ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವೇಕ ರೈ ಅವರು 'ಕಲಿತದ್ದು ಕಲಿಸಿದ್ದು'

ಪ್ರೊ ಬಿ ಎ ವಿವೇಕ ರೈ ಅವರ ಹೊಸ ಕೃತಿ, ‘ಉದಯವಾಣಿ’ಯ ಅಂಕಣ ಬರಹ ಇಂದು ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.
ಜಮೀಲ್ ಅವರು ತಮ್ಮ ಸಾವಣ್ಣ ಪ್ರಕಾಶನದಿಂದ ಈ ಕೃತಿಯನ್ನು ಪ್ರಕಟಿಸಿದ್ದಾರೆ.
ಈ ಕೃತಿಗೆ ವಿವೇಕ ರೈ  ಅವರು ಬರೆದ ಮಾತು ಇಲ್ಲಿದೆ-
ಬಿ.ಎ. ವಿವೇಕ ರೈ
ಕಲಿಸುವುದನ್ನು ಒಂದು ಉದ್ಯೋಗವಾಗಿ ಆಕಸ್ಮಿಕವಾಗಿ ಆರಿಸಿಕೊಂಡ ನನಗೆ ಅದಕ್ಕೆ ಬೇಕಾದ ತಿಳುವಳಿಕೆ ಎಲ್ಲಿಂದ ಎಂದಿನಿಂದ  ಸಿಗಲು ಸುರುವಾಯಿತು ಎಂದು ಯೋಚಿಸುವಾಗಲೆಲ್ಲ ಅದೊಂದು ವಿಚಿತ್ರ ವಿದ್ಯಮಾನ ಮತ್ತು ಅದ್ಭುತ ಮಹಾಯಾನ ಅನ್ನಿಸುತ್ತದೆ.
ಮಗುವಿನ ಅವಸ್ಥೆಯಿಂದ ತೊಡಗಿ ಬಾಲಕನ ಹಂತಕ್ಕೆ ಬರುವವರೆಗಿನ ಕಲಿಯುವಿಕೆಗೆ ಮನೆಯ ಪರಿಸರವು  ಅವಕಾಶಗಳ ಬಾಗಿಲು ಕಿಟಿಕಿಗಳನ್ನು ತೆರೆಯುತ್ತದೆ. ಮುಂದೆ ಶಾಲೆಯ ಕಲಿಯುವಿಕೆಯ ಮೆಟ್ಟಿಲುಗಳು ಬೇರೆ ಬೇರೆ ಸ್ತರಗಳಲ್ಲಿ ಬೇರೆ ಬೇರೆ ಸ್ಥಳ ಮತ್ತು ಕಾಲಗಳಲ್ಲಿ ಏರಲು ಮತ್ತು ಇಳಿಯಲು ದೊರೆಯುತ್ತವೆ. ಶಾಲೆ -ಕಾಲೇಜು -ವಿಶ್ವವಿದ್ಯಾನಿಲಯಗಳ ಏಣಿಗಳ ಮೆಟ್ಟಿಲುಗಳನ್ನು ಏರಿ ಹಾದುಹೋಗಲು ಅವಕಾಶಗಳು ಮತ್ತು ಅಡಚಣೆಗಳು ಎದುರಾಗುತ್ತವೆ. ಇಂತಹ ಸಾಂಸ್ಥಿಕ ಕಲಿಯುವಿಕೆಗಳಿಗೆ ಸಮಾನಾಂತರವಾಗಿ, ಕೆಲವೊಮ್ಮೆ ಪರ್ಯಾಯವಾಗಿ ಮನೆ -ಕುಟುಂಬ -ಸಮಾಜ-ಪರಿಸರ -ಪುಸ್ತಕ-ಪ್ರವಾಸ : ಹೀಗೆ ಬಹುರೂಪಿ ಸ್ತರಗಳಲ್ಲಿ ಕಲಿಯುವಿಕೆ ನಡೆಯುತ್ತದೆ.
ಇದರ ಪರಿಣಾಮವಾಗಿ ತಿಳುವಳಿಕೆಯ ಸಂಕೀರ್ಣ ಮೊತ್ತವೊಂದು ನೆನಪಿನ ಕೋಶಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಅಡಕವಾಗಿರುತ್ತದೆ. ಈ ದೃಷ್ಟಿಯಿಂದಲೇ ‘ಕಲಿಸುವಿಕೆ ‘ ಎನ್ನುವುದು ‘ಕಲಿಯುವಿಕೆ ‘ ಎನ್ನುವುದರ ಪ್ರಾಯೋಗಿಕ ರೂಪ . ಕಲಿಸುವಿಕೆಯ ಕಾಯಕವೆಂದರೆ ಅದು ಕಲಿಯುವಿಕೆಯ ಮಾಯಾಲೋಕ .
ಸುಮಾರು ಎಪ್ಪತ್ತಎರಡು ವರ್ಷಗಳ ನನ್ನ ಜೀವಿತಾವಧಿಯಲ್ಲಿನ  ಕಲಿಯುವಿಕೆ ಮತ್ತು ಕಲಿಸುವಿಕೆಗಳು ಮಿಳಿತವಾದ ಸಂಕೀರ್ಣ ಕಥನವನ್ನು ಕನ್ನಡ ದಿನಪತ್ರಿಕೆ ‘ಉದಯವಾಣಿ ‘ಯ  ಸಂಪಾದಕರ ಕೋರಿಕೆಯ ಮೇರೆಗೆ ಬರೆದೆ. ಅದು ‘ಉದಯವಾಣಿ’ ಯ ‘ಸಾಪ್ತಾಹಿಕ ಸಂಪದ’ದಲ್ಲಿ ಆ  ಪತ್ರಿಕೆಯ  ೨೦೧೮ ಆಗಸ್ಟ್ ೧೨ ರಿಂದ ತೊಡಗಿ ೨೦೧೮ ದಶಂಬರ ೩೦ರವರೆಗೆ ೨೧ ಕಂತುಗಳಲ್ಲಿ ಪ್ರಕಟವಾಯಿತು. ಅದಕ್ಕೆ ‘ಕಲಿತದ್ದು ಕಲಿತದ್ದು ಕಲೆತ ಕಥನ ‘ ಎಂದು ಹೆಸರು ಕೊಟ್ಟಿದ್ದೆ. ಈ ಬರಹಗಳಿಗೆ ಕರ್ನಾಟಕದ ಒಳಗಿನ ಮತ್ತು ಹೊರಗಿನ ಬೇರೆ ಬೇರೆ ಕ್ಷೇತ್ರಗಳ ಓದುಗರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು .

ಈಗ ಆ ಬರಹಗಳಲ್ಲಿ ಇಪ್ಪತ್ತನ್ನು ಆಯ್ಕೆಮಾಡಿಕೊಂಡು, ಅನೇಕ  ಕಡೆ ಮಾಹಿತಿಗಳನ್ನು ಸೇರಿಸಿ ಮತ್ತು ಪರಿಷ್ಕರಿಸಿ, ‘ಕಲಿತದ್ದು ಕಲಿಸಿದ್ದು ‘ ಎನ್ನುವ  ಶೀರ್ಷಿಕೆಯಲ್ಲಿ ಈ ಪುಸ್ತಕವನ್ನು ರೂಪಿಸಿದ್ದೇನೆ. ಇದು ಪುಸ್ತಕರೂಪದಲ್ಲಿ ಪ್ರಕಟವಾಗಲು ಒತ್ತಾಸೆ ನೀಡಿದವರು ಮತ್ತು ಸಹಕರಿಸಿದವರು ಕನ್ನಡದ ಹಿರಿಯ ಮಾಧ್ಯಮ ತಜ್ಞ ಜಿ ಎನ್ ಮೋಹನ್.
ಈ ಪುಸ್ತಕವನ್ನು ತಮ್ಮ ಸಾವಣ್ಣ ಪ್ರಕಾಶನದ ಮೂಲಕ ಹೊರತರಲು ಉತ್ಸಾಹ ತೋರಿಸಿದವರು ಜಮೀಲ್ ಸಾವಣ್ಣ ಅವರು. ಅಚ್ಚುಕಟ್ಟಾದ ಸುಂದರ ಮುದ್ರಣ, ಅಪೂರ್ವ ಸಂಪರ್ಕ ಜಾಲ, ಅಪಾರ ಗೆಳೆಯರ ಬಳಗದ ಸಂಪತ್ತು ಹೊಂದಿರುವ ಜಮೀಲ್ ಅವರ ಸಾವಣ್ಣ ಪ್ರಕಾಶನದ ಮೂಲಕ ನನ್ನ ಈ ಗ್ರಂಥ ಹೊರಬರುತ್ತಿರುವುದು ನನಗೆ ವಿಶೇಷ ಹೆಮ್ಮೆಯನ್ನು ಉಂಟುಮಾಡಿದೆ. ಜಮೀಲ್ ಅವರ ವಿಶ್ವಾಸ ಮತ್ತು ಸಹಕಾರವನ್ನು ವಿಶೇಷವಾಗಿ ಸ್ಮರಿಸುತ್ತೇನೆ .
ಮಂಗಳೂರಿನ ಆಕೃತಿ ಪಿಂಟ್ಸ್ ನ ಕಲ್ಲೂರು ನಾಗೇಶ್  ಮತ್ತು  ಭಾರತಿ ಅವರು ಈ ಪುಸ್ತಕದ ಹಸ್ತಪ್ರತಿಯ ಸಿದ್ಧತೆಯಲ್ಲಿ ಸಹಕರಿಸಿದ್ದಾರೆ .
‘ಉದಯವಾಣಿ ‘ ಪತ್ರಿಕೆಯಲ್ಲಿ ಇಲ್ಲಿನ ಅಂಕಣ ಬರಹಗಳು ಪ್ರಕಟವಾಗಲು ಅವಕಾಶ ಕಲ್ಪಿಸಿದ ಪತ್ರಿಕೆಯ ಸಂಪಾದಕರಿಗೆ ಮತ್ತು  ನಿರಂತರ ಸಂಪರ್ಕದ ಮೂಲಕ ಬರಹಕ್ಕೆ ಒತ್ತಾಸೆ ನೀಡಿದ  ಸಂಪಾದಕೀಯ ಬಳಗದ ಪೃಥ್ವಿರಾಜ ಕವತ್ತಾರ್ ಅವರಿಗೆ ವಿಶೇಷ ಕೃತಜ್ಞತೆಗಳು .
ನನ್ನ  ಕಲಿಯುವಿಕೆಗೆ ತಮ್ಮ ವಾತ್ಸಲ್ಯದ ಧಾರೆ ಎರೆದ ಎಲ್ಲ ಗುರುಗಳಿಗೆ ಮತ್ತು ನನ್ನ ಕಲಿಸುವಿಕೆಗೆ ಸ್ಫೂರ್ತಿ ತುಂಬಿದ ನನ್ನ ವಿದ್ಯಾರ್ಥಿ ಸಮುದಾಯಕ್ಕೆ ಈ ಗ್ರಂಥವನ್ನು ಅರ್ಪಿಸುತ್ತಿದ್ದೇನೆ .

‍ಲೇಖಕರು avadhi

15 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading