ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಷವಲ್ಲ, ಅವರು ಉಣ್ಣಿಸಿ ಕಳಿಸಿದ್ದು ಅಮೃತವನ್ನೇ..

ಗಡಿಯೂರ ನೆನಪುಗಳು

ಶೋಭಾ ಹಿರೇಕೈ ಕಂಡ್ರಾಜಿ


ಅಂದು ಎಂದಿಗಿಂತ ಮುಂಚೆಯೇ ಶಾಲೆಗೆ ಬಂದ ಮುಖ್ಯ ಗುರುಗಳು ನಂಗೆ ಮಕ್ಕಳ ಕಡೆ ಬುಲಾವ್ ಕಳಿಸಿದರು. ಮಕ್ಕಳು ಏದುಸಿರು ಬಿಡುತ್ತಾ ಓಡಿ ಬಂದು,” ಬಾಯಿ ಶಾಳೆಲಾ ಅಧಿಕಾರಿ ಏನಾರ್ ಆಹೆ. ತುಮಿ ಲೌಕರ್ ಏಯಲಾ ಪಾಯಜೆ” (ಬಾಯಿ ಶಾಲೆಗೆ ಮೇಲಾಧಿಕಾರಿಗಳು ಬರತಾರಂತೆ. ತಕ್ಷಣ ನೀವು ಶಾಲೆಗೆ ಬರಬೇಕಂತೆ ) ಅಂದವರೇ ಅದೇ ವೇಗದಲ್ಲಿ ಶಾಲೆ ಕಡೆ ಓಡಿದರು. ಇದೇನಪ್ಪ ಬೆಳಬೆಳಿಗ್ಗೆ ಗ್ರಹಚಾರ ಎಂದವಳೇ… ಅರೆಬರೆ ತಿಂಡಿ ತಿಂದು, ಗಡಬಡಿಸಿ ಸೀರೆ ಉಟ್ಟು ಬ್ಯಾಗೇರಿಸಿ ಶಾಲೆ ಕಡೆ ಓಡಿದ್ದೆ.

ಅಷ್ಟರಲ್ಲೆ ಅವರು ದಾಖಲೆಗಳನ್ನೆಲ್ಲ ಒಪ್ಪ ಓರಣವಾಗಿ ಟೇಬಲ್ ಮೇಲಿಡುತಿದ್ದರು. ನನ್ನ ನೋಡಿದವರೆ “ಬಾಯಿ ನೀವು ಮೆಂಬರ್ ಮನೆಗೆ ಅಡುಗೆಗೆ ಸಹಾಯ ಮಾಡಲು ಹೋಗಬೇಕ್ರಿ. ಮಧ್ಯಾಹ್ನದ ಊಟ ರಗಡಾದ್ರ ಅರ್ಧ ತಲೆನೋವು ತಪ್ಪಿದಂಗ. ಮತ್ತ ಸಾಹೆಬ್ರ ಜೀಪು ಕಣ್ಣಿಗ್ ಬಿತ್ತಂದ್ರ ಮಕ್ಳು ಓಡಿ ಬರ್ತಾವು. ಕರ್ಯಾಕ ಹಚ್ಚತೇನ್ರಿ. ಈಗ ಲಗೂನ ಹೋಗ್ರಲಾ..” ಎಂದು ಒಂದೇ ಉಸಿರಿಗೆ ಹೇಳಿ ಮುಗಿಸಿ, ನನ್ನ ಅಭಿಪ್ರಾಯವನ್ನೂ ಕೇಳದೆ ಮತ್ತೆಲ್ಲೋ ನಡೆದೆ ಬಿಟ್ಟರು. ಅವರ ನಡೆ ನುಡಿಯೇ ಹೇಳುತಿತ್ತು ನಾನು ಹೋಗಲೇ ಬೇಕೆಂದು. ಸರಿ, ಬೆಳಗ್ಗೆ ಒಂದು ಗ್ರಹಚಾರ ಅಂದುಕೊಂಡರೆ ಇದು ಮತ್ತೊಂದು ಗ್ರಹಚಾರವೆನ್ನಿಸಿತು. ನಾನು ವಿಧಿ ಇಲ್ಲದೆ ಮಕ್ಕಳಿಗೊಂದಿಷ್ಟು ಸೂಚನೆಗಳನ್ನು ಕೊಟ್ಟು ಅಡುಗೆಮನೆ ಹುಡುಕುತ್ತಾ ಹೊರಟೆ.

ಅಲ್ಲಿ ನನ್ನ ಓರಿಗೆಯ ಹೆಣ್ಣು ಮಕ್ಕಳೆಲ್ಲ ನನ್ನನ್ನು ‘ದೀದಿ ‘ಎನ್ನುತ್ತಾ ತುಂಬಾ ಪ್ರೀತಿ ತೋರಿಸುತಿದ್ದರು. ನಾನು ಹೋಗುವ ದಾರಿಯಲ್ಲೇ ‘ದೀದಿ’ ಎನ್ನುವ ಒಂದು ಜೀವವಿತ್ತು. ನಾನು ಸಹಾಯಕ್ಕಿರಲೆಂದು ಅವಳನ್ನೂ ಕರೆದುಕೊಂಡು ಹೊರಟೆ. .ಅಡುಗೆ, ಹರಟೆಯ ನಡುವೆ ಒಂದು ರೀತಿಯಲ್ಲಿ ದಿನದ ಏಕತಾನತೆಯಿಂದ ಹೊರ ಬಂದಂತಾಗಿ ಮನಸಿಗೆ ಸ್ವಲ್ಪ ಹಾಯೆನಿಸಿತ್ತು. ಮಕ್ಕಳು ಈಗ ಬರುತ್ತಾರೆ ಆಗ ಬರುತ್ತಾರೆಂದು ಕಾಯುತ್ತಾ ಕುಳಿತರೆ ಹೊರಗಡೆ ಹೆಜ್ಜೆ ಸಪ್ಪಳವೇ ಇಲ್ಲ. ನಾನೋ ನೋಡಿ ನೋಡಿ ಊಟದ ವೇಳೆಯಾದ್ದರಿಂದ ಮತ್ತೆ ಶಾಲೆ ಕಡೆಗೆ ಬಂದರೆ ಅಧಿಕಾರಿಗಳ ಯಾವ ಸುಳಿವೂ ಇಲ್ಲ.

ಮುಖ್ಯ ಗುರುಗಳೋ… “ಬಾಯವ್ರ. ಬಂದೇ ಇಲ್ವಲ್ರಿ ಸಾಹೆಬ್ರು? ನಾವೇ ಊಟ ಮಾಡಿ ಬರೋದೆನ್ರಿ ಅಂದಾಗ ನಂಗೂ ಹೊಟ್ಟೆ ತಾಳ ಹಾಕುತ್ತಿದದ್ದುದರಿಂದ ಅದೇ ಸರಿ ಎಂದೆ. ಒಬ್ಬೊಬ್ಬರೆ ಪಾಳಿ ಪ್ರಕಾರ ಹೋಗಿ ಊಟ ಮಾಡಿ ಬಂದೆವು. ಆ ದಿನದ ಸಾಹೇಬ್ರ ಊಟ ಹಾಗೇ ಉಳಿದಿತ್ತು ಅಲ್ಲಿ. ಅಂದು ಯಾವ ಆಧಿಕಾರಿಗಳೂ ಶಾಲೆಯತ್ತ ಬರಲಿಲ್ಲ. ಆದರೆ ಸಂಜೆ ಮನೆಗೆ ಹೋದ ಮೇಲೆ ನಾನಾ ಮತ್ತು ಆಯಿ ಹೇಳಿದ ಒಂದು ಮಾತು ನನ್ನನ್ನು ಸತ್ತು ಸತ್ತು ಬದುಕಿಸಿತ್ತು. ಸುಮಾರು ತಿಂಗಳುವರೆಗೂ….

ನನ್ನ ಬಳಿ ಅಲ್ಲಿ ಕನ್ನಡದ ಗೀತ ಗಾಯನ ಕೇಳಲು ಒಂದು ಪುಟ್ಟ ಟೇಪ್ ರೇಕಾರ್ಡರ್ ಸದಾ ಇಟ್ಟುಕೊಳ್ಳುತ್ತಿದ್ದೆ. ನಾನು ರೂಮಿನಲ್ಲಿದ್ದಾಗಲೆಲ್ಲ ಅದು ಕೂಗುತ್ತಲೇ ಇರಬೇಕು. ಹಾಡಿನ ಸದ್ದು ಕೇಳಿ ನಾನಾ ಮತ್ತು ಆಯಿ ನನ್ನ ರೂಮಿನತ್ತ ಹೊರಳಿ… ಮಧ್ಯಾಹ್ನ ಊಟಕ್ಕೆ ಬರದ ಕಾರಣ ಕೇಳಿದರು. ನಾನೋ ಮೆಂಬರ್ ಮನೆಯ ಪಾರ್ಟಿ ವಿಷಯ ಹೇಳಿದೆ. ಕೇಳಿ ಇಬ್ಬರೂ ಆತಂಕಿತರಾದಂತೆ ಕಂಡಿತು. ಆಯಿ ಏನೇನೋ ಪಟಪಟ ಅಂತ ಗಂಡನ ಕಡೆ ಮಾತಾಡಿದರು. ನನಗದು ಅರ್ಥ ಆಗಿರಲಿಲ್ಲ. ನಂತರ ನಾನಾ … ” ತಂಗ್ಯವ್ವ ಅವರ ಮನೇಲಿ ಯಾಕೆ ಉಣ್ಣೋಕೆ ಹೋದೆ? ಅಲ್ಲಿ ಗೊತ್ತಿರೋರು ಯಾರು ಊಟ ಮಾಡೋದಿಲ್ಲ. ಅನಿವಾರ್ಯ ಅಂತಾದರೆ ಮಾತ್ರ ಊಟ ಮಾಡೋದು. ತಕ್ಷಣವೇ ಏಲಕ್ಕಿ ತಿಂದು ಬಿಡ್ತಾರು. ಅವರದ್ದು ಮದ್ದು ಹಾಕುವ ಮನೆತನ “ಅಂದಾಗ ನನ್ನ ಉಸಿರು ಒಮ್ಮೆ ನಿಂತು ಮತ್ತೆ ಬಂದಂತಾಗಿತ್ತು.

ಅಯ್ಯೋ ನನಗಿಲ್ಲಿ ವಿಷ ಹಾಕುವವರು ಸಹ ಇದ್ದಾರ ನಾನಾ ? ಎಂದು ಜೋರಾಗಿ ಅಳುತ್ತಾ ಕೇಳಬೇಕೆನಿಸಿದ ಮಾತು ಗಂಟಲಲ್ಲೇ ಉಳಿದರೂ.. ಕಣ್ಣ ನೀರು ಕೆನ್ನೆ ಮೇಲೆ ಹರಿಯುತಿತ್ತು. ನನ್ನ ಸಮಾಧಾನಕ್ಕೆ ಆಯಿ ನಿಂತರು . “ನೀನು ಇಲ್ಲಿಯ ಮಾವುಲಿ ತಾಯಿಯನ್ನು ನಂಬು. ಏನೂ ಆಗುವುದಿಲ್ಲ “ಎನ್ನುತ್ತಾ… ಎರಡೆಸಳು ಏಲಕ್ಕಿ ತಿನ್ನಿಸಿದರು. ನಾನು ತೀರ ಹೆದರಿಕೊಳ್ಳಲು ಮತ್ತೂ ಒಂದು ಕಾರಣವಿತ್ತು, ಅದೇನೆಂದರೆ, ನಾನು ಇಲ್ಲಿಗೆ ಸೇವೆಗೆಂದು ಬರುವ ಮುನ್ನಾ ದಿನ ಕೂಡಾ ಇಂಥದ್ದೇ ಅನುಭವವಾಗಿ, ಆಗ ಅವ್ವ ಸಹ ಇದೇ ಮಾತು ಹೇಳಿದ್ದಳು. ಕಂಡ್ ಕಂಡ್ ಕಡೆ ಊಟ ತಿಂಡಿ ಮಾಡಬಾರದು ಎಂದೆಲ್ಲಾ ಬುದ್ದಿವಾದ ಹೇಳಿ, ನನ್ನ ಎರಡನೇ ಅಕ್ಕ ಅವ್ವಳ ಹೊಟ್ಟೆಯಲ್ಲಿ ಇದ್ದಾಗಲೇ ಅವಳಿಗೆ ಸಹ ಮದ್ದು ಹಾಕಿದ್ದು, ಪಡಬಾರದ ಸಂಕಟ ಅನುಭವಿಸಿದ್ದು, ಹೊರಗಿನ ತೊಂದರೆ ಇರಬೇಕೆಂದು ಭಟ್ಟರಮನೆ, ಗಾಡಿಗರ ಮನೆ ಎಂದೆಲ್ಲಾ ಅಪ್ಪ ಓಡಾಡಿದ್ದು, ಮನೆಯ ವಾಸ್ತು ದೋಷವೆಂದು ದಕ್ಷಿಣದ ಬಾಗಿಲನ್ನು ಉತ್ತರಕ್ಕೆ ತಿರುಗಿಸಿದ್ದು, ಆಮೇಲೆ ಯಾರೋ ಹೇಳಿದರೆಂದು ಮದ್ದು ತೆಗೆಸುವವರ ಹತ್ತಿರ ಹೋಗಿ ಹೊಟ್ಟೆಯ ಮದ್ದನ್ನು ಹೊರಗೆ ಕಕ್ಕಿಸಿದ್ದು, ಆಮೇಲೆಯೇ ತಾನು ಮನುಷ್ಯಳು ಅಂತ ಆಗಿದ್ದು…

.. ಅದಕ್ಕೆ ನಿನ್ನ ಅಕ್ಕ ಅಷ್ಟು ಸಣ್ಣ ಹುಟ್ಟಿದ್ದು… ಎಂತೆಲ್ಲಾ ಈ ಮದ್ದಿನ ಕಥೆ ಕೇಳಿ, ಚೌತಿಗೆ ಹೋದಾಗಲೂ “ಮಗ ಮದ್ದು ಬಿದ್ರು ಹಿಂಗೆಯೇ.. ಊಟ ಸೇರಲ್ಲ, ಹೊಟ್ಟೆಗೆ ಸಂಕಟ. ಮುಂದೆಂತೂ ಬಾಳ ಕಷ್ಟ. ಒಂದ್ಸಲ ನಿನ್ನನ್ನೂ ಸಹ ಮದ್ದು ತೆಗೆಸೋರ ಕಡೆ ಕರೆದೊಯ್ಯಬೇಕಿತ್ತೆನೋ ಮಾರಾಯತಿ. ನಿಂಗೆ ರಜೇನೆ ಇಲ್ಲ ಅಂತಿ” ಎಂದು ಅವ್ವ ಅಲವತ್ತುಕೊಂಡ ಮಾತೆಲ್ಲಾ ನೆನಪಾಗಿ, ಮರತೇ ಹೋದ ಮದ್ದು ಮತ್ತೀಗ ಹೊಟ್ಟೆಯಿಂದ ಸೀದಾ ಗಂಟಲಿಗೆ ಬಂದು ನಿಂತಿತ್ತು.

ಅಷ್ಟೆ ಅಲ್ಲದೆ ಸತ್ತ ಊಸರವಳ್ಳಿ ಅಥವಾ ಹಲ್ಲಿಯನ್ನು ಕೊಳೆಯಿಸಿ ಅದರ ರಸದಿಂದ ಮದ್ದು ಮಾಡುತ್ತಾರಂತೆ. ತಿಂಗಳಿಂದ ತಿಂಗಳಿಗೆ ಮದ್ದು ತಿಂದವನ ಪರಿಸ್ಥಿತಿ ಗಂಭೀರವಾಗಿ ರೋಗಿ ಸಾಯುವ ಹಂತಕ್ಕೂ ಹೋಗುತ್ತಾನಂತೆ…. ಇಂತಹ ಕಂತೆ ಕಂತೆ ಕಥೆಗಳು ನೆನಪಾಗಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡಂತಾಯಿತು ನನ್ನ ಪರಿಸ್ಥಿತಿ. ಅಂದು ಶಾಲೆಗೆ ಬರುತ್ತೇನೆಂದ ಅಧಿಕಾರಿಗಳಿಗೂ ಮನಸೋ ಇಚ್ಛೆ ಬೈದರೂ ಸಮಾಧಾನ ವಾಗುತ್ತಿರಲಿಲ್ಲ. ಕುಂತಲ್ಲಿ ನಿಂತಲ್ಲಿ ಮದ್ದಿನ ಗುಂಗೇ ತಲೆಯಲ್ಲಿ ಗುಂಯ್ ಗುಡುತಿತ್ತು.

ಇದ್ದಕ್ಕಿದ್ದ ಹಾಗೇ ಮಂಕಾಗಿ ಹೋಗುತ್ತಿರುವ ನನ್ನ ನೋಡಿ ಅಲ್ಲಿ ಅಕ್ಕ ಪಕ್ಕದವರೆಲ್ಲಾ ಒಂದೊಂದು ಮನೆ ಮದ್ದು ಮಾಡುತಿದ್ದರು. ಹುರುಳಿ ಬೀಜದ ಪ್ರಯೋಗ, ಮತ್ಯಾವುದೋ ಎಣ್ಣೆ ಹನಿಯನ್ನು ನೀರಿಗೆ ಬಿಟ್ಟು ಪರೀಕ್ಷೆ, ನುಗ್ಗೆ ಸೊಪ್ಪಿನ ರಸದ ಪರೀಕ್ಷೆ… ಹೀಗೆ ಒಬ್ಬೊಬ್ಬರಾಗಿ ಬಂದು, ಮದ್ದು ಪರೀಶೀಲನಾ ಪ್ರಯೋಗ ಮಾಡಿ… ಫಲಿತಾಂಶವನ್ನು ಮಾತ್ರ ಅಡ್ಡ ಗೋಡೆಗೆ ದೀಪ ಇಟ್ಟ ಹಾಗೆ ಇಟ್ಟು ಹೋಗುತಿದ್ದರು. ನನಗೋ ಈ ಮಾನಸಿಕ ತಳಮಳದಿಂದ ಬಿಡುಗಡೆ ಬೇಕಿತ್ತು. ಸಂಶಯ ಬಲವಾಗುತ್ತಾ ಹೋಯಿತು. ಆರೋಗ್ಯದಲ್ಲಿ ಏನೇ ಬದಲಾವಣೆಯಾದರೂ… ಕೊನೆಗೆ ತಿಂಗಳ ನೋವು ಸ್ವಲ್ಪ ಹೆಚ್ಚಾದರೂ ಇದು ಉಂಡ ಮದ್ದಿನ ಪ್ರಭಾವವೇ ಅಂತ ಅನ್ನಿಸೋಕೆ ಶುರುವಾಯ್ತು. ಮತ್ತೂ ಒಂದು ಗೊಂದಲವಿತ್ತು. ನಮ್ಮ ಊರಿನ ಕಡೆಯೇ ಮದ್ದು ಹಾಕುವ ಮನೆಯಲ್ಲೆ ಮಜ್ಜಿಗೆ ಕುಡಿದು ಬಂದಿದ್ದೆನಲ್ಲ. ಅದೂ ಒಂದು ನೆಪವಾಗಿ ಅನುಭವಿಸಲು ಸಾಧ್ಯವೇ ಇಲ್ಲ ಅನ್ನುವಂತ ಸ್ಥಿತಿ ಗೆ ಬಂದು ಬಿಡುತ್ತಿದ್ದೆ. ಮಕ್ಕಳ ನಡುವೆ ಹಗಲು ಹೇಗೋ ಕಳೆದು ಹೋಗುತಿತ್ತು . ಆದರೆ ಒಂದೊಂದು ರಾತ್ರಿಗಳು ಮಾತ್ರ. ರೆಪ್ಪೆ ಕೂಡದೆ ಕಳೆದು ಬಿಡುತಿದ್ದವು.

ಮದ್ದಿಗೆ ಮದ್ದಿಲ್ಲದೆ ಅದೇ ಒಂದು ನೆಪವಾಗಿ, ಪದೇ ಪದೆ ಜ್ವರ, ಇದ್ದಕ್ಕಿದ್ದ ಹಾಗೇ ಬಿಪಿ ಲೋ ಆಗುವುದೆಲ್ಲ ಒಂದೆರಡು ಸಲ ಆದಾಗ ರಜೆ ನೋಡಿ ಖಾನಾಪುರ ಬಂದೆ. ಖಾನಾಪುರದಲ್ಲಿ ನನ್ನ ಅಜ್ಜಿಯೂರ ಕಡೆಯ ಶಿಕ್ಷಕರ ಕುಟುಂಬ ಇತ್ತು. ಮತ್ತೂ ಅವರಲ್ಲಿ ಇರುವದೇ ನನಗೆ ದೊಡ್ಡ ಧೈರ್ಯವಾಗಿತ್ತು. (ಅವರ ಬಗ್ಗೆ ಮುಂದೆ ಬರೆದೇನು) ನಾನು ಮತ್ತು ಅಲ್ಲಿಯ ನನ್ನಕ್ಕ ಸೇರಿಕೊಂಡು ಬೆಳಗಾವಿಗೆ ಹೋದೆವು. ಅಲ್ಲಿ ಏನೋ ಔಷಧಿ ಕೊಟ್ಟು… ಒಂದಿಷ್ಡು ದಿನ ಜೋಳದ ರೊಟ್ಡಿ ಬೆಲ್ಲ ಮಾತ್ರ ತಿನ್ನಬೇಕು ವಿಷ ಹೊರಗೆ ಹೋಗುತ್ತೆ ಎಂದರು. ನಾನು ಒಂದೆರಡು ಜೋಳದ ಪ್ಯಾಕೆಟ್ ಮತ್ತೆ ಬೆಲ್ಲದ ಅಚ್ಚು ಹಿಡಿದು ಊರಿಗೆ ಬಂದೆ. ನಾನಾ ಆಯಿ ಸಹ ಸಮಾಧಾನ ಪಟ್ಟರು.ನನಗೋ ಅಂದು ನೆಮ್ಮದಿಯ ನಿದ್ದೆ.

ಅಲ್ಲಿಂದ ವರ್ಗವಾಗಿ ಬಂದ ಮೇಲೆ ಸಹ ನನಗೆ ಅಲ್ಲಿಯ ಮದ್ದಿನ ವಿಷಯ ತುಂಬಾ ಕಾಡುತಿತ್ತು. ಯಾಕೆ ಈ ಮದ್ದು ಹಾಕುತ್ತಾರೆ? ಅದರಿಂದ ಏನು ಪ್ರಯೋಜನ ? ನಮ್ಮ ಹತ್ತಿರದ ಊರಲ್ಲೊಂದು ಅಂಥದ್ದೇ ಮನೆತನವಿದೆಯಲ್ಲಾ… ಆ ಮನೆತನ ಇಂದಿಗೂ ಯಾಕೆ ಈ ಸಂಪ್ರದಾಯ ಮುಂದುವರೆಸಿಕೊಂಡು ಹೋಗ್ತಿದೆ ? ಎಂದೆಲ್ಲ ಪ್ರಶ್ನೆ ಬಂದಾಗ ಈ ಬಗ್ಗೆ ಅಲ್ಲಿ ಇಲ್ಲಿ ವಿಚಾರಿಸಿದಾಗ ಒಂದು ಹೊಸ ಸಂಗತಿ ತಿಳಿಯಿತು. ಅದೇನೆಂದರೆ.ನಮ್ಮೂರ ಆ ಸಮೀಪದ ಮದ್ದಿನ ಮನೆ ಸಿರಸಿ ಸಿದ್ದಾಪುರ ಮುಖ್ಯ ರಸ್ತೆಗೆ ತಾಗಿಕೊಂಡಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಹೋಗುವ ಚಳುವಳಿಗಾರರಿಗೆ ನೀರು, ಮಜ್ಜಿಗೆಯನ್ನೆಲ್ಲಾ ಕೊಡುವುದನ್ನು ತಪ್ಪಿಸಿಕೊಳ್ಳಲು ಹೀಗೆ ಮದ್ದು ಹಾಕುತ್ತಾರೆ ಅಂತ ಸುದ್ದಿ ಹುಟ್ಟಿಸಿಕೊಂಡಿದ್ದರಂತೆ ಎನ್ನುವ ಮಾಹಿತಿ. ಅಬ್ಬಾ ! .ಹಾಗಾದರೆ ಅಂದು ಅವರು ನನಗೆ ಮಜ್ಜಿಗೆಯಲ್ಲಿ ಮದ್ದು ಬೆರೆಸಿರಲಿಲ್ಲವಾ ?

ಅದೇ ರೀತಿ ಗಡಿಯೂರಲ್ಲಿ ನಾನು ಅಲ್ಲಿ ಇರುವಲ್ಲಿಯವರೆಗೂ.. ಅಂದು ಊಟ ಬಡಿಸಿದ ಆ ಪುಣ್ಯಾತ್ಮರು ಎದುರಾದಾಗಲೆಲ್ಲ… ಬಾಯಿ ತುಮಿ ಕಸ ಆಹೆ? ಗಾಂವಾಂತ್ನ ಆಯಿ ವಡೀಲ್ ಆಲೇಲ ಕಾಯ್? ತಿತ್ತ ಸಗಳಿ ಬರೇ ಹೈ ಕಾಯ್? (ಹೇಗಿದ್ದೀರಿ ಬಾಯಿ? ಊರಿನಿಂದ ಅಪ್ಪವಾಮ್ಮ ಬಂದಿದ್ದರಾ? ಊರಲ್ಲಿ ಎಲ್ಲಾ ಕ್ಷೇಮವಾ ) ಎಂದು ಅಕ್ಕರೆ ಸುರಿಸಿ ಕೇಳುತಿದ್ದ ಮಾತು ನೆನಪಾದರೆ ಈಗಲೂ ಅಂದು ಕೊಳ್ಳುತ್ತೇನೆ. ವಿಷವುಂಡು ಬಂದೆನೆಂದುಕೊಂಡರೂ ಅವರು ಉಣ್ಣಿಸಿ ಕಳಿಸಿದ್ದು ಅಮೃತವನ್ನೇ ಆಗಿತ್ತೆಂದು. ಮತ್ತೂ…

ಆಗ ವಿಷ ಬಿದ್ದಿದ್ದು ದೇಹಕ್ಕಲ್ಲ ಮನಸಿಗೆ ಎಂದು ತಿಳಿಯಲು ಅದೆಷ್ಟೋ ವರ್ಷ ಬೇಕಾಯ್ತು.

‍ಲೇಖಕರು avadhi

2 January, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading