ಶಂಕರನ 'ಅನಂತ' ನೆನಪು


 
 
 
 
ರಾಘವನ್ ಚಕ್ರವರ್ತಿ
 
 
 
೧೯೮೪-೮೫: ಇಂದಿರಾ ಗಾಂಧಿಯವರ ಹತ್ಯೆಯಾಗಿ ಲೋಕಸಭಾ ಚುನಾವಣೆಯಲ್ಲಿ ವಿರೋಧಪಕ್ಷಗಳು ಹೀನಾಯವಾಗಿ ಸೋತಿದ್ದವು. ಸತ್ತ ಇಂದಿರಾ ಜೀವಂತ ಇಂದಿರಾರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಅನುಕಂಪದ ಅಲೆಯಲ್ಲಿ ಗೆದ್ದ ಕಾಂಗ್ರೆಸ್ ಬೀಗಿತ್ತು. ಕೇವಲ ನಾಲ್ಕೇ ಸ್ಥಾನ ಪಡೆದಿದ್ದ ಜನತಾ ಪರಿವಾರಕ್ಕೆ ರಾಜ್ಯದಲ್ಲಿ ಅಧಿಕಾರ ಮುಂದುವರೆಸುವ ನೈತಿಕತೆ ಇಲ್ಲ ಎಂದು ಘೋಷಿಸಿದ ’ಮೌಲ್ಯಾಧಾರಿತ’ ಮುಖ್ಯಮಂತ್ರಿ ಹೆಗಡೆ ರಾಜೀನಾಮೆ ಕೊಟ್ಟರು. ಮತ್ತೆ ಚುನಾವಣೆ ಘೋಷಿಸಲಾಯಿತು. ಇಂದಿರಾರ ಸೂಕ್ಷ್ಮತೆ, ವಾಚಾಳಿತನ, ವಂಚನೆ ಗಳನ್ನೆಲ್ಲಾ ಮೈಗೂಡಿಸಿಕೊಂಡಿದ್ದ ಹೆಗಡೆ ತೆಗೆದುಕೊಂಡ ಸ್ಮರಣೀಯ ರಾಜಕೀಯ ನಿರ್ಧಾರ ಅದಾಗಿತ್ತು.
ಸಂಯುಕ್ತ ರಂಗದ ಪಕ್ಷಗಳೊಂದಿಗೆ ಏಗಿ ಬೇಸತ್ತಿದ್ದ, ವೆಂಟಿಲೇಟರ್ ನಲ್ಲಿದ್ದ ಸರ್ಕಾರವನ್ನೇ ಸಂಯಮದಿಂದ ನಡೆಸಿ ಹೀರೋ ಆಗಿದ್ದ ಹೆಗಡೆ ಈ ನಿರ್ಧಾರದಿಂದ ಇನ್ನಷ್ಟು ಜನಪ್ರಿಯರಾದರು. ಹೆಗಡೆ ಅಲೆ ಸುಪ್ತವಾಗಿ ರೂಪುಗೊಳ್ಳಲಾರಂಭಿಸಿತು. ನಾನಾಗ ಗೌರೀಬಿದನೂರಿನಲ್ಲಿ ಓದುತ್ತಿದ್ದೆ. ೮೩ರ ಚುನಾವಣೆಯಲ್ಲಿ ಆರ್.ಎನ್.ಲಕ್ಷ್ಮೀಪತಿ ಎಂಬ ಸಜ್ಜನರೊಬ್ಬರು ಗೆದ್ದು ಮಂತ್ರಿಯೂ ಆಗಿದ್ದರು. ೮೫ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಚಂದ್ರು ಎಂಬ ಚಂದ್ರಶೇಖರ್, ಗೌರೀಬಿದನೂರಿನ ಜನತಾಪಕ್ಷದ ಅಭ್ಯರ್ಥಿಯಾದರು. ಅವರು ಆಗಷ್ಟು ಜನಪ್ರಿಯರಿರಲಿಲ್ಲ. ಆದರೆ ಹೆಗಡೆ ಅಲೆ ದಿನೇದಿನೇ ಜೋರಾಗುತ್ತಿತ್ತು.
ಚಂದ್ರು ಮನೆಮನೆಗೂ ಬಂದು ಪ್ರಚಾರ ನಡೆಸುತ್ತಿದ್ದರು. ನಾವಾಗ ಹೊಸೂರಿನ ರಾಮಮೂರ್ತಿಯವರ ಮನೆಯ ಹಿಂಬದಿಯ ಮನೆಯಲ್ಲಿದ್ದೆವು. ರಾಮಮೂರ್ತಿ ಮನೆಗೆ ಬಂದ ಚಂದ್ರು ’ಆ ಹಿಂದ್ ಗಡೆ ಮನೇಲ್ ಯಾರಾದ್ರೂ ಇದಾರಾಮ್ಮಾ’ ಎಂದು ಕೇಳಿ ನಾವು ವಾಸವಾಗಿರುವುದನ್ನು ತಿಳಿದುಕೊಂಡು, ನಮ್ಮ ತಂದೆ ಮೇಷ್ಟ್ರು ಎಂದು ಪತ್ತೆ ಮಾಡಿದರು.

’ನಮಸ್ ಕಾರಾಮ್ಮ್ ಮ್ ಮ್ಮಾ..ಮೇಷ್ಟ್ರುಚೆನ್ನಾಗಿದ್ದಾ ರಾ…ಇದಾರಾ ಮನೇಲಿ?” ಎನ್ನುತ್ತಾ ತಮ್ಮ ವಿದೂಷಕನ ನಗೆ ನಗುತ್ತಾ, ನಮ್ಮ ತಂದೆಯೇನೋ ಅವರಿಗೆ ಬಹಳಾ ಪರಿಚಯ ಎಂಬಂತೆ ಮನೆಯೊಳಗೆ ಧಾವಿಸಿಯೇ ಬಿಟ್ಟರು. ನಂತರ ಪರಿಚಯಿಸಿಕೊಂಡರು. ತಾವು ಬಂದ ಉದ್ದೇಶ್ಯ ತಿಳಿಸಿ ಹೆಗಡೆಯಂತವರ ಕೈ ಬಲಪಡಿಸಬೇಕು ಎಂದೇನೋ ಹೇಳುತ್ತಾ ನನ್ನನ್ನು ವಿಚಾರಿಸಿ “ಪ್ರಚಾರಕ್ಕೆ ನಾಗ್ ಬ್ರದರ್ಸ್ ಬರ್ತರಪ್ಪಾ..ಗೊತ್ತಲ್ಲ..ಅನಂತ್  ನಾಗೂ, ಶಂಕರ್ನಾಗೂ…ಬರ್ಬೇಕಪ್ಪಾ..ಎಲ ್ಲಾರ್ಗೂ ಹೇಳು..” ಎನ್ನುತ್ತಾ “ರಮಣಮೂರ್ತಿ”ಯ ನಗೆ ನಗುತ್ತಾ ಮುಗಿದ ಕೈ ಬಿಡಿಸದೇ ಹೊರಟೇ ಬಿಟ್ಟರು. ’ಮುಕ್ಕುಲೋನೇ ಮಾಟ್ಲಾಡ್ ತಾಡು..ದಾನಿಕೋಸಮೇ ವೀಡಿಕಿ ’ಮುಖ್ಯಮಂತ್ರಿ’ ಅನೇ ಪೇರು” ಎಂದು ರಾಮಮೂರ್ತಿ ತಮಾಷೆ ಮಾಡಿದ್ದರು. (ಮೂಗಿನಿಂದಲೇ ಮಾತಾಡ್ತಾನೆ. ಅದಕ್ಕೇ ಇವನಿಗೆ ’ಮುಖ್ಯಮಂತ್ರಿ’ ಅಂತಾರೆ). ಚಂದ್ರು ವಿರುದ್ಧ ಕಾಂಗ್ರೆಸ್ ನಿಂದ ಬಿ.ಎನ್.ಕೆ.ಪಾಪಯ್ಯ ಎಂಬ ಅತ್ಯಂತ ಹಳೆಯ ಮನುಷ್ಯ ಇಳಿದಿದ್ದರು. ಇವರು ಆ ಕಾಲದ ಗೆಲ್ಲುವ ಕುದುರೆ. ಲಂಕೇಶ್ ಪತ್ರಿಕೆಯಲ್ಲಿ (ದ್ವಾರಕಾನಾಥ್ ಅಥವಾ ತ್ಯಾಗರಾಜ್..ನೆನಪಿಲ್ಲ) “ಚಂದ್ರು ವಿರುದ್ಧ ಸಾವಿರಾರು ವರ್ಷ ವಯಸ್ಸಾದ ಪಾಪಯ್ಯ ನಿಂತಿದ್ದಾರೆ” ಎಂದು ಕುಚೋದ್ಯಮಾಡಲಾಗಿತ್ತು

ನಾಗ್ ಬ್ರದರ್ಸ್ ಗಾಗಿಯಾದರೂ ಜನತಾಪಕ್ಷ ಗೆಲ್ಲಬೇಕಿನಿಸಿತು. ಅನಂತ್ ಗಿಂತ ಹೆಚ್ಚು ಫ಼ೈಟಿಂಗ್ ಮಾಡುತ್ತಿದ್ದ ಶಂಕರ್ ಆಗ ನನಗೆ ಇಷ್ಟವಾಗುತ್ತಿದ್ದರು. ಅದಕ್ಕೇ ಕಾರಣವೂ ಇತ್ತು. ಕೆಲವು ವರ್ಷದ ಹಿಂದೆ ’ಹುಲಿಯ ಹಾಲಿನ ಮೇವು’ ಮತ್ತು ’ಸೀತಾರಾಮು’ ಹೆಚ್ಚು-ಕಡಿಮೆ ಒಂದೇ ಸಮಯಕ್ಕೆ ಬಿಡುಗಡೆಯಾಗಿದ್ದವು. ಅಣ್ಣಾವ್ರ ಸಿನಿಮಾ ನೋಡಲು ಮೈಸೂರಿನ ಗಾಯತ್ರಿ ಥೀಯೇಟರ್ ಗೆ ಹೋದರೆ ಆಗಲೇ ಹೌಸ್ ಫುಲ್. ಎದುರುಗಡೇ ಲಕ್ಷ್ಮೀ ಥೀಯೇಟರ್ ನಲ್ಲಿ ಸೀತಾರಾಮು ಪ್ರದರ್ಶಿತವಾಗುತ್ತಿತ್ತು. ಶಂಕರ್ ಚಿತ್ರ ನೋಡುವುದು ನನಗಷ್ಟು ಇಷ್ಟವಿರಲಿಲ್ಲ. ಶಂಕರ್ ನನಗಾಗ ಹೆಚ್ಚು ತಿಳಿದಿರಲೂ ಇಲ್ಲ. ಅಣ್ಣಾವ್ರು-ವಿಷ್ಣು ಬಿಟ್ಟರೆ ಇನ್ನ್ಯಾರೂ ಬೇಕಿರಲಿಲ್ಲ. ಮಳೆ ಬೇರೆ ಆರಂಭವಾಯಿತು. ’ಇದಕ್ಕೇ ಹೋಗ್ಬಿಡೋಣ ಬಾ..ಮಳೆ ಬೇರೆ’ ಎಂಬ ಜೊತೆಯವರ ಬಲವಂತಕ್ಕೆ ಲಕ್ಷ್ಮೀ ಥೀಯೇಟರ್ ಗೆ ನುಗ್ಗಿದೆವು.
ದೋಣಿಯೊಂದರಲ್ಲಿ ಹುಡುಗಿಯೊಬ್ಬಳನ್ನು ಅರಿಕೇಸರಿ ಕೆಣಕಲಾರಂಭಿಸುತ್ತಿಂದತೆಯೇ ಪ್ರತ್ಯಕ್ಷವಾದ ಶಂಕರ್ ಕರಾಟೆಯಂತಹ ಶೈಲಿಯಲ್ಲಿ ಅರಿಕೇಸರಿಯನ್ನು ಬಡಿದು ಹಣ್ಣುಗಾಯಿ-ನೀರುಗಾಯಿ ಮಾಡಿದ ಒಂದೇ ದೃಶ್ಯ, ಶಂಕರ್ ರನ್ನು ಆಪ್ಯಾಯಮಾನವಾಗಿಸಿಬಿಟ್ಟಿತು. ಪಕ್ಕದಲ್ಲಿ ಕುಳಿತಿದ್ದ ನಮ್ಮ ಬಂಧು ’ಹುಲಿಯ ಹಾಲಿನ ಮೇವಿನಲ್ಲಿ ಬರೀ ಕತ್ತಿ ವರಸೆ..ಮಯೂರದಲ್ಲಿ, ಬಹದ್ದೂರ್ ಗಂಡಿನಲ್ಲಿ ನೋಡಿದೀಯಲ್ಲಾ.. ಇದರಲ್ ನೋಡು..ಫುಲ್ಲ್ ಕರಾಟೆ’ ಎಂದು ಕಾಮೆಂಟರಿಸುದ್ದಂತೇ, ಶಂಕರ್ ಬಗ್ಗೆ ಅಭಿಮಾನ ಇನ್ನೂ ಹೆಚ್ಚಾಗತೊಡಗಿತ್ತು. ಶಂಕರ್ ರಿಂದ ಪ್ರಭಾವಿತನಾಗಿ ಕೆಲವು ದಿನ ಶರ್ಟ್ ಗುಂಡಿಗಳನ್ನು ಬಿಚ್ಚಿ ಬನಿಯನ್ ಕಾಣುವಂತೆ ಓಡಾಡಿ ಬೈಸಿಕೊಂಡದ್ದೂ ಇದೆ.
ಇಂತಹ ಶಂಕರ್, ಸೋದರ ಸಮೇತನಾಗಿ ನಾವಿರುವ ಜಾಗಕ್ಕೇ ಬರುತ್ತಾರೆಂದ ಮೇಲೆ ಸಂಭ್ರಮಪಡದಿರಲಾದೀತೆ. ಅನಂತ್ ರ ನಾರದವಿಜಯ ನೋಡಿಯಾಗಿತ್ತು. ’ಬರ’ ಎಂಬ ಚಿತ್ರವನ್ನು ನೋಡಲು ಇಚ್ಚೆಯಿತ್ತು. ’ಏನೂ ಇಲ್ಲ ಅದ್ರಲ್ಲಿ.. ಅರ್ಥಾನೇ ಆಗಲ್ಲ..ಯಾಕ್ ನೋಡ್ತೀಯಾ’ ಎಂದು ಕೆಲವರೆಂದರು. ಒಂದೆರಡು ದಿನಗಳಲ್ಲಿ ಬರ ಥೀಯೇಟರ್ನಿಂದ ಮಾಯವಾಗಿತ್ತು.
ಸ್ವತಃ ಹೆಗಡೆ ನಾಗ್ ಸೋದರರ ಸಮೇತ ಗೌರೀಬಿದನೂರಿಗೆ ಆಗಮಿಸುವ ಸುದ್ದಿ ಬರುತ್ತಿದ್ದಂತೆ, ನಮಗೆಲ್ಲ ಆ ದಿನ ಬೇಗ ಬರಲಿ ಎಂಬ ಕಾತರ. ಆ ದಿನ ಬಂದೇ ಬಿಟ್ಟಿತು. ಸಂಜೆ ೫:೩೦ ಕ್ಕೆ ಮುನಿಸಿಪಲ್ ಹೈಸ್ಕೂಲ್ ಆವರಣದಲ್ಲಿ ಜಮಾಯಿಸಿದೆವು. ಗಂಟೆ ಏಳಾಯಿತು. ಎಂಟಾಯಿತು…ನಾಗ್ ಬ್ರದರ್ಸ್ ಏನಾದರು?? ಹೊರಟು ಬಿಡೋಣ ಎಂದು ಅಂದುಕೊಳ್ಳುವಷ್ಟರಲ್ಲಿ ನಾಗ್ ಸೋದರರ ಆಗಮನವಾಗಿಯೇ ಬಿಟ್ಟಿತು..೯:೩೦ ಗೆ. ಹೆಗಡೆ ಬರಲಿಲ್ಲ. ಆ ಹಿಂದೆಯೂ ಹೆಗಡೆ ಹೊಸೂರು-ಗೌರಿಬಿದನೂರುಗಳ ಒಂದೆರಡು ಸಮಾರಂಭಗಳಿಗೆ ತಪ್ಪಿಸಿಕೊಂಡಿದ್ದರು. ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಬರದೇ, ಆಳ್ವ ಬಂದಿದ್ದರು. ಹೆಗಡೆ ಉನ್ನತ ಅಧಿಕಾರಿಗಳ ತುರ್ತು ಸಭೆಯೊಂದಕ್ಕೆ ಹೋಗಬೇಕಾಯಿತೆಂದು ಆಳ್ವ ಬೇಸರಿಸಿಕೊಂಡಿದ್ದರು.

ಚಂದ್ರು ಈಗ ಅದನ್ನೇ ಮಾಡಿದ್ದರು. ’ಅನಿವಾರ್ಯ ಕಾರಣಗಳಿಂದ ಹೆಗಡೆಯವರು ಬರಲಾಗಿಲ್ಲ.’ ಎಂದೇನೋ ಸಬೂಬು ನೀಡಿದರು. ಶಂಕರ್ ಮಾತಾಡಲು ನಿಲ್ಲುತ್ತಿದ್ದಂತೇ ಶಿಳ್ಳೆ-ಕೇಕೆಗಳು ಮುಗಿಲು ಮುಟ್ಟಿದವು. ’ಡೆಲ್ಲೀಲ್ ಅವ್ರಿರ್ಲೀ..ರಾಜ್ಯದಲ್ ನಾವೀರ್ತೀವಿ..ಸರಿಅಲ್ವಾ ಅಣ್ಣ್ಂದ್ರಾ?” ಎನ್ನುತ್ತಿದ್ದಂತೇ ಭೂಕಂಪವಾಗುವುದೊಂದು ಬಾಕಿ. ಅನಂತ್ ಗಿಂತ ಹೆಚ್ಚು ಮಾತಾಡಿದ ಶಂಕರ್, ಹೆಗಡೆಯ ಸ್ತೋತ್ರಮಾಡಿದ್ದರು. ಅನಂತ್ ಹೆಚ್ಚು ಸುಸ್ತಾದವರಂತೆ ಕಂಡುಬಂದರು. ’ಹೆಗಡೆಯವರಂತಹ ನಾಯಕ ಸಿಕ್ಕೋದು ನಮ್ ಭಾಗ್ಯ..ಅವರ ಪಕ್ಷ ಅಂದ್ರೆ ಜನತಾ ಪಕ್ಷಕ್ಕೆ ನೀವೆಲ್ಲಾ ಓಟ್ ಹಾಕ್ಬೇಕು’ ಎನ್ನುತ್ತಾ ಒಂದೇ ಉಸಿರಿನಲ್ಲಿ ಒಂದೆರಡು ಮಾತಾಡಿ ಮುಗಿಸಿದರು. ಇನ್ನೂ ಒಂದೆರಡು ಊರುಗಳಿಗೆ ಹೋಗುವ ಕಾರ್ಯಕ್ರಮವಿತ್ತು. ಇಬ್ಬರನ್ನೂ ಹತ್ತಿರದಿಂದ ನೋಡಲಾಗಲಿಲ್ಲ ಎಂಬ ಬೇಸರದೊಂದಿಗೆ ಕೊನೆಯ ಬಸ್ ಹಿಡಿದು ಊರು ಸೇರಿದೆವು.
ನಮಗೆಲ್ಲಾ ಅಚ್ಚರಿಯಾಗಿದ್ದು, ಒಂದೇ ಸಮನೆ ಪ್ರಚಾರಕ್ಕೆ ತೊಡಗಿಸಿಕೊಂಡಿದ್ದ ಶಂಕರ್ ಗೆ ಆಯಾಸವೆಂಬುದೇ ಆಗುವುದಿಲ್ಲವಾ ಎಂದು. ಅವರ ಡೈನಮಿಸಂ ಕಂಡು ಕರುಬುವಂತಾಯಿತು. ಚಂದ್ರು ಬದಲು ಶಂಕರ್ ಗೌರೀಬಿದನೂರಿನ ಅಭ್ಯರ್ಥಿಯಾಗಬಾರದಿತ್ತೇ ಎಂದೆಲ್ಲಾ ಅನಿಸಿತ್ತು. ಜನಪ್ರಿಯತೆಯ ಶಿಖರವೇರಿದ್ದ ಹೆಗಡೆ ೨-೩ ವರ್ಷಗಳಲ್ಲೇ ಜರ್ರನೇ ಜಾರಿದರು. ನಮಗೆಲ್ಲಾ ಭ್ರಮನಿರಸನ ವಾಗಿತ್ತು. ಇವರನ್ನು ನಂಬಿದ್ದ ಅನಂತ್-ಶಂಕರ್ ಬಗ್ಗೆ ಬೇಸರ ಮೂಡಿತ್ತು. ಶಂಕರ್ ಮನಃಪಟಲದಿಂದ ಸರಿಯಲಾರಂಭಿಸಿದರು. ಈತ ಸಿನಿಮಾಗೆ ಸರಿ ಎಂದೆನಿಸಿತು.
ಶಂಕರ್ ’ಆಕ್ಸಿಡೆಂಟ್’ ಮಾಡಿದರು. ಅವರ ಬಗ್ಗೆ ಮತ್ತೆ ಅಭಿಮಾನ ಮೂಡಲಾರಂಭಿಸಿತು. ಮಾದಕವ್ಯಸನಿ(ಅಶೋಕ್ ಮಂದಣ್ಣ) ಫುಟ್ ಪಾತ್ ಮೇಲೆ ಮಲಗಿದ್ದ ಕೂಲಿಯಾಳುಗಳ ಮೇಲೆ ಕಾರ್ ಹರಿಸುವ ದೃಶ್ಯದ ಭೀಭತ್ಸತೆ ಇನ್ನು ಮರೆಯಲಾಗಿಲ್ಲ. ಆ ದೃಶ್ಯವನ್ನು ಚಿತ್ರೀಕರಿಸಿದ ವಿಧಾನವನ್ನು ಶಂಕರ್ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಓದಿದಾಗ ಅಚ್ಚರಿಯಾಗಿತ್ತು. ಇಳಯರಾಜಾರ ಮಾಂತ್ರಿಕ ಹಿನ್ನಲೆ ಸಂಗೀತ ಚಿತ್ರದ ಘನತೆ ಹೆಚ್ಚಿಸಿತ್ತು. ಪತ್ರಕರ್ತ ನ ಪಾತ್ರದ ಶಂಕರ್ ಅಪಘಾತದ ಕಾರಣಕರ್ತರನ್ನು ಪತ್ತೆ ಹಚ್ಚುವ ಬಗ್ಗೆ ವಿವರಿಸುತ್ತಾ ಸಂಪಾದಕ (ಮೇಕಪ್ ನಾಣಿ???)ರಿಗೆ ’ಇದಕ್ಕೆಲ್ಲಾ ಸ್ವಲ್ಪ ಹಣಾ ಬೇಕ್ ಸಾರ್’ ಎನ್ನುತ್ತಿದಂತೇ ಚಕ್ಕನೇ ಬದಲಾಗುವ ದೃಶ್ಯದಲ್ಲಿ, ಟೇಬಲ್ ಮೇಲಿನ ಗಾಜಿನಹಲಗೆಯಲ್ಲಿ ಪೋಲೀಸ್ ಅಧಿಕಾರಿಯ ತಲೆಕೆಳಾಗಾದ ಪ್ರತಿಬಿಂಬ ಕಾಣುತ್ತದೆ. ಮರುಕ್ಷಣದಲ್ಲಿ ನೋಟಿನ ಕಂತೆಗಳು ಗಾಜಿನ ಹಲಗೆಯಮೇಲೆ ಬೀಳುತ್ತದೆ. ’ಇನ್ ನಿಮ್ ಕೆಲ್ಸ ಆಯ್ರು ಅಂತ ತಿಳ್ಕೋಳೀ’ ಎನ್ನುತ್ತಾ ಧಾಂಡಿಗ ಭೂಗತನೊಬ್ಬ ನೋಟಿನ ಕಂತೆಯೆತ್ತಿಕೊಂಡು ಹೊರಡುತ್ತಾನೆ.

ಪೋಲೀಸ್-ಭೂಗತರ ನಡುವಿನ ನಂಟನ್ನು ವರ್ಮಾಗೆ ಮೊದಲೇ ಬಹಳ ಸೂಕ್ಷ್ಮವಾಗಿ ಶಂಕರ್ ಚಿತ್ರಿಸಿದ್ದು ಹೀಗೆ. ’ಮಾಲ್ಗುಡಿ ಡೇಸ್’ ಬಗ್ಗೆ ಹೇಳುವ ಅಗತ್ಯವಿಲ್ಲ. ನಿಹಲಾನಿ-ಕೇತನ್ ಮೆಹ್ತಾಗಳು ಕೂಡಾ ಕರುಬಿದ್ದರೆ ಅಚ್ಚರಿಯಿಲ್ಲ. ದೂ.ದ ಬಗ್ಗೆ ನಮಗೆ ಇನ್ನೂ ಗೌರವವುಳಿದಿರುವುದು ’ಮಾಲ್ಗುಡಿ’ಯ ಸ್ವಾಮಿ ಹಾಗೂ ಮಿಠಾಯಿವಾಲಾರ ದಾಕ್ಷಿಣ್ಯದಿಂದ. ಮಾಲ್ಗುಡಿ ಮೂಲಕ ಸುರೇಶ್ ಅರಸ್ ಎಂಬ ತಂತ್ರಜ್ಞರನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿ ಅವರು ಮಣಿರತ್ನಂ ಕಣ್ಣಿಗೆ ಬೀಳಿಸಿದ್ದೇ ಶಂಕರ್. ಮಣಿರತ್ನಂಗೆ ಅಪಾರ ಹೆಸರು ತಂದುಕೊಟ್ಟ ರೋಜಾ, ದಳಪತಿ, ಬಾಂಬೆ ಚಿತ್ರಗಳ ಸಂಕಲನ ಸುರೇಶ್ ರದ್ದು. ಬಾಂಬೆ ಚಿತ್ರಕ್ಕೆ ಸುರೇಶ್ ರಾಷ್ಟ್ರಪ್ರಶಸ್ತಿ ಕೂಡಾ ಪಡೆದರು.
’ಒಂದಾನೊಂದು ಕಾಲದಲ್ಲಿ’ಯ ನಿದ್ದೆಯಿಂದ ಆಕಳಿಸುತ್ತ ಏಳುವ ಗಂಡುಗಲಿ, ಅವನ ಕತ್ತಿವರಸೆ, ಕೊನೆಯಲ್ಲಿ ಕೊಲೆಗೀಡಾಗಿ ಮಹಡಿಯ ಮೆಟ್ಟಿಲುಗಳಿಂದ ಉರುಳುತ್ತಾ ಕೆಳಬೀಳುವ ಆ ದೃಶ್ಯ…. ಶಂಕರ್ ತೀವ್ರ ಹುಮ್ಮಸ್ಸಿನಲ್ಲಿದ್ದ ದಿನಗಳಲ್ಲಿ ಮಾಡಿದ ಚಿತ್ರವದು. ಅಕಿರೋ ಕುರೊಸೊವಾ ನಿಂದ ಅಪಾರವಾಗಿ ಪ್ರಭಾವಿತರಾಗಿದ್ದ ಗಿರೀಶ್ ಕನ್ನಡದಲ್ಲಿ ಆ ರೀತಿಯ ಚಿತ್ರ ಮಾಡಲು ಶಂಕರ್ ರನ್ನು ಸಂಪರ್ಕಿಸಿದಾಗ, ಕತೆ ಕೇಳಿದ ಶಂಕರ್ ’ ಸಾರ್ ನನಗೆ ಈ ಚಿತ್ರದ ಅಸಿಸ್ಟೆಂಟ್ ಡೈರೆಕ್ಟರ್ ಆಗಲು ಆಸೆ’ ಎಂದರಂತೆ. ಶಂಕರ್ ಕಷ್ಟಪಡುವ ಕೆಲಸವನ್ನೇ ಅರಸುತ್ತಿದ್ದರು ಎಂಬುದಕ್ಕೆ ಇದು ಉದಾಹರಣೆ. ವಿನ್ಸೆಂಟ್ ಕಾಂಬಿ ಎಂಬ ಪ್ರಸಿದ್ದ ಚಿತ್ರವಿಮರ್ಶಕ ’ಒಂದಾನೊಂದು ಕಾಲದಲ್ಲಿ’ ಬಗ್ಗೆ ೮೦ರ ದಶಕದಲ್ಲಿಯೇ ’ನ್ಯೂಯಾರ್ಕ್ ಟೈಮ್ಸ್’ನಲ್ಲಿ ಸೊಗಸಾದ ವಿಮರ್ಶೆ ಬರೆದಿದ್ದರು. ಶಂಕರ್-ಸುಂದರಕೃಷ್ಣ ಅರಸ್-ಗಿರೀಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದರು.
’ಗೀತ’ ದ ಹಾಡುಗಳನ್ನು ಮರೆತವ ಕನ್ನಡಿಗನೇ ಅಲ್ಲ. ಆದರೂ ಶಂಕರ್ , ’ಹಣಬಲವೋ ಜನಬಲವೋ’ ’, ’ರುಸ್ತುಂ ಜೋಡಿ’, ’ಲಾರಿ ಡ್ರೈವರ್’, ಹೀಗೆ ಮರೆಯಲರ್ಹವಾದ ತೀರ ಮೀಡಿಯೋಕರ್ ಎನಿಸುವ ಚಿತ್ರಗಳನ್ನೊ ಮಾಡಿದರು. ಈ ವಿಚಾರದಲ್ಲಿ ಅನಂತ್ ವಾಸಿ. ’ಒಂದಾನೊಂದು ಕಾಲದಲ್ಲಿ’, ’ಆಕ್ಸಿಡೆಂಟ್’, ’ಮುನಿಯನ ಮಾದರಿ’..ತೀರ ಬೆರೆಳೆಣಿಕೆಯ ಚಿತ್ರಗಳು ಮಾತ್ರ ಸ್ಮರಣೀಯವೆನಿಸುತ್ತದೆ. ಶಂಕರ್ ರನ್ನು ಹೆಚ್ಚು ಹೆಸರುವಾಸಿಯಾಗಿ ,ಸ್ಮರಣೀಯರಾಗಿ ಮಾಡಿದ್ದು, ಯಾರನ್ನೇ ಆಗಲಿ, ಅತ್ಯಂತ ಮಾನವೀಯ ಸೆಲೆಯೊಳೆಗೆಳೆದು, ಅವರನ್ನು ಆತ್ಮೀಯರಾಗಿಸಿಕೊಂಡುಬಿಡುವ ಅವರ ನಿಶ್ಕಲ್ಮಷ ಮನೋಭಾವ. ರಾಜ್ಯೋತ್ಸವದ ಸಮಾರಂಭಕ್ಕೆ ಒಮ್ಮೆ ಕರೆಯಲು ಹೋದ ನಮ್ಮ ಸ್ನೇಹಿತರನ್ನು ತುಂಬಾ ಪ್ರೀತಿಯಿಂದ ಮಾತಾಡಿಸಿದ ಶಂಕರ್, ತಾವು ಬರಲಾಗುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಅಷ್ಟೇ ವಿನಯವಾಗಿ ಹೇಳಿದ್ದರು. ಉದಯ್ ಮರಕಿಣಿ ತರದ ಶೈಲಿಯಲ್ಲಿ. ’ನನ್ನ ತಮ್ಮ ಶಂಕರ’ದಲ್ಲಿ ಅನಂತ್, ಶಂಕರ್ ರನ್ನು ನಮ್ಮ ಹೃದಯದೊಳಗೆ ಹರಿಸಿಬಿಡುತ್ತಾರೆ. ತುಂಬಾ ಆರ್ದ್ರ, ಮನೊಜ್ಞ ಶೈಲಿಯ ಅಪರೂಪದ ಬರಹ. ಶಂಕರ್ ಹೀಗೆಲ್ಲಾ ಬರೆಯುವ ಆಸಾಮಿಯಂತೆ ತೋರುವುದಿಲ್ಲ. ಶಂಕರ್ ಅಪಘಾತಕ್ಕೀಡಾದ ಘಟನೆ ಬರೆಯುವಾಗ ಅನಂತ್ ನಮ್ಮೊಂದಿಗೆ ಮಾತನಾಡುತ್ತಿರುವಂತೆ ಅನಿಸುತ್ತದೆ.
ಶಂಕರ್ ಇಲ್ಲದ ಶೂನ್ಯ ತೀವ್ರ ವಿಷಾದ ತರಿಸುತ್ತದೆ. ಇಂದಿಗೂ ಚಾಲುಕ್ಯದಿಂದ ಶಿವಾನಂದ ವೃತ್ತದ ಕಡೆ ಹೋಗುವಾಗ ಅಪ್ರಯತ್ನಪೂರ್ವಕವಾಗಿ ’ಸಂಕೇತ್’ ಇದ್ದ ಜಾಗದೆಡೆ ಕಣ್ಣು ಹಾಯುತ್ತದೆ. ಒಂದು ರೀತಿಯ ಅನಾಥಪ್ರಜ್ಞೆ ಮೂಡುತ್ತದೆ. ಸಂಕೇತ್ ಹುತಾತ್ಮವಾಗಿಸಿದ್ದರಲ್ಲಿ ನಮ್ಮ ಚಿತ್ರರಂಗದವರ ಆತ್ಮವಂಚನೆಯದೇ ಸಿಂಹಪಾಲು.
ಅಪಾರ ಕನಸಿನ, ಎಲ್ಲರ ಕನಸುಗಳೂ ತನ್ನದೇ ಎಂದು ತಿಳಿದಿದ್ದ ಶಂಕರ್, ಎಲ್ಲರ ಕನಸಲ್ಲೂ ಅಭಿಷಿಕ್ತರಾಗಿ ತಮ್ಮದೇ ಕನಸುಗಳಿಲ್ಲದ ಅನಂತ್, ಇಬ್ಬರಿಗೂ ಧೃವಗಳ ಅಂತರ. ಆದರೂ ಇಬ್ಬರೂ ನಮ್ಮ ಹೆಮ್ಮೆಯ ’ಸಂಕೇತ’ ಗಳು. ಸಂಕೇತ್ ಪರಿವಾರದ ಮನದೀಪ್ ರಾಯ್ ಈ ಈರ್ವರ ಬಗ್ಗೆ ಒಮ್ಮೆ ಹೇಳಿದ್ದು ನೆನಪಾಗುತ್ತದೆ:
“ಅವನಿಲ್ಲ..ಬೇಜಾರು..ಇವನಿದ್ದಾ ನೆ..ಆದರೂ ಬೇಜಾರು”
ಬದುಕಿದ್ದರೆ ೬೦ ವರ್ಷ.

‍ಲೇಖಕರು Admin

October 28, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: