೇ ಮುಳುಗುತ್ತ ಭೂಮಿಗೆ ಭಾರವಾದರು. ಆದರೆ ಬಸವಣ್ಣನವರು ಈ ಭೂಮಿಯ ಮೇಲಿನ ದುಃಖ ನಿವಾರಣೆಗಾಗಿ ತಮ್ಮ ಬದುಕನ್ನೇ ಮುಡಿಪಿಟ್ಟು ಸಮಾಜವೆಂಬ ಜಂಗಮದಲ್ಲಿ ಸಮಾನತೆಯ ಯಶಸ್ಸನ್ನು ಸಾಧಿಸಿ ಸ್ವಯಂ ದೇವಸ್ವರೂಪರೇ ಆದರು ಎಂಬುದನ್ನು ಚನ್ನಬಸವಣ್ಣನವರು ಭಾವಪೂರ್ಣವಾಗಿ ತಿಳಿಸಿದ್ದಾರೆ.
(ಮುಂದುವರೆಯುತ್ತದೆ…)

‍ಲೇಖಕರು G

June 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

33 ಪ್ರತಿಕ್ರಿಯೆಗಳು

  1. Satyanarayana BR

    ಜಾತಿ, ಅಸ್ಪೃಶ್ಯತೆ, ಹೊಲೆತನ ಇವೆಲ್ಲವೂ ಹುಟ್ಟಿನಿಂದಲೇ ಬರುತ್ತದೆ, ಜನ್ಮಜನ್ಮಾಂತರದಲ್ಲೂ ಹಾಗೇ ಇರುತ್ತದೆ (ನಿತ್ಯನಾರಕಿಗಳು), ನಾನು ಮೇಲು ನೀನು ಕೀಳು ಎಂಬ ಪಾರಂಪರಿಕ ನಂಬಿಕೆಯ ನೆಲೆಗಟ್ಟಿನಲ್ಲಿ ನೋಡುವವರ ಮನೋಭಾವದ ಸಂಕೇತದಂತೆ ಅನ್ನಪೂರ್ಣ ಅವರು ಮೇಲಿಂದ ಮೇಲೆ ಪ್ರತಿಕ್ರಿಯಿಸಿದ್ದಾರೆ. ಜಾತಿ ಎಂಬುದೇ ನಿತ್ಯಸತ್ಯ, ಸಾರ್ವಕಾಲಿಕ ಎಂದು ಅವರು ಭಾವಿಸಿದಂತಿದೆ. ಜಾತಿ-ಅಸ್ಪೃಶ್ಯತೆ ಹುಟ್ಟಿನಿಂದಲೇ ಬರುತ್ತದೆ ಎಂಬ ಪಾರಂಪರಿಕ ನಿಲುವು ಒಂದು ದಡವಾದರೆ, ಆಚಾರದಿಂದ, ಆಚರಣೆಯಿಂದ ಪ್ರತಿಪಾದಿತವಾಗುವ, ವಚನಕಾರರು ಪ್ರತಿಪಾದಿಸಿರುವ ಹೊಲೆತನ ಇನ್ನೊಂದು ದಡ.
    ಇನ್ನು ವನಚಕಾರರ ಹೊಸರಿನ ಜೊತೆ ಜಾತಿಗಳ ಹೆಸರು ಇದೆ, ಜಾತಿಗಳನ್ನು ಮೀರಿದವರು ಆ ಹೆಸರುಗಳಿಂದ ಏಕೆ ಗುರುತಿಸಿಕೊಂಡರು ಎಂಬ ನಿಮ್ಮ ಪ್ರಶ್ನೆಗೆ ಏನು ಹೇಳಲಿ. ಯಾವ ಜಾತಿಯವರನ್ನು, ಅವರ ಹುಟ್ಟಿನ ಕಾರಣದಿಂದ ಅಸ್ಪೃಷ್ಯರನ್ನಾಗಿಸಿ, ಅಕ್ಷರವಂಚಿತರನ್ನಾಗಿಸಿ, ಊರಿನಿಂದ, ಮುಖ್ಯವಾಹಿನಿಯಿಂದ ಹೊರಗಟ್ಟಿದ್ದರೊ ಅವರು ಚೆನ್ನಾಗಿ ಅರ್ಥ ಮಾಡಿಕೊಳ್ಳಿ, ಜಾತಿ ಎಂಬುದು ಹುಟ್ಟಿನಿಂದ ಬರುವುದಿಲ್ಲ. ಹುಟ್ಟಿನಿಂದ ಯಾವ ಜಾತಿಯವನಾದರೂ, ಆತನು ಜ್ಞಾನಸಂಪನ್ನನಾಗಬಲ್ಲ, ಶಿವನನ್ನು ತನ್ನವನನ್ನಾಗಿಸಬಲ್ಲ, ಅಕ್ಷರಜ್ಞಾನಗಳಿಸಬಲ್ಲ, ತನ್ನ ಅನಿಸಿಕೆಗಳನ್ನು ಅಭಿವ್ಯಕ್ತಿಸಬಲ್ಲ ಎಂಬುದನ್ನು ಅದು ಸೂಚಿಸುತ್ತದೆಯೇ ಹೊರತು, ಅವರು ಜಾತಿ ಮೀರಿದ್ದರೂ ಜಾತಿಸೂಚಕ ಪದಗಳನ್ನು ತಮ್ಮ ಹೆಸರಿನ ಜೊತೆ ಇಟ್ಟುಕೊಂಡಿದ್ದರಿಂದ, ಜಾತಿವ್ಯವಸ್ಥೆಯನ್ನು ಅವರು ಬೆಂಬಲಿಸುತ್ತಾರೆ ಎಂದು ಸೂಚಿಸುವುದಿಲ್ಲ.
    ವರ್ಣ ಸಮಾಜದಲ್ಲಿ ಬ್ರಾಹ್ಮಣನೇ ಗುರು ಎಂಬುದು ತಪ್ಪು; ವರ್ಣವೇ ಗುರು ಎಂಬುದು ಸತ್ಯ ಎಂದರೆ, ಅಕ್ಷರವೇ, ಅಕ್ಷರದಿಂದ ಉತ್ಪನ್ನವಾಗುವ ಜ್ಞಾನವೇ ಸತ್ಯ ಎಂದು ಅರ್ಥ, ವರ್ಣ ಎಂಬುದಕ್ಕೆ ಅಕ್ಷರ ಎಂಬ ಅರ್ಥವೂ ಇದೆ (ವರ್ಣಮಾಲೆ). ಅದನ್ನು ನಂಬಿದವರು ಶರಣರು. ಅಲ್ಲಮನ ಮಾತೆಂಬುದು ಜ್ಯೋತಿರ್ಲಿಂಗ ಎಂಬುದನ್ನು ಗಮನಿಸಿ. ಇಲ್ಲಿ ಮಾತು ಎಂದರೆ, ಕೇವಲ ಮಾತಲ್ಲ. ಅದೂ ಕೂಡಾ ಅಕ್ಷರಜ್ಞಾನವೆ, ವಿದ್ಯೆಯೇ ಆಗಿದೆ.
    ವಚನಕಾರರಿಗೆ ಶುದ್ಧ ಸತ್ಯ(ಋತ)ವನ್ನು ಪ್ರತಿಪಾದಿಸುವ ವೇದೋಪನಿಷತ್ತಿನ ಬಗ್ಗೆ ತಕರಾರು ಇರಲಿಲ್ಲ. ಆದರೆ ಆ ವೇದ ಉಪನಿಷತ್ತುಗಳನ್ನೇ ತಮ್ಮ ಮೂಗಿನ ನೇರಕ್ಕೆ ಅನ್ವಯಿಸಿಕೊಂಡು, ಪುರಾಣಗಳನ್ನು ಸೃಷ್ಟಿಸಿಕೊಂಡು, ಜನರ ಶೋಷಣೆಗೆ ಇಳಿದ ಪುರೋಹಿತಶಾಹಿಗೆ ಅವರ ವಿರೋಧ. ವಿಚಾರಗಳನ್ನೇ ಅವಿಚಾರಗಳನ್ನಾಗಿಸಿ, ಅವಿಚಾರಗಳನ್ನೇ ಬಳಿಸಿಕೊಂಡು, ತಮ್ಮಂತೆಯೇ ಅನ್ನ ತಿನ್ನುವ, ಕಕ್ಕ ಮಾಡುವ, ಸಹಜೀವಿಗಳನ್ನು ಶೋಷಣೆ ಮಾಡಿಕೊಂಡಿದ್ದ ಶ್ರೇಷ್ಟತೆಯವ್ಯಸನಿಗಳಿಗೆ ಅವರ ವಿರೋಧ. ಶುದ್ಧ ಸತ್ಯ(ಋತ)ವನ್ನು ಪ್ರತಿಪಾದಿಸಿದವರಲ್ಲಿ ಅನೇಕರು, ವ್ಯಾಸ, ಸಾಂಖ್ಯ, ಅಗಸ್ತ್ಯ ಮೊದಲಾದವರನ್ನು ಅವರ ಹುಟ್ಟಿನ ಜಾತಿಯಿಂದ ವೃತ್ತಿಯಿಂದ ಗುರುತಿಸಿರುವುದು ಸಂಪ್ರದಾಯಮೂಢರ ಕಣ್ಣು ತೆರೆಸುವುದಕ್ಕೆ. ಜ್ಞಾನ ಎಂಬುದು ಹುಟ್ಟಿನಿಂದಲೂ, ಜಾತಿಯಿಂದಲೂ ಬರುವುದಿಲ್ಲ ಅದು ಸಾಧಕನ ಸ್ವತ್ತು. ನೀವೇ ನಿರಾಕರಿಸಿದ ಜಾತಿಯವರು, ಅಂತಹ ಸಾಧನೆ ಮಾಡಿದವರು ಇಷ್ಟೆಲ್ಲಾ ಇದ್ದಾರೆ. ಆದರೂ, ಈಗಲೂ ನೀವು ಜಾತಿಗರ್ವಾಂಧತೆಯನ್ನು ಬಿಡುವುದಿಲ್ಲ ಎಂದು ಎಚ್ಚರಿಸುತ್ತಿದ್ದಾರೆ.
    ಬಡಹಾರುವ ಎಂದರೆ, ನೀವು ಇಂದಿನ ಮಾರುಕಟ್ಟೆ ಲೆಕ್ಕಾಚಾರದಲ್ಲಿ, ದುಡ್ಡುಕಾಸಿನ ಲೆಕ್ಕಾಚಾರದಲ್ಲಿ ಏಕೆ ನೋಡುತ್ತೀರಿ. ಬಡಹಾರುವನೆಂದರೆ, ವಿಚಾರದಲ್ಲಿ ಬಡವನಾದವನು, ಮೂಢಮತಿ ಎಂದೂ ಅರ್ಥವಾಗುತ್ತದೆ ಅಲ್ಲವೆ?
    ತಾ ನೇಮವ ಮಾಡಿಕೊಂಡು
    ಕೃಷಿ ಬೇಸಾಯವಿಲ್ಲದೆ ಒಡೆಯರ ಕಟ್ಟಳೆ ಇಷ್ಟು ಅವಧಿಗೊಡಲೆಂದು,
    ಹೀಗಲ್ಲದೆ ಎನ್ನ ಒಡಲ ಹೊರೆಯೆನೆಂದು.
    ಹೋದ ಹೋದ ಠಾವಿನಲ್ಲಿ ಓಗರವನಿಕ್ಕಿಸುವ
    ಲಾಗಿನ ಶೀಲವಂತರ ಮನದ ಭೇದವ
    ನೀವೇ ಬಲ್ಲಿರಿ ಏಲೇಶ್ವರಲಿಂಗವೆ
    ಏಲೇಶ್ವರ ಕೇತಯ್ಯಗಳ ವನಚದಲ್ಲಿ, ಹುಟ್ಟಿನ ಕಾರಣದಿಂದ ಶ್ರೇಷ್ಠತೆಯನ್ನು ಆರೋಪಿಸಿಕೊಂಡು, ಉತ್ಪಾದಕ ವರ್ಗವನ್ನು ಶೋಷಿಸುತ್ತಾ, ಅನುತ್ಪಾದಕರಾಗಿ ಬಾಳುತ್ತಾ, (ಮಾಡುವವನಿಗೆ ಮೂರು ಕಾಸು; ಹೇಳುವವನಿಗೆ ಏಳು ಕಾಸು) ಮನದಲ್ಲಿ ಮೇಲುಕೀಳು ಎಂಬ ಭೇದವನ್ನಿಟ್ಟುಕೊಂಡಿರುವವರ ವಿಚಾರವಿದೆ. ಇಂತಹವರು ಕೇವಲ ವಸ್ತುಗಳ, ಆಹರಾಸಾಮಗ್ರಿಗಳ ವಿಷಯದಲ್ಲಿ ಅನುತ್ಪಾದಕರಾಗಿರುವುದಿಲ್ಲ; ವಿಚಾರದ ವಿಷಯದಲ್ಲೂ ಉತ್ಪಾದಕತೆಯನ್ನು ವಿರೋಧಿಸುತ್ತಾರೆ. ವಿಚಾರ ಬೆಳೆದರೆ ಅವಿಚಾರಿಗಳಿಗೆ ಭಯ!
    ವಚನಕಾರರು, ಮೌಢ್ಯತೆಯ ಶೋಷಣೆಯ ಅಗರವಾಗಿದ್ದ ವೈದಿಕ ಆಚಾರಪರಂಪರೆಯನ್ನು ವಿರೋಧಿಸಿದ್ದಾರೆ, ಕಟುವಾಗಿ ಟೀಕಿಸಿದ್ದಾರೆ. ಆದರೆ ಅದರ ವಿಚಾರ(ಋತ)ಪರಂಪರೆಯನ್ನಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳವವರ ಹಾಗೆ ಅವಿಚಾರಿಗಳು ಹೌವ್ವಾರುತ್ತಾರೆ!

    ಪ್ರತಿಕ್ರಿಯೆ
    • ವಿಜಯ್

      @ಸತ್ಯನಾರಾಯಣ..
      ದಯವಿಟ್ಟು ಒಮ್ಮೆ ಪುರೋಹಿತರು, ವೈದಿಕರು, ಬ್ರಾಹ್ಮಣರು ಇನ್ನೊಮ್ಮೆ ಪುರೋಹಿತಶಾಹಿ, ವೈದಿಕಶಾಹಿ, ಬ್ರಾಹ್ಮಣ್ಯ ಎಂದು ಬಳಸುವುದನ್ನು ಬಿಡಿ. ಸ್ಪಷ್ಟವಾಗಿ ಬ್ರಾಹ್ಮಣರು ಎಂದೇ ಬಳಸಿ..ಯಾರಿಗೂ ಬೇಸರವಾಗುವುದಿಲ್ಲ. ಏಕೆಂದರೆ ಈಗಿನ ‘ಸಮಾಜ ಸುಧಾರಕ’ರ ಮನಸ್ಸಿನಲ್ಲಿರುವದು ಎಲ್ಲರಿಗೂ ನಿಚ್ಚಳವಾಗಿ ಗೊತ್ತೆ ಇದೆ..ಈ ದೇಶದ, ಈ ಪ್ರದೇಶದ, ಈ ಸಮಾಜದ ದುಸ್ಥಿತಿಗೆ ಯಾವತ್ತೂ ಬ್ರಾಹ್ಮಣರೇ ಕಾರಣರು..ಉಳಿದವರೆಲ್ಲ ಮುಗ್ದರು, ಶೋಷಿತರು ಅಥವಾ ಬ್ರಾಹ್ಮಣರ ಕುಯುಕ್ತಿಯ ಮಾತುಗಳನ್ನು ಕೇಳಿಯೇ ಉಳಿದ ಶೋಷಿತರ ಮೇಲೆ ಅನ್ಯಾಯ ಮಾಡಿದವರೆಂದು. ಕೇವಲ ಬುದ್ದಿಬಲದಿಂದಲೇ ಸಾವಿರಾರು ವರ್ಷಗಳ ಕಾಲ ಬ್ರಾಹ್ಮಣರು ಭೂಸುರರಾಗಿ, ಧನ-ಸಂಪತ್ತನ್ನು ತಮ್ಮದಾಗಿಸಿಕೊಂಡು, ಸುಖವಾಗಿ ತಿಂಡು-ಉಂಡು ಬಾಳಿದರು ಎಂಬುದು ಆಶ್ಚರ್ಯವಾದರೂ..ನಂಬಲೇಬೇಕಾದ ವಿಷಯ..ಏಕೆಂದರೆ ನಮ್ಮ ಹಿರಿಯ ಸಂಶೋಧಕರು, ಸಮಾಜ ಸುಧಾರಕರು ಆಳವಾಗಿ ಸಂಶೋಧಿಸಿಯೇ ಇದನ್ನೆಲ್ಲ ಬರೆದಿದ್ದಾರೆ..ಬರೆಯುತ್ತಿದ್ದಾರೆ. ನಾವು ಕೇಳಿದ ಬಡ ಸುಧಾಮ, ಬಡ ಬ್ರಾಹ್ಮಣ ರ ಕಥೆಗಳು ಬಹು‍ಶ: ಈ ಬ್ರಾಹ್ಮಣರೇ ಹುಟ್ಟುಹಾಕಿದ ಕಟ್ಟುಕಥೆಗಳಿರಬೇಕು..ತಮ್ಮ ಸಂಪತ್ತಿನ ಮೇಲೆ ಇತರರ ಕಣ್ಣು ಬಿಳದಿರಲಿ ಎಂಬ ಚಾಣಾಕ್ಷತೆಯಿಂದ.
      ಇರಲಿ ವಿಷಯಕ್ಕೆ ಬರೋಣ..ಮೇಲೆ ಬರುವುದು ಪ್ರತಿ ಒಬ್ಬ (ಗಮನಿಸಿ ‘ಪ್ರತಿ’) ಮನುಷ್ಯನಿಗೆ ವೈಯುಕ್ತಿಕ ಸಾಧನೆಯೆ..ಹಾಗಾಗಿಯೇ ವ್ಯಾಸ, ಸಾಂಖ್ಯ, ಅಗಸ್ತ್ಯರು ಗೌರವಾನ್ವಿತರಾದದ್ದು. ಶತ ಶತಮಾನಗಳಿಂದಲೇ ಬ್ರಾಹ್ಮಣರ ದಬ್ಬಾಳಿಕೆ ನಡೆಯುತ್ತಿದ್ದರೆ, ವಿದ್ಯೆಯ ಹಕ್ಕು ಕಸಿಯಲಾಗಿತ್ತು ಎನ್ನುವುದಾದರೆ ಈ ‘ಹಿಂದುಳಿದ ವರ್ಗದ’ ಋಷಿಗಳು ವಿದ್ಯೆ ಕಲಿತಿದ್ದು ಹೇಗೆ? ಕದ್ದು ಕಲಿತರೆ? ಒಂದು ವೇಳೆ ಕದ್ದು ಕಲಿತಿದ್ದರೆ, ಕದ್ದು ಕಲಿತ ಮೇಲೂ ಸುತ್ತಲಿನ ಶೋಷಕ ಸಮಾಜ ಅದನ್ನು ಅರಗಿಸಿಕೊಂಡಿದ್ದು, ಅವರನ್ನು ಒಪ್ಪಿಕೊಂಡಿದ್ದು, ಅಪ್ಪಿಕೊಂಡಿದ್ದು ಹೇಗೆ?
      ಸಪ್ತರ್ಷಿಗಳಾದ ಋಷಿಗಳನ್ನು ಇವತ್ತಿಗೂ ಗೌರವಾನ್ವಿತವಾಗಿ ನೆನೆಸುವುದು ಯಾರು? ಮತ್ತು ಅವರಿಗೆ ಅದರಿಂದಾಗುವ ಲಾಭ ಏನು? ಪುರಾಣಗಳು ‘ಕನಿಷ್ಟ’ ಜನಾಂಗದವರಾದ ಸಪ್ತರ್ಷಿಗಳನ್ನೇಕೆ ನಾಪತ್ತೆ ಮಾಡಲಿಲ್ಲ? ಅವರ ಪುರಾಣಗಳು ವ್ಯಾಸ, ವಾಲ್ಮಿಕಿಯನ್ನೇಕೆ ಪೂಜನೀಯವಾಗಿಸಿದವು? ಅವರು ಬರೆದದ್ದನ್ನು ಧರ್ಮ ಗ್ರಂಥವೇಕಾಗಿಸಿದವು?
      ನಿಮ್ಮ ಮನೆಯಲ್ಲಿ ನೀವೊಬ್ಬರು ಓದಿ ಏನನ್ನೊ ಸಾಧಿಸಿದಿರಿ, ನಿಮ್ಮ ಉಳಿದ ಅಣ್ಣ-ತಮ್ಮಂದಿರು ಸಾಧಿಸಲಿಲ್ಲ ಅಂದರೆ ಆ ಹಿಂದುಳಿಯುವಿಕೆಯನ್ನು ಪೂರ್ತಿಯಾಗಿ ನಿಮ್ಮ ಪಾಲಕರ ಮೇಲೆ, ಸಮಾಜದ ಮೇಲೆ ಹೇರುತ್ತಿರಾ? ಅವರು ಕಲಿಯುವ ಶಾಲೆಯಲ್ಲಿ ಯಾವುದೋ ಒಬ್ಬ ಬ್ರಾಹ್ಮಣ ಮೇಷ್ಟ್ರು ಇದ್ದರೆ ಆತನ ಮೇಲೆ ಹೇರುತ್ತೀರಾ?
      ಎಲ್ಲೊ ಒಂದು ತುಂಡು ಜಾಗದಲ್ಲಿ ಯಾವ ಕಾಲದಲ್ಲೋ ನಡೆದ ಘಟನೆ ತೆಗೆದುಕೊಂಡು, ಅದಕ್ಕೂ ಮತ್ತು ತಾವೇ ಅರ್ಥೈಸಿಕೊಂಡ ಮನುಕಾಲದ ಯಾವುದೋ ಸ್ಮೃತಿಗೆ ಗಂಟುಹಾಕಿ, ಅದನ್ನೇ ಜಗತ್ತು ಕಂಡರಿಯದ ಘಟನೆಯನ್ನಾಗಿ ಬಿಂಬಿಸಿ, ನಮ್ಮ ದೇಶ, ಸಮಾಜ ಹಿಂದೆ ಉಳಿಯಲು ಬ್ರಾಹ್ಮಣರೇ ಕಾರಣ ಎನ್ನುವುದು, ಈ ದೇಶದ ಮೇಲೆ, ಈ ಸಮಾಜದ ಮೇಲೆ ಉಳಿದವರು ಎಸಗಿದ ಅತ್ಯಚಾರ, ಅನಾಚಾರಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆಯೆ? ಅಡಗಿಗೊಳ್ಳಲು ಜಾಗ ಕೊಡುತ್ತದೆಯೆ?
      ಬಸವಣ್ಣನ ಸಮಾನತೆಯ ಶರಣ ಧರ್ಮದ ಬಗ್ಗೆ ಮಾತು-ಕತೆಯಲ್ಲೇ ಹಾಡಿಹೊಗಳುವವರು ಈಗ ಹುಡುಕಬೇಕಾಗಿದ್ದು ಆ ಧರ್ಮ ಎಲ್ಲಿದೆಯೆಂದು..ಇಲ್ಲದಿದ್ದರೆ ಉತ್ತರಿಸಬೇಕಾದದ್ದು ಸಮಾನ ಮನಸ್ಕ ಸಮಾಜ ಸುಧಾರಕರನ್ನೆಲ್ಲ ಸೇರಿಸಿಕೊಂಡು ಎಲ್ಲರನ್ನು ಒಂದೇ ಸೂರಿನಡಿಯಲ್ಲಿ ತಂದು. ಬ್ರಾಹ್ಮಣರನ್ನು ಅವರ ಪಾಡಿಗೆ ಅಸ್ಪ್ರಶ್ಯವಾಗಿರಲು ( ಅವರು ಯಾರನ್ನೂ ಮುಟ್ಟಲ್ಲ, ಮುಟ್ಟಿಸಿಕೊಳ್ಳಲ್ಲಾ ಅಂದರೆ ಅಸ್ಪ್ರಷ್ಯರು ಯಾರು? ) ಬಿಟ್ಟು ನೀವೇಕೆ ಸುಖವಾಗಿ ಒಂದೇ ಮನೆಯಲ್ಲಿ ಉಂಡುಟ್ಟು ಸುಖವಾಗಿ ಬಾಳಲಾರಿರೆಂದು. ಈಗಂತೂ ರಾಜರಾಳ್ವಿಕೆಯಿಲ್ಲ, ತಪ್ಪು ದಾರಿಗಿಳಿಸುವ ಬ್ರಾಹ್ಮಣ ಮಂತ್ರಿಗಳಿಲ್ಲ..ಬೆಂಬಲಿಸುವ ಪ್ರಜಾಪ್ರಭುತ್ವವಿದೆ..ನಿಮ್ಮ ಗುರಿ ಸುಲಭ ಸಾಧ್ಯ. ಇದೆಲ್ಲ ಸಾಧ್ಯವಾದಾಗ ನಿಮ್ಮ ಆತ್ಮಸಾಕ್ಷಿ ಏನೆಂಬುದು ನಿಮಗೆ ತಿಳಿಯುತ್ತೆ..ನೀವು ಮಾಡುತ್ತಿರುವ ರಾಡಿಗೂ ಬ್ರಾಹ್ಮಣರೇ ಕಾರಣ ಎನ್ನುವುದು ತಪ್ಪುತ್ತೆ!.

