ವಿಮಲಾ ರಾಜಗೋಪಾಲ್ ಅವರಿಗೆ ಅಂತಿಮ ನುಡಿನಮನ..

ಗುರುಪ್ರಸಾದ್ ಕಾಗಿನೆಲೆ

ವಿಮಲಾ ರಾಜಗೋಪಾಲ್ ನಾನು ನನ್ನ ಬದುಕಿನಲ್ಲಿ ಕಂಡ ಅತ್ಯಂತ ಚಲನಶೀಲ, ವಾತ್ಸಲ್ಯಮಯಿ, ಉತ್ಸಾಹಿ ವ್ಯಕ್ತಿಗಳಲ್ಲಿ ಒಬ್ಬರು. ಮೊದಲು ಪರಿಚಯವಾದದ್ದು ಫೋನಿನಲ್ಲಿ. ಕನ್ನಡ ಸಾಹಿತ್ಯ ರಂಗ ಆರಂಭವಾದ ಮೊದಲ ದಿನಗಳಲ್ಲಿ ರಾಜಗೋಪಾಲರ ಜತೆ ಬಲುದೀರ್ಘವಾದ ಟೆಲಿಪೋನ್ ಮಾತುಕತೆಗಳಾಗುತ್ತಿದ್ದವು. ಆಗ ಇದ್ದಕ್ಕಿದ್ದಂತೆ ನಡುವೆ ಬಂದು ‘ಏನ್ ಗುರುಪ್ರಸಾದ್ ನೀವು ಬರೀ ರಾಜು ಜತೆ ಮಾತ್ರ ಮಾತಾಡ್ತೀರಾ. ನನ್ನ ಜತೆ ಮಾತಾಡಕ್ಕೆ ಎಂದು ಬೇರೆ ಕರೆ ಮಾಡಿ’ ಎಂದು ಫೋನು ಮಾಡಿಸಿಕೊಂಡು ಮಾತಾಡುತ್ತಿದ್ದರು. ಅವರ ಜತೆ ಮಾತಾಡುವಾಗ ಏನಾದರೂ ವಿಷಯಗಳಲ್ಲಿ ಭಿನ್ನನಾಭಿಪ್ರಾಯ ಬಂದಾಗ ಜಗಳವಾಡಿಬಿಡುತ್ತಿದ್ದರು. ಆಗ ಅವರಿಗೇ ನಗು ಬಂದುಬಿಡುತ್ತಿತ್ತು. ನಕ್ಕಾಗ ‘ನಿಮಗೆ ನನ್ನ ಜತೆ ಸೀರಿಯಸ್ಸಾಗಿ ಮಾತಾಡಕ್ಕೆ ಬರಲ್ಲ. ಅದಕ್ಕೆ ನಗಿಸಿಬಿಡ್ತೀರ’ ಎಂದು ಮತ್ತೆ ಮುನಿಸಿಕೊಳ್ಳುತ್ತಿದ್ದರು.

ಆ ಮುನಿಸು ಕೂಡ ಎರಡೇ ನಿಮಿಷ. ಮತ್ತೆ ಫೋನು ಮಾಡಿ ಮಾತಾಡುತ್ತಿದ್ದರು. ಮುಂದೆ ಯಾವಾಗಲಾದರೂ ಭೇಟಿಯಾದಾಗ ಎಲ್ಲವನ್ನೂ ನೆನೆಸಿಕೊಂಡು ಬಾಯ್ತುಂಬ ನಗುತ್ತಿದ್ದರು.

ನಲವತ್ತು ಐವತ್ತು ದಶಕದಲ್ಲಿ ಹಳೆ ಮೈಸೂರಿನಲ್ಲಿ ಬೆಳೆದ ಅಪ್ಪಟ ಕನ್ನಡಿತಿ. ತಂದೆ ಎಲ್ ಗುಂಡಪ್ಪನವ ಆಪ್ತರಾದ ಮಾಸ್ತಿ, ವೆಂಕಣ್ಣಯ್ಯನವರು, ಡಿವಿಜಿ, ಬಿಎಂಶ್ರೀ, ಕೃಷ್ಣಶಾಸ್ತ್ರಿಗಳು ಮುಂತಾದವರ ಒಡನಾಟದಲ್ಲಿ, ಮೈಸೂರಿನ ಸಾಹಿತ್ಯ, ಸಂಗೀತ ಇತರೆ ಸಾಂಸ್ಕೃತಿಕ ಸಂಗತಿಗಳ ನಡುವೆ ಬೆಳೆದು ಸಮೃದ್ಧವಾದ ಹಾಗೂ ಸೂಕ್ಷ್ಮವಾದ ಸಂವೇದನೆಗಳನ್ನು ಮೈಗೂಡಿಸಿಕೊಂಡಿದ್ದರು. ತಂದೆ ಎಲ್ ಗುಂಡಪ್ಪನವರ ಬಗ್ಗೆ ಮಾತಾಡಬೇಕಾದರಂತೂ ಇನ್ನಿಲ್ಲದ ಅಭಿಮಾನ. ಸಹೋದರಿಯರಾದ ಕಮಲಾ ಸುಮಿತ್ರಾರೊಂದಿಗೆ ಸೇರಿ ಆಕಾಶವಾಣಿ ಮುಂತಾದ ಕಡೆಯಲ್ಲಿ ಜಾನಪದ ಗೀತೆಗಳು, ಭಾವಗೀತೆಗಳನ್ನು ಹಾಡಿ ಜನಪ್ರಿಯಗೊಳಿಸಿದ್ದರು.

ವಿಮಲಾರಲ್ಲಿ ಒಂದು ಆಪ್ತವಾದ ಮುಗ್ಧತೆಯಿತ್ತು. ಅವರು ಪ್ರಬುದ್ಧವಾದ ವಿಷಯದ ಬಗ್ಗೆ ಮಾತನಾಡಿದಾಗ್ಯೂ ಈ ಮುಗ್ಧತೆ ಎದ್ದು ಕಾಣುತ್ತಿತ್ತು. ಪುಸ್ತಕ ಬಳಗದ ಚರ್ಚೆಗಳಲ್ಲಿ ಎಷ್ಟೋ ಸಮಯ ವಿಮಲಾ ಅವರು ಕುತೂಹಲದಿಂದ ಕೇಳಿದ ಪ್ರಶ್ನೆಗಳಲ್ಲಿ ಅಥವಾ ಅವರ ಅನುಭವಗಳನ್ನು ನಮ್ಮ ಅನುಭವಗಳ ಜತೆ ಸಮೀಕರಿಸಿ ತಮ್ಮ ಅಭಿಪ್ರಾಯವನ್ನು ಮಂಡಿಸುವಾಗ ಇರುವ ವಯಸ್ಸಿನ, ಸಾಂಸ್ಕೃತಿಕ ಹಾಗು ಸಂವೇದನೆಗಳ ಅಂತರದಿಂದ ಹುಟ್ಟಿಕೊಂಡ ಮಾತುಗಳಲ್ಲಿ ಹೊಸ ಹೊಳಹು ಇರುತ್ತಿತ್ತು.

ಮೊನ್ನೆಮೊನ್ನೆ ನಡೆದ ಕೆ ಸತ್ಯನಾರಾಯಣರ ಕತೆಗಳ ಚರ್ಚೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಿದ್ದರು. ನಮ್ಮ ಪುಸ್ತಕ ಬಳಗದ ಚರ್ಚೆಗಳು ಜೂಮ್ ಗೆ ಇಳಿದಾಗ, ತಡಕಾಡಿಕೊಂಡಾದರೂ ಮ್ಯೂಟ್ ಅನ್ ಮ್ಯೂಟ್ ಗುಂಡಿಗಳನ್ನು ಒತ್ತಿ, ಕೈ ಎತ್ತಿ, ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದರು. ಸರಿಯಾದ ಸಮಯದಲ್ಲಿ ಪುಸ್ತಕ ಬಳಗದ ಚರ್ಚೆಗೆ ಆಯ್ದುಕೊಂಡಿರುವ ಕಥೆಗಳು ತಲುಪದಿದ್ದಾಗ ಫೋನು ಮಾಡಿ ವಿಚಾರಿಸಿಕೊಳುತ್ತಿದ್ದರು.

ನಮ್ಮಂತಹ ಅನಿವಾಸಿಗಳು ಅಮೆರಿಕಾದಲ್ಲಿ ನಮ್ಮ ಮುಂದಿನ ದಿನಗಳಲ್ಲಿ ಹೇಗೆ ಸಂತೋಷದಿಂದ ಬದುಕಬಹುದು ಎಂಬುದಕ್ಕೆ ನೀವು ಮತ್ತು ನಿಮ್ಮ ರಾಜು ಬದುಕಿ ತೋರಿಸಿಕೊಟ್ಟಿದ್ದೀರ. ಧನ್ಯವಾದಗಳು.

ಹೋಗಿ ಬನ್ನಿ. ಅಲ್ಲಿ ನಿಮ್ಮ ರಾಜುಗೆ ನಾವು ಕೇಳಿದೆವು ಎಂದು ಹೇಳಿ.

‍ಲೇಖಕರು Admin

September 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: