ಜೋಗಿ ಬರೆದ ಅರಣ್ಯ ಪರ್ವ : ಗುಡ್ಡದ ಮೇಲೆ ಬಿದ್ದ ಇಳಿಸಂಜೆಯ ಬೆಳಕಿನಂತೆ..

ಜೋಗಿ

ಗುರುಗಳು ಗುಡ್ಡದ ತಪ್ಪಲಿಗೆ ಕರೆದೊಯ್ದರು. ನಮಗೆ ದಿಕ್ಕು ತಪ್ಪಿದಂತಾಗಿತ್ತು. ಹೇಳಿದ್ದನ್ನೇ ಅವರು ಮತ್ತಷ್ಟು ವಿವರಿಸಬೇಕು ಅನ್ನಿಸುತ್ತಿತ್ತು. ಗುರುಗಳು ವಿವರಿಸುವುದಿಲ್ಲ ಅನ್ನುವುದೂ ಗೊತ್ತಿತ್ತು. ಒಂದೊಂದು ಮಾತನ್ನೂ ಬರೆದಿಟ್ಟುಕೊಂಡು ಅದನ್ನು ಮತ್ತೆ ಮತ್ತೆ ಚಪ್ಪರಿಸಬೇಕು ಅನ್ನುವ ನಮ್ಮ ಆಸೆ ಕೂಡ ಈಡೇರುವಂತಿರಲಿಲ್ಲ. ನಮ್ಮ ಬಳಿ ಪುಸ್ತಕವಾಗಲೀ ಪೆನ್ನಾಗಲೀ ಇರಲಿಲ್ಲ. ನೀವು ಹೇಳಿದ್ದನ್ನೆಲ್ಲ ಬರೆದಿಟ್ಟುಕೊಳ್ಳಬೇಕು ಅಂತ ಹಿಂದೊಮ್ಮೆ ಗುರುಗಳಿಗೆ ಹೇಳಿದಾಗ ಅವರು ಮುಗುಳ್ನಗುತ್ತಲೇ ಅದನ್ನು ತಳ್ಳಿಹಾಕಿದ್ದರು.

ಯಾವಾಗ ಬರೆದಿಟ್ಟುಕೊಳ್ಳುತ್ತೀರೋ ಆಗ ಮಾತು ಸ್ಥಾವರವಾಗುತ್ತದೆ. ಹೇಗೂ ಬರೆದಿಟ್ಟುಕೊಂಡಿದ್ದೀನಲ್ಲ ಅಂತ ಅದನ್ನು ಮನಸ್ಸು ಮರೆತುಬಿಡುತ್ತದೆ. ಆಡಿದ ಮಾತೂ ಮರೆತುಹೋಗಬಹುದು, ಚಿಂತೆಯಿಲ್ಲ. ಆಡಿದ ಮಾತು ಆಡಿದ ಮಾತಾಗಿಯೇ ಕೇಳಿದವನ ಒಳಗೆ ಉಳಿದರೆ ಅದು ಜಡ್ಡಾಗಿ ಸತ್ತು ಹೋಗುತ್ತದೆ. ಅದು ಕೇಳಿದವನ ಒಳಗೆ ಮತ್ತೇನೋ ಆಗಿ ಹುಟ್ಟದೇ ಹೋದರೆ ಆ ಮಾತು ವ್ಯರ್ಥ ಎನ್ನುತ್ತಾ ಅವರ ಗುಡಿಸಲಿನ ಕಿಟಕಿಯಿಂದ ಸಗಣಿ ಸಾರಿಸಿ ನುಣುಪು ಮಾಡಿದ್ದ ನೆಲದ ಮೇಲೆ ಬಿದ್ದ ಬಿಸಿಲುಕೋಲನ್ನು ತೋರಿಸಿದ್ದರು ಗುರುಗಳು.

ಈ ಬಿಸಿಲುಕೋಲನ್ನೇ ತೆಗೆದುಕೊಳ್ಳಿ. ನೀವದನ್ನು ಈಗ ನೋಡುತ್ತಿದ್ದೀರಿ. ತುಂಬ ಚೆಂದ ಕಾಣುತ್ತದೆ ಅಂತ ಅದರ ಫೋಟೋ ತೆಗೆಯುತ್ತೀರಿ. ಆ ಫೋಟೋವನ್ನು ಯಾವತ್ತೋ ನೋಡುತ್ತೀರಿ. ಅದು ಈ ಬಿಸಿಲು ಕೋಲು ಅಲ್ಲವೇ ಅಲ್ಲ. ನಿಮ್ಮ ಮನಸ್ಸಿನೊಳಗೆ ಬಿದ್ದ ಬಿಸಿಲುಕೋಲು ಬೇರೆಯೇ. ಆ ಫೋಟೋದಲ್ಲಿ ಕಾಣಿಸುವುದು ಏನು? ಹೀಗೆ ಕಂಡಿತು ಅಂತ ನೀವದನ್ನು ಮತ್ತೊಬ್ಬನಿಗೆ ತೋರಿಸಬಹುದಾ? ತೋರಿಸಿದರೆ ಅವನಿಗೆ ಏನು ಕಾಣಿಸುತ್ತದೆ. ಅಂಗೈಯಗಲದ ಫೋಟೋ ಮಾತ್ರ. ಅದನ್ನು ನೀವು ಅನುಭವಿಸಿದ ಗಳಿಗೆಯನ್ನು ಅವನಿಗೆ ನೀವು ಕಾಣಿಸಬಲ್ಲಿರಾ? ಕಾಣಿಸದೇ ಹೋದರೆ ಆ ಫೋಟೋದಲ್ಲಿ ನಿಮ್ಮತನ ಅನ್ನೋದಿಲ್ಲ.

 

ನಮಗದು ಅರ್ಥವಾಗಿರಲಿಲ್ಲ. ಚೆಂದಕ್ಕೆ ಕಂಡದ್ದನ್ನು, ಕಿವಿಗೆ ಹಿತವಾದದ್ದನ್ನು, ಮನಸ್ಸಿಗೆ ಮುದ ನೀಡಿದ್ದನ್ನು ಮತ್ತೊಬ್ಬನಿಗೂ ತೋರಿಸಬೇಕು ಅನ್ನುವ ಆಸೆ ಕೆಟ್ಟದ್ದಾ ಅಂತ ಕೇಳಿದ್ದೆವು. ಗುರುಗಳು ಸುಮ್ಮನೆ ನಕ್ಕಿದ್ದರು. ಅವರ ನಗುವಿನ ಅರ್ಥವಾದದ್ದು ಗೆಳೆಯನೊಬ್ಬ ತಾನು ಕೇಳಿದ ಹಾಡೊಂದನ್ನು ನಮಗೆ ದಾಟಿಸಲು ಪ್ರಯತ್ನಪಟ್ಟಾಗಲೇ.

ಅವನು ಯಾವತ್ತೋ ಯಾವುದೋ ಕಾಡಿಗೆ ಹೋಗಿದ್ದ. ಅಲ್ಲಿ ಯಾರೋ ಸೋಲಿಗರು ಹಾಡುತ್ತಿದ್ದ ಹಾಡು ಕಿವಿಗೆ ಬಿದ್ದಿತ್ತು. ಮುಸ್ಸಂಜೆಯ ಹೊತ್ತಿನಲ್ಲಿ ಹೂವರಳಿ ನಿಂತ ಅಶೋಕವನದಿಂದ ಸುರುಳಿಸುರುಳಿಯಾಗಿ ತೇಲಿ ಬಂದ ಹಾಡು ಅವನನ್ನು ಸೆಳೆದಿತ್ತು. ಅವನು ಪ್ರತಿಸಾರಿ ಸಿಕ್ಕಾಗಲೂ, ಅದನ್ನು ನಮಗೆ ಹೇಳಲು ಪದಗಳಿಗಾಗಿ ತಡಕಾಡುತ್ತಿದ್ದ. ಅವರು ಎಷ್ಟು ಚೆಂದ ಹಾಡ್ತಿದ್ದರು ಗೊತ್ತಾ? ನನಗೆ ಅವರ ಭಾಷೆ ಗೊತ್ತಿರಲಿಲ್ಲ. ಆ ಹಾಡಿನ ಅರ್ಥ ಗೊತ್ತಿರಲಿಲ್ಲ. ಕೇವಲ ರಾಗದಿಂದಷ್ಟೇ ಅದು ಸೆಳೆಯಿತು ಅಂತಲೂ ಅಲ್ಲ. ಆ ಸ್ವರ, ಆ ಲಯ, ಆ ಮುಸ್ಸಂಜೆ, ಆ ಪರಿಸರ ಎಲ್ಲವೂ ಸೇರಿ ನಾನು ಆ ಹಾಡಿನಲ್ಲಿ ಕರಗಿಹೋದೆ ಎಂದು ಅವನು ಹೇಳುತ್ತಿದ್ದರೆ ಅವನ ಮುಖ ಹೊಸ ಹೊಳಪಿನಿಂತ ಮಿನುಗುತ್ತಿತ್ತು.

ಕಣ್ಣುಗಳಲ್ಲಿ ಅದೆಂಥದ್ದೋ ಯಾರೂ ಕಾಣದ್ದನ್ನು ಕಂಡ ಸಂತೋಷ ತುಳುಕುತ್ತಿತ್ತು. ಬದುಕೇ ಧನ್ಯವಾಯಿತು ಎಂಬಂತೆ ಅವನು ಹುರುಪಿನಿಂದ ಹೇಳಿಕೊಳ್ಳುತ್ತಿದ್ದರೂ, ನಮ್ಮನ್ನು ಆ ಕ್ಷಣ ತಟ್ಟಿದ್ದು ಅವನ ಹುರುಪು, ಉತ್ಸಾಹಗಳೇ ಹೊರತು ಆ ಹಾಡಲ್ಲ. ನಾವದನ್ನು ಮತ್ತೊಬ್ಬರಿಗೆ ಹೇಳುವುದು ಹೇಗೆ ಎಂದು ಯೋಚಿಸುತ್ತಿದ್ದೆವು. ನನ್ನ ಗೆಳೆಯ ಅಪೂರ್ವವಾದ ಒಂದು ಹಾಡನ್ನು ಕೇಳಿ ಮರುಳಾಗಿ ಹೋಗಿದ್ದ ಎಂದಷ್ಟೇ ಹೇಳಲು ಸಾಧ್ಯವಿತ್ತೇ ವಿನಾ ಆ ಹಾಡನ್ನು ಅವನು ದಾಟಿಸಲು ಸೋತಂತೆ, ಅವನ ಹುರುಪನ್ನು ದಾಟಿಸಲು ನಾವೂ ಸೋಲುತ್ತಿದ್ದೆವು.

ಗುಡ್ಡದ ತಪ್ಪಲಿನಲ್ಲಿ ಆರೆಂಟು ಹಸುಗಳು ಮೇಯುತ್ತಿದ್ದವು. ಒಣಗಿದ ಮುಳಿಹುಲ್ಲಿನ ಬುಡಕ್ಕೆ ಬಾಯಿ ಹಾಕಿ, ಅಲ್ಲೇನಾದರೂ ಹಸಿರಿದೆಯಾ ಅಂತ ಹುಡುಕುತ್ತಿದ್ದವು. ಅವು ಸಾಗಿಹೋದ ದಿಕ್ಕಿನಲ್ಲಿ ಮುಳಿಹುಲ್ಲು ಎರಡಾಗಿ ಒಡೆದು ದಾರಿಮಾಡಿಕೊಟ್ಟು, ಅವು ಸಾಗಿ ಹೋದ ಹಾಗೆ ಮತ್ತೆ ಎದ್ದು ನಿಂತು ದಾರಿಯನ್ನು ಮುಚ್ಚುತ್ತಿದ್ದವು. ಗುಡ್ಡದ ಒಂದು ಬದಿಗೆ ಬಿಸಿಲು ಬಿದ್ದು ಹೊಳೆಯುತ್ತಿತ್ತು. ಮತ್ತೊಂದು ಬದಿಗೆ ಅದೇ ಗುಡ್ಡದ ನೆರಳು ಬಿದ್ದು ಕಪ್ಪಾಗಿ ಕಾಣುತ್ತಿತ್ತು. ತನ್ನ ನೆರಳೇ ತನ್ನನ್ನು ನುಂಗುವುದನ್ನು ಗುಡ್ಡ ನಿರ್ಲಿಪ್ತವಾಗಿ ನೋಡುತ್ತಾ ನಿಂತಂತಿತ್ತು.

ಇದಕ್ಕೆ ಗುರುಗಳೇನಾದರೂ ಹೇಳಬಹುದು ಅಂತ ನಾವು ಅವರ ಮುಖ ನೋಡಿದೆವು. ಗುರುಗಳು ಅದನ್ನು ಗಮನಿಸಿದಂತೆ ಕಾಣಲಿಲ್ಲ.

ಗುರುಗಳೇ, ಗುಡ್ಡದ ಒಂದು ಬದಿಯಲ್ಲಿ ಬಿಸಿಲಿದೆ. ಮತ್ತೊಂದು ಬದಿಯಲ್ಲಿ ನೆರಳಿದೆ. ಕೆಳಗೆ ಕಾಡಿನ ತುಂಬ ಕತ್ತಲು ಹಬ್ಬಿದೆ. ತನ್ನ ಬೆನ್ನಿಗೆ ತಾನೇ ಅಡ್ಡವಾಗಿ ಗುಡ್ಡ ನಿಂತಿದೆಯಲ್ಲವೇ ಅಂತ ಅನುಮಾನದಿಂದಲೇ ಪಿಸುಗುಟ್ಟಿದೆವು. ಗುರುಗಳು ನಮ್ಮನ್ನೇ ನೋಡುತ್ತಾ ಆ ಗುಡ್ಡದತ್ತ ಕಣ್ಣು ಹೊರಳಿಸಿದರು. ಅಷ್ಟು ಹೊತ್ತಿಗಾಗಲೇ ಸೂರ್ಯ ಕಂತಿದ್ದ. ಗುಡ್ಡದ ಮೇಲೆ ಬಿದ್ದಿದ್ದ ಬೆಳಕು ಮರೆಯಾಗಿತ್ತು.

ನಾವು ಕಂಡದ್ದನ್ನು ಮತ್ತೊಬ್ಬನಿಗೆ ತೋರಿಸುವ ಹೊತ್ತಿಗೆ ಅದು ಕಣ್ಮರೆಯಾಗಿರುತ್ತದೆ. ನಾವು ಕಂಡದ್ದಷ್ಟೇ ಸತ್ಯ. ಹೀಗೊಂದನ್ನು ನೋಡಿದೆ ಅಂತ ಯಾರಾದರೂ ಹೇಳಿದರೆ ಅನುಮಾನಿಸಬಾರದು. ಅದನ್ನು ನಾವು ನೋಡಲಿಲ್ಲವಲ್ಲ ಅಂತ ಕೊರಗಬಾರದು. ನಮಗೂ ಅದು ಒಂದು ದಿನ ಕಂಡೀತು ಅನ್ನುವ ನಂಬಿಕೆಯನ್ನೂ ಇಟ್ಟುಕೊಳ್ಳಬಾರದು. ನನಗೆ ಕಾಣಿಸಿದ್ದು ನಿನಗೆ ಕಾಣಿಸದೇ ಹೋದರೆ ನಾನು ಶ್ರೇಷ್ಠನಲ್ಲ, ನೀನು ಕನಿಷ್ಠನೂ ಅಲ್ಲ. ನಿನಗೆ ಕಾಣಬೇಕಾದ್ದು ನಿನಗೆ ಮಾತ್ರ ಕಾಣಿಸುತ್ತದೆ. ನಿನಗೆ ಕಾಣಿಸಿದ್ದು ಮಾತ್ರ ನಿನಗೆ ಕಂಡಿರುತ್ತದೆ.

ಬಿದಿರಿನ ಕಣ್ಣು ಬಿದಿರೇ ಆಗುತ್ತದೆ. ನೀರಿನ ಕಣ್ಣು ನೀರೇ ಆಗುತ್ತದೆ. ಬೆಳಕಿನ ಕಣ್ಣು ದಾರಿ ತೋರಿಸುವ ಹಾಗೆ, ದಾರಿ ಕಾಣದ ಹಾಗೂ ಮಾಡುತ್ತದೆ.

‍ಲೇಖಕರು avadhi

June 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. thimmappa naik

    ನಾವು ಕಂಡದ್ದನ್ನು ಮತ್ತೊಬ್ಬನಿಗೆ ತೋರಿಸುವ ಹೊತ್ತಿಗೆ ಅದು ಕಣ್ಮರೆಯಾಗಿರುತ್ತದೆ. ನಾವು ಕಂಡದ್ದಷ್ಟೇ ಸತ್ಯ. ಹೀಗೊಂದನ್ನು ನೋಡಿದೆ ಅಂತ ಯಾರಾದರೂ ಹೇಳಿದರೆ ಅನುಮಾನಿಸಬಾರದು. ಅದನ್ನು ನಾವು ನೋಡಲಿಲ್ಲವಲ್ಲ ಅಂತ ಕೊರಗಬಾರದು. ನಮಗೂ ಅದು ಒಂದು ದಿನ ಕಂಡೀತು ಅನ್ನುವ ನಂಬಿಕೆಯನ್ನೂ ಇಟ್ಟುಕೊಳ್ಳಬಾರದು. ನನಗೆ ಕಾಣಿಸಿದ್ದು ನಿನಗೆ ಕಾಣಿಸದೇ ಹೋದರೆ ನಾನು ಶ್ರೇಷ್ಠನಲ್ಲ, ನೀನು ಕನಿಷ್ಠನೂ ಅಲ್ಲ. ನಿನಗೆ ಕಾಣಬೇಕಾದ್ದು ನಿನಗೆ ಮಾತ್ರ ಕಾಣಿಸುತ್ತದೆ. ನಿನಗೆ ಕಾಣಿಸಿದ್ದು ಮಾತ್ರ ನಿನಗೆ ಕಂಡಿರುತ್ತದೆ.,,,Superrrrrrrrrrrrrr..

    ಪ್ರತಿಕ್ರಿಯೆ
  2. Anil Talikoti

    ಚೂರೇ ಚೂರು ಶಬ್ದಗಳಲ್ಲಿ ಛಂದ ಚಿತ್ತಾರ ಬಿಡಿಸುವ ಚತುರ- ಜೋ ಲಿಖೇ ಐಸೆ ವಹಿ ಜೋಗಿ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  3. Kiran

    Aren’t there limitations in every communication? It is said that, “Communication with least limitations is effective, but the communication which grows beyond limitations is esoteric”. Both appear to combine in this article. Excellent, as usual.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: