ವಿಳಾಸ ಬರೆದ ಕವಿತೆಗಳು!

ಕಲ್ಲೇಶ್ ಕುಂಬಾರ್, ಹಾರೂಗೇರಿ

ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ
ಲೇಖಕರು: ಸುಮಿತ್ ಮೇತ್ರಿ
ಪ್ರಕಾಶನ: ಕಾಜಾಣ ಪುಸ್ತಕ, ಬೆಂಗಳೂರು
ಪ್ರಕಟಣೆ: 2019; ಪುಟಗಳು: 94; ಬೆಲೆ: 120/-

ಕವಿಯಾಗಿ ತನ್ನ ಸುತ್ತಲಿನ ವಸ್ತು ಪ್ರಪಂಚ, ಸಂಗತಿ, ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದಕ್ಕೆ ಮಾತು ಕೊಡುವ ಗುಣವನ್ನು ಅಳವಡಿಸಿಕೊಂಡಿರುವ ಸುಮಿತ್ ಮೇತ್ರಿ ಅವರು, ಇತ್ತೀಚಿಗೆ ಬರೆಯುತ್ತಿರುವ ಅಗಾಧ ಭರವಸೆಯನ್ನು ಮೂಡಿಸಿರುವ ಯುವಕವಿಗಳಲ್ಲಿ ಪ್ರಮುಖರು. ಯಾವುದೇ ಪೂರ್ವ ನಿರ್ಧಾರಿತ ನಿಲುವು ಮತ್ತು ನಿರೀಕ್ಷೆಗಳಿಲ್ಲದೇ ಓದುಗನೊಬ್ಬ ಕವಿತೆಯೊಂದಿಗೆ ಮುಖಾಮುಖಿಯಾದಾಗ ಆತನ ಕಣ್ಮುಂದೆ ಅದ್ಭುತವಾದ ಲೋಕವೊಂದು ತೆರೆದುಕೊಂಡು, ಅವನ ಎದೆಯಲ್ಲಿ ಆನಂದ – ವಿಸ್ಮಯಗಳ ತರಂಗಗಳೆದ್ದು ದಿವ್ಯಾನಂದ ಪಡೆಯುವ ಅಮೃತ ಘಳಿಗೆಯೊಂದು ಹುಟ್ಟುತ್ತದೆ – ಎಂಬ ಮಾತಿಗೆ ಬದ್ಧರಾಗಿ ಕವಿತೆಯ ಗೀಳಿಗೆ ಬಿದ್ದಿರುವ ಕವಿ ಸುಮಿತ್, ತಾಧ್ಯಾತ್ಮದಿಂದ ಕವಿತೆಯನ್ನು ಕಟ್ಟುವಾಗ ಅತ್ಯಂತ ನಯ ನಾಜೂಕಿನಿಂದ ರೂಪಕಗಳನ್ನು ಬಳಸುವ ಪರಿಗೆ ಆ ಕವಿತೆಯೊಂದು ಸುಂದರವಾದ ಕಲಾಕೃತಿಯಂತೆ ಅರಳಿ ಬಿಡುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು!

ಪ್ರಸ್ತುತ, ಇಂಥ ಕವಿತೆಗಳಿಗೆ ಸಾಕ್ಷಿಯಾಗಿರುವ ಸುಮಿತ್ ಅವರ, ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ ಎಂಬ ಕವನಸಂಕಲನವು ಓದುಗರ ವಲಯದಲ್ಲಿ ಚರ್ಚೆಗೊಳಪಡುತ್ತಿರುವುದಕ್ಕೆ ಆ ಸಂಕಲನದಲ್ಲಿರುವ ಕವಿತೆಗಳು ಹೊಂದಿರುವ ತಾಜಾತನವೇ ಕಾರಣವಾಗಿದೆ ಎನ್ನಬೇಕು. ಮತ್ತು, ಈ ತಾಜಾತನ ಉಳಿಯುವುದಕ್ಕೆ, ಕವಿಯಾಗಿ ಸುಮಿತ್ ಬದುಕುತ್ತಿರುವ ವ್ಯವಸ್ಥೆ ಮತ್ತು ಈ ವ್ಯವಸ್ಥೆಯ ಅಂಗವಾದ ಅವರು ಬದುಕಿಗೆ ಅಗತ್ಯವಾದ ಯಾವ ದಾರಿ ಹಿಡಿದಿರುವರೋ ಆ ದಾರಿಯಲ್ಲಿ ಕಂಡುಕೊಂಡ ತಾತ್ವಿಕತೆಯ ನೆಲೆಯಲ್ಲಿಯೇ ಇಲ್ಲಿನ ಕವಿತೆಗಳಲ್ಲಿ ವ್ಯವಸ್ಥೆಯ ವಿವಿಧ ಮುಖಗಳನ್ನು ಕಾಣಿಸುತ್ತ ಹೋಗಿರುವುದು ಮತ್ತೊಂದು ಕಾರಣವಾಗಿದೆ.

ಈ ಸಂಕಲನದಲ್ಲಿ ‘ನಿರುದ್ಯೋಗಿ ದೇವರು’ ಎಂಬ ಕವಿತೆಯೊಂದಿದೆ. ಈ ಕವಿತೆ, ಬಹು ಶತಮಾನಗಳ ಅಂತರದಲ್ಲಿನ ಎರಡು ಕಾಲಘಟ್ಟಗಳಲ್ಲಿನ ಮನುಷ್ಯ ಬದುಕಿನ ವಿಪ್ಲವತೆಗೆ ಕಾರಣವಾದ ವಿರುದ್ಧ ದಿಕ್ಕಿನ ಸಮಸ್ಯೆಗಳ ಕುರಿತಾದ ವಿಚಾರಗಳನ್ನು ಸಮೀಕರಿಸಿ ಹೇಳುವಲ್ಲಿ ಯಶಸ್ವಿಯಾಗಿದೆ. ಪ್ರತಿಮೆ, ರೂಪಕಗಳಿಂದ ತುಳುಕುವ ಕವಿತೆಯನ್ನು ಓದುತ್ತ ಹೋದಂತೆ ಇಂದು ಮತ್ತು ಅಂದಿನ ವಿದ್ಯಮಾನಗಳೆಲ್ಲ ಏಕಕಾಲಕ್ಕೆ ತೆರೆದುಕೊಳ್ಳುತ್ತ ಹೋಗುತ್ತವೆ! ಹಾಗೆಯೇ, ಕಾಲ ಬದಲಾದಂತೆ ಸಮಸ್ಯೆಗಳ ರೂಪ ಬದಲಾಗಿದೆ ವಿನಃ ಮನುಷ್ಯ ಮಾತ್ರ ಅದರಿಂದ ಪಾರಾಗಲಾರದಂಥ ದಯನೀಯ ಸ್ಥಿತಿಯನ್ನು ತಲುಪಿದ್ದಾನೆ ಎಂಬ ಸತ್ಯ ಸಂಗತಿಯನ್ನು ಅನಾವರಣ ಮಾಡುತ್ತದೆ. ಕವಿತೆಯ ಈ ಸಾಲುಗಳನ್ನು ನೋಡಿ:
ಹನ್ನೆರಡರ ಕ್ರಾಂತಿ
ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ
ಕ್ಷಮಿಸಿ!

ಹನ್ನೆರಡರ ರಾತ್ರಿ
ಹಳಿ ತಪ್ಪಿ ಜೋಲಾಡುವ ರೈಲು
ತಲೆ ಕೆಟ್ಟ ಗಿರಕಿ ಹೊಡೆದ ಸೌರವ್ಯೂಹ
ಇತಿಹಾಸ ಸ್ಮರಿಸುವ ಸ್ಮಾರಕಗಳು

ಈ ಸಾಲುಗಳಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಸವ, ಅಕ್ಕ, ಅಲ್ಲಮರು ಕಂಡ ಸಮಾನತೆಯ ಕನಸನ್ನು ಸಾಕಾರ ಮಾಡಲು ನಡೆಸಿದ ಕ್ರಾಂತಿಯ ನೆಲೆಯಲ್ಲಿಯೇ ಕವಿ ಸುಮಿತ್, ಈ ಸಂದರ್ಭದಲ್ಲಿ ನಮ್ಮ ಯುವಜನಾಂಗದ ಮುಂದಿರುವ ನಿರುದ್ಯೋಗದಂಥ ಬಹು ಮುಖ್ಯವಾದ ಸಮಸ್ಯೆಯೊಂದರ ಘೋರ ಅಗಾಧತೆಯನ್ನು ತೆರೆದಿಡುತ್ತಾರೆ. ಮತ್ತು, ಇವೆಲ್ಲ ಎಂದೂ ಬದಲಾಗದ ಥೇಟ್ ಸ್ಮಾರಕಗಳಂತೆಯೂ, ಸೂರ್ಯ ಚಂದ್ರರನ್ನು ಪೀಡಿಸುವ ಗ್ರಹಗಳಂತೆಯೂ ಉಳಿದು ಕೊಂಡು ಅನಾದಿಕಾಲದಿಂದಲೂ ಬದುಕನ್ನು ರೌರವ ನರಕವಾಗಿಸಿರುವ ಬಗ್ಗೆ ಕವಿತೆಯಲ್ಲಿ ವಿವರಿಸುತ್ತಾರೆ.

ಈ ಕವಿತೆಯಲ್ಲಿ ಉಲ್ಲೇಖಿಸಿರುವ, ‘ಕವಿತೆಗಳಿಗೆ ಮಾರುಕಟ್ಟೆ ಇಲ್ಲ’- ಎಂಬ ಸಾಲು ನಮ್ಮ ಶ್ರೇಣೀಕೃತ ವ್ಯವಸ್ಥೆಯಲ್ಲಿ ನಿರುದ್ಯೋಗ ಎಂಬ ಸಮಸ್ಯೆ ತಾರತಮ್ಯವನ್ನು ತಂದೊಡ್ಡಿದೆ ಎಂಬ ವಿಚಾರವನ್ನು ಥಟ್ಟನೆ ಅರಿವಿಗೆ ತರುತ್ತದೆ. ಅಷ್ಟಕ್ಕೂ ಈ ಕವಿತೆ, ಇಂಥ ವಿಚಾರವನ್ನು ಮೀರಿ ಓದುಗನ ಅರಿವಿನ ಮಿತಿಯಲ್ಲಿ ಹಲವಾರು ಅರ್ಥವನ್ನು ಧ್ವನಿಸುತ್ತದೆ.

ಕವಿಯಾಗಿ ವರ್ತಮಾನದ ಸಂವೇದನೆಗಳಿಂದ ಪಾರಾಗಿ ಏಕಾಂತವಾಗಿ ಉಳಿಯಲಾರದ ಸುಮಿತ್, ಆ ಸಂವೇದನೆಗಳನ್ನೆಲ್ಲ ವರ್ತಮಾನಕ್ಕೆ ಪ್ರತಿಕ್ರಿಯಾತ್ಮಕವಾಗಿರುವಂತೆ ಕವಿತೆಯಲ್ಲಿ ತರುವುದರ ಮೂಲಕ ನಾವು ಕಾಣದ ಲೋಕವೊಂದನ್ನು ಕಾಣಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ಮಾತಿಗೆ ಸಾಕ್ಷಿಯೆಂಬಂತೆ ಅವರು, ‘ಜಾತಿಗಳು ಕೊಲೆಯಾಗುವುದಿಲ್ಲ’ ಎಂಬ ಕವಿತೆಯಲ್ಲಿ ಈ ದೇಶದ ನ್ಯಾಯಾಂಗ ವ್ಯವಸ್ಥೆಯು ಅದ್ಹೇಗೆ ಶಾಸಕಾಂಗದ ಮೂಗಿನ ನೇರಕ್ಕೆ ಕೆಲಸ ಮಾಡುತ್ತದೆ ಎಂಬ ದುರಂತ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಇಡಿಯಾಗಿ ಕವಿತೆ ಎಲ್ಲದಕ್ಕೂ ಸಾಕ್ಷಿ ಕೇಳುವ, ಅನಾದಿಕಾಲದ ಪಳೆಯುಳಿಕೆಯಂತಿರುವ ನಮ್ಮ ಕಾನೂನು ವ್ಯವಸ್ಥೆಗೆ ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಶಿಕ್ಷಿಸುವ ಅಧಿಕಾರ ಇದೆ ವಿನಃ ಇಂಥ ಮನಸ್ಥಿತಿಗಳು ರೂಪಿಸುವ ಅಮಾನುಷ ಕೃತ್ಯಗಳಿಗೆ ಸಹಕರಿಸುವ ಮದ್ದು, ಗುಂಡು, ಬಂದೂಕುಗಳನ್ನು ನಿಷೇಧಿಸುವ ಧೈರ್ಯವಿಲ್ಲ ಎಂಬ ಸಂಗತಿಯನ್ನು ಅನಾವರಣ ಮಾಡುತ್ತದೆ. ಬದಲಾದ ಕಾಲಘಟ್ಟದಲ್ಲಿ ನಮ್ಮ ಶ್ರೇಣೀಕೃತ ವ್ಯವಸ್ಥೆಯಲ್ಲಿರುವ ಜಾತಿ ಉಪಜಾತಿಗಳನ್ನು ನಮ್ಮ ರಾಜಕಾರಣಿಗಳು ವೋಟ್ ಬ್ಯಾಂಕ್ ಗಳನ್ನಾಗಿ ಮಾಡಿಕೊಂಡಿರುವಾಗ ಶಾಸಕಾಂಗವನ್ನು ನಿಯಂತ್ರಿಸುವ ಶಕ್ತಿಯನ್ನು ನ್ಯಾಯಾಂಗ ವ್ಯವಸ್ಥೆಯು ಕಳೆದುಕೊಂಡಿರುವುದು ಪರಿಸ್ಥಿತಿಯ ವ್ಯಂಗ್ಯದಂತಿದೆ! ಹೀಗೆ, ಸಂವಿಧಾನದ ಆಧಾರ ಸ್ಥಂಭವೊಂದು ಶಿಥಿಲಗೊಂಡಿರುವ ಈ ಸಂಧಿಕಾಲದಲ್ಲಿ ಅದನ್ನು ಸರಿ ದಾರಿಗೆ ತರಲು ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅನಿವಾರ್ಯತೆ ಇದೆ ಎಂಬ ವಿಚಾರವನ್ನು ಈ ಕವಿತೆ ವ್ಯಕ್ತಪಡಿಸುತ್ತದೆ.

ಈ ಸಂಕಲನದಲ್ಲಿ ಸುಮಿತ್ ಅವರು, ತಮ್ಮ ಸುತ್ತಲಿನ ಲೋಕವನ್ನು ಬೆರಗುಗಣ್ಣಿನಿಂದ, ಕುತೂಹಲದಿಂದ ಮತ್ತು ಅಷ್ಟೇ ಕಾಳಜಿಯಿಂದ ನೋಡಿದ್ದಕ್ಕೆ ಸಾಕ್ಷಿಯಾಗಿ ‘ಬಿಸಿಲು ತೊಟ್ಟವರು’ ಎಂಬ ಕವಿತೆಯೊಂದಿದೆ. ಈ ಕವಿತೆ, ವರ್ತಮಾನ ಸಂದರ್ಭದಲ್ಲಿನ ಮನುಷ್ಯ ಬದುಕಿಗೆ ಪೂರಕವಲ್ಲದ; ಲೋಕದ ಶಾಂತಿಯನ್ನು ಕದಡಿ, ಅರಾಜಕತೆಗೆ ಕಾರಣವಾಗಿರುವ ಈ ಕ್ಷಣದ ವಿದ್ಯಮಾನಗಳ ಹಿಂದಿನ ಕಾರಣಗಳನ್ನು ಶೋಧಿಸುತ್ತದೆ:
ಯಾರಲ್ಲಿ?
ಬಾಯಾರಿದ ಪಾರಿವಾಳದ
ಕತ್ತು ಹಿಸುಕಿ ಕೊಲ್ಲುವರು

ಇಲ್ಲಿ, ಕ್ರೌರ್ಯಕ್ಕೆ ಪ್ರತಿಮೆಯಾಗಿ ಮೂಡಿ ಬಂದಿರುವ ಬಾಯಾರಿದ ಪಾರಿವಾಳದ ಕತ್ತು ಹಿಸುಕಿ ಕೊಲ್ಲುವ ಕ್ರಿಯೆ, ಇಡಿಯಾಗಿ ನಮ್ಮ ವ್ಯವಸ್ಥೆ ರೂಪಿಸಿಕೊಂಡಿರುವ ರೋಗಗ್ರಸ್ತ ಮನಸ್ಥಿತಿಗೆ ಕನ್ನಡಿ ಹಿಡಿಯುತ್ತದೆ! ಈ ಕವಿತೆಯ ಮುಂದುವರೆದ ಸಾಲಗಳನ್ನು ಗಮನಿಸಿ:
ಹಗೆವು ತುಂಬಿದ ಹಗೆ
ಹೊಗೆಯಲಿ ಉಸಿರುಗಟ್ಟಿಸಿ
ತೆವಲಿಗೆ ನೆತ್ತರು ಹರಿಸಿ
ನುಂಗದಿರಲಿ ಅಮಾಯಕರ ದನಿ

ಈ ಥರದ ವ್ಯವಸ್ಥೆಯನ್ನು ಆಳುತ್ತಿರುವ ಮನಸ್ಸುಗಳ ವಿರುದ್ಧ ಧಿಕ್ಕಾರ ಕೂಗುವ ನಿಟ್ಟಿನಲ್ಲಿರುವ ಸಾಲುಗಳು, ಅಂಥ ಮನಸ್ಸುಗಳು ಉಸುರುವ ಹಗೆಯ ಹೊಗೆಯಲ್ಲಿ ಅಮಾಯಕರ ದನಿಯು ಕರಗಿ ಹೋಗುತ್ತಿರುವುದಕ್ಕೆ ನಾವೆಲ್ಲ ಒಮ್ಮೆ ಮಮ್ಮಲು ಮರುಗುವಂತೆ ಮಾಡುತ್ತವೆ. ಕತ್ತಲು ದೀಪದ ಕೆಳಗೆ ನಿಂತ ನ್ಯಾಯ ಹೇಳುವ ತಾಯಿಗೂ ಸಹ ವ್ಯವಸ್ಥೆಯ ಈ ಇಂಥ ಮನಸ್ಥಿತಿಯ ಬಗ್ಗೆ ಹೇವರಿಕೆ ಬಂದ ವಿಚಾರ ಓದುಗನ ಅತಂಕರಣವನ್ನೇ ಕಲಕುವಂತಿದೆ.

ಇನ್ನು, ಈ ಕವನಸಂಕಲನದ ಶೀರ್ಷಿಕೆಯೂ ಆಗಿರುವ ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ ಪದ್ಯ, ಕವಿಯೊಬ್ಬನ ಭಾವಕೋಶದಲ್ಲಿ ಲೋಕದ ವಿದ್ಯಮಾನಗಳ ಕುರಿತಾಗಿ ನಡೆಯುವ ಮಂಥನದಿಂದ ಕವಿತೆಯೊಂದು ಅರಳುವ ಪರಿಯನ್ನು ಅನನ್ಯವಾಗಿ ಕಟ್ಟಿಕೊಡುತ್ತದೆ. ಕವಿತೆಯೆಂದರೆ ಕವಿಯನ್ನು ಆವರಿಸಿದ ಮೌನದೊಳಗಿನ ಬೀಜ! ಅದು, ಆತನ ಧ್ಯಾನಸ್ಥ ಸ್ಥಿತಿಯಲ್ಲಿಯೇ ಹೂವಾಗಿ ಅರಳಬೇಕು – ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿರುವ ಸುಮಿತ್ ಅವರು, ಕವಿತೆಯ ವಿಚಾರದಲ್ಲಿ ಕವಿಗೆ ಅಹಂಮಿಕೆಯಿಂದ ಹೊರತಾದ ಮಗುವಿನ ಮುಗ್ಧತೆಯನ್ನು ಅಳವಡಿಸಿಕೊಂಡು, ಕವಿತೆಯ ಮುಂದೆ ಶರಣಾದಾಗ ಮಾತ್ರ ಕವಿತೆ ಕೈ ಹಿಡಿಯುತ್ತದೆ ಎಂದು ಎಚ್ಚರಿಸುತ್ತಾರೆ. ಹೀಗಾಗಿ, ಕವಿತೆಯೆಂದರೆ ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ – ಎಂದು ಹೇಳಿರುವ ಅವರ ಮಾತುಗಳು ಕವಿಯಾಗಿ ಸುಮಿತ್ ಸಾಕಷ್ಟು ಮಾಗಿದ್ದಾರೆ ಎಂಬ ಭರವಸೆಯನ್ನು ಮೂಡಿಸುತ್ತವೆ.

ಈ ಸಂಕಲನದ ಬಹಳಷ್ಟು ಕವಿತೆಗಳು ಓದುಗನನ್ನು ಬೇರೆ ಬೇರೆ ಆಯಾಮಗಳಲ್ಲಿ ಚಿಂತನೆಗೀಡು ಮಾಡುತ್ತದೆ. ಅವುಗಳಲ್ಲಿ, ‘ವಿಳಾಸ ಮರೆತ ಕನಸುಗಳು’ ಕವಿತೆ, ಮನುಷ್ಯ ಬದುಕು ಮತ್ತು ಪ್ರಕೃತಿಗೆ ಸಂಬಂಧಿಸಿದ ವಿಚಾರಗಳನ್ನು ಆಧ್ಯಾತ್ಮದ ನೆಲೆಯಲ್ಲಿ ಶೋಧಿಸುತ್ತ ಶೋಧಿಸಿದರೆ, ‘ತುಂಡು ರೊಟ್ಟಿಯ ಕವಿತೆ’ ಈ ಸೃಷ್ಟಿಯ ಸಕಲ ಜೀವರಾಶಿಗಳಿಗೆ ಹಸಿವೇ ಎಂಬುದು ಇಲ್ಲದೇ ಹೋಗಿದ್ದರೆ ಲೋಕದ ವ್ಯಾಪಾರವೇ ನಡೆಯುತ್ತಿರಲಿಲ್ಲ ಎಂಬರ್ಥವನ್ನು ಧ್ವನಿಸುತ್ತದೆ. ಹಾಗೆಯೇ, ‘ಬಟ್ಟೆ ಮತ್ತು ಹಸಿವು’ ಕವಿತೆ, ಗಂಡು ಹೆಣ್ಣಿನ ನಡುವೆ ಸಹಜವೆಂಬಂತೆ ನಡೆಯಬಹುದಾದ ಮಿಲನ ಕ್ರಿಯೆಗೆ ಸಂಬಂಧಿಸಿದ ವಿಚಾರವನ್ನು ಅನಾವರಣಗೊಳಿಸುತ್ತದೆ. ಇಡಿಯಾಗಿ ಕವಿತೆ, ಜೀವಧಾತುವನ್ನು ಉಣ್ಣುವ ಮತ್ತು ಉಣಿಸುವ ದೇಹಗಳೆರಡರ ನಡುವಿನ ಕೊಟ್ಟು ಪಡೆಯುವ ವ್ಯಾಪಾರವನ್ನು ಸೂಕ್ಷ್ಮವಾಗಿ ವಿವರಿಸುತ್ತದೆ!

ಹೀಗೆ, ಸುಮಿತ್ ಅವರು, ಸಮಕಾಲೀನ ಸಂದರ್ಭದ ನೂರಾರು ಸಂಗತಿಗಳಿಗೆ ಕವಿತೆಗಳ ಮೂಲಕ ದನಿಯಾಗಲು, ಕವಿತೆಯು ಸರಳವಾಗಿರಬೇಕು ಎಂಬ ಮಾತನ್ನು ಮೀರಿ ಪ್ರತಿಮೆ ರೂಪಕಗಳನ್ನೇ ನೆಚ್ಚಿಕೊಂಡಿರುವುದು ಹಲವು ಸಲದ ಓದನ್ನು ಬೇಡುವುದಕ್ಕೆ ಕಾರಣವಾಗಿದೆ. ಆದರೆ, ಇದರಿಂದಾಗಿಯೇ ಸುಮಿತ್ ಅವರು ಕಾವ್ಯಲೋಕದಲ್ಲಿ ತಮ್ಮ ವಿಳಾಸವನ್ನು ಶಾಶ್ವತವಾಗಿ ದಾಖಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

‍ಲೇಖಕರು avadhi

March 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: