ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೩

(ಭಾಗ ೧ ಕ್ಕೆ ಇಲ್ಲಿ ಕ್ಲಿಕ್ಕಿಸಿ

ಭಾಗ ೨ ಕ್ಕೆ ಇಲ್ಲಿ ಕ್ಲಿಕ್ಕಿಸಿ)

ವಿಲೋಮ ಪದ್ಧತಿಯ ಮದುವೆಯ ನಿರ್ಧಾರ ಮತ್ತು ಜಾತಿವಿನಾಶ ಚಳವಳಿಗಳು ಸನಾತನ ಧರ್ಮ ರಕ್ಷಣೆಗೆ ವಿರುದ್ಧವಾಗಿದ್ದವು. ಭೇದಭಾವದಿಂದ ಕೂಡಿದ ಸನಾತನ ಧರ್ಮ ರಕ್ಷಣೆ ರಾಜನ ಕರ್ತವ್ಯವಾಗಿತ್ತು.ಈ ವಿಚಾರವನ್ನು ಸನಾತನಿಗಳು ಬಿಜ್ಜಳ ರಾಜನ ಮುಂದಿಟ್ಟು ಬಸವಣ್ಣನವರ ವಿರುದ್ಧ ಎಚ್ಚರಿಸುತ್ತಲೇ ಇದ್ದರು. ಸನಾತನಿಗಳ ಕುತಂತ್ರವನ್ನು ನಿಷ್ಕ್ರಿಯಗೊಳಿಸುವುದು; ಸನಾತನ ಧರ್ಮಕ್ಕೆ ವಿರುದ್ಧವಾದ ಮದುವೆಯಿಂದಾಗುವ ಕ್ಷೊಭೆಯನ್ನು ತಹಬಂದಿಗೆ ತರುವುದು ಮತ್ತು ಮನುಧರ್ಮಕ್ಕೆ ಸಮ್ಮತವಲ್ಲದ ಇತರ ದುಡಿಯುವ ಜನಪರ ಚಟುವಟಿಕೆಗಳಿಂದ ಉಂಟಾದ ರಾಜತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸುವುದಕ್ಕಾಗಿ ಬಸವಣ್ಣನವರು ಪ್ರಧಾನಿ ಪದವಿಯನ್ನು ಬಿಟ್ಟುಕೊಟ್ಟು ಕೂಡಲಸಂಗಮಕ್ಕೆ ದೇಶಾಂತರ ಬರಬೇಕಾಯಿತು. ಅಲ್ಲಿಂದಲೇ ಅವರು ಕಲ್ಯಾಣದ ವಿದ್ಯಮಾನಗಳನ್ನು ಅರಿತುಕೊಂಡು ಶರಣರಿಗೆ ಸಲಹೆ ನೀಡುತ್ತಿದ್ದರು.
ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯಿಂದಾಗಿ ಸನಾತನಿಗಳ ಹಿಡಿತದಲ್ಲಿರುವ ಬಿಜ್ಜಳನ ಕಲ್ಯಾಣದಲ್ಲಿ ಸಾಮಾಜಿಕವಾಗಿ ಪ್ರಕ್ಷುಬ್ಧ ವಾತಾವಾರಣ ಉಂಟಾಗುವುದೆಂಬುದು ಶರಣ ಸಂಕುಲಕ್ಕೆ ಚೆನ್ನಾಗಿ ಗೊತ್ತಿತ್ತು.ಅವರು ತಮ್ಮ ಜಾತ್ಯತೀತ ತತ್ತ್ವದ ಪರಿಪಾಲನೆಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗಿ ಹರಳಯ್ಯ – ಮಧುವರಸರ ಮಕ್ಕಳ ಮದುವೆ ಮಾಡಿದರು.
ಸನಾತನವಾದಿಗಳ ಮನಸ್ಸು ಹೊತ್ತಿ ಉರಿಯತೊಡಗಿತು.ಅವರೆಲ್ಲ ಸೇರಿ ಕಲ್ಯಾಣದಲ್ಲಿ ಹಾಹಾಕಾರ ಎಬ್ಬಿಸಿದರು. ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆಯಾಯಿತು. ಶರಣರ ಮೇಲೆ ಹಲ್ಲೆ ಕಗ್ಗೊಲೆಗಳು ಆರಂಭವಾದವು.ಶರಣರ ವಚನ ಕಟ್ಟುಗಳನ್ನು ಸನಾತನಿಗಳು ಮತ್ತು ಬಿಜ್ಜಳನ ಸೈನಿಕರು ಸುಡತೊಡಗಿದರು.ಆಗ ಬಸವಣ್ಣನವರು ಕಲ್ಯಾಣದಲ್ಲಿನ ಶರಣರಿಗೆ ಕಳುಹಿಸಿದ ಸೂಚನೆಯ ಪ್ರಕಾರ ಅವರೆಲ್ಲಹೃದಯವಿದ್ರಾವಕ ಸ್ಥಿತಿಯಲ್ಲಿ ಕಲ್ಯಾಣ ತೊರೆದು ತಮಗೆ ಸಾಧ್ಯವಾದ ಕಡೆಗಳಲ್ಲಿ ಹೊರಟು ಹೋದರು.ಉಳಿದ ಶರಣರು ವಚನ ಕಟ್ಟುಗಳ ರಕ್ಷಣೆಗಾಗಿ ಉಳವಿಯ ಕಡೆಗೆ ಹೊರಟರು.ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಕೂಗಿನಮಾರಿತಂದೆ ಮುಂತಾದ ಶರಣರು ಮಾರ್ಗ ಮಧ್ಯೆದಲ್ಲೇ ಲಿಂಗೈಕ್ಯರಾದರು.ಅಕ್ಕನಾಗಮ್ಮ, ನುಲಿಯ ಚಂದಯ್ಯ, ಕಿನ್ನರಿ ಬ್ರಹ್ಮಯ್ಯ ಮುಂತಾದ ಬಹುಸಂಖ್ಯೆಯ ಶರಣರು ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿ ತಲುಪಿದರು.
ವಿಪರೀತ ವಾತಾವರಣದ ಆ ದುರ್ಗಮ ಕಾಡಿನಲ್ಲಿ ಜಿಗಣೆ, ಹಿಂಸ್ರಪ್ರಾಣಿಗಳು, ವಿಷಜಂತುಗಳು ಮತ್ತು ಧಾರಕಾರ ಮಳೆಯ ಮಧ್ಯೆ ಕಷ್ಟಕರವಾದ ಜೀವನ ಸಾಗಿಸುತ್ತ ವಚನ ಸಂಪತ್ತನ್ನು ರಕ್ಷಿಸಿದರು.ಜೀವ ಮತ್ತು ಸಂಪತ್ತಿನ ಬಗ್ಗೆ ಯೋಚಿಸದ ಶರಣರು ತಮ್ಮ ಸಿದ್ಧಾಂತದ ಗೆಲವಿಗಾಗಿ ಶ್ರಮಿಸಿದರು.12ನೇ ಶತಮಾನದಲ್ಲೇ ಸನಾತನಿಗಳ ಸಂಪ್ರದಾಯಕ್ಕೆ ವಿರುದ್ಧವಾಗಿ ಜಾತಿವಿನಾಶದ ಮದುವೆ ಮಾಡಿಸುವುದಕ್ಕಾಗಿ ಶರಣರು ಒಗ್ಗಟ್ಟಾಗಿ ದುರಂತಗಳನ್ನು ಎದುರಿಸಿದ್ದು ಇತಿಹಾಸದಲ್ಲಿನ ಅನನ್ಯ ಘಟನೆಯಾಗಿದೆ.

ನಾಗರೀಕತೆಗೆ ಅಂಟಿದ ಕಳಂಕಗಳಾದ ಜಾತಿವಾದ, ವರ್ಣವ್ಯವಸ್ಥೆ, ವರ್ಗಭೇದ ಮತ್ತು ಲಿಂಗಭೇದಗಳ ವಿರುದ್ಧ ವಚನ ಸಾಹಿತ್ಯ ಹೊಂದಿದ ಅಂಶಗಳೇ ಭಾರತ ಸಂವಿಧಾನದ ಅಂಶಗಳಾಗಿವೆ. ಅದೇ ರೀತಿ ಮಾನವ ಹಕ್ಕುಗಳ ಎಲ್ಲ ಅಂಶಗಳೂಬಸವಣ್ಣನವರ ವಚನಗಳಲ್ಲಿವೆ.
1948ನೇ ಡಿಸೆಂಬರ್ 10ರಂದು ನಡೆದ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ 30 ಅಂಶಗಳುಳ್ಳ ಮಾನವ ಹಕ್ಕುಗಳನ್ನು ಜಾಗತಿಕ ಘೋಷಣೆಯೊಂದಿಗೆಸ್ವೀಕರಿಸಲಾಯಿತು.ಲಿಂಗಭೇದ, ವರ್ಣಭೇದಮುಂತಾದ ಅನಿಷ್ಟಗಳನ್ನು ತೊಡೆದುಹಾಕಲು ಯತ್ನಿಸಿತು. ಅನೈತಿಕಸಂಬಂಧಗಳಿಂದ ಜನಿಸಿದಮಕ್ಕಳಹಕ್ಕುಗಳಲ್ಲಿಮತ್ತುಸತಿ-ಪತಿಗಳ ಸಂಬಂಧದಿಂದ ಜನಿಸಿದ ಮಕ್ಕಳ ಹಕ್ಕುಗಳಲ್ಲಿ ವ್ಯತ್ಯಾಸವಿಲ್ಲವೆಂದು ವಿಶ್ವಸಂಸ್ಥೆ ಸಾರಿತು. ‘ದಾಸೀ ಪುತ್ರನಾಗಲೀ ವೇಶ್ಯಾ ಪುತ್ರನಾಗಲೀ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ’ ಎಂದು ಬಸವಣ್ಣನವರು ಹೇಳುವ ಮೂಲಕ ಅನೈತಿಕ ಸಂಬಂಧದಿಂದ ಜನಿಸಿದ ಮಕ್ಕಳು ಕೂಡ ಸಮಾನ ಹಕ್ಕುಳ್ಳವರು ಎಂಬ ವಿಚಾರವನ್ನು ಎತ್ತಿ ಹಿಡಿದಿದ್ದಾರೆ.ಮಾನವರ ಮಧ್ಯದ ಜಾತಿ ಮತ್ತು ಅಂತಸ್ತುಗಳ ವಿನಾಶವೇ ಶರಣರ ಗುರಿಯಾಗಿತ್ತು.
 
ಬ್ರಾಹ್ಮಣ ಭಕ್ತನಾದಡೇನಯ್ಯಾ ಸೂತಕಪಾತಕಂಗಳ ಬಿಡದನ್ನಕ್ಕ
ಕ್ಷತ್ರಿಯ ಭಕ್ತನಾದಡೇನಯ್ಯಾ ಹಿಂಸೆಯ ಬಿಡದನ್ನಕ್ಕ
ವೈಶ್ಯ ಭಕ್ತನಾದಡೇನಯ್ಯಾ ಕಪಟ ಸುಳ್ಳು ಬಿಡದನ್ನಕ್ಕ
ಶೂದ್ರ ಭಕ್ತನಾದಡೇನಯ್ಯಾ ಸ್ವಜಾತಿ ಎಂಬುದ ಬಿಡದನ್ನಕ್ಕ
ಇಂತೀ ಜಾತಿಡಂಬಕರ ಮೆಚ್ಚುವನೆ ಕೂಡಲಚನ್ನಸಂಗಮದೇವ?
-ಚನ್ನಬಸವಣ್ಣ

ಕಲೆ : ಪುಂಡಲೀಕ ಕಲ್ಲಿಗನೂರು

ನಿಜವಾದ ಅರ್ಥದಲ್ಲಿ ಶರಣರು ಯಾವುದೇ ವರ್ಣ, ಕುಲ ಅಥವಾ ಜಾತಿಯ ಪರ ಇದ್ದಿದ್ದಿಲ್ಲ. ಅವರು ಯಾವ ವರ್ಣದವರ ಕಡೆಗೂ ಹೋಗಿ ಅವರನ್ನು ಶ್ಲಾಘಿಸುತ್ತ ನಿಲ್ಲಲಿಲ್ಲ. ಎಲ್ಲರೆಡೆಗೆ ಹೋಗಿ ಎಲ್ಲರನ್ನೂ ನವಮಾನವ ಸಮಾಜದ ಕಡೆಗೆ ತರಲು ಯತ್ನಿಸಿದರು.ಮೇಲ್ಜಾತಿಯವರಿಗೆ ಇದರಿಂದ ಲಾಭವಿರಲಿಲ್ಲ. ಅವರೊಳಗಿನ ವಿಚಾರವಂತರು ಮಾತ್ರ ಶರಣರ ಕಡೆಗೆ ಬಂದರು.ಆದರೆ ಬಹುಪಾಲು ಶೂದ್ರರು ಮತ್ತು ಅತಿಶೂದ್ರರು ಬಸವಣ್ಣನವರ ಸುಲಿಗೆ ಇಲ್ಲದ ಸಮಾಜವನ್ನು ಸೇರಿದರು.ಹೀಗೆ ಸೇರಿದವರೆಲ್ಲ ನವಮಾನವರಾದರು.ಶರಣರಿಗೂ ಜಾತಿಡಂಬಕರಿಗೂ ಯಾವುದೇ ಸಂಬಂಧವಿಲ್ಲವೆಂಬುದನ್ನು ಚನ್ನಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ.ಎಲ್ಲ ವರ್ಣದವರ ಹಾಗೆ ಶೂದ್ರ ವರ್ಣದವರು ಕೂಡ ತಮ್ಮ ಪೂವರ್ಾಶ್ರಮದ ಕುರುಹುಗಳನ್ನು ಕಳೆದುಕೊಂಡು ನವಮಾನವರಾಗಬೇಕೆಂದು ಚನ್ನಬಸವಣ್ಣನವರು ಮೇಲಿನ ವಚನದಲ್ಲಿ ಸೂಚಿಸಿದ್ದಾರೆ.
 
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ
ಕೂಡಲಸಂಗಮದೇವಾ.
-ಬಸವಣ್ಣ
ಬಸವಣ್ಣನವರು ಬ್ರಾಹ್ಮಣ್ಯದ ಎಲ್ಲ ಹಂಗಿನ ತೊಡಕುಗಳನ್ನು ಬಿಡಿಸಿಕೊಂಡು ಹೊಸತನವನ್ನು ಸಾಧಿಸಿದ್ದಾರೆ.’ಶರಣರಹಂಗು’ ಎಂಬ ಕ್ರಾಂತಿಕಾರಿ ಚಿಂತನಾ ಕ್ರಮದಿಂದಎಲ್ಲ ಜಾತಿ, ಕುಲ, ವರ್ಣ ಮತ್ತು ವರ್ಗಗಳಿಂದ ಹೊರಬಂದು ಸರ್ವಸಮತ್ವವನ್ನು ಸಾಧಿಸಲು ಸಾಧ್ಯವಾಗುವುದು ಎಂಬುದನ್ನು ಸೂಚಿಸಿದ್ದಾರೆ.ಅಸಮಾನತೆಯನ್ನು ಪ್ರತಿಪಾದಿಸುವ ಎಲ್ಲ ಚಿಂತನೆ ಮತ್ತು ಕ್ರಿಯೆಗಳನ್ನು ಬಿಡದೆ ನವಮಾನವನಾಗಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ಎನ್ನ ತನುಭಕ್ತ, ಮನಭವಿ’ ಎಂದು ಇನ್ನೊಂದುವಚನದಲ್ಲಿಹೇಳಿದ ಅವರು, ಬರಿ ಬಾಹ್ಯ ಬದಲಾವಣೆಯನ್ನು ವಿರೋಧಿಸಿದ್ದಾರೆ.ಬಹುಪಾಲು ಲಿಂಗಾಯತರು ನಾಲಿಗೆ ಮೇಲೆ ಜಾತ್ಯತೀತ ಬಸವಣ್ಣ ಮತ್ತು ಮೆದುಳಿನ ಒಳಗೆ ಜಾತಿವಾದಿ ಮನುವನ್ನು ಇಟ್ಟುಕೊಂಡ ಕಾರಣ ಎಡಬಿಡಂಗಿ ಸ್ಥಿತಿಯಲ್ಲಿದ್ದು ವೈದಿಕರ ಆಚರಣೆಯಲ್ಲಿ ತೊಡಗಿದ್ದರಿಂದಲೇ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲವೆಂಬುದುವಾಸ್ತವವಾಗಿದೆ.
ಬಸವ ಪ್ರಿಯರು, ಬಸವ ಭಕ್ತರು, ಬಸವ ನಿಷ್ಠರು ಮತ್ತು ಬಸವ ವಚನ ಪ್ರಿಯರು ಸಾಮೂಹಿಕ ಪ್ರಜ್ಞೆಯೊಂದಿಗೆ ಬಸವ ತತ್ತ್ವನಿಷ್ಠರಾದಾಗ ಮಾತ್ರ ಬಸವಧರ್ಮ ಉಳಿಯಲು ಸಾಧ್ಯ.’ಲಿಂಗಾಯತ ಒಂದು ಜಾತ್ಯತೀತಅವೈದಿಕ ಧರ್ಮ’ ಎಂಬಸತ್ಯವನ್ನು ಅರಿತುಕೊಂಡು ಲಿಂಗಾಯತರೊಳಗೆ ಸೃಷ್ಟಿಯಾದ ಜಾತಿ ಉಪಜಾತಿಗಳಲ್ಲಿ ರಕ್ತ ಸಂಬಂಧ ಬೆಳೆಸುವ ಮೂಲಕ ಅವುಗಳ ನಿರ್ನಾಮ ಮಾಡುವುದು ನಿಜವಾದ ಲಿಂಗಾಯತರ ಕರ್ತವ್ಯವಾಗಿದೆ.ವೈದಿಕರ ಜಾತಿ ವ್ಯವಸ್ಥೆ ವಿರುದ್ಧ ಹೋರಾಡುವ ಮೊದಲ ಘಟ್ಟವಿದು.ಬೇರೆ ಸಮಾಜಗಳಲ್ಲಿನ ಬಸವ ತತ್ತ್ವನಿಷ್ಠರ ಜೊತೆ ಇಷ್ಟಲಿಂಗ ದೀಕ್ಷೆಯೊಂದಿಗೆ ರಕ್ತಸಂಬಂಧ ಬೆಳೆಸುವುದು ಎರಡನೆಯ ಘಟ್ಟದ ಹೋರಾಟವಾಗಿದೆ.
ಈ ರೀತಿ ಬಸವನಿಷ್ಠರೆಲ್ಲ ಒಗ್ಗಟ್ಟಾಗುವುದರ ಮೂಲಕ ಸಾಮಾಜಿಕ ಅನಿಷ್ಟಗಳಾದ ದಲಿತರ ಮೇಲಿನ ಹಲ್ಲೆ, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರ, ಕೋಮುವಾದ ಮತ್ತು ಉಗ್ರವಾದದ ವಿರುದ್ಧ ಧ್ವನಿ ಎತ್ತುವ ಅವಶ್ಯಕತೆ ಇದೆ.ಇದು ಇಷ್ಟಕ್ಕೆ ನಿಲ್ಲದೆ ಬಸವತತ್ತ್ವದ ಮೇಲೆ ರಾಜ್ಯಾಡಳಿತ ನಡೆಸುವ ದಿನಗಳ ಕನಸು ಕಾಣಬೇಕಿದೆ.’ತುಳಿತಕ್ಕೊಳಗಾದವರು ನಮ್ಮ ನಾಯಕರಾಗಬೇಕು’ ಎಂಬ ಬಸವವಾದವನ್ನು ರಾಜ್ಯಸತ್ತೆ ಪಡೆಯುವುದರ ಮೂಲಕ ಸಾಕಾರಗೊಳಿಸಬೇಕಿದೆ.ಭಾರತೀಯ ಸಮಾಜದಲ್ಲಿ ಬಡತನ, ಅಸ್ಪೃಶ್ಯತೆ ಮತ್ತು ಜಾತಿಗಳು ಇರುವವರೆಗೆ ಬಸವ ತತ್ತ್ವನಿಷ್ಠರ ಹೋರಾಟ ಮುಂದುವರಿಯುತ್ತಲೇ ಇರಬೇಕು ಎಂಬ ಕ್ರಿಯಾತ್ಮಕ ನಿರ್ಧಾರದಿಂದ ಮಾತ್ರ ಹೊಸ ಸಮಾಜದೆಡೆಗೆ ಸಾಗಲು ಸಾಧ್ಯವಾಗುವುದು. ಬಸವಣ್ಣನವರು ಇಂಥ ಮಹಾನ್ ಉದ್ದೇಶದಿಂದ ಬ್ರಾಹ್ಮಣ್ಯವನ್ನು ಅಲ್ಲಗಳೆದರು ಹೊರತಾಗಿ ದ್ವೇಷದಿಂದ ಅಲ್ಲ ಎಂಬ ಸತ್ಯವನ್ನು ಅರಿತುಕೊಂಡು ಚಾಲ್ತಿಯಲ್ಲಿರುವ ಬ್ರಾಹ್ಮಣ್ಯದ ವಿರುದ್ಧ (ಬ್ರಾಹ್ಮಣರ ವಿರುದ್ಧ ಅಲ್ಲ) ಮತ್ತು ಈ ಕಾಲದ ಸುಲಿಗೆ ವ್ಯವಸ್ಥೆ ವಿರುದ್ಧ ಹೋರಾಡುವುದು ಪ್ರತಿಯೊಬ್ಬ ಬಸವತತ್ತ್ವನಿಷ್ಠನ ಕರ್ತವ್ಯವಾಗಿದೆ.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಗೌತಮಮುನಿಗೆ ಗೋವೇಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಕರ್ಣನ ಕವಚ ಹೋಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ
ಪರಶುರಾಮ ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ
ನಾಗಾರ್ಜುನನ ತಲೆ ಹೋಯಿತ್ತು.
ದೇವಾ, ಭಕ್ತನೆಂದು ನಂಬಿದ ಕಾರಣ
ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.
-ಬಸವಣ್ಣ
ಅಸಮಾನತೆಯ ವ್ಯವಸ್ಥೆ ಸದಾ ಮೋಸದ ಪರಿಣಾಮವನ್ನೇ ಬೀರುತ್ತದೆ ಎಂಬುದರ ಬಗ್ಗೆ ಬಸವಣ್ಣನವರಿಗೆ ಮನದಟ್ಟಾಗಿದ್ದರಿಂದಲೇ ಇಂಥ ವಚನಗಳನ್ನು ಬರೆಯಲು ಸಾಧ್ಯವಾಯಿತು.
ವಿಪ್ರರ ಕರೆದು ‘ನೃಪರುಗಳು ಇಪ್ಪರೆ
ತಮ್ಮ ಶಿಶುವಿನೊಡನೆಂದುಬೆಸಗೊಂಡಡೆ,
‘ಇಪ್ಪರು, ಇಪ್ಪರು, ತಾವುಬಿತ್ತಿದಫಲಂಗಳ ತಾವು ಉಣ್ಣದವರುಂಟೆ?
ಎಂದು ಕಣ್ಣ ಕಾಣದೆ ಹೇಳಿದರು, ಅಣ್ಣಗಳು, ಕರ್ಮದ ಬಟ್ಟೆಯನು.
-ಬಸವಣ್ಣ
ವಿಪ್ರರು ಯಾವರೀತಿಯಲ್ಲಿ ರಾಜ್ಯಶಕ್ತಿಗೆ ದಿಕ್ಕುತಪ್ಪಿಸಿ ತಮ್ಮ ಲಾಭಕ್ಕೇ ಅಂಟಿಕೊಂಡಿರುತ್ತಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ.ರಾಜನು ತನ್ನ ಮಗಳನ್ನು ಬಯಸಿ ಪ್ರಾಣಿಯ ಮಟ್ಟಕ್ಕೆ ಇಳಿಯುವುದನ್ನು ಕೂಡ ವಿಪ್ರರು ಸಮ್ಮತಿಸುವುದನ್ನು ಕಂಡು ಬಸವಣ್ಣನವರು ವಿಷಣ್ಣವದನರಾಗಿದ್ದಾರೆ. ತಮ್ಮ ಶರಣರ ಧರ್ಮ ಈ ವಿಪ್ರರ ಧರ್ಮಕ್ಕೆ ತದ್ವಿರುದ್ಧವಾದುದು ಎಂಬುದನ್ನು ಈ ಕೆಳಗಿನ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ.
ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು.
ಉದ್ಧರಿಸುವನೊಬ್ಬ, ಶಿವಶರಣ ಸಾಲದೆ?
ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ.
ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ.
ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ.
ಕೂಟ್ಟ ದಾಸ ತವನಿಧಿಯ ಪಡೆದ.
ಕಪಟದಿಂದ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ.
ಕೊಟ್ಟ ಕರ್ಣ ಕಳದಲ್ಲಿ ಮಡಿದ.
ಕಾಮಾರಿ ಜಂಗಮವಾಗಿ ಬಂದು ಸಿರಿಯಾಳನ ಮಗನ ಬೇಡಿದ.
ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರ ಕೈಲಾಸಕ್ಕೊಯ್ದ.
ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ.
ಕೊಟ್ಟ ನಾಗಾರ್ಜುನನ ಶಿರ ಹೋಯಿತ್ತು.
ಶಿವನು ಜಂಗಮವಾಗಿ ಬಂದು ಸಿಂಧುಬಲ್ಲಾಳ ವಧುವ ಬೇಡಿದ.
ಕೊಟ್ಟ ಸಿಂಧು ಬಲ್ಲಾಳ ಸ್ವಯಲಿಂಗವಾದ.
ಇದು ಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು;
ಕೊಡಿರೆ, ನಮ್ಮ ಕೂಡಲಸಂಗನ ಶರಣರಿಗೆ.
-ಬಸವಣ್ಣ
ಶೈವರ ಮತ್ತು ವೈದಿಕರ ಪುರಾಣಕಥೆಗಳಲ್ಲಿನ ವೈವಿಧ್ಯವನ್ನು ಕೂಡ ಬಸವಣ್ಣನವರು ಕಂಡುಹಿಡಿದಿದ್ದಾರೆ.ಬಸವಣ್ಣನವರು ಶೈವಕ್ಕೆ ಅಂಟಿಕೊಂಡವರಲ್ಲ. ಆದರೆ ಶೈವರ ‘ಭಕ್ತ ಪರ ನಿಲವು’ ಅವರಿಗೆ ಇಷ್ಟವಾಗಿದೆ.ಹೀಗಾಗಿ ಅವರು ವೈದಿಕದ ಜೊತೆ ಶೈವವನ್ನು ಹೊಲಿಸುತ್ತಾರೆ.ಹೀಗೆ ಹೋಲಿಸುವಾಗ ತಮ್ಮ ಪರಂಪರೆಯ ಮೂಲ ವೈದಿಕ ಅಲ್ಲ ಎಂಬುದನ್ನು ಸೂಚಿಸುವುದೇ ಅವರ ಉದ್ದೇಶವಾಗಿದೆ.
(ಮುಂದುವರೆಯುತ್ತದೆ…)

‍ಲೇಖಕರು avadhi

June 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

43 ಪ್ರತಿಕ್ರಿಯೆಗಳು

  1. ಅನ್ನಪೂರ್ಣ

    ಪ್ರಿಯ ಸತ್ಯನಾರಾಯಣ್ ಅವರೇ, “ಹಲವಾರು ಜನಸಾಮಾನ್ಯ ವಚನಕಾರರ ಹೆಸರುಗಳನ್ನೊಮ್ಮೆ ಗಮನಿಸಿ.ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮಾದಾರ ಚೆನ್ನಯ್ಯ, ಮೂಲದಲ್ಲಿ ಅಕ್ಕಸಾಲಿಗನಾಗಿದ್ದ ಕಿನ್ನರಿ ಬೊಮ್ಮಯ್ಯ, ಹೆಂಡದ ಮಾರಯ್ಯ, ನುಲಿಯ ಚಂದಯ್ಯ, ಬಹುರೂಪಿ ಚೌಡಯ್ಯ, ಮಾದಾರ ಧೂಳಯ್ಯ ಹೆಸರುಗಳ ಜೊತೆಯಲ್ಲಿ ಜಾತಿ ಸೂಚಕ ಪದಗಳಿವೆಯಲ್ಲವೆ?” ಅಂತ ಕೇಳಿದ್ದೀರಿ. ನಿಜಕೂ ಉತ್ತಮವಾದ ಪ್ರಶ್ನೆ ತಮ್ಮದು. ನಾನು ಈ ಸಂದರ್ಭದಲ್ಲಿ ತಮ್ಮ ಬಳಿ ಕೇಳಲೇ ಬೇಕಾದ ಪ್ರಶ್ನೆ ಇದು: ತಾವು ಇಲ್ಲಿ ನಮೂದಿಸಿರುವ ಎಲ್ಲಾ ವಚನಕಾರರು ಜಂಗಮರು, ಬಸವಣ್ಣನ ತತ್ವಾದರ್ಶಗಳಿಗೆ ಬದ್ಧರಾದವರು. ಅಂದರೆ ಜಾತಿರಹಿತ ಸರ್ವಸಮಾನ ಸಮಾಜದ ಆದರ್ಶಕ್ಕೆ, ಜಾತಿನಾಶ ಧೋರಣೆಗೆ ಬದ್ಧರಾದವರು. ಅಂತಹವರೇ ತಮ್ಮ ವಚನಗಳಲ್ಲಿ ತಮ್ಮ ತಮ್ಮ ಜಾತಿಯನ್ನು ಹೆಸರಿನೊಂದಿಗೆ ಬಳಸಿರುವುದು ಏಕೆ? ಎಲ್ಲರ ಎಲ್ಲಾ ವಚನಗಳಲ್ಲೂ ಜಾತಿ ನಮೂದಿತವಾಗಿರುವುದು ಜಾತಿರಹಿತ ಸಮಾಜದ ಆದರ್ಶಕ್ಕೆ ವಿರುದ್ಧವಾಗಿದೆ ಎಂದು ತಮಗೆ ಹಾಗೂ ರಂಜಾನ್ ದರ್ಗಾ ಅವರಿಗೆ ಅನ್ನಿಸುದಿಲ್ಲವೇ? ಜಾತಿನಾಶಕ್ಕೆ ಹೋರಾಟ ವಚನಗಳಲ್ಲೇ ತಮ್ಮ ಜಾತಿಯನ್ನು ಹೇಳಿಕೊಂಡಿರುವುದು ವಿಪರ್ಯಾಸವಲ್ಲವೇ?

    ಪ್ರತಿಕ್ರಿಯೆ
    • Ramjan Darga

      ‘ಹಲ್ಲ ತೆಗೆದು ಹಾವನಾಡಿಸ ಬಲ್ಲಡೆ ಹಾವಿನ ಸಂಗವೆ ಲೇಸು’ ಎಂದು ಅಕ್ಕ ಮಹಾದೇವಿ ಹೇಳಿದ್ದಾರೆ. ಈ ಕಾಯಕಗಳು ಜಗತ್ತಿನ ಎಲ್ಲೆಡೆ ಇವೆ. ಆದರೆ ಅವುಗಳನ್ನು ಕಾಯಕಗಳಾಗಿ ಪರಿಗಣಿಸಲಾಗುತ್ತದೆಯೆ ಹೊರತು ಜಾತಿಗಳಾಗಿ ಅಲ್ಲ. ಪ್ರತಿಯೊಂದು ಜಾತಿಯ ಹಿಂದೆ ಒಂದು ಕಾಯಕವಿದೆ. ಈ ಜಾತಿಯ ವಿಷವನ್ನು ತೆಗೆದೊಗೆದಾಗ ಕಾಯಕಜೀವಿಗಳು ಎಲ್ಲರೀತಿಯ ಕೀಳುರಿಮೆಯಿಂದ ಹೊರಬಂದು ತಮ್ಮ ಕ್ರಿಯಾಶೀಲತೆಯಿಂದ ಮತ್ತು ಘನತೆಯಿಂದ ತೇಜಸ್ವಿಗಳಾಗುತ್ತಾರೆ. ಎಲ್ಲ ಕಾಯಕಗಳೂ ಗೌರವಾರ್ಹವಾಗಿವೆ. ಅಂತೆಯೆ ಬಸವಣ್ಣನವರು ‘ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ’ ಎಂದು ಹೇಳುತ್ತಾರೆ. ಶರಣರ ವಿಶೇಷಣಗಳು ಜಾತಿ ಮೂಲದಿಂದ ಬಂದವುಗಳಲ್ಲ,ಶರಣ ಸಂಕುಲದಲ್ಲಿ ಘನತೆವೆತ್ತ ಕಾಯಕಗಳಿಂದ ಬಂದವು. ಆದ್ದರಿಂದ ಶರಣರ ವಿಶೇಷಣಗಳನ್ನು ಮನುವಾದಿ ದೃಷ್ಟಿಕೋನದಿಂದ ನೋಡದೆ ಬಸವವಾದಿ ದೃಷ್ಟಿಕೋನದಿಂದ ನೋಡಬೇಕು.

      ಪ್ರತಿಕ್ರಿಯೆ
  2. ಅನ್ನಪೂರ್ಣ

    ಪ್ರಿಯ ಸತ್ಯನಾರಾಯಣ್ ಅವರೇ, “ಬಸವಣ್ಣನ ಈ ವಚನವನ್ನು ಸ್ವಲ್ಪ ಗಮನಿಸಿ
    ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
    ಮಂಡೋದರಿ ಕಪ್ಪೆಯ ಮಗಳು.
    ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ?
    ಸಾಕ್ಷ್ಯಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ,
    ಕೌಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ!
    ಮಾದಾರ ಚನ್ನಯ್ಯನ ಒಂದು ವಚನ ಹೀಗಿದೆ.
    ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ
    ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ
    ಕಶ್ಯಪ ಕಮ್ಮಾರ, ರೋಮಜ ಕಂಚುಗಾರ
    ಕೌಂಡಿಲ್ಯ ನಾವಿದನೆಂಬುದನರಿದು”
    ಅಂತ ಬಸವಣ್ಣ ಹಾಗೂ ಮಾದರ ಚನ್ನಯನ ವಚನಗಳ ಉಲ್ಲೇಖ ಮಾಡಿದ್ದೀರಿ. ಈ ವಚನಗಳ ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಕೆಲವು ಪ್ರಶ್ನೆಗಳನ್ನು ತಮಗೆ ಕೇಳಬಯಸುತ್ತೇನೆ. ಒಂದೆಡೆ ರಂಜಾನ್ ದರ್ಗಾ ಹಾಗೂ ಮತ್ತಿತರ ವಚನವಿದ್ವಾಂಸರು ಬಸವಣ್ಣ (ಹಾಗೂ ಎಲ್ಲಾ ವಚನಕಾರರು) ವೈದಿಕ ಧರ್ಮದ ವಿರೋಧಿಗಳಾಗಿದ್ದರು ಹಾಗೂ ಅದರ ವಿರುದ್ಧ ಹೋರಾಡಿದರು ಅಂತ ಹೇಳುತ್ತಲೇ ಬಂದಿದ್ದೀರಿ. ಇನ್ನೊಂದೆಡೆ ತಾವೇ ಉಲ್ಲೇಖಿಸಿರುವ ವಚನಗಳಲ್ಲಿ ಅದೇ ವಚನಕಾರರು ವೈದಿಕ ಪರಂಪರೆಗೆ ಸೇರಿದ ಋಷಿಗಳಾದ ವ್ಯಾಸ, ಮಾರ್ಕಂಡೇಯ, ಅಗಸ್ತ್ಯ, ದೂರ್ವಾಸ, ಕಶ್ಯಪ, ಕೌಂಡಿನ್ಯ, ಸಾಂಖ್ಯ, ಮೊದಲಾದವರ ಜಾತಿ ಯಾವುದೆಂದು ಹೇಳಿದ್ದಾರೆ. ಅಂದರೆ ಬಸವಣ್ಣ ಹಾಗೂ ಮಾದಾರ ಚನ್ನಯ್ಯ ಇಬ್ಬರೂ (ಬಹುಶಃ ಮಿಕ್ಕ ವಚನಕಾರರೂ), ವೈದಿಕ ಪರಂಪರೆಗೆ ಸೇರಿದ ಬ್ರಾಹ್ಮಣರೇತರ ಋಷಿಗಳ ಬಗ್ಗೆ ಗೌರವ ಭಾವವನ್ನೂ ಇಟ್ಟುಕೊಂಡಿದ್ದರು ಎಂದಾಯಿತಲ್ಲವೇ? ಹಾಗಾದರೆ ವಚನಕಾರರು ವೈದಿಕ ವಿರೋಧಿ ಎಂದು ಹೇಗೆ ಹೇಳಲು ಸಾಧ್ಯವಾಗುತ್ತದೆ? ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ?

    ಪ್ರತಿಕ್ರಿಯೆ
    • Ramjan Darga

      ಶರಣರಾಗಲಿ, ಶರಣರ ಅನುಯಾಯಿಗಳಾಗಲಿ ಬ್ರಾಹ್ಮಣರ ವಿರೋಧಿಗಳಲ್ಲ. ಹಾಗೆ ಆಗುವುದು ಅಮಾನುಷವಾದುದು. ಎಲ್ಲರೂ ಸಮಾನರು ಎಂದು ಶರಣರು ಹೇಳುತ್ತಾರೆ. ಅದು ನಮಗೆ ಖುಷಿ ಕೊಡುತ್ತದೆ. ಯಾವುದೇ ಜಾತಿಯವನು ಅಥವಾ ಧರ್ಮದವನು ದೊಡ್ಡವನಲ್ಲ. ಬ್ರಹ್ಮ ತೇಜಸ್ಸು ಮತ್ತು ಕ್ಷಾತ್ರ ತೇಜಸ್ಸು ಎಂಬುದು ಎಲ್ಲ. ಮಾನವರಿಗೆ ಇರುವುದು ಮಾನವ ತೇಜಸ್ಸು ಮಾತ್ರ. ಬ್ರಾಹ್ಮಣರ ಗೋತ್ರ ಪುರುಷರೆಲ್ಲ ಕಾಯಕಜೀವಿಗಳ ಮೂಲದಿಂದ ಬಂದವರಾಗಿದ್ದಾರೆ. ಜ್ಞಾನದ ಮೂಲ ಅನುಭವದಲ್ಲಿದೆ. ಕಾಯಕ ಜೀವಿಗಳ ಅನುಭವದಿಂದ ಬಂದ ಜ್ಞಾನವನ್ನು ಭಾರತದಲ್ಲಿ ಬ್ರಾಹ್ಮಣರು ಕ್ರೋಡೀಕರಿಸಿದರು. ಕಾಯಕಜೀವಿಗಳನ್ನು ಅಕ್ಷರ ಲೋಕದಿಂದ ದೂರ ಇಟ್ಟರು. ಕಾಯಕಜೀವಿಗಳ ಮೂಲದಿಂದ ಬಂದ ಗೋತ್ರಪುರುಷರನ್ನು ನೆನೆಪಿಸಿಕೊಂಡು ಕೆಳಜಾತಿಗಳ ಜನರನ್ನು ಸಮಾನತೆಯಿಂದ ಕಾಣಿರಿ ಎಂಬುದನ್ನು ಸ್ವತಃ ಬ್ರಾಹ್ಮಣ ಮೂಲದಿಂದ ಸಿಡಿದೆದ್ದು ಬಂದ ಬಸವಣ್ಣನವರು ಬ್ರಾಹ್ಮಣರಿಗೆ ಕಿವಿಮಾತು ಹೇಳಿದ್ದಾರೆ.

      ಪ್ರತಿಕ್ರಿಯೆ
      • Somalinga Kharge

        “ಕಾಯಕ ಜೀವಿಗಳ ಅನುಭವದಿಂದ ಬಂದ ಜ್ಞಾನವನ್ನು ಭಾರತದಲ್ಲಿ ಬ್ರಾಹ್ಮಣರು ಕ್ರೋಡೀಕರಿಸಿದರು” ಸರ್, ಕಾಯಕ ಜೀವಿಗಳಿಂದ ಯಾವ ಜ್ಞಾನವನ್ನು ಬ್ರಾಹ್ಮಣರು ಕ್ರೋಡೀಕರಿಸಿದರು? ಆ ಜ್ಞಾನದ ಪರಿಚಯ ತಮಗೆ ಇದ್ದರೆ ನಮಗೂ ಮಾಡಿಕೊಡಿ. ಹಾಗೂ ಬ್ರಾಹ್ಮಣರು ಕ್ರೋಡೀಕರಿಸಿದರು ಎಂಬುದಕ್ಕೆ ತಮ್ಮ ಬಳಿ ಇರುವ ಪುರಾವೆ ಏನು?

        ಪ್ರತಿಕ್ರಿಯೆ
        • Ramjan Darga

          ಖರ್ಗೆ ಅವರೆ Frederic Engles ಅವರ ‘The Part Played by Labour in the Transition from Ape to Man’ ಪುಸ್ತಕ ಓದಿದಾಗ ಶ್ರಮದ ಮೂಲಕವೇ ನಾಗರೀಕತೆಯ ಸೃಷ್ಟಿಯಾದುದು ತಿಳಿದು ಬರುವುದು. ನಾಗರೀಕತೆಯ ಆರಂಭದಲ್ಲಿ ದುಡಿಯುವ ವರ್ಗವಿತ್ತೇ ಹೊರತಾಗಿ ಬ್ರಾಹ್ಮಣ ವರ್ಣ ಇರಲಿಲ್ಲ. ವೇದಗಳಿರಲಿಲ್ಲ, ದೇವಸ್ಥಾನಗಳೂ ಇರಲಿಲ್ಲ. ಇವೆಲ್ಲ ನಂತರದ ಸೃಷ್ಟಿ.

          ಪ್ರತಿಕ್ರಿಯೆ
          • ಸಹನಾ

            ಹೌದೌದು ಫ್ರೆಡ್ರಿಕ್ ಏಂಜಲ್ಸ್ ಹಾಗೆ ಬರೆದುಬಿಟ್ಟರೆ ಅದೇ ಸೃಷ್ಟಿಯ ಆರಂಭದಲ್ಲಿ ಆಗಿದ್ದಕ್ಕೆಲ್ಲಾ ಸಾಕ್ಷಿ!!! ಅವರೇ ನೋಡಿದ್ದರು ನೋಡಿ!!! ಏಂಜಲ್ಸ್ ಒಳ್ಳೆಯ ಐ ವಿಟ್ನೆಸ್ !!!!

          • Ramjan Darga

            ಸೃಷ್ಟಿಯ ಆರಂಭದಲ್ಲಿ ಆಗಿದ್ದಕ್ಕೆಲ್ಲಾ ವೇದಗಳು ಸಾಕ್ಷಿಯಾಗಿವೆಯೆ?

          • ಸಹನಾ

            ವೇಧಗಳು ಸಾಕ್ಷಿ ಎಂದು ನಾನೆಲ್ಲಾದರೂ ಹೇಳಿದೆನೇ? ವೇಧಕ್ಕೂ ನನಗೂ ಏನೂ ಸಂಬಂದವಿಲ್ಲ. ಅದರ ಬಗ್ಗೆ ವೈಯುಕ್ತಿಕವಾಗಿ ನನಗೆ ಯಾವ ಮೋಹವೂ ಇಲ್ಲ. ವಿತಂಡವಾದ ಏಕೆ ಮಾಡುತ್ತಿರುವಿರಿ?

          • Amaresh

            ವೇದಗಳು ಸಾಕ್ಷಿ ಅಂತ ಯಾರು ಹೇಳಿದರು? ವಿಷಯಾಂತರ ಮಾಡದೆ ಕೇಳಿದ ಪ್ರಶ್ನೆಗೆ ಉತ್ತರ ಕೊಡಿ ಮಾರಾಯ್ರೆ! ಸೃಷ್ಟಿಯ ಆರಂಭದಲ್ಲಿ ಆಗಿದ್ದನ್ನು ನಿಮ್ಮ ಎನ್ಜೆಲ್ಸ್ ಮಹಾನುಭಾವರು ನೋಡಿದ್ದರೇನು? ಅವರು ಏನೋ ಊಹಾಪೋಹ ಮಾಡಿದರು ಅಂತ ನೀವು ನಮಗೆ ಅದನ್ನೇ ಬಡಿಸಿ ತಿನ್ನಿ ಅಂತ ಬಲವಂತ ಮಾಡುವುದು ಎತ್ತಣ ನ್ಯಾಯ?

          • Ramjan Darga

            ಹಾಗಾದರೆ ನೀವು ಏನನ್ನು ಮತ್ತು ಯಾರನ್ನು ಸಾಕ್ಷಿಯಾಗಿ ಇಟ್ಟುಕೊಂಡು ಮಾತನಾಡುತ್ತೀರಿ? ಜೀವಿಗಳು ಈ ಭೂಮಿಗೆ ಬಂದಾಗಿನಿಂದಲೂ ನೀವು ಈ ಭೂಮಿಯ ಮೇಲೆಯೆ ಇರುವಿರಾ?

          • Somalinga Kharge

            ದರ್ಗಾ ಸರ್, ಕ್ಷಮಿಸಿ ತಮ್ಮ ಪ್ರತಿಕ್ರಿಯಲ್ಲಿ ನಾನು ಕೇಳಿದ ಪ್ರಶ್ನೆಗೆ ಉತ್ತರ ಇಲ್ಲ. ನಾನು ಕೇಳಿದ್ದು ಇದು: ಕಾಯಕ ಜೀವಿಗಳಿಂದ ಯಾವ ಜ್ಞಾನವನ್ನು ಬ್ರಾಹ್ಮಣರು ಕ್ರೋಡೀಕರಿಸಿದರು? ಆ ಜ್ಞಾನದ ಪರಿಚಯ ತಮಗೆ ಇದ್ದರೆ ನಮಗೂ ಮಾಡಿಕೊಡಿ. ಹಾಗೂ ಬ್ರಾಹ್ಮಣರು ಕ್ರೋಡೀಕರಿಸಿದರು ಎಂಬುದಕ್ಕೆ ತಮ್ಮ ಬಳಿ ಇರುವ ಪುರಾವೆ ಏನು? ದಯವಿಟ್ಟು ವಿಷಯಾಂತರ ಮಾಡದೆ ಪ್ರಶ್ನೆಗಳಿಗೆ ಉತ್ತರ ಕೊಡಿ.

          • Somalinga Kharge

            ಅಂದ ಹಾಗೆ Frederic Engels ಅವರ ‘The Part Played by Labour in the Transition from Ape to Man’ ಕೃತಿಯಲ್ಲಿ “ಕಾಯಕ ಜೀವಿಗಳ ಅನುಭವದಿಂದ ಬಂದ ಜ್ಞಾನವನ್ನು ಭಾರತದಲ್ಲಿ ಬ್ರಾಹ್ಮಣರು ಕ್ರೋಡೀಕರಿಸಿದರು” ಎಂಬ ಅಭಿಪ್ರಾಯ ಎಲ್ಲೂ ಇಲ್ಲವಲ್ಲ. ಎನ್ಜೆಲ್ಸ್ ಬ್ರಾಹ್ಮಣರ ಪ್ರಸ್ತಾಪವನ್ನೇ ಮಾಡಿಲ್ಲ ಈ ಕೃತಿಯಲ್ಲಿ.

          • Ramjan Darga

            ಎಂಗೆಲ್ಸ್ ತಮ್ಮ ಪುಸ್ತಕದಲ್ಲಿ ಬ್ರಾಹ್ಮಣರ ಪ್ರಸ್ತಾಪ ಮಾಡಬೇಕಿಲ್ಲ. ವಾನರನಾಗಿದ್ದವನು ದುಡಿಮೆಯಿಂದಾಗಿ ನರನಾದ. ಆ ನರನಾದವನು ನಂತರ ಬ್ರಾಹ್ಮಣನೂ ಆದ.
            ನಿಮ್ಮ ಪ್ರಕಾರ ಬ್ರಾಹ್ಮಣ ಬೇರೆ ಪ್ರಕಾರದಲ್ಲಿ ಜನಿಸಿದ್ದರೆ ಅಥವಾ ಪುರುಷಸೂಕ್ತದ ಪ್ರಕಾರ ವಿರಾಟ್ ಪುರುಷನ ಬಾಯಿಯಿಂದಲೇ ಜನಿಸಿದ್ದರೆ ದಯವಿಟ್ಟು ತಿಳಿಸಿ.

          • Amaresh

            [“ಎಂಗೆಲ್ಸ್ ತಮ್ಮ ಪುಸ್ತಕದಲ್ಲಿ ಬ್ರಾಹ್ಮಣರ ಪ್ರಸ್ತಾಪ ಮಾಡಬೇಕಿಲ್ಲ”]
            ಹಾಗಿದ್ದರೆ ಅವರ ಪುಸ್ತಕವನ್ನು ಓದಲು ಹೇಳಿದ್ದು ಯಾಕೆ?
            [ವಾನರನಾಗಿದ್ದವನು ದುಡಿಮೆಯಿಂದಾಗಿ ನರನಾದ]
            ವಾನರರು ಹಾಗೂ ಅವರ ಪೂರ್ವಜರು ದುಡಿಮೆ ಮಾಡುತ್ತಿರಲಿಲ್ಲವೇ? ಅವರೂ ಸಹ ನಿಮ್ಮ ಬ್ರಾಹ್ಮಣರ ಹಾಗೆ ಭೂಸುರರೆ ಆಗಿದ್ದರೇನು? 😛
            ನಿಮ್ಮ ಎನ್ಜೆಲ್ಸ್ ಮಹಾನುಭಾವರಿಗೆ ಡಾರ್ವಿನ್ನನ ವಿಕಾಸವಾದ ಗೊತ್ತಿರಲಿಲ್ಲ ಅಂತ ಕಾಣುತ್ತದೆ. ಒಮ್ಮೆ ಡಾರ್ವಿನ್ ಅನ್ನು ಓದಿಕೊಂಡು ಬಂದು ನಂತರ ವಾನರ ನರ ಹೇಗೆ ಆದ ಅಂತ ಪ್ರವಚನ ಕೊಡಲು ಅವರಿಗೆ ಹೇಳಿ.
            [ಆ ನರನಾದವನು ನಂತರ ಬ್ರಾಹ್ಮಣನೂ ಆದ]
            ಇಂತಹ ಹೇಳಿಕೆಗಳಿಂದ ಯಾವ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತು?!!
            [ನಿಮ್ಮ ಪ್ರಕಾರ ಬ್ರಾಹ್ಮಣ ಬೇರೆ ಪ್ರಕಾರದಲ್ಲಿ ಜನಿಸಿದ್ದರೆ ಅಥವಾ ಪುರುಷಸೂಕ್ತದ ಪ್ರಕಾರ ವಿರಾಟ್ ಪುರುಷನ ಬಾಯಿಯಿಂದಲೇ ಜನಿಸಿದ್ದರೆ ದಯವಿಟ್ಟು ತಿಳಿಸಿ.]
            ಬ್ರಾಹ್ಮಣನ ಜನನದ ವಿಷಯವನ್ನು ಬ್ರಾಹ್ಮಣರಿಗೆ ಬಿಡಿ. ನಿಮ್ಮ ಮಕ್ಕಳು ಯಾವ ಪ್ರಕಾರದಲ್ಲಿ ಜನಿಸಿದರು ಅಂತ ಕೇಳುವುದು ಎಷ್ಟು ಸಿಲ್ಲಿಯೋ ಅಷ್ಟೇ ಸಿಲ್ಲಿಯಾಗಿದೆ ನಿಮ್ಮ ಬ್ರಾಹ್ಮಣ ಜಪ.

          • Ramjan Darga

            ನೀವು ಶರಣರ ವಿಚಾರವನ್ನು ಶರಣರ ಅನುಯಾಯಿಗಳಿಗೆ ಬಿಡಿ.

          • Ramjan Darga

            ಹಾಗಾದರೆ ನೀವು ಪುರಷಸೂಕ್ತ ಸಿಲ್ಲಿ ಎನ್ನುವಿರಾ?
            ಬ್ರಾಹ್ಮಣ ಮೊದಲಾಗಿ ಶ್ವಪಚ ಕಡೆಯಾಗಿ ಎಲ್ಲರಿಗೆಯೂ ಜನನವೊಂದೆ;
            ಆಹಾರ, ನಿದ್ರೆ, ಭಯ, ಮೈಥುನವೊಂದೆ, ಪುಣ್ಯ ಪಾಪವೊಂದೆ, ಸ್ವರ್ಗವೊಂದೆ
            ಬೇರೆಂಬ ಭಂಗಿತರು ನೀವು ಕೇಳಿರೆ. (ಹಾವಿನಾಳ ಕಲ್ಲಯ್ಯ)

          • Ramjan Darga

            ಮಾನವನ ಇತಿಹಾಸವನ್ನು ತಿಳಿದುಕೊಳ್ಳುವುದರ ಮೂಲಕ ವರ್ಣವಾದಿಗಳ ಯೋಗ್ಯತೆಯನ್ನು ಅಳೆಯಲು ವಿಜ್ಞಾನಿ ಎಂಗೆಲ್ಸ್ ನಂಥವರ ಕೃತಿಗಳು ಬಹಳ ಮುಖ್ಯ ಎಂದು ನಿಮಗೆ ಅನಿಸದಿದ್ದರೆ ಅದು ನಿಮ್ಮ ಸಮಸ್ಯೆ.

          • Ramjan Darga

            ಖರ್ಗೆ ಅವರೆ, ನೀವು ಹೇಳುವುದು ಸರಿ. ಕನ್ತಪ್ಪಿನಿಂದ ಬ್ರಾಹ್ಮಣ ಶಬ್ದ ಬಿಟ್ಟುಹೋಗಿದೆ. ಆದರೆ ಭೂಸುರ ಎಂದರೆ ಬ್ರಾಹ್ಮಣ ಎಂದು ಕಿಟೆಲ್ ಶಬ್ದಕೋಶದಲ್ಲಿರುವುದನ್ನು ತಿಳಿಸಿರುವೆ. ಬ್ರಹ್ಮಜ್ಞಾನಿ ಎಂಬುದು ಬೇರೆ ಶಬ್ದಕೋದಲ್ಲಿ ಇರಬಹುದು. ಕಿಟೆಲ್ ಶಬ್ದಕೋಶದಲ್ಲಿ ಇಲ್ಲ. ಬ್ರಹ್ಮಜ್ಞಾನಿ ಎಂದರೆ ಯಾರು?
            ಮೋಸದಾಟದ ಪ್ರಶ್ನೆಯೆ ಇಲ್ಲ. ನಾನು ಹಾಗೆ ‘ಅವಧಿ’ಯಲ್ಲಿ ಇರದ ಲೇಖನದಲ್ಲಿ ಬರೆದದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ನನ್ನ ವಾದ ಅವಧಿ ಲೇಖನದಲ್ಲಿ ಆ ಮಾತನ್ನು ಬರೆದಿಲ್ಲ ಎನ್ನುವುದೇ ಆಗಿದೆ. ನಾನು ಅದೆಷ್ಟು ಸಲ ಹೇಳಿದರೂ ನೀವು ಅರಿತುಕೊಳ್ಳುವುದಕ್ಕೆ ಏಕೆ ಸಿದ್ಧರಾಗುತ್ತಿಲ್ಲ?

          • Amaresh

            “ಖರ್ಗೆ ಅವರೆ, ನೀವು ಹೇಳುವುದು ಸರಿ. ಕನ್ತಪ್ಪಿನಿಂದ ಬ್ರಾಹ್ಮಣ ಶಬ್ದ ಬಿಟ್ಟುಹೋಗಿದೆ.” ಅಂತೂ ಒಂದು ತಪ್ಪನ್ನಾದರೂ ಒಪ್ಪಿಕೊಂಡರಲ್ಲ! ಕಣ್ಣಿಗೆ ಹೊಡೆದು ಕಾಣುವ ಹಾಗೆ ತಪ್ಪು ಮಾಡಿ, ಆ ತಪ್ಪನ್ನು ವಿತ್ತಂಡವಾದದ ಮೂಲಕ ಸಮರ್ಥಿಸಿಕೊಳ್ಳಲು ಹೋಗಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮೇಲೆ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ.

          • Ramjan Darga

            ಎಂಥ ಅಸಭ್ಯ ಮಾತು. ಭೂಸುರ ಎಂದರೆ ಬ್ರಾಹ್ಮಣ ಅದರಲ್ಲಿ ಹೇಳಿಲ್ಲವೆ?

        • Ramjan Darga

          ವೇದಕ್ಕೆ ಕರ್ಮಕಾಂಡ ಎನ್ನವರು. ಕರ್ಮಕ್ಕೆ ದುಡಿಮೆ ಎಂಬ ಅರ್ಥವೂ ಇದೆ. ಅಲ್ಲಿ ಪ್ರಧಾನವಾಗಿರುವುದು ಈ ಭೂಮಿಯ ಮೇಲೆ ಬದುಕುವ ವಿಚಾರ. ಬದುಕನ್ನು ದುಡಿಮೆಯಿಂದ ಕಟ್ಟಲಾಗುತ್ತಿದೆ. ದುಡಿಮೆ ಮೊದಲು ಜ್ಞಾನ ನಂತರ. ಜ್ಞಾನಕ್ಕೆ ಕ್ರಿಯೆಯೆ ಮೊದಲು. ಈ ಹಿನ್ನೆಲೆಯಲ್ಲಿ ಶೂದ್ರರು ಮೊದಲು ಬ್ರಾಹ್ಮಣ ನಂತರ. ಶೂದ್ರರ ದುಡಿಮೆಯಿಂದ ಬಂದ ಜ್ಞಾನವನ್ನು ಅಕ್ಷರಕ್ಕಿಳಿಸಿದವರು ಬ್ರಾಹ್ಮಣರು. ನಾಟಿವೈದ್ಯರು ಮೊದಲು. ಅವರ ಅನುಭವದ ಆಧಾರದ ಮೇಲೆ ಆಯುರ್ವೇದ ಜನಿಸಿತು. ನಾಟಿ ವೈದ್ಯಕ್ಕೆ ದಾಖಲೆ ಇಲ್ಲ. ಆಯುರ್ವೇದಕ್ಕೆ ದಾಖಲೆ ಇದೆ. ಈ ಕ್ರಮದಲ್ಲಿ ಶೂದ್ರರ ಅನುಭವದ ಮೇಲೆ ಬ್ರಾಹ್ಮಣರ ಜ್ಞಾನ ನಿಂತಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ರಚಿಸಿದವರಾರೂ ಬ್ರಾಹ್ಮಣರಲ್ಲ. ರಾಮ ಮತ್ತು ಕೃಷ್ಣರೂ ಬ್ರಾಹ್ಮಣರಲ್ಲ.

          ಪ್ರತಿಕ್ರಿಯೆ
          • Ramjan Darga

            ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
            ಮಂಡೋದರಿ ಕಪ್ಪೆಯ ಮಗಳು.
            ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ?
            ಸಾಕ್ಷ್ಯಾತ್ ಅಗಸ್ತ್ಯ ಕಬ್ಬಿಲ, ದೂರ್ವಾಸ ಮಚ್ಚಿಗ, ಕಶ್ಯಪ ಕಮ್ಮಾರ,
            ಕೌಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ!
            ನಮ್ಮ ಕೂಡಲಸಂಗನ ವಚನವಿಂತೆಂದುದು:
            ಶ್ವಪಚೋಪಿಯಾದಡೇನು, ಶಿವಭಕ್ತನೇ ಕುಲಜಂ ಭೋ! (ಬಸವಣ್ಣ)
            ವೇದವನೋದಿ [ಬರೆದು ಅಲ್ಲ] ಹಾರುವನಾದ ಎಂದು ಬಸವಣ್ಣನವರು ತಿಳಿಸಿದ್ದಾರೆ. ಬರೆದವರು ದುಡಿಯವು ಶೂದ್ರ ವರ್ಗದ ವೇದವ್ಯಾಸರು! ಬ್ರಾಹ್ಮಣರ ಗೋತ್ರಪುರುಷರು ದುಡಿಯುವ ವರ್ಗದವರಲ್ಲವೆ?

          • Ramjan Darga

            ಸಪ್ತ ಧಾತು ಸಮಂಪಿಂಡಮ ಸಮಯೋನಿ ಸಮುದ್ಭವಂ
            ಆತ್ಮ ಜೀವ ಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ? (ಬಸವಣ್ಣ)

          • Ramjan Darga

            ಕುಲವೆಂದು ಹೋರಾಡುವ ಅಣ್ಣಗಳಿರಾ ಕೇಳಿರೋ
            ಕುಲವೇ ಡೋಹರನ? ಕುಲವೇ ಮಾದಾರನ?
            ಕುಲವೆ ದೂರ್ವಾಸನ? ಕುಲವೆ ವ್ಯಾಸನ? ಕುಲವೆ ವಾಲ್ಮೀಕನ?
            ಕುಲವೆ ಕೌಂಡಿನ್ಯನ?
            ಕುಲವ ನೋಳ್ಪಡೆ ಹುರುಳಿಲ್ಲ.
            ಅವರ ನಡೆಯ ನೋಳ್ಪಡೆ ನಡೆಯುವವರು ತ್ರಿಲೋಕದಲ್ಲಿಲ್ಲ ನೋಡಾ
            ಕಪಿಲಸಿದ್ಧಮಲ್ಲಿಕಾರ್ಜುನಾ. (ಸಿದ್ಧರಾಮ)
            ವಾಲ್ಮೀಕನ ಶೇಷ ಪ್ರಸಾದವೆಲ್ಲ ಸಂಸ್ಕೃತಮಯವಾಯಿತು ಮರ್ತ್ಯಕ್ಕೆ;
            ದೂರ್ವಾಸನ ಉಪದೇಶವೆಲ್ಲ ಚಂಡಾಲರ ಮುನಿಗಳ ಮಾಡಿತ್ತು ಸ್ವರ್ಗಕ್ಕೆ;
            ಕುಲವೆಂದಡೆ ಮಲತ್ರಯಗಳು ಬಿಡವು ನೋಡಾ,
            ಕಪಿಲಸಿದ್ಧ ಮಲ್ಲಿಕಾರ್ಜುನಾ. (ಸಿದ್ಧರಾಮ)
            ಕುಲದಿಂದಧಿಕವೆಂದು ಹೋರಾಡುವ ಅಣ್ಣಗಳಿರಾ, ಕೇಳಿರಯ್ಯಾ
            ಬ್ರಾಹ್ಮಣನವ ಮಧುವಯ್ಯ, ಚಂಡಾಲನವ ಹರಳಯ್ಯ’
            ದೂರ್ವಾಸನವ ಮಚ್ಚಿಗ, ಊರ್ವಸಿಯಾಕೆ ದೇವಾಂಗನೆ,
            ಚಂಡಾಲನ ಪರಾಶರ, ಕುಸುಮಗಂಧಿಯಾಕೆ ಕಬ್ಬಿಲಗಿತ್ತಿ.
            ಜಪತಸ್ತಪತೋ ಗಣತಃ ಕಪಿಲಸಿದ್ಧಮಲ್ಲಿಕಾರ್ಜುನಾ
            ಕೇಳಾ ಕೇದಾರಯ್ಯಾ. (ಸಿದ್ಧರಾಮ)
            ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ
            ತಲೆವಾಗುವೆ ನಾನು ಕುಲಜರೆಂದು. (ಜೇಡರ ದಾಸಿಮಯ್ಯ)
            ಚಾಂಡಾಲನಾದಡೇನು! ಶಿವಭಕ್ತನೆ ಕುಲಜನು.
            ….
            ನಮ್ಮ ಭಕ್ತರನು ಅವರಿವರೆಂದು ಕುಲವನೆತ್ತಿ ನುಡಿದಂಗೆ
            ಇಪ್ಪತ್ತೇಳು ಕೋಟಿ ನರಕ ತಪ್ಪದು.
            ಬಸವಪ್ರಿಯ ಕೂಡಲಚನ್ನಸಂಗಮದೇವಾ. (ಹಡಪದ ಅಪ್ಪಣ್ಣ)

  3. ಅನ್ನಪೂರ್ಣ

    ವಚನಗಳನ್ನು ಓದುತ್ತಾ ಹೋದಂತೆ ಅನೇಕ ಆಶ್ಚರ್ಯಕರ ವಿಷಯಗಳು ಹೊರಬೀಳತೊಡಗುತ್ತವೆ! ಈಗ ನೋಡಿ “’ವರ್ಣಾನಾಂ ಬ್ರಾಹ್ಮಣೋ ಗುರುಃ’ ಎಂಬುದು ಹುಸಿ, ’ವರ್ಣಾನಾಂ ಗುರುಃ’ ನಮ್ಮ ಕೂಡಲ ಸಂಗನ ಶರಣರು” ಎಂಬ ಸಾಲುಗಳನ್ನು. ಇಲ್ಲಿ ವರ್ಣಸಮಾಜಕ್ಕೆ ಬ್ರಾಹ್ಮಣನು ಗುರುವು ಎಂಬ ಅಭಿಪ್ರಾಯವನ್ನು ಶರಣರು ತಿರಸ್ಕರಿಸಿ ವರ್ಣಸಮಾಜಕ್ಕೆ ಶರಣರೇ ಗುರುವು ಎಂದು ಹೇಳಿದ್ದಾರೆ. ಇದರರ್ಥ ಏನು? ಶರಣರಿಗೆ ವರ್ಣಸಮಾಜ ಒಪ್ಪುಗೆ ಇತ್ತು, ಅವರ ತಕರಾರು ಇದ್ದದ್ದು ಆ ಸಮಾಜಕ್ಕೆ ಗುರು ಯಾರು ಎಂಬುದರ ಬಗ್ಗೆ ಎಂದಲ್ಲವೇ!
    ಹಾಗೆ ಈ ಸಾಲುಗಳನ್ನು ನೋಡಿ:
    “ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ?
    ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ!
    ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ
    ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.”
    ಇಲ್ಲಿ ಶರಣರಿಗೆ ಹೊಲೆಯರ ಬಗ್ಗೆ ಯಾವ ಭಾವವಿತ್ತು ಎಂಬುದು ಸ್ಪಷ್ಟವಾಗುತ್ತದೆ. ವಿಪ್ರರು ನುಡಿದಂತೆ ನಡೆಯದಿರುವುದಕ್ಕೆ ಶರಣರು ಕೊಡುವ ಕಾರಣವೇನು? ಇದು: [ವಿಪ್ರರು] ಹೊಲೆಯರ ಬಸುರಲ್ಲಿ ಹುಟ್ಟಿ ಗೋಮಾಂಸ ತಿಂದಿದ್ದಾರೆ. ಅಂದರೆ ಹೊಲೆಯರ ಬಸುರಲ್ಲಿ ಹುಟ್ಟಿ ಗೋಮಾಂಸ ತಿಂದವರೆಲ್ಲರೂ ನುಡಿದಂತೆ ನಡೆಯದ ಜನ ಎಂದಾಯಿತಲ್ಲವೆ!!

    ಪ್ರತಿಕ್ರಿಯೆ
    • Ramjan Darga

      ವರ್ಣ ಎಂಬ ಶಬ್ದಕ್ಕೆ ಕುಲಜ, ಶ್ರೇಷ್ಠ ಎಂಬ ಅರ್ಥಗಳೂ ಇವೆ. ಕುಲಜನಾದ ಬ್ರಾಹ್ಮಣನೇ ಗುರು ಅಲ್ಲ; ಕುಲಜರಾದ ನಮ್ಮ ಕೂಡಲಸಂಗನ ಶರಣರೆ ಕುಲಜರು ಎಂಬುದು ಇದರ ತಾತ್ಪರ್ಯ. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವ’ ಎಂದು ಹೇಳುವ ಮೂಲಕ ಬಸವಣ್ಣನವರು ದೇವರನ್ನೂ ಬಿಟ್ಟಿಲ್ಲ. ಇನ್ನೊಂದು ವಚನದಲ್ಲಿ ‘ಕುಲವೇನೋ ಅವದಿರ ಕುಲವೇನೋ, ನಮ್ಮ ಕೂಡಲಸಂಗನ ಶರಣರೆ ಕುಲಜರು ಎಂದು ಬಸವಣ್ಣನವರು ಬ್ರಾಹ್ಮಣರ ಪ್ರಾಬಲ್ಯವನ್ನು ಅಲ್ಲಗಳೆದು ಕಾಯಕಜೀವಿಗಳನ್ನು ಎತ್ತಿ ಹಿಡಿದಿದ್ದಾರೆ. ಹೊಲಸು ತಿಂಬುವನೆ ಹೊಲೆಯ, ಕೊಲುವನೆ ಮಾದಿಗ ಎಂದು ಆ ವಚನ ಆರಂಭವಾಗುತ್ತದೆ. ದುಡಿದು ತಿನ್ನುವ ಹೊಲೆಯರು ಹೊಲೆಯರಲ್ಲ, ದುಡಿಯದೆ ತಿನ್ನುವವರು ಹೊಲೆಯರು. ಮಾದಿಗರು ಕೊಲ್ಲುವುದಿಲ್ಲ ಸತ್ತುದನು ಎತ್ತುತ್ತಾರೆ. ಹಿಂದಿನ ಕಾಲದಲ್ಲಿ ಯಜ್ಞಗಳು ವರ್ಷಗಟ್ಟಲೆ ನಡೆಯುತ್ತಿದ್ದವು. ಬ್ರಾಹ್ಮಣರು ಯಜ್ಞದಲ್ಲಿ ಭಾಗವಹಿಸುತ್ತ ದುಡಿಯದೆ ತಿನ್ನುತ್ತಿದ್ದರು. ಅಲ್ಲದೆ ಯಜ್ಞದಲ್ಲಿ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರು. ಹೀಗೆ ತಿನ್ನುವವರು ಮತ್ತು ಕೊಲ್ಲುವವರೇ ಹೊಲೆ ಮಾದಿಗರು ಎಂದು ಬಸವಣ್ಣನವರು ಸೂಚ್ಯವಾಗಿ ಹೇಳಿದ್ದಾರೆ.
      ರಾಜ ರಂತಿದೇವ ಯಜ್ಞದಲ್ಲಿ ಎಷ್ಟೊಂದು ಪ್ರಾಣಿಗಳ ಬಲಿ ಕೊಟ್ಟಿದ್ದನೆಂದರೆ ಅವುಗಳನ್ನು ಕೊಲ್ಲುವುದರಿಂದ ಹರಿದ ರಕ್ತದಿಂದಲೇ ಚರ್ಮನ್ವತಿ ನದಿಯಾಯಿತೆಂದು ಕಾಳಿದಾಸ ‘ಮೇಘದೂತ’ದಲ್ಲಿ ತಿಳಿಸಿದ್ದಾನೆ.ಚರ್ಮದಿಂದ ಸುರಿದ ರಕ್ತದಿಂದ ಹುಟ್ಟಿದ್ದು ಚರ್ಮನ್ವತಿ! ಇಂಥವರು ಗುರುಗಳಲ್ಲ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಕುಲಜರಾದ ಕೂಡಲಸಂಗನ ಶರಣರೇ ಗುರುಗಳು ಎಂಬುದು ಅನ್ನಪೂರ್ಣ ಅವರು ಉಲ್ಲೇಖಿಸಿದ ವಚನದ ಸಾಲುಗಳ ತಾತ್ಪರ್ಯ.
      ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ… ಎಂಬುದು ಅನೈತಿಕ ಬ್ರಾಹ್ಮಣರ ಕುರಿತ ಮಾತು. ದಲಿತರಿಗೆ ಮಾಡಿದ ಅವಮಾನವಲ್ಲ.

      ಪ್ರತಿಕ್ರಿಯೆ
      • Amaresh

        ದರ್ಗಾ ಅವರೇ, ಅನ್ನಪೂರ್ಣ ಅವರು ಉಲ್ಲೇಖಿಸಿದ ವಚನಕ್ಕೂ ತಾವು ಕೊಟ್ಟ “ತಾತ್ಪರ್ಯ”ಕ್ಕೂ ತಾಳ ಮೇಳ ಇಲ್ಲವಲ್ಲ! ಕೇಳಿದ ಪ್ರಶ್ನೆಗೆ ಸಂಬಂಧವಿಲ್ಲದ ಉತ್ತರ ಕೊಡುವುದು ತಮ್ಮ ಪ್ರತಿಭೆಯ ಕುರುಹು ಅಂತ ಕಾಣುತ್ತದೆ. ಇರಲಿ.
        ೧] ಕುಲ ಎಂಬ ಪರಿಕಲ್ಪನೆಯೇ ತಪ್ಪು ಎಂಬ ಭಾವ ವಚನಕಾರಿಗೆ ನೀವು ಹೇಳುವ ಹಾಗೆ ಇದ್ದಿದ್ದರೆ ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವ’ ಎಂಬ ಸಾಲಿನಲ್ಲಿ ‘ಕುಲಕ್ಕೆ ತಿಲಕ’ ಎಂಬ phrase ಅನ್ನು ಏಕೆ ಬಳಸುತ್ತಿದ್ದರು? ಕುಲ ಎಂಬುದೇ ಅಸಂಬದ್ಧ ಎಂದಾದ ಮೇಲೆ ಕುಲತಿಲಕ ಎಂಬುದೂ ಅಸಂಬದ್ಧ ಅಲ್ಲವೇ?
        ೨] “ವರ್ಣ ಎಂಬ ಶಬ್ದಕ್ಕೆ ಕುಲಜ, ಶ್ರೇಷ್ಠ ಎಂಬ ಅರ್ಥಗಳೂ ಇವೆ” ವಚನಗಳಲ್ಲಿ ಬಳಸಲ್ಪಟ್ಟಿರುವ ಪದಗಳಿಗೆ ಆ ಅರ್ಥವಿರಲಿ ಬಿಡಲಿ, ನಿಮಗೆ ಬೇಕಾದ ಅರ್ಥವನ್ನು ಫಿಟ್ ಮಾಡುವುದು ನಿಮ್ಮ ದಂಧೆ. ನಿಮ್ಮ ಮಿತ್ರ ಸತ್ಯನಾರಾಯಣ ಅವರು ವರ್ಣಕ್ಕೆ ಅಕ್ಷರ ಎಂಬ ಅರ್ಥ ಇದೆ, ವಚನಕಾರರು ಅದೇ ಅರ್ಥದಲ್ಲಿ ಬಳಸಿದ್ದಾರೆ ಅಂತ ಇಲ್ಲಿ ವಾದ ಹೂಡಿದ್ದರು. ಈಗ ನೀವು ಕುಲಜ ಎಂಬ ಅರ್ಥದಲ್ಲಿ ವಚನಕಾರರು ಬಳಸಿದ್ದಾರೆ ಅಂತಿದ್ದೀರಿ. ಅಕ್ಷರ ಹಾಗೂ ಕುಲಜ ಒಂದೇ ಅರ್ಥವಲ್ಲವಾದುದರಿಂದ ನಿಮ್ಮಲ್ಲೇ ಅರ್ಥದ ಬಗ್ಗೆ ಭೇದವಿದೆ. ಇನ್ನು ವಚನಕಾರು ಯಾವ ಅರ್ಥದಲ್ಲಿ ಬಳಸಿದ್ದರು ಅಂತ ನೀವೇನು ನಮಗೆ ಹೇಳುವುದು?!!
        ೩] ವಚನಕಾರಿಗೆ ಗೋಮಾಂಸ ತಿನ್ನುವುದು ತಪ್ಪಲ್ಲ ಸರಿ ಅನ್ನುವ ಭಾವ ಇದ್ದಿದ್ದರೆ (ನೀವು ಅವರ ಮೇಲೆ ಆ ಭಾವವನ್ನು ಆರೋಪಿಸಿರುವ ಹಾಗೆ), ಅವರೇಕೆ ಬ್ರಾಹ್ಮಣರನ್ನು “ವಿಪ್ರರು ನುಡಿದಂತೆ ನಡೆಯರು” ತೆಗಳಲು “ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ” ಅಂತ ಹೇಳುತ್ತಿದ್ದರು?!! ಹೊಲೆಯರ ಬಸುರಲ್ಲಿ ಹುಟ್ಟುವುದು ಶ್ರೇಷ್ಠ ಹಾಗೂ ಗೋಮಾಂಸ ತಿನ್ನುವುದು ಶ್ರೇಷ್ಠ ಎಂಬ ಭಾವ ವಚನಕಾರಿಗೆ ಇರಲಿಲ್ಲ ಎಂಬುದಕ್ಕೆ ಈ ವಚನವೇ ನಿದರ್ಶನ.

        ಪ್ರತಿಕ್ರಿಯೆ
        • Ramjan Darga

          ಅಮರೇಶ್ ಅವರೆ, ಕುಲ ಕುಲ ಎಂದು ತಮ್ಮ ಹಿರಿಮೆಯನ್ನು ಹೇಳುತ್ತ ತಿರುಗುವ ಬ್ರಾಹ್ಮಣರಿಗಿಂತಲೂ ಸತ್ಯಶುದ್ಧ ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಬದುಕುತ್ತ ಶರಣ ಸಂಕುಲಕ್ಕೆ ಆದರ್ಶಪ್ರಾಯರಾಗಿದ್ದ ಮಾದಾರ ಚನ್ನಯ್ಯನವರು, ಮನುವಾದಿ ಸಮಾಜದಲ್ಲಿ ಕಟ್ಟಕಡೆಯ ಮನುಷ್ಯರಾಗಿದ್ದರೂ ಬಸವ ಸಮಾಜದಲ್ಲಿ ದೇವರಿಗಿಂತಲೂ ದೊಡ್ಡವರಾದರು. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ, ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ’ ಎಂದು ಬಸವಣ್ಣನವರು ಹೇಳಿದ್ದು, ಕೆಳಜಾತಿಯವರು ತಮ್ಮ ಸಚ್ಚಾರಿತ್ರದಿಂದ ಉನ್ನತ ಸ್ಥಾನಕ್ಕೆ ಏರಬಲ್ಲರು ಎಂಬುದನ್ನು ಸೂಚಿಸುವುದಕ್ಕೆ.
          ವಚನಗಳು ಕಾವ್ಯವೂ ಆಗಿರುವುದರಿಂದ ಅವು ಶಬ್ದಾರ್ಥಗಳನ್ನಷ್ಟೇ ಅಲ್ಲದೆ ಲಕ್ಷಣಾರ್ಥ ಮತ್ತು ದ್ವನ್ಯರ್ಥಗಳನ್ನೂ ಒಳಗೊಂಡಿವೆ ಎಂಬುದರ ಕಡೆಗೆ ಗಮನವಿರಲಿ. ಆಗ ಮಾತ್ರ ವಚನಗಳು ಅರ್ಥವಾಗುತ್ತವೆ.

          ಪ್ರತಿಕ್ರಿಯೆ
          • Amaresh

            ಅನ್ನಪೂರ್ಣ ಅವರು ಉಲ್ಲೇಖಿಸಿದ ವಚನಕ್ಕೂ ತಾವು ಕೊಟ್ಟ “ತಾತ್ಪರ್ಯ”ಕ್ಕೂ ತಾಳ ಮೇಳ ಇಲ್ಲ! ಬಸವಣ್ಣನವರು ಯಾವ ವಚನದಲ್ಲಿ ಮನುಸ್ಮೃತಿಯನ್ನು ಉಲ್ಲೇಖಿಸಿದ್ದಾರೆ ಅಂತ ಹೇಳುವ ನೈತಿಕ ಸ್ಥೈರ್ಯ ತಮಗೆ ಕೂಡಲಸಂಗಮದೇವರು ಕೊಡಲಿ.

  4. ಅನ್ನಪೂರ್ಣ

    ರಂಜಾನ್ ಸರ್,
    “ಶೂದ್ರ ಭಕ್ತನಾದಡೇನಯ್ಯಾ ಸ್ವಜಾತಿ ಎಂಬುದ ಬಿಡದನ್ನಕ್ಕ
    ಇಂತೀ ಜಾತಿಡಂಬಕರ ಮೆಚ್ಚುವನೆ ಕೂಡಲಚನ್ನಸಂಗಮದೇವ?”
    ಎಂಬ ಸಾಲುಗಳಲ್ಲಿ ಚನ್ನಬಸವಣ್ಣನವರು ಶೂದ್ರರನ್ನೂ ಸರಿಯಾಗಿ ಬೆಂಡೆತ್ತಿದ್ದಾರಲ್ಲ! ಬ್ರಾಹ್ಮಣ ಸೂತಕಗಳನ್ನೂ ಬಿಡ ಆದರೆ ಶೂದ್ರ ಸ್ವಜಾತಿ ಪ್ರೇಮ/ಪ್ರಜ್ಞೆ ಬಿಡ! ಇದು ಚನ್ನಬಸವಣ್ಣನವರ ಕಾಲದ ಸಾಮಾಜಿಕ ಸತ್ಯ.
    ತಾವು ” ಬ್ರಾಹ್ಮಣರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು.” ಅಂತ ಬರೆದಿದ್ದೀರಿ. ಆದರೆ ತಾವು ಇಲ್ಲಿ ಉಲ್ಲೇಖಿಸಿರುವ ವಚನದಲ್ಲಿ ಬಸವಣ್ಣನವರು “ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!” ಅಂತ ಹೇಳಿದ್ದಾರೆ!! ಗಮನಿಸಬೇಕಾದದ್ದು ಇಲ್ಲಿ ಬಡಹಾರುವ ಎಂಬ ಪದಪ್ರಯೋಗ. ಭೂಸುರರೇ ಆಗಿದ್ದ ಹಾರುವರು ಬಡವರೂ ಆಗುವುದು ಹೇಗೆ ಸಾಧ್ಯ??

    ಪ್ರತಿಕ್ರಿಯೆ
    • Ramjan Darga

      ಬ್ರಾಹ್ಮಣರು ಒಡಲಿಲ್ಲದವರು, ಊಟ ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು ಎಂದೂ ನಾನು ಎಲ್ಲಿಯೂ ಬರೆದಿಲ್ಲ. ದಾರಿ ತಪ್ಪಿಸುವ ಮಾತುಗಳನ್ನು ಬರೆಯಬಾರದು. ನಾನು ಬಡ ದಲಿತರ ಪರ ಇರುವಷ್ಟೇ ಬಡ ಬ್ರಾಹ್ಮಣರ ಪರವೂ ಇದ್ದೇನೆ. ನಾನು ಜಾತಿ ಮತ್ತು ಧರ್ಮಗಳಿಂದ ಜಗತ್ತನ್ನು ನೋಡುವುದಿಲ್ಲ. ವರ್ಗಪ್ರಜ್ಞೆಯಿಂದ ನೋಡುತ್ತೇನೆ. ನಾನು ಬಂಡವಾಳಶಾಹಿ ಮುಸ್ಲಿಮರ ಜೊತೆ ಇರುವವನಲ್ಲ. ಬಡ ಕಾರ್ಮಿಕರ ಜೊತೆ ಇರುವವನು. ಅವರು ಬಡ ಬ್ರಾಹ್ಮಣರಾಗಿರಬಹುದು, ದಲಿತರಾಗಿರಬಹುದು, ಮುಸ್ಲಿಮರಾಗಿರಬಹುದು; ಅವರೇ ನನ್ನ ಸಂಗಾತಿಗಳು.
      ಇನ್ನು ಚನ್ನಬಸವಣ್ಣನವರು ಸರಿಯಾಗಿಯೆ ಹೇಳಿದ್ದಾರೆ. ಶರಣರು ಯಾರನ್ನೂ ಬಿಟ್ಟಿಲ್ಲ. ಯಾರೇ ಮಾಡಲಿ, ತಪ್ಪು ತಪ್ಪೇ. ಎಲ್ಲ ಜಾತಿಗಳನ್ನು ಅಳಿಸಿ ಮಾನವರನ್ನು ನಿಜಮಾನವರನ್ನಾಗಿ ಮಾಡುವುದೇ ಶರಣರ ಉದ್ದೇಶವಾಗಿತ್ತು.

      ಪ್ರತಿಕ್ರಿಯೆ
      • ಅನ್ನಪೂರ್ಣ

        ಸಾರ್, ” ಬ್ರಾಹ್ಮಣರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು.” ಅಂತ ಈ ಹಿಂದೆ ನೀವು ಬರೆದಿರುವುದನ್ನು ನೀವೇ ಮರೆತು ಈಗ “ಬ್ರಾಹ್ಮಣರು ಒಡಲಿಲ್ಲದವರು, ಊಟ ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು ಎಂದೂ ನಾನು ಎಲ್ಲಿಯೂ ಬರೆದಿಲ್ಲ. ದಾರಿ ತಪ್ಪಿಸುವ ಮಾತುಗಳನ್ನು ಬರೆಯಬಾರದು.” ಅಂತ ಹೇಳಿದರೆ ನಾನು ಏನು ಮಾಡಲಿ?!! ನಾನು ಸುಳ್ಳು ಹೇಳಿಲ್ಲ ಎಂಬುದಕ್ಕೆ ತಾವು ವಿಚಾರ ಮಂಟಪಕ್ಕೆಂದು ಬರೆದ ಈ ಲೇಖನವೇ ಸಾಕ್ಷಿ:
        http://www.vicharamantapa.net/content/node/395
        -ಜೇಡರ ದಾಸಿಮಯ್ಯನ “ಒಡಲುಗೊಂಡವ ಹಸಿವ” ವಚನದ ಕುರಿತು ತಾವು ಬರೆದಂತಹ ಈ ಲೇಖನದ ಐದನೆಯ ಪ್ಯಾರದಲ್ಲಿ ತಾವು ಹೀಗೆ ಬರೆದಿದ್ದೀರಿ ಅಂತ ಖುದ್ದು ಓದಿ ಧೃಧೀಕರಿಸಬಹುದು:
        “ದುಡಿಯುವ ವರ್ಗ ಎಲ್ಲ ಕೊರತೆಗಳಿಂದ ಬಳಲುತ್ತಿದೆ. ದುಡಿಯದ ವರ್ಗದ ಸಕಲ ಸೌಕರ್ಯಗಳಿಂದ ಬದುಕುತ್ತಿದೆ. ಹಸಿಯುವ ವರ್ಗ ಮತ್ತು ಹಸಿವು ಏನೆಂಬುದು ಗೊತ್ತೇ ಇರದ ವರ್ಗದ ಮಧ್ಯದ ಅಂತರವನ್ನು ಅವರು ಅರಿತರು. ಬ್ರಾಹ್ಮಣರು, ರಾಜರು ಮತ್ತು ಶ್ರೀಮಂತರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು. ಈ ಜನ ದೇವರ (ದೇವಸ್ಥಾನದ ವ್ಯವಸ್ಥೆ) ಜೊತೆ ಸದಾ ಸಲುಗೆಯಿಂದ ಇರುವವರಾಗಿದ್ದರು. “

        ಪ್ರತಿಕ್ರಿಯೆ
        • Somalinga Kharge

          ರಂಜಾನ್ ದರ್ಗಾ ಅವರು ನಮ್ಮ ರಾಜಕಾರಣಿಗಳ ಹಾಗೆ ಒಮ್ಮೆ ಬ್ರಾಹ್ಮಣರು ಭೂಸುರರೇ ಆಗಿದ್ದರು ಹಾಗೂ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು ಅಂತ ಹೇಳುತ್ತಾರೆ, ಮತ್ತೊಮ್ಮೆ ತಾನು ಹಾಗೆಲ್ಲ ಹೇಳೇ ಇಲ್ಲ ಅನ್ನುತ್ತಾರೆ. ಬಹುಶಃ ನಾವು ಓದುಗರೂ ಕೂಡ ರಂಜಾನ್ ಅವರನ್ನು ರಾಜಕಾರಣಿ ಎಂದೇ ತಿಳಿದು ಪ್ರತಿಕ್ರಿಯಿಸುವುದು ಉತ್ತಮ.

          ಪ್ರತಿಕ್ರಿಯೆ
          • Ramjan Darga

            ಸೋಮಲಿಂಗ ಖರ್ಗೆ ಅವರೇ ಇಲ್ಲಿ ಎಂಥ ಮೋಸದಾಟ ನಡೆಯುತ್ತಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತಿಲ್ಲವೆ? ನನ್ನ ‘ಅವಧಿ’ ಲೇಖನದಲ್ಲಿ ಬರೆಯದೆ ಇದ್ದುದನ್ನು ಬಿಟ್ಟು ಎಷ್ಟೋ ವರ್ಷಗಳ ಹಿಂದೆ ಯಾವುದೋ ಪ್ರಸಂಗದಲ್ಲಿ ಬರೆದದ್ದನ್ನು ಎತ್ತಿ, ಅದರೆ ಹಿನ್ನೆಲೆಯನ್ನೂ ಮೊದಲಿಗೆ ಸೂಚಿಸಿದೆ ನಂತರ ಸೂಚಿಸುವುದು ಮೋಸದಾಟವಲ್ಲವೆ?

          • Somalinga Kharge

            ಮೋಸದಾಟ ನಡೆಸುತ್ತಿರುವವರು ಯಾರು ಅಂತ ಓದುಗರಾದ ನಮಗೆ ಈಗಾಗ್ಲೇ ಗೊತ್ತಾಗಿದೆ ದರ್ಗಾ ಅವರೆ! ಒಮ್ಮೆ ಬ್ರಾಹ್ಮಣರನ್ನು ತೆಗಳಿ ಅವರ ಬಗ್ಗೆ ಆಧಾರವಿಲ್ಲದೆ ಆಪಾದನೆ ಹೊರಿಸುವುದು ಇನ್ನೊಮ್ಮೆ ತಾನು ಹಾಗೆ ಮಾಡೇ ಇಲ್ಲ ಅನ್ನುವುದು ಮತ್ತೊಮ್ಮೆ ಬ್ರಾಹ್ಮಣನೊಬ್ಬ ದೇವಸ್ಥಾನ ಲೂಟಿ ಮಾಡಲು ತುರುಕ ಧಾಳಿಕೋರನಿಗೆ ಪ್ರಚೋದನೆ ನೀಡಿದ ಕತೆ ಹೇಳುವುದು (ಇದಕ್ಕೆ ಐತಿಹಾಸಿಕ ಆಧಾರವೇ ಇಲ್ಲ!) ಜೊತೆಗೆ ಬ್ರಾಹ್ಮಣರೆಲ್ಲ ಕೆಟ್ಟವರಲ್ಲ ಅವರಲ್ಲೂ ಒಳ್ಳೆಯವರಿದ್ದಾರೆ ಎನ್ನುವುದು ಪ್ರಗತಿಪರರ ಹಳೆ ಆಟ. ಇದನ್ನು ನಾವುಗಳು ನೋಡುತ್ತಿರುವುದು ಇದೇ ಮೊದಲೇನಲ್ಲ. ಈ ಪರಂಪರೆ ಬಹಳ ಸಮಯದಿಂದ ನಡೆದುಕೊಂಡು ಬಂದಿದೆ. ನನಗೆ ಬ್ರಾಹ್ಮಣರ ಬಗ್ಗೆ ವಿಶೇಷ ಪ್ರೀತಿ ಏನೂ ಇಲ್ಲ, ಆದರೆ ಯೂರೋಪಿನಲ್ಲಿ ಯಹೂದಿಗಳನ್ನು ಮಿಕ್ಕವರು persecute ಮಾಡಿದ ರೀತಿಯಲ್ಲೇ ಪ್ರಗತಿಪರ ಅಂತ ಹೇಳಿಕೊಳ್ಳುವವರು ಬ್ರಾಹ್ಮಣರನ್ನು persecute ಮಾಡುತ್ತಿರುವುದು ನೋಡಿ ಕಳವಳ ಹಾಗೂ ಆತಂಕ ಆಗುತ್ತಿದೆ.

          • Ramjan Darga

            ಖರ್ಗೆ ಅವರೆ, ಬ್ರಾಹ್ಮಣರ ಬಗೆಗೆ ನಿಮಗಿರುವ ಕಾಳಜಿಯನ್ನು ನಾನು ಗೌರವಿಸುತ್ತೇನೆ. ನಾನು ವ್ಯಕ್ತಿಗತವಾಗಿ ಬ್ರಾಹ್ಮಣರ ಬಗ್ಗೆ ಎಲ್ಲಿಯಾದರೂ ಟೀಕಿಸಿರುವೆನೆ? ಅಂಬಿಗರ ಚೌಡಯ್ಯನವರ ವಚನದ ವಿಶ್ಲೇಷಣೆಯ ಸಂದರ್ಭದಲ್ಲಿ, “ರಾಜರು ಮತ್ತು ಶ್ರೀಮಂತರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು. ಈ ಜನ ದೇವರ (ದೇವಸ್ಥಾನದ ವ್ಯವಸ್ಥೆ) ಜೊತೆ ಸದಾ ಸಲುಗೆಯಿಂದ ಇರುವವರಾಗಿದ್ದರು. ಬಡವರು ದೇವಸ್ಥಾನದಲ್ಲಿ ಬಿಟ್ಟಿ ಕೆಲಸ ಮಾಡುವ ಸ್ಥಿತಿ ಇತ್ತು. ’ಹಸಿವು’ ಎಂದರೆ ಮರ್ಯಾದೆಯುತವಾಗಿ ಜೀವನ ಸಾಗಿಸಲು ಬೇಕಾದ ವಸ್ತುಗಳ ಕೊರತೆಯಿಂದಾಗಿ ಅವರು ಬಳಲುವಂಥ ಸ್ಥಿತಿಯನ್ನು ಮೇಲ್ವರ್ಗ ಮತ್ತು ಮೇಲ್ಜಾತಿಯ ಜನ ನಿರ್ಮಿಸಿದ್ದರು.” ಎಂದು ಬರೆದಿರುವೆ. ಇದು ಸುಳ್ಳೆ? ಯಾವುದೇ ಶಬ್ದಕೋಶ ತೆಗೆದು ನೋಡಿ ಭೂಸುರ ಎಂದರೆ ಬ್ರಾಹ್ಮಣ ಎಂದೇ ಇದೆ. ರಾಜ ಪ್ರತ್ಯಕ್ಷ ದೇವತೆ ಎಂದು ವೈದಿಕ ಸಾಹಿತ್ಯ ಹೇಳುತ್ತ ಬಂದಿರುವುದು ಗೊತ್ತಿಲ್ಲವೆ? ಭೂಸುರರು ಹಸಿವೆಯಿಂದ ಬಳಲುವರೆ? ಅವರು ಎಂಥ ಪರಿಸ್ಥಿತಿಯಲ್ಲೂ ಹಸಿವಿನಿಂದ ಬಳಲಬಾರದು ಎಂಬುದಕ್ಕೆ ‘ಆಪದ್ಧರ್ಮ’ ಎಂಬ ವಿಶೇಷ ‘ಧರ್ಮ’ ಕೂಡ ಅವರಿಗೆ ಇದೆ ಅಲ್ಲವೆ?
            ಒಂದು ವಿಶಿಷ್ಟ ಸಂದರ್ಭದಲ್ಲಿ ವಚನ ವಿಶ್ಲೇಷಣೆ ಮಾಡುವಾಗ ಹೇಳಿದ್ದನ್ನು ಇನ್ನೊಂದು ಸಂದರ್ಭದಲ್ಲಿ ಹಿಂದೆ ಮುಂದೆ ಯಾವ ರೆಫರನ್ಸ್ ಕೊಡದೆ ತಂದು ತುರುಕಿ ಗೊಂಡಲ ಸೃಷ್ಟಿಸುವುದು ಮೋಸದಾಟವಲ್ಲವೆ? ನಾನು ‘ಅವಧಿ’ಯಲ್ಲಿ ಬರೆದ ಲೇಖನವನ್ನು ಗಮನದಲ್ಲಿಟ್ಟುಕೊಂಡು ‘ಬ್ರಾಹ್ಮಣರು ಒಡಲಿಲ್ಲದವರು, ಊಟ ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು ಎಂದೂ ನಾನು ಎಲ್ಲಿಯೂ ಬರೆದಿಲ್ಲ. ದಾರಿ ತಪ್ಪಿಸುವ ಮಾತುಗಳನ್ನು ಬರೆಯಬಾರದು’ ಎಂದು ತಿಳಿಸಿರುವೆ. ಇದು ತಪ್ಪೆ? ಅದಕ್ಕೇ ಹೇಳಿರಬಹುದು ಬಸವಣ್ಣನವರು ‘ವಿಪ್ರರು ಕೀಳು ನೋಡಾ ಜಗವೆಲ್ಲಾ ಅರಿಯಲು’ ಎಂದು. ಇಂಥ ಮೋಸದಾಟಕ್ಕೆ ನೀವು ಬೆಂಬಲಿಸುವ ಬಗ್ಗೆ ನನ್ನ ತಕರಾರು ಇಲ್ಲ. ತಂತ್ರಗಾರಿಕೆಯಿಂದ ಯಾರನ್ನೂ ತಪ್ಪು ಸ್ಥಾನದಲ್ಲಿ ನಿಲ್ಲಿಸಬಾರದು. ಇದು ಸುಸಂಸ್ಕೃತ ಮನಸ್ಸಿನ ಲಕ್ಷಣವಲ್ಲ.

          • Somalinga Kharge

            ಪ್ರಿಯ ರಂಜಾನ್ ಅವರೇ, ಬ್ರಾಹ್ಮಣರ ಬಗ್ಗೆ ವ್ಯಕಿಗತ ದ್ವೇಷ ಇಲ್ಲ ಅಂತ ಹೇಳಿದ್ದೀರಿ. ಆದರೆ “ಕುಲ ಕುಲ ಎಂದು ತಮ್ಮ ಹಿರಿಮೆಯನ್ನು ಹೇಳುತ್ತ ತಿರುಗುವ ಬ್ರಾಹ್ಮಣರು” ಅಂತ ಅದೇ ಉಸಿರಲ್ಲಿ ನಿಂದಿಸುತ್ತೀರಿ! ಭೂಸುರರು ಅಂದರೆ ಬ್ರಾಹ್ಮಣ ಎನ್ನುವ ಅರ್ಥ ಇದೆ ನಿಜ. ಆದರೆ ಭೂಸುರ ಎಂಬುದು ಬ್ರಹ್ಮಜ್ಞಾನಿಗಳು ಎನ್ನುವುದನ್ನು ಸೂಚಿಸುತ್ತದೆ (ಬೇಕಿದ್ದರೆ ಯಾವುದೇ ಶಬ್ದಕೋಶ ತೆಗೆದು ನೋಡಿ :-P). “ಭೂಸುರರು ಹಸಿವೆಯಿಂದ ಬಳಲುವರೆ?” ಎಂಬ ತಮ್ಮ ರೆತಾರಿಕಲ್ ಪ್ರಶ್ನೆ ದುರುದ್ದೇಶದಿಂದ ಕೂಡಿದ್ದು ಅಂತ ಹೇಳಲಾಗದಿದ್ದರೂ ಮೌಡ್ಯದಿಂದ ಕೂಡಿದೆ ಅಂತ ಖಂಡಿತ ಹೇಳಬಹುದು. ಬ್ರಹ್ಮಜ್ಞಾನಿಗಳು ಹಸಿವೆಯಿಂದ ಬಳಲುವುದಿಲ್ಲ ಅಂತ ಹೇಳುವುದು ಜೀವವಿರೋಧಿ ಹಾಗೂ ಅವೈಜ್ಞಾನಿಕ.
            ಅಂದ ಹಾಗೆ ವಿಚಾರಮಂಟಪದ ಬರಹದಲ್ಲಿ ತಾವು “ರಾಜರು ಮತ್ತು ಶ್ರೀಮಂತರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು” ಅಂತ ಬರೆದಿಲ್ಲ. ನೀವು ಬರೆದದ್ದು ಇದು: “ಬ್ರಾಹ್ಮಣರು, ರಾಜರು ಮತ್ತು ಶ್ರೀಮಂತರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು”. ಮೋಸದಾಟ ಬಿಡಿ, ಬ್ರಾಹ್ಮಣರ ಬಗ್ಗೆ ಹಾಗೆ ಬರೆದಿದ್ದೆ ಎಂದು ಒಪ್ಪಿಕೊಳ್ಳಿ, ಅದರಲ್ಲೇ ಘನತೆ ಹೆಚ್ಚು.

        • Ramjan Darga

          ಅನ್ನಪೂರ್ಣ ಅವರೆ ನಾನು ‘ಅವಧಿ’ ಲೇಖನದಲ್ಲಿ ಬರೆಯದೆ ಇದ್ದುದನ್ನು ಮತ್ತು ಬೇರೆಡೆ ಬೇರೊಂದು ಸಂದರ್ಭದಲ್ಲಿ ಬರೆದದ್ದನ್ನು ಎಲ್ಲಿಗೋ ಅಂಟಿಸಿ ಕೆದಕುವುದು ನ್ಯಾಯವೆ? ಬಡ ಬ್ರಾಹ್ಮಣರು ಹಸಿವಿನಿಂದ ಸತ್ತದ್ದು ಗೊತ್ತಿದ್ದರೆ ತಿಳಿಸಿ. ನನ್ನ ‘ಅವಧಿ’ ಲೇಖನದ ಬಗ್ಗೆ ಮಾತ್ರ ಪ್ರಶ್ನಿಸುವ ಸೌಜನ್ಯ ತೋರಿಸಿ.

          ಪ್ರತಿಕ್ರಿಯೆ
          • ಸಹನಾ

            ಓದುಗರು ರಂಜಾನ್ ದರ್ಗಾರವರ ಈ ರೀತಿಯ ನಿಲುವುಗಳಿಗೆ ಏನನ್ನುತ್ತೀರಿ? ಒಂದೊಂದು ಲೇಖನ/ಬ್ಲಾಗು/ಪುಸ್ತಕಗಳಲ್ಲಿ ತಮ್ಮ ಹೇಳಿಕೆವಾದಗಳನ್ನು ಬದಲಿಸುತ್ತಾ ಸಾಗುವುದು ಏನನ್ನು ಸೂಚಿಸುತ್ತದೆ? ಒಂದೊಮ್ಮೆ ಕಾಲಾನಂತರದಲ್ಲಿ ವಾದಗಳಲ್ಲಿನ ಬದಲಾವಣೆಗಳು ಆಗುವುದು ಸಹಜವಾದರೂ “ಬ್ರಾಹ್ಮಣರು ಒಡಲಿಲ್ಲದವರು, ಊಟ ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು ಎಂದೂ ನಾನು ಎಲ್ಲಿಯೂ ಬರೆದಿಲ್ಲ.” ಎಂದು ಅವರು ಬರೆಯೆವುದರ ಬದಲು ಹಿಂದೆ ಹಾಗೆ ಬರೆದಿದ್ದೆ ಹೌದು ಆದರೆ ಆ ವಾದದಲ್ಲಿ ಧೋಷವಿತ್ತು ಎಂದು ಅವರೇ ಹೇಳಿ ಧೋಷ ಕಂಡುಕೊಂಡ ಬಗೆಯನ್ನು ವಿವರಿಸಿ ಈಗ ಬದಲಾದನಿಲುವನ್ನು ಹೇಳಬಹುದಿತ್ತಲ್ಲವೇ? ಅವರ ವೈರುಧ್ಯನಿಲುವನ್ನು ಆಧಾರ ಸಮೇತ ಸಾಬೀತು ಮಾಡಿದ ಕೂಡಲೇ ಹಾಗೆ ಮಾಡುವವರನ್ನೇ ಅಪರಾಧಿಗಳಂತೆ ಬಿಂಬಿಸುತ್ತಿದ್ದಾರಲ್ಲ!!? ಅವಧಿಯ ಓದುಗರನ್ನು ದರ್ಗಾರವರು ಇಷ್ಟು ಚೀಪ್ ಆಗಿ ನೋಡಬಾರದು. ಇಲ್ಲಿರುವ ಓದುಗರೂ ವಿಭಿನ್ನ ಭೌದ್ದಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. ತಮ್ಮ ವಾದಗಳ ವೈರುಧ್ಯವನ್ನು ಪತ್ತೆ ಹಚ್ಚುವ ಬೌದ್ದಿಕ ಶಕ್ತಿ ಅವಧಿಯ ಓದುಗರಿಗಿದೆ ಎನ್ನುವುದನ್ನು ಮಾನ್ಯದರ್ಗಾರವರು ಗೌರವಿಸುವುದು ಒಳಿತು.

          • Amaresh

            ಈ ಪ್ರಸಂಗದಿಂದ ತಿಳಿದು ಬಂದಿರುವ ಸತ್ಯ ಇದು. ಹಿಂದೆ ವಚನಗಳ ಬಗ್ಗೆ ಬರೆದ ಲೇಖನ ಮಾಲೆಯಲ್ಲಿ ರಂಜಾನ್ ದರ್ಗಾ ಅವರು ಬ್ರಾಹ್ಮಣರ ಕುರಿತು “ಬ್ರಾಹ್ಮಣರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು” ಅಂತ ಬರೆದಿದ್ದರು. ಈ ಸತ್ಯವನ್ನು ಅವಧಿಯ ಓದುಗರು http://www.vicharamantapa.net/content/node/395 ತಾಣದಲ್ಲಿ ಈಗಲೂ ಲಭ್ಯವಿರುವ ಲೇಖನ ಮಾಲೆಯನ್ನು ಸ್ವತಹ ನೋಡಿ ಧೃಡಪಡಿಸಿಕೊಳ್ಳಬಹುದು. ಇತ್ತೀಚಿಗೆ ಅವಧಿಯಲ್ಲಿ ಪ್ರಕಟವಾದ ಲೇಖನ ಮಾಲೆಯ ಸಂದರ್ಭದಲ್ಲಿ ಅನ್ನಪೂರ್ಣ ಅವರು ಸತ್ಯವನ್ನು ಬಯಲು ಮಾಡಿದರು. ರಂಜಾನ್ ದರ್ಗಾ ಅವರು ತಾವು “ಬ್ರಾಹ್ಮಣರು ಒಡಲಿಲ್ಲದವರು, ಊಟ ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು ಎಂದೂ ನಾನು ಎಲ್ಲಿಯೂ ಬರೆದಿಲ್ಲ” ಎಂದು ಸುಳ್ಳು ಹೇಳಿದರು. ಅಷ್ಟೇ ಅಲ್ಲ “ದಾರಿ ತಪ್ಪಿಸುವ ಮಾತುಗಳನ್ನು ಬರೆಯಬಾರದು” ಎಂದು ಅನ್ನಪೂರ್ಣ ಅವರಿಗೆ ಛೀಮಾರಿ ಹಾಕಿದರು. ಸತ್ಯಕ್ಕೆ ಇವರೆಷ್ಟು ಬೆಲೆ ಕೊಡುತ್ತಾರೆ ಹಾಗೂ ಸತ್ಯವನ್ನು ಬಯಲು ಮಾಡುವವರ ಬಗ್ಗೆ ಇವರ ಧೋರಣೆ ಏನು ಎಂಬುದನ್ನು ಅವಧಿಯ ಓದುಗರಿಗೆ ಇದರಿಂದ ಈಗಾಗಲೇ ಗೊತ್ತಾಗಿದೆ. ಆದರೂ ರಂಜಾನ್ ದರ್ಗಾ ಅವರು ಇದೇ ವೇದಿಕೆಯಲ್ಲಿ ತನಗೆ ಸತ್ಯ ಮುಖ್ಯ ಅನ್ನುತ್ತಾರೆ! ಅಷ್ಟೇ ಅಲ್ಲ “ನಾನು ‘ಅವಧಿ’ ಲೇಖನದಲ್ಲಿ ಬರೆಯದೆ ಇದ್ದುದನ್ನು ಮತ್ತು ಬೇರೆಡೆ ಬೇರೊಂದು ಸಂದರ್ಭದಲ್ಲಿ ಬರೆದದ್ದನ್ನು ಎಲ್ಲಿಗೋ ಅಂಟಿಸಿ ಕೆದಕುವುದು ನ್ಯಾಯವೆ?” ಅಂತ ಅನ್ನಪೂರ್ಣ ಅವರಿಗೆ ತಿರುಗಿ ಪ್ರಶ್ನೆ ಹಾಕಿದ್ದಾರೆ!! ದರ್ಗಾ ಅವರೇ, ಬೇರೆಡೆ ಬರೆದದ್ದು ವಚನಗಳ ಬಗ್ಗೆ ವಚನಕಾರರ ಬಗ್ಗೆ ಅಲ್ಲವೇ? ಬರೆದವರು ನೀವೇ ಅಲ್ಲವೇ? ಬೇರೆಡೆ ಬರೆದುದಕ್ಕೂ ಅವಧಿಯಲ್ಲಿ ಪ್ರಕಟವಾದ ಬರಹಕ್ಕೂ ಸಂಬಂಧ ಇಲ್ಲವೇ? ವಚನಗಳ ಬಗ್ಗೆ ನಿಮ್ಮ ಒಟ್ಟಾರೆ ಗ್ರಹಿಕೆ ಏನು ಎಂಬುದನ್ನು ಬೇರೆಡೆ ಬರೆದದ್ದೂ ಹೇಳುತ್ತದೆಯಲ್ಲವೇ? ನೀವು ವಚನಗಳ ಬಗ್ಗೆ ಬೇರೆಡೆ ಬರೆದದ್ದುದರಲ್ಲಿ ತಪ್ಪು ಇದೆ ಅಂತ ನೀವು ಇದುವರೆಗೆ ಹೇಳಿಲ್ಲವಲ್ಲ! “ನಾನು ಹಿಂದೆ ಬ್ರಾಹ್ಮಣರು ಒಡಲಿಲ್ಲದವರು, ಊಟ ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು ಅಂತ ಬರೆದಿದ್ದೆ. ಹಾಗೆ ಬರೆದದ್ದು ತಪ್ಪು. ಅದಕ್ಕೆ ಯಾವ ಆಧಾರವೂ ನನ್ನ ಬಳಿ ಇಲ್ಲ” ಅಂತ ಯಾಕೆ ನೀವು ಹೇಳಿಲ್ಲ? ಹಿಂದೆ ಬರೆದದ್ದು ತಪ್ಪು ಅಂತ ನೀವು ಒಪ್ಪುವುದಾದರೆ ಹಾಗೇಕೆ ಬರೆದಿರಿ ಅಂತ ಕೂಡ ಹೇಳಬೇಕಾದುದು ತಮ್ಮ ನೈತಿಕ ಕರ್ತವ್ಯ ಅಲ್ಲವೇ?

          • Ramjan Darga

            ಸಹನಾ ಅವರೆ ನಾನು ಹಿಂದೆ ಬರೆದಿರುವುದರಲ್ಲಿ ತಪ್ಪಿಲ್ಲ. ಆದರೆ ‘ಅವಧಿ’ ಲೇಖನದಲ್ಲಿ ಎಲ್ಲಿಯೂ ಬರೆದಿಲ್ಲ. ರೆಪರನ್ಸ್ ಕೊಡದೆ ಈ ರೀತಿ ಮಾಡುವುದು ಸರಿಯಲ್ಲ. ದುಡಿಯುವ ವರ್ಗದ ಬ್ರಾಹ್ಮಣರು ಕೂಡ ನನ್ನ ಸಂಗಾತಿಗಳೇ ಆಗಿದ್ದಾರೆ. ಅವರು ತಮ್ಮ ಬಗ್ಗೆ ಎಂದೂ ಭೂಸುರರು ಎಂಬ ಭ್ರಮೆ ಇಟ್ಟುಕೊಂಡಿಲ್ಲ. ದುಡಿಯವು ವರ್ಗದ ಬಗೆಗಿನ ನನ್ನ ಕಾಳಜಿಯನ್ನೂ ಅವರು ಸದಾ ಎತ್ತಿಹಿಡಿದಿದ್ದಾರೆ.

  5. Sharadhi

    I feel Annapurna has raised some very valid questions that clearly contradict the views of Ranjan Darga. Might Ranjan be able to answer any of these?

    ಪ್ರತಿಕ್ರಿಯೆ

Trackbacks/Pingbacks

  1. ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೪ « ಅವಧಿ / avadhi - [...] ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೪ June 27, 2013 by G (ಭಾಗ ೩ ಇಲ್ಲಿದೆ) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: