ಶೂನ್ಯ ಹನಿ – ೧
ಒಮ್ಮೆ ಸತ್ಯಜಿತ್ ರೇ ಹೀಗೆ ಹೇಳಿದ್ದರು : ಸಿನಿಮಾ ಸಮಾಜವನ್ನು ಬದಲಾವಣೆ ಮಾಡುತ್ತದೆಂದು ನಾನು ನಂಬುವುದಿಲ್ಲ
ನಾನು ಮೂರು ಘಟನೆಗಳಿಗೆ ಮುಖಾಮುಖಿಯಾದೆ.
ಒಂದು
ಏಳೆಂಟು ವರುಷಗಳ ಹಿಂದೆ ಇರಬೇಕು. ನಾನಾಗ ಪಿ.ಇ.ಎಸ್. ಪದವಿ ಕಾಲೇಜಿನಲ್ಲಿ ಓದುತ್ತಿದ್ದೆ. ಮಂಡ್ಯ ಫಿಲಂ ಸೊಸೈಟಿಯ ವತಿಯಿಂದ ಅಭಿನವ ಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗಾಗಿ ಮಾಜಿದ್ ಮಾಜಿದಿ ನಿರ್ದೇಶನದ ‘ ಚಿಲ್ಡ್ರನ್ ಆಫ್ ಹೆವೆನ್’ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದೆವು. ಸೇರಿದ್ದ ಹುಡುಗ-ಹುಡುಗಿಯರು ಭಾರೀ ಆಸಕ್ತಿಯಿಂದ ಆ ಚಿತ್ರವನ್ನು ನೋಡಿದರು. ಅಲಿ-ಜೆಹೆರಾಳ ಒಂದೊಂದು ಆಕ್ಷನ್ಗೂ ಚಪ್ಪಾಳೆ-ವ್ಹಿಸಿಲ್ಗಳು ಬಿದ್ದವು. ಚಿತ್ರದ ಕೊನೆಯ ಓಟದ ದೃಶ್ಯವಂತೂ ಇಡೀ ಆಡಿಟೋರಿಯಂ ಅನ್ನು ಸ್ಡೇಡಿಯಂ ಆಗಿಸಿಬಿಟ್ಟಿತ್ತು.
ಚಿತ್ರ ಮುಗಿಯಿತು. ನಾನು ಆ ಕಾರ್ಯಕ್ರಮದ ಅತಿಥಿ. ಸಂವಾದ ಮಾಡುವುದಕ್ಕೆ ಎದ್ದು ನಿಂತೆ . ನನಗೆ ಗೊತ್ತಿದ್ದ ಎಲ್ಲಾ ವಿಷಯವನ್ನೂ ಅವರ ಮುಂದೆ ಒದರಿದೆ. ಆ ಮೇಲೆ ಮಕ್ಕಳು ಎದ್ದು ನಿಲ್ಲತೊಪಗಿದರು. ಮುಂದಿನ ಸಾಲಿನ ಕೊನೆಯ ಸೀಟಿನಲ್ಲಿ ಹುಡುಗನೊಬ್ಬ ಕೂತಿದ್ದ. ಎದ್ದು ನಿಂತ. ಮೈಕ್ ಅವನ ಕೈಗೆ ಹೋಯಿತು. ಮೈಕ್ ಈಸಿಕೊಂಡವನನ್ನು ಎಲ್ಲರೂ ನೋಡಿದರು. ನಾನು ಸುಲಲಿತವಾದ ಪ್ರಶ್ನೆ-ಸಂವಾದವನ್ನು ಅವನಿಂದ ನಿರೀಕ್ಷೆ ಮಾಡಿದೆ. ಉಳಿದ ಎಲ್ಲಾ ಹುಡುಗರು ಹೋ.. ಎಂದು ಕಿರುಚಿದರು. ಆ ಹುಡುಗ ಮಾತಾಡಲಿಲ್ಲ. ಅವನ ಕಣ್ಣಿಂದ ನೀರು ಹರಿಯುತ್ತಿತ್ತು. ಮಕ್ಕಳೆಲ್ಲರೂ ಅವನತ್ತ ನೋಡುತ್ತಾ ನಿಶ್ಯಬ್ಧವಾದರು. ಅವನು ಅಳು ದನಿಯಲ್ಲೇ ಮಾತು ಶುರುಮಾಡಿದ:
ನಾನು ನನ್ನ ತಂಗಿಯನ್ನು ಮಾತು ಮಾತಿಗೂ ಬಯ್ಯುತ್ತಿದ್ದೆ, ಹೊಡೆಯುತ್ತಿದ್ದೆ. ಆದರೂ ಅವಳು ನನ್ನನ್ನು ತುಂಬಾ ಪ್ರೀತಿಸುತ್ತಾಳೆ. ನನಗೆ ಅದನ್ನು ತಿಳಿಕೊಳ್ಳೋಕೆ ಆಗ್ತಾ ಇರಲಿಲ್ಲ. ಈ ಫಿಲಂ ನೋಡಿದ್ಮೇಲೆ ನನ್ನಗನ್ನಿಸ್ತು ಅಲಿ ಜೆಹೆರಾಳನ್ನು ಎಷ್ಟೊಂದು ಪ್ರೀತಿಸ್ತಾನೆ ನಾನು ನನ್ನ ತಂಗೀಗೆ ಹೊಡಿತೀನಲ್ಲ ಅಂತ. ನನಗೆ ಪಶ್ಚಾತ್ತಾಪ ಆಗ್ತಾ ಇದೆ. ಇನ್ಯಾವತ್ತೂ ನಾನು ನನ್ನ ತಂಗಿಗೆ ಹೊಡೆಯೋದಿಲ್ಲ, ಬೈಯ್ಯೋದಿಲ್ಲ.
ಎನ್ನುತ್ತಾ ಓಡಿಹೋಗಿ ಹಿಂದಿನ ಸಾಲಿನ ಎಡ ಮೂಲೆಯಲ್ಲಿ ಸಹಪಾಠಿಯರೊಡನೆ ಕೂತಿದ್ದ ತಂಗಿಯನ್ನು ತಬ್ಬಿಕೊಂಡ. ಆ ಹುಡುಗಿ ಕಣ್ಣಲ್ಲಿ ನೀರು ಜಿನುಗುತ್ತಾ ಇತ್ತು.
ಎರಡು
ಅದೇ ಚಿತ್ರಪ್ರದರ್ಶನ. ಐದಾರು ಸಾಲು ಹಿಂದೆ ಕೂತಿದ್ದ ಸುಮಾರಾದ ಹುಡುಗನೊಬ್ಬ ಎದ್ದು ನಿಂತ. ಮೈಕ್ ಅವನಲ್ಲಿಗೆ ಹೋಯ್ತು. ಒಂದು ಕೈಯಲ್ಲಿ ಮೈಕ್, ಮತ್ತೊಂದರಲ್ಲಿ ಹಳದಿ ಬಣ್ಣದ ಕ್ಯಾಮ್ಲಿನ್ ಜ್ಯಾಮಿಟ್ರಿ ಬಾಕ್ಸ್ ಹಿಡಿದ ಅವನು ಮಾತು ಶುರುಮಾಡಿದ:
ನಾನು ಹಣ ಬೇಕು ಅಂತ ಯಾವಾಗ್ಲೂ ಮನೇಲಿ ಹಠ ಮಾಡ್ತೀನಿ. ನಮ್ಮಮ್ಮ-ಅಪ್ಪ ಕೊಡ್ತಾರೆ. ತುಂಬಾ ಸಲ ನಾನು ಸುಳ್ಳು ಹೇಳಿ ಹಣ ಈಸಕೋತೀನಿ. ಕೆಲವು ಸಲ ಅವರು ಕೊಡದಿದ್ದಾಗ ನಾನು ಹಣ ಕದ್ಕೊಂಡ್ ಬರ್ತೀನಿ. ಅವರು ಎಲ್ಲಿ ಹಣ ಇಡ್ತಾರೆ ಅಂತ ನಂಗೊತ್ತು. ಈ ಹತ್ತು ರೂಪಾಯಿನಾ ನಾನು ಅಮ್ಮ ಹಣ ಇಡುವ ಖಾಲಿ ಬ್ರೂ ಕಾಫಿಪುಡಿ ಬಾಟಲಿನಿಂದ ಕದ್ಕೊಂಡುಬಂದೆ…
(ಎನ್ನುತ್ತಾ ತಾನು ಕೈಯಲ್ಲಿ ಹಿಡಿದ ಹಳದಿ ಜ್ಯಾಮಿಟ್ರಿ ಬಾಕ್ಸ್ನ ಒಳಭಾಗದಲ್ಲಿ ಇಟ್ಟಿದ್ದ ಹತ್ತು ರೂಪಾಯಿಯನ್ನು ಈಚೆ ತೆಗೆದು ತೋರಿಸಿದ)

ಅಪ್ಪ-ಅಮ್ಮನಿಗೆ ಎಷ್ಡು ಕಷ್ಡ ಇರತ್ತೆ ಅಂತ ನಂಗೆ ಗೊತ್ತಿರಲಿಲ್ಲ. ಅಪ್ಪನಿಗೆ ಶೂ ಹಾಳಾದ ವಿಷಯ ಗೊತ್ತಾದ್ರೆ ಹೊಸದ್ದು ಕೊಡಿಸೋಕೆ ಕಷ್ಟ ಆಗತ್ತೆ ಅಂತ ಒಂದೇ ಜೋಡಿ ಶೂವನ್ನು ಎಕ್ಸ್ಚೇಂಜ್ ಮಾಡಿ ಹಾಕ್ಕೊಳ್ಳೊ ಅಲಿ ಮತ್ತು ಜೆಹೆರಾಳನ್ನ ನೋಡಿದ್ಮೇಲೆ ನಮ್ಮ ಅಮ್ಮ ಅಪ್ಪನಿಗೆ ಕಷ್ಟಕೊಡ್ಬಾದರ್ು ಅಂತ ಅನ್ನಿಸ್ತಾ ಇದೆ. ಇನ್ಯಾವತ್ತೂ ನಾನು ಅಮ್ಮ ಅಪ್ಪನಿಗೆ ಕಷ್ಟ ಕೊಡಲ್ಲ. ಈ ಹತ್ತು ರೂಪಾಯಿನ ಅಮ್ಮನಿಗೆ ವಾಪಸ್ ಮಾಡ್ತಿನಿ
ಎಂದು ಹೇಳಿ ಅ ಹುಡುಗ ಸುಮ್ಮನೆ ಕೂತುಬಿಟ್ಟ. ಸುತ್ತಲ ಮಕ್ಕಳೆಲ್ಲರೂ ಸ್ತಬ್ಧವಾಗಿ ಅವನನ್ನೇ ನೋಡುತ್ತಾ ನಿಧಾನವಾಗಿ ಆರಂಭಿಸಿ ಜೋರಾಗಿ ಚಪ್ಪಾಳೆ ಹೊಡೆದರು. ಆ ಹುಡುಗನ ಮುಖ ಪ್ರಜ್ವಲವಾಗಿ ಹೊಳೀತಾ ಇತ್ತು.
ಮೂರು
ಮಂಡ್ಯದ ಹಳ್ಳಿಯ ಶಾಲೆಯೊದರಲ್ಲಿ ಮೀಡಿಯಾ ಹೌಸ್ ಸ್ಟುಡಿಯೋ ಟೂರಿಂಗ್ ಟಾಕೀಸ್ ವತಿಯಿಂದ ಗುಬ್ಬಚ್ಚಿಗಳು ಚಿತ್ರ ಪ್ರದರ್ಶನ ಆಯೋಜಿಸಿದ್ದೆವು. ಮಕ್ಕಳು ಖುಷಿಯಿಂದ ಅದನ್ನು ನೋಡಿದರು. ಸಂವಾದ ಮಾಡಿದರು. ಪರಿಸರ ಸಂರಕ್ಷಣೆ, ಕಾಡುಗಳ ನಾಶ, ಪ್ರಾಣಿ-ಪಕ್ಷಿಗಳ ಸಂತತಿ… ಹೀಗೆ ಏನೇನೋ ವಿಷಯಗಳ ಚರ್ಚೆಯಾಯಿತು. ಆ ಕಥೆ ಅಲ್ಲಿಗೆ ಮುಗಿಯಿತು ಅಂದುಕೊಂಡೆವು ಆದರೆ ಹಾಗೆ ಆಗಲಿಲ್ಲ. ಆ ಮಕ್ಕಳು ಚಿತ್ರಪ್ರದರ್ಶನದ ಬಳಿಕ ಹಕ್ಕಿಗಳನ್ನ ವಿಶೇಷವಾಗಿ ಗಮನಿಸೋದಕ್ಕೆ ಶುರುಮಾಡಿದರು. ಅವರ ಶಾಲೆಯ ಹಿಂದಿನ ಆಲೆಮನೆಯ ಬಳಿ ಐದಾರು ಸೊಂಪಾದ ಮರಗಳಿದ್ದವು. ಅವುಗಳಲ್ಲಿ ಎಂಟು ಹಕ್ಕಿ ಗೂಡುಗಳಿದ್ದವು. ಪ್ರತಿ ತರಗತಿಯ ಪಿಇಟಿ ಅವಧಿಯಲ್ಲಿ ಮಕ್ಕಳು ಅದನ್ನು ಗಮನಿಸಿಕೊಂಡು ಬರುತ್ತಿದ್ದರು. ಶಾಲೆಗೆ ಬರುವಾಗ ಹೋಗುವಾಗಲಂತೂ ಆ ಗೂಡುಗಳನ್ನು ನೋಡದೆ ಹೋಗುತ್ತಿರಲಿಲ್ಲ.
ಹೀಗೆ ಒಂದು ತಿಂಗಳು ಕಳೆದಿರಬೇಕು. ಒಂದು ಸೋಮವಾರ ಮಕ್ಕಳು ಶಾಲೆಗೆ ಬರುವ ಹೋತ್ತಿಗೆ ಆ ಆಲೆಮನೆಯವರು ಅಲ್ಲಿದ್ದ ಮರಗಳ ಕೊಂಬೆಗಳನ್ನು ಕಡಿದು ಟ್ರಿಮ್ ಮಾಡುತ್ತಿದ್ದಾರೆ. ಮಕ್ಕಳು ನೋಡುತ್ತಾರೆ, ಅದಾಗಲೇ ಎರಡು ಗೂಡುಗಳು ನೆಲದ ಮೇಲೆ ಬಿದ್ದಿವೆ! ಮಕ್ಕಳಿಗೆ ದುಃಖ, ಕೋಪ ಎರಡೂ ಕಿತ್ತುಕೊಂಡು ಬಂತು. ಎಲ್ಲರೂ ಒಂದೇ ಉಸಿರಿಗೆ ಮರದ ಬುಡದ ಬಳಿ ಹೋಗಿ ಕಿರುಚಿ ಗಲಾಟೆ ಮಾಡಿದರು. ಆ ರುದ್ರ ಭಯಂಕರ ಸದ್ದಿಗೆ ಬೆಚ್ಚಿ ಮನೆ ಮನೆಯಿಂದ ಜನರು ಓಡೋಡಿ ಬಂದರು. ಆಲೆಮನೆಯ ಮಾಲೀಕನೂ ಓಡಿಬಂದ. ಮಕ್ಕಳು ಗೂಡು ಕೀಳುವುದನ್ನು ನಿಲ್ಲಿಸುವಂತೆ ಗಲಾಟೆ ಮಾಡಿದರು. ಇಡೀ ಶಾಲೆ ಅಸ್ತವ್ಯಸ್ತವಾಯಿತು. ಏನೆಲ್ಲಾ ಸಮಾಧಾನ ಮಾಡಿದರೂ ಮಕ್ಕಳು ಕೇಳುತ್ತಿಲ್ಲ. ಧರಣಿ ಕೂತರು. ಊಟ ಮಾಡುವುದಿಲ್ಲ ಅಂದರು. ಶಾಲೆಗಂತೂ ಹೋಗಲೇ ಇಲ್ಲ. ಕೊನೆಗೆ ಮಕ್ಕಳೇ ಗೆದ್ದರು. ಗೂಡು ಕೀಳುವುದನ್ನು ಕೈಬಿಟ್ಟರು. ಮಕ್ಕಳು ಸಂಭ್ರಮಿಸಿದರು.
ಈಗ ಆ ಶಾಲೆ ಸುತ್ತಾ ನೂರಾರು ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಹಾರಾಡುತ್ತಿವೆ. ಮಕ್ಕಳು ಖುಷಿಯಾಗಿದ್ದಾರೆ. ಟೂರಿಂಗ್ ಟಾಕೀಸ್ ಮತ್ತೆ ಯಾವ ಚಿತ್ರ ಹೊತ್ತು ತರುತ್ತದೆ ಎಂದು ಆ ಮಕ್ಕಳು ಕಾಯುತ್ತಿದ್ದಾರೆ.
ಈ ಮೂರು ಘಟನೆಗಳನ್ನು ಕೇಳಿದರೆ ಸತ್ಯಜಿತ್ ರೇ ಏನಂತಾರೋ ನನಗೆ ಗೊತ್ತಿಲ್ಲ !





Hanigoodidare halla embante obbobbaru badalaagutta hodare samaajada badalaavane eke saadhyvilla? Adoo makkalu badalaadare saakallave? Idu saadhya!
Neevu tilisida mooru ghatanegalu idanne taane vishadeekarisuvadu? tumba channaagi bandide.
ಅರವತ್ತರ ದಶಕದಲ್ಲಿ ಸತ್ಯಜಿತ್ ರೇ ಅವರಿಗೆ ಸಿನಿಮಾಗಳು ಸಮಾಜವನ್ನು ಬದಲಾವಣೆ ಮಾಡುತ್ತದೆ ಎಂದು ಅನಿಸಿರಲಿಲ್ಲವೆನೋ…ಆ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮಗಳು 90ರದಶಕದಂತೆ ಪ್ರಭಾವಿಯಾಗಿರಲಿಲ್ಲ… 70 ಭಾಗ ಎಲ್ಲಾ ಸಿನಿಮಾಗಳು ಗ್ರಾಸ್ರೋಟ್ ಲೆವಲ್ ವರೆಗೂ ತಲುಪುತಿರಲಿಲ್ಲ..ಅವು ಅಷ್ಟು ಚರ್ಚೆಗೊಳಪಡಲಿಲ್ಲ, ರೇ ಅವರ ಅಪ್ಪುತ್ರಿವಳಿಗಳನ್ನ ಮಕ್ಕಳಿಗೊಮ್ಮೆ ತೋರಿಸಿ.. ಸತ್ಯಜಿತ್ ರೇ ನಗಬಹುದು!
ಗೆಳೆಯ ವಿನಯ್, ನಿಮ್ಮ ಅಂಕಣವನ್ನು ಕುತೂಹಲದಿಂದ ಕಾಯುತ್ತಿದ್ದೆ.
ಮುಂದುವರೆಯಲಿ…ನಿಮ್ಮ ಬರವಣಿಗೆ.
ನನ್ನ ವ್ಯಯಕ್ತಿಕ ಅಭಿಪ್ರಾಯ ಸಿನಿಮಾ ಬದಲಾವಣೆ ತರುತ್ತೆ.
ಒಳ್ಳೆಯ ಅನುಭವಗಳ ಒಳ್ಳೆಯ ದಾಖಲೆ.ಸಾಹಿತ್ಯವಾಗಲಿ,ಸಿನೆಮಾ ಆಗಲಿ ಸಮಾಜವನ್ನು ಬದಲಾಯಿಸುವುದಿಲ್ಲ ಎಂಬುದು ಸರಿಯಾದ ಮಾತು. ಸಮಾಜವನ್ನು ಬದಲಾಯಿಸುವುದು ಮನುಷ್ಯ ಸಮುದಾಯ.ಸಾಹಿತ್ಯ,ಸಿನೆಮಾ ಮತ್ತು ಇನ್ನಿತರ ವಿಚಾರ ಕೂಟಗಳು,ಭಾಷಣಗಳು,ಆಪ್ತ ಚರ್ಚೆಗಳು ಮನುಷ್ಯರು ತಮ್ಮ ಜೀವನಾನುಭವವನ್ನು ಗ್ರಹಿಸುವುದಕ್ಕೆ ಅಮೂಲಕ ಮನುಷ್ಯನ ವಿಚಾರ ಶಕ್ತಿಯನ್ನು ರೂಪಿಸುವುದಕ್ಕೆ ಸಹಾಯ ಮಾಡುತ್ತದೆ. ಯಾವ ರೀತಿಯ ವಿಚಾರವನ್ನು ರೂಪಿಸುತ್ತದೆ ಎನ್ನುವುದರ ಮೇಲೆ ಸಮಾಜದ ಬದಲಾವಣೆಗೆ ಸಹಾಯಕಾರಿಯೋ ಅಲ್ಲವೋ ಎಂಬುದು ತೀರ್ಮಾನವಾಗುತ್ತದೆ. ಹೀಗೆ ಸಾಹಿತ್ಯ,ಸಿನೆಮಾ ಸ್ವಯಂ ಸಮಾಜ ಬದಲಾವಣೆಯ ಶಕ್ತಿಗಳಲ್ಲ ಮನುಷ್ಯರ ಜೀವನಾನುಭವವೇ ಪ್ರಧಾನ
ಸಾಹಿತ್ಯ ಸಿನೆಮಾಗಳಿಂದ ದೀಡಿರ್ ಬದಲಾವಣೆ ಸಾಧ್ಯವಾಗಲಿಕ್ಕಿಲ್ಲ. ಆದರೆ, ಬದಲಾವಣೆಗಾಗಿ ತುಡಿಯುವ ಮನಸ್ಸುಗಳನ್ನು ಖಂಡಿತ ತಯಾರಾಗುತ್ತವೆ. ವಿನಯ್ ಚನ್ನಾಗಿ ಬರೆದಿದ್ದಿರಿ, ನಿಮ್ಮ ಗುರು ರೇಗೆ ಟಾಂಗ್ ಹಾಕಿದ್ದಿರಿ. ಮುಂದುವರೆಸಿ.
ಸತ್ಯಜಿತ್ ರೇಯವರ ಮಾತು ಸತ್ಯ. ಯಾವ ಸಾಹಿತ್ಯ, ಸಿನೆಮಾ ಸಮಾಜವನ್ನು ಬದಲಿಸುವುದಿಲ್ಲ. ಹಾಗೆಯೇ ಸಮಾಜವನ್ನು ಬದಲಿಸುತ್ತೇವೆಂದು ಯಾರೂ ಬರೆಯಬಾರದು. ಆದರೆ ಇವೆರಡೂ ಜನರನ್ನು ಬದಲಿಸುತ್ತವೆ. ಜನರನ್ನು ಬದಲಿಸಲು ಇವೆರಡೂ ರಚನೆಯಾಗಬೇಕು ಎಂದು ರೇ ಹೇಳಿದ್ದರೆಂದು ಓದಿದ ನೆನಪು. ಜನರಲ್ಲದೆ ಸಮಾಜದ ಅಸ್ತಿತ್ವ ಇಲ್ಲ. ಹಾಗಾಗಿ ಸಮಾಜ ಮತ್ತು ಜನರು ಒಂದೇ ಅಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಆದರೆ ಸಮಾಜವು ಜನರು ಹೇಗಿರಬೇಕು ಎಂದು ನಿರ್ಧರಿಸುವ ಚಾಲಕ ಶಕ್ತಿಯಾಗಿರುತ್ತದೆ. ಹಾಗೆಯೇ ಜನರು ಸಮಾಜವನ್ನು ನಿರಂತವಾಗಿ ಬದಲಿಸುವ ಅಂತರ್ಶಕ್ತಿಯಾಗಿರುತ್ತಾರೆ. ಹಾಗಾಗಿಯೇ ರೇಯವರ ಹೆಚ್ಚಿನ ಸಿನಿಮಾಗಳು ಜನರನ್ನು ಕೇಂದ್ರೀಕರಿಸಿದ್ದವು ಎನ್ನುವುದನ್ನು ಗಮನಿಸಬೇಕು.
ಸಿನೆಮಾ ಬದಲಾವಣೆಗೆ ಇ೦ಬು ಕೊಡುತ್ತದೆ. ಒ೦ದು ಕಿಕ್ ಕೊಡುತ್ತದೆ. ಬದಲಾವಣೆಯೆ೦ಬ ಐಡಿಯವನ್ನು ಮೆದುಳೊಳಗೆ ಬೀಜ ಬಿತ್ತಿ ಬಿಡುತ್ತದೆ.
Thanks for your valuable comments.