      ಪ್ರತಿಕ್ರಿಯೆ
      • ವಿಜಯ್

        [“ಏಲೇಶ್ವರ ಕೇತಯ್ಯಗಳ ವನಚದಲ್ಲಿ, ಹುಟ್ಟಿನ ಕಾರಣದಿಂದ ಶ್ರೇಷ್ಠತೆಯನ್ನು ಆರೋಪಿಸಿಕೊಂಡು, ಉತ್ಪಾದಕ ವರ್ಗವನ್ನು ಶೋಷಿಸುತ್ತಾ, ಅನುತ್ಪಾದಕರಾಗಿ ಬಾಳುತ್ತಾ, (ಮಾಡುವವನಿಗೆ ಮೂರು ಕಾಸು; ಹೇಳುವವನಿಗೆ ಏಳು ಕಾಸು) ಮನದಲ್ಲಿ ಮೇಲುಕೀಳು ಎಂಬ ಭೇದವನ್ನಿಟ್ಟುಕೊಂಡಿರುವವರ ವಿಚಾರವಿದೆ. ಇಂತಹವರು ಕೇವಲ ವಸ್ತುಗಳ, ಆಹರಾಸಾಮಗ್ರಿಗಳ ವಿಷಯದಲ್ಲಿ ಅನುತ್ಪಾದಕರಾಗಿರುವುದಿಲ್ಲ; ವಿಚಾರದ ವಿಷಯದಲ್ಲೂ ಉತ್ಪಾದಕತೆಯನ್ನು ವಿರೋಧಿಸುತ್ತಾರೆ. ವಿಚಾರ ಬೆಳೆದರೆ ಅವಿಚಾರಿಗಳಿಗೆ ಭಯ!”]
        ಒಬ್ಬನ ತಂದೆ-ತಾಯಿ ಕಾಯಕಜೀವಿಗಳಾಗಿದ್ದರು..ಹೊಲ-ಗದ್ದೆ ಮಾಡಿಕೊಂಡು, ಮೈಮುರಿದು ದುಡಿದು ತಿನ್ನುತ್ತಿದ್ದರು … ಈಗ ಮಗ ಕಲಿತು ಬುದ್ಧಿ ಬಲದಿಂದಲೇ ಬದುಕು ನಡೆಸಿದ್ದಾನೆ,.ಶೋಷಿತರ ಬಗ್ಗೆ ಭರ್ಜರಿ ಭಾಷಣ ಮಾಡ್ತಾನೆ, ಬುಕ್ಕು ಕೂಡ ಬರೀತಾನೆ, ಮೈಮುರಿದು ದುಡಿಯುವುದು ಕನಸಿನಲ್ಲಿ ಮಾತ್ರ ಎಂದುಕೊಳ್ಳೋಣ. ಈಗ ಹೇಳಿ ಈ ಮಗ ಯಾವ ವರ್ಗ? ಕಾಯಕ ವರ್ಗವೊ? ಅಥವಾ
        ರಾಮಚಂದ್ರ ಭಟ್ಟರು ಮತ್ತು ಅವರೊಬ್ಬ ಮಗ ಉತ್ತರಕನ್ನಡದ ಯಾವುದೋ ಕಾಡಿನಂಚಿನಲ್ಲಿ ೨ ಎಕರೆ ತೋಟ ಮಾಡಿಕೊಂಡು ದಿನವಿಡೀ ಕೆಲಸಮಾಡಿ ಬದಕುತ್ತಿದ್ದಾರೆ. ಅವರು ಯಾವ ವರ್ಗ?ಕಾಯಕ ವರ್ಗವೊ? ಅಥವಾ
        ಇನ್ನೊಂದು ವರ್ತಮಾನದ ಉದಾಹರಣೆಯನ್ನೇ ತೆಗೆದುಕೊಳ್ಳೊಣ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಅಭ್ಯರ್ಥಿಯೋರ್ವರಿಗೆ ಮೌಖಿಕ ಸಂದರ್ಶನದಲ್ಲಿ ಬೇಕೆಂದೆ ಕಡಿಮೆ ಅಂಕ ನೀಡಿ ಸಿಗಬೇಕಾಗಿದ್ದ ಸ್ಥಾನ ತಪ್ಪಿಸಲಾಯಿತು. ಈಗ ಹೇಳಿ ಕೆ.ಪಿ.ಎಸ್,ಸಿ ಆಯೋಗದ ಅಧ್ಯಕ್ಷರು ಬ್ರಾಹ್ಮಣರಾಗಿದ್ದರೆ?
        ವಚನದ ಮರು ಓದನ್ನು ಮಾಡೋಣ ಎಂದವರು, ಇನ್ನೊಂದು ದೃಷ್ಟಿಕೋನದಿಂದ ನೋಡಿದವರು, ವಚನಗಳು ಜಾತಿವಿರೋಧದ ಒಂದೇ ಆಶಯದಿಂದ ಹುಟ್ಟಿದವಲ್ಲ ಎನ್ನುವುದನ್ನು ತೋರಿಸ ಹೊರಟವರು ವಿಚಾರದ ಉತ್ಪಾದಕರೊ? ಅಥವಾ ತಾವು ಹೇಳಿದ್ದೇ ಪರಮ ಸತ್ಯ ಎಂದು ದಂಡೆತ್ತಿ(?) ಬಂದವರ ಮೇಲೆ ಯುದ್ಧ ಮಾಡೋಣ ಎನ್ನುವವರೊ?
        ಸತ್ಯ ಶೋಧನೆ ಅಂದರೆ ಕೆಲವು ‘ವಿಚಾರ’ವಂತರಿಗೆ ಭಯ!

        ಪ್ರತಿಕ್ರಿಯೆ
        • Ramjan Darga

          ಓದಿ ಬ್ರಾಹ್ಮಣರಾದ ಶೂದ್ರರು ನಿಮ್ಮ ಮಾತಿಗೆ ಕಿವಿ ಕೊಡಲಿ. ಬ್ರಾಹ್ಮಣಿಕೆಯಿಂದ ಹೊರ ಬರಲಿ. ಶೂದ್ರರ ದುಡಿಮೆಯ ಸಂಸ್ಕೃತಿ ಮಾನವತಾವಾದದ ಮೇಲೆ ನಿಂತಿದೆ ಹೊರತಾಗಿ ಜಾತಿಗಳ ಮೇಲೆ ನಿಂತಿಲ್ಲ ಎಂಬುದನ್ನು ಸಿದ್ಧಪಡಿಸಲಿ. “ಶೂದ್ರರು ಈ ಜಗತ್ತನ್ನು ಆಳಬೇಕು” ಎಂದು ವಿವೇಕಾನಂದರು ಹೇಳಿದ್ದಾರೆ. ಆ ಕಡೆ ಗಮನ ಹರಿಸಲಿ. ಬ್ರಾಹ್ಮಣೀಕರಣಕ್ಕೆ ಒಳಗಾಗದೆ ಮಾನವೀಕರಣಕ್ಕೆ ಒಳಗಾಗಲಿ.ಎಲ್ಲ ಬಡ ಮತ್ತು ದುಡಿಯುವ ವರ್ಗದ ಬ್ರಾಹ್ಮಣರು ಮತ್ತು ಶೂದ್ರರು ಒಂದಾಗಿ ಮಾನವಧರ್ಮವನ್ನು ಎತ್ತಿ ಹಿಡಿಯಲಿ. ಬಸವಣ್ಣನವರ ಕನಸುಗಳು ನನಸಾಗಲಿ.

          ಪ್ರತಿಕ್ರಿಯೆ
        • Ramjan Darga

          ವಿಜಯ್ ಅವರೆ ವೇದವನೋದಿ ಬ್ರಾಹ್ಮಣನಾದ ಎಂದು ಬಸವಣ್ಣನವರು ಹೇಳುತ್ತಾರೆ. ಓದಿನ ಮೇಲೆ ಬದುಕುತ್ತಿರುವ ನಾವು ಕೂಡ ಒಂದು ದೃಷ್ಟಿಯಿಂದ ಶ್ರಮಜೀವಿಗಳ ಮೇಲೆ ಬದುಕುವವರೇ ಆಗಿದ್ದೇವೆ. ದಲಿತ, ಮುಸ್ಲಿಂ, ಲಿಂಗಾಯತ ಮತ್ತು ಗೌಡ ಅಧಿಕಾರಿಗಳಿಗಿಂತಲೂ ನೀವು ಹೇಳುವ ರಾಮಚಂದ್ರ ಭಟ್ಟರು ಮತ್ತು ಅವರ ಮಗ ನನಗೆ ಹೆಚ್ಚು ಸಮೀಪದವರಾಗುತ್ತಾರೆ. ಹೋರಾಟದ ಪ್ರಸಂಗ ಬಂದಾಗ ನಾನು ಖಂಡಿತವಾಗಿಯೂ ಅವರ ಜೊತೆ ಇರುತ್ತೇನೆ. ಇದಕ್ಕೇ ಹೇಳೋದು ವರ್ಗಪ್ರಜ್ಞೆ ಎಂದು. ಜಾತಿ ಕುರುಹುಗಳನ್ನು ಕಳೆದುಕೊಂಡು ದುಡಿಯುವ ವರ್ಗ ಒಂದಾಗಬೇಕು ಎಂಬುದೇ ನನ್ನ ಆಶಯವಾಗಿದೆ.
          ಬಡ ಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
          ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
          ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
          ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
          ನಾನಾ ಹಂಗಿನವನಲ್ಲ ನಿಮ್ಮ ಶರಣರ ಹಂಗಿನವನಯ್ಯಾ
          ಕೂಡಲಸಂಗಮದೇವಾ.
          ಎಂದು ಬಸವಣ್ಣವರು ಹೇಳಿದ್ದಾರೆ. ಭಕ್ತನಾಗುವುದೆಂದರೆ ಜಾತಿ ಮತ್ತು ಕುಲಗೋತ್ರಗಳಿಲ್ಲದ ಲಿಂಗವಂತ ಧರ್ಮವನ್ನು ಸ್ವೀಕರಿಸುವುದು. ಹಾಗೆ ಸ್ವೀಕರಿಸಿದರೂ ವಿವಿಧ ಮೂಲಗಳಿಂದ ಬಂದ ಕೆಲವರು ತಮ್ಮ ಪೂರ್ವಾಶ್ರಮದ ಹಂಗಿನಿಂದ ಹೊರ ಬರಲಿಲ್ಲ ಎಂದು ಬಸವಣ್ಣನವರು ತಿಳಿಸಿದ್ದಾರೆ. ನಾನು ಬ್ರಾಹ್ಮಣ್ಯದ ಹಂಗಿನವನಲ್ಲ ನಿಮ್ಮ ಶರಣರ ಹಂಗಿನವ (ಹೊಸ ಜೀವನಕ್ರಮಕ್ಕೆ ಒಳಗಾದವ) ಎಂದು ಬಸವಣ್ಣನವರು ಸ್ವಷ್ಟಪಡಿಸಿದ್ದಾರೆ. ಹೀಗೆ ಸರ್ವಸಮತ್ವವನ್ನು ಸಾಧಿಸುವುದೇ ಬಸವಣ್ಣನವರ ಉದ್ದೇಶವಾಗಿತ್ತು. ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸದೆ ಸಮತ್ವವನ್ನು ಸಾಧಿಸಲಿಕ್ಕಾಗದು. ಜಾತಿ, ಮತ, ಕುಲ, ಗೋತ್ರಗಳನ್ನು ಪರಿಗಣಿಸುತ್ತ ಕುಳಿತರೆ ದುಡಿಯುವ ವರ್ಗವನ್ನು ಒಂದುಗೂಡಿಸಲಿಕ್ಕಾಗದು. ಶ್ರಮಜೀವಿಗಳಾದ ರಾಮಚಂದ್ರ ಭಟ್ಟರು, ಇಮಾಮ ಸಾಹೇಬರು, ಬೋರೆಗೌಡರು, ಶಿವಪ್ಪನವರು ಮತ್ತು ಸಂಬೋಳಿ ನಾಗಪ್ಪನವರಿಗೆ ನ್ಯಾಯ ಒದಗಿಸಲಿಕ್ಕಾಗದು.

          ಪ್ರತಿಕ್ರಿಯೆ
          • Amaresh

            “ಹಸಿವಾದರೆ ಊರೊಳಗೆ ಭಿಕ್ಷಾನ್ನಗಳುಂಟು” ಅಂತ ಅಕ್ಕ ಮಹಾದೇವಿ ಹೇಳಿದ್ದಾರೆ. ಭಿಕ್ಷಾನ್ನ ಪಡೆಯುವುದು ಶ್ರಮಜೀವಿಗಳ ಲಕ್ಷಣವೇ ದರ್ಗಾ?
            “ನಮಗೆ ನಮ್ಮ ಲಿಂಗದ ಚಿಂತೆ
            ನಮಗೆ ನಮ್ಮ ಭಕ್ತರ ಚಿಂತೆ, ಮನಗೆ ನಮ್ಮ ಆದ್ಯರ ಚಿಂತೆ
            ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನನ ಚಿಂತೆಯಲ್ಲದೆ
            ಲೋಕದ ಮಾತು ನಮಗೇಕಣ್ಣ?”
            ಅಂತ ಕೂಡ ಅಕ್ಕ ಮಹಾದೇವಿ ಹೇಳಿದ್ದಾರೆ. ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸುವ ಉದ್ದೇಶವುಳ್ಳವರು ಹೀಗೆ ಹೇಳಲು ಸಾಧ್ಯವೇ?

      • Ramjan Darga

        ಎಲ್ಲದಕ್ಕೂ ಬ್ರಾಹ್ಮಣರೇ ಕಾರಣ ಎಂದು ಹೇಳುವುದು ಅನಾಗರಿಕವಾಗುತ್ತದೆ. ಯಾರೂ ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ‘ಬ್ರಾಹ್ಮಣ್ಯ’ಎಂಬುದನ್ನು ಅಬ್ರಾಹ್ಮಣರೂ ರೂಢಿಸಿಕೊಂಡಿದ್ದಾರೆ. ಆ ಚಿಂತನಾ ಕ್ರಮ ಜಾತೀಯತೆಯಿಂದ ಕೂಡಿದೆ. ಭಾರತದ ಶೇಕಡಾ 99.99ರಷ್ಟು ಹಿಂದುಗಳು ಈ ಜಾತಿರೋಗಕ್ಕೆ ಬಲಿಯಾಗಿದ್ದಾರೆ. ಭಾರತದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರಲ್ಲಿ ಕೆಲವರು ಅಂತಸ್ತಿನ ಭ್ರಮೆಯಲ್ಲಿ ತಮ್ಮ ಧರ್ಮಗಳಲ್ಲಿ ವ್ಯತ್ಯಾಸವನ್ನು ಸೃಷ್ಟಿಸಿದ್ದಾರೆ. ಕರ್ಮಠ ಮುಸ್ಲಿಮರು ಚಪ್ಪರಬಂದ್,ನಾಲಬಂದ್, ಕಸಾಯಿ, ಪಿಂಜಾರ ಮುಂತಾದ ಕಾಯಕ ಜೀವಿಗಳನ್ನು ನೋಡುವ ಕ್ರಮ ಮನುವಾದದಿಂದ ಹೊರತಾಗಿಲ್ಲ. ನಾನು ಬಯಸುತ್ತಿರುವುದು ಈ ಎಲ್ಲ ಅನಿಷ್ಟಗಳಿಂದ ಮುಕ್ತವಾದ ಸುಂದರ ಭಾರತವನ್ನು.

        ಪ್ರತಿಕ್ರಿಯೆ
      • Ramjan Darga

        ಒಂದು ವೇಳೆ ನೀವು ಜಾತಿಭೇದ, ವರ್ಣಭೇದ, ವರ್ಗಭೇದ ಮತ್ತು ಲಿಂಗಭೇದದ ವಿರುದ್ದ ಹೋರಾಡಲು ಸಿದ್ಧವಾದರೆ ಆ ಧರ್ಮ ನಿಮ್ಮಲ್ಲೇ ಸೃಷ್ಟಿಯಾಗುವುದು.

        ಪ್ರತಿಕ್ರಿಯೆ
        • Anonymous

          “ಕವಿ ಜಾನೀಹಿ ಆರ್ಯಾನ್ ಯೇ ಚ ದಸ್ಯವಃ
          ಬರ್ಹಿಷ್ಮತೆ ರಂಧಯ ಶಾಸತ್ ಅವ್ರತಾನ್!
          ಶಾಕೀಭವ ಯಜಮಾನಸ್ಯ ಚೋದಿತಾ ವಿಶ್ವಾ
          ಇತ್ ತಾ ತೇ ಸಧಮಾದೇಷು ಚಾಕನ! (ಋಗ್ವೇದ)
          (ಎಲ್ಲ ಕಡೆಗಳಿಂದಲೂ ನಾವು ದಸ್ಯುಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ. ಅವರು ಯಜ್ಞಗಳನ್ನು ಮಾಡುವುದಿಲ್ಲ. ಅವರು ನಾಸ್ತಿಕರು. ಅವರ ಆಚರಣೆಗಳೆಲ್ಲ ಭಿನ್ನ. ಅವರು ಮನುಷ್ಯರೇ ಅಲ್ಲ. ಓ ಶತ್ರುಹಂತಕನೇ ಅವರನ್ನು ಕೊಲ್ಲು. ದಾಸ ಜನಾಂಗವನ್ನು ನಾಶಮಾಡು.) ಹೀಗೆ ಶೂದ್ರರನ್ನು ಮನುಷ್ಯರೆಂದು ಪರಿಗಣಿಸದೆ ಇರುವುದರಿಂದ ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬುದು ಮೇಲಿನ ಮೂರು ವರ್ಣಗಳ ಸವರ್ಣೀಯರಿಗೇ ಸಂಬಂಧಿಸಿದುದಾಗಿದೆ.ದಸ್ಯು ಮೊದಲಾದ ಶೂದ್ರರು ಬಹುಜನರಾಗಿದ್ದರಿಂದಲೇ ಭಗವಾನ ಬುದ್ಧ ‘ಬಹುಜನ ಸುಖಾಯ, ಬಹುಜನ ಹಿತಾಯ’ಎಂದು ಹೇಳಿದರು. ವೈದಿಕರ ಮಾನವೀಯತೆಯಲ್ಲಿ ಶೂದ್ರರು ಮತ್ತು ಪಂಚಮರಿಗೆ ಸ್ಥಾನವೇ ಇಲ್ಲ.

          ಪ್ರತಿಕ್ರಿಯೆ
  2. ಸಹನಾ

    @Satyanarayana BR
    ವೈರುದ್ಯದ ಸ್ಯಾಂಪಲ್,
    ????
    ಇದು ದರ್ಗಾರ ವಾದಕ್ಕೆ (ಉಪನಿಷತ್ತನ್ನು ಹೊರತುಪಡಿಸಿ) ವಿರುದ್ದ.

    ಪ್ರತಿಕ್ರಿಯೆ
    • Ramjan Darga

      ವೈರುಧ್ಯ ನಿಮ್ಮ ಆಲೋಚನಾ ಕ್ರಮದಲ್ಲಿದೆ. ನಾವು ಹಿಂದುಗಳಾಗಿ, ಮುಸ್ಲಿಮರಾಗಿ, ಬ್ರಾಹ್ಮಣರಾಗಿ ಜಗತ್ತನ್ನು ನೋಡಬಾರದು. ಕೇವಲ ಮನುಷ್ಯರಾಗಿ ನೋಡಬೇಕು. ಮಾನವ ದುಃಖಕ್ಕೆ ನಿರಂತರವಾಗಿ ಸ್ಪಂದಿಸಬೇಕು. ಅಂದಾಗ ಮಾತ್ರ ಋಗ್ವೇದದ ‘ಮನುರ್ಭವ’ಎಂಬ ಮಹಾಕನಸು ನನಸಾಗುವುದು.

      ಪ್ರತಿಕ್ರಿಯೆ
      • ಸಹನಾ

        ವೈಜ್ಞಾನಿಕ ಅಧ್ಯಯನಕ್ಕೂ ಮಾರಲ್ ಪ್ರೀಚಿಂಗ್ ಮಾಡುವ ಉಪದೇಶಗಳಿಗೂ ವ್ಯತ್ಯಾಸವಿದೆ. ತಮ್ಮ ಈ ರೀತಿಯ ಭಾಷಣ ದಿನನಿತ್ಯ ನಕಲಿ ಸ್ವಾಮೀಜಿಗಳಿಂದ ಹಿಡಿದು ಭ್ರಷ್ಟರಾಜಕಾರಣಿಗಳವರೆಗೂ ಕುಟ್ಟುತ್ತಲೇ ತಮ್ಮ ಬೇಳೆಬೇಯಿಸಿಕೊಳ್ಳುತ್ತಿದ್ದಾರೆ. ಹೌದು “ಎಲ್ಲರೂ ಸ್ವರ್ಗಸುಖದಲ್ಲಿರಬೇಕು ಎನ್ನಲು ಕೆಲವು ಸಮುದಾಯಗಳನ್ನು ಹೀನಾಮಾನವಾಗಿ ಉಗಿದು ತಾನು ಶ್ರಮಿಕರ ಪರ, ಅವರ ಉದ್ದಾರವಾಗಬೇಕು ಎಲ್ಲಾ ರೀತಿಯ ಭಿನ್ನತೆ ತಾರತಮ್ಯಗಳು (ರಿಲಿಜನ್ ಹೊರತುಪಡಿಸಿ ಏಕೋ ಅದೊಂದು ತಮ್ಮ ಗಮನದಿಂದ ತಪ್ಪಿಸಿಕೊಳ್ಳುತ್ತಲೇ ಇದೆ, ಇರಲಿಬಿಡಿ) ಹೋಗಬೇಕು, ಎಲ್ಲರೂ ಸಮಾನರೂ, ಶ್ರಮಿಕರಿಗೆ ಜೈ ಅಂದ ತಕ್ಷಣ ಅದು ಬಂದುಬಿಡುತ್ತದೆ” ಎಂದಾಗಿದ್ದರೆ ಎಲ್ಲರೂ ನಿಮ್ಮ ಜತೆಗೇ ಸೇರಿಕೊಂಡು ಇದೇ ಮಂತ್ರವನ್ನೇ ಪಠಿಸೋಣ ಬಿಡಿ. ಆದರೆ ಇದು ವಾಸ್ತವ ಸಮಸ್ಯೆಗಳನ್ನು ಅವು ಇದ್ದ ಹಾಗೆ ಅರ್ಥಮಾಡಿಕೊಳ್ಳಲು ಬಿಡದ ದೊಡ್ಡ ತಡೆ. ಇರುವ ಎಲ್ಲ ಸಮಸ್ಯೆಗಳಿಗೂ ತಥಾಕಥಿತ ಪುರೋಹಿತಶಾಹಿಗಳ ತಲೆಗೆ ಕಟ್ಟಿ ಪ್ರವಚನ ನೀಡುವುದೇ ಅಧ್ಯಯನವೆಂದಾಗಿಬಿಟ್ಟರೆ ಇರುವ ಸಮಸ್ಯೆಗಳು ಸರಿಯಾಗಿ ಅರ್ಥಮಾಡಿಕೊಂಡು ವಿವರಿಸಬೇಕೆನ್ನುವ ಅವಶ್ಯಕತೆಯೇ ಇಲ್ಲವಾಗಿಬಿಟ್ಟಿದೆ, ಮತ್ತು ಇಲ್ಲವಾಗಿಸಿದ್ದೀರಿ. (ಇದರಿಂದಾಗಿಯೇ ಇಲ್ಲಿಯ ಯಾವುದೇ ಮನೆಗೆ ಬೆಂಕಿಬಿದ್ದರೂ ಕ್ಯಾಲಿಫೋರ್ನಿಯಾದಲ್ಲಿಯೇ ಕುಳಿತು ಅದರ ಕಾರಣಗಳನ್ನು ತಲೆಗೆ ಹೊಡೆದಂತೆ ಹೇಳುವಂತ ಮಹಾನ್ ಚಿಂತಕರು ಹುಟ್ಟಿಕೊಂಡುಬಿಟ್ಟಿದ್ದಾರೆ.

        ಪ್ರತಿಕ್ರಿಯೆ
        • Ramjan Darga

          ನೇರವಾಗಿ ವಿಷಯಕ್ಕೆ ಬರದ ನಿಮ್ಮ ಈ ಗೊಣಗಾಟ ನನಗೆ ಅರ್ಥವೇ ಆಗುತ್ತಿಲ್ಲ.

          ಪ್ರತಿಕ್ರಿಯೆ
  3. ಸಹನಾ

    @Satyanarayana BR
    ವೈರುದ್ಯದ ಸ್ಯಾಂಪಲ್,
    -ಜಾತಿ ಎಂಬುದು ಹುಟ್ಟಿನಿಂದ ಬರುವುದಿಲ್ಲ. ಹುಟ್ಟಿನಿಂದ ಯಾವ ಜಾತಿಯವನಾದರೂ,-????
    -ವಚನಕಾರರಿಗೆ ಶುದ್ಧ ಸತ್ಯ(ಋತ)ವನ್ನು ಪ್ರತಿಪಾದಿಸುವ ವೇದೋಪನಿಷತ್ತಿನ ಬಗ್ಗೆ ತಕರಾರು ಇರಲಿಲ್ಲ.- ಇದು ದರ್ಗಾರ ವಾದಕ್ಕೆ (ಉಪನಿಷತ್ತನ್ನು ಹೊರತುಪಡಿಸಿ) ವಿರುದ್ದ.

    ಪ್ರತಿಕ್ರಿಯೆ
    • Ramjan Darga

      ಋಗ್ವೇದ “ಮನುರ್ಭವ” (ಮನುಷ್ಯರಾಗಿರಿ) ಎಂದು ಹೇಳುತ್ತದೆ. ಬ್ರಾಹ್ಮಣರಾಗಿರಿ, ಶೂದ್ರರಾಗಿರಿ ಎಂದು ಹೇಳಿದೆಯೆ?
      “ಏಕಂ ಸತ್ ವಿಪ್ರಾಃ ಬಹುಧಾ ವದಂತಿ” (ಸತ್ಯ ಒಂದೇ ಇದೆ. ಆದರೆ ಜ್ಞಾನಿಗಳು ಬೇರೆ ಬೇರೆ ರೀತಿಯಲ್ಲಿ ವಿವರಿಸಿದ್ದಾರೆ), “ಆನೋ ಭದ್ರಾಃ ಕೃತವೋ ಯಂತು ವಿಶ್ವತಃ” (ಉದಾತ್ತ ವಿಚಾರಗಳು ನಮಗೆ ಎಲ್ಲೆಡೆಯಿಂದ ಬರಲಿ), “ಯತ್ರ ವಿಶ್ವಂ ಭವತಿ ಏಕ ನೀಡಂ” (ಇಡೀ ವಿಶ್ವವೇ ಒಂದು ಗೂಡಾಗಿದೆ), ವಸುಧೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ)
      ಇಂಥ ವಿಚಾರಗಳು ಯಾರಿಗೆ ಬೇಡ? ಆದರೆ ನಡೆ ನುಡಿಯಲ್ಲಿ ಸಂಬಂಧವಿಲ್ಲದೆ ಮನುವಾದಿಗಳು ಬಹುಜನರ ಶೋಷಣೆ ಕಾರಣವಾಗಿದ್ದಾರೆ. ಜಾತಿ, ಧರ್ಮಗಳ ಹೆಸರಲ್ಲಿ ದೇಶ ಆಳಿದವರು ಕೂಡ ಮನುವಾದಿಗಳೇ. ಮೇಲೆ ಹೇಳಿದ ಮಾತುಗಳು ಆಚರಣೆಯಲ್ಲಿದ್ದರೆ ಶಂಭೂಕನ ವಧೆ ಆಗುತ್ತಿತ್ತೆ? ಏಕಲವ್ಯನ ಬೆರಳು ಹೋಗುತ್ತಿತ್ತೆ? ಚಾಲ್ತಿಯಲ್ಲಿರುವ ವೈದಿಕ ಪ್ರಜ್ಞೆ ಮನುವಾದದಿಂದ ಕೂಡಿದ್ದು ಅತ್ಯಂತ ಅಪಾಯಕಾರಿಯಾಗಿದೆ. ಅವೈದಿಕರು ಇದಕ್ಕೆ ಬಲಿಯಾಗಿದ್ದಾರೆ. ಅಂತೆಯೆ ಅವರೆಂದೂ ಒಗ್ಗಟ್ಟಾಗಲಿಲ್ಲ. ತಮ್ಮೊಳಗೇ ಜಾತಿಭೇದ ಮಾಡುವಷ್ಟು ಹಾಳಾಗಿ ಹೋಗಿದ್ದಾರೆ. ಅವರು ಶೂದ್ರ ವರ್ಣವಾಗಿ ಉಳಿದಿದ್ದರೆ ಇಲ್ಲಿಯ ವರೆಗೆ ಮನುವಾದ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಅಸ್ಪೃಶ್ಯರಲ್ಲಿ ಕೂಡ ಜಾತಿಭೇದ ಇರುವುದಕ್ಕೆ ಮನುವಾದವೇ ಕಾರಣ. ಲಿಂಗಾಯತರು ಅನ್ನಿಸಿಕೊಳ್ಳುವ ಅನೇಕರು ತಮ್ಮ ಧರ್ಮಕ್ಕೆ ವಿರುದ್ಧವಾದ ಹೋಮ ಹವನ ಮಾಡಿಸುತ್ತಾರೆ. ಪಂಚಾಂಗ ಕೇಳುತ್ತಾರೆ. ಗುಡಿ ಗುಂಡಾರಗಳನ್ನು ಸುತ್ತುತ್ತಾರೆ. ಮೂರ್ತಿಪೂಜೆ ಮಾಡುತ್ತಾರೆ. ಸ್ಥಾವರಲಿಂಗ ಪೂಜಿಸುತ್ತಾರೆ.ಜಾತಿಭೇದವನ್ನೂ ಮಾಡುತ್ತಾರೆ. ಇಂಥವರ ತಲೆಯಲ್ಲಿ ಕೂಡ ಮನು ಮನೆ ಮಾಡಿಕೊಂಡಿದ್ದಾನೆ. ಪ್ರಜ್ಞಾವಂತ ಲಿಂಗಾಯತರು ತಮ್ಮ ಸಮಾಜದಲ್ಲಿನ ಈ ಅನಿಷ್ಟ ಬೆಳವಣಿಗೆ ಕುರಿತು ಮಾತನಾಡುತ್ತಿರುವುದು ಆರೋಗ್ಯಕರ ಲಕ್ಷಣವಾಗಿದೆ. ಬ್ರಾಹ್ಮಣ ಮೂಲದಿಂದ ಬಂದ ಬಸವಣ್ಣನವರ ಅರಿವು ಆಚಾರದಿಂದ ಕೂಡಿದ ಬದುಕನ್ನು ಆದರ್ಶವಾಗಿಟ್ಟುಕೊಂಡು ಬ್ರಾಹ್ಮಣರು ಕೂಡ ಕಾರ್ಯಪ್ರವೃತ್ತರಾದರೆ ದೇಶ ವರ್ಣ, ಕುಲ, ಜಾತಿ ಮತ್ತು ಅಸ್ಪೃಸ್ಯತೆಯಿಂದ ಮುಕ್ತವಾಗಿ ಸುಂದರ ಸಮಾಜ ನಿರ್ಮಾಣವಾಗುವುದು.

      ಪ್ರತಿಕ್ರಿಯೆ
  4. ಅನ್ನಪೂರ್ಣ

    ೦) ಪ್ರಿಯ ಸತ್ಯನಾರಾಯಣ (ಹಾಗೂ ರಂಜಾನ್ ದರ್ಗಾ), ನಾನು ತಮಗೆ ಮೂರನೇ ಭಾಗದ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದೆ. ನಾನು ಕೇಳಿದ ಪ್ರಶ್ನೆಗಳನ್ನು ನೇರವಾಗಿ ಎದುರಿಸುವ ಬದಲು ನನ್ನ ಮೇಲೆ ವಿನಾ ಕಾರಣ “ಜಾತಿ, ಅಸ್ಪೃಶ್ಯತೆ, ಹೊಲೆತನ ಇವೆಲ್ಲವೂ ಹುಟ್ಟಿನಿಂದಲೇ ಬರುತ್ತದೆ, ಜನ್ಮಜನ್ಮಾಂತರದಲ್ಲೂ ಹಾಗೇ ಇರುತ್ತದೆ (ನಿತ್ಯನಾರಕಿಗಳು), ನಾನು ಮೇಲು ನೀನು ಕೀಳು ಎಂಬ ಪಾರಂಪರಿಕ ನಂಬಿಕೆಯ ನೆಲೆಗಟ್ಟಿನಲ್ಲಿ ನೋಡುವವರ ಮನೋಭಾವದ ಸಂಕೇತದಂತೆ ಅನ್ನಪೂರ್ಣ ಅವರು ಮೇಲಿಂದ ಮೇಲೆ ಪ್ರತಿಕ್ರಿಯಿಸಿದ್ದಾರೆ. ಜಾತಿ ಎಂಬುದೇ ನಿತ್ಯಸತ್ಯ, ಸಾರ್ವಕಾಲಿಕ ಎಂದು ಅವರು ಭಾವಿಸಿದಂತಿದೆ” ಅಂತೆಲ್ಲ ನಾನು ಹೇಳದೆ ಇದ್ದದ್ದನ್ನು ನನ್ನ ಮೇಲೆ ಆರೋಪಿಸಿದ್ದೀರಿ. ಇದು ಸರಿಯಾದ ಸಂವಾದ ಕ್ರಮವಲ್ಲ. ಇರಲಿ.
    ೧) “ಅವರು ಜಾತಿ ಮೀರಿದ್ದರೂ ಜಾತಿಸೂಚಕ ಪದಗಳನ್ನು ತಮ್ಮ ಹೆಸರಿನ ಜೊತೆ ಇಟ್ಟುಕೊಂಡಿದ್ದರಿಂದ, ಜಾತಿವ್ಯವಸ್ಥೆಯನ್ನು ಅವರು ಬೆಂಬಲಿಸುತ್ತಾರೆ ಎಂದು ಸೂಚಿಸುವುದಿಲ್ಲ” ಅಂತ ಹೇಳಿದ್ದೀರಿ. ಜಾತಿಸೂಚಕ ಪದಗಳನ್ನು ತಮ್ಮ ಹೆಸರಿನ ಜೊತೆ ಇಟ್ಟುಕೊಳ್ಳುವ ಅನಿವಾರ್ಯತೆ ಅಥವಾ ಅಗತ್ಯ, ಅದೂ ಬಸವಣ್ಣನವರ ಜೊತೆ ಸೇರಿ ಶರಣರಾಗಿ ಜಾತಿವಿರೋಧಿ ಚಳುವಳಿಯ ಹರಿಕಾರರಾದ ಮೇಲೆ, ಏನಿತ್ತು ಅಂತ ಸ್ವಲ್ಪ ಹೇಳಿ.
    ೨) ತಾವು ಹೇಳಿದಂತೆ ವರ್ಣ ಎಂಬುದು ಅಕ್ಷರವನ್ನೇ ಆ ವಚನದಲ್ಲಿ ಸೂಚಿಸುತ್ತಿದೆ ಎಂದು ಭಾವಿಸೋಣ. ಆಗ ಆ ವಚನಕ್ಕೆ ಜಾತಿವಿರೋಧದ ಸಂದರ್ಭದಲ್ಲಿ ಇರುವ ಮಹತ್ವ ಹೋಗುತ್ತದೆಯಲ್ಲ! ಇದಕ್ಕೆನಂತೀರಿ? [ತಮಗೆ ಬೇಕಾದ ಹಾಗೆತಾವು ವಚನಗಳನ್ನು ಅರ್ಥೈಸುವುದರಿಂದಲೇ ಈ ರೀತಿ contradictions ಹುಟ್ಟುತ್ತವೆ. ಅದನ್ನು ನಾನು ಎತ್ತಿ ತೋರಿಸಿದರೆ ನನ್ನ ಮೇಲೆ ಏನೇನೋ ಹೇಳಿ ವಿಷಯ ಮರೆಮಾಚುತ್ತೀರಿ! ]
    ೩) “ವಚನಕಾರರಿಗೆ ಶುದ್ಧ ಸತ್ಯ(ಋತ)ವನ್ನು ಪ್ರತಿಪಾದಿಸುವ ವೇದೋಪನಿಷತ್ತಿನ ಬಗ್ಗೆ ತಕರಾರು ಇರಲಿಲ್ಲ” ಒಹೋ! ರಂಜಾನ್ ದರ್ಗಾ ಅವರು ತಮ್ಮ ಅಭಿಪ್ರಾಯವನ್ನು ಒಪ್ಪುವುದು ಅನುಮಾನ. ಅವರು ವೇದಗಳ ಬಗ್ಗೆ ಏನನ್ನು ಹೇಳಿದ್ದಾರೆ ಎಂಬುದನ್ನು ನೋಡಿದ್ದೀರಾ ತಾವು?
    ೪) “ಸಹಜೀವಿಗಳನ್ನು ಶೋಷಣೆ ಮಾಡಿಕೊಂಡಿದ್ದ ಶ್ರೇಷ್ಟತೆಯವ್ಯಸನಿಗಳಿಗೆ ಅವರ ವಿರೋಧ” ಸಹಜೀವಿಗಳನ್ನು ಶೋಶಿಸಿದ್ದಾರೆ ಅಂತ ವಚನಕಾರರು ಎಲ್ಲಿ ಹೇಳಿದ್ದಾರೆ? ದಯವಿಟ್ಟು ವಚನಗಳನ್ನು ಉಲ್ಲೇಖಿಸುವ ಮೂಲಕ ತಮ್ಮ ಮೇಲಿನ ಆಪಾದನೆಗೆ ಆಧಾರ ಒದಗಿಸಿ. ಇನ್ನು ಶ್ರೇಷ್ಟತೆಯ ವ್ಯಸನ ಎಲ್ಲರಿಗೂ ಇದೆ. ವಚನಕಾರರಿಗಿಲ್ಲ ಅಂತ ಹೇಗೆ ಹೇಳುವುದು? ವಿಪ್ರರನ್ನು ಆ ಪಾಟಿ condemn ಮಾಡಿ ಶರಣರ ವೈಭವೀಕರಣ ಮಾಡಿರುವ ವಚನಗಲಿಲ್ಲವೇ?!!
    ೫) “ಬಡಹಾರುವ ಎಂದರೆ, ನೀವು ಇಂದಿನ ಮಾರುಕಟ್ಟೆ ಲೆಕ್ಕಾಚಾರದಲ್ಲಿ, ದುಡ್ಡುಕಾಸಿನ ಲೆಕ್ಕಾಚಾರದಲ್ಲಿ ಏಕೆ ನೋಡುತ್ತೀರಿ. ಬಡಹಾರುವನೆಂದರೆ, ವಿಚಾರದಲ್ಲಿ ಬಡವನಾದವನು, ಮೂಢಮತಿ ಎಂದೂ ಅರ್ಥವಾಗುತ್ತದೆ ಅಲ್ಲವೆ?” [ಬಡವ ಅನ್ನುವ ಪದಕ್ಕೆ ಮೂಢಮತಿ ಎಂಬ ಅರ್ಥವೂ ಇದೆ ಎಂದು ನನಗೆ ತಿಳಿದಿರಲಿಲ್ಲ. “ಅಯ್ಯೋ ಪಾಪ ಬಡವ” ಎಂಬ ಮಾತು ಸಹಾನುಭೂತಿ ಉಳ್ಳದ್ದು ಎಂದೇ ತಿಳಿದಿದ್ದೆ, ಅದು ನಿಂದನಾತ್ಮಕ/ಲೇವಡಿ ಇರಬಹುದು ಅಂತ ಊಹಿಸಿರಲಿಲ್ಲ!] ಸರಿ, ಹಾರುವರರೆಲ್ಲರೂ ವಚನಕಾರರ ಪ್ರಕಾರ ಮೂಢಮತಿಗಳೇ ಅಲ್ಲವೇ! ಹಾಗಾದರೆ ಬಡಹಾರುವ ಅಂತ ಹೇಳುವ ಅಗತ್ಯವೇನಿತ್ತು ಬಸವಣ್ಣನವರಿಗೆ?
    ೫)

    ಪ್ರತಿಕ್ರಿಯೆ
  5. Umesh

    Ramjaan Darga has not replied to any of the pertinent questions raised by Annapurna. Probably he will not because his analysis and conclusions are faulty. For example, he says lingavantas are separate minority religion. I would like to ask him one question, from where did the mantra “om namah shivaya” which is the sacred mantra of lingayats came from? From Vedas, is it not? So how can it be a separate religion? Hinduism is like a big banyan tree under which various branches of interpretations (not religions) have sprung up and it has protected all of them as a mother protects its children. So please do not try to divide the society by your ill conceived ideas, instead look for synthesis.
    If you read revered Sri.M.R.Srinivasa murthy’s book “Vachana Dharmasaara” your false marxist based intepretations will melt away like the butter exposed to the Sun. By the way Sri. M.R.Srinivasa Murthy was honoured by various lingayat mathadhipathis for his devotion and honest and correct interpretation of Shaiva Siddantha.

    ಪ್ರತಿಕ್ರಿಯೆ
    • Ramjan Darga

      ಉಮೇಶ ಅವರೇ ವೇದಗಳಲ್ಲಿ ಶಿವ ಶಬ್ದ ಬಳಕೆಯಾಗಿಲ್ಲ. ಏಕೆಂದರೆ ಶಿವ ಶಬ್ದದ ಮೂಲ ಸಂಸ್ಕೃತವಲ್ಲ. ದ್ರವಿಡ ಭಾಷೆಯ ಚಿವ ಶಬ್ದ ‘ಶಿವ’ದ ಮೂಲವಾಗಿದೆ. ನಂತರದ ದಿನಗಳಲ್ಲಿ ಶಿವ ಶಬ್ದ ಸಂಸ್ಕೃತ ಭಾಷೆಯಲ್ಲಿ ಸೇರ್ಪಡೆಯಾಯಿತು. ಒಂದು ಶಬ್ದ ಅಥವಾ ವಾಕ್ಯದಿಂದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎನ್ನುವುದನ್ನು ಅಲ್ಲಗಳೆಯಲಿಕ್ಕಾಗದು. ಸಿಖ್ ಧರ್ಮದ ಮಹಾವಾಕ್ಯ ‘ಏಕ್ ಓಂಕಾರ್’ ಎಂದಿದೆ. ಏಕ್ ಎಂದರೆ ಒಬ್ಬನೇ ದೇವರು. ಓಂಕಾರ್ ಎಂದರೆ ಆ ದೇವನಿಂದ ಸೃಷ್ಟಿಯಾದ ವಿಶ್ವ. ಈಗ ಹೇಳಿ ಓಂ ಬಳಸಿದ ಮತ್ತು ವೈದಿಕರ ಹೆಸರುಗಳನ್ನೇ ಹೊಂದಿರುವ ಸಿಖ್ ಧರ್ಮ ಸ್ವತಂತ್ರ ಧರ್ಮ ಹೌದೊ ಅಲ್ಲವೊ? ಲಿಂಗಾಯತ ಧರ್ಮದಲ್ಲಿ ಮೂರ್ತಿಗಳಿಲ್ಲ, ಸ್ಥಾವರಲಿಂಗಗಳಿಲ್ಲ, ಗುಡಿಗಳಿಲ್ಲ, ಜನಿವಾರ ಇಲ್ಲ, ಯಜ್ಞ ಯಾಗಗಳಿಲ್ಲ, ರುದ್ರಾಭಿಷೇಕಗಳಿಲ್ಲ, ಮಠಗಳಿಲ್ಲ. ಇವೆಲ್ಲ ನಂತರದ ಸೇರ್ಪಡೆ.

      ಪ್ರತಿಕ್ರಿಯೆ
      • Umesh

        ರಂಜಾನ್ ದರ್ಗಾ ಅವರೇ, ವೇದಗಳಲ್ಲಿ ಶಿವ ಶಬ್ದ ಬಳಕೆಯಾಗಿಲ್ಲ ಎನ್ನುವ ನಿಮ್ಮ ಹೇಳಿಕೆ ಸರಿಯಲ್ಲ. ಇಲ್ಲಿ ನೋಡಿ ಶಿವನನ್ನು ಪ್ರಾರ್ಥಿಸಿ ಹೇಳಿರುವ, ಯಜುರ್ವೇದದ ಸಾಲುಗಳನ್ನು, “ನಮಃ ಶಿವಾಯ ಚ ಶಿವತರಾಯ ಚ” {ಎಂಟನೇ ಅನುವಾಕ }. “ಯಾತೇರುದ್ರ ಶಿವಾ ತನುಶಿವ ವಿಶ್ವಾಹಬೇಷಗೀ…”{ಹತ್ತನೇ ಅನುವಾಕ}, “ಮೀಡುಷ್ತಮ ಶಿವತಮ ಶಿವೊನಸುಮನಾಭವ…”{“ಹತ್ತನೇ ಅನುವಾಕ}. ಹೀಗೆ ಬಹಳಷ್ಟು ಉದಾಹರಣೆಗಳನ್ನು ಕೊಡಬಹುದು.
        ಇನ್ನು ಸಿಖ್ ಪಂಥವು ಹಿಂದೂ ಸಂಸ್ಕೃತಿಯ ಭಾಗವೇ ಆಗಿದೆ. ಕೆಲವು ರಾಜಕೀಯ ಕಾರಣಗಳಿಂದ ಬೇರೆ ಅಂತ ಹೇಳಿಕೊಳ್ಳಬಹುದು. ನಮ್ಮ ಸಂವಿದಾನ ಶಿಲ್ಪಿ ಡಾಕ್ಟರ್.ಅಂಬೇಡ್ಕರ್ ಈ ಕೆಳಗಿನ ಎಲ್ಲ ಪಂಥಗಳನ್ನು ಹಿಂದೂ ಕೋಡ್ ಬಿಲ್ ನಲ್ಲಿ ಸೇರಿಸಿದ್ದಾರೆ – ಜೈನ, ಬೌದ್ಧ, ಸಿಖ್. ಈ ಪಂಥಗಳಿಗೆಲ್ಲ ಹಿಂದೂ ಪದ್ಧತಿಯೇ ನಿರ್ಣಾಯಕ ಅಂತ ಸಂವಿಧಾನದಲ್ಲಿ ಹೇಳಿದ್ದಾರೆ. ಹಿಂದೆ ಹಾಗು ಈಗ ಕೂಡ ಸಾಮಾಜಿಕವಾಗಿ ಹಿಂದೂ ಕುಟುಂಬದಲ್ಲಿ ಹುಟ್ಟಿದ ಮೊದಲನೇ ಗಂಡು ಮಗುವನ್ನು ಸಿಖ್ ಪಂಥಕ್ಕೆ ಧಾರೆ ಕೊಡುವ ಸಂಪ್ರದಾಯ ಇದೆ. ಮತ್ತೊಂದು ವಿಚಾರ, ಭಾರತೀಯ ತತ್ತ್ವ ಪರಂಪರೆಯಲ್ಲಿ ರಿಲಿಜನ್ ಎಂಬ ಪರಿಕಲ್ಪನೆ ಇಲ್ಲ. ಪಾಶ್ಚಾತ್ಯ theosophy, ರಿಲಿಜನ್ = ಧರ್ಮ ಎನ್ನುತ್ತದೆ. ಆದರೆ ನಮ್ಮ ಪರಂಪರೆಯಲ್ಲಿ ಧರ್ಮ ಮತ್ತು ರಿಲಿಜನ್ ಒಂದೇ ಅಲ್ಲ.

        ಪ್ರತಿಕ್ರಿಯೆ
        • ಕಟ್ಟಿಮನಿ

          ರಂಜಾನ್ ದರ್ಗಾ ಅವರೇ,
          ಅ) ವೇದಗಳಲ್ಲಿ ಶಿವ ಶಬ್ದದ ಬಳಕೆಯಾಗಿಲ್ಲ ಅಂತೀರಿ, ಉಮೇಶ್ ಅವರು ಪುರಾವೆ ಸಹಿತ ಯಜುರ್ವೇದದಲ್ಲಿ ಆಗಿದೆ ಅಂದಿದ್ದಾರೆ. ನಿಮ್ಮಿಬ್ಬರಲ್ಲಿ ಒಬ್ಬರು ಮಾತ್ರ ನಿಜ ಹೇಳುತ್ತಿದ್ದೀರಿ. ನೀವೋ? ಅಥವಾ ಪುರಾವೆ ಸಹಿತ ವಾದ ಮಾಡುತ್ತಿರುವ ಉಮೇಶ್ ಅವರೋ?
          ಆ) ನೀವು ಸಿಖ್ಕರು ಹಿಂದೂಗಳಲ್ಲ ಅಂತೀರಿ, ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಿಂದೂಗಳು ಅಂದಿದ್ದಾರೆ. ನಿಮ್ಮಿಬ್ಬರಲ್ಲಿ ಒಬ್ಬರು ಮಾತ್ರ ನಿಜ ಹೇಳುತ್ತಿದ್ದೀರಿ. ನೀವೋ? ಅಥವಾ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರೋ?

          ಪ್ರತಿಕ್ರಿಯೆ
        • Anonymous

          ಉಮೇಶ್ ಅವರೆ, ನೀವು ತಿಳಿಸಿದ ಸಾಲುಗಳಲ್ಲಿನ ಶಿವ ಶಬ್ದ ‘ಶುಭಸೂಚಕ’ ಶಬ್ದವಾಗಿದೆ. ‘ಶಿವತರಾಯ’ ಎಂಬುದರಲ್ಲಿನ ‘ತರ’ವು ‘ತರತಮ’ಸೂಚಕವಾಗಿದೆ. ‘ಒಳ್ಳೆಯದಕ್ಕೆ ನಮಸ್ಕರಿಸುವೆ, ಅತಿಒಳ್ಳೆಯದಕ್ಕೆ ನಮಸ್ಕರಿಸುವೆ’ ಎಂಬ ಭಾವವನ್ನು ಅದು ಒಳಗೊಂಡಿದೆ. ನೀವು ಎರಡನೇ ಸಾಲಿನಲ್ಲಿ ಹೇಳಬೇಕೆಂದಿರುವ ‘ಯಾತೇ ರುದ್ರ ಶಿವ ತಮಾಶಿವ ವಿಶ್ವಾಹ ಬೇಷಜೇ’ ರುದ್ರನು ವೈದ್ಯ ದೇವತೆ; ಸರ್ವರಿಗೂ ಆರೋಗ್ಯವನ್ನು ದಯಪಾಲಿಸುವವನು. ಮೂರನೇ ವಾಕ್ಯ ‘ಶಿವೋನಃ ಸುಮನಾಭವ’ ಎಂದಿರಬೇಕು. ‘ನಮ್ಮ ಬಗ್ಗೆ ಒಳ್ಳೆಯ ಮನಸ್ಸುಳ್ಳವನಾಗು’ ಎಂಬ ಅರ್ಥವನ್ನು ಅದು ಸೂಚಿಸುತ್ತದೆ.
          ಸಿಖ್ ಧರ್ಮ ತನ್ನ ನಿಜರೂಪದಲ್ಲಿ ಮತೀಯ ಸೌಹಾರ್ದದ ಸಂಕೇತವಾಗಿದೆ. ಏಕ್ ಓಂಕಾರ್ ತತ್ತ್ವದ ಮೇಲೆ ನಿಂತಿದೆ. ಆ ಧರ್ಮದ ಪರಿಭಾಷೆಯಲ್ಲಿ ಏಕ್ ಅಂದರೆ ಬಸವಣ್ಣನವರು ಹೇಳುವಂತೆ ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣನಾದ ಒಬ್ಬನೇ ದೇವರು. ಒಂಕಾರ್ ಎಂದರೆ ವಿಶ್ವ. ಒಬ್ಬನೇ ದೇವರು, ಒಂದೇ ವಿಶ್ವ ಎಂಬುದು ‘ಏಕ್ ಓಂಕಾರ’ದ ಅರ್ಥ. ಬಹುದೇವತೆಗಳನ್ನು ಆರಾಧಿಸುವ ಮತ್ತು ಸಮುದ್ರಯಾನ ಮಾಡಬಾರದು ಎನ್ನುವ ಧರ್ಮಕ್ಕೂ ಸಿಖ್ ಧರ್ಮಕ್ಕೂ ಸೈದ್ಧಾಂತಿಕ ಸಂಬಂಧ ಹೇಗಾಗುತ್ತದೆ?
          ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಅವರು ಅಕ್ಟೋಬರ್ 1948ರಲ್ಲಿ ಹಿಂದೂ ಕಾನೂನು ಮಸೂದೆ ರೂಪಿಸಿದರು. ಹಿಂದೂ ಮಹಿಳೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗಬೇಕೆಂಬುದು ಅವರ ವಾದವಾಗಿತ್ತು. ಈ ಮಸೂದೆ ಅಲ್ಪಸಂಖ್ಯಾತ ಧರ್ಮಗಳಾದ ಸಿಖ್, ಬೌದ್ಧ ಮತ್ತು ಜೈನ ಧರ್ಮೀಯರನ್ನೂ ಒಳಗೊಂಡಿತ್ತು. ಅವರ ಈ ದೂರದೃಷ್ಟಿಯಲ್ಲಿ ಭಾರತದ ಏಕತೆ ಮತ್ತು ಸ್ತ್ರೀ ಸಮಾನತೆಯ ವಿಚಾರಗಳು ಅಡಕವಾಗಿವೆ. ಆದರೆ 1951ನೇ ಸೆಪ್ಟೆಂಬರ್ 25ರಂದು ಮಸೂದೆಯ ಮುಖ್ಯ ಭಾಗಗಳನ್ನು ಹೊರತುಪಡಿಸಿ ಅಂಗೀಕರಿಸಲಾಯಿತು. ಇದರಿಂದ ಬೇಸರಗೊಂಡ ಅಂಬೇದ್ಕರ್ ಅವರು 1951ನೇ ಅಕ್ಟೋಬರ್ 11ರಂದು ಸಚಿವ ಪದವಿಗೆ ರಾಜೀನಾಮೆ ನೀಡಿದರು.
          1938-49ರ ಅವಧಿಯಲ್ಲಿ ಅಂಬೇಡ್ಕರ್ ಅವರು ಸಿಖ್ ಧರ್ಮದ ಕಡೆಗೆ ಒಲವು ತೋರಿದರು. ಆದರೆ ದಲಿತರು ಸಿಖ್ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಸನಾತನಿಗಳು ವಿರೋಧಿಸಿದರು. ಅಸ್ಪೃಶ್ಯರು ಮತಾಂತರಗೊಂಡರೆ ‘ಪುಣೆ ಒಪ್ಪಂದ’ದ ಪ್ರಕಾರ ದೊರೆಯುವ ಸೌಲಭ್ಯಗಳು ದೊರೆಯುವುದಿಲ್ಲ ಎಂದು ಗೋವಿಂದವಲ್ಲಭ ಪಂತರು ವಾದಿಸಿದರು. ಹೀಗಾಗಿ ಅಂಬೇಡ್ಕರ್ ಅವರು ಆ ವಿಚಾರ ಕೈ ಬಿಟ್ಟು ಬೌದ್ಧ ಧರ್ಮದ ಬಗ್ಗೆ ಚಿಂತನೆ ನಡೆಸಿದರು. ಈ ಐತಿಹಾಸಿಕ ಸತ್ಯವನ್ನು ಮರೆಮಾಚಲಿಕ್ಕಾಗದು. ಒಂದು ವೇಳೆ ಸನಾತನಿಗಳು ಹಿಂದು ಮತ್ತು ಸಿಖ್ ಧರ್ಮಗಳು ಒಂದೇ ಎಂದು ಭಾವಿಸಿದ್ದರೆ ಅಂಬೇಡ್ಕರರ ಜೊತೆ ಈ ರೀತಿ ವಾದ ಮಾಡುತ್ತಿದ್ದರೆ?
          ರಿ-ಲಿಜನ್ ಅಂದರೆ ಮತ್ತೆ ಕೂಡುವುದು ಎಂದು ಅರ್ಥ ‘ಪರಮಾತ್ಮನಿಂದ ಬಂದ ಆತ್ಮವು ಮತ್ತೆ ಪರಮಾತ್ಮನಲ್ಲಿ ಕೂಡುವುದರ ರಹಸ್ಯವನ್ನು ಹೇಳಿ ಕೊಡುವಂಥದ್ದೇ ರಿಲಿಜನ್. ಧಾರಣ ಶಕ್ತಿಯುಳ್ಳದ್ದೇ ಧರ್ಮ.
          ಬಸವಣ್ಣನವರು ಹೇಳುವ ‘ಶರಣ ಸತಿ ಲಿಂಗ ಪತಿ’ ತತ್ತ್ವವು, ಆತ್ಮವೆಂಬ ಸತಿ ಪರಮಾತ್ಮನೆಂಬ ಪತಿಯನ್ನು ಕೂಡುವ ವಿಚಾರವನ್ನೇ ತಿಳಿಸುತ್ತದೆ. ಸೂಫಿ ತತ್ತ್ವಕೂಡ ಆತ್ಮವು ಪರಮಾತ್ಮನನ್ನು ಕೂಡುವುದನ್ನೇ ತಿಳಿಸುತ್ತದೆ. ಪ್ರೀತಿಸುವವರು ಪ್ರೀತಿಗೆ ಪಾತ್ರನಾದವನನ್ನು ಕೂಡುವುದು ಸೂಫಿ ಇಷ್ಕ ತತ್ತ್ವದ ಮೂಲವಾಗಿದೆ. ನಿಮ್ಮ ಧರ್ಮದ ಅರ್ಥವನ್ನೇ ಎಲ್ಲರೂ ಏಕೆ ಸ್ವೀಕರಿಸಬೇಕು?

