ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ವೇಣು ಎಂಬ ದುರ್ಗದ ಹುಡುಗ’ – ಜೋಗಿ ಬರೀತಾರೆ

ಸುಮಾರು ಆರುನೂರಾ ಐವತ್ತು ಪುಟಗಳ ಪುಸ್ತಕ. ಬಾಲ್ಯ, ಯೌವನ, ನಡುವಯಸ್ಸು ಮತ್ತು ಇಳಿವಯಸ್ಸಿನ ಪ್ರಸಂಗಗಳು. ಅನುಭವಿಸಿದ ನೋವು, ಅವಮಾನಗಳ ಚಿತ್ರಣ. ಅದರ ಜತೆಗೇ ಹೇಗೆ ತನ್ನ ಊರು, ತನ್ನ ಸುತ್ತಲಿನ ಮಂದಿ ತನ್ನನ್ನು ಗುರುತಿಸುತ್ತಾರೆ ಎಂಬುದನ್ನು ಪ್ರಕಟಪಡಿಸುತ್ತಾ ಹೋಗುವ ರೀತಿ. ಅಲ್ಲಲ್ಲಿ ಒಂಚೂರು ಹುಳಿ, ಅಲ್ಲಲ್ಲಿ ಸಂಭ್ರಮ. ಕೆಲವೊಮ್ಮೆ ಒಂಚೂರು ಆತ್ಮರತಿ, ಅಸಹನೆ ಮತ್ತು ಯಾತನೆ.
ಅವರಿಗೆ ಒಮ್ಮೆ ಅ.ರಾ.ಸೇ ಎದುರಾಗುತ್ತಾರೆ. ಪ್ರೀತಿಯಿಂದ ಮಾತಾಡಿಸಿ ಕಾಫಿಗೆ ಕರೆಯುತ್ತಾರೆ. ಕಾಫಿ ಕುಡಿಯುತ್ತಾ ಮಾತುಕತೆ ಆಗುತ್ತದೆ. ಅರಾಸೇ ಜೊತೆಗೆ ಈಗ ಪ್ರಸಿದ್ಧ ಪತ್ರಕರ್ತರಾಗಿರುವ ಡಿ. ಉಮಾಪತಿಯೂ ಇರುತ್ತಾರೆ. ಮಾತುಕತೆ ಹೀಗೆ ನಡೆಯುತ್ತದೆ. ಅರಾಸೇ ಹೇಳುತ್ತಾರೆ.ನೀವೆಲ್ಲ ಹೆಚ್ಚು ಬರೀತೀರಾ. ಬರೆದದ್ದೆಲ್ಲ ಸಾಹಿತ್ಯ ಅಲ್ಲ. ಪತ್ರಿಕೆಗಳಲ್ಲಿ ಪ್ರಕಟ ಆದಾಕ್ಷಣ ಅವನು ಸಾಹಿತಿ ಆಗೋದಿಲ್ಲ. ಅಧ್ಯಯನ ಮಾಡಬೇಕ್ರೀನಿಮಗೆ ಕಾಮು ಗೊತ್ತಾ, ಕಾಫ್ಕಾ, ಸಾರ್ತ್ರೆ, ಲೆನಿನ್ ಗೊತ್ತಾ? ಲೋಹಿಯಾ ಗೊತ್ತಾ?ವರು ಇಲ್ಲ ಎನ್ನುತ್ತಾರೆ. ಮತ್ತೆ ಪ್ರಶ್ನೆ ಬರುತ್ತದೆ. ಹೋಗ್ಲಿ ಬೇಂದ್ರೆ, ಅಡಿಗ, ಕುವೆಂಪು, ಭೈರಪ್ಪ, ಚಿತ್ತಾಲ? ಕಾರಂತರನ್ನು ಓದಿಕೊಂಡಿದ್ದೀರೇನ್ರೀ?ಎಂದು ಮರುಪ್ರಶ್ನೆ ಹಾಕುತ್ತಾರೆ.
” ಓದ್ಕೋತಿದ್ದೀನಿ ಸಾರ್’
ಮೊದಲು ಬರೆಯೋದನ್ನು ನಿಲ್ಲಿಸಿಬಿಡಿ. ಇವರನ್ನೆಲ್ಲ ಓದಿ ಅರಗಿಸಿಕೊಳ್ಳಿ. ಆಮೇಲೂ ಬರೆಯಬೇಕು ಅನ್ನಿಸಿದರೆ, ನಿಮ್ಮದೂ ಬರಹ ಅನ್ನಿಸಿದರೆ ಮುಂದುವರಿಯಿರಿ
‘ಯಾಕೆ ಸಾರ್. ಶೂದ್ರರು ಬರೆಯಲೇಬಾರದಾ? ನೀವು ಮಾತ್ರ ಬರೀಬೇಕಾ?ಎಂದು ಇವರು ದಬಾಯಿಸುತ್ತಾರೆ. ಅಸ್ಪಶ್ಯತೆ, ದೌರ್ಜನ್ಯ, ಶೋಷಣೆಯ ಬಗ್ಗೆ ಮಾತಾಗುತ್ತದೆ. ಅರಾಸೇ ಹೇಳುತ್ತಾರೆ.
‘ಕೊಳಕರನ್ನು ಯಾರ ಮುಟ್ಟಿಸ್ಕೋತಾರೆ. ನಿಮ್ಮನ್ನು ಮುಟ್ಟಿಸ್ಕೋತಿಲ್ವೇ? ಸ್ನಾನಗೀನ ಮಾಡ್ಕೊಂಡು, ಹಲ್ಲುಜ್ಕೊಂಡು, ತಲೆಬಾಚ್ಕೊಂಡು ನೀಟಾಗಿರಬೇಕು ಕಣ್ರೀ. ನಿಮಗ್ಯಾವನ್ರೀ ಓದಬೇಡಿ ಅಂದಿದ್ದು? ನಾವಾ? ಓದ್ಕೋಬೇಕಿತ್ತು.
ಇದು ಬಿ ಎಲ್ ವೇಣು ಅವರ ಆತ್ಮಕತೆ ‘ಲೋಕದಲ್ಲಿ ಜನಿಸಿದಾ ಬಳಿಕ’ ದಲ್ಲಿ ಕಾಣಿಸಿಕೊಂಡ ಒಂದು ಪ್ರಸಂಗ. ಮುಗಿಲುಹಳ್ಳಿ ಬಖೈರು ಹಾಸ್ಯಸಂಕಲನಗಳ ಬರಹ ಓದಿದವರಿಗೆ ಕೊರವಂಜಿ ಬಳಗದ ಅಣಜಿ ರಾಮಣ್ಣ ಸೇತುರಾಮರಾವ್ ಹೀಗೆಲ್ಲ ಮಾತಾಡುತ್ತಿದ್ದರಾ ಅಂತನ್ನಿಸಬಹುದು. ವೇಣು ಕೂಡ ಅಂಥದ್ದೇ ದಿಗ್ಭ್ರಮೆಯೊಂದಿಗೆ ಅದನ್ನು ಎದುರಿಸಿದ್ದಾರೆ.ಇಂಥ ಅನೇಕ ಪ್ರಸಂಗಗಳು ಇದರಲ್ಲಿವೆ. ಚಿತ್ರರಂಗದಲ್ಲಿ ಆದ ಅವಮಾನ, ಸನ್ಮಾನಗಳೆರಡನ್ನೂ ಅವರು ದಾಖಲಿಸಿದ್ದಾರೆ. ಒಂದು ಕಾಲದ ಸಾಮಾಜಿಕ ಸ್ಥಿತ್ಯಂತರ, ತರಾಸು ಅವರಂಥ ಲೇಖಕರು ಇರುವ ಊರಲ್ಲಿ ಬರೆಯಲು ಶುರುಮಾಡುವ ಹುಡುಗನ ತಲ್ಲಣ. ಅವರೆದುರು ನಿಲ್ಲಲು ಬೇಕಾದ ಛಾತಿ, ಅವರನ್ನು ಲೇಖಕರೆಂದು ಗುರುತಿಸುವವರು, ಇವರತ್ತ ತಿರುಗಿಯೂ ನೋಡದ ರೀತಿ- ಇವನ್ನೆಲ್ಲ ವೇಣು ಬರೆದಿದ್ದಾರೆ.
ಬಿ ಎಲ್ ವೇಣು ನಮ್ಮ ಯೌವನದ ದಿನಗಳಲ್ಲಿ ಪ್ರಸಿದ್ಧಿಯ ತುತ್ತತುದಿಯಲ್ಲಿದ್ದವರು. ಅವರ ‘ಪ್ರೇಮಪರ್ವ’ ಎಂಬತ್ತರ ದಶಕದ ಹುಡುಗರ ಪಾಲಿಗೆ ಮಹಾನ್ ಕೃತಿ. ಅದಕ್ಕೋಸ್ಕರ ವಾರ ವಾರ ಕಾದು ಓದುವವರಿದ್ದರು. ಯಂಡಮೂರಿ ವೀರೇಂದ್ರನಾಥ್ ಪ್ರವೇಶ ಆಗುವ ಮುಂಚೆ ವೇಣು ಅಂಥ ಅನೇಕ ಕಾದಂಬರಿಗಳನ್ನು ಬರೆದಿದ್ದರು. ಬೆತ್ತಲೆ ಸೇವೆ, ಅತಂತ್ರರು, ಪರಾಜಿತ, ಅಜೇಯ, ಪ್ರೀತಿವಾತ್ಯಲ್ಯ, ಪ್ರೇಮಜಾಲ, ಕೆಂಡಸಂಪಿಗೆ, ಕಲ್ಲರಳಿ ಹೂವಾಗಿ, ರಾಮರಾಜ್ಯದಲ್ಲಿ ರಾಕ್ಷಸರು- ಹೀಗೆ ಇಪ್ಪತ್ತೆಂಟು ಕಾದಂಬರಿಗಳನ್ನು ವೇಣು ಬರೆದಿದ್ದಾರೆ. ಅವುಗಳ ಪೈಕಿ ಒಂಬತ್ತು ಚಲನಚಿತ್ರಗಳಾಗಿವೆ. ಐದು ಸಿನಿಮಾಗಳಿಗೆ ಚಿತ್ರಕತೆ, 59 ಸಿನಿಮಾಗಳಿಗೆ ಸಂಭಾಷಣೆ, ಒಂಬತ್ತು ಕಥಾಸಂಕಲನ ಹೀಗೆ ವೇಣು ಅವರ ವಿಸ್ತಾರ ಹಬ್ಬುತ್ತದೆ. ಈ ಮಧ್ಯೆ ನಾಟಕ, ಮಿನಿಕಾದಂಬರಿಗಳನ್ನು ಕೂಡ ವೇಣು ಬರೆದಿದ್ದಾರೆ. ಪ್ರೇಮಪರ್ವ ಸಿದ್ಧಲಿಂಗಯ್ಯ ಅವರ ಮಗ ಮುರಳಿಗೆ ನಾಯಕಪಟ್ಟ ಕೊಡಿಸಿದ ಕಾದಂಬರಿಯೆಂದೇ ಹೇಳಬೇಕು.

ಹಾಗಿದ್ದರೂ ವೇಣು ಅಷ್ಟೇನೂ ಸಂತೋಷವಾಗಿರಲಿಲ್ಲ ಅನ್ನುವುದನ್ನು ಅವರ ಆತ್ಮಕತೆ ಹೇಳುತ್ತದೆ. ಅವರ ಅಪರಂಜಿ ಚಿತ್ರದ ಸಂಭಾಷಣೆಗೆ ರಾಜ್ಯಪ್ರಶಸ್ತಿ ಬರುತ್ತದೆ. ಆ ಸಂತೋಷದಲ್ಲಿ ಅವರಿರುವಾಗ ಅವರದೇ ಊರಿನವರೊಬ್ಬರು ಎದುರಾಗುತ್ತಾರೆ. ವೇಣು ಬರೆಯುತ್ತಾರೆ.
-ಕನ್ನಡ ಪ್ರಾಧ್ಯಾಪಕರು ಹಾಗೂ ತಮ್ಮನ್ನು ತಾವೇ ದೊಡ್ಡ ಸಂಶೋಧಕರೆಂದು ಭಾವಿಸಿ ಬೀಗುತ್ತಿದ್ದ ವ್ಯಕ್ತಿ ಎದುರಾದರು. ನಮಸ್ಕಾರ ವೇಣು. ಬೆಳಗ್ಗೆ ರೇಡಿಯೋದಲ್ಲಿ ಕೇಳಿದೆ. ನಿಮಗದೇನೋ ಬಂತಂತಲ್ಲ. ಏನ್ರೀ ಅದು. ರಾಜ್ಯಪ್ರಶಸ್ತೀನೂ ಬಂದುಬಿಡ್ತಾ? ಬಿಡಿ ನಿಮ್ಮದು ನಾಲ್ಕಾಣೆ ಸಾಹಿತ್ಯವಾದರೂ ಎಂಟಾಣೆ ಅದೃಷ್ಟಎಂದು ನಾಟಕೀಯವಾಗಿ ಹೇಳಿ ಕೊಕಕೊಕನೆ ನಕ್ಕರು.
ವೇಣು ಮತ್ತೊಂದು ಪ್ರಸಂಗವನ್ನಿಲ್ಲಿ ಉದಾಹರಿಸುತ್ತಾರೆ. ಅವರು ಗಂಡುಗಲಿ ಮದಕರಿನಾಯಕ ಕಾದಂಬರಿ ಬರೆಯಲು ನಿರ್ಧರಿಸುತ್ತಾರೆ. ಆ ಕುರಿತು ಸಂಶೋಧನೆ ನಡೆಸುತ್ತಿರುತ್ತಾರೆ. ಅದೇ ಹೊತ್ತಿಗೆ ತರಾಸು ಅವರೂ ದುರ್ಗದ ಬಗ್ಗೆ ಕಾದಂಬರಿ ಬರೆಯುತ್ತಾರೆಂದು ಗೊತ್ತಾಗುತ್ತದೆ. ತರಾಸು ಎದುರು ವೇಣು ಕಾದಂಬರಿ ಬರೆಯುತ್ತಾರೆ ಅನ್ನುವುದು ನಗೆಪಾಟಲಿನ ವಿಚಾರವಾಗಿ ಎಲ್ಲರಿಗೂ ಕಾಣುತ್ತದೆ. ವೇಣು ಕಾದಂಬರಿ ಬರೆಯಕೂಡದು ಎಂಬ ಒತ್ತಾಯ ಶುರುವಾಗುತ್ತದೆ. ಅದೇ ಹೊತ್ತಿಗೆ ಜಿಲ್ಲಾಧಿಕಾರಿ ಶಾಂತಕುಮಾರ್ ಅವರನ್ನು ಕರೆಸುತ್ತಾರೆ.ನಾನು ಡಿಸಿಯತ್ತ ನೋಡಿದೆ. ಅವರೂ ನನ್ನತ್ತ ನೋಡಿದರು, ಪ್ರಾಣಿಯೊಂದನ್ನು ನೋಡುವಂತೆ.ನ್ರೀ ವೆಂಕಣ್ಣಾಚಾರ್ ಬಂದಿದ್ದು?ಕೇಳಿದರು.ತಾವೇ ಹೇಳಿದರಲ್ಲ ಕರಕೊಂಡು ಬನ್ನಿ ಅಂತ.. ಇವರೇ ವೇಣುಅಂದರು ಆಚಾರ್.
‘ ಓಹೋ ಐಸೀ, ನೀವೇನೋ ವೇಣು, ನೀವೇನೋ ಮದಕರಿನಾಯಕನ ಮೇಲೆ ಕಾದಂಬರಿ ಬರೀತಾ ಇದ್ದೀರಂತಲ್ಲ? ಯಾಕ್ ಬರೀತೀರಿ?’
‘ನಾನೊಬ್ಬ ಕಾದಂಬರಿಕಾರ. ಬರೆಯೋದು ನನ್ನ ಹಾಬಿ. ಇದೇನೂ ನನ್ನ ಮೊದಲ ಕಾದಂಬರಿ ಅಲ್ಲ’
‘ತರಾಸು ಅವರು ಮದಕರಿನಾಯಕನ ಕುರಿತು ಕಾದಂಬರಿ ಬರೀತಾ ಇದ್ದಾರೆ ಗೊತ್ತೇನ್ರೀ?’
‘ಕೇಳಿದ್ದೀನಿ ಹಾಗಂತ’
‘ಮತ್ತೆ ನೀವ್ಯಾಕ್ರೀ ಬರೀತಾ ಇದ್ದೀರಾ?’
ಹೀಗೆ ಮಾತುಕತೆ ಆಗಿ ಕೊನೆಗೆ ಡೀಸಿ ಬರೆಯಲು ಒಪ್ಪಿಗೆ ನೀಡುತ್ತಾರೆ. ನಂತರ ತರಾಸು ಸಿಟ್ಟು ಮಾಡಿಕೊಳ್ಳುತ್ತಾರೆ. ಗರಡಿ ಹುಡುಗರು ಅದೆಂಗ್ ಬರೀತೀರೋ ನೋಡ್ತೀವಿ ಅಂತ ಜಗಳಕ್ಕೇ ನಿಲ್ಲುತ್ತಾರೆ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಮಾತ್ರ ‘ತರಾಸು ಯಾಕೆ ಹೀಗೆ ಮಾಡ್ತಾನೆ? ಅವನೂ ಬರೀಲಿ,ನೀನೂ ಬರಿ. ಗಟ್ಟಿ ಉಳಿಯುತ್ತೆ, ಜೊಳ್ಳು ಹೋಗುತ್ತೆ. ವೇಣು, ನೀವು ಹೆದರಿಕೊಂಡು ಬರೀದೇ ಇರಬೇಡಿ’ ಎಂದು ಆತ್ಮವಿಶ್ವಾಸ ತುಂಬುತ್ತಾರೆ.
***
ವೇಣು ಆತ್ಮಚರಿತ್ರೆ ಓದುತ್ತಿದ್ದಂತೆ ಈ ಕಷ್ಟಗಳೆಲ್ಲ ಗೊತ್ತಾದವು. ಒಬ್ಬ ಲೇಖಕ ನೆಲೆ ನಿಲ್ಲಲು ಆ ಕಾಲದಲ್ಲಿ ಎದುರಾಗುತ್ತಿದ್ದ ಅಡ್ಡಿ. ತಿರಸ್ಕಾರದಿಂದ ನೋಡುವ ಊರಿನ ಕಣ್ಣು, ಎಷ್ಟೇ ಸಾಧಿಸಿದರೂ ಮತ್ತೆ ಮತ್ತೆ ಹಿಂದಿಕ್ಕುವ ಗಾಂಧೀನಗರ, ಗುರುತೇ ಸಿಗದಂತೆ ನಟಿಸುವ ಮಹಾನ್ ನಟರು, ಪ್ರಸಿದ್ಧಿಯನ್ನು ಹಿಮ್ಮೆಟ್ಟಿಸುವ ಮಹಾನ್ ಲೇಖಕರು- ಇವರೆಲ್ಲರ ಕುರಿತೂ ಇಲ್ಲಿ ಪ್ರಸ್ತಾಪವಿದೆ. ಈಗಲೂ ವೇಣು ಆ ದಿಗ್ಭ್ರಮೆಯಿಂದ ಹೊರಗೆ ಬಂದಂತಿಲ್ಲ. ಪತ್ರಿಕೆಗಳಿಗೆ ಕಾದಂಬರಿ ಕಳಿಸುವಾಗ, ನಮ್ಮಂತ ಜನಪ್ರಿಯ ಲೇಖಕರನ್ನೂ ಪ್ರೋತ್ಸಾಹಿಸಿ ಎಂದು ಪುಟ್ಟ ಟಿಪ್ಪಣಿ ಬರೆಯತ್ತಾರೆ. ಜನಪ್ರಿಯ ಅನ್ನುವ ಪದದ ಅರ್ಥವೇ ಬದಲಾಗಿದೆ ಅನ್ನಿಸುತ್ತದೆ.
ಬಿಎಲ್ ವೇಣು ಅನೇಕ ಸಾರಿ ಚಿತ್ರದುರ್ಗದಲ್ಲಿ ಸಿಕ್ಕಿದ್ದರು. ಅವರಿಗೆ ತಾನು ಲೇಖಕ ಎಂಬ ಹಮ್ಮುಬಿಮ್ಮುಗಳೇನೂ ಇದ್ದಂತೆ ಕಾಣುವುದಿಲ್ಲ. ಆರದ ಗಾಯವೊಂದು ಅವರನ್ನು ಬಾಧಿಸುತ್ತಿರುವಂತೆ ಕಾಣುತ್ತಾರೆ. ಚಿತ್ರದುರ್ಗದ ಐತಿಹಾಸಿಕತೆ. ಅದರ ಕುರಿತು ಆ ಊರಿನ ಮಂದಿಗಿರುವ ನಿರ್ಲಕ್ಷ, ಕೋಟೆಯ ಎದುರೇ ಬಂಗಲೆ ಕಟ್ಟಿಸಿಕೊಂಡು ಕೋಟೆಯ ಕಡೆ ತಿರುಗಿಯೂ ನೋಡದವರು, ಅವರಿಗೆ ತಮ್ಮೂರಿನ ಪ್ರತಿಭೆಗಳ ಕುರಿತು ಇರುವ ಅಪಾರವಾದ ಅನಾದರ- ಇವೆಲ್ಲವನ್ನೂ ವೇಣು ಬರೆಯುತ್ತಾರೆ. ಅಲ್ಲಲ್ಲಿ ಅವರ ಖುಷಿಯ ಗಳಿಗೆಗಳನ್ನು ಮಿಂಚಿನಂತೆ ಸುಳಿದುಹೋಗುತ್ತವೆ.
ವೇಣು ಅವರಿಗೀಗ ಅರವತ್ತೈದು. ಅವರು ಬರೆಯಲು ಆರಂಭಿಸಿದ ಕಾಲದಲ್ಲಿ ಇದ್ದಂಥ ಪರಿಸ್ಥಿತಿ ಈಗಿಲ್ಲ. ಗೆಳೆಯರೊಂದಿಗೆ ಟೀ ಕುಡಿಯುತ್ತಾ, ಪತ್ರಿಕಾ ಮಿತ್ರರ ಜೊತೆ ಹರಟುತ್ತಾ, ಸಿಟ್ಟುಗೊಳ್ಳುತ್ತಾ, ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಾ, ಮತ್ತೆ ಬರೆಯಲು ಹವಣಿಸುತ್ತಾ ಇರುವ ವೇಣು ಎಂಬತ್ತರ ದಶಕದ ತರುಣ ತರುಣಿಯರಿಗೆ ಪ್ರೇಮದ ಹುಚ್ಚು ಹತ್ತಿಸಿದವರು. ಭವ್ಯ ಎಂಬ ಸಾಧಾರಣ ಚೆಲುವೆಯನ್ನು ಜನ ಮೆಚ್ಚಿಕೊಳ್ಳುವಂತೆ ಮಾಡಿದವರು. ಮುರಳಿ ಎಂಬ ಕಪ್ಪು ಹುಡುಗನ ಕಣ್ಣಲ್ಲಿ ಪ್ರೇಮದ ಮಿಂಚು ಹೊಳೆಯುವಂತೆ ಮಾಡಿದವರು. ಈಗಲೂ ಅವರಿಗೆ ಸಿಟ್ಟು ಬಂದರೆ ಪತ್ರಕಾಳಗ ಮಾಡುತ್ತಾರೆ. ಸುದೀಪ್ ಸಿನಿಮಾಕ್ಕೆ ಮದಕರಿ ಎಂಬ ಹೆಸರಿಟ್ಟಾಗ ಅವರು ವಿರೋಧಿಸಿದರು. ಒನಕೆ ಓಬವ್ವ ಅಂತ ಯಾರೋ ಸಿನಿಮಾ ಮಾಡಲು ಹೊರಟಾಗ ಒನಕೆ ಕಿತ್ತುಕೊಂಡರು. ದುರ್ಗದ ಕುರಿತು ಪ್ರೀತಿ ಮತ್ತು ಅಕ್ಕರೆ ಉಳಿಸಿಕೊಂಡಿರುವ ಅವರನ್ನು ದುರ್ಗ ಕೂಡ ಪ್ರೀತಿಸಲಿ. ಅವರ ಆತ್ಮಕತೆ ಅವರ ಕತೆಯಷ್ಟೇ ಅಲ್ಲ, ಅವರ ಕಾಲದ ಕತೆ ಕೂಡ. ಇಲ್ಲಿ ಸಿಡಿಮಿಡಿಯ ಹುಡುಗನೊಬ್ಬನ ಆಕ್ರೋಶ, ಖಿನ್ನತೆ, ಸಂಭ್ರಮ ಮತ್ತು ಉಲ್ಲಾಸಗಳಿವೆ. ತುಳಿಸಿಕೊಂಡ ನೋವಿದೆ. ತ್ರಿವಿಕ್ರಮನ ಬೆರಳ ಸಂದಿಯಲ್ಲಿ ಕೂಡ ಅರಳಿಯೇನು ಎಂಬ ಆತ್ಮವಿಶ್ವಾಸವಿದೆ.
ನೊಂದ ನೋವನ್ನಷ್ಟೇ ಹಾಡಬೇಕೇನು, ಬೇಡವೇ ಯಾರಿಗೂ ಸಿರಿಮಲ್ಲಿಗೆ ಅಂತ ಕೆ ಎಸ್ ನ ಕೇಳಿದ್ದು ಇದನ್ನು ಓದುತ್ತಿದ್ದಂತೆ ಯಾಕೋ ನೆನಪಾಗುತ್ತದೆ.
ಇವತ್ತೂ ಅವರೊಳಗಿನ ಹುಡುಗ ಪ್ರಖರವಾಗಿದ್ದಾನೆ ಅನ್ನುವುದೇ ಖುಷಿ.

(ಉದಯವಾಣಿ – ಜೋಗಿಕಾಲಂ)

 
 
 
 
 
 

‍ಲೇಖಕರು avadhi

4 March, 2013

8 Comments

  1. kum.veerabhadrappa

    jogiyavara tumba aaptavaagide, adkkaagi avarige abhinandanegalu, venu nammella mitra hagoo kathe kaadambarikaararu, kannadada kelavu gambhira lekhakara krutigalannu odiruvante venu avara krutigalannoo aasvaadisiddene, gambhira lekhakaru kannadakke estu mukhyavo venu avarantha janapreiya lekhakaroo aste mukhya, kannada bhaashe mattu sahitya ulidu belediruvudu venu avarantha janapriya lekhakarinda, addarinda avara aatmakathe lokadalli janisidaa balika krutiyannu naavella odabekide.
    kumvee

  2. R.RAJU

    ಮನ ಮುಟ್ಟುವಂತೆ ಬರೆದಿದ್ದೀರಿ ಕೂಡಲೇ ವೇಣು ಅವರ ಆತ್ಮಕತೆ ಓದಬೇಕು ಅನಿಸುತ್ತಿದೆ ದನ್ಯವಾದಗಳು ಜೋಗಿಯವರಿಗೆ

  3. Santhoshkumar LM

    ಚೆನ್ನಾಗಿದೆ!!

  4. VEDA

    Venuravara Aatmakatheyannu eegale odabekanisuvashtu parinamakariyagi barediddiri Jogiyavre

  5. bmbasheer

    ನನ್ನ ಹೈಸ್ಕೂಲ್ ಕಾಲ ಅದು. ವೇಣು ಅವರ “ಪ್ರೀತಿ ವಾತ್ಸಲ್ಯ” ಕಾದಂಬರಿ ತರಂಗದಲ್ಲಿ ಧಾರವಾಹಿಯಾಗಿ ಬರ್ತಾ ಇತ್ತು. ವಿಶೇಷ ಅಂದ್ರೆ ಧಾರಾವಾಹಿಯಲ್ಲಿ ಚಿತ್ರದ ಬದಲಿಗೆ ಪ್ರಭಾಕರ್, ಆರತಿಯವರ ಫೋಟೋಗಳನ್ನೇ ಬಳಸಿದ್ದರು. ಬಿಡದೆ ತರಂಗದಲ್ಲೇ ಸಿನಿಮಾವನ್ನು ನೋಡಿದ್ದೇ. ತ.ರ.ಸು. ದುರ್ಗಾಸ್ತಮಾನ ಓದಿದ ಬಳಿಕ, ನಾನು ವೇಣು ಅವರ ಮದಕರಿ ನಾಯಕ ಇಷ್ಟವಾಗಿತ್ತು. ಇವರ ಸರಳತೆಯೇ ನನಗೆ ಆ ಕಾದಂಬರಿಯನ್ನು ಆಪ್ತವಾಗಿಸಿತ್ತು. ತ.ರಾ.ಸು. ಅವರದೇನಿದ್ದರೂ ಶಬ್ದ ವೈಭವ, ಅತಿ ನಾಟಕೀಯತೆ. ಏನೇ ಇರಲಿ…ಬಾಲ್ಯದಲ್ಲಿ ನನ್ನನ್ನು ಓದುದಕ್ಕೆ ಹಚ್ಹ್ಚಿದವರಲ್ಲಿ ಬಿ. ಎಲ್. ವೇಣು ಕೂಡ ಒಬ್ಬರು. ಅಪರಂಜಿ ಚಿತ್ರ (ಬಹುಷಃ ರಾಜೀವ್…ನಾಯಕ…ಹಾಗೆಯೇ..ರಜನಿಕಾಂತ್ ಈ ಚಿತ್ರದಲ್ಲಿ ಜಡ್ಜ್ ಆಗಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು) ಆಗ ನನಗೆ ತುಂಬಾ ಇಷ್ಟವಾಗಿತ್ತು.

  6. ಸುಧಾ ಚಿದಾನಂದಗೌಡ

    nice wtite up

    • ಸುಧಾ ಚಿದಾನಂದಗೌಡ

      sorry, it’s “write up”

  7. Jishnu

    Nice write up sir, thank u.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading