ನಾಗೇಶ ಹೆಗಡೆ ಅವರು ಉತ್ತರ ಕನ್ನಡದ ಕವಂಚೂರಿನಲ್ಲಿ ಜರುಗಿದ ಸಿದ್ಧಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನದ ಅಧ್ಯಕ್ಷ ಭಾಷಣ ಭಿನ್ನವಾಗಿತ್ತು. ಸಾಹಿತ್ಯ ಪರಿಸರದ ಜೊತೆ ನಡೆಸಬೇಕಾದ ಪಿಸುಮಾತಿನ ಬಗ್ಗೆ, ಸಾಹಿತ್ಯ ಪರಿಸರವನ್ನೂ, ಪರಿಸರ ಸಾಹಿತ್ಯವನ್ನೂ ಉಳಿಸಬೇಕಾದ ಅಗತ್ಯದ ಬಗ್ಗೆ ನಾಗೇಶ ಹೆಗಡೆ ಮಾತನಾಡಿದ್ದರು.
ಎಲ್ಲರಂತಲ್ಲದ ಈ ಭಾಷಣವನ್ನು ಅವಧಿ ಬೆಂಬಿಡದೆ ಹೆಗಡೆಯವರಿಂದ ಪಡೆದುಕೊಂಡಿದೆ ನೀವೂ ಓದಿ. ಪ್ರತಿಕ್ರಿಯಿಸಿ..
ಇಲ್ಲಿರುವ ಸಮ್ಮೇಳನದ ಚಿತ್ರಗಳೆಲ್ಲವೂ ಎ ಬಿ ವೀರೇಂದ್ರ, ಅವರಗುಪ್ಪ ಅವರದ್ದು. ಅವರಿಗೆ ತುಂಬು ವಂದನೆಗಳು
++
ನಿಸರ್ಗದೊಂದಿಗೆ ಮರುಸಂಧಾನ
ನಾಗೇಶ ಹೆಗಡೆ
ಸಿದ್ದಾಪುರ ತಾಲೂಕಿನ ನಾಗರಿಕರೆಲ್ಲ ಹೆಮ್ಮೆ ಪಡುವಂಥ ಕೆಲಸವೊಂದು ಈ ಸಹಸ್ರಮಾನದ ಆರಂಭದ ದಿನವೇ ನಡೆಯಿತು. 2000ನೇ ಇಸವಿಯ ಜನವರಿ 1ರ ನಸುಕಿನಲ್ಲಿ ವಾಜಗದ್ದೆಯ ಕೆಲವು ಯುವಕರು ಉಂಚಳ್ಳಿ ಜಲಪಾತದ ಬಳಿ ಶ್ರಮದಾನಕ್ಕೆಂದು ನೆರೆದಿದ್ದರು. ಜಲಪಾತದ ಕೆಳಗಿನ ಆಳ ಕಮರಿಗೆ ಸುಗಮವಾಗಿ ಇಳಿಯಲೆಂದು ಮೆಟ್ಟಿಲುಗಳನ್ನು ನಿರ್ಮಿಸಿದರು. ಸಸಿಗಳನ್ನು ನೆಟ್ಟು ನೀರೆರೆದು ‘ಪರಿಸರ ಪೂರಕ ಪ್ರವಾಸೋದ್ಯಮ’ ಎಂಬ ಫಲಕಗಳನ್ನು ನಿಲ್ಲಿಸಿ ಬಂದರು.
ಸಿದ್ದಾಪುರ ತಾಲೂಕಷ್ಟೇ ಏಕೆ, ಇಡೀ ಮಾನವಕುಲವೇ ಹೆಮ್ಮೆ ಪಡಬೇಕಾದ ಸಂಗತಿ ಇದು. ಅಂದು ಹೊಸ ಸಹಸ್ರಮಾನವನ್ನು ಸ್ವಾಗತಿಸುವ ಸಂಭ್ರಮದಲ್ಲಿ ನಾಗರಿಕ ಜಗತ್ತೆಲ್ಲ ರಾತ್ರಿ-ಬೆಳಗಿನವರೆಗೆ ಮೋಜು ಮಸ್ತಿಯಲ್ಲಿ ಮುಳುಗಿದ್ದಾಗ, ಈ ಭೂಮಿತ್ರರು ಒಂದು ಆದರ್ಶ ಸಾಧನೆಗೆಂದು ಆ ದಿನ ಬೆವರು ಸುರಿಸಿದರು. ಭೂಮಿಯ ಸುಸ್ಥಿರ ಭವಿಷ್ಯಕ್ಕೆ ಮಾದರಿ ದಾರಿಯೊಂದನ್ನು ತೋರಿಸಿದರು.
ಸಾಹಿತ್ಯ ಸಮ್ಮೇಳನಕ್ಕೂ ಈ ಘಟನೆಗೂ ಸಂಬಂಧ ಹೇಗೆಂದು ಈಗ ಹೇಳುತ್ತೇನೆ. ಸಾಹಿತ್ಯದ ಪರಿಚಯವಿದ್ದವರಿಗೆ ಮಾತ್ರ ‘ಪರಿಸರ’ ಮತ್ತು ‘ಪ್ರವಾಸೋದ್ಯಮ’ ಮುಂತಾದ ಪರಿಕಲ್ಪನೆ ಮೂಡಿಬರಲು ಸಾಧ್ಯ. ಪರಿಸರ ಪ್ರಜ್ಞೆ ಅನಕ್ಷರಸ್ಥರಲ್ಲೂ ಅಂತರ್ಗತವಾಗಿದೆಯೆಂದು ಭಾವಿಸಿದರೂ ಸಹ, ಉದ್ಯಮಗಳ ವಿಕಾರಗಳೆಲ್ಲವನ್ನೂ ತನ್ನೊಳಗೆ ಆವಾಹಿಸಿಕೊಂಡು ಬೆಳೆಯುತ್ತಿರುವ ‘ಪ್ರವಾಸೋದ್ಯಮ’ ಎಂಬ ಈಚಿನ ಪೀಡೆಯ ಬಗ್ಗೆ ಅರಿವು ಮೂಡಿರಬೇಕೆಂದರೆ ಅಕ್ಷರಸ್ಥರಾಗಿರಬೇಕು; ಆಚೀಚಿನ ಜಗತ್ತಿನ ಬಗ್ಗೆ ತಿಳಿದವರಾಗಿರಬೇಕು. ಅಂಥ ಅರಿವು ಅಕ್ಷರಪ್ರೇಮಿಗಳಲ್ಲಿ ಮಾತ್ರ ಚಿಗುರಲು ಸಾಧ್ಯ. ವಾಜಗದ್ದೆಯಲ್ಲಿ ಒಂದು ಸಮೃದ್ಧ ಗ್ರಂಥಾಲಯ ಇದೆ; ನಾಟಕ, ತಾಳಮದ್ದಲೆ, ಸಂಗೀತ, ಯಕ್ಷಗಾನವೇ ಮುಂತಾದ ಚಟುವಟಿಕೆಗಳ ಒಂದು ಸಾಂಸ್ಕೃತಿಕ ಪರಂಪರೆ ಇದೆ. ಸಮಕಾಲೀನ ವಿಷಯಗಳನ್ನು ಮಥಿಸುವ ಒಂದು ಪುಟ್ಟ ಸುಸಂಸ್ಕೃತ ಲೋಕವೇ ಅಲ್ಲಿ ರೂಪುಗೊಂಡಿದೆ. ಹೀಗೆ ಕಲೆ ಮತ್ತು ಸಾಹಿತ್ಯದೊಂದಿಗಿನ ಗಾಢ ಸಂಬಂಧದಿಂದಾಗಿಯೇ ಸಹಸ್ರಮಾನದ ಸಂದರ್ಭದಲ್ಲಿ ವಿಶಿಷ್ಟ ಮಾದರಿಯ ಕೆಲಸವೊಂದನ್ನು ಕೈಗೊಳ್ಳಲು ಅಲ್ಲಿನ ಯುವಕರಿಗೆ ಪ್ರೇರಣೆ ಸಿಕ್ಕಿತ್ತು. ಭೂಮಿಯೇ ಭೂಮಿಕೆಯನ್ನು ಸೃಷ್ಟಿಸಿತ್ತು.
ಅತ್ಯುನ್ನತ ನೆಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಉದ್ದೇಶ ಇದೇ ಆಗಿರಬೇಕೆಂದು ನಾನು ಭಾವಿಸುತ್ತೇನೆ. ಓದುಗನೊಬ್ಬತನ್ನ ಪ್ರಜ್ಞಾಲೋಕವನ್ನು ವಿಸ್ತರಿಸಿಕೊಳ್ಳುತ್ತಲೇ ಸುತ್ತಲಿನ ಜೀವಲೋಕವನ್ನು ಸಮೃದ್ಧಗೊಳಿಸುವಂತೆ, ಸುಸ್ಥಿರಗೊಳಿಸುವಂತೆ ಮಾಡಲು ಪ್ರೇರೇಪಿಸಬಲ್ಲ ಸಾಹಿತ್ಯಕ್ಕೆ ಪರಮೋಚ್ಚ ಸಾರ್ಥಕತೆ ಬರುತ್ತದೆ. ಈ ದೃಷ್ಟಿಯಿಂದ ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯಕ್ಕೆ ಏನು ಕೊಡುಗೆ ಕೊಟ್ಟಿದೆ ಎಂಬುದಕ್ಕಿಂತ ಈ ತಾಲೂಕಿಗೆ ಕನ್ನಡ ಸಾಹಿತ್ಯ ಏನು ಕೊಡುಗೆ ನೀಡಿದೆ, ಈ ತಾಲ್ಲೂಕಿನ ಜನರು ಕನ್ನಡ ಸಾಹಿತ್ಯದಿಂದ ಏನೇನು ಪಡೆದಿದ್ದಾರೆ ಎಂಬುದನ್ನು ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ಪರಾಮರ್ಶಿಸುವುದು ಈಗಿನ ಕಾಲಘಟ್ಟದಲ್ಲಿ ಪ್ರಸ್ತುತವೆಂದು ಕಾಣುತ್ತದೆ.
ಅನನ್ಯ ಸಸ್ಯಶಾಂಭವಿ
ಇದು ಪುಣ್ಯಭೂಮಿ.ಇಡೀ ಭಾರತದಲ್ಲಿ ಸಿದ್ದಾಪುರ ತಾಲೂಕನ್ನು ಹೋಲಬಲ್ಲ ಇನ್ನೊಂದು ತಾಣ ಇರಲಿಕ್ಕಿಲ್ಲ. ಪಶ್ಚಿಮಘಟ್ಟದ ದಟ್ಟ ವನಸಿರಿಯ ಅತ್ಯಂತ ರೋಚಕ ಭಾಗದಲ್ಲಿ ಈ ತಾಲೂಕು ಸ್ಥಿತಗೊಂಡಿದೆ.ಉತ್ತರಕನ್ನಡ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಗಿರಿಕಣಿವೆಗಳಿರುವ ತಾಲೂಕು ಸಿದ್ದಾಪುರವೆಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ‘ನಾಡಗೀತೆ’ಯಲ್ಲಿ ಬರುವ ‘ಜಯ ಸುಂದರ ನದಿವನಗಳ ನಾಡೇ… ಹಸುರಿನ ಗಿರಿಗಳ ಸಾಲೇ’ ಎಂಬ ಮಾತುಗಳನ್ನು ಕವಿ ಕುವೆಂಪು ಈ ಭೂಪ್ರದೇಶವನ್ನು ನೋಡಿಯೇ ವರ್ಣಿಸಿದಂತಿದೆ. ತಾಲೂಕಿನ ಬಹುಭಾಗವನ್ನು ಆವರಿಸಿರುವ ದಟ್ಟ ವನಸಿರಿ ಜಗತ್ತಿನ ಅನೇಕ ವಿಶಿಷ್ಟ ಜೀವಜಂತುಗಳಿಗೆ ಆಶ್ರಯ ನೀಡಿದೆ. ಕನ್ನಡ ನಾಡಿನ ಋತುಮಾನಗಳ ಸಮತೋಲಕ್ಕೆ ಬಹುದೊಡ್ಡ ಕಾಣಿಕೆಯನ್ನು ನೀಡುತ್ತಿದೆ.
ದಟ್ಟ ಅರಣ್ಯಗಳಿಂದ ಆವೃತವಾದ ಗುಡ್ಡ ಕಣಿವೆಗಳನ್ನು ಬಿಹಾರ, ಮಧ್ಯಪ್ರದೇಶ, ಒರಿಸ್ಸಾ, ಝಾರ್ಖಂಡ್, ಛತ್ತೀಸಗಢಗಳಲ್ಲಿ ಮತ್ತು ಆಫ್ರಿಕಾ, ಲ್ಯಾಟಿನ್ ಅಮೆರಿಕ, ಇತ್ತ ಪೂರ್ವ ಏಶ್ಯಗಳ ಕೆಲವು ರಾಷ್ಟ್ರಗಳಲ್ಲಿ ನಾನು ನೋಡಿದ್ದೇನೆ. ಅಲ್ಲೆಲ್ಲ ಬಡತನ, ಅಕ್ಷರ ದಾರಿದ್ರ್ಯ, ಸಂಪರ್ಕ ದಾರಿದ್ರ್ಯಗಳೇ ಎದ್ದು ಕಾಣುತ್ತವೆ ವಿನಾ ನಿಸರ್ಗ ಸಮೃದ್ಧಿ ಹಾಗೂ ಬದುಕಿನ ಸಮೃದ್ಧಿ ಇವೆರಡೂ ನಮ್ಮಲ್ಲಿರುವಂತೆ ಒಟ್ಟಿಗೆ ಇರುವುದು ತೀರಾ ತೀರಾ ವಿರಳ. ನಾವು ಅದೃಷ್ಟವಂತರು.
ನಮ್ಮ ತಾಲೂಕಿನ ಅತಿ ದೊಡ್ಡ ಹೆಮ್ಮೆಯ ಸಂಗತಿ ಏನೆಂದರೆ ಇಲ್ಲಿನ ಪವಿತ್ರ ನದಿ ಅಘನಾಶಿನಿ. ಪಾಪದ ಲವಲೇಶವೂ ಇಲ್ಲದ ಈ ನದಿ ಯಾವುದೇ ಕಾರ್ಖಾನೆಯ ಮಾಲಿನ್ಯವನ್ನು ತಟ್ಟಿಸಿಕೊಳ್ಳದೆ, ಅಣೆಕಟ್ಟುಗಳ ಬಂಧನಕ್ಕೆ ಸಿಲುಕದೆ ಇಂದಿಗೂ ಮುಕ್ತವಾಗಿ ಹರಿಯುವ ಜಲಧಾರೆಯಾಗಿದೆ. ಇಡೀ ರಾಜ್ಯದಲ್ಲಿ ಈ ಗಾತ್ರದ ನದಿ ಇಷ್ಟು ಪವಿತ್ರವಾಗಿ ಉಳಿದಿರುವ ಉದಾಹರಣೆ ಬೇರೆಲ್ಲೂ ಇಲ್ಲ. ಎಲ್ಲ ನದಿಗಳಿಗಿರುವಂತೆ ಇದಕ್ಕೂ ಬಾಲ್ಯ, ಯೌವನ, ಮುದಿತನ ಇದೆಯಾದರೂ ಇದು ತನ್ನ ಬಾಲ್ಯ ಮತ್ತು ಯೌವನದ ಅತಿ ರೋಚಕ ಘಟ್ಟವನ್ನು ನಮ್ಮ ತಾಲ್ಲೂಕಿನಲ್ಲಿ ಸವೆಸಿ ಮುಂದಕ್ಕೆ ಸಾಗಿ ಕಡಲು ಸೇರುತ್ತದೆ.ಈ ಕಣಿವೆಯಲ್ಲಿ ಅಂಬೆಗಾಲಿನ ಚಲನೆ, ಆ ಬೆಟ್ಟದ ಬಳಿ ಜುಳುಜುಳು ಗೆಜ್ಜೆ ನಿನಾದ, ಆಚಿನ ಕೊಳ್ಳದಲ್ಲಿ ಸರಸರ ನಡಿಗೆ, ಅದರಾಚೆಗೆ ನಾಗಾಲೋಟ; ಮುಟ್ಠಳ್ಳಿಯ ಬಳಿ ನಾಟ್ಯದ ಕುಣಿತ, ಉಂಚಳ್ಳಿಯಲ್ಲಿ ಆಳದ ಜಿಗಿತ. ಅಘನಾಶಿನಿ ನಿನಗೆ ಧನ್ಯವಾದ!
ನಾವು ಇನ್ನೊಂದು ದೃಷ್ಟಿಯಿಂದಲೂ ಅದೃಷ್ಟವಂತರು. ಇಲ್ಲಿ ಯಾವುದೇ ಭೀಕರ ನಿಸರ್ಗ ಪ್ರಕೋಪ ಸಂಭವಿಸಿದ ಉದಾಹರಣೆಯಿಲ್ಲ. ಭೂಕಂಪನವಾಗಲಿ, ಮಹಾಪೂರವಾಗಲಿ, ಭೀಕರ ಬರಗಾಲವಾಗಲೀ ಇಲ್ಲಿ ಬರಲಾರದು. ಹಾಗೆಯೇ ಆಧುನಿಕ ಅಭಿವೃದ್ಧಿಯ ವಿಕಾರ ಮುಖಗಳಾದ ಅಣುಸ್ಥಾವರವಾಗಲೀ ಗಣಿಗಾರಿಕೆಯಾಗಲೀ ಕಾರ್ಖಾನೆಯ ಸೈರನ್ ಚೀತ್ಕಾರವಾಗಲೀ ರೈಲಿನ ಗಡಚಿಕ್ಕುವ ಶಿಳ್ಳೆಯಾಗಲೀ ಇಲ್ಲಿಲ್ಲ. ಆದ್ದರಿಂದಲೇ ಉದ್ಯಮ ಸಂಸ್ಕೃತಿಯ ಅಪದ್ಧಗಳು ಇಲ್ಲಿಗೆ ಕಾಲಿಟ್ಟಿಲ್ಲ. ಹಂದಿಗೋಡು ಲಕ್ಷಣ, ಮಂಗನಕಾಯಿಲೆ, ಫ್ಲೋರೊಸಿಸ್, ಎಂಡೊಸಲ್ಫಾನ್ ವೈಕಲ್ಯವೇ ಮುಂತಾದ ಮಾನವ ನಿರ್ಮಿತ ರೋಗವಿಕಾರಗಳಾಗಲೀ ಜನಾಂಗೀಯ ಸಂಘರ್ಷಗಳಾಗಲೀ ಕೋಮು ಗಲಭೆಗಳಾಗಲೀ ಈ ತಾಲೂಕನ್ನು ಅಮರಿಕೊಂಡಿದ್ದಿಲ್ಲ. ನಾವು ಹೆಮ್ಮೆಪಡಬೇಕಾದ ಅಂಶಗಳಿವು.
ನಿಸರ್ಗ ಸಂಪತ್ತಿನಂತೆ ಅಕ್ಷರ ಸಂಪತ್ತು ಮತ್ತು ವಿದ್ಯಾಧನವೂ ಈ ತಾಲ್ಲೂಕಿನಲ್ಲಿ ಗಣನೀಯ ಪ್ರಮಾಣದಲ್ಲಿದೆ. ನನ್ನ ಬಳಿ ನಿಖರ ಅಂಕಿಸಂಖ್ಯೆ ಇಲ್ಲವಾದರೂ ಮೇಲ್ನೋಟಕ್ಕೆ ಹೋಲಿಕೆಯಿಂದ ಹೇಳುವುದಾದರೆ ಪ್ರತಿ ಗ್ರಾಮದಲ್ಲೂ ಅಕ್ಷರಪ್ರೇಮಿಗಳಿದ್ದಾರೆ. ಪುಸ್ತಕಗಳು, ಪತ್ರಿಕೆಗಳು ಹಳ್ಳಿಹಳ್ಳಿಗೂ ತಲುಪುತ್ತಿವೆ. ಹಸೆಕಲೆ, ಜನಪದ ನೃತ್ಯಸಂಗೀತ, ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆ, ಶಾಸ್ತ್ರೀಯ ಸಂಗೀತ, ವಾಕ್ಪಟುತ್ವ, ಹಾಡುಗಾರಿಕೆ, ಛಾಯಾಗ್ರಹಣವೇ ಮುಂತಾದ ಸೃಜನಶೀಲ ಚಟುವಟಿಕೆಗಳ ಉದಾಹರಣೆಗಳು ಪ್ರತಿ ಊರಲ್ಲೂ ಕಾಣಸಿಗುತ್ತವೆ. ತೇಜಸ್ವಿ, ಕಾರಂತ, ಬೇಂದ್ರೆ, ಕುವೆಂಪು, ಕೃಷ್ಣಾನಂದ ಕಾಮತರ ಅಭಿಮಾನಿಗಳು ಸಿಗುತ್ತಾರೆ. ಸೃಜನಶೀಲ ಗುಣವನ್ನು ಗುರುತಿಸುವ, ಮೆಚ್ಚುವ, ಗೌರವಿಸುವ ಸಾಂಸ್ಕೃತಿಕ ಶ್ರೀಮಂತಿಕೆ ಯಾವುದೇ ಕಣಿವೆ ಗ್ರಾಮದಲ್ಲೂ ಎದ್ದುಕಾಣುವಂತಿದೆ. ಅಂಥ ಸೃಜನಶೀಲ ಮನಸ್ಸು, ಸಾಧನೆಯ ಛಲ ಮತ್ತು ನಿರಂತರ ಶೋಧಬುದ್ಧಿಯುಳ್ಳ ಎಷ್ಟೊಂದು ಜನರ ಉಜ್ವಲ ಇತಿಹಾಸ ನಮ್ಮಲ್ಲಿದೆ. ಅದೃಷ್ಟಕ್ಕಾಗಿ ಕಾಯದೆ ಅವಕಾಶಗಳ ಮೆಟ್ಟಿಲನ್ನು ನಿರ್ಮಿಸುತ್ತ ಮೇಲೇರಬಲ್ಲ ಶ್ರಮಿಕರ ತಾಯ್ನೆಲ ಇದು. ಹಳ್ಳಿಯ ಹಿತ್ತಿಲಲ್ಲೇ ಸಕ್ಕರೆ ತಯಾರಿಸಿದವರು, ಹಳ್ಳದ ನೀರಿನಲ್ಲೇ ವಿದ್ಯುತ್ ಉತ್ಪಾದಿಸಿ ಬೆಳಕು ತೋರಿದವರು ನಮ್ಮಲ್ಲಿ ಆಗಿಹೋಗಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೂ ಹೋಗಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ದೇಶದ ಅಭಿವೃದ್ಧಿಯ ನಕ್ಷೆಯಲ್ಲೂ ಹೆಸರು ಮೂಡಿಸಿದ ಮುತ್ಸದ್ದಿಗೆ ಜನ್ಮವಿತ್ತ ತಾಲೂಕು ಇದು. ಇಂಥ ವ್ಯಕ್ತಿಗತ ಸಾಧನೆಗಳ ಹಿಂಬೆಳಕಿನಲ್ಲಿ ನಮ್ಮ ತಾಲೂಕಿನ ಈಚಿನ ಕೆಲವು ವಿಶಿಷ್ಟ ಸಾಮುದಾಯಿಕ ಸಾಧನೆಗಳನ್ನು ನಾವು ಗುರುತಿಸಬಹುದಾಗಿದೆ.
ಸ್ವಾತಂತ್ರ್ಯದ ಹೊಸ ಹೋರಾಟ
ನಮ್ಮ ತಾಲೂಕು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮುಂಚೂಣಿಯಲ್ಲಿತ್ತೆಂಬುದನ್ನು ನಾವು ತುಂಬ ಹೆಮ್ಮೆಯಿಂದ ಸ್ಮರಿಸುತ್ತೇವೆ. ಬಿಳಗಿಯ ರಾಜ 3ನೇ ಸೋಮಶೇಖರ್ 1799ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿರುವುದಾಗಿ ಚರಿತ್ರೆಯಲ್ಲಿ ದಾಖಲಾಗಿದೆ (ಅದೇ ವರ್ಷ ಅಂಥದ್ದೇ ಕಾಳಗದಲ್ಲಿ ಹತನಾದ ಟಿಪ್ಪೂಗೆ ಸಂದ ಕೀರ್ತಿಯ ಸಮನಾದ ಹೊಳಪು ಈತನಿಗೇಕೆ ಸಂದಿಲ್ಲವೊ?) ಇಪ್ಪತ್ತನೆಯ ಶತಮಾನದಲ್ಲಿ ಜಂಗಲ್ ಸತ್ಯಾಗ್ರಹ, ಕರ ನಿರಾಕರಣೆ ಚಳವಳಿ,ಎಮ್ಮೆ ಸತ್ಯಾಗ್ರಹ, ಮಹಿಳಾ ಚಳವಳಿ ಎಲ್ಲವೂ ರೋಚಕ ಇತಿಹಾಸವನ್ನು ನಿರ್ಮಿಸಿವೆ. ಸ್ವಾತಂತ್ರ್ಯ ಸಿಕ್ಕನಂತರ ಈ ಹೋರಾಟ ಇನ್ನೂ ಉನ್ನತ ಸ್ತರಕ್ಕೇರಿರುವುದನ್ನು ನಾವು ಗಮನಿಸಬಹುದು. ಅಘನಾಶಿನಿ ಅಣೆಕಟ್ಟು ವಿರೋಧಿ ಹೋರಾಟವನ್ನು ನಾನು ಹರಿಯುವ ನೀರಿನ ಸ್ವಾತಂತ್ರ್ಯದ ಹೋರಾಟವೆಂದೇ ನೋಡಲು ಬಯಸುತ್ತೇನೆ. ಆ ಹೋರಾಟದ ಫಲಶ್ರುತಿ ಎಂಬಂತೆ ಇದೀಗ ಅಘನಾಶಿನಿ ಕೊಳ್ಳವನ್ನು ‘ಸಂರಕ್ಷಿತ ಪ್ರದೇಶ’ ಎಂದು ಸರಕಾರ ಘೋಷಿಸಿದೆ. ಇದರ ಅರ್ಥ ಏನೆಂದರೆ, ಇನ್ನು ಮೇಲೆ ಡ್ಯಾಮ್ ಭೂತ ಮತ್ತೆ ಮತ್ತೆ ಇಲ್ಲಿ ಇಣುಕಲಾರದು. ಚಿಕ್ಕ ಜಲವಿದ್ಯುತ್ತು, ಹರಿನೀರಿನ ವಿದ್ಯುತ್ ಯೋಜನೆಗಳ ಹೆಸರಿನಲ್ಲಿ ಅಘನಾಶಿನಿಯ ಉಪನದಿಗಳಲ್ಲಿ ಹಾಗೂ ಕಿರು ಜಲಪಾತಗಳಿದ್ದಲ್ಲಿ ವಿದ್ಯುತ್ ಉತ್ಪಾದಿಸಲು ಅನೇಕ ಸಂಸ್ಥೆಗಳು ಮುಂದೆ ಬಂದರೂ ಇತರ ಜಿಲ್ಲೆಗಳಲ್ಲಿ ಇಂಥ ಕಿರುಘಟಕಗಳು ಮಾಡಿದ ಅಧ್ವಾನವನ್ನು ನೋಡಿದ ಮೇಲೆ ಆ ಬಗೆಯ ಯಾವುದೇ ಯೋಜನೆಗೆ ಇಲ್ಲಿ ಅವಕಾಶ ಕೊಡಕೂಡದೆಂದು ಜನಾಭಿಪ್ರಾಯ ಮೂಡಿದೆ. ಪಶ್ಚಿಮ ಘಟ್ಟದ ಕಾರ್ಯಪಡೆಯ ಗಟ್ಟಿ ನಿಲುವಿನಿಂದಾಗಿ ತಾಲೂಕಿನ ಜಲಪಾತಗಳ ಸ್ವಾತಂತ್ರ್ಯ ರಕ್ಷಣೆ ಆದಂತಾಗಿದೆ.
ಹೆಗ್ಗರಣಿಯ ಗ್ರಾಮಸ್ಥರು ಸಿದ್ಧಪಡಿಸಿದ ‘ಜೀವಿವೈವಿಧ್ಯ ದಾಖಲಾತಿ’ ಇಡೀ ರಾಜ್ಯಕ್ಕೆ ಮಾದರಿಯದಾಗಿದೆ. ಜಗತ್ತಿನ ಎಲ್ಲ ಭೂಪ್ರದೇಶಗಳ ನಿವಾಸಿಗಳೂ ತಂತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಎಂತೆಂಥ ಸಸ್ಯ, ಪ್ರಾಣಿ, ಪಶುಪಕ್ಷಿಗಳಿವೆ ಎಂಬುದನ್ನು ಪತ್ತೆ ಮಾಡಿ, ಪಟ್ಟಿಮಾಡಿ ದಾಖಲಾತಿ ಇಡಬೇಕೆಂಬ ಸೂಚನೆ ದೂರದ ಬ್ರಝಿಲ್ ದೇಶದ ಪೃಥ್ವೀ ಶೃಂಗಸಭೆಯಲ್ಲಿ ಪ್ರಸ್ತಾವನೆಯಾಗಿತ್ತು. ಅದನ್ನು ನಮ್ಮ ರಾಜ್ಯದಲ್ಲಿ ಮೊದಲು ಕಾರ್ಯಗತಗೊಳಿಸಿದ ಶ್ರೇಯ ಹೆಗ್ಗರಣೆಯ ಗ್ರಾಮಸ್ಥರಿಗೆ ಸೇರುತ್ತದೆ. ಜಾಗತಿಕ ಹೊಣೆಗಾರಿಕೆಯೊಂದನ್ನು ತನ್ಮಯತೆಯಿಂದ ನಿಭಾಯಿಸಿದ ಕೆಲಸ ಅದು. ಅಲ್ಲಿನ ಜೀವಿವೈವಿಧ್ಯ ಸಮಿತಿಗೆ ಇದೀಗ ರಾಜ್ಯಮಟ್ಟದ ಪ್ರಶಸ್ತಿ ಬಂದಿದೆ. ಅಭಿನಂದಿಸೋಣ. ಅದೇ ಮಾದರಿಯಲ್ಲಿ ಇನ್ನೂ ಹತ್ತಾರು ಗ್ರಾಮಗಳಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಂದ ಜೀವಿವೈವಿಧ್ಯ ಸಮೀಕ್ಷೆ ನಡೆಯುತ್ತಿದೆ. ನಮ್ಮ ಸುತ್ತಮುತ್ತಲಿನ ನಿಸರ್ಗದಲ್ಲಿನ ಜೀವಿಗಳೂ ಈ ನಾಡಿನ ಪ್ರಜೆಗಳು, ನಮಗಿಂತ ಕೋಟ್ಯಂತರ ವರ್ಷಗಳ ಹಿಂದೆಯೇ ಅವು ಇಲ್ಲಿ ವಾಸ್ತವ್ಯ ಹೂಡಿವೆ, ಅವಕ್ಕೂ ಬದುಕುವ ಹಕ್ಕಿದೆ ಎಂಬ ಅರಿವನ್ನು ಎಳೆಯ ಪೀಳಿಗೆಯಲ್ಲಿ ಮೂಡಿಸುವ ನಿಟ್ಟಿನಲ್ಲಿ ಇಂಥ ಸಮೀಕ್ಷೆಗಳು, ದಾಖಲೆಗಳು ಮಾದರಿ ಕೆಲಸಗಳಾಗುತ್ತವೆ. ತಳಿಚೌರ್ಯವನ್ನು ಪ್ರತಿಬಂಧಿಸಬಲ್ಲ ಮಹತ್ತರ ಬೀಗಮುದ್ರೆಯನ್ನು ನಿರ್ಮಿಸಿದಂತಾಗುತ್ತದೆ.
ಕತ್ಲೆಕಾನಿನಲ್ಲಿ ಹೊಮ್ಮಿದ ಬೆಳಕು
ನಮ್ಮ ತಾಲ್ಲೂಕಿನ ಸಸ್ಯಸಂರಕ್ಷಣೆಯ ಕೆಲಸವೊಂದು ಜಾಗತಿಕ ಮಹತ್ವ ಪಡೆದ ಒಂದು ಉದಾಹರಣೆಯನ್ನು ನಾನಿಲ್ಲಿ ಪ್ರಸ್ತಾಪಿಸಬೇಕು. ಗೇರುಸೊಪ್ಪೆಯ ಬಳಿಯ ಕತ್ಲೆಕಾನು ಎಂಬಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಹೊಳಗೆರೆ ಮರದಂತಿರುವ ಆದರೆ ಗುಡ್ಡೆಗೇರಿನ ಲಕ್ಷಣಗಳಿರುವ ಕೆಲವು ದೈತ್ಯಾಕಾರದ ವೃಕ್ಷಸಮೂಹ ಅರಣ್ಯತಜ್ಞರ ಗಮನಕ್ಕೆ ಬಂದಿತು. ಅದು ವಿಜ್ಞಾನಿಗಳಿಗೆ ಇದುವರೆಗೆ ಗೊತ್ತಿರದಿದ್ದ ಹೊಸ ವೃಕ್ಷ ಪ್ರಭೇದವಾಗಿದ್ದರಿಂದ ಅದಕ್ಕೆ ‘ಸೆಮಿಕಾರ್ಪಸ್ ಕತ್ಲೆಕಾನೆನ್ಸಿಸ್’ (ಕಾನುಗೇರು) ಎಂದು ಹೊಸದಾಗಿ ವೈಜ್ಞಾನಿಕ ನಾಮಕರಣ ಮಾಡಲಾಯಿತು. ಇದರ ಸಂತತಿ ಎಲ್ಲೆಲ್ಲಿ ವಿಸ್ತರಿಸಿದೆ ಎಂದು ನೋಡಲು ಹೋದಾಗ ಒಂದರ ಮೇಲೊಂದರಂತೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದವು. ಕತ್ಲೆಕಾನನ್ನು ಬಿಟ್ಟರೆ ಬೇರೆಲ್ಲೂ ಈ ಮರಗಳಿರಲಿಲ್ಲ; ಬೇರೆಲ್ಲೂ ಅಂದರೆ ಇಡೀ ಜಗತ್ತಿನಲ್ಲೇ ಬೇರೆಲ್ಲೂ ಇವು ಇರಲು ಸಾಧ್ಯವಿಲ್ಲ ಎಂಬುದು ದೃಢವಾಯಿತು. ಆದರೆ ಇಲ್ಲಾದರೂ ಅವು ಸಾಕಷ್ಟು ಸಂಖ್ಯೆಯಲ್ಲಿವೆಯೆ ನೋಡಿದರೆ ಅದೂ ಇಲ್ಲ. ಕೇವಲ 14 ಮರಗಳಿವೆ. ಮತ್ತೆ ನೋಡಿದರೆ ಆ ಎಲ್ಲವೂ ವಯಸ್ಸಾದ ಮರಗಳೇ ಆಗಿವೆ. ಪ್ರತಿ ಮರವೂ ಹೂಬಿಡುತ್ತದಾದರೂ ಎಳೆ ಪ್ರಾಯದ ಗಿಡಗಳಾಗಲೀ ಸಸಿಗಳಾಗಲೀ ಒಂದೂ ಇಲ್ಲವೇಕೆಂದು ನೋಡಿದಾಗ, ಅವುಗಳ ಪರಾಗಸ್ಪರ್ಶ ನಡೆಯುತ್ತಿಲ್ಲ ಎಂಬುದು ಗೊತ್ತಾಯಿತು. ಏಕೆಂದರೆ ಮಕರಂದವನ್ನು ಹೀರಲು ಹಾಗೂ ಪರಾಗವನ್ನು ಬೇರೆ ಹೂಗಳಿಗೆ ರವಾನಿಸಲು ‘ಮಲಬಾರ್ ನಿಂಫ್’ ಎಂಬ ಚಿಟ್ಟೆಯೇ ಬೇಕಾಗಿತ್ತು. ಅವುಗಳ ಸಂತತಿ ತೀರ ಅಪರೂಪವಾಗಿತ್ತು. ಎಲ್ಲೋ ಒಂದೆರಡು ಪಾತರಗಿತ್ತಿಗಳು ಬಂದು ಪರಾಗಸ್ಪರ್ಶ ನಡೆದು ಕಾಯಿ ಕಚ್ಚಿದರೂ ಅದು ಹಣ್ಣಾದ ಬಳಿಕ ಬೀಜಪ್ರಸಾರ ಮಾಡಲು ಸಿಂಗಳೀಕಗಳೇ ಬರಬೇಕಿತ್ತು. ಆ ಯಾವ ಜೀವಿಗಳ ಸಹಕಾರವಿಲ್ಲದೆ ಇಡೀ ಈ ಅಪರೂಪದ ವೃಕ್ಷಸಂತಾನವೇ ವಿನಾಶದ ಅಂಚಿಗೆ ಬಂದು ನಿಂತಿತ್ತು. ವಿನಾಶದ ಅಂಚಿಗೆ ಅಂದರೆ ಈ ಜಗತ್ತಿನಿಂದಲೇ ಕಾನುಗೇರಿನ ವೃಕ್ಷಪ್ರಭೇದ ಕಣ್ಮರೆಯಾಗುವ ಸಂಭವವಿತ್ತು. ವಿಜ್ಞಾನಿಗಳು ಸ್ಥಳೀಯರ ನೆರವಿನಿಂದ ಹೂಗಳಿಗೆ ಪರಾಗಸ್ಪರ್ಶ ಮಾಡಿಸಿ, ಹಣ್ಣು ಮತ್ತು ಬೀಜಗಳನ್ನು ಸಂಗ್ರಹಿಸಿ, ಕೊಟ್ಟೆಗಳಲ್ಲಿ ಸಸಿ ಮಾಡಿ ಮತ್ತೆ ಕತ್ಲೆಕಾನಿನಲ್ಲೇ ಅವುಗಳ ಸಂತಾನವೃದ್ಧಿ ಮಾಡಿದ್ದಾರೆ. ಸುಮಾರು ನಾಲ್ಕು ಸಾವಿರ ಹೊಸ ಗಿಡಗಳು ತಲೆಯೆತ್ತಿವೆ.
ಸಹಜ ನಿಸರ್ಗದಲ್ಲಿ ಮನುಷ್ಯನ ಹಸ್ತಕ್ಷೇಪವಾದಲ್ಲೆಲ್ಲ ವಿನಾಶವೇ ಕಟ್ಟಿಟ್ಟ ಬುತ್ತಿ ಎಂಬ ಪ್ರತೀತಿಯನ್ನು ತಿರುವು ಮುರುವು ಮಾಡಿದ ಪ್ರಸಂಗ ಇದು. ಅಳಿವಿನಂಚಿಗೆ ಬಂದಿದ್ದ ಕೊನೆಯ ಪೀಳಿಗೆಯ ವೃಕ್ಷಸಮೂಹದಲ್ಲಿ ಹಸ್ತಕ್ಷೇಪ ಮಾಡಿ ಸಂತಾನವೃದ್ಧಿ ಮಾಡಿ ತೋರಿಸಿದ ಅಪರೂಪದ ಘಟನೆ ಇದು. ವಿನಾಶದ ಪ್ರಪಾತದಂಚಿನ ರಾಮಪತ್ರೆ, ದಾರುದುರ್ಗಂಧ, ಅಶೋಕವೃಕ್ಷ, ಮಡ್ಡಿಧೂಪ, ಸಾಲುಧೂಪ ಮರಗಳೂ ಇಂದು ಸಿದ್ದಾಪುರ ತಾಲೂಕಿನ ಜನರ ನೆರವಿನ ಹಸ್ತದಿಂದಾಗಿ ಮರುಹುಟ್ಟು ಪಡೆಯುತ್ತಿವೆ. ಪ್ರಕೃತಿಯನ್ನು ಬಗ್ಗು ಬಡಿದೇ ಪ್ರಗತಿ ಸಾಧಿಸಬೇಕೆಂಬ ಹೆಮ್ಮಾದರಿಗಳು ಎಲ್ಲೆಡೆ ಕಾಣುತ್ತಿರುವಾಗ ಅದಕ್ಕೆ ತದ್ವಿರುದ್ಧವಾಗಿ, ನಿಸರ್ಗವನ್ನೇ ಓಲೈಸಿ ಅದರೊಂದಿಗೆ ಸಹಬಾಳ್ವೆ ನಡೆಸಬೇಕೆಂಬ ಆದರ್ಶದ ಗುರಿ ಇಟ್ಟುಕೊಂಡು ಅನೇಕ ಗಮನಾರ್ಹ ಕೆಲಸಗಳು ಈ ತಾಲೂಕಿನಲ್ಲಿ ನಡೆಯುತ್ತಿವೆ. ಅವನ್ನು ಸಂಕ್ಷಿಪ್ತವಾಗಿ ಪಟ್ಟಿ ಮಾಡುವುದಾದರೆ,
ಕಣ್ಮರೆಯಾಗುತ್ತಿರುವ ದೇವರ ಕಾಡುಗಳನ್ನು ‘ಕಾನು’ಗಳನ್ನು, ರಾಮಪತ್ರೆ ಜಡ್ಡಿಗಳನ್ನು ಗುರುತಿಸಿ ಜೀರ್ಣೋದ್ಧಾರ ಮಾಡುವ ಕೆಲಸಗಳು ಆರಂಭವಾಗಿವೆ. ಕೊರ್ಲಕೈ ಅರಣ್ಯವನ್ನು ‘ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶ’ ಎಂದು ಘೋಷಿಸಲಾಗಿದೆ. ಜಾತಿ ಅಂತಸ್ತುಗಳ ಭೇದ ಮರೆತು ನಾಟಿವೈದ್ಯರನ್ನು, ಮೂಲಿಕಾ ತಜ್ಞರನ್ನು ಗುರುತಿಸಿ, ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸಗಳು ನಡೆಯುತ್ತಿವೆ. ಮಾವಿನಗುಂಡಿಯಲ್ಲಿ ಮಹಿಳಾ ಸತ್ಯಾಗ್ರಹ ವನ, ಕಲ್ಗಾರು ಮತ್ತು ಹೇರೂರು ಗುಡ್ಡದಲ್ಲಿ ದೇವವನಗಳು ತಲೆಯೆತ್ತಿವೆ. ಗ್ರಾಮ ಅರಣ್ಯ ಸಮಿತಿಗಳು ಚುರುಕಾಗಿ ಕೆಲಸ ಮಾಡುತ್ತಿದ್ದು, ಅವು ಈ ವರ್ಷ ನಾಲ್ಕು ಕೋಟಿ ರೂಪಾಯಿಗಳ ನಗದು ಪ್ರತಿಫಲ ಪಡೆದಿವೆಯೆಂದು ಅರಣ್ಯ ಇಲಾಖೆಯ ಅಂಕಿಸಂಖ್ಯೆಗಳು ಹೇಳುತ್ತವೆ.
ವನಸಂವರ್ಧನೆಯಲ್ಲೇ ಬದುಕಿನ ನೆಮ್ಮದಿ ಇದೆ, ಸ್ವಾಭಿಮಾನದ ಮೂಲಸ್ರೋತವಿದೆ ಎಂಬ ಪ್ರಜ್ಞೆ ನಮ್ಮ ತಾಲೂಕಿನ ಪ್ರತಿಯೊಬ್ಬ ನಾಗರಿಕರಲ್ಲೂ ಮೂಡುವಂತಾಗಬೇಕು. ಅಂಥದೊಂದು ಆದರ್ಶ ಸಮುದಾಯಕ್ಕಾಗಿ ಜಗತ್ತೇ ಇಂದು ಕಾದು ಕೂತಿದೆ. ಮಹಾಯುದ್ಧದ ಸಂದರ್ಭದಲ್ಲಿ ಹೊರಜಗತ್ತಿನಿಂದ ಆಹಾರಸಾಮಗ್ರಿಗಳ ಪೂರೈಕೆ ಸ್ಥಗಿತವಾದಾಗ ಹಸಿವೆಯಿಂದ ಕಂಗಾಲಾಗಿ ಬಾಳೆಕಾಯಿಯ ಹಿಟ್ಟನ್ನೊ, ಬಗಿನೆ ಮರದ ತಿರುಳನ್ನೊ, ಹಲಸಿನ ಬೀಜದ ಹಿಟ್ಟನ್ನೊ ತಿಂದು ಬದುಕಿದವರ ತಾಲೂಕು ಇದು. ವನಸಂಪತ್ತೇ ಅಂದು ಇಲ್ಲಿಯ ಜನರನ್ನು ಬದುಕಿಸಿತ್ತೆಂದು ನಾವು ಹೇಳಬಹುದು. ಇಂದು ಯುದ್ಧಗಳು ಸೋಲುತ್ತಿವೆ. ಮೂಲೆಗುಂಪಾಗುತ್ತಿವೆ. ‘ಶತ್ರುವಿಲ್ಲದ’ ಹೊಸಬಗೆಯ ಸಮರಕ್ಕೆ ಜಗತ್ತು ಸಜ್ಜಾಗಬೇಕಿದೆ. ಬರಲಿರುವ ಬಿಸಿ ಪ್ರಳಯದಿಂದ ಮನುಕುಲವನ್ನು ಉಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಹಸಿರು ನಿಸರ್ಗವನ್ನು ಉಳಿಸಿಕೊಳ್ಳಬಲ್ಲ ಧೀರ ಸಮುದಾಯವನ್ನು ಗುರುತಿಸಿ ಪ್ರೋತ್ಸಾಹಿಸಲು ವಿಶ್ವಸಂಸ್ಥೆಯ ಮಟ್ಟದಲ್ಲಿ ಯೋಜನೆಗಳು ರೂಪುಗೊಳ್ಳುತ್ತಿವೆ. ಅರಣ್ಯ ಸಂರಕ್ಷಣೆ, ಸಂವರ್ಧನೆ ಮಾಡಬಲ್ಲ ಸಮುದಾಯಗಳಿಗೆ, ಅವು ಏನನ್ನೂ ಉತ್ಪಾದಿಸದಿದ್ದರೂ ಪ್ರತಿಫಲ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಅಂಥ ನೆಲಮೂಲದ ಸಮುದಾಯಗಳಿಗೆ ಜಾಗತಿಕ ಮಹತ್ವ ಬರಲಿದೆ. ಏಕೆಂದರೆ ಈ ಭೂಮಿಯ ಅಪರೂಪದ ಸಂಪತ್ತನ್ನು ಕಾಪಿಡುವ ಹೊಣೆಗಾರಿಕೆ ಅವರ ಮೇಲಿರುತ್ತದೆ. ಅಂಥ ಜಾಗತಿಕ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಮೊದಲ ಹೆಜ್ಜೆಯನ್ನು ನಾವಿಟ್ಟಿದ್ದೇವೆಂಬ ಹೆಮ್ಮೆ ಈ ತಾಲೂಕಿನದಾಗಬೇಕು, ಈ ಜಿಲ್ಲೆಯದ್ದಾಗಬೇಕು.
ನಿಸರ್ಗದೊಂದಿಗೆ ಸಾಹಿತ್ಯದ ನಂಟು
ಸಾಹಿತ್ಯ ಸಮ್ಮೇಳನದಲ್ಲಿ ಇವೆಲ್ಲ ಪ್ರಸ್ತಾಪ ಏಕೆ ಬರಬೇಕೆಂಬ ಪ್ರಶ್ನೆಯನ್ನು ನನಗೆ ನಾನೇ ಹಾಕಿಕೊಳ್ಳುತ್ತೇನೆ. ಜನರ ಬದುಕಿಗೆ ಹತ್ತಿರವಾದ ಸಾಹಿತ್ಯ ರೂಪುಗೊಳ್ಳಬೇಕು, ಜನರ ಬದುಕನ್ನು ಸುಗಮಗೊಳಿಸಬಹುದಾದ ಸಾಹಿತ್ಯ ಬರಬೇಕು. ನಮ್ಮ ಬಹುಪಾಲು ಸಾಹಿತ್ಯವೆಲ್ಲ ಹಿಂದಿನ, ಇಂದಿನ ಬದುಕನ್ನು ಮಥಿಸುತ್ತವೆಯೇ ವಿನಾ ನಾಳಿನ ಬದುಕಿಗೆ ತೋರುಗಂಬವಾಗುತ್ತಿಲ್ಲ.ಈಗಿನ ಕಲ್ಪನಾ ಸಾಹಿತ್ಯ, ಸೃಜನಶೀಲ ಕಾವ್ಯ, ಸಹೃದಯೀ ವಿಮರ್ಶೆ ಇವೆಲ್ಲ ನಿರರ್ಥಕವೆಂದು ನಾನು ಹೇಳುತ್ತಿಲ್ಲ. ಅಕ್ಷರಬಾಂಧವ್ಯವನ್ನು ಗಟ್ಟಿಯಾಗಿಡಲು ಅವೆಲ್ಲ ಬೇಕೇ ಬೇಕು. ಅವುಗಳ ಜತೆಜತೆಗೇ ನಮ್ಮವರ, ಅಂದರೆ ನಮ್ಮ ತಾಲೂಕಿನ ಜನಸಾಮಾನ್ಯರ ಆತ್ಮಗೌರವವನ್ನು, ಸ್ವಾಭಿಮಾನವನ್ನು ಹೆಚ್ಚಿಸಬಲ್ಲ ನಮ್ಮದೇ ವಿಶಿಷ್ಟ ಸಾಹಿತ್ಯ ರೂಪುಗೊಳ್ಳಬೇಕೆಂದು ನಾನು ಆಶಿಸುತ್ತೇನೆ. ಕೆಲವು ಉದಾಹರಣೆಗಳೆಂದರೆ,
ಭೂತಾನ ಸರಕಾರ ತನ್ನ ಅಭಿವೃದ್ಧಿಯನ್ನು ‘ನಿವ್ವಳ ರಾಷ್ಟ್ರೀಯ ಉತ್ಪನ್ನ’ (ಜಿಡಿಪಿಯ)ಎಂಬ ಮಾಮೂಲು ಸೂಚ್ಯಂಕದ ಮೂಲಕ ಅಳೆಯುತ್ತಿಲ್ಲ. ಬದಲಿಗೆ ಅದು ‘ಸಂತಸ ಸೂಚ್ಯಂಕ’ ಎಂಬ ಪ್ರತ್ಯೇಕ ಅಳತೆಗೋಲನ್ನು ಬಳಸುತ್ತಿದೆ. ಹಣ ಎಷ್ಟಿದೆ ಎಂಬುದು ಸಂತೃಪ್ತಿಯ ಅಳತೆಗೋಲು ಆಗಿರಲೇಬಾರದು. ಹಣ ಎಷ್ಟೇ ಇದ್ದರೂ ಅಂಥ ಸಮಾಜದಲ್ಲಿ ಜಗಳ, ಪೈಪೋಟಿ, ಕ್ಲೇಶ, ಅಸೂಯೆ, ಅತೃಪ್ತಿ ತುಂಬಿದ ಒತ್ತಡದ ಬದುಕಿನಲ್ಲಿ ನೆಮ್ಮದಿ ನೆಲೆಸಿರಲಾರದು. ಜಪಾನೀ ಚಿಂತಕ ಮಸೊನಾಬೊ ಫುಕುವೊಕ ಹೇಳಿದಂತೆ ರೈತರಿಗೂ ಕೂಡ ಹಾಡಲು, ದುಡಿ ನುಡಿಸಲು ಬಿಡುವಿಲ್ಲದಂಥ ಒತ್ತಡದ ಸಮಾಜವನ್ನು ನಾವು ನಿರ್ಮಿಸಿಕೊಂಡಿದ್ದೇವೆ. ಸಂಪತ್ತು ಕಡಿಮೆ ಇದ್ದರೂ ತೃಪ್ತಿ, ನೆಮ್ಮದಿ, ಸಂತಸ, ಸಾರ್ಥಕಭಾವ ತುಂಬಿದ ಬದುಕು ನಮ್ಮದಾಗಬೇಕು. ಅಂಥ ಸಮಾಜವನ್ನು ಕಟ್ಟಲು ಸಾಧ್ಯವೆ? ಸಂತಸ ಸೂಚ್ಯಂಕವನ್ನು ಜಾರಿಗೆ ತರಬಹುದೆ ಎಂಬುದನ್ನು ಚರ್ಚಿಸಲು ಜಾಗತಿಕ ಸಮ್ಮೇಳನಗಳು ನಡೆದಿವೆ. ಈಗಿನ ‘ಸುಧಾರಿತ’ ಸಮಾಜವನ್ನು ಕೆಡವಿ ಹೊಸದನ್ನು ಕಟ್ಟುವುದು ಕನಸಿನ ಮಾತಾದೀತು. ‘ಇನ್ನಷ್ಟು ಎಂಜಿನಿಯರಿಂಗ್ ಕಾಲೇಜು ಬೇಕು, ಮತ್ತಷ್ಟು ಕಾರ್ಖಾನೆ ಬೇಕು, ಮೆಗ್ನೆಟಿಕ್ ರೈಲು ಬೇಕು’ ಎಂಬ ಹುಸಿಪ್ರಗತಿಯ ಹುಲಿಸವಾರಿಯಲ್ಲಿರುವ ಸಮಾಜದಲ್ಲಿ ಅದು ಕಷ್ಟಸಾಧ್ಯವಾದೀತು. ಆದರೆ ಅಭಿವೃದ್ಧಿಯ ಅಂಧಯುಗಕ್ಕೆ ಈಗಿನ್ನೂ ಕಾಲಿಡದ ಸಿದ್ದಾಪುರ ತಾಲೂಕಿನಂಥ ಸಮೃದ್ಧ ನೆಲೆಯಲ್ಲಿ ಅಂಥದೊಂದು ಪರಿಕಲ್ಪನೆ ಸಾಕಾರವಾಗಬಹುದಾಗಿದೆ.’ಲಾರಿಗಳು ಬಸ್ಗಳು ಒಟ್ಟೊಟ್ಟಿಗೆ ಹಳ್ಳಿಗಳತ್ತ ಬರುತ್ತವೆ; ಲಾರಿಗಳು ನಿಸರ್ಗವನ್ನು ದೋಚಿ ಸಿಟಿಗೆ ತರುತ್ತವೆ; ಬಸ್ಸುಗಳು ಹಳ್ಳಿಯವರನ್ನು ಪಟ್ಟಣಕ್ಕೆ ತಂದು ಅಲ್ಲಿ ಅವರನ್ನು ದೋಚುತ್ತವೆ’ ಎಂಬ ಮಾತು ಈ ತಾಲೂಕಿನ ಮಟ್ಟಿಗೆ ಅಸಂಗತ ಎನ್ನುವಂತೆ ಮಾಡಬೇಕಾಗಿದೆ.
ಸಿದ್ದಾಪುರ ತಾಲೂಕು ಹಿಂದುಳಿದಿದೆ ಎಂಬ ಸ್ವರ ಆಗಾಗ ಕೇಳಬರುತ್ತಿದೆ. ಭಾರೀ ಮೊತ್ತದ ಬಂಡವಾಳ ಹೂಡಿಕೆಯೇ ಪ್ರಗತಿಯ ದ್ಯೋತಕ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಇಡೀ ಅರ್ಥ ವ್ಯವಸ್ಥೆಯೇ ಅಂಥ ಭ್ರಮೆಯಲ್ಲಿ ಸಿಲುಕಿದ್ದರಿಂದಲೇ ಇಂದು ಜಗತ್ತೇ ಅಪಾಯದ ಸ್ಥಿತಿಗೆ ವಾಲುತ್ತಿದೆ. ನಮಗೆಲ್ಲ ಗೊತ್ತೇ ಇದೆ. ಔದ್ಯಮಿಕ ಅರ್ಥಶಾಸ್ತ್ರದ ಕರಾಳ ಮುಖಗಳು ಏನೆಂಬುದು. ಅದಕ್ಕೆ ಗಡಿ ಮಿತಿ ಎಂಬುದೇ ಇರುವುದಿಲ್ಲ. ಬಂಡವಾಳ ಹೂಡಿದ್ದ ಹಣ ಎಲ್ಲಿಗೆ ಹೋಗುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಇಲ್ಲೇ ಬರುತ್ತದೆಂಬ ಖಾತ್ರಿಯಂತೂ ಇಲ್ಲ. ಹಾಗೆ ನೋಡಿದರೆ ಕಾರವಾರ ಸುತ್ತಮುತ್ತ ಕಳೆದ 20 ವರ್ಷಗಳಲ್ಲಿ 50 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹರಿದು ಬಂದಿದೆ. ನಮಗೆ ಅಲ್ಲಿ ಕಾಣುತ್ತಿರುವುದಾದರೂ ಏನು? ನೆಲಮೂಲದ, ಜಲಮೂಲದ ಜನರ ಬದುಕು ಮೂರಾಬಟ್ಟೆಯಾಗಿದೆ. ಕರಾವಳಿ ಸಂಸ್ಕೃತಿ ಪರಂಪರೆಗಳು ಧ್ವಂಸಗೊಂಡಿವೆ. ಬಡವ-ಬಲ್ಲಿದರ ನಡುವಣ ಕಂದರ ಆಳವಾಗಿದೆ. ಎಲ್ಲಿ ನೋಡಿದರೂ ಏಕರೂಪ ಕೊಳ್ಳುಬಾಕ ಬದುಕು ವಿಜೃಂಭಿಸುತ್ತಿದೆ. ಸಮೃದ್ಧಿ ಎಲ್ಲಾದರೂ ಯಾರಿಗಾದರೂ ಕಾಣುತ್ತದೆಯೆ? ಈ ಸಂದರ್ಭದಲ್ಲಿ ಕ್ರೀ ರೆಡ್ ಇಂಡಿಯನ್ ಸಮುದಾಯದಲ್ಲಿ ಪ್ರಚಲಿತವಿರುವ ಒಂದು ಪುಟ್ಟ ಕವನ ನೆನಪಾಗುತ್ತಿದೆ:
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ,
ಕಟ್ಟಕಡೆಯ ಮೀನನ್ನು ಹಿಡಿದು ತಿಂದ ನಂತರ,
ಕಟ್ಟಕಡೆಯ ನದಿಗೆ ವಿಷ ಸುರಿದ ನಂತರ,
ಗೆಳೆಯಾ, ಆಗಷ್ಟೇ ನಿನಗೆ ಗೊತ್ತಾಗುತ್ತದೆ,
ನಾಣ್ಯವನ್ನು ನೋಟನ್ನು ತಿನ್ನಲು ಸಾಧ್ಯವಿಲ್ಲ ಅಂತ.
ವರವಾಗಬೇಕಿದ್ದ ವನಸಿರಿ ಶಾಪವಾಗಿದ್ದು
ಇಂದಿನ ಅಭಿವೃದ್ಧಿಯ ಮಾರ್ಗ ಹೇಗಿದೆಯೆಂದರೆ ನಮ್ಮ ಜಿಲ್ಲೆಗೆ ವರದಾನವಾಗಬೇಕಿದ್ದ ಎಲ್ಲವೂ ನಮಗೆ ಶಾಪವಾಗುತ್ತ ಹೋಗುತ್ತಿದೆ. ಸುಂದರ ಸಮುದ್ರ ತೀರ. ಅದು ಬಂದರವಾಗಿ ಶಾಪವಾಗುತ್ತಿದೆ. ತದಡಿ ಇದೆ. ಸೀಗಡಿ, ನೀಲಿ ಏಡಿ, ಸುಸ್ಥಿರ ಕೊಯ್ಲು ಮಾಡಬಹುದಿತ್ತು. ಅದೂ ಶಾಪ ಆಗ್ತಾ ಇದೆ. ಸುಂದರ ಕಾಳಿ ನದಿ ಇತ್ತು. ಅರಣ್ಯಗಳಿಂದ ಹರಿದು ಬರುವ ಸಮೃದ್ಧ ಪೋಷಕಾಂಶಗಳನ್ನು ಸಮುದ್ರಜೀವಿಗಳಿಗೆ ರವಾನಿಸುವ ಮಹತ್ವದ ಕೆಲಸವನ್ನು ಅದು ಮಾಡುತ್ತಿತ್ತು. ಈಗ ಅದೂ ಶಾಪವಾಗಿದೆ. ಸುಂದರ ನಾಗಝರಿ ಇತ್ತು; ನಾಶವಾಗಿದೆ. ಸುಂದರ ಶರಾವತಿ ಕೊಳ್ಳ ಇತ್ತು. ಶಾಪವಾಗಿದೆ. ಗೋಕರ್ಣವೂ ಶಾಪವಾಗ್ತಾ ಇದೆ. ಸುಂದರ ಯಾಣ ಇದೆ. ಸುಂದರ ಬನವಾಸಿ ಇದೆ. ಸುಂದರ ಸನ್ಸೆಟ್ ಪಾಯಿಂಟ್ ಇದೆ. ದಟ್ಟ ಕಾನನದಲ್ಲಿ ಅವಿತ ಸೋಂದಾ ಕೋಟೆ ಇದೆ. ಆದರೆ ಅವೂ ಪ್ರವಾಸೋದ್ಯಮ ಹೆಸರಿನಲ್ಲಿ ಶಾಪವಾಗುವ ಲಕ್ಷಣ ಕಾಣ್ತಾ ಇದೆ.
ನಮ್ಮ ತಾಲೂಕೇನೂ ಸುಭದ್ರ ತಾಣವಾಗಿ ಉಳಿದಿಲ್ಲ. ಇಲ್ಲಿನ ಹೇರಳ ಸಂಪತ್ತನ್ನು ಹೊರಗಿನವರು ಧ್ವಂಸ ಮಾಡಿದ್ದಾರೆ, ದೋಚಿದ್ದಾರೆ. ನದಿಕೊಳ್ಳಗಳ ದಡದಿಂದ ಮೂಟೆಗಟ್ಟಲೆ ದಾಲಚಿನ್ನಿ ಸೊಪ್ಪನ್ನು ಎತ್ತೊಯ್ಯುವವರನ್ನು ನಾನು ಚಿಕ್ಕವನಿದ್ದಾಗ ನೋಡಿದ್ದೇನೆ. ಮಡ್ಡಿಧೂಪದ ಮರಗಳ ಭೀಮಕಾಂಡಗಳನ್ನು ಅರ್ಧರ್ಧ ಕೊರೆದು, ಕೆತ್ತಿ,ಪರಿಮಳದ ಅಂಟನ್ನು ಸಂಗ್ರಹಿಸಿ ಒಯ್ಯುವವರನ್ನು ನಾನು ನೋಡಿದ್ದೇನೆ. ಅಂಥ ಮರಗಳು ಒಂದೊಂದಾಗಿ ನೆಲಕ್ಕುರುಳಿ ನಾಶವಾಗಿರುವುದನ್ನೂ ನೋಡಿದ್ದೇನೆ. ಔಷಧ ಕಂಪನಿಗಳಿಗೆಂದು ದಾರುದುರ್ಗಂಧ (ಹೇತಾರಿ) ವೃಕ್ಷಗಳನ್ನೊ, ಅಗರಬತ್ತಿಗೆಂದು ಗುಳಮಾವಿನ ಮರಗಳನ್ನೊ ಲಾರಿಗಟ್ಟಲೆ ಸಾಗಿಸಿ ಒಯ್ದವರ ಕತೆ ನಮಗೆಲ್ಲ ಗೊತ್ತೇ ಇದೆ. ವಾಟೆ, ಸೀಗೆ, ಉಪ್ಪಾಗೆ, ಮುರುಗಲ, ನೆಲ್ಲಿ, ಗೇರು (ಇವೆಲ್ಲ ‘ಧರ್ಮದ ಬೆಳೆ’ಗಳೆಂಬ ಪ್ರತೀತಿ ಈಗಲೂ ಇದೆ) ಟನ್ ಲೆಕ್ಕದಲ್ಲಿ ಲೂಟಿಯಾಗುತ್ತಿರುವುದನ್ನು ಕಂಡಿದ್ದೇನೆ.
ಉತ್ಕೃಷ್ಟ ಗುಣಮಟ್ಟದ ಜೀರಿಗೆ ಪರಿಮಳವನ್ನು ಬೀರುತ್ತಿದ್ದ ‘ಗಡಿಹೊಳೆ ಅಪ್ಪೆ’ ಮರದ ಕತೆಯನ್ನು ನಾನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಅದು ಮಿಡಿ ಬಿಟ್ಟಾಗ ಅಲ್ಲೊಂದು ಸಾಮೂಹಿಕ ಹಬ್ಬದ ವಾತಾವರಣ ಏರ್ಪಡುತ್ತಿತ್ತು; ಸಾಹಸಿಗಳ ಒಲಿಂಪಿಕ್ಸ್ ನಡೆಯುತ್ತಿತ್ತು; ಸಹೃದಿಯಗಳ ಸಂತೆಯೇ ನೆರೆಯುತ್ತಿತ್ತು. ಎಳೆ ಮಾವಿನ ಮಿಡಿಗಳ ಮೂಟೆ ಕಟ್ಟಿ ಹೊರಡುವ ಮುನ್ನ ಮರ ಏರಲಾರದ ಕುಟುಂಬಗಳಿಗೂ ಅಷ್ಟಿಷ್ಟು ಪಾಲು ನೀಡಿ ಮನೆಮನೆಗೆ ಮೆಡಲ್ಗಳ ರೂಪದಲ್ಲಿ ಘಮಘಮ ಅಪ್ಪೆಮಿಡಿಗಳನ್ನು ಸಾಗಿಸಿ ತರುತ್ತಿದ್ದರು. ಒಂದು ದಿನದ ಆ ಸಾಹಸದ ನೆನಪು ಎರಡೂ ಅರ್ಥಗಳಲ್ಲಿ ನಾಲಗೆಯ ಮೇಲೆ ವರ್ಷವಿಡೀ ನಲಿಯುತ್ತಿತ್ತು. ಅಂಥ ಅಮೋಘ ವೃಕ್ಷವನ್ನು ಯಾವನೋ ಗುತ್ತಿಗೆದಾರ ದೋಣಿ ಮಾಡಲೆಂದು ಕಡಿದು ಬೀಳಿಸಿ, ಕೊನೆಗೆ ಅದು ಟೊಳ್ಳೆಂದು ಗೊತ್ತಾಗಿ, ದಿಮ್ಮಿಗಳನ್ನು ಅಲ್ಲೇ ಬಿಸಾಕಿ ಹೊರಟು ಹೋದ ವ್ಯಥೆಕಥೆಯನ್ನು ನಾವು ಮರೆಯುವಂತಿಲ್ಲ. ಅನೇಕ ದಶಕಗಳ ಕಾಲ ಒಂದು ಸಮುದಾಯವನ್ನು ಬೆಸೆಯುವ ಸಜೀವ ಮೇಟಿಕಂಬವಾಗಿ, ಸಾಹಸ ದಂತಕತೆಗಳ ಆಗರವಾಗಿ, ವನಪರಂಪರೆಯ ದ್ಯೋತಕವಾಗಿ ನಿಂತಿದ್ದ ಆ ಹೆಮ್ಮರಕ್ಕೆ ಬಂದ ದುರ್ಗತಿಯನ್ನು ನೆನೆದರೆ ನನಗೆ ಈಗಲೂ ಕರುಳು ಕಿವುಚಿದಂತಾಗುತ್ತದೆ.
ಅನತಿ ಹಿಂದಿನ ಕಾಲದಲ್ಲಿ ಇಡೀ ತಾಲೂಕಿನ ಏಕೈಕ ಉದ್ಯಮವೆಂಬ ಹೆಗ್ಗಳಿಕೆಯಿಂದ ಕಂವಚೂರಿನಲ್ಲಿ ಪ್ಲೈವುಡ್ ಕಾರ್ಖಾನೆಯೊಂದು ಇತ್ತೆಂದು ದಾಖಲೆಗಳು ಹೇಳುತ್ತವೆ. ನೆಲಕಚ್ಚಿದ ಹೆಮ್ಮರಗಳನ್ನು ಸಾಗಿಸಿ ತಂದು ಸೀಳುತ್ತಿದ್ದ ಫ್ಯಾಕ್ಟರಿ ಈಗ ತಾನೇ ನೆಲಸಮವಾಗಿದೆ (ಅಲ್ಲಿ ಸಿದ್ಧವಾದ ಹಲಗೆಗಳಲ್ಲಿ ಕೆಲವಾದರೂ ಪುಸ್ತಕಗಳನ್ನಿಡುವ ಕಪಾಟುಗಳಾಗಿ ಪರಿವರ್ತನೆಗೊಂಡಿವೆಯೆಂದು ಆಶಿಸುತ್ತೇನೆ). ಮನಮನೆಯಲ್ಲಿ ನಾಟಾ ಡಿಪೋ ಆಗಿದ್ದ ಸ್ಥಳದಲ್ಲಿ ಈಗ ಸಸ್ಯರಾಜಿ ಬೆಳೆದು ನಿಂತ ಹಾಗೆ, ಇಲ್ಲಿಯೂ ಮತ್ತೆ ವನದೇವತೆ ಕಾಲೂರಿ ವಿಜೃಂಭಿಸಬೇಕು. ರಾಜ್ಯಮಟ್ಟದ ‘ಪಶ್ಚಿಮಘಟ್ಟದ ಸಂಶೋಧನಾ ಕೇಂದ್ರ’ವನ್ನು ಕಂವಚೂರಿನಲ್ಲೇ ಸ್ಥಾಪಿಸಬೇಕೆಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅದು ಶೀಘ್ರ ಕಾರ್ಯರೂಪಕ್ಕೆ ಬರಲೆಂದು ನಾವೆಲ್ಲ ಹಾರೈಸಬೇಕಾಗಿದೆ.
ಸ್ವಾಭಿಮಾನವನ್ನು ಹೆಚ್ಚಿಸಬಲ್ಲ ಸಾಹಿತ್ಯ
ಸಾಹಿತ್ಯ ನಮ್ಮ ಬದುಕಿನೊಂದಿಗೆ ಬೆಸೆದಿರಬೇಕು ಎಂದು ಹೇಳುವಾಗ ನಮ್ಮ ನೆಲದ ಹೆಮ್ಮರಗಳ ದುರಂತಗಳೆಲ್ಲ ಕಣ್ಣಿಗೆ ಕಟ್ಟುತ್ತವೆ. ಗಡಿಹೊಳೆ ಅಪ್ಪೆಮರದ ಅಪ್ರಿಯ ಅಂತ್ಯದ ಬಗ್ಗೆ, ಅದರ ನಿರರ್ಥಕ ನಾಟಾದ ಬಗ್ಗೆ ನಾಟಕ ಸಿದ್ಧವಾಗಬೇಕಿದೆ; ಅಂಥದ್ದೇ ವಿಶಿಷ್ಟ ಪರಿಮಳದ ಖ್ಯಾತಿಯ ‘ಅನಂತಭಟ್ಟನ ಅಪ್ಪೆ’ ಮರದ ಬೃಹತ್ ಕೊಂಬೆರೆಂಬೆಗಳಿಗೆ ನೂರಾರು ಕಸಿಕಟ್ಟಿ ಬೆಳೆಸಿದ ಸಾಹಸಿ ಗಣೇಶಜ್ಜನ ಬಗ್ಗೆ ಕತೆ, ಕವನ, ದಂತಕತೆಗಳನ್ನು ಸೃಷ್ಟಿಸಬೇಕಾಗಿದೆ. ಕತ್ಲೆಕಾನಿನಲ್ಲಿ ಮರುಹುಟ್ಟು ಪಡೆದ ಕಾನುಗೇರಿನ ಬಗ್ಗೆ, ಪರಿಶುದ್ಧ ಯುವನದಿ ಎನಿಸಿದ ಅಘನಾಶಿನಿಯ ಬಗ್ಗೆ, ಸುಗಂಧದ ಧೂಪದ ಮರಗಳ ಬಗ್ಗೆ, ದುರ್ಗಂಧದ ಔಷಧೀಯ ವೃಕ್ಷಗಳ ಬಗ್ಗೆ, ಮರವೇರುವ ಸಾಹಸಿಗಳ ಬಗ್ಗೆ ರಂಜನೀಯ ಸಾಹಿತ್ಯ ಸೃಷ್ಟಿಯಾಗಬೇಕು. ವರ್ತಮಾನ ಜಗತ್ತಿನೊಂದಿಗೆ ನಮ್ಮ ಬದುಕನ್ನು ನಮ್ಮ ಪರಿಸರವನ್ನು ಹೋಲಿಸಿ ನೋಡುವ, ನಮ್ಮ ಬಲವನ್ನೇ ನಾವು ಅರಿಯುವ ಜ್ಞಾನಸಾಹಿತ್ಯ ನಮಗೆ ಬೇಕು.
ಅದಕ್ಕೆ ಸಿದ್ಧ ಮಾದರಿಗಳು ನಮ್ಮಲ್ಲಿಲ್ಲ. ಗ್ರಂಥಾಲಯಗಳಲ್ಲೂ ಇಲ್ಲ; ಪಠ್ಯಪುಸ್ತಕಗಳಲ್ಲೂ ಇಲ್ಲ. ಇಂದಿನ ಶಿಕ್ಷಣ ನಮ್ಮನ್ನೆಲ್ಲ ರಫ್ತುಸಾಮಗ್ರಿಗಳನ್ನಾಗಿ ಮಾಡುವಂತಿದೆ ವಿನಾ, ಬದುಕಿನ ನೆಲೆಗಟ್ಟನ್ನು ಸ್ಥಿತನೆಲೆಯಲ್ಲೇ ಭದ್ರಗೊಳಿಸಲು ನೆರವಾಗುತ್ತಿಲ್ಲ. ಇಂದಿನ ಪಠ್ಯಪುಸ್ತಕಗಳು ನಮ್ಮ ಸುತ್ತಮುತ್ತಲಿನ ಸಸ್ಯಸಂಪತ್ತು, ಸೂರಕ್ಕಿ-ಮಣ್ಣುಮುಕ್ಕ, ಬರ್ಕ-ಗುರ್ಕ -ಸಿಂಗಳೀಕಗಳ ಬಗ್ಗೆ ನಮ್ಮನ್ನು ಅಂಧರನ್ನಾಗಿ, ಕಿವುಡರನ್ನಾಗಿ, ರುಚಿಹೀನರನ್ನಾಗಿ, ಸಂವೇದನಶೂನ್ಯರನ್ನಾಗಿ ಮಾಡಿ ಹೊರಕ್ಕೆ ಬಿಸಾಕುವ ದೂಡುದಿಮ್ಮಗಳಾಗಿವೆ. ವಾಸ್ತವ ಮತ್ತು ಪಾಠ ಪ್ರವಚನದ ನಡುವಣ ಅಂತರವನ್ನು ಕಮ್ಮಿ ಮಾಡಬಲ್ಲ ಸಾಹಿತ್ಯ ನಮಗಿಂದು ಬೇಕಾಗಿದೆ. ಬೆಟ್ಟದ ಜೀವದ ಗೋಪಾಲಯ್ಯನ, ಕಾನೂರು ಪರಿಸರದ ಹೂವಯ್ಯನ, ಮೂಡಿಗೆರೆಯ ಕರ್ವಾಲೋನ ಕಲ್ಪನಾಕತೆಗಳನ್ನು ಮೀರಬಲ್ಲ, ಮಲೆನಾಡಿನ ಮನುಷ್ಯನ ಬದುಕಿನ ಮಾದರಿಗಳನ್ನು ಮುರಿದು ಕಟ್ಟಬಲ್ಲ, ಇಲ್ಲಿನ ಉಪಸಂಸ್ಕೃತಿಗಳನ್ನು ಪೃಥಕ್ಕರಿಸಿ ಮರುರೂಪಿಸಬಲ್ಲ ಸಾಹಿತ್ಯ ಇಲ್ಲಿ ಒಡಮೂಡಬೇಕಿದೆ. ಶಿಕ್ಷಣವೆಂದರೆ ವಿಶ್ವಬ್ಯಾಂಕ್ ನೀಡುವ ಸಾಲದ ಹಣದಿಂದ ಶಾಲೆಗಳಿಗೆ ಹೊಸಹೊಸ ಖೋಲಿಗಳನ್ನು ಜೋಡಿಸುತ್ತ ಹೋಗುವುದಲ್ಲ; ಸಮುದಾಯದ ಅರಿವಿನ ಮಟ್ಟವನ್ನು ಹೆಚ್ಚಿಸುವ, ಇದ್ದುದನ್ನು ಭದ್ರ ಮಾಡುವ, ಕೊರತೆಯಿದ್ದ ಜ್ಞಾನವನ್ನು ಭರ್ತಿ ಮಾಡುವ ಗ್ರಂಥಾಲಯ ಅಭಿಯಾನವನ್ನು ಆರಂಭಿಸಬೇಕಿದೆ.
ಜ್ಞಾನಾರ್ಜನೆಗೆ ಅವಕಾಶ ನೀಡಿ, ಅಕ್ಷರಗಳಿಗೆ ಶೋಭೆ ತರಬಲ್ಲ ಹೊಸ ಸಾಹಿತ್ಯ ಸೃಷ್ಟಿಗೆ ಬೇಕಾದ ರಂಗಸಜ್ಜಿಕೆಯ ಬಗ್ಗೆ ಮೊದಲ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್.ಪಿ.ಹೆಗಡೆಯವರು ಸಾಕಷ್ಟು ಮಾರ್ಗಸೂಚಿಗಳನ್ನು ಕಳೆದ ವರ್ಷವೇ ನೀಡಿದ್ದಾರೆ: ಈ ತಾಲೂಕಿನ ಪ್ರತಿ ಮನೆಯಲ್ಲೂ ಪುಸ್ತಕಗಳ ಕಪಾಟು ಇರಬೇಕು; ಪ್ರತಿ ಊರಿನಲ್ಲೂ ಗ್ರಂಥಾಲಯ ಇರಬೇಕು; ಸಾಹಿತ್ಯ ಪರಿಷತ್ತು ಇಲ್ಲಿನ ಪ್ರತಿಯೊಂದು ಪ್ರಾಥಮಿಕ ಶಾಲೆ, ಹೈಸ್ಕೂಲುಗಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಬಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು; ಕತೆಕಟ್ಟುವ, ಕತೆಹೇಳುವ ಸಂಸ್ಕೃತಿಯ ಮರುಸ್ಥಾಪನೆಯಾಗಬೇಕು; ಪ್ರಮುಖ ಸಾಹಿತ್ಯ ಕೃತಿಗಳು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಪುಸ್ತಕ ಪ್ರದರ್ಶನ/ ಮಾರಾಟ ಮಾಡಬಲ್ಲ ಸಂಚಾರಿ ವಾಹನಗಳು ಗ್ರಾಮಗಳಲ್ಲಿ ಓಡಾಡಬೇಕು. ನಮ್ಮ ತಾಲೂಕಿನ ಪ್ರತಿಭಾವಂತ ಸಾಹಿತಿಗಳ ಪರಿಚಯ, ಅವರ ಸಮ್ಮುಖದಲ್ಲಿ ಅವರ ಕೃತಿಗಳ ಚರ್ಚೆ ನಡೆಯುವಂತಾಗಬೇಕು… ಇಂಥ ಮಹತ್ವದ ಸಲಹೆಗಳೆಲ್ಲ ಕಾರ್ಯಗತವಾಗಿದೆಯೆ, ಕಡೇಪಕ್ಷ ಈ ಬಗ್ಗೆ ಚಿಂತನ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಾದರೂ ಇಟ್ಟಿದ್ದೇವೆಯೆ ಎಂಬುದರ ಪುನರವಲೋಕನವಾಗಬೇಕಿದೆ.
ಅದಕ್ಕೆ ಪೂರಕವಾದ ಒಂದೆರಡು ಸಂಗತಿಗಳನ್ನು ನಾನು ಪ್ರಸ್ತಾಪಿಸಬಯಸುತ್ತೇನೆ. ಸಾಹಿತ್ಯ ರಚನೆಗೆ ಮುಂದಾಗುವವರಿಗೆ ಪ್ರಕಾಶನ ಸೌಲಭ್ಯ ಮೊದಲು ಸಿಗಬೇಕು. ರಾಜ್ಯಮಟ್ಟದಲ್ಲಿ ಪುಸ್ತಕ ಪ್ರಾಧಿಕಾರ ಇರುವಂತೆ ತಾಲೂಕು ಮಟ್ಟದಲ್ಲಿ ಸ್ವಾಯತ್ತ ಸಂಸ್ಥೆಯೊಂದನ್ನು ಕಟ್ಟಲು ಸಾಧ್ಯವೆ ಎಂಬುದನ್ನು ನಾವು ಪರಿಶೀಲಿಸಬೇಕು. ಜನಪರ ಸಾಹಿತ್ಯ ರಚನೆಗೆ ತೊಡಗಿರೆಂದು ಉತ್ಸಾಹಿಗಳನ್ನು ಪ್ರೇರೇಪಿಸುವ, ಅವರ ಕೃತಿಗಳ ಪ್ರಕಾಶನ ಮತ್ತು ಮಾರಾಟ ಮಾಡುವ ವ್ಯವಸ್ಥೆಯೊಂದನ್ನು ಹುಟ್ಟುಹಾಕಬೇಕಿದೆ.
ನಮ್ಮ ತಾಲೂಕಿನ ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸಬಲ್ಲ ಅಂಕಿ ಸಂಖ್ಯೆಗಳು ಎಲ್ಲೆಲ್ಲೋ ಕಡತಗಳಲ್ಲಿ ಕೂತಿವೆ. ಅಂಥ ಅಂಕಿಸಂಖ್ಯೆಗಳನ್ನು ಹೊರಕ್ಕೆ ತೆಗೆದು ಹೊಸ ಬೆಳಕಿನಲ್ಲಿ ನೋಡುವವರು ಬೇಕಿದ್ದಾರೆ. ಇಂದು ಯಾವುದೇ ಸಮುದಾಯದ ಅಭ್ಯುದಯದ ನಿಜವಾದ ಚಿತ್ರಣವನ್ನು ನೀಡಬಲ್ಲ ‘ಅಭಿವೃದ್ಧಿ ಸೂಚ್ಯಂಕ’, ‘ಸಂತಸ ಸೂಚ್ಯಂಕ’, ‘ಬಡತನದ ಸೂಚ್ಯಂಕ’ ‘ಹಸಿವೆಯ ಸೂಚ್ಯಂಕ’, ಬಡವ-ಬಲ್ಲಿದರ ಅಂತರವನ್ನು ಅಳೆಯಬಲ್ಲ ‘ಜಿನಿ ಇಂಡೆಕ್ಸ್’ ಎಂಬ ಅಸಮಾನತಾ ಸೂಚ್ಯಂಕಗಳನ್ನು ಜನಗಣತಿಯ ಅಂಕಿಸಂಖ್ಯೆಗಳ ಆಧಾರದ ಮೇಲೆ ನಿರ್ಧರಿಸಬಹುದಾಗಿದೆ.ಕಾಲೇಜುಗಳ ಸಂಖ್ಯಾಶಾಸ್ತ್ರ ಬೋಧಕರ ನೆರವಿನಿಂದ ಇವುಗಳನ್ನು ಲೆಕ್ಕಹಾಕಿ, ದೇಶದ ಇತರ ಪ್ರದೇಶಗಳಿಗೆ ಹೋಲಿಸಿ ನೋಡಿದರೆ ನಾವೆಲ್ಲಿದ್ದೇವೆಂದು ನಮಗೇ ಗೊತ್ತಾಗುತ್ತದೆ. ಯಾರಿಗೆ ಗೊತ್ತು, ನಾವು ನಾರ್ವೆ, ಸ್ವೀಡನ್, ಜಪಾನ್, ಸ್ವಿತ್ಸರ್ಲೆಂಡ್ ನ ಸಮುದಾಯದಷ್ಟೇ ಪ್ರಗತಿಪಥದಲ್ಲಿದ್ದೇವೆಂದು ತೋರಿಸಲೂಬಹುದೇನೊ. ನಮ್ಮ ತಾಲೂಕಿನ ಸ್ಪಷ್ಟ ಚಿತ್ರಣ ನಮಗಿಲ್ಲದೆ ರಚಿಸುವ ಯಾವ ಸಾಹಿತ್ಯಕ್ಕೂ ಸಾರ್ಥಕತೆ ಸಿಗಲಾರದು.
ಹೆಣ್ಣು ಭ್ರೂಣಹತ್ಯೆಯ ಅನಿಷ್ಟ ಚಿತ್ರಣ
ತಾಲೂಕಿನ ಒಂದು ದಾರುಣ ಮಾಹಿತಿ ನಮ್ಮನ್ನೆಲ್ಲ ಧೃತಿಗೆಡಿಸಬೇಕು. ಹಿಂದಿನ ಜನಗಣತಿಯ ಪ್ರಕಾರ ಸಿದ್ದಾಪುರ ತಾಲೂಕು ಲಿಂಗಾನುಪಾತದ ದೃಷ್ಟಿಯಿಂದ ಇಡೀ ರಾಜ್ಯದಲ್ಲೇ ಅತ್ಯಂತ ಕೆಳಮಟ್ಟದಲ್ಲಿ ಅಂದರೆ ತೀರ ಶೋಚನೀಯ ಸ್ಥಿತಿಯಲ್ಲಿತ್ತು. ಗಂಡು-ಹೆಣ್ಣು ಶಿಶುಗಳ ಲಿಂಗಾನುಪಾತ 1000: 763ರಷ್ಟಿತ್ತು. ಅದರ ಅರ್ಥ ಏನೆಂದರೆ, ಸಾವಿರ ಗಂಡು ಮಕ್ಕಳು ಹುಟ್ಟಿದ ಅವಧಿಯಲ್ಲಿ ಕೇವಲ 763 ಹೆಣ್ಣು ಮಕ್ಕಳು ಜನಿಸಿರುವುದು ದಾಖಲಾಗಿತ್ತು. ಇದು ಸಹಜವಂತೂ ಆಗಿರಲು ಸಾಧ್ಯವಿಲ್ಲ. ಲಿಂಗಪತ್ತೆ ಮಾಡಿಸಿ, ಹೆಣ್ಣುಶಿಶುಗಳ ಗರ್ಭಪಾತ ಮಾಡಿಸುವ ವಾಂಛೆಯಿಂದಾಗಿಯೇ ಈ ಚಿತ್ರಣ ಮೂಡಿದೆ. ಅಂಥ ಅತಿ ಅಮಾನುಷ ಕೃತ್ಯ ನಡೆಯಬಾರದಿತ್ತು. ಎರಡು ದಶಕಗಳ ಹಿಂದಿನ ಅಂಥ ಕೃತ್ಯಗಳ ಫಲವನ್ನು ನಾವಿಂದು ನೋಡುತ್ತಿದ್ದೇವೆ. ಸಂಗಾತಿಯೇ ಇಲ್ಲದ ಎಷ್ಟೊಂದು ಯುವಕರು ಒಂಟಿ ಬಾಳು ಈಗಲಾದರೂ ನಮ್ಮ ಕಣ್ತೆರೆಸಿದೆಯೆ? 2011ರ ಜನಗಣತಿಯಲ್ಲಾದರೂ ಆಶಾದಾಯಕ ಚಿತ್ರಣ ಸಿಗುತ್ತದೊ ನೋಡಬೇಕಾಗಿದೆ. ಭ್ರೂಣಲಿಂಗ ಪತ್ತೆಯ ಹೇಯ ಕೆಲಸಕ್ಕೆ ಭಾರತ ಸರಕಾರ ನಿಷೇಧ ಮಾಡಿದೆ. ಅದು ಇಲ್ಲಿ ಜಾರಿಯಲ್ಲಿದೆಯೆ ಎಂದು ನೋಡಬಲ್ಲವರು ಬೇಕಾಗಿದ್ದಾರೆ. ಹೆಣ್ಣುಶಿಶುಹತ್ಯೆಯ ಮನೋಭಾವವನ್ನು ಬದಲಿಸುವ, ನಮ್ಮ ಜನರಲ್ಲಿ ಮನೆಮಾಡಿರುವ ಅಜ್ಞಾನವನ್ನು ಹಾಗೂ ಕೆಲ ಪ್ರಸೂತಿ ವೈದ್ಯರಲ್ಲಿ ಮನೆಮಾಡಿರಬಹುದಾದ ಆಸೆಬುರುಕ ಪ್ರವೃತ್ತಿಯನ್ನು ಹೋಗಲಾಡಿಸಬಲ್ಲ ಸಾಹಿತ್ಯ ನಮಗೆ ತುತರ್ಾಗಿ ಅಗತ್ಯವಿದೆ. ಸಾಮಾಜಿಕ ಬದಲಾವಣೆಗೆ ದಾರಿ ಮಾಡಿಕೊಡಬಲ್ಲ ಹಾಡು, ನೃತ್ಯ, ಜನಪದ ಕಲೆ, ಜನಪದ ಕತೆ, ಬೀದಿ ನಾಟಕಗಳ ಸಾಹಿತ್ಯ ಸೃಷ್ಟಿಯಾಗಬೇಕಿದೆ.ಮಹಿಳೆಯರು, ಹಿಂದುಳಿದವರು ಕೂಡ ಇಂಥ ಸೃಜನಶೀಲ ಕೆಲಸಗಳಲ್ಲಿ ಒಳಗೊಳ್ಳುವಂತೆ ಪ್ರೋತ್ಸಾಹಿಸಬೇಕಿದೆ.
ನಮ್ಮ ಬದುಕನ್ನು ರೂಪಿಸುವ, ಬದಲಿಸುವ ಅದೆಷ್ಟೊ ಮಾಹಿತಿಗಳು ತಾಲೂಕು ಕಚೇರಿಗಳ, ಪಂಚಾಯತ್ ಕಚೇರಿಗಳ ಕಡತಗಳಿಂದ ಹೊರಬರಬೇಕಾಗಿದೆ. ವಿಶ್ವಬ್ಯಾಂಕ್, ಎಡಿಬಿ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಯಾವ ಯಾವ ಬಾಬ್ತಿಗೆ ಎಷ್ಟೆಷ್ಟು ಅನುದಾನ, ಧನಸಹಾಯ ಬರುತ್ತಿದೆ, ಅದರ ವಿನಿಯೋಗ ಹೇಗಾಗುತ್ತಿದೆ ಎಂಬ ಮಾಹಿತಿ ಜನರಿಗೆ ಆಗಾಗ ತಲುಪುತ್ತಿರಬೇಕು. ‘ತೋಟಗಾರಿಕಾ ಮಿಶನ್’, ‘ಹಸಿರು ಭಾರತ ಮಿಶನ್’ ‘ಸೋಲಾರ್ ಮಿಶನ್’ ‘ಆರೋಗ್ಯ ಮಿಶನ್’ ಮುಂತಾದ ಚಾನೆಲ್ಗಳ ಮೂಲಕ ಸಾಕಷ್ಟು ಹಣ ಹರಿದು ಬರುತ್ತಿದೆ. ಅವುಗಳ ಮೂಲ ಉದ್ದೇಶವೇ ಜನರನ್ನು ಒಳಗೊಂಡಂತೆ ಅಭ್ಯುದಯ ಸಾಧಿಸುವುದಾಗಿದೆ. ಉದಾಹರಣೆಗೆ ‘ಹಸಿರು ಭಾರತ ಮಿಶನ್’ನಲ್ಲಿ ವನ ನಿರ್ಮಾಣ ಕೆಲಸದಲ್ಲಿ ಜನರನ್ನು ಹೇಗೆ ತೊಡಗಿಸಬೇಕು, ಅವರಿಗೆ ಏನೇನು ಆಥರ್ಿಕ ಅನುಕೂಲತೆಗಳು ಸಿಗಲಿವೆ ಎಂಬುದರ ವಿವರಗಳಿವೆ. ಎಲ್ಲ ಮಿಶನ್ಗಳಲ್ಲೂ ಜನರನ್ನು ತೊಡಗಿಸಿಕೊಳ್ಳುವ ವಿಧಿವಿಧಾನಗಳನ್ನು ಹೇಳಲಾಗಿದೆ. ಅವು ಯಾವವೂ ಜನರನ್ನು ಮುಟ್ಟುವ ಲವಲವಿಕೆಯ ಸಾಹಿತ್ಯಗಳಾಗಿ ರೂಪುಗೊಂಡಿಲ್ಲ. ನಮ್ಮ ಅರಣ್ಯಗಳ ಸಹಜ ಹುಟ್ಟುವಳಿ ಹೇಗೆ ಹೇಗೆ ಎತ್ತೆತ್ತ ಹೋಗುತ್ತಿದೆ, ಯಾರ ಲಾಭಕ್ಕಾಗಿ ಅವುಗಳ ಬಳಕೆಯಾಗುತ್ತಿದೆ ಎಂಬುದರ ಚಿತ್ರಣವೂ ನಮಗೆ ಲಭ್ಯವಿಲ್ಲ.
ಸಾಹಿತ್ಯ ಸೃಷ್ಟಿಯಲ್ಲಿ ಮಾಧ್ಯಮಗಳ ಪಾತ್ರ
ನಗರಮುಖಿ ಮಾಧ್ಯಮಗಳು ತಮ್ಮ ಧೋರಣೆಯನ್ನು ಹಾಗೂ ಕಾರ್ಯತಂತ್ರವನ್ನು ತುಸು ಬದಲಿಸಿಕೊಂಡು ಜನಮುಖಿ, ಗ್ರಾಮಮುಖಿಗಳಾದರೆ ಇಂಥ ಸಾಹಿತ್ಯ ರಚನೆಗೆ ಬೇಕಾದ ಮೂಲಮಾಹಿತಿಗಳನ್ನು ಕಡತಗಳಿಂದ ಎತ್ತಿಕೊಡಲು ಸಾಧ್ಯವಿದೆ. ಸರಕಾರಿ ಅಧಿಕಾರಿಗಳಲ್ಲಿ ಸಾಹಿತ್ಯ ಪ್ರೇಮಿಗಳ ಅನುಪಾತ ಸಾಕಷ್ಟು ದೊಡ್ಡದಿದೆಯೆಂದೂ ಈ ಸಮ್ಮೇಳನವನ್ನು ಯಶಸ್ವಿಗೊಳಿಸಲೆಂದು ಅವರು ಸಾಕಷ್ಟು ದುಡಿದಿದ್ದಾರೆಂದೂ ಕೇಳಿದ್ದೇನೆ. ಅಂಥ ಸಹೃದಯೀ ಅಧಿಕಾರಿಗಳ ನೆರವಿನಿಂದ ಸಾಹಿತ್ಯದ ಹೊಸಬಗೆಯ ಕೃಷಿ ಸುಲಭವಾಗಬಹುದು. ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಜನಸಾಮಾನ್ಯರು ಕೂಡ ಇಂಥ ಮಾಹಿತಿಗಳನ್ನು ಹೆಕ್ಕಿ ಜನಶಿಕ್ಷಣ ಕಾರ್ಯದಲ್ಲಿ ನೆರವಾಗಬಹುದು.
ಇದು ವಿಜ್ಞಾನ ಯುಗ, ಮಾಹಿತಿ ಕ್ರಾಂತಿಯ ಯುಗ ಎಂದೆಲ್ಲ ನಾವು ಬಣ್ಣಿಸುತ್ತೇವೆ. ಈ ದಿನವನ್ನು, ಅಂದರೆ ಫೆಬ್ರುವರಿ 28ನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಪಠ್ಯಪುಸ್ತಕಗಳು ಹೇಗೆ ಜನರನ್ನು ನಗರಗಳಿಗೆ ಅಟ್ಟುತ್ತಿವೆಯೊ ಇಂದಿನ ವಿಜ್ಞಾನ ಪರಿಕರಗಳೂ ಅದೇ ಕೆಲಸವನ್ನು ಮಾಡುತ್ತಿವೆ. ಅದನ್ನು ಜನಮುಖಿಯಾಗಿ ಪಲ್ಲಟಗೊಳಿಸಬೇಕಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯಾಗುವಂತೆ, ನಮ್ಮ ತಾಲೂಕಿನ ಧಾರಣ ಸಾಮಥ್ರ್ಯ ಕುಂದದಂತೆ, ಕೃಷಿ ಕಸುಬುಗಳಲ್ಲಿ ಮಾನವ ಶ್ರಮದ ಬೇಡಿಕೆ ತಗ್ಗುವಂತೆ, ನೀರು, ಶಕ್ತಿ ಮತ್ತು ಒಳಸುರಿಗಳ ವಿಷಯದಲ್ಲಿ ನಮ್ಮ ಶ್ರಮಿಕರು ಆದಷ್ಟೂ ಸ್ವಾವಲಂಬಿಗಳಾಗುವಂತೆ ಮಾಡಬಲ್ಲ ವಿಜ್ಞಾನ ತಂತ್ರಜ್ಞಾನ ನಮಗಿಂದು ಬೇಕಾಗಿದೆ. ಅದಕ್ಕೆ ಬೇಕಿದ್ದ ಪರಿಕರಗಳು, ಮಾಹಿತಿಗಳು ಕನ್ನಡಲ್ಲಿ ಲಭಿಸಬೇಕಾಗಿದೆ.
ಕನ್ನಡ ಭಾಷೆಗೆ ಎದುರಾಗಿರುವ ಆತಂಕಗಳು, ಶಿಕ್ಷಣ ಮಾಧ್ಯಮದ ವಿವಾದಗಳು, ಕಾವಲು ಸಮಿತಿಯ ಹೊಣೆಗಾರಿಕೆಗಳಂಥ ಉದ್ದಾಮ ವಿಚಾರಗಳನ್ನು ನಾನಿಲ್ಲಿ ಪಟ್ಟಿ ಮಾಡಲು ಹೋಗುವುದಿಲ್ಲ. ‘ಜಾಗತಿಕ ಮಟ್ಟದ ಸ್ಮೃತಿ, ಬೇರುಮಟ್ಟದಲ್ಲಿ ಕೃತಿ’ (ಥಿಂಕ್ ಗ್ಲೋಬಲಿ, ಆಕ್ಟ್ ಲೋಕಲಿ) ಎಂಬ ಮಾತು ನಮ್ಮಲ್ಲಿ ಸಾಕಾರವಾಗಬೇಕಿದ್ದರೆ ಹೊರಗಿನ ಜ್ಞಾನವನ್ನು ಗ್ರಹಿಸಬೇಕು. ಅದಕ್ಕೆ ಇಂಗ್ಲಿಷ್ ಭಾಷೆ ಬೇಕೇ ಬೇಕು. ಹಾಗೆಂದು ಎಳೆ ಮಕ್ಕಳನ್ನು ಇಂಗ್ಲಿಷ್ ಶಿಕ್ಷಣಕ್ಕೆಂದು ನಗರಗಳಿಗೆ ಅಟ್ಟಿದರೆ, ಅಲ್ಲಿ ನೆಲ್ಲಿಕಾಯಿಗೆ ಗೂಸ್ಬೆರಿ ಎಂದೂ, ಬದನೆಕಾಯಿಗೆ ಎಗ್ಪ್ಲಾಂಟ್ ಎಂದೂ ಕಲಿತು ಬಂದರೆ ನಮ್ಮ ನಾಯ್ವಾಟೆ, ಕಾಡುಜೀರಿಗೆ, ಹೆದ್ದುಂಬೆ, ವಿಷಮುಂಗ್ರಿಯಂಥ ಅನನ್ಯ ಸಸ್ಯಗಳು ಅಂಗಳದಲ್ಲೇ ಇದ್ದರೂ ಕಾಣದಾಗುತ್ತವೆ, ಕಣ್ಮರೆಯಾಗುತ್ತವೆ. ಸಿದ್ದಾಪುರ ತಾಲೂಕಿನ ಮಕ್ಕಳಿಗೆ ಅಂಥ ಅಂಧತ್ವವನ್ನುಂಟುಮಾಡದ ಭಾಷಾ ಮಾಧ್ಯಮ ನಮ್ಮದಾಗಬೇಕು. ಸ್ಥಳೀಯ ಭಾಷೆ ದುರ್ಬಲವಾದರೆ ನಿಸರ್ಗ ಸಂಪತ್ತೂ ದುರ್ಲಭವಾಗುತ್ತ, ಜೀವಿವೈವಿಧ್ಯವೂ ದುರ್ಬಲವಾಗುತ್ತ ಹೋಗುತ್ತದೆ. ಹಾಗಾಗಬಾರದು.ಕನ್ನಡ ಎಂದರೆ ಶುದ್ಧ ಕನ್ನಡವೊಂದೇ ಅಲ್ಲ, ದೇಸೀ ಕನ್ನಡ- ಅದು ದೀವರ ಕನ್ನಡವಾಗಿರಲಿ, ಹಸಲರ ಕನ್ನಡವಾಗಿರಲಿ ಅಥವಾ ಕರೆವಕ್ಕಲಿಗರ ಕನ್ನಡವಾಗಿರಲಿ ಅದನ್ನು ನಾವು ಗೌರವಿಸಬೇಕು, ಅದರ ಜೀವಂತಿಕೆ ನಾಶವಾಗದಂತೆ ಅಂದರೆ ಅದು ಸದಾ ಬಳಕೆಯಲ್ಲಿರುವಂತೆ ನೋಡಿಕೊಳ್ಳಬೇಕು. ಪ್ರಕೃತಿಯ ಜೊತೆ ನಿರಂತರ ಸಂಭಾಷಣೆಯಲ್ಲಿರುವ ಈ ನೆಲಮೂಲದ ಜನಾಂಗಗಳಿಗೆ ಅವರವರವೇ ಪದಕೋಶಗಳಿವೆ. ವಿಜ್ಞಾನಲೋಕಕ್ಕಿನ್ನೂ ಕಂಡಿರದ ಪ್ರಾಣಿಪಕ್ಷಿ, ಕೀಟಪತಂಗಗಳನ್ನು ಅವರು ನೋಡುತ್ತಿರುತ್ತಾರೆ. ವೈವಿಧ್ಯಮಯ ಅಣಬೆ, ಪಾಚಿ, ಗಿಡಬಳ್ಳಿ, ಗಡ್ಡೆಗೆಣಸು, ಹುಲ್ಲುಕಡ್ಡಿ, ಆರ್ಕಿಡ್, ಏಡಿ, ಕಪ್ಪೆ, ಜರಿಜೀವಿ, ಜಲಚರಗಳನ್ನು ಗುರುತಿಸುತ್ತಾರೆ. ತಮ್ಮದೇ ನಿಘಂಟಿನ ಮೂಲಕ ವಿವರಿಸುತ್ತಾರೆ. ಅವರ ನಾಲಗೆಯಲ್ಲಿರುವ ನಿಘಂಟಿನಲ್ಲಿ ಜೀವಿವೈವಿಧ್ಯ ರಕ್ಷಣೆಯಾಗಿದೆ.
ಆ ನಿಘಂಟು ಕಣ್ಮರೆಯಾಗುವ ಹಂತದಲ್ಲಿದೆ. ಸಾಕ್ಷರತೆಯ ಬಹುದೊಡ್ಡ ಆತಂಕ ಇದು. ಮಕ್ಕಳು ಶಿಕ್ಷಣದಲ್ಲಿ ಮುಂದುವರೆಯುತ್ತ ಹೋದಂತೆ, ನೆಲದ ಸಂಬಂಧ ಸಡಿಲವಾಗುತ್ತ, ಭಾಷಾ ನೆಲೆಗಟ್ಟು ಶಿಥಿಲವಾಗುತ್ತ ಹೋಗುತ್ತದೆ. ಪ್ರಕೃತಿಯೊಂದಿಗಿನ ಕಳ್ಳುಬಳ್ಳಿ ಸಂಬಂಧವೂ ಸಡಿಲವಾಗುತ್ತದೆ. ಅಂಥನೆಲಮೂಲದ ಭಾಷಾಜ್ಞಾನ ಮರೆತು ಹೋಗದಂತೆ ಬಿಳಿಗಿರಿ ರಂಗನ ಬೆಟ್ಟದ ಸೋಲಿಗರ ಮಕ್ಕಳಿಗಾಗಿ ಪ್ರತ್ಯೇಕ ಆಟಪಾಠದ ಪಠ್ಯವೊಂದನ್ನು ರಚಿಸಲಾಗಿದೆ. ಆ ಪಠ್ಯವನ್ನು ರೂಪಿಸುವಲ್ಲಿ, ಅದನ್ನು ಅಲ್ಲಿನ ವಿವೇಕಾನಂದ ಗಿರಿಜನ ಶಿಕ್ಷಣ ಸಂಸ್ಥೆಯ ಮಕ್ಕಳ ಮೇಲೆ ಅನ್ವಯಿಸಿ ನೋಡುವಲ್ಲಿ ನಾನೂ ಪಾಲ್ಗೊಂಡಿದ್ದೆ. ಆ ಪ್ರಾಂತದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಕಡ್ಡಾಯವಾಗಿ ಬಳಸುವ ವ್ಯವಸ್ಥೆಯೂ ಆಗಿದೆ. ನಮ್ಮ ತಾಲ್ಲೂಕಿನ/ಜಿಲ್ಲೆಯ ಮಕ್ಕಳಿಗೂ ಅಂಥದ್ದೊಂದು ಪಠ್ಯ ಸಿದ್ಧವಾಗಬೇಕು. ಮಕ್ಕಳು ತಮ್ಮ ಆಡುಭಾಷೆಯಲ್ಲೇ ಕಾಡಿನ ನುಡಿಗಟ್ಟಿನಲ್ಲೇ ಹಾಡು, ಹಸೆ, ಕತೆ, ಒಗಟು, ಗಾದೆ ಮಾತು, ಬೋಧೆಮಾತುಗಳನ್ನು ರಚಿಸುವಂತೆ ಪ್ರೇರಣೆ ನೀಡಬೇಕು. ಕಾಡಿನಲ್ಲಿರುವ ಉರಿಕೀಟಗಳು, ತುರಿಕೆ ಸಸ್ಯಗಳು, ಔಷಧ ಸಸ್ಯಗಳು, ಸುಗಂಧ ಮೂಲಿಕೆಗಳು ಪ್ರಚಲಿತದಲ್ಲಿರುವಂಥ ವಾತಾವರಣ ನಿರ್ಮಾಣವಾಗಬೇಕು. ಅದು ನಮ್ಮ ತಾಲೂಕಿನ ಜೀವಲೋಕದ ಸಾತತ್ಯಕ್ಕೆ ಅಕ್ಷರ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗುತ್ತದೆ.
ಸಿದ್ದಾಪರದ ಆಯುರ್ವೇದ ಕಾಲೇಜಿನಲ್ಲಿ ದೂರದ ರಾಜ್ಯಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಅಧ್ಯಯನಕ್ಕೆ ಬೇಕಾದ ವನೌಷಧೀಯ ಸಾಮಗ್ರಿಗಳನ್ನೂ ಮಣಿಪುರ ಮೇಘಾಲಯದಿಂದಲೇ ತರಿಸಿಕೊಳ್ಳಬೇಕಾದ ಶೋಚನೀಯ ಪರಿಸ್ಥಿತಿ ಮುಂದೊಂದು ದಿನ ಬರಬಹುದು. ಅದು ಹೆಮ್ಮೆಯ ಸಂಗತಿಯೇನಲ್ಲ. ನಮ್ಮಲ್ಲಿ ಎಷ್ಟೊಂದು ಸಂಖ್ಯೆಯ ನಾಟಿವೈದ್ಯರು, ಮನೆಮದ್ದಿನ ಜ್ಞಾನವಂತರಿದ್ದಾರೆ. ಅವರ ಪಾಂಡಿತ್ಯ ಪರಂಪರೆಯನ್ನು ಮುಂದುವರೆಸುವಂತೆ, ನಮ್ಮಲ್ಲಿನ ಗಿಡಮೂಲಿಕೆಗಳು ನಮ್ಮ ಕಾಲ್ಕೆಳಗೇ ಅಪರಿಚಿತವಾಗದಂತೆ ಸ್ಥಳೀಯ ಜ್ಞಾನಾರ್ಥಿಗಳಿಗೆ ಈ ಆಯುರ್ವೇದ ಕಾಲೇಜಿನಲ್ಲಿ ಓದಲು ಅನುವು ಮಾಡಿಕೊಡುವಂಥ ಮೀಸಲಾತಿ ಅಥವಾ/ಮತ್ತು ಶಿಷ್ಯವೇತನ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ. ನಮ್ಮ ಅದೆಷ್ಟೊ ಅಮೂಲ್ಯ ಸಸ್ಯಸಂತತಿಗಳು ಇಂಗ್ಲಂಡಿನ ಕೀವ್ ಉದ್ಯಾನದಲ್ಲಿ, ಅಮೆರಿಕದ ಬಾಲ್ಟಿಮೋರ್ ಸಂಗ್ರಹಾಲಯದಲ್ಲಿ ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ. ಈಗ ಉತ್ತರ ಧ್ರುವದ ಹಿಮಖಂಡದ ಸ್ವಾಲ್ಬಾಡ್ ಎಂಬಲ್ಲಿ ನಿರ್ಮಿಸಲಾದ ಬೀಜತಿಜೋರಿಯಲ್ಲಿ ಅಂಥ ಅಮೂಲ್ಯ ಸಸ್ಯಬೀಜಗಳನ್ನು ಜೋಪಾನವಾಗಿಡಲು, ಪೃಥ್ವಿಯ ಆಸ್ತಿಯಾಗಿ ಸಂರಕ್ಷಿಸಿಡಲು ಸಿದ್ಧತೆ ನಡೆದಿದೆ. ನಮ್ಮ ಗುಡ್ಡ ಬೆಟ್ಟಗಳಲ್ಲಿ, ನಮ್ಮ ಹಿತ್ತಿಲಲ್ಲಿ, ನಮ್ಮ ಜನಮಾನಸದಲ್ಲಿ ತಲತಲಾಂತರವಾಗಿ ಬೇರೂರಿ ನೆಲೆಸಿದ್ದ ಜೀವಸಂತತಿಗಳು ಇಂದಿನ ಶಿಕ್ಷಣ ವೈಖರಿಯಿಂದಾಗಿ ಈ ಒಂದೇ ತಲೆಮಾರಿನಲ್ಲಿ ಕಣ್ಮರೆಯಾಗುವ ಆತಂಕ ನಮ್ಮದಾಗಿದೆ. ನಮ್ಮ ಜ್ಞಾನ ಪರಂಪರೆ ನಶಿಸಿ ಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ.
ಕೊನೆಯಲ್ಲಿ ಪುನರಾರಂಭ
ನೂರು ವರ್ಷಗಳ ಹಿಂದೆ ಈ ತಾಲೂಕಿನ ಜನಸಂಖ್ಯೆ ಕುಸಿಯತೊಡಗಿತ್ತು. ವನ್ಯಜೀವಿಗಳ ಚಟುವಟಿಕೆಯಿಂದಾಗಿ ಹಾಗೂ ರೋಗರುಜಿನೆಗಳಿಂದಾಗಿ ಕಡಿಮೆಯಾಗುತ್ತಿದ್ದ ಜನಸಂಖ್ಯೆಯನ್ನು ಹೇಗಾದರೂ ಹೆಚ್ಚಿಸಬೇಕೆಂದು ನಾನಾ ವಿಧದ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಹುಲಿಬೇಟೆ, ಸೊಳ್ಳೆ ನಿಯಂತ್ರಣಕ್ಕೆ ಅರಣ್ಯ ಹನನ, ಕೆರೆಕಟ್ಟೆಗಳ ಧ್ವಂಸ, ಮಲೇರಿಯಾ ವಿರುದ್ದ ಪ್ರಚಾರಾಂದೋಲನ, ಮೈಲಿಬೇನೆಯ ವಿರುದ್ಧ ಲಸಿಕೆ ಪ್ರಯೋಗಗಳೆಲ್ಲ ಜಾರಿಗೆ ಬಂದಿದ್ದವು. ಬೆಟ್ಟಗಳಲ್ಲಿ ಹಣ್ಣುಹಂಪಲು ಬೆಳೆಯಲು ಅನುಮತಿ ನೀಡಲಾಗುತ್ತಿತ್ತು. ಇಂದು ಮತ್ತೆ ಸ್ಥಳೀಯರ ಜನಸಂಖ್ಯೆ ಕುಸಿಯುತ್ತಿದೆ; ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ನಗರಗಳತ್ತ ವಲಸೆ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಹಿರಿಯ ತಲೆಮಾರಿನ ಜನರೇ ಉಳಿಯುವಂತಾಗಿದೆ.ಬಹಳಷ್ಟು ಕುಟುಂಬಗಳಲ್ಲಿ ಭವಿಷ್ಯ ಬಹುದೊಡ್ಡ ಪ್ರಶ್ನೆಯಾಗಿದೆ. ಇಂದಿನ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಬ್ರಿಟಿಷರ ಕಾಲದಲ್ಲಿದ್ದಂತೆ ಬಹುಮುಖೀ ಕ್ರಿಯಾಯೋಜನೆಗಳು ಜಾರಿಗೆ ಬರಬೇಕಿದೆ. ದಶಕಗಳ ನಿರಂತರ ಯತ್ನ ನಡೆಸಬೇಕಾಗಿದೆ. ತೋಟಗಾರಿಕೆ, ವನರಕ್ಷಣೆ, ಕಸಿತಂತ್ರಜ್ಞಾನ, ಕೃಷಿ ಪ್ರವಾಸೋದ್ಯಮ, ತಳಿ ಸಂಗೋಪನೆ, ಸುಸ್ಥಿರ ಪ್ರವಾಸೋದ್ಯಮ, ಗೃಹಕೈಗಾರಿಕೆ ಹೀಗೆ ಎಲ್ಲವನ್ನೂ ಒಳಗೊಂಡ ಹೊಸ ಬದುಕಿನ ಪರಿಯನ್ನು ಅನ್ವೇಷಿಸಬೇಕಾಗಿದೆ. ನಿಸರ್ಗವನ್ನು ಆಧರಿಸಿದ ಜೀವನಕ್ರಮ ಎಲ್ಲಕ್ಕಿಂತ ಹೆಚ್ಚ ಸಹನೀಯ, ಎಂದಿಗಿಂತ ಹೆಚ್ಚು ಆಕರ್ಷಕ ಎಂಬ ಸತ್ಯವನ್ನು ರಂಜನೀಯವಾಗಿ ಬಿಂಬಿಸಬಲ್ಲ ಸಾಹಿತ್ಯ ನಮಗಿಂದ ಬೇಕಾಗಿದೆ. ನಗರಗಳ ಒತ್ತಡದ ದಿನಚರಿ, ಕಿಷ್ಕಿಂಧೆಯಲ್ಲಿದ್ದೂ ಏಕಾಂಗಿ ಜೀವನಕ್ರಮ, ಅತಂತ್ರ ಬದುಕಿಗೆ ಹೋಲಿಸಿದರೆ ಗ್ರಾಮಜೀವನದ ಐಸಿರಿಯನ್ನು, ನೆಮ್ಮದಿಯನ್ನು ಎತ್ತಿ ಹೇಳಬಲ್ಲ ಪರ್ಯಾಯ ಪಠ್ಯಪುಸ್ತಕಗಳು ನಮ್ಮಲ್ಲಿ ರಚನೆಯಾಗಬೇಕಿದೆ. ನದಿತೊರೆಗಳೊಂದಿಗೆ, ಮರಗಿಡಗಳೊಂದಿಗೆ ಮರುಸಂಧಾನಕ್ಕೆಳಸುವ ಹೊಸ ಸಮಾಜವನ್ನು ರೂಪಿಸಬೇಕಾಗಿದೆ.
-ನಾಗೇಶ ಹೆಗಡೆ ಬಕ್ಕೆಮನೆ
——————————-
ಕೃತಜ್ಞತೆಗಳು:
ಮರೆತುಹೋದ, ಮರೆಯಲ್ಲುಳಿದ ಸ್ಥಿತಿವಿಶೇಷಗಳ ಕುರಿತು ಮಾಹಿತಿ ನೀಡಿ ಸಹಕರಿಸಿದ: ಡಾ. ಬಿ.ಎಸ್. ಸೋಮಶೇಖರ, ಅನಂತ ಅಶೀಸರ, ಶಿವಾನಂದ ಕಳವೆ, ಕುಂಬಾರಕುಳಿ ಶಂಕರನಾರಾಯಣ ಮತ್ತು ಶ್ರೀಕಾಂತ, ಸಮಾಜಮುಖಿ ಕನ್ನೇಶ, ರತ್ನಾಕರ ನಾಯಕ್, ತಮ್ಮಣ್ಣ ಬೀಗಾರ, ಬಕ್ಕೆಮನೆ ಶ್ರೀಪಾದ ಮತ್ತು ಶಾರದಾ ದಾಬಡೆ ಇವರಿಗೆ ಕೃತಜ್ಞತೆಗಳು.














ನಾಗೇಶ್ ಹೆಗಡೆಯವರ ಬರಹಗಳನ್ನು ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ಓದಿ ವಿಜ್ಞಾನವನ್ನು ಇನ್ನಷ್ಟು ಇನ್ನಷ್ಟು ಕಲಿಯಬೇಕೆಂಬ ಆಸೆ ಇಮ್ಮಡಿಸಿದ್ದಂತೂ ಸುಳ್ಳಲ್ಲ, ಕನ್ನಡದಲ್ಲಿ ವೈಜ್ಞಾನಿಕ ಲೇಖನಗಳ ಕೊರತೆಯ ಸಂದರ್ಭದಲ್ಲಿ ನಮ್ಮಂಥ ಹಲವರ ದಾಹ ತೀರಿಸಿದವರು…. ಸರ್ ನಿಮ್ಮಲ್ಲೊಂದು ವಿನಂತಿ “ನ್ಯಾನೊ ಟೆಕ್ನಾಲಜಿಯನ್ನು” ಕುರಿತಂತೆ ತುಂಬಾ ತಿಳಿದುಕೊಳ್ಳುವ ಆಸೆ ಇದೆ ಇದನ್ನು ಪುಸ್ತಕ ರೂಪದಲ್ಲಿ ನೀಗಿಸುವಿರಿ ಎಂಬ ಆಸೆಯೊಂದಿಗೆ….
ಬಹುಶಃ ಯಾವುದೇ ರಾಜ್ಯಮಟ್ಟದ, ಜಿಲ್ಲಾಮಟ್ಟದ ಸಾಹಿತ್ಯಸಮ್ಮೇಳನಾಧ್ಯಕ್ಷರು…ಇಷ್ಟು ವರ್ಷಗಳಲ್ಲಿ ಮಾಡದೇ ಇದ್ದಂತಹ ದಾಖಲಾರ್ಹವಾದ, ಪ್ರತಿ ಕನ್ನಡಿಗನಿಗೂ ಸಂಗ್ರಹಯೋಗ್ಯವಾಗುವಂತಹಾ ಲೇಖನ-ಭಾಷಣ ಇದಾಗಿದೆ!ಪುನಃ-ಪುನಃ ಓದಿ ಮನನ ಮಾಡಿಕೊಳ್ಳವಾಗ ಹಾಗೂ ಅಲ್ಲಿನ ಒಳನೋಟಗಳನ್ನು ನಮ್ಮೊಳಗಿಳಿಸಿಕೊಳ್ಳುವಾಗ ನಮಗೂ ಸಹ ನಮ್ಮ ಅಂತಃಸತ್ವದ ‘ಸತ್ವಪರೀಕ್ಷೆ’ಯಾಗುವ ಅನುಭವ!ಹಾಗಾಗಿ, ಇದನ್ನು ನಾವೆಲ್ಲರೂ ಓದಬೇಕಷ್ಟೆ….. ನಮ್ಮನ್ನೇ ನಾವು ಅರಿಯಲು, ನಮ್ಮ ಸಾಕ್ಷಿಪ್ರಜ್ಷೆಯನ್ನು ಬಡಿದೆಬ್ಬಿಸಿಕೊಳ್ಳಲು,ನಾಗೇಶ್ ಹೆಗಡೆ ಯವರು ಹೇಳಿದಂತೆ… ‘ಸಾಹಿತ್ಯ ಪರಿಸರ ಹಾಗೂ ಪರಿಸರ ಸಾಹಿತ್ಯ’ದ ಬಗ್ಗೆ ಕಾಳಜಿ ವಹಿಸಲು. ಅವರು ಪ್ರತಿ ಸಾಲಿನಲ್ಲಿ ಉಪಯೋಗಿಸಿರುವ ಕೆಲಪದಗಳೇ ಒಂದೊಂದು ಮಹಾಪ್ರಬಂಧಕ್ಕೆ ಅರ್ಹವಾದವು!ಹಾಗಾಗಿ ಅವರು ಟಂಕಿಸಿರುವ ಕೆಲಪದಗಳನ್ನು ನಾನಿಲ್ಲಿ ಪಟ್ಟಿಮಾಡಿಕೊಳ್ಳುತ್ತಿದ್ದೇನೆ! ಈ ನಿಟ್ಟಿನಲ್ಲಿ ಈ ಲೇಖನ ಅನೇಕ ವಿಷಯಗಳಿಗೆ, ಪದಗಳಿಗೆ, ಹೊಸರೀತಿಯ ಆಂದೋಲನಕ್ಕೆ, ಸುಸ್ಥಿರ ಭವಿಷ್ಯಕ್ಕಾಗಿ ಪ್ರಸ್ತುತ ಸಂದರ್ಭ ತುರ್ತಾಗಿ ಬೇಡುವ ಅನೇಕ ಎಚ್ಚರಿಕಾಕ್ರಮಗಳಿಗೆ ಇದು ಆಕರವಾಗಿದೆ! ಇದನ್ನು ನಮಗೆಲ್ಲಾ ಲಭ್ಯವಾಗುವಂತೆ ಮಾಡಿದ ಜಿ.ಎನ್.ಮೋಹನ್ ಅವರಿಗೆ ಹೃತ್ಫೂರ್ವಕ ಅಭಿನಂದನೆಗಳು!ನಾಗೇಶ್ ಹೆಗಡೆಯವರೇನೆಂದು ಈ ಲೇಖನ ಸಮಗ್ರವಾಗಿ ಬಿಂಬಿಸುತ್ತಿದೆ!
ಇಷ್ಟು ಸಮಗ್ರ ಮತ್ತು ಮಾಹಿತಿಯುಳ್ಳ ಸುಂದರವಾದ ಪರಿಸರ ಸಂಭಂದಿತ ಅದ್ಬುತವಾದ ಲೇಖನ. ಸಿದ್ಧಾಪುರ ತಾಲ್ಲೂಕಿನ ಜನಜೀವನ ಪರಿಸರ, ಆಘನಾಷಿನಿ ನದಿ, ಸಾಹಿತ್ಯ, ವಿದ್ಯುತ್, ಸಕ್ಕರೆ…ಶಿಕ್ಷಣ….ಎಲ್ಲಾ ವಿಚಾರಗಳಲ್ಲಿ ಅದ್ಬುತವಾದ ಮಾಹಿತಿಯಿದೆ…ನಾಗೇಶ್ ಹೆಗಡೆಯವರಿಗೆ ಮತ್ತು ಇದನ್ನು ನಮಗಾಗಿ ತಂದ ಅವಧಿಗೆ ಧನ್ಯವಾದಗಳು.
kre red-indian samudayada padya bahala arthapoornavaagide ; samagra siddaapurada sarvaangeena badukina nelegalannu istu vivaravaagi – vishleshanatmakaavaagi yaava sahitya-sammelanaadhyaksharoo nodirlikkiilla ; idondu vinootan adhyaksheeya bhashana- upayukta mahiti-kanaja ! ABHINANDANEGALU
ನಾಗೇಶ್ ಹೆಗಡೆ ಸರ್,
ನಿಮ್ಮ ಈ ಅಧ್ಯಕ್ಷ ಭಾಷಣ, ನಮ್ಮನ್ನೆಲ್ಲ ತಟ್ಟಿ ಎಚ್ಚರಿಸುವಂತಿದೆ. ವಿಶ್ವಕೋಶದಂತಿರುವ ನೀವು ನಿಮ್ಮ ತಾಲೂಕಿನ ಪ್ರತೀಯೊಂದೂ ಆಗುಹೋಗುಗಳ ಬಗ್ಗೆ ಅದೆಷ್ಟು ಕಾಳಜೀಪೂರ್ವಕವಾಗಿ,ಹೆಮ್ಮೆ ಮತ್ತು ನೋವಿನೊಂದಿಗೆ ಸ್ಪಂದಿಸಿ ಆಗಬೇಕಾದ ಕೆಲಸಗಳ ಕುರಿತು ಹೇಳಿದ್ದೀರಿ!
ನಿಮ್ಮ ಈ ಮಾತುಗಳು ನಮ್ಮೂರಿನ ಬಗ್ಗೆ ನಮ್ಮ ನಮ್ಮ ಊರುಗಳ ಬಗ್ಗೆ, ನನಗೆ/ನಮಗಿರುವ ನಿಷ್ಕಾಳಜಿಯ ಬಗ್ಗೆ ಯೋಚಿಸಿ, ನಾಚಿ ತಲೆ ತಗ್ಗಿಸುವಂತೆ ಮಾಡಿದೆ.
‘ನನಗೆ ನನ್ನೂರಿನ ಬಗ್ಗೆ, ನನ್ನ ತಾಲೂಕು, ಜಿಲ್ಲೆಯ ಬಗ್ಗೆ ಎಷ್ಟು ಗೊತ್ತಿದೆ? ನಾನೇನು ಮಾಡಬಲ್ಲೆ ನನ್ನ ನೆಲಕ್ಕೆ?’ ಎಂದು ಯೋಚಿಸುವಂತೆ ಮಾಡಿದ ನಿಮಗಿದೋ ನನ್ನ ವಂದನೆ.
Thumba mahitidayaka lekhana. Pratiyobbara javaabdariya avalokhana. Nagesha hegede Sir ge dhanyavaadagalu.
ತುಂಬ ವರ್ಷಗಳ ಹಿಂದೆ ಎರಡು,ಮೂರು ದಿನಗಳ ಮಟ್ಟಿಗೆ ಸಿದ್ದಾಪೂರಕ್ಕೆ ಭೇಟಿಕೊಟ್ಟಿದ್ದೆ.ನನ್ನ ಪಾಲಿಗೆ ಸಿದ್ದಾಪೂರವೆಂದರೆ,ರಾತ್ರಿಯಿಡೀ ಅಲ್ಲಿ ಕೇಳಿ ಬರುತ್ತಿದ್ದ ಪ್ರಾಣಿ-ಕೀಟಗಳ ಚಿತ್ರವಿಚಿತ್ರ ಸದ್ದು ಮತ್ತು ಮುಗಿಲೆತ್ತರದ ವೃಕ್ಷರಾಶಿ ಹಾಗೂ ನನ್ನನ್ನು ಭಯ ಬೀಳಿಸಿದ್ದ ಕಬ್ಬಿಣದ ಚೇಳು! (ಮಾಮೂಲಿ ಚೇಳಿಗಿಂತ ದೊಡ್ಡದು.ಕಪ್ಪುಬಣ್ಣದ್ದು.)
ಇಲ್ಲಿ ವಿವರಿಸಲಾದ ಮರಗಳು,ಅವುಗಳ ಹೆಸರುಗಳೇ ನನಗೆ ಕನಸಿನ ಲೋಕದಂತೆ ಭಾಸವಾಗುತ್ತಿದೆ.
ಬರೀ ಕರಿಬೇವು,ಕೊತ್ತಂಬರಿ ಬಿಟ್ಟರೆ ಮತ್ಯಾವ ಗಿಡ/ಮರಗಳ ಬಗ್ಗೆ ಸ್ವಲ್ಪವೂ ಅರಿವಿಲ್ಲದ ನನ್ನಂಥ ತಲೆಮಾರಿನವರಿಗೆ ಇದೊಂದು ಎಚ್ಚರಿಕೆಯ ಲೇಖನ.
ನಾವು ಸ್ವಲ್ಪವಾದರೂ ಸಮಯ ಹೊಂದಿಸಿಕೊಂಡು ಇಂಥ ವಿಷಯಗಳ ಬಗ್ಗೆ,at least-ಇಂಥ ಲೇಖನಗಳ ಬಗ್ಗೆ ಒಂದು ಒಂದು ತೆರನಾದ ಪ್ರೀತಿಯಿಂದ,ಅರಿವಿನಿಂದ ಓದಬೇಕಿದೆ..
-Rj
How I wish There could be a war without enemies! But it is inkeeping with the current post modernist concepts of coffee without caffine, sugar without sweetness and crop withot seeds etc. Any idea positive or negative,when materialized is bound to be violent, dialectical and inevitably with undesired by products, be it eating, snatching a gold chain, a riot or a street fight for food and liberty. Depolitisized struggle and NGOized method of development is the direct the outcome of postmodernism. As a philosophical aspiration this brand of development is noble, socially alluring, politically safe and surely an harmless ideology. The ideas are practically blind to overriding process of militarization of society, privatization of resources and govennance and hence self defeating. Nagesh Hegde is a good man. Individual goodness doesnot work in the face of corporate economy, East to west, North to South industrial corridors and militarized control, sadly all in the name of democracy and development.
vnl
ಹೊಸ ವೃಕ್ಷ ಪ್ರಭೇದ‘ಸೆಮಿಕಾರ್ಪಸ್ ಕತ್ಲೆಕಾನೆನ್ಸಿಸ್’ (ಕಾನುಗೇರು) ನೋಡಲು ಹೋಗಿಬರುತ್ತೇನೆ ಸರ್
ಪರಿಸರ ಹಾಗು ಸಾಹಿತ್ಯದ ಸಾಮರಸ್ಯ ನಮ್ಮ ನೆಮ್ಮದಿಗೆ, ಉಳಿವಿಗೆ ಏಕೆ ಮತ್ತು ಹೇಗೆ ಮುಖ್ಯ ಎಂಬುದನ್ನು ಬಹಳ ಸರಳವಾಗಿ, ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ.
ನಿಜಕ್ಕೂ ಒಬ್ಬ ಸಮ್ಮೇಳನಾಧ್ಯಕ್ಷ ಹೇಗೆ ಮಾತನಾಡಬೇಕು ಮತ್ತು ಅವನಿಗಿರಬೇಕಾದ ಅಧ್ಯಯನ, ಅವನ ಭಾಷಣ ಒಳಗೊಂಡಿರಬೇಕಾದ ಅಂಶಗಳು, ಅದರ ಉಪಯುಕ್ತತೆ ಇವೆಲ್ಲದರಲ್ಲೂ ನಾಗೇಶ ಹೆಗಡೆಯವರ ಭಾಷಣ ಆದರ್ಶವಾಗಿದೆ…ಸ್ವಲ್ಪ ಕನ್ನಡದ ಸಾಹಿತಿಗಳೆಲ್ಲ ಇತ್ತ ಕ್ಣ್ಣು ಹಾಯಿಸಿದರೆ ಉತ್ತಮ
ಸರ್…. ಓದುತ್ತಿದ್ದಂತೇ ಅನಿರ್ವಚನೀಯ ಅನುಭವ… ಅಪಾರ ಸಂತೋಷ.. ನನ್ನೂರಿನ ಜನರ ಸಾಧನೆ ಓದಿ.. ಹಾಗೆಯೇ ನನ್ನ ಮೇಲೆ ಬೇಸರ.. ವಿಷಾದ… ಇಷ್ಟೇಲ್ಲಾ ವಿಷಯಗಳನ್ನು ನಾ ತಿಳಿಯದೇ ಹೋಗಿದ್ದೆನಲ್ಲಾ ಎಂದು!!! ಸಂಗ್ರಹಯೋಗ್ಯ.. ಆಗಾಗ ಓದುತ್ತಾ ಸ್ಮೃತಿಪಟಲದಲ್ಲಿ ಮನನ ಮಾಡಿಕೊಳ್ಳುವಂತಹ ವಿಷಯಗಳನ್ನೊಳಗೊಂಡು ಲೇಖನ..! “ಸಾಹಿತ್ಯ ಪರಿಸರ” ಹಾಗೂ “ಪರಿಸರ ಸಾಹಿತ್ಯ” – ಇವುಗಳ ನಡುವಿನ ನಂಟು ಸ್ಪಷ್ಟವಾಯಿತು ಓದಿ. ತುಂಬಾ ಧನ್ಯವಾದಗಳು ನಿಮಗೆ. ಹಾಗೇ ಈ ಒಂದು ಅಪರೂಪದ ಲೇಖನವನ್ನು ಆಸ್ಥೆಯಿಂದ ಹಂಚಿಕೊಂಡ ಅವಧಿಗೂ ಧನ್ಯವಾದಗಳು.
-ತೇಜಸ್ವಿನಿ ಹೆಗಡೆ.
ಮರ ಕಡಿಯುವುದನ್ನ ನೋಡಿದಾಗಲೆಲ್ಲ ಕ್ರೀ ರೆಡ್ ಇಂಡಿಯನ್ ಪದ ನೆನಪಾಗುತ್ತದೆ.
ಈ ಭಾಷಣವನ್ನು ಹಂಚಿಕೊಂಡದ್ದಕ್ಕೆ ಧನ್ಯವಾಗಳು
ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯದ ಬಗ್ಗೆ, ಮುಸ್ಲಿಂ ವಿ.ವಿ ಬಗ್ಗೆ, ಜಾತಿ ಬಗ್ಗೆ ಮಾತನಾಡಿ ಗಬ್ಬೆಬ್ಬಿಸುವ ಅಧ್ಯಕ್ಷರ ನಡುವೆ ಇಂತಹ ಮೌಲ್ಯಯುತ ಅಧ್ಯಕ್ಷನುಡಿ ಮಾದರಿಯಾಗಿದೆ.
Thumba chennagide, shuska bhashana maaduva mandi edannu odidalli neravaaditu
tumba chennagide..
‘ಶತ್ರುವಿಲ್ಲದ’ ಹೊಸಬಗೆಯ ಸಮರಕ್ಕೆ ಜಗತ್ತು ಸಜ್ಜಾಗಬೇಕಿದೆ.. – ಶೀರ್ಷಿಕೆಯೇ ಅದೆಷ್ಟೋ ಅರ್ಥಪೂರ್ಣ ಮತ್ತು ವಿಶಾಲವಾಗಿದೆ. ಒಳ್ಳೆಯ ಭಾಷಣಲೇಖನ. ಓದಿಸಿದ್ದಕ್ಕೆ ವಂದನೆಗಳು… 🙂
Awesome 🙂
ನಾಗೇಶ ಹೆಗಡೆಯವರ ಮನದಾಳದಮಾತುಗಳಿವು. ಒಬ್ಬ ಸಂವೇದನಾಶೀಲ ಮನುಷ್ಯ ಮಾತ್ರ ಹೀಗೆ ದಿಟವಾಗಿ ಯೋಚಿಸಬಲ್ಲ. ನೇರವಾಗಿ ಮಾತನಾಡಬಲ್ಲ. ನಮ್ಮ ನಡುವೆಯೆ ಬದುಕುತ್ತಿರುವ ಈ ಅಪರೂಪದ ಮನುಷ್ಯ ಸತ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ಪ್ರತಿಬಿಂಬವನ್ನು ನೋಡಿಯಾದರೂ ತಿದ್ದಿಕೊಳ್ಳುವ ಕೆಲಸವನ್ನು ನಾವು ಮಾಡಿಕೊಂಡು ಸಹಜೀವನ ನಡೆಸುವಂತಾದರೆ ಸತ್ಯಕ್ಕೆ ಗೌರವ ಕೊಟ್ಟಂತಾಗುವುದಷ್ಟೇ ಅಲ್ಲ ನದಿತೊರೆಗಳೊಂದಿಗೆ, ಮರಗಿಡಗಳೊಂದಿಗೆ ಮರುಸಂಧಾನಕ್ಕೆಳಸಿ ಜೀವನಕ್ಕೆ ಅರ್ಥವಂತಿಕೆಯನ್ನು ಪಡೆದುಕೊಳ್ಳುವಂತಾಗುತ್ತದೆ. ಶತ್ರು ಬೇರೆಲ್ಲಿಯೋ ಇಲ್ಲ! ನಮ್ಮೊಳಗೇ ನಾವಾಗಿ ಇದ್ದಾನೆ! ಅವನನ್ನು ಕಳೆದುಕೊಳ್ಳುತ್ತ ಮಿತ್ರತ್ವದೆಡೆಗೆ ಧಾವಿಸುವ ಪರಿಯನ್ನು ಅಷ್ಟೇ ಧಾವಂತದಿಂದ, ಕಾತರದಿಂದ, ಪ್ರೀತಿಯಿಂದ ಬಿಂಬಿಸಿದ ಪ್ರತಿಬಿಂಬ ನಾಗೇಶರು ಕಂಡರಿಸಿದ ಬದುಕಿನ ಸೂಕ್ಷ್ಮ ಅವಲೋಕನ, ಕಾಳಜಿ, ಶುದ್ಧ ಜೀವನಪ್ರೇಮದ ಎರಕವಾಗಿ ಎದೆಗೆ ಬಿದ್ದ ಅಕ್ಷರರೂಪದಲ್ಲಿದೆ. ಈ ಬೀಜಾಕ್ಷರ ಚಿಗುರಿ ಮರವಾಗಿ, ಮರವು ಅರಿವಾಗಿ, ಅರಿವೇ ಗುರುವಾಗುವ ಕ್ಷಣಗಳನ್ನು ನಮ್ಮ ತಲೆಮಾರಿನಲ್ಲಿಯೇ ಕಾಣುವಂತಾಗಲಿ ಎಂಬುದರ ಕಡೆಗೆ ನಮ್ಮ ಮನೋಧರ್ಮ ಒಲಿದು, ಬದುಕು ಬಾಳಾಗುವ ಸಮಯಕ್ಕೆ ಮುನ್ನುಡಿ ಬರೆಯುವಂತಹ ಕ್ಷಣ ಎಲ್ಲರದಾಗಲಿ.
ಕಾವಂಚೂರಿನ ಸಮ್ಮೇಳನಕ್ಕೆ ನಾನೂ ಬಂದಿದ್ದರೆ, ನನಗೆ ಸೀಟಿ (ಸಿಳ್ಳು) ಹೊಡೆಯಲು ಬಂದಿದ್ದರೆ, ನಿಮ್ಮ ಭಾಷಣದ ನಡುನಡುವೆ ಹತ್ತು ಸಲ ಸೀಟಿ ಹೊಡೆದಿರುತ್ತಿದ್ದೆ!
ಈ ಮಾತುಗಳನ್ನು ಆಡಿದ ನಿಮಗೆ, “ಸಾಹಿತ್ಯ ಸಮ್ಮೇಳನ”ಕ್ಕೆ ನಿಮ್ಮನ್ನು ಅಧ್ಯಕ್ಷರನ್ನಾಗಿಸಿದ ಕಾವಂಚೂರಿನ ಎಲ್ಲ ಸಹೃದಯರಿಗೆ, ಇದನ್ನು ಪ್ರಕಟಿಸಿದ “ಅವಧಿ”ಗೆ ಧನ್ಯವಾದಗಳು.
This speech has raised the stanadars of ‘Sahitya sammelana’ and Siddapura Sahity sammelana will be a model.
sahitya parisara mattu parisara sahitya emba talebarahave arthapurna abhinandanegalu nimage haagu mohan avarigu .manushya matte nisargadolage praveshisi taanu maadiruva maaduttiruva tappugala bagge koncha yochisuva manassu baruttade sir.
ನಮ್ಮೆಲ್ಲರ ಅಭಿಲಾಷೆ ಇದೇ,….. ನಮ್ಮ ರಾಜಕೀಯ, ನಮ್ಮ ಧಾರ್ಮಿಕ ಸಂಸ್ಥೆಗಳು, ನಮ್ಮ ಸಾಹಿತ್ಯ ಎಲ್ಲವೂ ಈ ಪರಿಸರಕ್ಕೆ ಹೊಂದುವಂತೆ ಇದ್ದಿದ್ದರೆ….
ನಾಗೇಶ ಹೆಗಡೆಯವರಿಗೆ ನಮಸ್ಕಾರ,.
ತುಂಬಾ ಅಧ್ಯಕ್ಷೀಯ ಭಾಷಣಗಳನ್ನು ಕೇಳಿ, ಓದಿ, ಬಗ್ಗೆ ತಿಳಿದು ಇಂತಹದ್ದೇ ಒಂದು ಎನ್ನುವ ಭಾಷಣ ಎಂದುಕೊಂಡರೆ ನಮ್ಮ ನಷ್ಟ. ನನಗೆ ತಿಳಿದಂತೆ ಸಾಹಿತ್ಯ ಮತ್ತು ಪರಿಸರ ಎರಡರ ಬಗ್ಗೆ ಅತ್ಯಂತ ಮನೋಜ್ಞವಾಗಿ ಬರೆದವರು ನೀವೇ ಇರಬೇಕು. ಕನ್ನಡದ ಮನಸು ಎಂದೆಲ್ಲಾ ಹೇಳುವ ನಮ್ಮ ಸಾಹಿತ್ಯಿಕ ಮನಸ್ಸು ಪರಿಸರಕ್ಕೆ ಸಂಬಂಧಿಸಿ ಕಲಿಯುವುದು,ಬೆಳೆಯುವುದು ಹಲವಾರಿದೆ.
ಇಂತಹ ಅಪೂರ್ವ, ವಿಚಾರಪೂರ್ವ ಭಾಷಣ ಒದಗಿಸಿದ್ದಕ್ಕೆ ಅವಧಿಗೆ ಧನ್ಯವಾದ. ಸಂಗ್ರಹಯೋಗ್ಯ.
ಸಿದ್ದಾಪುರದ ದಟ್ಟ ಕಾಡಿನ ಬಗ್ಗೆ ಅಜ್ಜನ ಬಾಯಿಂದ ಕೇಳಿ ತಿಳಿದಿದ್ದೆ. ಅವನ ಯೌವನದ ಕಾಲದಲ್ಲಿ ಒಂದಿಷ್ಟು ಗೆಳೆಯರು ಸೇರಿ ಹುಲಿ ಬೇಟೆಗೆ ಸಿದ್ದಾಪುರದ ಕಾನಿಗೆ ಹೋದ ಕಥೆ ರೋಮಾಂಚನ ಹುಟ್ಟಿಸುವಂತಿತ್ತು.ಅಲ್ಲಿನ ಗವ್ವೆನ್ನುವ ಕಾಡು, ಕಾಡಿನ ನಡುವಿನ ಕೆರೆ,ಕೆರೆ ಪಕ್ಕದ ದೆವ್ವದ ಮರ, ಆ ಮರದ ಕುರಿತು ಹುಟ್ಟಿಕೊಂಡ ಕಥೆಗಳು ಇವೆಲ್ಲ ಇವತ್ತಿಗೂ ಹಚ್ಚ ಹಸಿರು. ಬಾಳೆಕಾಯಿ ಹಿಟ್ಟು, ಹಲಸಿನ ಹಿಟ್ಟು ತಿಂದು ಬದುಕಿದವರಲ್ಲಿ ನನ್ನ ಅಜ್ಜನೂ ಒಬ್ಬ. ಒಂದು ಕಾಲದಲ್ಲಿ ತೀವ್ರ ಬಡತನ ಅನುಭವಿಸಿದ್ದ ಮಲೆನಾಡಿನ ಜನ, ಬಡತನದ ನಡುವೆಯೂ ಶಿಕ್ಷಣ, ಸಾಹಿತ್ಯ, ಯಕ್ಷಗಾನ ತಾಳಮದ್ದಲೆಯಂಥ ಕಲೆ ಉಳಿಸಿಕೊಂಡು ಬಂದಿದ್ದು ಅವರ ಜೀವನ ಪ್ರೀತಿಯನ್ನು ತೋರಿಸುತ್ತದೆ. ಕೇಳಿದ ಕಥೆಗೆ ಮರುಹುಟ್ಟು ನೀಡಿ, ಪ್ರಸ್ತುತ ಸನ್ನಿವೇಶ ತೆರೆದಿಟ್ಟ ನಾಗೇಶ್ ಹೆಗಡೆ ಅವರಿಗೆ ಹೃತ್ಪೂರ್ವಕ ನಮಸ್ಕಾರ. ನಿಜಕ್ಕೂ ನಿಮ್ಮ ಮೊಮ್ಮಕ್ಕಳು ಯೋಗವಂತರು ಸರ್ !! ನಿಮ್ಮ ಅನುಭವದ ಸಾರವನ್ನು ಮರೆಯದೆ ಅವರಿಗೆ ದಾಟಿಸುವಿರೆಂದು ನಂಬುತ್ತೇನೆ.
ಗೀರ್ವಾಣಿ