ನಾಡ ಹಬ್ಬ ಸಂಪ್ರದಾಯವನ್ನು ಮೀರಲಿ
– ಡಾ ಎಸ್ ಬಿ ಜೋಗುರ
ಚರಿತ್ರೆಯಲ್ಲಿ ಕೆಲ ರಾಜ ಮನೆತನಗಳು ತಮ್ಮ ಆಳ್ವಿಕೆಯ ವೈಭವವನ್ನು ಉತ್ಸವದ ರೂಪದಲ್ಲಿ, ಸತ್ ಸಂಫ್ರದಾಯದ ಹೆಸರಲ್ಲಿ ಅನೂಚಾನವಾಗಿ ಸಾಗಿಸಿಕೊಂಡು ಬಂದಿರುವದಿದೆ. ಅವುಗಳ ಸಾಲಲ್ಲಿ ಮೈಸೂರಿನ ಅರಸರು ಹುಟ್ಟುಹಾಕಿದ ದಸರಾ ಹಬ್ಬವೂ ಒಂದು. 1805 ರಲ್ಲಿ ಮೂರನೇ ಕೃಷ್ಣರಾಜ ಒಡೆಯರು ಆರಂಭಿಸಿದ ದಸರಾ ದರ್ಬಾರ್ ಇಂದಿಗೂ ನಿರಂತರವಾಗಿ ನಡೆದುಕೊಂಡು ಬಂದಿರುವದಿದೆ. ನಮ್ಮ ರಾಜ್ಯದ ನಾಡ ಹಬ್ಬವೆಂದೇ ಗುರುತಿಸಿಕೊಳ್ಳುವ ಮೈಸೂರು ದಸರಾ ಹಲವಾರು ಪರಿವರ್ತನೆಗಳೊಂದಿಗೆ ಒಂದು ಅರ್ಥಪೂರ್ಣವಾದ ಪರಂಪರೆಯಾಗಿ ಮುಂದುವರೆಯಬೇಕಿತ್ತು. ಆದರೆ ಕೇವಲ ಒಂದು ಸಂಪ್ರದಾಯವಾಗಿ ಅದು ಸಾಗಿ ಬಂದಿರುವದರ ನಡುವೆ ಕೆಲ ಚರ್ಚೆಗಳು ಅಗತ್ಯವೆನಿಸುತ್ತವೆ. ಅತಿ ಮುಖ್ಯವಾಗಿ ಅಂಬಾರಿಯ ಮೆರವಣಿಗೆ ಮತ್ತು ಅದನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲು ಬಳಕೆಯಾಗುವ ಆನೆಗಳು. ಯಾವ ಉತ್ಸವಗಳ ಗೊಡವೆಯೂ ಇಲ್ಲದೇ ತಮ್ಮ ಪಾಡಿಗೆ ತಾವು ಯತಾರ್ಥವಾಗಿರುವ ಆನೆಗಳು ಪ್ರತಿ ವರ್ಷ ಈ ದಸರಾ ಉತ್ಸವದ ಸಂದರ್ಭದಲ್ಲಿ ಅನುಭವಿಸಬಹುದಾದ ತೊಂದರೆಗಳನ್ನು ಗಮನಿಸಿದರೆ ನಿಜವಾಗಿಯೂ ಇಲ್ಲೊಂದು ಪರಿವರ್ತನೆಯ ಅಗತ್ಯವಿದೆ ಅನಿಸುವದಿಲ್ಲವೆ..?
ಹಿಂದಿನ ಬಾರಿ ದಸರೆಯ ಸಂದರ್ಭದಲ್ಲಿ ಶಿವಮೊಗ್ಗಾದ ಸಕ್ಕರೆಬೈಲಿನಲ್ಲಿಯ ಒಂದು ಆನೆಯನ್ನು ಅದರ ಪುಟ್ಟ ಮರಿಯಿಂದ ಅಗಲಿಸಿ, ಅಂಬಾರಿ ಮೆರವಣಿಗೆಗಾಗಿ ಕರೆತರಲಾಗಿತ್ತು. ಹೀಗೆ ಅವುಗಳನ್ನು ದಸರಾ ಉತ್ಸವದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಅಭ್ಯಂತರವಿಲ್ಲ ಆದರೆ ಅವುಗಳನ್ನು ತಿಂಗಳಾನುಗಟ್ಟಲೆ ಅಲ್ಲಿರಿಸಿಕೊಂಡು ತುಪಾಕಿ ಸದ್ದಿಗೆ ಸಜ್ಜುಗೊಳಿಸುವ ತಾಲೀಮು ನೀಡುವದು, ಅವುಗಳ ಮೇಲೆ 700 ಟನ್ ಭಾರವಿರುವ ಅಂಬಾರಿಯನ್ನು ಹೊರಿಸುವ ಮೂಲಕ ನಗರದ ಮುಖ್ಯ ಬೀದಿಗಳನ್ನು ಸುತ್ತಿಸುವ ಕ್ರಮ ಮಾತ್ರ ಬದಲಾವಣೆಯನ್ನು ಬಯಸುವಂಥದು ಹಾಗೆಯೇ ಅವುಗಳ ಶರೀರದ ತೂಕವನ್ನು ಹೆಚ್ಚಿಸಲು ಅವುಗಳಿಗೆ ನೀಡುವ ತರಾವರಿ ಆಹಾರದಿಂದಾಗಿ ಅವುಗಳ ಶರೀರದಲ್ಲಿ ಸಾಕಷ್ಟು ವೈಪರೀತ್ಯಗಳಾಗಿ ತೊಂದರೆಯೂ ಆಗಬಹುದು. ನಮ್ಮ ನಮ್ಮ ಸಡಗರ, ಸಂಭ್ರಮಗಳಿಗೆ ಆ ಮುಗ್ದ ಪ್ರಾಣಿಗಳಿಗೇಕೆ ಶಿಕ್ಷೆ..? ಸುಸೂತ್ರವಾಗಿ ಎಲ್ಲವೂ ನಡೆಯಿತು ಸರಿ, ತಪ್ಪಿ ಆನೆಗಳು ಗಲಾಟೆ ಎಬ್ಬಿಸಿದರೆ ಅವುಗಳನ್ನು ನಿಯಂತ್ರಿಸಲು ಸಾಧ್ಯವಿದೆಯೇ..? ಆಗ ಜರುಗಬಹುದಾದ ಅಪಾಯಗಳನ್ನು ಕಲ್ಪಿಸಿದರೂ ಭಯವಾಗುತ್ತದೆ.

ಯಾವುದೇ ಒಂದು ಸಾಂಸ್ಕೃತಿಕ ಉತ್ಸವ ಯತಾವತ್ತಾಗಿ ಒಂದು ಸಂಪ್ರದಾಯದ ರೂಪದಲ್ಲಿ ಉಳಿದು ಮುಂದುವರೆಯಬೇಕೆಂದೇನೂ ಇರುವದಿಲ್ಲ. ಅಲ್ಲಿ ಆಯಾ ಕಾಲಮಾನಕ್ಕೆ ತಕ್ಕ ಹಾಗೆ ಪರಿವರ್ತನೆಗಳನ್ನು ಕಾಣುವ ಜೊತೆಗೆ ಪಾರಂಪರಿಕವಾದ ರೀತಿ ನೀತಿಗಳಲ್ಲಿ ಅರ್ಥವತ್ತಾದ ಬದಲಾವಣೆ ತರುವಂತಿದ್ದರೆ ಅದನ್ನು ಸಮ್ಮತಿಸುವದು ಒಳಿತು. ದಸರಾ ನಾಡ ಹಬ್ಬವೆಂದು ಕರೆಯಿಸಿಕೊಳ್ಳುತ್ತಾದರೂ ಮೈಸೂರಿನ ಸಡಗರ, ಉತ್ಸವದ ಪ್ರಕ್ರಿಯೆಗಳು ರಾಜ್ಯದಾದ್ಯಂತ ಅದೇ ಪ್ರಮಾಣ ಮತ್ತು ಕ್ರಮದಲ್ಲಂತೂ ಜರುಗುವದಿಲ್ಲ. ಇನ್ನು ಸಾಂಪ್ರದಾಯಿಕವಾಗಿ ನಡೆಯುವ ಈ ನಾಡಹಬ್ಬದಲಿ ವರ್ಷದಿಂದ ವರ್ಷಕ್ಕೆ ತೀರಾ ಅಗತ್ಯವೆನಿಸುವ ಪರಿವರ್ತನೆಗಳನ್ನು ಕಂಡುಕೊಳ್ಳಲಾಗಿದೆಯೇ..? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ, ಅರ್ಥಪೂರ್ಣವೆನಿಸುವ ಆಚರಣೆಗಳನ್ನು ಮಾತ್ರ ಉಳಿಸಿಕೊಳ್ಳುವತ್ತ ದಿಸೆಯತ್ತ ಪ್ರಯಾತ್ನ ಮಾಡಬೇಕಿದೆ. ಪ್ರತಿವರ್ಷ ದಸರಾ ಉದ್ಘಾಟನೆ ಮಾಡುವವರು ನಾಡಿನ ಖ್ಯಾತನಾಮರೇ ಆದರೂ ಮಿಕ್ಕೆಲ್ಲಾ ಸಂದರ್ಭಗಳಲ್ಲಿ ಅತ್ಯಂತ ಪ್ರಗತಿಪರರಂತೆ ಮಾತನಾಡುವ, ಬರೆಯುವ ಇವರು ಉದ್ಘಾಟನೆ ಮತ್ತು ಉತ್ಸವದಲ್ಲಿ ಏಕೆ ಪ್ರಗತಿಪರತೆಯನ್ನು ನಿರೀಕ್ಷಿಸುವದಿಲ್ಲ..? ಬಹುಷ: ಜಿ.ಎಚ್ ನಾಯಕ ಮತ್ತು ಬರಗೂರು ರಾಮಚಂದ್ರಪ್ಪರನ್ನು ಹೊರತು ಪಡಿಸಿದರೆ ಮಿಕ್ಕ ಸಾಹಿತಿಗಳು ಅಷ್ಟಾಗಿ ಈ ನಾಡಹಬ್ಬದ ಸಾಂಪ್ರದಾಯಿಕತೆಯನ್ನು ಕುರಿತು ಪ್ರಶ್ನಿಸಿದಂತಿಲ್ಲ.
ಮಹಿಷಾಸುರನನ್ನು ಮರ್ದಿಸಿದ ನಿಮಿತ್ತ ಈ ಉತ್ಸವವನ್ನು ಆಚರಿಸುವ ಬಗ್ಗೆ ಕತೆ ಹೇಳಲಾಗುತ್ತದೆ. ಹತ್ತು ತಲೆಗಳನ್ನು ಸಂಹರಿಸಿದ ನಿಮಿತ್ತ ಇದಕ್ಕೆ ದಸರಾ ಎಂದು ಹೆಸರು ಬಂದಿದೆ ಎನ್ನುವ ಇನ್ನೊಂದು ಕತೆಯೂ ಇದೆ. ಈ ಕತೆ-ಉಪಕತೆಗಳು ಏನೇ ಇರಲಿ. ಇಲ್ಲಿ ಆನೆಗಳನ್ನು ಬಳಸಿಕೊಳ್ಳುವ ರೀತಿಯ ಬಗ್ಗೆ ಮಾತ್ರ ಒಂದು ಸಣ್ಣ ತಕರಾರನ್ನು ಎತ್ತಲೇಬೇಕು. ಇಷ್ಟೆಲ್ಲಾ ಅದ್ಧೂರಿಯಾಗಿ ಉತ್ಸವ ನಡೆಸುವವರಿಗೆ, ಖರ್ಚು ಮಾಡುವವರಿಗೆ ಅಂಬಾರಿಯನ್ನು ಮೆರವಣಿಗೆ ಮಾಡಲು ಒಂದು ರಥದ ರೂಪದಲ್ಲಿರುವ ಇಲ್ಲವೇ ವಾಹನ ರೂಪದ ಅಥವಾ ಆನೆಯ ತದ್ರೂಪವನ್ನೇ ಹೋಲುವಂಥಾ ವಾಹನವನ್ನೇ ನಿರ್ಮಿಸಿ ಅದರ ಮೇಲೆ ಆ ಅಂಬಾರಿಯನ್ನು ಮೆರವಣಿಗೆ ಮಾಡಬಹುದಾದ ಒಂದು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ಅಗತ್ಯವಿದೆ. ಯಾವ ಪ್ರಮಾದವನ್ನೂ ಮಾಡದೇ ಇರುವ ಈ ಆನೆಗಳಿಗೆ ಉತ್ಸವದ ಹೆಸರಲ್ಲಿ ಹಿಂಸೆ ನೀಡಿದಂತೆನಿಸುವದಿಲ್ಲವೇ..? ಅರಸು ಮನೆತನಗಳಿರುವಾಗ ನಡೆಯುತ್ತಿದ್ದ ಉತ್ಸವಗಳಿಗೂ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವೇ ಆಗಿರುವ ಅಧಿಕಾರ ಸತ್ತೆಯ ಮೂಲಕ ನಡೆಯುವ ಉತ್ಸವದ ನಡುವೆ ಯಾವುದೇ ಅಂತರಗಳೂ ಇಲ್ಲವೆಂದಾದರೆ ಜನಸಾಮಾನ್ಯನ ಹಿತದೃಷ್ಟಿಯ ಪ್ರಜಾಸತ್ತೆ ಯಾವ ರೀತಿಯಲ್ಲಿ ಅರ್ಥವಂತಿಕೆಯನ್ನು ಕಂಡುಕೊಳ್ಳಲು ಸಾಧ್ಯ.. ಗಿರೀಶ ಕಾರ್ನಾಡ ರಂಥವರು ಈ ಬಗೆಯ ಉತ್ಸವಗಳನ್ನು ಉದ್ಘಾಟಿಸುವ ಮುನ್ನ ಅಲ್ಲೊಂದು ಪ್ರಮುಖ ಸ್ಥಿತ್ಯಂತರದ ಅಗತ್ಯತೆಯನ್ನು ಗಮನಿಸದಿರುವದೇ ಬಹು ದೊಡ್ಡ ವ್ಯಂಗ್ಯ.
ದಸರಾ ಸಂದರ್ಭದಲ್ಲಿ ನಡೆಯುವ ವಿವಿಧ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನಷ್ಟು ಅರ್ಥವಂತಿಕೆಯನ್ನು ಕಂಡುಕೊಂಡು ಮುಂದುವರೆಯಲಿ. ಆದರೆ ಅಲ್ಲೂ ಕೂಡಾ ಪಾರದರ್ಶಕತೆಯ ಅವಶ್ಯಕತೆಯಿದೆ. ತರತರದ ಭಾವಬಿಂಬಗಳ ನೆರಳಲ್ಲಿ ವೇದಿಕೆಯನ್ನು ಕಲ್ಪಿಸುವ, ಗೋಷ್ಟಿಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಕ್ರಮವೇ ಅನೇಕ ನಾಡಿನ ಪ್ರತಿಭೆಗಳನ್ನು ವಂಚಿಸಿದಂತಾಗುತ್ತದೆ. ದಸರಾ ಸಮೀಪಿಸುತ್ತಿರುವಂತೆ ಹಿಂಡನಗಲಿಸಿ ಕರೆತರುವ ಆನೆಗಳು ಮತ್ತು ಅವುಗಳಿಗೆ ನೀಡುವ ತರಬೇತಿ ಮತ್ತು ಅವುಗಳ ಮೇಲೆ ಹೊರೆಸುವ ಅಪಾರ ಪ್ರಮಾಣದ ಭಾರ ಎಲ್ಲವೂ ಔಚಿತ್ಯದ ಭಾಗವಾಗಿ ಗುರುತಿಸಿಕೊಳ್ಳ್ಲುವಂಥವುಗಳಲ್ಲ.
ಅನೇಕ ಸಂದರ್ಭಗಳಲ್ಲಿ ಈ ಬಗೆಯ ಉತ್ಸವಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗುತ್ತದೆ. ಅಪಾರ ಪ್ರಮಾಣದ ಜನರು ಅಲ್ಲಿ ಸೇರುವ ಕಾರಣದಿಂದಲಾದರೂ ಆನೆಗಳು, ಅಂಬಾರಿ ಎಲ್ಲವೂ ಸಹ್ಯ ಎಂದು ಹೇಳಬಹುದು. ಅಮಾಥ್ರ್ಯ ಸೇನ್ ತಮ್ಮ ಕೃತಿ ‘ಡೆವಲಾಪಮೆಂಟ್ ಯಾಜ್ ಫ್ರೀಡಮ್’ ಎನ್ನುವ ಕೃತಿಯಲ್ಲಿ ಹೀಗೆ ಹೇಳುತ್ತಾರೆ. ‘ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆ ಎನ್ನುವುದು ನಿಜವಾಗಿಯೂ ಅಪಾಯಕಾರಿ ಯಾಕೆಂದರೆ ಅಭಿವೃದ್ಧಿಯ ಹೆಸರಲ್ಲಿ ಸಂಸ್ಕೃತಿಯ ನಾಶ ಸಾಮಾನ್ಯ. ಆದರೆ ಹಾಗೆ ಸಂಪ್ರದಾಯವಾದಿಗಳಾಗಿ ಬಡತನದಲ್ಲಿ ಉಳಿಯುವ ಬದಲಾಗಿ ಅಭಿವೃದ್ಧಿಯ ಶ್ರೀಮಂತ ಸುಖ ಮುಖ್ಯ.’ ಎನ್ನಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ನಿಟ್ಟಿನಲ್ಲಿ ಯಾವ ಬಗೆಯ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಕೂಡಾ ಅಷ್ಟೇ ಮುಖ್ಯವಾಗುತ್ತದೆ.
ಸೇನ್ ಹೇಳುವ ಹಾಗೆ ಸಂಪ್ರದಾಯ ಮತ್ತು ಬದಲಾವಣೆಯ ನಡುವಿನ ಆಯ್ಕೆ ಯಾವುದು ಎನ್ನುವುದು ಮುಖ್ಯವಾಗಬೇಕು. ಇಲ್ಲಿ ಸೇನ್ ಎರಡು ಮಾರ್ಗಗಳನ್ನು ಸೂಚಿಸುತ್ತಾರೆ. ಮತ್ತು ಅವೆರಡರ ನಡುವಿನ ಆಯ್ಕೆಯನ್ನು ಕುರಿತು ಆಲೋಚಿಸುತ್ತಾರೆ. ಮೊದಲನೆಯದು ಜನರೇ ಖುದ್ದಾಗಿ ಒಪ್ಪಿಕೊಂಡು ಸ್ವೀಕರಿಸಬಹುದಾದ ಸಂಪ್ರದಾಯ, ಎರಡನೆಯದು ಪ್ರಭುತ್ವ ಬಲವಂತವಾಗಿ ಜನರ ಮೇಲೆ ಹೇರಬಹುದಾದ ಸಂಪ್ರದಾಯ. ಮೊದಲನೆಯ ಪ್ರಕಾರವೇ ಆದರ್ಶಮಯವಾದುದು ಯಾಕೆಂದರೆ ಇಲ್ಲಿ ವ್ಯಕ್ತಿಯೊಬ್ಬನ ಆಯ್ಕೆ ಮತ್ತು ತಿರಸ್ಕಾರ ಎರಡಕ್ಕೂ ಬೆಲೆಯಿದೆ. ವ್ಯಕ್ತಿಯ ಆಯ್ಕೆ ಮತ್ತು ತಿರಸ್ಕಾರಕ್ಕೆ ಮುಕ್ತ ಅವಕಾಶ ಇರುವಾಗ ಮಾತ್ರ ಅಭಿವೃದ್ಧಿ ಮತ್ತು ಬದಲಾವಣೆ ಎರಡೂ ಸಾಧ್ಯ.ನಾಡಹಬ್ಬದ ಆಚರಣೆ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿ ಸೇನ್ ಹೆಳುವ ವ್ಯಕ್ತಿಗತ ಆಯ್ಕೆಯ ಅಭಿಪ್ರಾಯಕ್ಕೆ ಮನ್ನಣೆ ನೀಡುವದರಲ್ಲಿಯೇ ನಿಜವಾದ ಪ್ರಜಾಸತ್ತೆ ಸಾಧ್ಯವಾಗುತ್ತದೆ.






I agree with you.
We can use makeshift elephant instead of the live elephant. This festival is show off for politicians.
-p
This farce should be either suitably modified to reflect modern ethics or just be stopped, we have enough events already like Bangalore utsava, Mysore Utsava etc.
ನಾವೀಥರದ ಹಬ್ಬಗಳನ್ನು ಯಾವ ಕಾರಣಕ್ಕೂಸಂಭ್ರಮಿಸಬಾರದು,ಮಹಾನವಮಿ ದೀಪಾವಳಿ ವಗೈರೆ ಸಡಗರಗಳು ಬಲಿ ಹಿರಣ್ಯಕಷಿಪು ಮಹಿಷಾಸುರರೇ ಮೊದಲಾದ ವಿಚಾರವಾದಿಗಳು ಆದಿದ್ರಾವಿಡರ ಹನನಕ್ಕೆ ಸಂಬಂಧಿಸಿದವುಗಳು,