ವ್ಯಾಲೆಂಟೈನ್ಸ್ ಡೇ ಗೆ ಬೆಸ್ಟ್ ಉಡುಗೊರೆ ಆದೀತು..

ರವಿ ಅಜ್ಜೀಪುರ

ಆತ್ಮೀಯರೆ

ಎಲ್ಲಿಂದ ಶುರು ಮಾಡಬೇಕೋ ಗೊತ್ತಾಗ್ತಿಲ್ಲ. 1998ರಲ್ಲಿ ಅನಿಸುತ್ತೆ. ಮೆಜೆಸ್ಟಿಕ್ ನ ಅಂಗಳದಲ್ಲಿ ಇಳಿದವನಿಗೆ ದಿಕ್ಕೇ ತೋಚದಾಗಿತ್ತು. ಯಾರು ಗೆಳೆಯರು ನನಗೆ ಇಲ್ಲಿ? ಬೆಂಗಳೂರು ನನ್ನನ್ನ ಒಪ್ಪಿಕೊಳ್ಳುತ್ತಾ? ಇಲ್ಲಿ ನಾನು ಬದುಕು ಕಂಡುಕೊಳ್ಳುತ್ತೇನಾ ಅನ್ನೋ ಪ್ರಶ್ನೆ ಬೊಗಸೆಯಲ್ಲಿದ್ದವು.

ಗೆಳೆಯ ಶ್ರೀನಿವಾಸ ಮಾಸ್ ಕಮ್ಯೂನಿಕೇಷನ್ ಓದುತ್ತಾ ಸಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದ. ಅಲ್ಲಿಗೆ ಹೋದೆ. ನನ್ನ ಬಳಿ ಇದ್ದದ್ದು ಒಂದು ಟವಲ್. ಒಂದು ಬ್ಯಾಗು ಅಷ್ಟೆ. ಆ ಬ್ಯಾಗಿನಲ್ಲಿದ್ದದ್ದು ನಾನು ಬರೆದ ಕವಿತೆಗಳು. ಚಿತ್ರಗಳು. ಗೆಳೆಯನೊಬ್ಬ ಸಿಕ್ಕಿದಾಗ ಎಲ್ಲಾದ್ರೂ ಒಂದು ಕೆಲಸ ಕೊಡಿಸು ಮಾರಾಯ ಅಂದಿದ್ದೆ. ಏನು ಕೆಲಸ ಮಾಡ್ತೀಯ ಅಂದ. ಕವಿತೆ ಬರಿತೀನಿ ಅಂದಿದ್ದಕ್ಕೆ, ಅಲ್ಲಪ್ಪ ಹೊಟ್ಟೆಪಾಡಿಗೆ ಏನು ಕೆಲಸ ಮಾಡ್ತೀ ಹೇಳು ಅಂದ್ದಿದ್ದ. ಹಾಗಾದ್ರೆ ಕವಿತೆ ಬರೆಯೋದ್ರಿಂದ ಅನ್ನ ಹುಟ್ಟಲಾರದಾ? ಅನ್ನೋ ನನ್ನ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.

ಬೆಂಗಳೂರು ನನ್ನಂತಹವರ ಪಾಲಿಗೆ ಯಾವತ್ತೂ ಅಮ್ಮನ ಹಾಗೆ. ಯಾರನ್ನೂ ಅದು ದೂರ ತಳ್ಳುವುದಿಲ್ಲ. ಸೆಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಮೂರ್ನಾಲ್ಕು ದಿನ ಉಳಿದುಕೊಂಡಿದ್ದೆ. ಎಲ್ಲಿ ಇದ್ದ ಹಣವೂ ಖರ್ಚಾಗುತ್ತೋ ಅಂತ ಸಂಜೆ ಆದ್ರೆ ಎರಡೇ ಎರಡು ಇಡ್ಲಿ ತಿಂದುಕೊಂಡು ರಾತ್ರಿ ಇಡೀ ನಿದ್ರೆ ಮಾಡದೆ ಒದ್ದಾಡುತ್ತಿದ್ದೆ. ನನ್ನವ್ವ ಬಡತನವಿದ್ದರೂ ಎಂದೂ ಮಕ್ಕಳನ್ನ ಹಸಿವಿಗೆ ಕೆಡವಿದವಳಲ್ಲ. ತಾನು ತಿನ್ನದೆಯೇ ನಮಗೆ ತಿನ್ನಿಸಿದ ಜೀವ ಅದು. ಹಾಗಂತ ಹಸಿವಿಗೆ ಹೆದರಿ ಬೆಂಗಳೂರು ಬಿಟ್ಟು ಹೋಗುವುದಾ? ಏನೇ ಆದ್ರೂ ಸರಿ ಬೆಂಗಳೂರು ಬಿಟ್ಟು ಬರಕೂಡದು ಅಂತ ತೀರ್ಮಾನ ಮಾಡಿಕೊಂಡೇ ಬಂದಿದ್ದೆನಾದ್ದರಿಂದ ಕೆಲಸ ಹುಡುಕಿಕೊಂಡು ಅಲೆಯತೊಡಗಿದೆ.

ಆದ್ರೆ ತುಂಬಾ ದಿನ ಸೆಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಇರುವಹಾಗಿರಲಿಲ್ಲ. ಹಾಗಾಗಿ ನನ್ನ ಸಂಬಂಧಿಕರೊಬ್ಬರ ಮನೆಗೆ ಹೋದೆ. ಅದೂ ಅವ್ವ ಹೇಳಿದಳು ಅಂತ. ಆದ್ರೆ ಅವರು ಅನ್ನ ಹಾಕಿ ಹೀಯಾಳಿಸತೊಡಗಿದರು. ಅವತ್ತೊಂದಿನ ಅದೆ ತಟ್ಟೆಯ ಮುಂದೆ ಕುಳಿತು ಗಳಗಳನೆ ಅತ್ತುಬಿಟ್ಟಿದ್ದೆ. ಹಸಿವು ತಡೆದುಕೊಳ್ಳಬಹುದು…ಅಪಮಾನ ತಡೆದುಕೊಳ್ಳೋದಕ್ಕೆ ಆಗುವುದಿಲ್ಲ. ಅವತ್ತು ಬೆಳಿಗ್ಗೆ ಎದ್ದು ಅವರ ಮನೆಯಿಂದ ಹೊರಟವನು ಆ ಕಡೆ ತಿರುಗಿ ಕೂಡ ನೋಡಲಿಲ್ಲ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸುತ್ತಿದೆನೋ ನೆನಪಿಲ್ಲ. ಅಲೆದು ಅಲೆದು ಚಪ್ಪಲಿ ಸವೆದವು. ನಿರಾಶೆ ಆವರಿಸಿಕೊಳ್ಳತೊಡಗಿತು. ಹೀಗಿದ್ದಾಗಲೆ ಗೆಳೆಯ ವೀರಣ್ಣ ಕಮ್ಮಾರ ಒಂದ್ಸಲ ನವಕರ್ನಾಟಕಕ್ಕೆ ಹೋಗಿ ಕೇಳಿ ನೋಡು ಅಂದ. ಆಯ್ತು ಅಂತ ಹೋದೆ. ಅಲ್ಲಿ ನನ್ನ ಪಾಲಿಗೆ ದೇವರಂತೆ ಸಿಕ್ಕಿದವರು ಆರ್ ಎಸ್ ರಾಜಾರಾಮ್. ನನ್ನ ಕವಿತೆಗಳನ್ನ ನೋಡಿ… ಚಿತ್ರಗಳನ್ನ ನೋಡಿ… ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಅಂದ್ರು. ಹೋದೆ. ಕೆಲಸ ಕಲಿಸಿದರು…ಬರೀ ಕೆಲಸವಲ್ಲ ಕೆಲಸದಲ್ಲಿರಬೇಕಾದ ಡಿಸಿಪ್ಲೀನ್ ಕಲಿಸಿದವರೂ ಅವರೆ. ಅವರ ಪ್ರೀತಿಗೆ ನಾನು ಋಣಿ.

ಅದಾದ ಮೇಲೆ ವಿಜಯಕರ್ನಾಟಕಕ್ಕೆ ಹೋದೆ… ಉಷಾಕಿರಣಕ್ಕೆ ಬಂದೆ. ಅಲ್ಲಿಂದ ಸಿದಾ ಹೋಗಿದ್ದು ಓ ಮನಸೇಗೆ. ಅಲ್ಲಿಗೆ ನನ್ನ ಬೆಂಗಳೂರಿನ ಬದುಕು ಹದಕ್ಕೆ ಬಂದಿತ್ತು. ಬದುಕಬಲ್ಲೆ ಅನ್ನೋ ಕಾನ್ಫಿಡೆನ್ಸ್ ಬಗಲಲ್ಲಿತ್ತು.

ಈಗ ನನ್ನದೇ ಅಜ್ಜೀಪುರ ಪ್ರಕಾಶನ ಶುರು ಮಾಡುತ್ತಿದ್ದೇನೆ. ಅದರಲ್ಲಿ ನನ್ನ ಮೊದಲ ಪುಸ್ತಕ ಬಿಡುಗಡೆಗೆ ಸಿದ್ಧವಾಗ್ತಿದೆ. ಪುಸ್ತಕದ ಹೆಸರು ‘ನೆನಪಿರಲಿ, ಪ್ರೀತಿ ಕಾಮವಲ್ಲ’.

ದಿನಾಂಕ 12-2-2011ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆನಪಿರಲಿ ಪ್ರೀತಿ ಕಾಮವಲ್ಲ ಪುಸ್ತಕ ಬಿಡುಗಡೆ. ರವಿ ಬೆಳಗೆರೆ, ಗುರುಪ್ರಸಾದ್, ಶಶಿಕಲಾ ವೀರಯ್ಯಸ್ವಾಮಿ ಇರ್ತಾರೆ. ನೀವು ಬನ್ನಿ.

ಪುಸ್ತಕ ಬಹಳ ಮುದ್ದಾಗಿದೆ. ನನ್ನ ಪುಸ್ತಕ ಬಿಡುಗಡೆಯಾದ ಒಂದೇ ಒಂದು ದಿನಕ್ಕೆ ಪ್ರೇಮಿಗಳ ದಿನಾಚರಣೆ. ಈ ಪುಸ್ತಕ ಖಂಡಿತಾ ನಿಮ್ಮ ಸಂಗಾತಿಗೆ ಬೆಸ್ಟ್ ಉಡುಗೊರೆ ಆದೀತು.

ಶನಿವಾರ ಬೆಳಗ್ಗೆ 10.30 ಕ್ಕೆ ನಯನ ಸಭಾಗಂಣದಲ್ಲಿ ಭೇಟಿ ಆಗೋಣ.

ತಪ್ಪದೆ ಬನ್ನಿ

ಕನ್ನಡ- ಇಂಗ್ಲಿಶ್ ಯಾವುದೇ ಪುಸ್ತಕಗಳಿಗೆ ಭೇಟಿ ಕೊಡಿ

‘ಅವಧಿ- Flipkart’ ಸಹಯೋಗದ ಆನ್ಲೈನ್ ಮಳಿಗೆ -ಇಲ್ಲಿ ಕ್ಲಿಕ್ಕಿಸಿ

‍ಲೇಖಕರು avadhi

February 8, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. sharanu hampi

    ರವಿ ಅಜ್ಜಿಪುರ ಚೆಂದ ಬರಿತಾರೆ ಅಂತ ಗೊತ್ತಾದದ್ದು “ಓ ಮನಸೇ’ ಓದುವಷ್ಟರಲ್ಲಿ. ಅಕ್ಷರಗಳನ್ನು ಮುತ್ತು ಪೋಣಿಸಿದಂತೆ ಆಚೀಚೆ ಮಾಡದ ಬರೆಯಬಲ್ಲ ಕಲೆ ಅವರಿಗೆ ಲಭಿಸಿದೆ. ಅವರದೇ ಪ್ರಕಾಶನದಲ್ಲಿ ಮೊದಲ ಪುಸ್ತಕವಾಗಿ ಹೊರ ಬರುತ್ತಿರುವುದು ತುಂಬ ಸಂತಸ. ಜೊತೆಗೆ “ಅಸಲಿ ಪ್ರೇಮಿ’ಗಳಿಗೆ ಗಿಫ್ಟ್ ಕೊಡೇ ರೀತಿಯ ಹೊತ್ತಿಗೆ ನೀಡುತ್ತಿದ್ದಾರೆ. ಖಂಡಿತ ಸ್ವೀಕರಿಸೋಣ. ರವಿಗೆ ಪ್ರೀತಿಯ ಬುಗ್ಗೆ ಹರಿಸೋಣ. ಆಲ್ ದ ಬೆಸ್ಟ್ ಸರ್…
    -ಶರಣು ಹಂಪಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: