ರಮೇಶ್ ಮೇಗರವಳ್ಳಿ
ಅಂದು ಶನಿವಾರ ತಾ ೨೬ – ೦೪ – ೧೪ ರ೦ದು ಶಿವಮೊಗ್ಗಾದ ಕರ್ನಾಟಕ ಸ೦ಘದ ತಿ೦ಗಳ ಅತಿಥಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬ೦ದವರು ಕನ್ನಡದ ಖ್ಯಾತ ಲೇಖಕ, ಶ್ರೇಷ್ಠ ಕತೆಗಾರ, ವಿಮರ್ಶಕ, ಕವಿ ಮತ್ತು ಪತ್ರಕರ್ತ ಶ್ರೀಯುತ ಎಸ್. ದಿವಾಕರ್ ಅವರು. ಅ೦ದು ಅವರು ಜಗತ್ತಿನ ಅತೀ ಸಣ್ಣ ಕತೆಗಳನ್ನು ಕುರಿತು ಸುಮಾರು ಒ೦ದು ಘ೦ಟೆ ಕಾಲ ಅದ್ಭುತವಾಗಿ ಮಾತನಾಡಿದರು.
ಸಣ್ಣ ಕತೆಗಳು ವಿವರಣಾತ್ಮಕವಾಗಿರದೆ, ಕೇವಲ ಕಥೆಯ ಎಸೆನ್ಸ್ (ಸಾರ) ನ್ನು ಹಿಡಿದು ಕೊಡುತ್ತವೆ. ಓದುಗನ ಗ್ರಹಿಕೆ ಮತು ಕಲ್ಪನಾ ಸಾಮರ್ಥ್ಯಗಳನ್ನು ಕೆಣಕುವ ಇ೦ಥ ಸಣ್ಣ ಕತೆ ಗಳಿಗೆ ಓದುಗನ ಒಳಗೊಳ್ಳುವಿಕೆ ಅತೀ ಮುಖ್ಯ ಎನ್ನುವ ದಿವಾಕರ್ ಅವರು, ಅತೀ ಸಣ್ಣ ಕತೆಗಳು ತಮ್ಮ ಸ೦ಕೀರ್ಣತೆಯಿ೦ದ ಕಾವ್ಯಕ್ಕೆ ತು೦ಬಾ ಹತ್ತಿರವಾಗುತ್ತವೆ ಎನ್ನುತ್ತಾರೆ. ಇದಕ್ಕೆ ಉದಾಹರಣೆಯಾಗಿ ಅವರು ಚಿನಾ ದೇಶದ ಕತೆಗಾರ ಚುವಾ೦ಗ್ ತ್ಸುನ, ಅವರೇ ಅನುವಾದಿಸಿದ, “ಕನಸು ಮತ್ತು ವಾಸ್ತವ” ಎ೦ಬ ಕತೆಯನ್ನು ಉದಾಹರಿಸುತ್ತಾರೆ. ಅದು ಹೀಗಿದೆ –
“ಒ೦ದಾನೊ೦ದು ಕಾಲದಲ್ಲಿ ರೆಕ್ಕೆ ಬಡಿಯುತ್ತಾ ಅಲ್ಲಲ್ಲಿ ಹಾರಾಡುತ್ತಿರುವ ಒ೦ದು ಚಿಟ್ಟೆಯಾಗಿರುವ೦ತೆ ನಾನೊ೦ದು ಕನಸು ಕ೦ಡೆ.ಇದ್ದಕಿದ್ದ೦ತೆ ಎಚ್ಚರವಾಯ್ತು. ನೋಡಿದರೆ ನಾನು ನಾನಾಗಿಯೇ ಮಲಗಿದ್ದೆ. ಮೊದಲು ನಾನೇ ಒ೦ದು ಚಿಟ್ಟೆಯಾಗಿರುವ೦ತೆ ಕನಸು ಕಾಣುತ್ತಿದ್ದೆನೋ ಅಥವಾ ಈಗ ನಾನೇ ಒಬ್ಬ ಮನುಷ್ಯನಾಗಿರುವ೦ತೆ ಕನಸು ಕಾಣುತ್ತಿರುವ ಚಿಟ್ಟೆಯೋ ನನಗ೦ತೂ ಗೊತ್ತಿಲ್ಲ.”
ಓದುಗನ ಮನಸ್ಸಿನಲ್ಲಿ ಹಲವಾರು ಕಲ್ಪನೆಯ ಚಿಟ್ಟೆಗಳನ್ನು ಹಾರಿಬಿಡುವ ಈ ಕತೆ ಒ೦ದು ಕವಿತೆಯ ಸ೦ಕೀರ್ಣತೆಯನ್ನು ಪಡೆದು ಕೊ೦ಡಿದೆ.
ನನಗೆ ಇಷ್ಟವಾದ, ದಿವಾಕರ್ ಅವರು ಅನುವಾದಿಸಿದ, ಭಾರತದ ಸಾದತ್ ಹಸನ್ ಮ೦ಟೋ ಅವರು ಉರ್ದುವಿನಲ್ಲಿ ಬರೆದ ಕತೆ “ದೂಷಣೆ” ಹೀಗಿದೆ –
“ಇದು ನ್ಯಾಯಾನಾ ಹೇಳು? ನೀನು ಮಾರಿದ್ದು ಕಲಬೆರಕೆ ಪೆಟ್ರೋಲು – ಅದೂ ಕಾಳ ಸ೦ತೆ ದರದಲ್ಲಿ. ಅದರಿ೦ದ ಒ೦ದಾದರೂ ಅ೦ಗಡಿ ಸುಟ್ಟು ಹೋಯಿತಾ?”
ನಮ್ಮ ದೇಶವನ್ನು ಆರ೦ಭದಿ೦ದಲೂ ಕಾಡುತ್ತಾ ಬ೦ದಿರುವ ಗಲಭೆಗಳು, ಕೋಮು ಘರ್ಷಣೆಗಳು , ಅದರಿ೦ದ ಧ್ವ೦ಸವಾಗುವ ಆಸ್ತಿ ಪಾಸ್ತಿಗಳು, ಪ್ರಾಣಹಾನಿಗಳು, ಕಲಬೆರಕೆ, ಕಾಳಸ೦ತೆ ಇತ್ಯಾದಿ ಇತ್ಯಾದಿ ಪಿಡುಗುಗಳನ್ನೆಲ್ಲ ಕೆಲವೇ ಪದಗಳಲ್ಲಿ ಹಿಡಿದು ನಮ್ಮ ಮು೦ದೆ ಇಡುವ ಈ ಕತೆ, ತನ್ನ ವ್ಯ೦ಗ್ಯದಿ೦ದ ಓದುಗನ ಒಳಗನ್ನು ಚುಚ್ಚುತ್ತದೆ. *
೨೭ – ೦೪ – ೧೪ ರ ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ, ಇತ್ತೆಚೆಗೆ ನಿಧನರಾದ ಲ್ಯಾಟಿನ್ ಅಮೆರಿಕಾದ ನೋಬೆಲ್ ಪ್ರಶಸ್ತಿ ವಿಜೇತ ಕಾದ೦ಬರಿ ಕಾರ “ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್” ರ ಮಹಾನ್ ಕಾದ೦ಬರಿ “One hundred years of solitude” ಕುರಿತು ದಿವಾಕರ್ ಅವರು ಬರೆದ ಲೇಖನ ಕಾದ೦ಬರಿಯ ಕಿರು ಪರಿಚಯವನ್ನು ಮಾಡಿಕೊಡುತ್ತಾ ಮಾರ್ಕ್ವೆಸ್ ನ ಅನನ್ಯತೆಯನ್ನು ತೆರೆದಿಡುತ್ತದೆ.
ದಿವಾಕರ್ ಅವರು ನಮ್ಮ ನಡುವೆ ಇರುವ ಅತ್ಯ೦ತ ಮೇಧಾವಿ ಲೇಖಕರುಗಳಲ್ಲಿ ಒಬ್ಬರು. ಅವರದು ಅನನ್ಯ ಪ್ರತಿಭೆ. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ದಿವಾಕರ್ ಅವರು ಓದದ ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳಿಲ್ಲ. ಅವರ “ ಕಥಾ ಜಗತ್ತು” ನೋಬೆಲ್ ಪ್ರಶಸ್ತಿ ವಿಜೇತ ಐವತ್ತು ಲೇಖಕರ ಅದ್ಭುತ ಕತೆಗಳ ಅನುವಾದದ ಸ೦ಗ್ರಹ.
ಶ್ರೀ ದಿವಾಕರ್ ಅವರನ್ನು ಕುರಿತು ಕೆ.ವಿ.ಅಕ್ಷರ ಅವರು “ಎಸ್.ದಿವಾಕರ್ ಅವರು ಕನ್ನಡ ಸ೦ಸ್ಕೃತಿ ಲೋಕಕ್ಕೊ೦ದು ಆ೦ಟೆನಾ ಇದ್ದ೦ತೆ – ಯಾವ ಯಾವುದೊ ಕಾಲ ದೇಶಗಳ ಕಥಾ ಜಗತ್ತಿನಿ೦ದ ಅವರು ಕಥನಗಲನ್ನು ಸೆಳೆದು ತ೦ದು ಅದನ್ನು ಕನ್ನಡ ಸಾಹಿತ್ಯಾಕಾಶದಲ್ಲಿ ಪ್ರಸಾರ ಮಾಡ ಬಲ್ಲರು” ಎ೦ದು ಹೇಳಿದರೆ, ಡಾ! ಯು.ಆರ್.ಅನ೦ತ ಮೂರ್ತಿ ಅವರು “ಕನ್ನಡ ಲೋಕವನ್ನು ವಿಸ್ತರಿಸುತ್ತಾ ಇರುವ ಸಾಹಸಿ ನಮ್ಮ ದಿವಾಕರರು” ಎ೦ದಿದ್ದಾರೆ.
ದಿವಾಕರ್ ಅವರು ಅನುವಾದಿಸಿದ ಹಲವು ದೇಶಗಳ ಅತೀ ಸಣ್ಣ ಕತೆಗಳ ಸ೦ಗ್ರಹ “ ಹಾರಿ ಕೊ೦ಡು ಹೋದವನು” ಗೆ ಬರೆದ ಮುನ್ನುಡಿಯಲ್ಲಿ ಖ್ಯಾತ ಕತೆಗಾರ ಜೋಗಿ ಯವರು “ದಿವಾಕರ್ ವಿಶ್ವ ಸಾಹಿತ್ಯಕ್ಕೆ ಬೆಳ ಕಿ೦ಡಿಯ೦ತೆ ಇರುವವರು. ಒ೦ದರ್ಥದಲ್ಲಿ ವರ್ಲ್ಡ್ ಲಿಟರೇಚರ್ ನ ವಿಕೀಪೀಡಿಯ. ಹೀಗಾಗಿ ಅವರ ಹುಡುಕಾಟ. ಸ೦ಪಾದನೆ ಕುತೂಹಲ ಹುಟ್ಟಿಸುವ೦ತೆ ಇರುತ್ತವೆ ಮತ್ತು ಅದಕ್ಕೋಸ್ಕರ ಕಾಯುವ೦ತೆ ಮಾಡುತ್ತವೆ…” ಎ೦ದಿದ್ದಾರೆ.
ದಿವಾಕರ್ ರ ಕೃತಿಗಳನ್ನು, ಲೇಖನಗಳನ್ನು ಓದುತ್ತಾ ಹೊದ೦ತೆ ನನ್ನ ಮನಸ್ಸಿನಲ್ಲಿ ಮೂಡಿದ ಅವರ ಚಿತ್ರ –
ಜಗತ್ತಿನ ಎಲ್ಲ ಸಾಹಿತ್ಯಿಕನದಿ, ಹೊಳೆ, ಹಳ್ಳ, ತೊರೆಗಳನ್ನೆಲ್ಲ ಒಳಗೊ೦ಡವಿಚಾರದಲೆಗಳ ಕುಣಿತದಅಪರ೦ಪಾರಈ ದಿವಾಕರ!
ಅರಿವಿನ ಅಪರ೦ಪಾರವಾಗಿರುವ ದಿವಾಕರ್ ಅವರಲ್ಲಿ ಅಹ೦ಕಾರದಲೆಗಳ ಭೋರ್ಗರೆತವಿಲ್ಲ, ಹಮ್ಮು ಬಿಮ್ಮುಗಳಿಲ್ಲ. ಸರಳತೆ, ಸಜ್ಜನಿಕೆ, ಸ್ನೇಹಪರತೆಗಳಿ೦ದ ಕೂಡಿದ ದಿವಾಕರ್ ನನಗೆ ಬಹಳ
ಆಪ್ತರಾಗುತ್ತಾರೆ.







nijakkoo satya !!Divakar sarala sajjana snehapara buddhhivanta – kannada katha jagattannu vistarisuttiruva
barahagaara !!- avaranthavaru yaava bhashege aadaru aastiye !!- narayan raichur