
ನಾನು ಮೊದಲ ಪುಸ್ತಕ ಪ್ರಕಟಿಸುವಾಗ ನನ್ನಲ್ಲಿ ಸಿನಿಮಾ ಪ್ರೀತಿ ಬಿತ್ತಿದ ಪ್ರಮುಖರಲ್ಲೊಬ್ಬರಾದ ಲಿಂಗದೇವರು ಹಳೆಮನೆಯವರಿಂದ ಅದಕ್ಕೊಂದು ಪುಟ್ಟ ರೆಸ್ಪಾನ್ಸ್ ಬರೆಸಬೇಕೆಂಬ ಪ್ರಬಲ ಆಸೆ ಹೊಂದಿದ್ದೆ. ಸಿನಿಮಾ ಮಾತ್ರವಲ್ಲದೆ ಯಾವುದೇ ವಿಷಯದ ಬಗ್ಗೆ ಮಾತಾಡಲು, ಬೆನ್ನುತಟ್ಟಲು ಅವರಿರುತ್ತಿದ್ದರು. ಮೊನ್ನೆ ಸುಮ್ಮನೆ ಕೂತಿದ್ದಾಗ ಯಾಕೋ ಹಳೆಮನೆ ನೆನಪಾಗಿಬಿಟ್ಟರು. ಅವರ ಜೊತೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ಹೋದೆ. ಸಿಗರೇಟು ಸೇದುತ್ತಾ ಅವರಾಡುತ್ತಿದ್ದ ಮಾತು ಕೇಳಿಸುತ್ತಾ ಹೋಯಿತು. ಅವರ ಒಂದೆರಡು ಪುಸ್ತಕಗಳನ್ನು ಓದುತ್ತಾ ಹೋದೆ.
ಸದ್ಯ ನಾನು ಸಾಹಿತ್ಯ ಚರ್ಚೆಯ ‘ಆಪ್ತ ಸಂವಾದ’, ಪರ್ಯಾಯ ಚಲನಚಿತ್ರಗಳನ್ನು ಜನತೆಗೆ ತಲುಪಿಸುವ ‘ಟೂರಿಂಗ್ ಟಾಕೀಸ್’ ನಡೆಸುತ್ತಿರುವ ಹೊತ್ತಿಗೆ ಅವರಿದ್ದಿದ್ದರೆ ಖುಷಿಯಾಗಿ ಕುಣಿದುಬಿಡುತ್ತಿದ್ದರೇನೋ! ಹೀಗೆಂದುಕೊಳ್ಳುವಾಗ ನಾನು ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನ ಸರಣಿ ಸಂಕಲನ ‘ಬೆಳಕು ಬೆರಗು’ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಹಳೆಮನೆಯವರ ‘ಕಲಾತ್ಮಕ ಚಿತ್ರಗಳಿಗೆ ‘ಬಿಡುಗಡೆ’ ಎಂದು?’ ಲೇಖನ ಓದುತ್ತಿದ್ದಂತೆ ಹಳೆಮನೆಯವರು ಪರ್ಯಾಯ ಚಲನಚಿತ್ರಗಳ ಬಗ್ಗೆ ಎಷ್ಟು ಸ್ಪಷ್ಟವಾಗಿ ಯೋಚಿಸಿದ್ದಾರೆ ಅನ್ನಿಸಿತು.
ನಾನು ಯಾವಾಗಲೂ ದೃಶ್ಯ ಮಾಧ್ಯಮದ ಪ್ರಭಾವಶಾಲಿ ಅಂಗ ಎಂದು ಪ್ರತಿಪಾದಿಸುವ ಸಿನಿಮಾದ ನೈಜ ಅಭಿವ್ಯಕ್ತಿ ಪರ್ಯಾಯ ಚಲನಚಿತ್ರಗಳ ಬಗ್ಗೆ ಅವರ ಲೇಖನವನ್ನು ಯಥಾವತ್ತಾಗಿ ನಿಮ್ಮೊಡನೆ ಹಂಚಿಕೊಳ್ಳಬೇಕು ಅಂತಲೂ ಅನ್ನಿಸಿತು. ಅದಕ್ಕಾಗಿಯೇ ಇದು ಓದಿ :
ಕಲಾತ್ಮಕ ಚಿತ್ರಗಳಿಗೆ ‘ಬಿಡುಗಡೆ ಎಂದು?
ಕನ್ನಡದ ಕಲಾತ್ಮಕ ಚಿತ್ರಗಳು ಮತ್ತೆ ಸುದ್ದಿಯಲ್ಲಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ಅವು ಬಹು ದೊಡ್ಡದಾಗಿ ಹೆಸರು ಮಾಡಿದ್ದವು. ಎಷ್ಟರ ಮಟ್ಟಿಗೆ ಎಂದರೆ, ಸ್ವತಃ ಸತ್ಯಜಿತ್ರೇ ಅವರೇ ಒಮ್ಮೆ ‘ಪರ್ಯಾಯ ಚಲನಚಿತ್ರ ಮುಂದಿನ ದಿನಗಳಲ್ಲಿ ಪ್ರಾದೇಶಿಕವಾಗಿ ಕನ್ನಡದಲ್ಲಿ ದೊಡ್ಡ ಯಶಸ್ಸು ಗಳಿಸುವ ಸಾಧ್ಯತೆಗಳಿವೆ’ ಎಂದಿದ್ದರು. ಆಗ ಬಂದ ಸಂಸ್ಕಾರ, ವಂಶವೃಕ್ಷ, ಕಾಡು, ಚೋಮನದುಡಿ, ಘಟಶ್ರಾದ್ಧ ಮುಂತಾದ ಚಿತ್ರಗಳು ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದವು. ಆದರೆ ಎಂಬತ್ತರ ದಶಕದ ನಂತರ ಕಲಾತ್ಮಕ ಚಿತ್ರಗಳು ನಿಧಾನವಾಗಿ ಇಳಿಮುಖವಾಗತೊಡಗಿದವು. ಪ್ರಧಾನ ಧಾರೆಯ ಚಿತ್ರಗಳು ತಮ್ಮೆಲ್ಲಾ ವೈಭವ, ಹಿಂಸೆ, ಪ್ರೀತಿ, ಪ್ರೇಮ ಮುಂತಾದ ವಸ್ತುಗಳ ನೆಲೆಯಲ್ಲಿ ವಿಜೃಂಭಿಸತೊಡಗಿದವು. ಪ್ರೇಕ್ಷಕರ ಅಭಿರುಚಿಯೂ ಕೂಡಾ ಕಲಾತ್ಮಕ ಅಥವಾ ಪರ್ಯಾಯ ಚಿತ್ರಗಳ ಕಡೆ ಕ್ಷೀಣಿಸತೊಡಗಿತು.
ಆದರೆ ಈಗ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪರ್ಯಾಯ ಚಿತ್ರಗಳು ಮತ್ತೆ ಗಮನಾರ್ಹ ರೀತಿಯಲ್ಲಿ ಕಾಣಿಸಿಕೊಳ್ಳತೊಡಗಿವೆ. ಇಡೀ ಭಾರತೀಯ ಚಿತ್ರರಂಗವೇ ಹೆಮ್ಮೆಪಡಬಹುದಾದ ಗಿರೀಶ್ ಕಾಸರವಳ್ಳಿಯವರು ಮಾತ್ರ ಛಲ ಬಿಡದ ತ್ರಿವಿಕ್ರಮನಂತೆ ತಮ್ಮ ಬದ್ಧ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಪ್ರತಿಸಾರಿ ಚಿತ್ರ ನಿರ್ದೇಸಿದಾಗಲೂ ತಮ್ಮದೇ ಆದ ಅನನ್ಯತೆಯನ್ನು ಮೆರೆದಿದ್ದಾರೆ. ಅವರು ಪ್ರತಿಪಾದಿಸಿಕೋಂಡು ಬಂದ ಪರ್ಯಾಯ ಚಲನಚಿತ್ರ ನಿರ್ದೇಶನದ ಗುಂಪಿಗೆ ಈಗ ಹೊಸ ಪೀಳಿಗೆಯ ಶೇಷಾದ್ರಿ, ಲಿಂಗದೇವರು, ರಾಮದಾಸನಾಯ್ಡು, ಬಿ. ಸುರೇಶ, ಬರಗೂರು ರಾಮಚಂದ್ರಪ್ಪ ಮುಂತಾದವರು ಸೇರಿದ್ದಾರೆ. ಇವರೇಲ್ಲರೂ ಕನ್ನಡಿಗರು ಹೆಮ್ಮೆ ಪಡಬಹುದಾದಂತ ಪ್ರಾದೇಶಿಕ ಮಣ್ಣಿನ ವಾಸನೆಯ ಛಾಪು ಒತ್ತಿದ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಓಷಿಯನ್ ಚಲನಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ‘ಗುಲಾಬಿ ಟಾಕೀಸ್’ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತು. ಪ್ರಶಸ್ತಿಯ ಮೊತ್ತ ಇಪ್ಪತ್ತು ಲಕ್ಷ ರೂಪಾಯಿಗಳು. ಅದರಲ್ಲಿ ಪ್ರಧಾನ ಪಾತ್ರವಹಿಸಿದ್ದ ಉಮಾಶ್ರೀಯವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯೂ ಲಭಿಸಿದೆ. ಇದರಿಂದ ನಮಗೆಲ್ಲಾ ಸಂತಸವಾಗಿದೆ ನಿಜ. ಆದರೆ ಅದರ ಹಿಂದೆಯೇ ಒಂದು ರೀತಿಯ ಖೇದವೂ ಉಂಟಾಗುತ್ತಿದೆ. ಹೀಗೆ ಒಂದಲ್ಲಾ ಒಂದು ರೀತಿಯ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸುತ್ತಿರುವ ಚಿತ್ರಗಳು ಸಾರ್ವಜನಿಕವಾಗಿ ನೋಡಲು ಲಭ್ಯವಿಲ್ಲ. ಇವುಗಳನ್ನು ಸಾಮಾನ್ಯ ಸಿನಿಮಾ ವೀಕ್ಷಕರು ನೋಡುವುದಿಲ್ಲ. ಆದ್ದರಿಂದ ಇವುಗಳನ್ನು ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲ ಎಂಬುದು ವಿತರಕರ, ಚಲನಚಿತ್ರ ಮಂದಿರಗಳ ಮಾಲೀಕರ ವಾದ. ಅದು ನಿಜ ಇರಬಹುದು. ಆದರೆ ಇಂಥ ಚಿತ್ರಗಳನ್ನು ನೋಡಲು ಬಯಸುವ ಒಂದು ಸಣ್ಣ ಪ್ರಮಾಣದ ಆಸಕ್ತರ ಗುಂಪೂ ಇದೆಯಲ್ಲಾ . ಅಂಥವರೂ ಕೂಡಾ ಚಿತ್ರಗಳನ್ನು ನೋಡಲಾರದಂಥ ಸ್ಥಿತಿಯಲ್ಲಿದ್ದಾರೆ.
ಇನ್ನು ಇಂಥ ಚಿತ್ರಗಳಿಗೆ ಹಣ ಹೂಡುವವರು ಚಿತ್ರದಿಂದ ಲಾಭ ಬರಲಿ ಬಿಡಲಿ ರಾಷ್ಟ್ರಮಟ್ಟದಲ್ಲಿ ಅಥವಾ ಕನಿಷ್ಠ ರಾಜ್ಯಮಟ್ಟದಲ್ಲಿ ಒಂದು ಪ್ರಶಸ್ತಿ ಬಂದರೆ ಸಾಕು ಎನ್ನುವ ಮನಸ್ಥಿತಿ ಉಳ್ಳವರು. ಯಾರಿಂದ ತಾವು ಚಿತ್ರ ನಿರ್ದೇಶನ ಮಾಡಿಸಿದರೆ ಪ್ರಶಸ್ತಿ ಬರಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ನಿರ್ದೇಶಕನೇ ತನ್ನ ಕೆಲವಾರು ಗೆಳೆಯರನ್ನು ಒಂದುಗೂಡಿಸಿ ಸಿಂಡಿಕೇಟ್ ಮಾಡಿಕೊಂಡು ಕಡಿಮೆ ಮೊತ್ತದ ಬಂಡವಾಳ ಹಾಕಿ ತಯಾರಿಸುತ್ತಿರುವುದೂ ಇದೆ. ಇಲ್ಲೆಲ್ಲಾ ಗಮನಿಸಬೇಕಾದ ಅಂಶ ಒಂದಿದೆ. ಈ ರೀತಿಯ ಪರ್ಯಾಯ ಚಿತ್ರ ನಿರ್ಮಾಣಕ್ಕೆ ಹೊರಡುವ ನಿರ್ದೇಶಕ ವಸ್ತುವಿನ ಆಯ್ಕೆಯಲ್ಲಿ , ಪಾತ್ರಧಾರಿಗಳ ಆಯ್ಕೆಯಲ್ಲಿ ಅತಿ ಎಚ್ಚರ ವಹಿಸುತ್ತಾನೆ. ಪ್ರತಿ ಹೆಜ್ಜೆಯಲ್ಲೂ ತಾಜಾತನ ಇರುವಂತೆ ನೋಡಿಕೊಳ್ಳುತ್ತಾನೆ. ಆದರೆ ಕಡಿಮೆ ಬಜೆಟ್ ಆದ್ದರಿಂದ ತಾಂತ್ರಿಕತೆಯಲ್ಲಿ ಚಿತ್ರ ಸೋತಿರುತ್ತದೆ. ಹಾಕಿದ ಬಂಡವಾಳ ಪಡೆಯುವುದಕ್ಕೆ ಅವರು ಸಬ್ಸಿಡಿ , ಪ್ರಶಸ್ತಿ ಮತ್ತು ಟಿ.ವಿ. ಚಾನಲ್ ಆದಾಯಗಳಿಗೆ ಕಾಯಬೇಕು. ಅವರಂತೆಯೇ ಪ್ರೇಕ್ಷಕನೂ ಕೂಡಾ ಆ ಚಿತ್ರ ನೋಡುವ ಒಂದಾನೊಂದು ದಿನಕ್ಕೆ ಕಾಯುತ್ತಾ ಕೂರಬೇಕು.
ಗಿರೀಶ್ ಕಾಸರವಳ್ಳಿ, ಲಿಂಗದೇವರು, ಬರಗೂರು ರಾಮಚಂದ್ರಪ್ಪ ಮುಂತಾದವರು ತಮ್ಮ ಚಿತ್ರಗಳ ಕ್ಯಾನ್ಗಳನ್ನು ತಾವೇ ಎತ್ತಿಕೊಂಡು ಹೋಗಿ ಬೇರೆ ಬೇರೆ ಊರುಗಳಲ್ಲಿ ಅಲ್ಲಿಯ ಚಲನ ಚಿತ್ರಮಂದಿರಗಳ ಮಾಲಿಕರನ್ನು ಕಾಡಿಬೇಡಿ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಿದೆ. ಲಿಂಗದೇವರು ಒಂದೆರಡು ಬಾರಿ ‘ನಮ್ಮೂರ ಚಿತ್ರೋತ್ಸವ’ ಎಂಬ ಪ್ರದರ್ಶನಗಳನ್ನು ಬೇರೆ ಬೇರೆ ಕಡೆ ಏರ್ಪಡಿಸಿ ಕೈ ಸುಟ್ಟುಕೊಂಡಿದ್ದೂ ಇದೆ. ಆದರೆ ಈ ಎಲ್ಲಾ ಹಿನ್ನಡೆಗಳಿಂದ ಇವರ್ಯಾರು ವಿಚಲಿತರಾಗದೆ ಮತ್ತೆ ಮತ್ತೆ ಪರ್ಯಾಯ ಚಿತ್ರಗಳನ್ನು ತಯಾರಿಸುತ್ತಲೇ ಇದ್ದಾರೆ. ಹಾಗಾಗಿ ನಮಗೆ ಮುನ್ನಡಿ, ಹಸೀನಾ, ಬೇರು , ಕಾಡಬೆಳದಿಂಗಳು, ತಾಯಿ ಮುಂತಾದ ಚಿತ್ರಗಳು ನೋಡಲು ಸಿಕ್ಕಿವೆ.

ಪ್ರಧಾನ ಧಾರೆಯ ಚಿತ್ರಗಳು ಕಾರ್ಪೋರೇಟ್ ಜಗತ್ತಿಗೆ ಸೇರಿದವು. ಅಲ್ಲಿ ಹಣಕ್ಕೆ ಕೊರತೆ ಇಲ್ಲ. ಹಾಗಾಗಿ ಚಲನಚಿತ್ರ ಮಂದಿರಗಳ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ಪರ್ಯಾಯ ಚಿತ್ರಗಳಿಗೆ. ಇದೇ ಪರ್ಯಾಯ ಚಿತ್ರಗಳು ಒಮ್ಮೆ ಇದೇ ಬೆಂಗಳೂರಿನಲ್ಲಿ ವಾರಗಟ್ಟಲೆ ಓಡಿದ್ದವು. ಸಂಸ್ಕಾರ ನೂರು ದಿನಗಳವರೆಗೆ, ‘ವಂಶವೃಕ್ಷ’ ಇಪ್ಪತ್ತೈದು ವಾರಗಳವರೆಗೆ, ಕಾಡು, ಚೋಮನದುಡಿ ಹತ್ತು ಹದಿನೈದು ವಾರಗಳವರೆಗೆ ಓಡಿದ ಉದಾಹರಣೆಗಳಿವೆ. ಆಗ ಪರ್ಯಾಯ ಚಿತ್ರ ನೋಡುವುದಕ್ಕೆ ಬೇಕಾದ ಒಂದು ಅಭಿರುಚಿ ಸೃಷ್ಟಿಯಾಗಿತ್ತು. ಈಗ ಅಭಿರುಚಿ ಇಲ್ಲ. ಅದನ್ನು ಮತ್ತೆ ಸೃಷ್ಟಿಸಬೇಕಾಗಿದೆ. ಈ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ.
ಹಿಂದೊಮ್ಮೆ ಬೆಂಗಳೂರಿನಲ್ಲಿ ಪುಟ್ಟಣ್ಣ ಚಿತ್ರಮಂದಿರವನ್ನು ಪರ್ಯಾಯ ಚಿತ್ರಗಳ ಪ್ರದರ್ಶನಕ್ಕೇ ಮೀಸಲಾಗಿಡುವ ಮಾತು ಪ್ರಸ್ತಾಪವಾಗಿತ್ತು. ಅದು ಏನಾಯಿತೋ ತಿಳಿಯದು. ಈಗಲಾದರೂ ಸರ್ಕಾರ ಸುಮಾರು ನೂರೈವತ್ತು ಕುರ್ಚಿಗಳಿರುವ ಒಂದು ಕಟ್ಟಡ ಕಟ್ಟಿಸಿ, ಚಿತ್ರವನ್ನು ಪ್ರದರ್ಶಿಸುವ ಸಕಲ ಉಪಕರಣಗಳನ್ನು ಅಳವಡಿಸಿ ಪ್ರತ್ಯೇಕವಾಗಿ ಪರ್ಯಾಯ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕು . ಪುಟ್ಟಣ್ಣ ಕಣಗಾಲ್ ಚಿತ್ರಮಂದಿರವನ್ನೇ ಆ ರೀತಿ ಹೊಂದಾಣಿಕೆ ಮಾಡುವುದಾದರೆ ಇನ್ನೂ ಒಳ್ಳೆಯದು. ಅಲ್ಲಿ ಬರೀ ಕನ್ನಡದ ಪರ್ಯಾಯ ಚಿತ್ರಗಳೇ ಪ್ರದರ್ಶಿತವಾಗಬೇಕಿಲ್ಲ. ಯಾವುದೇ ಭಾಷೆಯ ಚಿತ್ರ ಪ್ರದರ್ಶಿತವಾಗಬಹುದು. ಆದರೆ ಕನ್ನಡ ಚಿತ್ರಗಳಿಗೆ ಅದ್ಯತೆ ಇರಬೇಕು.
ಇದು ಬೆಂಗಳೂರಿನ ಮಾತಾಯಿತು. ಆದರೆ ಈ ಚಿತ್ರಗಳನ್ನು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನೋಡಬೇಕು ಎನ್ನುವವರೂ ಇದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಲಾಮಂದಿರಗಳನ್ನು ಕಟ್ಟಿಸಿದೆ. ಅಲ್ಲಿ ಸುಮಾರು ನೂರು ಜನ ಕೂತು ನೋಡಬಹುದಾದ ಸ್ಥಳಾವಕಾಶ ಕಲ್ಪಸಿ ಈ ಚಿತ್ರಗಳು ಅಲ್ಲಿ ಪ್ರದರ್ಶನವಾಗುವಂತೆ ನೋಡಿಕೊಳ್ಳಬಹುದು. ಜಿಲ್ಲಾ ಕೇಂದ್ರಗಳ ಪ್ರದರ್ಶನಕ್ಕೆ ತಿಂಗಳಲ್ಲಿ ಇಂತಿಷ್ಟು ಎಂದು ನಿರ್ದಿಷ್ಟ ದಿನಗಳನ್ನು ನಿಗದಿಪಡಿಸಿದರೆ ಇನ್ನೂ ಅನುಕೂಲ. ಪ್ರಧಾನ ಧಾರೆಯ ಚಿತ್ರಗಳು ಸೃಷ್ಟಿಸುತ್ತಿರುವ ಅಸಹ್ಯಕರ ಅಭಿರುಚಿಯನ್ನು ಸ್ವಲ್ಪ ಮಟ್ಟಿಗಾದರೂ ತಡೆಗಟ್ಟಲು ಪರ್ಯಾಯ ಚಿತ್ರಗಳ ಪ್ರದರ್ಶನ ಮತ್ತು ವೀಕ್ಷಣೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು.
ಸತ್ಯಜಿತ್ರೇ ಅವರು ಫೆಡರೇಷನ್ ಆಫ್ ಫಿಲಂ ಸೊಸೈಟೀಸ್ ಆಫ್ ಇಂಡಿಯಾ ಸ್ಥಾಪಿಸಿ ದೇಶದಾದ್ಯಂತ ಪರ್ಯಾಯ ಚಿತ್ರಗಳನ್ನು ಪ್ರದರ್ಶಿಸಲು ಮುಂದಾದರು. ಅದರಿಂದ ಉತ್ತೇಜನಗೊಂಡ ಪಶ್ಚಿ,ಮ ಬಂಗಾಳ ಸರ್ಕಾರ ಪರ್ಯಾಯ ಚಿತ್ರಗಳ ಪ್ರದರ್ಶನವನ್ನು ಪ್ರೋತ್ಸಾಹಿಸಲೆಂದೇ ‘ನಂದನ್’ ಎಂಬ ಮಿನಿ ಆಡಿಟೋರಿಯಂ ಕಟ್ಟಿಸಿಕೊಟ್ಟಿದೆ. ಸತ್ಯಜಿತ್ರೇ ಅವರು ಸ್ಥಾಪಿಸಿದ ಫಿಲಂ ಸೊಸೈಟಿಯಿಂದ ಉತ್ತೇಜನಗೊಂಡು ಎಪ್ಪತ್ತು ಎಂಬತ್ತರ ದಶಕದಲ್ಲಿ ಸಣ್ಣ ಸಣ್ಣ ಊರುಗಳಲ್ಲೂ ಫಿಲಂ ಸೊಸೈಟಿಗಳು ತಲೆಎತ್ತಿದವು. ಕೆಲವು ಫಿಲಂ ಸೊಸೈಟಿಗಳು ಚಿತ್ರಗಳನ್ನು ಪ್ರದರ್ಶಿಸುವುದರ ಜೊತೆಗೆ ಚಲನಚಿತ್ರ ರಸಗ್ರಹಣ ಶಿಬಿರಗಳನ್ನೂ ಏರ್ಪಡಿಸುತ್ತಿದ್ದವು. ಇದೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸುವುದಕ್ಕೆ ಕಾರಣ ಇದೆ. ಈ ರೀತಿಯ ಬಹುಮುಖೀ ಪ್ರಯತ್ನಗಳಿಂದ ಚಲನಚಿತ್ರ ವೀಕ್ಷಣೆಯ ಬಗ್ಗೆಯೇ ಒಂದು ಸದಭಿರುಚಿಯ ಸಂವೇದನೆಯನ್ನು ಅಂದು ಹುಟ್ಟು ಹಾಕಲು ಸಾಧ್ಯವಾಗಿತ್ತು. ಆ ಸದಭಿರುಚಿಯ ನೆಲೆಯ ಪ್ರೋತ್ಸಾಹದಿಂದಲೇ ಕಲಾತ್ಮಕ ಚಿತ್ರಗಳು ಸಾರ್ವಜನಿಕ ಪ್ರದರ್ಶನಕ್ಕೆ ಬಿಡುಗಡೆಯಾಗುತ್ತಿದ್ದವು. ಆದರೆ ಇಂದು ಅದರಲ್ಲೂ ಮುಖ್ಯವಾಗಿ ಬಹುತೇಕ ಯುವಜನತೆಯಲ್ಲಿ ಆ ಸದಭಿರುಚಿ ಇಲ್ಲವೆಂದು ವಿಷಾದದಿಂದಲೇ ಹೇಳಬೇಕಾಗಿದೆ. ಹಾಗೆಂದು ನಾನು ಯುವಜನತೆಯನ್ನು ನಿಂದಿಸುತ್ತಿಲ್ಲ. ನಾವೇ ಕಷ್ಟಪಟ್ಟು ಹುಟ್ಟು ಹಾಕಿದ ಒಂದು ಸದಭಿರುಚಿಯನ್ನು ಅಬಾಧಿತವಾಗಿ ಮುಂದುವರಿಸಿಕೊಂಡು ಬರಲಾಗಲಿಲ್ಲವಲ್ಲ ಎಂಬ ನೋವಿದೆ.
ಕರ್ನಾಟಕ ಸರ್ಕಾರ ಕಾಲದಿಂದ ಕಾಲಕ್ಕೆ ಚಲನಚಿತ್ರ ತಯಾರಿ ಮತ್ತು ಪ್ರದರ್ಶನದ ಬಗ್ಗೆ ನಿಯಮಗಳನ್ನು ಪ್ರಕಟಿಸುತ್ತಲೇ ಬರುತ್ತಿದೆ. ಆದರೆ ಇಲ್ಲಿಯವರೆಗೆ ಪರ್ಯಾಯ ಸಿನಿಮಾಗಳ ಬಗ್ಗೆ ಪ್ರತ್ಯೇಕವಾಗಿ ವಿಶೇಷವಾದ ಕ್ರಮವನ್ನೇನೂ ಕೈಗೊಂಡಿಲ್ಲ.
ಕರ್ನಾಟಕ ಸರ್ಕಾರ ಈಗ ಕನ್ನಡದಲ್ಲಿ ತಯಾರಾಗುವ ಎಲ್ಲ ಚಿತ್ರಗಳಿಗೂ ತೆರಿಗೆ ರಿಯಾಯಿತಿ ಮಾಡುವ, ಸಬ್ಸಿಡಿ ನೀಡುವ ಮಾತಾಡುತ್ತಿದೆ. ಕಾಸರವಳ್ಳಿಯವರು ಇದನ್ನು ಆತುರದ ನಿರ್ಧಾರ ಎಂದಿದ್ದಾರೆ. ರೀಮೇಕ್ಗಳಿಗೂ ಈ ರೀತಿಯ ಸೌಲಭ್ಯ ವಿಸ್ತರಿಸುವ ಬದಲು, ಪರ್ಯಾಯ ಚಿತ್ರಗಳಿಗೆ ಬಿಡುಗಡೆಯ ಯೋಗ ಕಲ್ಪಿಸುವ ಅವಕಾಶ ಒದಗಿಸಲಿ. ಬರೀ ಕಮರ್ಷಿಯಲ್ ಚಿತ್ರಗಳ ಪ್ರತಿನಿಧಿಯಂತೆ ವರ್ತಿಸುವ ಫಿಲಂ ಚೇಂಬರ್ ಕೂಡಾ ಈ ಕಡೆ ಗಮನಹರಿಸಬೇಕು. ಈಗಿನ ಅಧ್ಯಕ್ಷರಂತೂ ಒಂದು ಘಟ್ಟದಲ್ಲಿ ಪರ್ಯಾಯ ಚಿತ್ರ ನಿರ್ಮಿಸಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡವರು. ಇವರೆಲ್ಲಾ ಸೇರಿ ಮತ್ತೆ ಸದಭಿರುಚಿಯ ಚಿತ್ರಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ನೋಡಿಕೊಳ್ಳಲಿ.





Very touchy to see Halemani once again in print. I recall a brief meeting with him in Gulbarga, short and sweet it was. Very considerative person, would hear one with opposite views with interest and accept them if properly presented.
really. he was a man of multiple view with a strict pro people commitment. he was there to discuss on anything. we miss him..
Idea of building a new theater for only classic films is an good thing but gov or film chamber persons should take some initiative