          ಪ್ರತಿಕ್ರಿಯೆ
          • Umesh

            Anonymous ಅವರೆ,
            ಸರಿ. ಈ ಎಲ್ಲ ಗುಣಗಳುಳ್ಳ”ಶಿವನೆ” ನೀನು ನಮ್ಮನ್ನು ಅನುಗ್ರಹಿಸುವನಾಗು ಎಂದು, ಈ ಮಂತ್ರಗಳನ್ನೂ ಹೇಳುತ್ತಾ, ಶಿವ ಲಿಂಗಕ್ಕೆ ಅಭಿಷೇಕ ಮಾಡುವುದು ಅನುಚಾನವಾಗಿ ನಡೆದುಕೊಂಡು ಬಂದ ಪದ್ದತಿ. ಇದು ಕೃಷ್ಣಯಜುರ್ವೇದದ ತೈತ್ತರಿಯ ಸಂಹಿತೆಯ ನಾಲ್ಕನೆಯ ಕಾಂಡದಲ್ಲಿಇದೆ. ಈ ಮಂತ್ರಗಳನ್ನೂ ಸಮಷ್ಟಿಯಾಗಿ ನೋಡಬೇಕು.ಒಂದೊಂದೇ ಪದದ ಅರ್ಥ ಹೇಳಿದರೆ ಇದರ ಪೂರ್ಣ ಅರ್ಥ ಗೊತ್ತಾಗುವುದಿಲ್ಲ. ಒಂದೆರೆಡು ಸಾಲು ಉದಾಹರಣೆಯಾಗಿ ಕೊಟ್ಟದ್ದು ರೆಫರೆನ್ಸ್ಗೊಸ್ಕರ ಮಾತ್ರ. ಈ ಮಂತ್ರಗಳಬಗ್ಗೆ ಕಂಚಿ ಪರಮಾಚಾರ್ಯರು “ಯಜುರ್ವೇದದ ಹೃದಯಸ್ಥಾನದಲ್ಲಿ ಶ್ರೀ ರುದ್ರವುಇದೆ. ಶ್ರೀ ರುದ್ರದ ಹೃನ್ಮದ್ಯೇ ಶ್ರೀ ಶಿವಪಂಚಾಕ್ಷರಿ “ನಮಃ ಶಿವಾಯ” ಮಹಾಮಂತ್ರವು ವಿರಾಜಮಾನವಾಗಿದೆ.” ಎಂದಿದ್ದಾರೆ.
            ಮತ್ತೆ ಸಿಖ್ ಪಂಥದ ಓಂಕಾರ್ ಹಾಗು ಹಿಂದೂ ಸಂಸ್ಕೃತಿಯ ಓಂಕಾರ್ ಏನು ವ್ಯತ್ಯಾಸ ಇಲ್ಲ. ಹಿಂದೂ ಚಿಂತನೆಯಲ್ಲೂ ಓಂ ಎಂದರೆ ವಿಶ್ವ ಎಂದೇ ಮತ್ತು ಅಂತಿಮವಾಗಿ ಇರುವ ಸತ್ಯ ಒಂದೇ (ಅದ್ವೈತ) ಅಂತ ಹೇಳುವುದು ಗೊತ್ತಿಲ್ಲವೇ? ಇನ್ನು ಬಹುದೇವತಾ ಪದ್ಧತಿ, ಇಲ್ಲೂ ಕೂಡ “ಸರ್ವ ದೇವ ನಮಸ್ಕಾರ ಕೇಶವಂ ಪ್ರತಿಗಚ್ಚತಿ”, “ಏಕಮ್ ಸತ್ ವಿಪ್ರಾ ಬಹುದಾ ವದಂತಿ”, ಮಂತ್ರಗಳು ಎಲ್ಲ ಅರಾದನೆಗಳು ಮುಟ್ಟುವುದು ಒಂದೇ ಸತ್ಯವನ್ನು ಎಂದು ಸಾರುತ್ತದೆ. ಒಂದು ಕಡೆ ಓದಿದ ನೆನಪು (ಅರುಣ್ ಶೌರಿ ಲೇಖನ ಇರಬೇಕು), ಸಿಕ್ಖರ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ್ಸಾಹಿಬ್ ನಲ್ಲಿ ಶ್ರೀ ರಾಮನನ್ನು ಅರಾದಿಸುವ ಶ್ಲೋಕಗಳು ಅಸಂಖ್ಯಾತವಾಗಿ ಇವೆ.
            ಇಲ್ಲಿ ಮುಖ್ಯವಾಗುವುದು ಏನೆಂದರೆ, ಸಂವಿದಾನ ಶಿಲ್ಪಿ ಡಾಕ್ಟರ್. ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ನಲ್ಲಿ, ಹಿಂದೂ ಧರ್ಮದಡಿ ಸಿಖ್, ಬೌದ್ಧ, ಜೈನ ಧರ್ಮಿಯರನ್ನು ಸೇರಿಸಿದ್ದರು, ಹಾಗು ಅದೇ ಹಿಂದೂ ಕೋಡ್ ಬಿಲ್ ಪ್ರಾವಿಷನ್ ಈಗಿನ ಸಂವಿದಾನದಲ್ಲಿ ಅಡಕವಾಗಿದೆ. ಡಾಕ್ಟರ್.ಅಂಬೇಡ್ಕರ್ ಸಾಹೇಬ್ ಸಿಖ್ಧಧರ್ಮ ಸ್ವೀಕರಿಸಲು ಆ ಧರ್ಮದ ಒಳಗಿನಿಂದಲೇ ಬಂದ ವಿರೋಧ ಎನ್ನುವುದನ್ನು ಮರೆಯಬಾರದು.

  6. Annapoorna

    ಪ್ರಿಯ ಸತ್ಯನಾರಾಯಣ ಅವರೇ, “ಬಡಹಾರುವ ಎಂದರೆ, ನೀವು ಇಂದಿನ ಮಾರುಕಟ್ಟೆ ಲೆಕ್ಕಾಚಾರದಲ್ಲಿ, ದುಡ್ಡುಕಾಸಿನ ಲೆಕ್ಕಾಚಾರದಲ್ಲಿ ಏಕೆ ನೋಡುತ್ತೀರಿ. ಬಡಹಾರುವನೆಂದರೆ, ವಿಚಾರದಲ್ಲಿ ಬಡವನಾದವನು, ಮೂಢಮತಿ ಎಂದೂ ಅರ್ಥವಾಗುತ್ತದೆ ಅಲ್ಲವೆ?” ಅಂತ ನನ್ನನ್ನು ಕೇಳಿದ್ದೀರಿ. ಸರಿ ನೀವು ಹೇಳಿದ್ದೇ ಸರಿ ಎಂದು ಭಾವಿಸುವ. ಆದರೆ ತಾವು “ವೇದ ಉಪನಿಷತ್ತುಗಳನ್ನೇ ತಮ್ಮ ಮೂಗಿನ ನೇರಕ್ಕೆ ಅನ್ವಯಿಸಿಕೊಂಡು, ಪುರಾಣಗಳನ್ನು ಸೃಷ್ಟಿಸಿಕೊಂಡು, ಜನರ ಶೋಷಣೆಗೆ ಇಳಿದ ಪುರೋಹಿತಶಾಹಿಗೆ ಅವರ ವಿರೋಧ. ವಿಚಾರಗಳನ್ನೇ ಅವಿಚಾರಗಳನ್ನಾಗಿಸಿ, ಅವಿಚಾರಗಳನ್ನೇ ಬಳಿಸಿಕೊಂಡು, ತಮ್ಮಂತೆಯೇ ಅನ್ನ ತಿನ್ನುವ, ಕಕ್ಕ ಮಾಡುವ, ಸಹಜೀವಿಗಳನ್ನು ಶೋಷಣೆ ಮಾಡಿಕೊಂಡಿದ್ದ ಶ್ರೇಷ್ಟತೆಯವ್ಯಸನಿಗಳಿಗೆ ಅವರ ವಿರೋಧ” ಅಂತಾನೂ ಹೇಳಿದ್ದೀರಿ. ಈ ಪುರೋಹಿತಶಾಹಿ ಎಂದರೆ ಹಾರುವರೇ ಅಲ್ಲವೇ? ಹಾಗಾದರೆ ಮೂಢಮತಿಯೂ ವಿಚಾರದಲ್ಲಿ ಬಡವನೂ ಆದ ಹಾರುವನು, ಶ್ರಮಜೀವಿಯೂ ಅಲ್ಲದ ದೈಹಿಕವಾಗಿ ಬಲಿಷ್ಠನೂ ಆಗಿರದ ಹಾರುವನು (ಇದೆಲ್ಲಾ ಹಾರುವನ ಬಗ್ಗೆ ನೀವುಗಳೇ ಹೇಳಿದ್ದು!) ಸಹಜೀವಿಗಳನ್ನು ಶೋಷಿಸಲು ಸಾಧ್ಯವೇ? ಹೇಗೆ ಅಂತ ವಿವರಿಸುತ್ತೀರಾ?

    ಪ್ರತಿಕ್ರಿಯೆ
  7. Anil Talikoti

    ಅತ್ಯಂತ ಆಸಕ್ತಿಯಿಂದ ಓದಲು ಆರಂಭಿಸಿದ್ದೆ. ಈ ಸರಣಿ ವ್ಯರ್ಥ, ಅಸಂಗತವೆನಿಸತೊಡಗಿದೆ.ಇದರ ವಟ್ಟು ವತ್ತು ಮತ್ತು ಶಕ್ತಿ ವೈದಿಕ(ಬ್ರಾಹ್ಮಣ),ಬಹುದೇವ ನಂಬಿಕೆಗಳನ್ನು ಹೀಯಾಳಿಸಲು ಬಳಸಿಕೊಳ್ಳುವತ್ತ ಧಾವಿಸುತ್ತಿದೆ ಎನಿಸುತ್ತದೆ. ಒಂದು ಉದಾಹರಣೆ ಕೊಡುವದಾದರೆ -ಮೊನ್ನೆ ಮುಗಿದ ICC ಚಾಂಪಿಯನ್ಶಿಪ, ಇಂದು ಕುಳಿತು ನೋಡುತ್ತಾ – ಪ್ರತಿಯೊಂದು ಬಾಲಿಗೂ -ತನಗೆಲ್ಲಾ ಗೊತ್ತು ಎನ್ನುವಂತೆ ಉದ್ವೇಗದಿಂದ ಇಗೇನಾಗುತ್ತದೆ, ಇನ್ನೇನಾಗುತ್ತದೆ ಹೇಳುತ್ತೇನೆ ಕೇಳು ಎಂದು ಐದು ವರುಷದ ಮಕ್ಕಳಿಗೆ ಕೂಗಿ ಹೇಳುತ್ತಿರುವಂತಿದೆ. ಕಷ್ಟ ಏನೆಂದರೆ ಐದು ವರುಷದ ಮಕ್ಕಳಿಗೂ ಕೂಡಾ ಈಗ re-run ಗಳ ಬಗ್ಗೆ ಗೊತ್ತಾಗಿರುತ್ತದೆ. ಪ್ರಸ್ತುತ ಕಾಲಕ್ಕೆ ವಚನಗಳ ಸಾರ ಅಳವಡಿಸಿಕೊಳ್ಳುವ ಬಗ್ಗೆ ಮುಂದೆಯಾದರೂ ಬರೆಯುತ್ತಾರಾ ಕಾಯುತ್ತಿದ್ದೇನೆ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
    • Ramjan Darga

      ಅನಿಲ್ ಯಾರನ್ನೂ ಹೀಯಾಳಿಸುದವುಕ್ಕೋಸ್ಕರ ಈ ಲೇಖನ ಬರೆದಿಲ್ಲ. ಜಾತಿ ಮತ್ತು ಧರ್ಮಗಳ ಹೆಸರಲ್ಲಿ ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾದ ಬಹುಜನರ ನೋವನ್ನು ಕೊನೆಗೊಳಿಸಿ ಸರ್ವ ಸಮತ್ವದಿಂದ ಕೂಡಿದ ನವಭಾರತದ ನಿರ್ಮಾಣದ ಕನಸುಗಳೊಂದಿಗೆ ಈ ಲೇಖನ ಬರೆದಿದ್ದೇನೆ. ಸೂಕ್ಷ್ಮಜೀವಿಗಳಾದ ನೀವು ತುಳಿತಕ್ಕೊಳಗಾದವರ ನೋವು ಮತ್ತು ಅಪಮಾನಗಳನ್ನು ಅರಿತವರಾಗಿದ್ದೀರೆಂದು ಭಾವಿಸುವೆ. ಮಾನವೀಯ ಸಮಾಜ ನಿರ್ಮಾಣಕ್ಕಾಗಿ ಶರಣರು ಎಷ್ಟೊಂದು ಕಷ್ಟ ನಷ್ಟಗಳನ್ನು ಅನುಭವಿಸಿದರು. ಅವರ ತ್ಯಾಗ ಮತ್ತು ಸೈದ್ಧಾಂತಿಕ ನಿಲವುಗಳನ್ನು ಈಗಿನ ಜನ ಮರೆಯಬಾರದು ಎಂಬುದೇ ನನ್ನ ಕಳಕಳಿಯಾಗಿದೆ.

      ಪ್ರತಿಕ್ರಿಯೆ
  8. Annapoorna

    “ಹುಟ್ಟಿನ ಕಾರಣದಿಂದ ಶ್ರೇಷ್ಠತೆಯನ್ನು ಆರೋಪಿಸಿಕೊಂಡು, ಉತ್ಪಾದಕ ವರ್ಗವನ್ನು ಶೋಷಿಸುತ್ತಾ, ಅನುತ್ಪಾದಕರಾಗಿ ಬಾಳುತ್ತಾ” ಸರಿ ಸರ್, ಹುಟ್ಟಿನ ಕಾರಣದಿಂದ ಹಾರುವರು ತಮ್ಮನ್ನು ತಾವೇ ಶ್ರೇಷ್ಠ ಎಂದು ಕರೆದುಕೊಂಡರು ಎಂದೇ ಭಾವಿಸುವ. ಆದರೆ ಮಿಕ್ಕವರು ಏಕೆ ಅವರನ್ನು ಶ್ರೇಷ್ಠ ಎಂದು ತಿಳಿದರು ಹಾಗೂ ಶೋಷಣೆಗೆ ಒಳಗಾದರು? ಈ ಪ್ರಶ್ನೆ ಸ್ವಾಭಾವಿಕವಾಗಿಯೇ ಉದ್ಭವಿಸುತ್ತದೆ. ವಚನಕಾರರೇ ಹಾರುವರನ್ನು ಮೂಢಮತಿಗಳು, ಹೇಳಿದಂತೆ ನಡೆಯದವರು, ಹೊಲೆಯರ ಬಸುರಲ್ಲಿ ಹುಟ್ಟಿ ಗೋಮಾಂಸ ತಿಂದವರು ಅಂತೆಲ್ಲ ಹೇಳಿದ್ದಾರಲ್ಲ! ವಚನಕಾರರಿಗೆ ತಿಳಿದ ಈ ಸತ್ಯ ಸಮಾಜದ ಬಹುಮಂದಿ ಜನರಿಗೆ ತಿಳಿಯದೇ ಹೋಗಿತ್ತೇ? ಹಾಗಾಗಲು ಏನು ಕಾರಣವಿರಬಹುದು?

    ಪ್ರತಿಕ್ರಿಯೆ
    • Ramjan Darga

      ಶರಣರು ಕಂಡ ಸತ್ಯ ಮುಗ್ಧ ಜನಸಾಮಾನ್ಯರಿಗೆ ತಿಳಿಸುವುದಕ್ಕೆಂದೇ ತತ್ತ್ವ ಪ್ರಚಾರದ ಜಂಗಮರು ಕಾರ್ಯೋನ್ಮುಖರಾಗಿದ್ದರು. ಶರಣರ ಈ ಪ್ರಯತ್ನವನ್ನು ಹಾಳುಗೆಡವಲಾಯಿತು. ಕಾಲಾಂತರದಲ್ಲಿ ಲಿಂಗಾಯತರಲ್ಲೇ ಅನೇಕ ಜಾತಿಗಳು ಹುಟ್ಟಿಕೊಂಡು ಜಂಗಮರೂ ಒಂದು ಜಾತಿಯಾಗಿ ಪರಿಣಮಿಸಿದ್ದು ಐತಿಹಾಸಿಕ ದುರಂತವಾಗಿದೆ.

      ಪ್ರತಿಕ್ರಿಯೆ
    • Anonymous

      ಮೇಡಂ ದಯವಿಟ್ಟು Dr b r ambedkar ಅವರ ಭಾಷಣಗಳು ಮತ್ತು ಬರಹಗಳ ವ-7 ಻ನ್ನು ನೋಡಿ ವಿವರ ಸಿಗುತ್ತದೆ

      ಪ್ರತಿಕ್ರಿಯೆ
  9. Vijendra

    My question is to d author-1 Why u want to blame d the present genr of brahmins for their forefathers mistakes?
    2 R u still seeing any atrocities by brahmins?
    3 Haveu ever noticed as on now discrimination of dalits is done by ur so called shudras?
    4 What r u trying to achieve by this?
    Do not assume i am brahmin just because i am questionig.I am shudra who has experienced untouchability in childhood by brahmins.It does not mean that i hate brahmins.thats their mistake and foolishness.To some extent i do agree with Vijay.Innu jana ninneye tappugalannu hiyalisutta karnakartarada alisi hoda vargavannu dooshisuvudu estu sari?Hagadre shatamanagala hinde baratavemba deshakke dandetti bandu saviraru devastanagala nashakke,lakshantara hindugala savige karanaradavarannu egalu hate madutta avarannu avamana madabahudendu nimma hagu nimmannu support madi bareyuttiruvara vadave!!!!!

    ಪ್ರತಿಕ್ರಿಯೆ
    • Ramjan Darga

      ವಿಜೇಂದ್ರ ನಿಮ್ಮ ಮಾತಿಗೆ ನನ್ನ ಸಹಮತವಿದೆ. ನನ್ನ ಲೇಖನವನ್ನು ಸರಿಯಾಗಿ ಓದಿ. ಬ್ರಾಹ್ಮಣರ ವಿರುದ್ಧವಾಗಲಿ ಯಾವುದೇ ಜಾತಿ ಧರ್ಮದವರ ವಿರುದ್ಧವಾಗಲಿ ಮಾತನಾಡುವುದು ಅಮಾನುಷವಾಗುತ್ತದೆ. ವರ್ಣ ಮತ್ತು ಜಾತಿಗಳು ಹೇಗೆ ಸೃಷ್ಟಿಯಾದವು. ಅವುಗಳ ವಿರುದ್ಧ ಶರಣರು ಹೋರಾಡುತ್ತ ಹೇಗೆ ಹುತಾತ್ಮರಾದರು. ಇಂದಿಗೂ ಜಾತೀಯತೆ ಮತ್ತು ಅಸ್ಪೃಶ್ಶತೆ ನಮ್ಮ ದೇಶದಲ್ಲಿ ಉಳಿದುಕೊಂಡು ಬಂದಿವೆ. ಇವುಗಳನ್ನು ಹೋಗಲಾಡಿಸುವಲ್ಲಿ ಶರಣರ ತತ್ತ್ವಗಳು ಬಹು ಉಪಯುಕ್ತವಾಗಿವೆ. ಅವುಗಳ ಕಡೆಗೆ ಗಮನ ಹರಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.

      ಪ್ರತಿಕ್ರಿಯೆ
  10. Annapoorna

    ದರ್ಗಾ ಸರ್, “ವೈದಿಕ ವ್ಯವಸ್ಥೆಯ ಶ್ರೇಣೀಕೃತ ಸಮಾಜದ ಕಟ್ಟ ಕಡೆಯ ಜಾತಿಯಾದ ಮಾದಾರ ಜಾತಿಯ ಚನ್ನಯ್ಯನವರ ಮನೆಯಲ್ಲಿ ಅಂಬಲಿಯನ್ನು ಕುಡಿಯುವುದರ ಮೂಲಕ ಬಸವಣ್ಣನವರ ದೇವರು ವೈದಿಕ ವ್ಯವಸ್ಥೆಗೆ ಕೊಡಲಿಪೆಟ್ಟು ಹಾಕಿದ್ದಾನೆ” ಮಾದಾರ ಚನ್ನಯ್ಯನ ಮನೆಯಲ್ಲಿ ಅಂಬಲಿ ಕುಡಿದದ್ದು ಬಸವಣ್ಣನವರೋ ಕೂಡಲಸಂಗಮದೇವರೋ? ನೀವೇ ಉಲ್ಲೇಖಿಸಿರುವ ವಚನದಲ್ಲಿ “ನಮ್ಮ ಕೂಡಲಸಂಗಯ್ಯನು | ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ |” ಎಂಬ ಸಾಲುಗಳಿವೆ ಗಮನಿಸಿ. “ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ..” ಎಂಬ ವಚನದಲ್ಲಿ “ತಂದೆ ಕೂಡಲಸಂಗಮದೇವ | ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ” ಎಂಬ ಸಾಲುಗಳಿವೆ. ಕೂಡಲಸಂಗಮದೇವರನ್ನು ಬಸವಣ್ಣನವರು ತಂದೆ ಎಂದು ಸಂಬೋಧಿಸಿದ್ದಾರೆ. ಅಂದರೆ ಬಸವನ್ನನವರೂ ಕೂಡಲಸಂಗಮದೇವರೂ ಒಬ್ಬರೇ ಅಲ್ಲ ಅಂತಾಯಿತು. ಹೀಗಿರುವಾಗ “ನಮ್ಮ ಕೂಡಲಸಂಗಯ್ಯನು | ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ |” ಎಂಬ ಸಾಲುಗಳನ್ನು “ಮಾದಾರ ಜಾತಿಯ ಚನ್ನಯ್ಯನವರ ಮನೆಯಲ್ಲಿ ಅಂಬಲಿಯನ್ನು ಕುಡಿಯುವುದರ ಮೂಲಕ ಬಸವಣ್ಣನವರ ದೇವರು ವೈದಿಕ ವ್ಯವಸ್ಥೆಗೆ ಕೊಡಲಿಪೆಟ್ಟು ಹಾಕಿದ್ದಾನೆ” ಅಂತ ಹೇಗೆ ಅರ್ಥೈಸಲು ಸಾಧ್ಯ ಅಂತ ತಿಳಿಯದೇ ಹೋದೆ. ಸ್ವಲ್ಪ ವಿವರಿಸುತ್ತೀರಾ?

    ಪ್ರತಿಕ್ರಿಯೆ
    • Ramjan Darga

      ಅನ್ನಪೂರ್ಣ ಅವರೆ, ವಚನಗಳು ಧರ್ಮಶಾಸ್ತ್ರ,ಸಿದ್ಧಾಂತ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹೊಂದಿರುವಂತೆಯೆ ಸಾಹಿತ್ಯದ ಗುಣಗಳನ್ನೂ ಹೊಂದಿವೆ. ಪುರಾಣದ ಅಂಶಗಳನ್ನೂ ಹೊಂದಿವೆ. ಮಾದಾರ ಚನ್ನಯ್ಯನವರು ತಮಿಳುನಾಡಿನ ಕರಿಕಾಲ ಚೋಳರಾಜನ ಬಳಿ ಇದ್ದಾಗ ಸೃಷ್ಟಿಯಾದ ದಂತಕಥೆ ಇದು. ಬಸವಣ್ಣನವರು ಸಾಂಕೇತಿಕವಾಗಿ ತಮ್ಮ ವಚನದಲ್ಲಿ ಈ ದಂತಕಥೆಯನ್ನು ಬಳಸಿದ್ದಾರೆ. ತಮ್ಮ ಸೋಪಜ್ಞತೆ ನನಗೆ ಖುಷಿ ಕೊಟ್ಟಿತು.

      ಪ್ರತಿಕ್ರಿಯೆ

Trackbacks/Pingbacks

  1. ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೫ « ಅವಧಿ / avadhi - [...] ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೫ June 28, 2013 by Avadhikannada (ಭಾಗ ೪ ಇಲ್ಲಿದೆ) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: