ವಿರಹ – ಸರಸಗಳ ದಾಹ ತಣಿಸಲು..

 

 

 

 

ಎನ್ ರವಿಕುಮಾರ್ ಶಿವಮೊಗ್ಗ

 

 

 

 

ಬಿದಿರ ಮಗಳ ಹಾಡು

ಎಳೆ ಬಿದಿರ ತೊಟ್ಟಿಲಲಿ ಸಿಹಿ ಜೋಗಳವ ತೂಗಿಹೆನು..
ಎದೆಗೊಟ್ಟು ಕೇಳಿ  ಬರಿ ‘ಬಿದಿರ ಹಾಡಲ್ಲ’ ಇದು
ಕಾಲ ಕಾಲಕೆ ಹರಿದ ಅಂಗ-ಭಂಗದ ಒಡಲ ಪಾಡು..

ಹಡೆದವ್ವನ ಕೂಸ ತೊಟ್ಟಿಲಾದೆ
ದೇವರ ಪಲ್ಲಕ್ಕಿ,ಅಟ್ಟಣಿಗೆ, ನಂದಿ ಕೋಲಾದೆ
ನೆತ್ತಿ ಕಾಯ್ವ ಸೂರಾದೆ
ಮಣ್ಣ ಗುಣಿಗೆ ಹೊರುವ ಚಟ್ಟವಾದೆ. ಉರಿವ ಚಿತೆಯ ತಲೆಗೊಳ್ಳಿಯಾದೆ.

ಸಿಹಿ ಬಿದಿರ ಸೀಳಿ  ಸಿಗಿದು
ತಳಪಟ್ಟಿ, ಕಂಠಹಾರದ ಎಳೆ ನೇಯ್ದು
ನಗುವ ಬುಟ್ಟಿಯಾಯ್ತು,
ಬಾಗಿನ ದ ಮೊರವಾಗಿ ಮುತ್ತೈದೆ ಮಂಗಲೆಯರ
ಸಿರಿಯಾಯ್ತು
ಮುಗಿಲ ಮುತ್ತಿ ಆಕಾಶ ಬುಟ್ಟಿ ನಕ್ಕಿತು
ಅಡವಿ ತಡವಿ  ಹೊತ್ತ ಹೆಗಲುಗಳು
ಸವೆದು ಸೋತ ಪಾದಗಳು
ಹೆಣೆದೆಣೆದ ಹಸ್ತ ಬೆರಳ ಗಾಯಗಳು
ಅಜ್ಞಾತ  ಚರಿತ್ರೆಯಾಯ್ತು.

ಸೀಬು  ಅಂಗೈಗೆ ನುಗ್ಗಿ ರಕ್ತ ಚಿಮ್ಮಿ ಚೆಲ್ಲಾಡಿದಾಗ
ಹೂ ಹಂದರ ಚಿತ್ತಾರ ಮೂಡಿ  ಅಂಗೈಯೆಲ್ಲಾ ಗೋರಂಟಿಯೇ..
ಸೀಳು ಕತ್ತಿಯೊಂದು ಬಿದಿರ ನಡು ನುಗ್ಗಿ
ಸರ್ರನೆ ಜಾರಿ ಹೆಬ್ಬೆಟ್ಟ ಸೀಳಿ ಸೊಕ್ಕಿದರೂ
ನೆತ್ತರು ಕುಡಿದ ನಂದಿಕೋಲು ದೇವರ ಹೊತ್ತು ಕುಣಿಯುತ್ತಿತ್ತು.

ನಾನೇ ಹೆಣೆದ ಬುಟ್ಟಿ
ಆ ಮಾಯಾವಿಯನ್ನು ಅಡಗಿಸಿಟ್ಟ ಮಡಿಲು.
ಕಗ್ಗತ್ತಲ ರಾತ್ರಿಯಲ್ಲಿ ಗಡಚಿಕ್ಕುವ ಮಳೆಯಲ್ಲಿ
ವಸುದೇವ  ಹೊತ್ತು ಹೊರಟದ್ದು!
ಅದು ದೇವ ದೇವನ ಕೊಳಲು
ಅವನೀಗ ಸಖೀ ಸುಖಕ್ಕಾಗಿ
ನುಡಿಸುತ್ತಿದ್ದಾನೆ
ವಿರಹ – ಸರಸಗಳ ದಾಹ ತಣಿಸಲು…
ನಾನೇ ಕೊರೆದ ಕೊಳಲು.
ಅವನು ನುಡಿಸಿದ ಮೋಹಕ ರಾಗವೆಲ್ಲಾ
ನನ್ನ ಕಾಡು ಮಕ್ಕಳ ಸೋತ ದನಿಗಳೇ
ನಾನು ಹೆಣೆದದ್ದು ನನ್ನ ನೋವಿಗಾಗಿ
ನನ್ನವರ ಹಸಿವಿಗಾಗಿ
ಅದು   ರಾಗ ತಾಳವಿಲ್ಲದ ಅಡವಿಯ ಆರ್ತನಾದ………

ನೋಡಿ , ಪಲ್ಲಕ್ಕಿ ಮೇಲೆ ದೇವರು ಬಂದ
ಅವನ ಹೊತ್ತ ಪೀಠ ಪಲ್ಲಂಗದ
ವೈಭವದ ಕಮಾನು  ನನ್ನ ಬಿದಿರ ಕುಸುರಿಯೇ
ಕಂಡು ಕೊಂಡಾಡಿ ಪುನೀತವಾಗುತ್ತಿದೆ ಊರು.
ನಾನೀಗ ಹೊರಗಿದ್ದೇನೆ
ಉತ್ತಮೋತ್ತರ ಜೊತೆ ದೇವರು ಕುಣಿಯುತ್ತಿದ್ದಾನೆ.

ಈಗ ಪ್ಲಾಸ್ಟಿಕ್, ಪ್ಲಾಸ್ಟರ್ ಗಳ ಪರದೇಶಿ ಪರಪಂಚ
ಮಂಕರಿ, ಮೊರ,ತಟ್ಟಿ ,ಕೈ ಬಣ್ಣದ ಬೀಸಣಿಕೆ ಹೊಸ ಪೋಷಾಕು ತೊಟ್ಟು
ರಂಗು ರಂಗಿನ  ಮಹಲುಗಳಲ್ಲಿ ತೂಗು ಬಿದ್ದಿವೆ
ಕಾಡ ಕಬ್ಬಿನ  ಬಾಳು
ಕಾಂಕ್ರೀಟು  ಪುಟ್ ಪಾತಿನಲ್ಲಿ ಗಿರಾಕಿಗಾಗಿ ಕಾದಿದೆ.

ಕಾಡಲ್ಲಿ ತಾವಿಲ್ಲ, ನಾಡಲ್ಲಿ ನೆಮ್ಮದಿಯಿಲ್ಲ
ಕಾಡು ಬರುಡಾಗಿ ಬಿದಿರು ಬಯಲಾಗಿ
ಹೆಣೆವ ಕೈ ಸೋತು ಸೊಲ್ಲಡಗಿವೆ..
ಹಾಡು ನಿತ್ಯ ಅಳುತ್ತಿದೆ.
ನನ್ನ  ಹಾಡಿಗೆ ಕಿವಿಗಳೆ ಇಲ್ಲ.

‍ಲೇಖಕರು Avadhi GK

February 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಅಕ್ಕಿಮಂಗಲ ಮಂಜುನಾಥ.

    ಕಾಡಲ್ಲಿ ತಾವಿಲ್ಲ ನಾಡಲ್ಲಿ ನೆಮ್ಮದಿಯಿಲ್ಲ ಕಾಡುಬರುಡಾಗಿ ಬಿದಿರುಬಯಲಾಗಿ ಹೆಣೆವ ಕೈ ಸೋತು ಸೊಲ್ಲಡಗಿವೆ ……ಸಾಲುಗಳು ಚೆನ್ನಾಗಿವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: