ಶಮ ನಂದಿಬೆಟ್ಟ
ಅಂವ ಯಾವತ್ತೂ ಹೇಳುತ್ತಿದ್ದ
ಯುದ್ಧ ಕಾಲದಲ್ಲಿ ನಮ್ಮ
ಕಾಪಾಡುವುದು ಕವಿತೆ
ಇತ್ತೀಚೆಗೆ ಯುದ್ಧಗಳದೇ
ಮುಖ್ಯ ಸುದ್ದಿ
ಹೆಣಗಳ ಕರಾರುವಾಕ್
ಲೆಕ್ಕಾಚಾರ ಒಮ್ಮೆಯೂ ತಪ್ಪಿಲ್ಲ
ವಾರ್ತಾ ವಾಚಕಿಗೆ
ಇದೀಗ ಬಂದ ಸುದ್ದಿ ಮುಖ್ಯ
ಸತ್ತವರ ಪಟ್ಟಿಯನ್ನು
ನಸುನಗುತ್ತ ಓದುತ್ತಾಳೆ
“ನಮ್ಮಲ್ಲೇ ಮೊದಲು”
ಅಡಿ ಟಿಪ್ಪಣಿ
ನನ್ನ ಜಾತಿ, ಧರ್ಮದವರ
ಒಂದು ಹೆಸರೂ ಇಲ್ಲ
ಇನ್ನು ಮೂರೇ ದಿನಕ್ಕೆ
ಧಾರ್ಮಿಕ ಸಭೆಯ ಸನ್ಮಾನ ನನಗೆ
ಧರ್ಮದ್ರೋಹ ಕಡುಪಾಪ
ಕವಿತೆ ಬರೆಯಲಿಲ್ಲ

ಯುದ್ಧ ಕಾಲದಲ್ಲಿ ನಿಯಮಗಳಿಗೆ
ಕೊಂಚ ಸಡಿಲಿಕೆಯಂತೆ
ಮುರಿದರೆ ಅಪರಾಧವಲ್ಲ
ದೇಶಹಿತ ಮುಖ್ಯ
ಹೋರಾಡುವವರಿಗೆ ಹೊಟ್ಟೆ
ತುಂಬಿದರೆ ಸಾಕಾಗುವುದಿಲ್ಲ
ಸಾಮೂಹಿಕ ಅತ್ಯಾಚಾರಗಳು
ಊಟ, ನಿದ್ದೆಯಷ್ಟೇ ಸಹಜ;
ದಾಖಲು ಮಾಡಬಾರದು
ದೇಶದ್ರೋಹ ಕಡುಪಾಪ
ಕವಿತೆ ಬರೆಯಲಿಲ್ಲ
ಶಾಲೆಯಿಂದ ಬಂದ ಮಗಳು
ಕೇಳಿದ್ದಾಳೆ
“ಭಾರ ಹಗುರಗಳ ಪಾಠ
ಅರ್ಥವಾಗಲಿಲ್ಲ ವಿವರಿಸಮ್ಮಾ”
“ಯುದ್ಧ ಹಗುರ ಕಂದಾ
ಕಳಕೊಂಡವರ ಖಾಲಿ
ಮಡಿಲುಗಳೇ ಮಣ ಭಾರ”
ಹೆಚ್ಚಿಗೇನು ಹೇಳುವುದು ?
ಇಷ್ಟು ಸಾಕು ಚಂದವಿದೆ
ಅನಬೇಡಿ ದಮ್ಮಯ್ಯ
ಯುದ್ಧ ಕಾಲದಲ್ಲಿ
ಕಾಪಾಡುವ ಕವಿತೆ ಬರೆಯದೇ
ನಾನಿಲ್ಲಿ ಸುಮ್ಮ ಸುಮ್ಮನೇ
ಈರುಳ್ಳಿ ಹೆಚ್ಚುತ್ತಿದ್ದೇನೆಶಮ ನಂದಿಬೆಟ್ಟ






“ಶಾಲೆಯಿಂದ ಬಂದ ಮಗಳು
ಕೇಳಿದ್ದಾಳೆ
“ಭಾರ ಹಗುರಗಳ ಪಾಠ
ಅರ್ಥವಾಗಲಿಲ್ಲ ವಿವರಿಸಮ್ಮಾ”
“ಯುದ್ಧ ಹಗುರ ಕಂದಾ
ಕಳಕೊಂಡವರ ಖಾಲಿ
ಮಡಿಲುಗಳೇ ಮಣ ಭಾರ”
ಹೆಚ್ಚಿಗೇನು ಹೇಳುವುದು ?”
ನಿಜವಾಗಿಯೂ ಇಷ್ಟು ಸಾಕು , ಇಷ್ಟೇ ಕವಿತೆ ಅಂತ ಅಂದುಕೊಳ್ಳುವಷ್ಟರಲ್ಲಿ ನಿಮ್ಮ ಮುಂದಿನ ಸಾಲು ಬಂತು! 🙂 🙂
ಇಷ್ಟು ಸಾಕು ಚಂದವಿದೆ
ಅನಬೇಡಿ ದಮ್ಮಯ್ಯ
ಒಳ್ಳೆಯ ಕವಿತೆ ಶಮಾ