‘ವೆಲ್‌ಕಮ್ ಅಬೋರ್ಡ್ ಸಿಂಗಾಪುರ್ ಏರ್‌ಲೈನ್ಸ್’

“ವೆಲ್‌ಕಮ್ ಅಬೋರ್ಡ್ ಸಿಂಗಾಪುರ್ ಏರ್‌ಲೈನ್ಸ್”…

ಈ ಮಾತನ್ನು ಕೇಳಲು ಅದೇನೋ ರೋಮಾಂಚನ. ವಿಮಾನದಲ್ಲಿ ಪಯಣಿಸಿದಷ್ಟೇ ಖುಷಿ. ಇದು ಸ್ವಂತ ಅನುಭವ ಆಗಿದ್ದರಂತೂ ಮುಗಿದೇ ಹೋಯಿತು. ಮತ್ತೆ ಯಾವ ದೇಶದ ಫ್ಲೈಟ್ ಗೆ ಬೇಕಾದ್ರೂ ಹೋಲಿಸಿ ನೋಡಿ. ಸಿಂಗಾಪುರ್ ಏರ್‌ಲೈನ್ಸ್ ನಲ್ಲಿ ಸಿಗೋವಷ್ಟು ಆನಂದ ಎಲ್ಲೂ ಪಡೆಯಲು ಸಾಧ್ಯವಿಲ್ಲ. ಈ ವಿಮಾನ ಸಂಸ್ಥೆಯ ಸೇವೆ, ತಾಳ್ಮೆ, ಸಮಯ ಕೋಪಿಷ್ಠರನ್ನು ತಲೆ ತಗ್ಗಿಸುವಂತೆ ಮಾಡುತ್ತದೆ.

ಸಾಮಾನ್ಯವಾಗಿ ನಮ್ಮ ಪಯಣ ಬಜೆಟ್ ಏರ್‌ಲೈನ್ಸ್ ಗೆ ಸೀಮಿತ. ಐಷಾರಾಮಿ ಬದುಕು ನಡೆಸಲು ಭಾರತೀಯ ಬುದ್ಧಿ ಬಿಡಬೇಕಲ್ಲ ನಮ್ಮನ್ನು. ಪ್ರತಿ ಬಾರಿ ಬೆಂಗಳೂರಿಗೆ ಟಿಕೆಟ್ ಮಾಡುವಾಗಲು, ಅದರ ಬೆಲೆಯನ್ನು ರೂಪಾಯಿ ಜೊತೆ ತುಲನೆ ಮಾಡೋದು ಗೊತ್ತಿಲ್ಲದಂತೆ ನಮಗೆ ಒದಗಿಬಂದಿರುವ ವಿದ್ಯೆ. ಹಾಗಾಗಿ ಕೇವಲ ೪ ಗಂಟೆಯ ಪ್ರಯಾಣಕ್ಕೆ ಅನಗತ್ಯ ಹಣವ್ಯಯ ಮಾಡೋದು ಅಂದರೆ ಅದೇನೋ ಅಸಡ್ಡೆ.  ಹಾಗಂತ ಸಿಂಗಾಪುರ್ ಏರ್‌ಲೈನ್ಸ್ ಜೊತೆ ನಮ್ಮ ಡಾಲರ್ ಸೇವೆ ನಡೆದಿಲ್ಲ ಅಂತಲ್ಲ. ಅದೆಷ್ಟೋ ಬಾರಿ ಅವಕಾಶ ಸಿಕ್ಕಿದೆ.

ಅಂತಹ ಚಾನ್ಸ್ ಸಿಕ್ಕಿದಾಗೆಲ್ಲ ನನಗೆ ಅನಿಸಿದ್ದು ಇಷ್ಟೇ.. ಸುಂದರವಾದ ಗೊಂಬೆಗಳೇ ಎದ್ದು ಬಂದವೋ ಅನ್ನೋ ರೀತಿಯ ಗಗನ ಸಖಿಯರು, ರಾತ್ರಿ – ಹಗಲು ಆಯಾಸವನ್ನು ಮೀರಿದಂತಹ ಅವರ ಮಾತುಗಳು, ಅವರು ನೀಡುವ ವರ್ಲ್ಡ್ ಕ್ಲಾಸ್ ದರ್ಜೆಯ ಸೇವೆಗಳ ನ್ನು ಅನುಭವಿಸುತ್ತಾ ಹೋದಂತೆ ಅದೆಷ್ಟು ಬೇಗ ಫ್ಲೈಟ್ ಲ್ಯಾಂಡ್ ಆಯಿತು ಅನಿಸಿಬಿಡುತ್ತದೆ.

ಅಂದ ಹಾಗೆ ಸಿಂಗಾಪುರ್ ಏರ್‌ಲೈನ್ಸ್ ಸತತ ನಾಲ್ಕನೇ ಬಾರಿಗೆ ವಿಶ್ವದಲ್ಲೇ ಅತ್ಯುತ್ತಮ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾದ್ರೆ ಯೋಚನೆ ಮಾಡಿ..! ಇವು ಪ್ರಯಾಣಿಕರಿಗೆ ನೀಡುವ ಹೈ ಕ್ಲಾಸ್ ವ್ಯವಸ್ಥೆಯ ಬಗ್ಗೆ. ಯಾಕೆಂದರೆ ನಾವೆಲ್ಲ ಏರ್ ಇಂಡಿಯಾ ಓಡಿಸುವವರು ಅಲ್ವಾ.

ಸಿಂಗಾಪುರ್ ಏರ್‌ಲೈನ್ಸ್ ಇಷ್ಟೊಂದು ಹೆಸರು ಮಾಡಿದ್ರೆ, ಇನ್ನೂ ಸಿಂಗಾಪುರದ “ಚಾಂಗಿ ಏರ್‌ಪೋರ್ಟ್” ಹೇಗಿರಬಹುದು. ಒಂದೇ ಮಾತಿನಲ್ಲಿ ಹೇಳೋದಾದ್ರೆ “ಸ್ವರ್ಗವೇ ಧರೆಗೆ ಇಳಿದಂತೆ”. ಈ ಏರ್‌ಪೋರ್ಟ್ ಗೆ ತೆರಳಲು ಫ್ಲೈಟ್ ಟಿಕೆಟ್ ಇರಬೇಕಾಗಿ ಏನು ಇಲ್ಲ. ಫ್ಲೈಟ್ ಹತ್ತದವರು ಕೂಡ ವಿಮಾನ ನಿಲ್ದಾಣವನ್ನು ಪ್ರವೇಶಿಸಬಹುದು.

ಬೆಂಗಳೂರಿನ ವಿಮಾನ ನಿಲ್ದಾಣದ ಕ್ರಮವೇ ಬೇರೆ. ವಿಮಾನದಲ್ಲಿ ಪ್ರಯಾಣಿಸುವವರಿಗೆ ಮಾತ್ರ ಎಂಟ್ರೀ. ಇನ್ನು ಏರ್‌ಪೋರ್ಟ್ ಗೆ ಬಿಡಲು ಬರೋರ ಪಾಡು ಕೇಳೋದೇ ಬೇಡ. ಕಿಕ್ಕಿರಿದ ಟ್ರ್ಯಾಫಿಕ್ ಎದುರಿಸುತ್ತಾ ಅದೆಷ್ಟೋ ಗಂಟೆ ಪ್ರಯಾಣ ಮಾಡೋದೇ ಒಂದು ದೊಡ್ಡ ಸಾಹಸ. ಕೊನೆಗೆ ನಿಲ್ದಾಣ ತಲುಪಿದರೂ ಒಂದೇ ಘಳಿಗೆಯಲ್ಲಿ ಬೀಳ್ಕೊಡುಗೆ ಸಮಾರಂಭವೂ ನಡೆದು ಹೋಗುತ್ತದೆ.

ಸಿಂಗಾಪುರದಲ್ಲಂತೂ “ಚೆಕ್ -ಇನ್” ಪ್ರದೇಶವೇ ಒಂದು ದೊಡ್ಡ ಜಗತ್ತು. ಇಲ್ಲಿ ಸಾರ್ವಜನಿಕರಿಗೂ ಪ್ರವೇಶವಿದೆ. ವಿಮಾನ ಹತ್ತಿಸುವವರ ಜೊತೆಯೂ ಸುತ್ತಾಡುವ ಅವಕಾಶವಿದೆ. ರೆಸ್ಟೋರೆಂಟ್ ಗಳು ಕೂಡ ಬೇಕಾದಷ್ಟು ಇವೆ.  ಚೆಕ್ ಇನ್ ಮುಗಿದರೆ ಮತ್ತೆ ದೊಡ್ಡ ಕೆಲಸವೇನು ಉಳಿದಿರುವುದಿಲ್ಲ. ಹಾಗಾಗಿ ನಮ್ಮಿಂದ ದೂರ ಪ್ರಯಾಣ ಮಾಡುವವರ ಜೊತೆ ಮತ್ತಷ್ಟು ಸಮಯ ಕಳೆಯುವ ಸನ್ನಿವೇಶ ಇಲ್ಲಿದೆ.

ಸಿಂಗಾಪುರದ ವಿಮಾನ ನಿಲ್ದಾಣದಲ್ಲಿ ಹೊರಗಿನ ದೇಶಕ್ಕೆ ಪ್ರವಾಸ ಮಾಡುವವರು ಒಂದೆಡೆಯಾದರೆ, ಏರ್‌ಪೋರ್ಟ್ ನೋಡಲೆಂದೇ ಟ್ರಿಪ್ ಹೊಡಿಯೋರು ಇನ್ನೊಂದೆಡೆ. ಇದೇ ಇಲ್ಲಿನ ಸ್ಪೆಶ್ಯಾಲಿಟೀ. ಇಲ್ಲಿ ಏನಿಲ್ಲ ಹೇಳಿ. ಸೀಸನ್ ಗೆ ಸರಿಯಾಗಿ ಇಲ್ಲಿನ ಆಕರ್ಷಣೆಯ ವಿಷಯಗಳು ಬದಲಾಗುತ್ತಾ ಸಾಗುತ್ತವೆ.

ನಾವಂತೂ ತಿಂಗಳಿಗೆ ಒಮ್ಮೆಯಾದ್ರೂ ಈ ಏರ್‌ಪೋರ್ಟ್ ಗೆ ಭೇಟಿ ನೀಡುತ್ತಾ ಇರುತ್ತೇವೆ. ಒಂದೋ ಇಲ್ಲಿನ ಭವ್ಯ ಅಲಂಕಾರ ವೀಕ್ಷಣೆಗೆ ಇಲ್ಲಾ, ಭಾರತೀಯ ರೆಸ್ಟಾರೆಂಟ್ ನಲ್ಲಿ ಬ್ಯಾಟಿಂಗ್ ಮಾಡಲು. ಸಾರ್ವಜನಿಕರು ಬಂದು ನೋಡಬಹುದಾದ ಸ್ಥಳಗಳಲ್ಲಿ ಕಣ್ಣು ತಂಪಾಗಿಸುವ ಸೊಬಗು ಆವರಿಸಿದ್ದರೆ, ಇನ್ನು ವಿಮಾನದಲ್ಲಿ ಪಯಣಿಸುವವರಿಗೆ ಮಾತ್ರ ಪ್ರವೇಶ ಇರೋ ಜಾಗದಲ್ಲಿ ಮತ್ತಷ್ಟು ವೈಭವದ ಅಲಂಕಾರಗಳು. ಇವನ್ನೆಲ್ಲಾ ನೋಡುತ್ತಾ ಕುಳಿತರೆ ಆಯಾಸವೂ ಇಲ್ಲ. ಅಸಮಾಧಾನವೂ ಕೂಡ.

ಚೀನಿಯರ ಜೋತಿಷ್ಯ ಫೆಂಗ್ ಶೂಯಿಯಲ್ಲಿ ಹೇಳುವ ಪ್ರಕಾರ “ಪರ್ವತಗಳು ಜನರನ್ನುಆಳುತ್ತವೆ. ಸಂಪತ್ತನ್ನು ಜಲವು ನಿಯಂತ್ರಿಸುತ್ತದೆ. ನೀರಿನ ಅಂಶವಿಲ್ಲದ ಅತ್ಯಂತ ಶಕ್ತಿಶಾಲಿ ಪರ್ವತ ನಿರ್ಮಾಣ ಕೂಡ ನಿಷ್ಪ್ರಯೋಜಕ. ನೀರಿನ ಉಪಸ್ಥಿತಿ ಯಲ್ಲೇ ಶಕ್ತಿ ನಿರ್ಮಾಣವಾಗುತ್ತದೆ ಎಂದು.

ನೋಡುಗರ ಗಮನ ಸೆಳೆಯುವಂತೆ ಇದು ರಚನೆಗೊಂಡಿದ್ದರೂ, ಇಲ್ಲಿನ ಪ್ರತಿಯೊಂದು ವಿಚಾರಗಳು ಚೀನಿ ಜೋತಿಷ್ಯವನ್ನು ಅವಲಂಬಿತವಾಗಿದೆ. ನೀರು, ಗಾಳಿ, ಬೆಳಕು, ಪ್ರಕೃತಿ ಎಂಬ ರೀತಿಯಲ್ಲಿ ಒಳಗಿನ ವಾತಾವರಣ ನಿರ್ಮಿಸಲ್ಪಟ್ಟಿದೆ. ಹೀಗಾಗಿ ಸಿಂಗಾಪುರದ ವಿಮಾನ ನಿಲ್ದಾಣದೊಳಗೆ ಕಾಲಿಡುತಿದ್ದಂತೆ ಅತ್ಯಾದ್ಭುತ ಪ್ರಪಂಚವೇ ನಮ್ಮನ್ನು ಕೈಬೀಸಿ ಕರೆಯುತ್ತದೆ.

ಇಲ್ಲಿ ೪ ಟರ್ಮಿನಲ್ ಇದೆ. ಪ್ರತಿ ಟರ್ಮಿನಲ್ ಕೂಡ ವಿಶಿಷ್ಟ ಬಗೆಯ ರಚನೆಯಿಂದ ರೂಪಿತವಾಗಿದೆ. ಬಟರ್‌ಫ್ಲೈ ಗಾರ್ಡನ್, ಜ಼ೆನ್ ಗಾರ್ಡನ್, ಕೊಯ್ ಫಿಶ್ ಗಾರ್ಡನ್, ಆರ್ಕಿಡ್ ಗಾರ್ಡನ್ , ಕ್ಯಾಕ್ಟಸ್ ಗಾರ್ಡನ್ , ಸನ್ ಫ್ಲವರ್ ಗಾರ್ಡನ್, ಕ್ರಿಸ್ಟಲ್ ಗಾರ್ಡನ್[, ವಾಟರ್ ಲಿಲೀ ಗಾರ್ಡನ್, ಎನ್ಚಾಂಟೆಡ್ ಗಾರ್ಡನ್ , ಪಿಯಾಸಾ ಗಾರ್ಡನ್  ಹೀಗೆ ಇವಿಷ್ಟು ಹಸಿರು ಸಿರಿಯ ಸೌಂದರ್ಯದಿಂದ ಕಂಗೊಳಿಸಿದರೆ ಇನ್ನು ಮಕ್ಕಳಿಗಾಗಿ ಡ್ರಾಯಿಂಗ್, ೧೨ ಮೀಟರ್ ಎತ್ತರದ ಜಾರು ಬಂಡಿ, ಇನ್ನಿತರೆ ಆಟದ ಜಾಗಗಳನ್ನು ಇಲ್ಲಿ ಕಾಣಬಹುದು. ಅಲ್ಲಲ್ಲಿ ಕಾಣಸಿಗುವ ವಾಟರ್ ಫಾಲ್ಸ್, ಗ್ರೀನ್ ವಾಲ್ ಗಳು, ಸ್ವಿಮ್ಮಿಂಗ್ ಪೂಲ್ , ಫ್ರೀ ವೈ ಫೈ, ಉಚಿತವಾಗಿ ವೀಕ್ಷಿಸಬಹುದಾದ ೨ ಸಿನಿಮಾ ಥಿಯೇಟರ್ ಗಳು, ಮನರಂಜನಾ ಡೆಕ್ ಗಳ ಸೌಲಭ್ಯ ಇಲ್ಲಿವೆ. ಸ್ಕೈ ಟ್ರೇನ್ ವ್ಯವಸ್ಥೆಯು ಇಲ್ಲಿದೆ. ಟರ್ಮಿನಲ್ ಗಳ ನಡುವೆ ತಡೆರಹಿತ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಸಲುವಾಗಿ ಈ ರೈಲುಗಳು ಪ್ರಯಾಣಿಕರಿಗೆ ಉಚಿತವಾಗಿ ಸೇವೆ ನೀಡುತ್ತಿವೆ.

ಒಂದು ವೇಳೆ ನಿಮ್ಮ ಕನೆಕ್ಟಿಂಗ್ ಫ್ಲೈಟ್ ಗೆ ಐದೂವರೆ ಗಂಟೆಯ ಸಮಯಾವಕಾಶವಿದ್ದಲ್ಲಿ ಉಚಿತವಾಗಿ ಸಿಂಗಾಪುರ ನಗರ ಸುತ್ತುವ ಅವಕಾಶ ವು ನಿಮಗೆ ದೊರೆಯಲಿದೆ.

ಇನ್ನೊಂದು ಇಲ್ಲಿನ ವಿಶೇಷ ಕನೆಟಿಕ್ ಮಳೆ. ಟರ್ಮಿನಲ್ ೧ ರಲ್ಲಿ ಇದನ್ನು ಕಾಣಬಹುದು.  ೧೨೧೬ ಕಂಚಿನ ಹನಿಗಳಿಂದ ಮಾಡಲ್ಪಟ್ಟಿದೆ. ಪ್ರತಿ ಶಿಲ್ಪವು ೧೬ ವಿವಿಧ ಆಕಾರಗಳನ್ನು ಅಮೂರ್ತ ಕಲೆಯ ರೂಪಗಳಿಂದ ಹಿಡಿದು ವಿಮಾನ, ಬಿಸಿ ಗಾಳಿಯ ಬಲೂನ್, ಗಾಳಿಪಟ ಮತ್ತು ಗಾಜಿನಂತಹ ಗುರುತಿಸಬಹುದಾದ ಮಾದರಿಗಳನ್ನು ರೂಪಿಸಬಹುದು.  ಪ್ರತಿ ಆಕಾರದಲ್ಲಿ ನಿಧಾನವಾದ ದ್ರವ ಚಲನೆಯ ವಿನ್ಯಾಸದ ಮೂಲಕ ವಿಮಾನ ಪ್ರಯಾಣದಲ್ಲಿನ ಏರಿಳಿತವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಉಷ್ಣವಲಯದ ದೇಶವಾಗಿರುವ ಸಿಂಗಾಪುರದಲ್ಲಿ ಮಳೆ ಸಾಮಾನ್ಯ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗುತ್ತಿದೆ.

ಸೆಕ್ಯೂರಿಟೀ ಸ್ಕ್ರೀನಿಂಗ್ ದಾಟಿದ ಬಳಿಕ ನಿಲ್ದಾಣದ ನೆಲವೆಲ್ಲಾ ಕಾರ್ಪೆಟ್ ನಿಂದ ಆವರಿಸಿದೆ. ಐಷಾರಾಮಿ ಅಂಶದ ಸಂಕೇತ ಒಂದೆಡೆಯಾದರೆ, ಈ  ರತ್ನಗಂಬಳಿಗಳು ಶಬ್ದಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ವಿಮಾನದ ಕಾಯುವಿಕೆಯಲ್ಲಿ ಮುಳುಗಿರುವ ಪ್ರಯಾಣಿಕರಿಗೆ ಶಾಂತ ರೀತಿಯ ಉಲ್ಲಾಸದ ವಾತಾವರಣವನ್ನು ಒದಗಿಸಬಲ್ಲುದು. ಬೆಳಕಿನ ಬಣ್ಣವು ನಮ್ಮ ಮನಸ್ಥಿತಿಯಲ್ಲಿ ಪರಿಣಾಮ ಬೀರುತ್ತವೆ. ಅದರಲ್ಲೂ ಬಿಳಿ ದೀಪಗಳು ಒರಟಾದ ಮತ್ತು ಖಿನ್ನತೆಯ ವಾತಾವರಣವನ್ನು ಸೃಷ್ಟಿಸಬಲ್ಲುದು. ಆದರೆ ಚಾಂಗಿ ವಿಮಾನ ನಿಲ್ದಾಣದಲ್ಲಿ ಪ್ರಕಾಶಮಾನವಾದ ಬಿಳಿ ದೀಪಗಳು ಕಾಣಸಿಗುವುದಿಲ್ಲ.

ಟರ್ಮಿನಲ್ ಒಂದರಿಂದ ಟರ್ಮಿನಲ್ ೩ ವರೆಗೆ ನಿಮಗೆ ಸಹಾಯ ಮಾಡುವ ಸಿಬ್ಬಂದಿಗಳು ಬೇಕಾದಷ್ಟು ಮಂದಿ ಸಿಗ್ತಾರೆ. ಆದರೆ ನಿಮ್ಮ ಫ್ಲೈಟ್ ಟರ್ಮಿನಲ್ ೪ ರಲ್ಲಿ ಇದ್ದರೆ ಎಲ್ಲ ಕೆಲಸವನ್ನು ನೀವೇ ಮಾಡಬೇಕು. ಯಾಕೆಂದರೆ ಇಲ್ಲಿ ವಿಮಾನ ನಿಲ್ದಾಣ ದ ಸಿಬ್ಬಂದಿಯ ಭೇಟಿ ನಡೆಯೋದು ಭದ್ರತಾ ಸ್ಕ್ರೀನಿಂಗ್ ಪ್ರದೇಶಗಳಲ್ಲಿ. ಪ್ರವಾಸಿಗರು ಸ್ವಯಂ ಸೇವಾ ಯಂತ್ರಗಳನ್ನು ಬಳಸಿ ಚೆಕ್-ಇನ್, ಬ್ಯಾಗ್ ಡ್ರಾಪ್, ಇಮಿಗ್ರೇಷನ್ ಕ್ಲಿಯರೆನ್ಸ್ ಮತ್ತು ನಿರ್ಗಮನ – ಗೇಟ್ ಬೋರ್ಡಿಂಗ್ ಗೆ ತೆರಳಬೇಕು. ಇಲ್ಲಿ ಪ್ರಯಾಣಿಕನ ಮುಖದ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆ ಮೂಲಕ ವ್ಯಕ್ತಿಯು ವಿವಿಧ ಪ್ರಕ್ರಿಯೆಗಳನ್ನು ದಾಟಿ ತನ್ನ ಕೆಲಸವನ್ನು ಪೂರ್ಣಗೊಳಿಸಬೇಕಾಗುತ್ತದೆ.

೧೯೮೧ರ ಜುಲೈ ೧ರಂದು ಈ ವಿಮಾನ ನಿಲ್ದಾಣ ಕಾರ್ಯನಿರ್ವಹಿಸಲು ಆರಂಭಿಸಿತು. ೨೦೧೭ ರ ವರದಿ ಪ್ರಕಾರ ಈ ವಿಮಾನ ನಿಲ್ದಾಣದಲ್ಲಿ ೬೨.೨2 ಮಿಲಿಯನ್ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ವಿಶ್ವಾದ್ಯಂತದ ೪೦೦ ನಗರಗಳಿಗೆ ೧೦೦ ಕ್ಕೂ ಹೆಚ್ಚಿನ ಏರ್‌ಲೈನ್ಸ್ ಸಂಪರ್ಕ ಕಲ್ಪಿಸುವ ಮೂಲಕ, ಚಾಂಗಿ ಏರ್‌ಪೋರ್ಟ್ ಪ್ರತಿ ವಾರ ೭೨೦೦ ವಿಮಾನಗಳು ಹಾಗೂ ಪ್ರತಿ ಒಂದು ೮೦ ಸೆಕೆಂಡಿಗೆ ಒಂದು ವಿಮಾನದಂತೆ ಇಲ್ಲಿ ಹಾರಾಟ ನಡೆಯುತ್ತದೆ

ಶುಭದಿನ ಹೇಳುತ್ತಾ ನಮ್ಮನ್ನು ಸುರಕ್ಷಿತವಾಗಿ ತಲುಪಿಸುವ ಈ ವಿಮಾನ ಹಾಗೂ ವಿಮಾನ ನಿಲ್ದಾಣಗಳ ಕಥೆಗಳೇ ಭಿನ್ನ. ಸದಾ ಟಾಪ್ ೧೦ ನಲ್ಲೇ ಸ್ಥಾನವನ್ನು ಕಾಯ್ದಿರಿಸಿಕೊಳ್ಳುವ ಸಿಂಗಾಪುರ, ಪ್ರಯಾಣಿಕರ ಮನವೊಲಿಸಲು ತನ್ನೆಲ್ಲ ಪ್ರಯತ್ನವನ್ನು ಮುಂದುವರಿಸುತ್ತಾ ಬರುತ್ತಿದೆ. ನಮ್ಮಲ್ಲಿ ಖಾಸಗಿ ಒಡೆತನದ ವಿಮಾನ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಸರ್ಕಾರಿ ಒಡೆತನದ ವಿಮಾನಗಳ ಅವಸ್ಥೆಯಂತೂ ಕೇಳೋದೇ ಬೇಡ.  ಸರ್ಕಾರದ ದಿವ್ಯ ನಿರ್ಲಕ್ಷ್ಯ , ಸೇವೆಗಳಲ್ಲಿನ ಕೊರತೆಗಳು ಪ್ರಯಾಣಿಕರ ತಾಳ್ಮೆಯ ಮಿತಿಯನ್ನೇ ಒಡೆಯುವಂತೆ ಮಾಡುತ್ತಿರುವುದಂತೂ ಸುಳ್ಳಲ್ಲ.

‍ಲೇಖಕರು avadhi

January 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: