
ಗೊರೂರು ಶಿವೇಶ್
ನೀವು ಕನ್ನಡದ ಸಿನಿಮಾ ವೀಕ್ಷಕರಾಗಿದ್ದರೆ ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಅವರ ಹಾಸ್ಯ ಪ್ರಸಂಗಗಳನ್ನು ನೋಡಿ ಖುಷಿ ಪಟ್ಟಿರಬಹುದು. ಅದರಲ್ಲೂ ಕಲಾಸಿಪಾಳ್ಯದಲ್ಲಿ ಸಾಧು ಕೋಕಿಲ ರಕ್ಷಿತಾರನ್ನು ಇಂಪ್ರೆಸ್ ಮಾಡಲು ತಮ್ಮದು ಜಿಮ್ ಬಾಡಿ ಎಂದು ತೋರಿಸಲು ವೈಟ್ ಲಿಫ್ಟ್ ಮಾಡಲು ಹೋಗಿ ಪಾಪಮ್ಮ ಬಂದು ಅದನ್ನು ಎಡಗೈಯಲ್ಲಿ ಎಸೆದು ಹೋದಾಗ ಶಿ ಇಸ್ ಮೈ ಓಲ್ಡ್ ಸ್ಟೂಡೆಂಟ್ ಎಂದು ಮುಜುಗರದಿಂದ ಪಾರಾಗಲು ಹೋಗುವುದು, ಕ್ಯಾನ್ಸರ್( ಕಟಕ) ರಾಶಿಯನ್ನು ರೋಗ ಎಂದು ಪರಿಭ್ರಮಿಸಿ ಮೋಸ ಹೋಗಿ ಬುಲೆಟ್ ಪ್ರಕಾಶ್ ಏಮಾರಿಸುವ ದೃಶ್ಯಗಳನ್ನು ಸಾಕಷ್ಟು ಎಂಜಾಯ್ ಮಾಡಿರಬಹುದು. ಅವರಿಬ್ಬರ ಕಾಂಬಿನೇಷನ್ನ ಅನೇಕ ಚಿತ್ರಗಳ ಕಾಮಿಡಿ ದೃಶ್ಯಗಳು ಮುಖ್ಯವಾಗಿ ತಮಿಳು ಚಿತ್ರಗಳಿಂದ ಎರವಲು ಎಂಬುದು ವಿಶೇಷ. ಬಹುತೇಕ ಈ ಎಲ್ಲ ಚಿತ್ರಗಳ ನಟ ವಿವೇಕ್ ಯಾ ವಿವೇಕಾನಂದ್ .
ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು, ಬಾಲಕೃಷ್ಣ ನಂತರ ದ್ವಾರಕೀಶ್ ಮುಂದೆ ಸಾಧುಕೋಕಿಲದೊಡ್ಡಣ್ಣ ಪ್ರಕಾಶ್ ರಂಗಾಯಣ ರಘು ಮುಂತಾದವರು ಹಾಸ್ಯ ಪರಂಪರೆಯನ್ನು ಮುಂದುವರಿಸಿದಂತೆ ತಮಿಳಿನಲ್ಲಿ ಕೃಷ್ಣನ್ ತಂಗವೇಲು, ಬಾಲಯ್ಯ, ಎಂ ಆರ್ ರಾಧ, ನಾಗೇಶ್ ತಂಗಾಯ್ ಶ್ರೀನಿವಾಸನ್, ಗೌಂಡಮಣಿ, ಸೆಂತಿಲ್ ಜನಕ ರಾಜ್ ಮುಂತಾದವರು ಹಾಸ್ಯನಟರಾಗಿ ಪ್ರಕಾಶಿಸಿದ ನಂತರ ಅದನ್ನು ಮುಂದುವರಿಸಿದವರು ವಿವೇಕ್, ವಡಿವೇಲು ಮತ್ತು ಸಂತಾನಂ.
ಮೇಲಿನ ಎಲ್ಲ ನಟರುಗಳ ವಿಶೇಷ ಎಂದರೆ ಒಬ್ಬ ಹಾಸ್ಯನಟನಾಗಿ ಮಿಂಚಬೇಕಾದರೆ ತಮ್ಮ ಶರೀರದ ವಕ್ರತೆಯನ್ನು ತಮ್ಮ ಹಾಸ್ಯದ ಪರಿಕರವಾಗಿ ಬಳಸಿಕೊಂಡದ್ದು. ನರಸಿಂಹರಾಜು ಹುಬ್ಬಲ್ಲು ದ್ವಾರಕೀಶರ ಕುಳ್ಳತನ ದೊಡ್ಡಣ್ಣನ ದಡೂತಿ ದೇಹ, ಸಾಧುಕೋಕಿಲ ಕೀಚಲು ದನಿ ಅದೇ ರೀತಿ ತಮಿಳಿನಲ್ಲಿ ತಾಯ್ ನಾಗೇಶ್ ತಮ್ಮ ಪೀಚಲು ದೇಹದ ಮೂಲಕವೇ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ್ದಾರೆ.

ಉಳಿದ ನಟರಂತಲ್ಲದ ವಿವೇಕ್ ಸ್ಪುರದ್ರೂಪಿ ನಟ. ಅದೇ ಕಾರಣಕ್ಕೋ ಏನೋ ಚಿತ್ರರಂಗದಲ್ಲಿ ತಳವೂರಲು ಕೆಲ ವರ್ಷಗಳು ಕಾಯಬೇಕಾಯಿತು. ರಜನಿಕಾಂತ್, ಕಮಲಹಾಸನ್ ಮುಂತಾದ ನಟರಿಗೆ ಸ್ಟಾರ್ ಗಿರಿಯನ್ನು ದೊರಕಿಸಿಕೊಟ್ಟ ಕೆ ಬಾಲಚಂದರ್, ವಿವೇಕ್ ಗೆ ತಮ್ಮ ಚಿತ್ರಗಳಲ್ಲಿ ಪಾತ್ರ ನೀಡುವುದರ ಮೂಲಕ ಅವಕಾಶದ ಕದ ತೆರೆದರು. ಅದಕ್ಕೂ ಮೊದಲಿಗೆ ಕೆ ಬಾಲಚಂದರ್ ಅವರ ಸಿನಿಮಾಗಳ ಚಿತ್ರಕಥೆ-ಸಂಭಾಷಣೆ ಮುಖ್ಯವಾಗಿ ಹಾಸ್ಯ ದೃಶ್ಯಗಳ ಸಂಭಾಷಣೆಕಾರರಾಗಿ ಚಿತ್ರರಂಗ ಪ್ರವೇಶಿಸಿದರು.
ತಮ್ಮ ಬಹಳಷ್ಟು ಚಿತ್ರಗಳ ಹಾಸ್ಯ ದೃಶ್ಯಗಳು ಮತ್ತು ಸಂಭಾಷಣೆಯನ್ನು ಸ್ವತಃ ಹೆಣೆಯುತ್ತಿದ್ದ ವಿವೇಕ್ ಒನ್ ಲೈನ್ ಜೋಕುಗಳಿಗೆ ಪ್ರಸಿದ್ಧರಾದವರು. ‘ನೀವು ಏನು ಓದಿರುವುದು?’ ಮಾಮ ಸರ್. ‘ಮಾಮ ಅಂದ್ರೆ? ‘ ಡಬಲ್ ಎಂಎಂ ಸಾರ್’. ಸೋಮಾರಿತನ ಹೋಗಲಾಡಿಸಲು ಏನು ಮಾಡಬೇಕು? ಟೀ ಅಂಗಡಿಯ ಎದುರು ಇರುವ ಬೆಂಚನ್ನು ತೆಗಿಸಬೇಕು’. ಇವು ಅದಕ್ಕೊಂದು ಉದಾಹರಣೆ.
ತಮಿಳ್ ಇಂಗ್ಲಿಷ್ ಮಿಶ್ರಿತ ಪ್ರಾಸಬದ್ಧ ಮಾತುಗಾರಿಕೆ ಅದರ ಮೂಲಕ ಅವರು ಸೃಷ್ಟಿಸುತ್ತಿದ್ದ ಹಾಸ್ಯ ನಮ್ಮ ಡುಂಡಿ ರಾಜರ ಹನಿ ಕವನಗಳನ್ನು ನೆನಪಿಸುತ್ತದೆ. ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಮೌಢ್ಯ, ಮೂಢನಂಬಿಕೆ ಕುರುಡು ಆಚರಣೆಗಳನ್ನು ಎಳೆಎಳೆಯಾಗಿ ಹಾಸ್ಯದ ಮೂಲಕ ವಿಡಂಬಿಸಿರುವುದು ಅವರ ಚಿತ್ರಗಳ ವಿಶೇಷ. ಹೀಗಾಗಿ ಅವರು ನಗರಪ್ರದೇಶದ ಯುವಕರ ಮೆಚ್ಚುಗೆಯ ನಟರಾಗಿ ಮಾರ್ಪಟ್ಟರೆ ಅವರ ಸಮಕಾಲೀನರಾದ ವಡಿವೇಲು ಗ್ರಾಮೀಣ ಜನರಿಗೆ ಮತ್ತು ಯುವಕರಿಗೆ ಇಷ್ಟವಾದರು.
‘ಮನದಿಲ್ ಊರಿಂದು ವೆಂಡುಂ’ ಮೂಲಕ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಪ್ರವೇಶಿಸಿದ ವಿವೇಕ್ ಪುದು ಪುದು ಅರ್ಥಂಗಲ್ ಚಿತ್ರದಲ್ಲಿ ತಮಿಳು ಚಿತ್ರರಂಗದ ಪ್ರಮುಖ ನಟರನ್ನು ಅನುಕರಿಸಿ ಮಾತನಾಡಿ ಪ್ರಸಿದ್ಧಿ ಪಡೆದು ಮುಂದಿನ ಚಿತ್ರಗಳಲ್ಲಿ ಅದನ್ನು ಟ್ರೇಡ್ ಮಾರ್ಕ್ ಆಗಿ ಮುಂದುವರಿಸಿದರು. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರಿಗೆ ಅಭಿಮಾನಿಗಳು ಚಿನ್ನ ಕಲೈವಾನರ್ (ಕಲಾಪ್ರೇಮಿ )ಎಂಬಬಿರುದನ್ನು ನೀಡಿದ್ದಾರೆ. ಒಂದು ಕಣ್ಣನ್ನು ಎತ್ತರಿಸಿ ಇನ್ನೊಂದು ಕಣ್ಣನ್ನು ಚಿಕ್ಕದಾಗಿಸಿ ಮಾತನಾಡುವುದು ಅವರ ಸ್ಟೈಲ್.
2001 ನೇ ಇಸವಿಯಲ್ಲಿ ಒಂದೇ ವರ್ಷಕ್ಕೆ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ಬಹುತೇಕ ನಾಯಕನಟರ ಸ್ನೇಹಿತನ ಪಾತ್ರದಲ್ಲಿ ಅವರು ನಟಿಸಿದ್ದಾರೆ. 2019 ರಲ್ಲಿ ಬಿಡುಗಡೆಯಾದ ವೇಳೆ ಪೋಕಳ್ ಚಿತ್ರದಲ್ಲಿ ಅವರು ಪ್ರಧಾನ ಪಾತ್ರ ನಿರ್ವಹಣೆ ಮಾಡಿದ್ದರು ಒಂಬತ್ತನೇ ವರ್ಷದಲ್ಲಿ ನಾಲ್ಕನೇ ತರಗತಿಯಲ್ಲಿದ್ದಾಗ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ‘ಮೈ ಬರ್ತಡೆ ಯುವರ್ ಬರ್ತಡೇ ಸೇಮ್ ಐ ವಿಶ್ ಯು ಯು ವಿಶ್ ಮಿ’ ಎಂದು ಪತ್ರ ಬರೆದು ಅವರಿಂದ ಶುಭಾಶಯ ಪತ್ರ ಪಡೆದ ವಿವೇಕ್ ಮುಂದೆ ಅಬ್ದುಲ್ ಕಲಾಂ ಅವರನ್ನು ಭೇಟಿಯಾಗಿ ಅವರ ನುಡಿಗಳಿಂದ ಪ್ರೇರಿತರಾಗಿ ಒಂದು ಕೋಟಿ ಮರ ಬೆಳೆಸುವುದಾಗಿ ವಾಗ್ದಾನ ಮಾಡುತ್ತಾರೆ.

ಅದರಂತೆ ತಮ್ಮ ಜೀವಿತಾವಧಿಯಲ್ಲಿ 33 ಲಕ್ಷ ಗಿಡಗಳನ್ನು ನೆಟ್ಟಿದ್ದಾರೆ. ಪ್ಲಾಸ್ಟಿಕ್ ಮುಕ್ತ ತಮಿಳು ನಾಡಿಗಾಗಿ ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ. ಕರ್ನಾಟಕದ ಹೆಮ್ಮೆ ಸಾಲುಮರದ ತಿಮ್ಮಕ್ಕರನ್ನು ಸಭೆಯೊಂದರಲ್ಲಿ ಕನ್ನಡದ ನಟಿ ಇದ್ದು ಸಾಲುಮರದ ತಿಮ್ಮಕ್ಕನವರ ಭಾಷಣವನ್ನು ಅನುವಾದಿಸಲು ವಿಫಲರಾದಾಗ ಮಧ್ಯ ಪ್ರವೇಶಿಸಿದ ತಮಿಳುನಾಡಿನ ಜನರಿಗೆ ಪರಿಚಯಿಸಿ ಮಾಡಿದ ಭಾಷಣ ಪ್ರಸಿದ್ಧಿಯಾಗಿದೆ.
ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ನಾಲ್ಕನೆಯದಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಹಾಸ್ಯ ನಟರು ತುಂಬಾ ವಿರಳ. ಅದು ವಿವೇಕ್ ಗೆ ದಕ್ಕಿದೆ ಎಂಬುದು ವಿಶೇಷ. ಬಹಳಷ್ಟು ನಟರು ತಮ್ಮ ವೃತ್ತಿ ಜೀವನಕ್ಕೆ ಮಾತ್ರ ಮೀಸಲಾಗಿದ್ದರೆ ವಿವೇಕರ ಪರಿಸರ ಪ್ರೇಮ ಅನನ್ಯ. ತಮ್ಮ 60 ನೇ ವಯಸ್ಸಿನಲ್ಲಿ (19 ನವಂಬರ್ 1961-17 ಏಪ್ರಿಲ್ 2021) ಹೃದಯ ಸ್ತಂಭನದಿಂದಾಗಿ ಹಠಾತ್ತಾಗಿ ಆದ ನಿಧನ ಚಿತ್ರರಂಗ ಹಾಗೂ ಪರಿಸರ ಸಂರಕ್ಷಣೆಯ ಹೋರಾಟಕ್ಕೆ ಆದ ದೊಡ್ಡ ಹೊಡೆತ.
ಇಡೀ ಚಿತ್ರರಂಗವಲ್ಲದೆ ಜನಸಾಮಾನ್ಯರು ಅವರ ನಿಧನಕ್ಕೆ ಮಿಡಿದದ್ದು ಅವರ ಪರಿಸರ ಕಾಳಜಿಗೆ ನೀಡಿದ ಶ್ರದ್ಧಾಂಜಲಿ. ಅವರ ಗಿಡ ನೆಡುವ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಅಲ್ಲಿನ ಯುವಜನಾಂಗ ಪಣ ತೊಟ್ಟಿರುವುದು ದೀಪದಿಂದ ದೀಪವ ಹಚ್ಚಬೇಕು ಮಾನವ ಗೀತೆಯನ್ನು ನೆನಪಿಸುತ್ತದೆ.






0 Comments