ಜಯಶ್ರೀ ಕಾಸರವಳ್ಳಿ
ಎಣಿಸಿದರೆ ಬರೋಬರಿ ಇಪ್ಪತ್ತು ವರುಷಗಳು. ಮದರಾಸು ಎಂಬ ಅಜ್ಞಾತವಾಸ ಮುಗಿಸಿ ಬಂದು ನಮ್ಮೂರ ತಂಪಿನಲ್ಲಿ ತಣ್ಣಗೆ ಕುಳಿತ್ತಿದ್ದೇನೆ. ಅಬ್ಬಾ! ಈಗ ಮುಗಿಸಿ ಬಂದ ನಿರಾಳತೆಯಲ್ಲಿ ಸಾವಕಾಶವಾಗಿ ಕುಳಿತ ನನಗೂ ಹೇಳಲಿಕ್ಕೆ ಸ್ವಲ್ಪ ಇದೆ ಅನ್ನಿಸುತ್ತಿದೆ. ಉರಿವ ಬಿಸಿಲಿನಲ್ಲಿ ಮಂಡೆ ಕಾದದ್ದೇ ಗೊತ್ತು. ಬರೀಲಿಕ್ಕೆ ಕೂತರೆ ಅಕ್ಷರಗಳೂ ಸುಟ್ಟು ತಲೆಯೊಳಗೆಲ್ಲಾ ಬೆಂಕಿ ಕಾರುವುದಷ್ಟೇ ಕಂಡಿದ್ದು. ಇಪ್ಪತ್ತು ವರುಷದ ನನ್ನ ಮದರಾಸು ಪಯಣದಲ್ಲಿ ಬೆಂಕಿಗೆ ಬೂದಿಯಾಗಿ ಹೋಗುವುದಕ್ಕೆ ಮುಂಚಿನ ಕೆಲ ಚೂರುಪಾರುಗಳು ಬಿಳಿ ಹಾಳೆಯಲ್ಲಿ ಮೂಡಿದ್ದವೆಂದೇ ಸಮಾಧಾನ. ಆದರೆ ಅದೆಷ್ಟು ಹತ್ತಿರದ, ಪರಿಚಿತ ಜನರೊಡನೆಯ ಒಡನಾಟವೇ ಕಳಚಿಹೋಗಿತ್ತು. ಮೊನ್ನೆ ವೈದೇಹಿಯವರು ಮನೆಗೆ ಬಂದಾಗ ಏನೇನೋ ನೆನಪು. ಸುಮಾರು ಮೂವತ್ತು ವರುಷದ ಪರಿಚಯದಲ್ಲಿ ಒಂದಿನಿತೂ ಬದಲಾಗದವರಂತೆ ಕಂಡರವರು. ಅದೇ ತೆಳು, ಅದೇ ಮುಖ, ಅದೇ ಮಂದಹಾಸ. ಹೇಗೆ ಕೆಲ ವ್ಯಕ್ತಿಗಳು ವರುಷಗಳು ಸಂದರೂ ಬದಲಾಗುವುದಿಲ್ಲವೆಂಬ ಆಶ್ಚರ್ಯದೊಂದಿಗೆ, ಮುಂಚಿನ ನನ್ನವೇ ಬೆರಗಿನೊಂದಿಗೆ ಮತ್ತೊಮ್ಮೆ ಸಮೀಪದಿಂದ ಅವರನ್ನು ಕಂಡೆ. ಒಂದು ನೆನಪು ಹೇಗೋ ಬಿಚ್ಚಿಕೊಂಡಿತ್ತು. ಅವರ ಮೊದಲ ಸಂಕಲನ ಬರುವುದಕ್ಕೂ ಮುಂಚಿನ ನೆನಪದು. ನನ್ನೂರು ಶಿವಮೊಗ್ಗವೆಂದು ಬಹಳ ಸಲ ಹೇಳಿ, ಹಲವು ಕಡೆ ಪ್ರಸ್ತಾಪಿಸಿಯಾಗಿದೆ. ನನ್ನ ಬಹು ಇಷ್ಟದ ಊರುಗಳಲ್ಲಿ ಶಿವಮೊಗ್ಗವೂ ಒಂದೆಂದು ನಾನು ಹೇಳಿಕೊಳ್ಳದಿದ್ದರೂ ಅದಂತೂ ನನ್ನ ನೆನಪಿನಲ್ಲಿ ಸದಾ ಭದ್ರ. ಎಂಥಾ ಬರಿಯಲಿಕ್ಕೆ ಕೂತರೂ ಸೀದಾ ಹೋಗುವುದು ಅಲ್ಲಿಗೇ. ಆನಂತರ ರಸ್ತೆಯಲ್ಲಿ ಡೀವಿಯೇಶನ್ ತೆಗೆದುಕೊಳ್ಳುವಾಗ, ಹೀಗೆ ಹೋದರೂ ಊರು ಮುಟ್ಟಿಯೇನು ಎಂಬಂತೆ ಹಣಿಕುವುದು ಮದರಾಸು; ಕಸವೆಲ್ಲಾ ಒಟ್ಟು ಮಾಡಿ ಜಾಡಿಸಿ ಮನೆಯೊಳ ನುಸುಳುವ ಮುಂಚೆ ಮಸುಕಾಗಿ ಕಾಣುವುದು ಬೆಂಗಳೂರು. ಪ್ರಾಯಶಃ ಇಲ್ಲಿ ಬದುಕು ಎಂದೂ ಹರಡಿಕೊಳ್ಳದೇ ಇದ್ದುದಕ್ಕೋ ಕತೆಯೊಳಗೂ ಬೆಂಗಳೂರು ನಿಷಿದ್ಧ.
ಸಾವಿರದ ಒಂಭೈನೂರ ಎಪ್ಪತ್ತನಾಲ್ಕು ಎಪ್ಪತ್ತೈದರ ಸುಮಾರು. ನನಗೆ ಸಂಗೀತದಲ್ಲಿ ಸ್ವಲ್ಪ ಆಸಕ್ತಿ ಇದ್ದಂತಹ ಕಾಲ. ತಾಳ ಕುಟ್ಟಿ, ಕುಟ್ಟಿ ಅರಚುವುದನ್ನ ಕಲಿತಿದ್ದೆ. ಆಗೆಲ್ಲಾ ಈಗಿನ ಹಾಗೆ ಸಂಗೀತ ಸಭಾಗಳೆಲ್ಲಾ ಇರದ ಕಾಲ. ಆದರೆ ನಮ್ಮ ಶಿವಮೊಗ್ಗದಲ್ಲಿ ಸಂಗೀತಾಸಕ್ತರಿದ್ದರು. ವರುಷಕ್ಕೆ ಒಮ್ಮೆ ಬರುವ ಗಣೇಶನ ಹಬ್ಬಕ್ಕೆ, ಹಲವು ಕಡೆ ಪೆಂಡಾಲ್ಗಳೆದ್ದು ಗಣೇಶನ ಕೂರಿಸಿ ನಾನಾ ತರಹದ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತಿದ್ದರೂ, ಶಾಸ್ತ್ರೀಯ ಸಂಗೀತ ಕಛೇರಿಗಳೇ ಹೆಚ್ಚು. ನಮ್ಮ ಮನೆಯಿಂದ ಮೂರು ಫಲರ್ಾಂಗ್ ಆಚೆ ದೊಡ್ಡ ಬ್ರಾಹ್ಮಣರ ಕೇರಿ, ಚಿಕ್ಕ ಬ್ರಾಹ್ಮಣರ ಕೇರಿ ಎಂದು ಕೇರಿಗೆ ಕೇರಿಯೇ ಬ್ರಾಹ್ಮಣರು ನೆಲೆಸಿರುವಂತಹ ರಸ್ತೆಗಳಿವೆ. ಶಿವಮೊಗ್ಗದ ಪ್ರತಿಷ್ಠಿತ ಮನೆತನದವರಾದ ಹಸೂಡಿ, ಶೀನರ್ಾಳಿ, ಮೇಳಿಗೆ, ಜಮ್ಮಿಟ್ಟಿಗೆ ಕುಟುಂಬ ವರ್ಗಗಳ ಬಂಧು ಬಳಗದವರ ದೊಡ್ಡ ದೊಡ್ಡ ಮನೆಗಳಿರುವ ಬೀದಿಯದು. ಈ ಮನೆಯ ಮಗಳು ಪಕ್ಕದ ಮನೆ ಸೊಸೆ, ಆ ಮನೆಯ ಹುಡುಗನಿಗೇ ಎದುರು ಮನೆಯ ಹುಡುಗಿ, ಕುಳಿತಲ್ಲೇ ಹೆಚ್ಚು ತಲೆ ಬಿಸಿಯಿರದ ಎಕ್ಸ್ಛೇಂಜ್. ಕಲೆಗೆ ಹೇಳಿದ ಬೀಡು.
ವರುಷಕ್ಕೆ ಒಮ್ಮೆ ಈ ಕುಟುಂಬಗಳ ಸಹಕಾರದಿಂದ ಬೀದಿಯ ಪ್ರಾರಂಭದಲ್ಲಿ ಒಂದು ಬೃಹತ್ ಪೆಂಡಾಲ್ ಎದ್ದು ವಿದ್ಯಾ ಗಣಪತಿಯನ್ನು ಪ್ರತಿಷ್ಠಾಪಿಸಿ, ಒಂದು ವಾರ ಪೂರ್ಣ ಭೂರೀ ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸುತ್ತಿದ್ದರು. ತಮಿಳುನಾಡಿನಿಂದ, ಆಂಧ್ರದಿಂದ ದೊಡ್ಡ ದೊಡ್ಡ ಕಲಾವಿದರನ್ನೇ ಕರೆಸುತ್ತಿದ್ದರು. ನಾನು ಹೇಳುತ್ತಿರುವುದು ನಲವತ್ತು ವರುಷದಷ್ಟು ಹಿಂದಿನ ಮಾತು. ಕಲಾವಿದರನ್ನು ಕರೆಸುವುದು, ಅವರಿಗೆ ಸೂಕ್ತ ವಸತಿ ಸೌಕರ್ಯ ಒದಗಿಸುವುದು ಸಣ್ಣ ಸಣ್ಣ ಊರುಗಳಲ್ಲಿ ಅಷ್ಟು ಸುಲಭವಲ್ಲ. ಎಷ್ಟೋ ಪ್ರಖ್ಯಾತ ಪಂಡಿತರು, ವಿದೂಷಿ, ವಿದ್ವಾನ್ರು ಬ್ರಾಹ್ಮಣ ಕೇರಿಯ ಶ್ರೀಮಂತ ಮನೆಗಳಲ್ಲಿ ಬಂದು ತಂಗುತ್ತಿದ್ದರು. ಆಗಿನ ಕಾಲದಲ್ಲಿ ಕಲೆಯ ಆರಾಧಕರು ವಿಶಾಲ ಮನೋಭಾವದವರಾಗಿದ್ದರಿಂದ ಅವರ್ಯಾರಿಗೂ ಕಲಾಸೇವೆ ಹೊರೆಯೆನಿಸುತ್ತಿರಲಿಲ್ಲ.

ಚಂಬೈ ವೈದ್ಯನಾಥ ಭಾಗವತರ್, ಶಮ್ಮಂಗುಡಿ ಶ್ರೀನಿವಾಸ್ ಅಯ್ಯರ್, ಮದುರೈ ಸೋಮಸುಂದರಂ, ಮಹಾರಾಜಪುರಂ ಸಂತಾನಂ, ಸಿಕ್ಕಿಲ್ ಸಿಸ್ಟರ್ಸ್, ಲಾಲ್ಗುಡಿ ಜಯರಾಮನ್, ಡಿ.ಕೆ. ಪಟ್ಟಂಮ್ಮಾಳ್, ಪರೂರ್ ಗೋಪಾಲಕೃಷ್ಣನ್, ಎಸ್. ಬಾಲಚಂದರ್, ಚಿಟ್ಟಿಬಾಬು, ಎಮ್. ಎಲ್. ವಸಂತ ಕುಮಾರಿ, ಎಮ್. ಎಸ್. ಸುಬ್ಬಲಕ್ಷ್ಮಿ…. ಹೀಗೆ ಅನೇಕ ಘಟಾನುಘಟಿಗಳನ್ನ ಕೇಳುವ ಸೌಭಾಗ್ಯ ನಮ್ಮದಾಗಿತ್ತು.
ನನ್ನ ಚಿಕ್ಕಮ್ಮನಿಗೆ, ಅಂದರೆ ನನ್ನ ತಾಯಿಯ ತಂಗಿಗೆ ಕನರ್ಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಒಲವು. ಮದುವೆಯ ನಂತರವೂ ಅವರು ಶಾಸ್ತ್ರೀಯ ಸಂಗೀತ ಕಲಿಯುವುದು ಬಿಟ್ಟಿರಲಿಲ್ಲ. ಅವರ ಊರು ಸಾಗರದ ಹತ್ತಿರದ ಮುಂಡಿಗೇಸರ. ಪ್ರತೀ ವರುಷ ಗಣೇಶನ ಹಬ್ಬದ ಸಮಯದಲ್ಲಿ ಸಂಗೀತ ಕಛೇರಿ ಕೇಳಲು ನಮ್ಮ ಮನೆಗೆ ಅವರು ಬರುತ್ತಿದ್ದರು. ನನ್ನ ಎರಡನೇ ಅಣ್ಣ ಸತೀಶನಿಗೆ ಸಂಗೀತದ ಹುಚ್ಚು. ಹೆಣ್ಣು ಮಕ್ಕಳಲ್ಲಿ ನನಗೆ ಸಂಗೀತ ಕೇಳುವ ಆಸಕ್ತಿಯಿತ್ತು. ಅವರು ನಮ್ಮ ಮನೆಗೆ ಬಂದರೆ, ವಿದ್ಯಾಗಣಪತಿಯವರು ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮ ನಮಗೇಯೇನೋ ಅನ್ನುವಷ್ಟು ಖುಷಿ ನನಗೆ. ಶಾಲೆಯಿಂದ ಬರುತ್ತಿದ್ದಂತೇ ಕಛೇರಿಗೆ ಹೊರಡುವ ಉತ್ಸಾಹ. ಆಗೆಲ್ಲಾ ಆರೆಂದರೆ ಆರಕ್ಕೆ, ಸಮಯಕ್ಕೆ ಸರಿಯಾಗಿ ಸಂಗೀತ ಕಛೇರಿ. ಗಂಡಸರು ಒಂದು ಕಡೆ, ಹೆಂಗಸರು ಒಂದು ಕಡೆ ಕೂರುವ ಪದ್ಧತಿ. ನಾನೂ ನನ್ನ ಚಿಕ್ಕಮ್ಮ ತೀರಾ ಮುಂದೂ ಅಲ್ಲ, ತೀರಾ ಹಿಂದೂ ಅಲ್ಲ, ಮಧ್ಯದಲ್ಲಿ ಹೋಗಿ ಕೂರುತ್ತಿದ್ದೆವು.
ನನ್ನ ಚಿಕ್ಕಮ್ಮ ಮಹಾ ಸ್ಟ್ರಿಕ್ಟ್. ಸಂಗೀತ ಕೇಳುವಾಗ ಚಟ್ಟೇಮಟ್ಟೆ ಹಾಕಿ ಕುಳಿತೇ ಕೇಳಬೇಕು, ಯಾವ ಕಾರಣಕ್ಕೂ ಮಡಚಿದ ಕಾಲನ್ನ ಮೇಲೆ ಮೇಲೆ ಬದಲಾಯಿಸಬಾರದು, ಸಂಗೀತ ಕೇಳುವುದರ ಜೊತೆಗೆ ತಾಳ ಹಾಕಬೇಕು, ಯಾವ ಕಾರಣಕ್ಕೂ ಅದು ತಪ್ಪಕೂಡದು; ನಾನು ಬೇರೆ ಆಗಷ್ಟೇ ಹಾಡಲು ಕಲಿತ್ತಿದ್ದೆನಲ್ಲಾ, ಕುಟ್ಟಿ ಕುಟ್ಟಿ ತಾಳ ಹಾಕುವುದನ್ನು ಚೆನ್ನಾಗಿ ಕಲಿತಿದ್ದೆ. ಕಲಿತ ಪಾಠವನ್ನು ಎಲ್ಲಾದರೂ ಒಪ್ಪಿಸಬೇಕಲ್ಲಾ, ಹಾಗಾಗಿ, ಸಂಗೀತಗಾರರು ಬಾಯಿ ತೆರೆಯುತ್ತಿದ್ದಂತೇ ಅಧ್ವಾನವಾಗಿ ತಾಳ ತಟ್ಟುತ್ತಾ, ಜೋರಾಗಿ ಬಡಿಯುವುದಕ್ಕೆ ಮೊದಲಿಟ್ಟುಕೊಳ್ಳುತ್ತಿದ್ದೆ. ನನ್ನ ಚಿಕ್ಕಮ್ಮ ಓರೆಗಣ್ಣಿಂದ ನನ್ನನ್ನು ನೋಡುತ್ತಿದ್ದರು; ತಾಳ ನಿಲ್ಲದಾಗ, ನೇರವಾಗೇ ನೋಡುತ್ತಿದ್ದರು. ನಾ ತಾಳ ಕುಟ್ಟುವ ಪರಿಗೆ ಅವರ ಮೆಚ್ಚಿಗೆ ನೋಟವೆಂದು ಭ್ರಮಿಸಿ, ಹುರುಪಿನಿಂದ ಮತ್ತಷ್ಟೋ ರಭಸದಲ್ಲಿ ತಟ್ಟುತ್ತಿದ್ದೆ. ಕೆಲಮೊಮ್ಮೆ ತಟ್ಟಿ, ತಟ್ಟಿ ಮಾರನೇ ದಿನ ನನ್ನ ತೊಡೆಯೆಲ್ಲಾ ನೋಯುತ್ತಿತ್ತು. ಹಾಗೆ ನೋಡುವ ನನ್ನ ಚಿಕ್ಕಮ್ಮ ಕೆಲಮೊಮ್ಮೆ ಕಣ್ಣು ಬಿಟ್ಟು ಬೆದರಿಸುವುದೂ ಇತ್ತು; ತಾಳವನ್ನೇ ಕಣ್ಣಲ್ಲಿ ತೋರಿಸಿ, ಹುಬ್ಬು ಏರಿಸುತ್ತಿದ್ದರು. ಆಗಲೂ ಒಂದೂ ಅರ್ಥವಾಗದ ನನ್ನ ಪೆದ್ದು ತಲೆಗೆ, ಸ್ವಲ್ಪ ಮೆಲ್ಲ ತಟ್ಟೆಂದು ಹೇಳುತ್ತಿರಬಹುದೆಂದು ತಿಳಿದು ತಾಳ ಮೆದುವಾಗಿ ಹಾಕಲು ಶುರು ಮಾಡುತ್ತಿದ್ದೆ. ಏಕೆಂದರೆ ಅಷ್ಟು ಹೊತ್ತಿಗೆ ನನಗೂ ಕೈ ಉರಿಯಲು ಆರಂಭವಾಗಿರುತ್ತಿತ್ತಲ್ಲಾ!
ಹಾಡು ಕೇಳುವಾಗ ಬೋರಾಗಿ ಆಕಳಿಸಿದರೂ ಅವರು ತಿರುಗಿ ನೋಡಿಯೇ ಸಿದ್ಧ. ಇನ್ನು ಕೆಲವರ ಸಂಗೀತ ಬೇಜಾರಾಗಿ ಮಧ್ಯದಲ್ಲಿ ಎದ್ದು ಮನೆಗೆ ಹೊರಡುವ ಮಾತೇ ಇಲ್ಲ. ಒಂದು ಸಲ ಸಂಗೀತ ಕಛೇರಿಯ ಹಾಲ್ ಪ್ರವೇಶಿಸಿದ ನಂತರ ಕಡೆಯವರೆಗೂ ಅಂಡೂರಿ ಕುಳಿತಿರುವುದೇ. ಆ ಕಡೆ ಈ ಕಡೆ ವಿನಾಕಾರಣ ಕಣ್ಣು ಪಿಳಿಪಿಳಿಸುವ ಹಾಗಿಲ್ಲ. ಮಧ್ಯ ಎದ್ದು ಹೋಗಿ ಅವಮರ್ಯಾದೆ ಮಾಡಬಾರದು, ಕಲಾವಿದರಿಗೆ ಮರ್ಯಾದೆ ಕೊಡಬೇಕು – ನಾನು ನನ್ನ ಚಿಕ್ಕಮ್ಮಳಂತೆ ಸಂಗೀತವನ್ನು ನನ್ನ ಜೀವನಕ್ಕೆ ಅಳವಡಿಸಿಕೊಳ್ಳದಿದ್ದರೂ, ಚಿಕ್ಕಂದಿನಲ್ಲಿ ಅವರು ಬಿತ್ತಿದ ಆ ಶಿಸ್ತು ಮಾತ್ರ ಈಗಲೂ ಮಂತ್ರದಂತೆ ನನ್ನ ಬದುಕಿನಲ್ಲಿ ಉಳಿದಿದೆ.
ಒಮ್ಮೆ ಒಂದು ಸಂಗೀತ ಕಛೇರಿ ಶುರುವಾಗಿ ಸ್ವಲ್ಪ ಹೊತ್ತಿನ ನಂತರ ಒಬ್ಬ ಸಣಕಲು ಹೆಂಗಸು ಎರಡು ಚಿಕ್ಕ ಹೆಣ್ಣು ಮಕ್ಕಳೊಡನೆ ಬಂದು, ನನ್ನ ಮಗ್ಗುಲಲ್ಲಿ ಕುಳಿತರು. ಎರಡೂ ಮಕ್ಕಳೂ ಕೊಂಯ್ಯ ಪಂಯ್ಯ ಮಾಡುತ್ತಲೇ ಇದ್ದವು. ಅವರು ಬಂದು ಕೂರಲಿಕ್ಕೆ ಇಲ್ಲಾ, ಒಂದು ಮಗು ಮಲಗಬೇಕೆಂದು ಹಠ ಹಿಡಿಯಿತು. ಅವರು ಆ ಮಗುವನ್ನು ತೊಡೆ ಮೇಲೆ ಹಾಕಿ ತಟ್ಟುತ್ತಿದ್ದಂತೇ, ಇನ್ನೊಂದು ಮಗು ವರಾತ ಹಿಡಿಯಿತು. ಇದ್ದಕಿದ್ದಂತೆ ಅವರ ಅಕ್ಕಪಕ್ಕದವರೆಲ್ಲಾ ಮಾತಿಗೆ ಶುರುವಿಟ್ಟರು. ಮಗುವನ್ನು ಮಾತನಾಡಿಸಿ ಸಮಾಧಾನಿಸುವರು ಕೆಲವರು, ಅವರೊಂದಿಗೇ ಮಾತಿಗೆ ಹಚ್ಚಿಕೊಂಡವರು ಇನ್ನ ಕೆಲವರು. ಅವರ ಪರಿಚಯ ನನಗೆ ಇತ್ತು. ಮಾತನಾಡಿ ಅಲ್ಲ, ನೋಡಿ. ಅವರ ಪತಿ ವಿದ್ಯಾ ಗಣಪತಿ ಕಮಿಟಿಯಲ್ಲಿ ಸಕ್ರಿಯವಾಗಿದ್ದವರು. ಪ್ರತೀ ಕಾರ್ಯಕ್ರಮದ ಮುಕ್ತಾಯದಲ್ಲಿ ಸಮಾರೋಪ ಭಾಷಣ ಮಾಡಿ, ಬಂದಂಥ ಅತಿಥಿಗಳಿಗೆಲ್ಲಾ ವಂದನಾರ್ಪಣೆ ಸಲ್ಲಿಸುತ್ತಿದ್ದದ್ದು ಸಾಮಾನ್ಯವಾಗಿ ಅವರೇ.
ಆಗಷ್ಟೇ ಹೈಸ್ಕೂಲ್ ಮೆಟ್ಟಿಲು ಹತ್ತಿದ್ದ ನನಗೆ ಕೈ ತಟ್ಟೀ ತಟ್ಟೀ ಸಂಗೀತ ಬೋರ್ ಅನ್ನಿಸತೊಡಗಿದಂತಹ ಕಾಲ. ಹೇಗೆಂದರೂ ಮಲೆನಾಡಿನ ನಮ್ಮ ಮನೆಗಳಲ್ಲಿ ಅಟ್ಟ ಖಾಲಿಯೇ ಇತ್ತು; ಅಷ್ಟರೊಳಗಾಗಲೇ ನನ್ನ ಸಂಗೀತ ಆಸೆಯಿಂದ ಮೆಟ್ಟಿಲು ನೋಡುತ್ತಾ ಅಟ್ಟವೇರಲು ಸನ್ನದ್ಧವಾಗಿತ್ತು. ಅಲ್ಲೇ ಮೂಲೆಯ ಬೀರುವಿನಲ್ಲಿದ್ದ ನಮ್ಮಪ್ಪನ ಪುಸ್ತಕದ ಪ್ರಪಂಚ ಕೈ ಬೀಸಿ ಕರೆಯುತ್ತಿತ್ತು. ನನಗೂ ಒಂದಿಷ್ಟು ಸಾಹಿತ್ಯದಲ್ಲಿ ಆಸಕ್ತಿ ಮೂಡತೊಡಗಿತ್ತು. ಅದಾಗಲೇ ಕಾರಂತರ ಎಲ್ಲಾ ಕಾದಂಬರಿ ಓದಿದ್ದೆ. ಚಿತ್ತಾಲರ ಕತೆಗಳನ್ನು ಓದಿ ಅವರ ಪ್ರಭಾವದೊಳಗೇ ಸುತ್ತುತ್ತಿದ್ದೆ. ಚಿತ್ತಾಲರಿಗೆ ಮುಸ್ಸಂಜೆ ಇಷ್ಟವಾದರೆ, ನನಗೂ; ಅವರಿಗೆ ಹನೇಹಳ್ಳಿಯಾದರೆ, ನನಗೆ ಕೇಸಲೂರು. ಅಟ್ಟ ಏರಿ ಕೂರುವುದು ನಾಲ್ಕು ಸಾಲು ಬರೆಯುವುದು ಪಕ್ಕಾಸಿಯಲ್ಲಿ ಗುಟ್ಟಾಗಿ ಸಿಕ್ಕಿಸಿ ಕೆಳ ಬರುವುದು, ಮಾರನೇ ದಿನ ನೋಡಿದರೆ ಅದನ್ನ ಇಲಿ ಕಚ್ಚಿಕೊಂಡು ಹೋಗಿರೋದು, ಹಿಂದಿನ ದಿನ ಏನು ಬರೆದಿದ್ದೆ ನೆನಪಿರದೇ ತಲೆ ಕೆರೆದೂ ಕೆರೆದೂ, ಕತ್ತಲ ಕಪ್ಪು ಅಟ್ಟದಲ್ಲಿ ಹುಚ್ಚಳಂತೆ ಕೂರುವುದು -‘most aspiring story writer’ ಆಗಬೇಕೂಂತ ಹಗಲೂ ರಾತ್ರಿ ಹಲುಬುತ್ತಿದ್ದಂತಹ ಕಾಲವದು. ಸಿಕ್ಕಿದೆಲ್ಲಾ ಓದುವುದು, ಮುಸ್ಸಂಜೆಯಲ್ಲಿ ಅದರ ರಿಪ್ಲಿಕಾ ತೆಗೆದು ಅಟ್ಟದ ಪಕ್ಕಾಸಿಗೆ ಸಿಗಿಸಿ ಬರೋದು, ರೈಟರ್ ಆದಂತೇ ಮನಸ್ಸಿನಲ್ಲಿ ಮಂಡಿಗೆ ತಿನ್ನವುದು. ಇದಲ್ಲಾ ವಾಸ್ತವ ಎಂದು ಅರಿಯಬೇಕಾದರೆ ಮದುವೆಯಾಗಿ ಗಂಡನ ಮನೆಗೆ ಬರಬೇಕಾಯಿತು.
ನನ್ನ ಚಿಕ್ಕಮ್ಮನಿಗೆ ಅವತ್ತು ಸಂಗೀತವನ್ನು ತಲ್ಲೀನರಾಗಿ ಅಲೈಸಲು ಬಹಳ ತೊಂದರೆಯಾಯಿತು. ಅವರು ಒಮ್ಮೆ ಸುಮ್ಮನೇ ನನ್ನ ಪಕ್ಕದಲ್ಲಿದ್ದವರನ್ನು ಇಣಿಕಿ ನೋಡಿದರು, ಮಾತು ನಿಲ್ಲದಾಗ ಬಗ್ಗಿ ಹಣಿಕಿ ನೋಡಿದರು, ನಗೆ ಬುಗ್ಗೆ ಎದ್ದಾಗ ತಲೆ ತಿರುಗಿಸಿ ಅವರನ್ನೇ ದೃಷ್ಟಿಸಿ ನೋಡಿದರು.
ನಾನು ತಮಾಷೆ ನೋಡುತ್ತಾ ಕೈ ಕಟ್ಟಿ ತಣ್ಣಗೆ ಕುಳಿತ್ತಿದ್ದೆ. ಆಗಲೇ ಸಾಹಿತ್ಯದ ಒಲವು ಮೂಡಿದ್ದರಿಂದ ಈ ಮಗ್ಗುಲಿಗೇ ಕಣ್ಣು ಚಲ್ಲಿ ಕುಳಿತಿದ್ದೆ. ನನಗೆ ಒಂದು ತರ ಬೆರಗು ಮತ್ತು ವಿಸ್ಮಯ. ನನ್ನ ಸೊದರತ್ತೆಯ ಮಗಳು ಸಿರಿಯಕ್ಕನನ್ನ ಚಿಕ್ಕ ಬ್ರಾಹ್ಮಣರ ಕೇರಿಗೆ ಕೊಟ್ಟಿದ್ದು. ವಿದ್ಯಾ ಗಣಪತಿ ಕಾರ್ಯ ಕಲಾಪದಲ್ಲಿ ಅವಳ ಗಂಡನೂ ಇದ್ದರು. ನನ್ನ ಮಗ್ಗುಲಲ್ಲಿ ಕುಳಿತವರ ಗಂಡ ಮತ್ತು ಅವಳ ಗಂಡ ತುಂಬಾ ಆತ್ಮೀಯರಾಗಿದ್ದರಿಂದ, ಅವರ ಹೆಸರು ಶ್ರೀನಿವಾಸ ಮೂತರ್ಿ ಅನ್ನುವುದೂ ಗೊತ್ತಿತ್ತು; ಅವರ ಹೆಂಡತಿಯಾದ ಮಗ್ಗುಲಲ್ಲಿ ಕುಳಿತವರು, ‘ನಿಂಗೆ ಗೊತ್ತುಂಟಾ ಅವಳ್ ಕತೆ ಬರೀತಾಳೆ!’ ಅಂತಾ ಸಿರಿಯಕ್ಕ ಹೇಳಿದ್ದರಿಂದ ಅವರ ಒಂದೆರಡು ಕತೆ ಓದಿದ್ದೆಯಾದ್ದರಿಂದ, ಓದಿ ಆಗಲೇ ಮೆಚ್ಚಿದ್ದರಿಂದ ನಾನು ಅವತ್ತಿನ ಸಂಗೀತ ಮರೆತು ಅವರನ್ನೇ ಬೆರಗಿನಿಂದ ನಿಟ್ಟಿಸುತ್ತಿದ್ದೆ – ಅವರು ಮಗುವನ್ನು ತಟ್ಟುವ ರೀತಿಯಲ್ಲಿಯಾಗಲೀ, ಅಕ್ಕಪಕ್ಕದವರೊಡನೆ ಸಂಭಾಷಿಸುವಾಗಲಾಗಲೀ, ಪುಟ್ಟ ಜಡೆ, ಪುಟ್ಟ ಮೈಕಟ್ಟಿನಲ್ಲಿಯಾಗಲೀ – ಆ ಕತೆಗಾರ್ತಿ ಎಲ್ಲಿ ಅಡಗಿ ಕುಳಿತಿದ್ದಾಳೆಂದೇ ತಿಳಿಯದೆ ಪೆಚ್ಚುಪೆಚ್ಚಾಗಿ ಕಣ್ಣು ಪಿಳಿ ಪಿಳಿ ಮಾಡುತ್ತಾ……

ಮತ್ತೆ ನನ್ನ ಮತ್ತೊಂದು ಪಕ್ಕ ಕುಳಿತ ನನ್ನ ಚಿಕ್ಕಮ್ಮನಾದರೂ ಯಾರು ಅಂತೀರಾ? ವೈದೇಹಿಯವರ ಅಷ್ಟೂ ಪುಸ್ತಕಗಳನ್ನು ಪ್ರಕಟಿಸಿದ ಅಕ್ಷರ ಪ್ರಕಾಶನಾಲಯವನ್ನು ಮತ್ತು ನಿನಾಸಂನನ್ನು ಹುಟ್ಟುಹಾಕಿದ ಕೆ.ವಿ. ಸುಬ್ಬಣ್ಣರ ಹೆಂಡತಿ ಹಾಗೂ ಕೆ. ವಿ. ಅಕ್ಷರನ ತಾಯಿ -ಶೈಲಜಕ್ಕ!
ಅವತ್ತು ನಾವು ಮೂವರೂ, ಯಾರ ಪರಿಚಯ ಯಾರಿಗೂ ಇರದೆ, ಒಂದು ಸರಳ ರೇಖೆ ಎಳೆದಂತೆ ಒಬ್ಬರ ಮಗ್ಗುಲನ್ನು ಒಬ್ಬರು ಆಯ್ದುಕೊಂಡಂತೆ, ಎಷ್ಟು ಮುಗ್ಧರಾಗಿ ಕುಳಿತಿದ್ದೆವಲ್ಲಾ!







ವೈದೇಹಿ….!
🙂 Jayashree avare, nimmannomme bheti agabeku…
ಆಪ್ತ ಬರಹ. ನೀವು ಎದುರಿಗೆ ಕುಳಿತು ಮಾತಾಡಿದಂತಹ ಓದಿನ ಅನುಭವ.