ನನ್ನ ಬದುಕಿನ ಚಿಲ್ಡ್ರನ್ ಆಫ್ ಹೆವೆನ್
ಪದವಿ ಓದುತ್ತಿದ್ದ ಕಾಲ. ಮನೆಯಲ್ಲಿ ವಿಪರೀತ ಬಡತನ. ಎಸ್ಎಸ್ಎಲ್ಸಿ ವರೆಗೆ ಆರಾಮವಾಗಿದ್ದ ನಾನು ಕೌಟುಂಬಿಕ ಕಾರಣಗಳಿಗಾಗಿ ಪಿಯುಸಿ ಹಾಗೂ ಸಮಯದಲ್ಲಿ ಬಡತನ ಎದುರಿಸಬೇಕಾಯಿತು. ಅಣ್ಣನಿಗೆ ತಿಂಗಳಿಗೆ ಎಂಟು ನೂರು ರೂಪಾಯಿ ಸಂಬಳ. ಐದು ನೂರು ರೂಪಾಯಿ ಮನೆ ಬಾಡಿಗೆ. ಪುಟ್ಟ ಶೀಟು ಮನೆಯಲ್ಲಿದ್ದ ಒಂದೇ ಬಲ್ಬಿಗೆ ತಿಂಗಳಿಗೆ ಐವತ್ತು ರೂಪಾಯಿ ಚರ್ಚ್ ಗೆ ಹೋಗುತ್ತಿದ್ದುದರಿಂದ ‘ದಶಮಾನ ಭಾಗ’ ಎಂದು ಹತ್ತರಲ್ಲಿ ಒಂದು ಭಾಗ ಅಂದರೆ ಎಂಬತ್ತು ರೂಪಾಯಿ ಕಾಣಿಕೆ ಹಾಕುತ್ತಿದ್ದೆವು. ಉಳಿಯುತ್ತಿದ್ದ ಹಣ ನೂರು ಎಪ್ಪತ್ತು ರೂಪಾಯಿ. ಸಂಬಳದ ದಿನದ ಅಕ್ಕಪಕ್ಕದ ಭಾನುವಾರ ಮಾತ್ರ ಚಿಕ್ಕನ್ ಮಾಡುತ್ತಿದ್ದೆವು. ಅವತ್ತು ಯಾರೂ ಜಪ್ಪಯ್ಯಾ ಅಂದರೂ ಹೊರಗೆ ಹೋಗುತ್ತಿರಲಿಲ್ಲ!
ಆ ದಟ್ಟ ಬಡತನ ನನ್ನನ್ನು ಆಳವಾಗಿ ಕಲಕಿತು. ಬಡತನವನ್ನು ಹೊಸದಾಗಿ ಕಾಣುತ್ತಿದ್ದರೂ ನಾನದಕ್ಕೆ ಹೊಂದಿಕೊಂಡೆ. ಅಲ್ಲದೆ ನನ್ನಂತೆಯೇ ಕೋಟ್ಯಾಂತರ ಜನರನ್ನು ಬೆಂಬಿಡದೆ ಕಾಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹವಣಿಸುತ್ತಿದ್ದೆ. ದಿನಕ್ಕೆ ಐದು ರೂಪಾಯಿ ಕೂಲಿಯಂತೆ ಪೇಪರ್ ಹಾಕುವ ಹುಡುಗನಾಗಿ ಕೆಲಸಕ್ಕೆ ಸೇರಿದೆ. ಅಲ್ಲಿಂದ ಸ್ವಲ್ಪ ಜಾಸ್ತಿ ಹಣ ಸಂಪಾದಿಸಲು ಬಿಸ್ಕತ್ತು ಪೊಟ್ಟಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮಾರಿದೆ. ನಂತರ ಫೋನು, ಸೋಲಾರ್ ಹೀಗೆ ಏನೇನೋ……
ಬಡತನದಿಂದ ವಿದ್ಯಾರ್ಥಿಗಳಿಗೆ ಮುಕ್ತಿ ಸಿಗುವಂತೆ ಮಾಡಬೇಕು ಎನ್ನುವ ಆಶಯದಿಂದ ನಾನು ವಿದ್ಯಾರ್ಥಿ ಚಳುವಳಿ ಸೇರಿ ಹೋರಾಟಗಾರನಾಗಿ ರೂಪುಗೊಳ್ಳುತ್ತಿದ್ದೆ. ತೀವ್ರವಾದ ಓದು, ಹೋದ ಕಾಲೇಜುಗಳಲ್ಲೆಲ್ಲಾ ನಾನು ಮಾಡುತ್ತಿದ್ದ ಕ್ರಾಂತಿಕಾರಿ ಭಾಷಣವನ್ನು ನನ್ನ ಉಪನ್ಯಾಸಕರೂ ಸೇರಿದಂತೆ ಎಲ್ಲರೂ ಗಮನಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಮಂಡ್ಯದ ಹೆಲ್ತ್ ಆಫೀಸಿನವರು ನಮ್ಮ ಕಾಲೇಜಿನಲ್ಲಿ ‘ಏಯ್ಡ್ಸ್’ ಕುರಿತು ಭಾಷಣ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು. ನಮ್ಮ ಕಾಲೇಜಿನ ಕೊಠಡಿಯೊಂದರಲ್ಲಿ ನಡೆಯುತ್ತಿದ್ದರೂ ನಮ್ಮ ಕಾಲೇಜಿನವರ್ಯಾರೂ ಅದರಲ್ಲಿ ಪಾಲ್ಗೊಂಡಿರಲಿಲ್ಲ. ಅಂತಹ ಆಸಕ್ತಿ ನಮ್ಮಲ್ಯಾರಿಗೂ ಇರಲಿಲ್ಲ. ನಾನು ಸಹ ಇತಿಹಾಸ ತರಗತಿಯಲ್ಲಿ ಗಂಭೀರವಾಗಿ ಕೂತು ಪಾಠ ಕೇಳುತ್ತಿದ್ದೆ.
ಇಂಗ್ಲಿಷ್ ಉಪನ್ಯಾಸಕರಾದ ಸುರೇಂದ್ರ ಕುಮಾರ್ರವರು ನಮ್ಮ ತರಗತಿ ಮಧ್ಯೆಯೇ ಅಲ್ಲಿಗೆ ಬಂದರು. ಭಾಷಣ ಸ್ಪರ್ಧೆಯ ವಿವರವನ್ನು ಹೇಳಿದರು. ಬಹುಶಃ ಅವರು ಎಲ್ಲಾ ತರಗತಿಗಳನ್ನೂ ಸುತ್ತಿ ಬಂದಿದ್ದರು. ಯಾರಾದರನ್ನೊಬ್ಬರನ್ನು ಕಳಿಸಬೇಕಲ್ಲಾ ಎಂಬಂತೆ ಸುತ್ತಲೂ ನೋಡಿದರು. ಬೆಂಚಿನ ತುದಿಯಲ್ಲಿ ಕೂತಿದ್ದ ನಾನು ಅವರ ಕಣ್ಣಿಗೆ ಬಿದ್ದೆ. ನೀನು ಆ್ಯಕ್ಡೀವ್ ಆಗಿದ್ದೀಯಾ ಭಾಷಣಾನೂ ಮಾಡ್ತಿಯಲ್ಲಾ ನೀನು ಭಾಗವಹಿಸು ಎಂದು ಸೂಚಿಸಿದರು. ತರಗತಿ ಮಧ್ಯದಲ್ಲಿ ಇದೊಂದು ಕೆಲಸ ಆಯಿತಲ್ಲಾ ಎನ್ನುತ್ತಾ ಅವರ ಮಾತನ್ನು ನಿರಾಕರಿಸಲಾಗದೆ ಎದ್ದು ಹಿಂದೆಯೇ ಹೊರಟೆ ಹೋಗುವಾಗ ನನ್ನ ಕೈಕಾಲು ಕೊಂಚ ನಡುಗಿತು. ಯಾಕೆಂದರೆ, ನಾನು ಅಲ್ಲಿಯವೆರೆಗೂ ಅಂತಹ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡೆಲಿಲ್ಲ! ಅಲ್ಲದೆ ಭಾಷಣದ ವಿಷಯದ ಬಗ್ಗೆ ನನಗೇನೇನೂ ಗೊತ್ತಿರಲಿಲ್ಲ, ನಮ್ಮ ಕಾಲೇಜು ಬಿಲ್ಡಿಂಗಿನ ಹಿಂಭಾಗದ ಕಾಂಪೌಂಡಿಗೆ ಹೊಂದಿಕೊಂಡಂತೆ ಸಾಲಾಗಿ ಕಟ್ಟಿದ ಕೊಠಡಿಗಳಲ್ಲಿ ಸ್ವಲ್ಪ ಸುಮಾರಾಗಿದ್ದ ಕೊಠಡಿಯಲ್ಲಿ ಸ್ಪರ್ಧೆ ನಡೆಯುತ್ತಿತ್ತು. ನನ್ನನ್ನು ಒಳಗೆ ಕೂರಿಸಿ, ಹೆಸರು ಬರೆಸಿ ನಮ್ಮ ಮೇಷ್ಟ್ರು ಹೊರಟುಹೋದರು.
ಬೋರ್ಡು ಕಡೆ ನೋಡಿದೊಡನೆಯೆ ದಿಗಿಲು ಹತ್ತಿಕೊಂಡಿತು. ಶುಭ್ರ ಯೂನಿಫಾಮ್ನಲ್ಲಿ ನಿಂತ ಹುಡುಗ ಗೋಡೆಗೆ ಚಾರ್ಟು ನೇತುಹಾಕಿದ್ದಾನೆ. ಮನುಷ್ಯನ ವಿವಿಧ ಅಂಗಗಳು, ಏಯ್ಡ್ಸ್ ಹರಡುವ ಬಗೆ, ಇತರ ವಿವರಗಳೆಲ್ಲವೂ ನನ್ನ ಉತ್ಸಾಹವನ್ನೇ ಕುಗ್ಗಿಸಿಬಿಟ್ಟಿತು. ಇತಿಹಾಸ ತರಗತಿಯಲ್ಲಿ ಕೂತ ನನಗೆ ಆ ಸ್ಪರ್ಧಾ ಕೊಠಡಿ ಯಾವುದೋ ಮೆಡಿಕಲ್ ಕಾಲೇಜಿನ ತರಗತಿಯಂತೆ ಕಂಡಿತು. ಅದರ ಬಳಿಕ ಇನ್ನೊಬ್ಬ ಅರ್ಧ ಕನ್ನಡ ಅರ್ಧ ಇಂಗ್ಲಿಷಿನಲ್ಲಿ ಮಾತುಶುರುಮಾಡಿದ ಈ ಪಂಟ್ರುಗಳ ಜತೆ ನಾನು ಗೆದ್ದಂಗೆ ಅಂದುಕೊಳ್ಳುತ್ತಾ ಹೊರಟು ಓಡಿಹೋಗೋಣ ಅನ್ನಿಸಿತು. ಆದರೂ ಬೆನ್ನುತಿರುಗಿಸಬಾರದೆಂಬ ದಿಟ್ಟತನದಿಂದ ಅಲ್ಲಿಯೇ ಕೂತೆ . ಆ ಕೊಠಡಿಯಲ್ಲಿ ಸುಮಾರು ಹದಿನೈದು ಜನರಿದ್ದರು. ಒಬ್ಬರಾದ ಮೇಲೆ ಒಬ್ಬರು ಮಾತಾಡತೊಡಗಿದರು. ಮಾತಾಡಿ ಮುಗಿಸಿದವರು ಅವನು/ಳು ನಮಗಿಂತ ಚೆನ್ನಾಗಿ ಮಾತಾಡಬಾರದೆಂದು ಬೇಡಿಕೊಳ್ಳುತ್ತಾ ಹೇಗೆ ಮಾತಾಡುತ್ತಿದ್ದಾರೆ ಎಂಬುದನ್ನು ಗ್ರಹಿಸುತ್ತಾ ಬಹುಮಾನ ಯಾರಿಗ ಬರಬಹುದೆಂಬ ಲೆಕ್ಕಾಚಾರದಲ್ಲಿ ತೊಡಗಿದ್ದರು. ಮಾತಾಡಬೇಕಾದವರು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾ ತಾವು ತಯಾರಿಸಿಕೊಂಡು ಬಂದಿದ್ದ ಚೀಟಿಯನ್ನು ಉರುಹೊಡೆಯುತ್ತಾ, ಮಾತಾಡುತ್ತಿದ್ದವರಿಗೆ ಎದಿರಾಗಿ ಪಾಯಿಂಟ್ ಹಾಕುತ್ತಾ ಕೂತಿದ್ದರು.

ನಾನೇನು ಮಾಡುವುದು? ನನಗೆ ವಿಷಯವೂ ಗೊತ್ತಿಲ್ಲ. ತಯಾರಿಯೂ ನಡೆಸಿಲ್ಲ. ಆಚೀಚೆ ನೋಡುತ್ತಾ ಗಮಾರನಂತೆ ಕೂತೆ. ನನಗೆ ಕೊಂಚ ದೂರದಲ್ಲಿ ಕೆಂಪು ಚೂಡೀದಾರ ತೊಟ್ಟಿದ್ದ ಹುಡುಗಿಯೊಬ್ಬಳು ಕೂತಿದ್ದಳು ನಾನು ಅಂಚಿಕೊಂಡು, ಪ್ರಯಾಸಪಟ್ಟು ಅವಳನ್ನು ಮಾತಾಡಿಸಿದೆ. ಅವಳು ಕೊಂಚ ನಗುಮುಖದಿಂದ ಕಾರ್ಯಕ್ರಮದ ವಿವರ ಹೇಳಿದಳು ಪ್ರತಿ ಸ್ಪರ್ಧೆಗೆ ನಾಲ್ಕು ಮತ್ತು ಒಂದು ಒಟ್ಟು ಐದು ನಿಮಿಷ, ಏಯ್ಡ್ಸ್ ಒಂದು ಮಾರಾಗಾಂತಿಕ ಕಾಯಿಲೆ ಅದನ್ನು ತಡೆಗಟ್ಟುವ ಬಗೆ ಎಂಬ ಟಾಪಿಕ್ ಹೀಗೆ ಏನೇನೋ ಆದರೆ ಅವೆಲ್ಲಕ್ಕಿಂತಲೂ ನನ್ನ ಮನಸ್ಸಿನಲ್ಲಿ ನಾಟಿದ ಅಂಶಃ ಮೊದಲ ಬಹುಮಾನ 300ರೂಪಾಯಿ ಎರಡನೇ ಬಹುಮಾನ 250ರೂಪಾಯಿ ಮೂರನೇ ಬಹುಮಾನ 200ರೂಪಾಯಿ! ನನ್ನ ಕಿವಿಯನ್ನು ನಾನೇ ನಂಬಲಾಗಲಿಲ್ಲ. ಖುಷಿಯಾಗಿ ಕುಣಿದುಬಿಡಬೇಕು ಅನ್ನಿಸಿತು. ಅವಳಿಗೆ ಥ್ಯಾಂಕ್ಸ್ ಹೇಳಿ ಕಣ್ಣು ಮುಚ್ಚಿ ಕುಳಿತುಬಿಟ್ಟೆ. ಕೊಠಡಿಯ ಸದ್ದು ಸಂಪೂರ್ಣವಾಗಿ ಹಾರಿಹೋಯಿತು. ನಮ್ಮ ಮನೆಯ ಪರಿಸ್ಥಿತಿ ಕಣ್ಣ ಮುಂದೆ ಹಾದುಹೋಯಿತು. ಮುನ್ನೂರು ರೂಪಾಯಿ ಸಿಕ್ಕರೆ ನಾವು ಏನೇನು ಮಾಡಬಹುದು ಎಂಬ ಯೋಚನೆ ಹತ್ತಿತು. ಮನಸ್ಸನ್ನು ಬಿಗಿಹಿಡಿದು ನನ್ನ ಓದನ್ನೆಲ್ಲಾ ಒಮ್ಮೆ ಪುನರ್ಮನನ ಮಡಿದೆ. ಏಯ್ಡ್ಸ್ ಕುರಿತು ನನಗೆ ಏನೇನು ಗೊತ್ತೋ ಅವನ್ನೆಲ್ಲಾ ಒಂದೆಡೆ ಒಟ್ಟು ಮಾಡಿ, ಹಿಂದೆ ಮುಂದೆ ಮಾಡಿ, ಸುಭಾಷಿತಗಳನ್ನು ಸೇರಿಸಿ ಒಂದು ಭಾಷಣ ತಯಾರು ಮಾಡಿಕೊಂಡೆ ಅಷ್ಟರಲ್ಲಿ ನನ್ನ ಹೆಸರು ಕರೆದರು. ಹೋಗಿ ನಿಂತವನ್ನೇ ನನಗನಿಸಿದ್ದಲ್ಲವನ್ನೂ ಹೇಳಿಬಿಟ್ಟೆ ದುರಂತ ಎಂದರೆ ಜೋರು ಚಪ್ಪಾಳೆಗಳು ಬಿದ್ದುಬಿಟ್ಟವು!
ಇಪ್ಪತ್ತು ನಿಮಿಷದ ಬಿಡುವು. ಜ್ಯೂರಿಗಳು ಮಾರ್ಕ್ಸ್ ಕೂಡಿ ಕಳೆದು. ಮಾಡಿ ವಿಜೇತರ ಪಟ್ಟಿಯೊಡನೆ ಬಂದರು. ನನಗೆ ಬಹುಮಾನ ಬರಲೇಬೇಕೆಂಬ ಆಸೆ. ಯಾಕೆಂದರೆ ಹಣ ಬರುತ್ತದಲ್ಲ! ಅವರು ಹೆಸರು ಅನೌನ್ಸ್ ಮಾಡಿದರು. ಮೂರನೆಯ ಬಹುಮಾನ … ( ಆ ಹುಡುಗನ ಹೆಸರು ನೆನಪಿಲ್ಲ) ನೀಟಾಗಿ ಯೂನಿಫಾರ್ಮ್ ಹಾಕಿ ಚಾರ್ಟ್ ಹಿಡಿದು ಮೆಡಿಕಲ್ ಕಾಲೇಜ್ ಪ್ರೊಫೆಸರನಂತೆ ಕಾಣುತ್ತಿದ್ದ ಅವನಿಗೇ ಮೂರನೆಯ ಬಹುಮಾನವಾದರೆ ನನ್ನಂತಹ ಮಕ್ಕಿಕಾ ಮಕ್ಕಿಗೆ ಬಹುಮಾನವೇ ಎಂದುಕೊಳ್ಳುತ್ತಾ ಬಹುಮಾನದ ಆಸೆ ಕೈ ಬಿಟ್ಟು ತಲೆ ಬಗ್ಗಿಸಿ ಕೂತೆ. ಎರಡನೆಯ ಬಹುಮಾನ ವಿನಯ್ ಕುಮಾರ್ ಎಂ.ಜಿ. ನನ್ನ ಕಿವಿಯನ್ನು ನನಗೇ ನಂಬಲಾಗುತ್ತಿಲ್ಲ ನನಗೆ ಬಹುಮಾನ? ಓ ಮೈ ಗಾಡ್ ! ಅಂದುಕೊಳ್ಳುತ್ತಾ ಬೇಗ ಹೋಗಿ ಬಹುಮಾನ ಈಸಿಕೊಂಡೆ. ಮೊದಲನೆಯ ಬಹುಮಾನ ಮಾನಸ ಎಂದು ಹೇಳಿದರು ಆ ಕೆಂಪು ಚೂಡಿದಾರದ ಹುಡುಗಿ ಹೋಗಿ ಬಹುಮಾನ ಇಸಕೊಂಡಳು ಖುಷಿ ತಡೆಯಲಾರದೆ ನಾನು ಆ ಜಾಗದಲ್ಲಿ ನಿಮಿಷವೂ ನಿಲ್ಲದೆ ಓಡಲು ಶುರುಮಾಡಿದೆ. ನಾನು ಓಡಿದ್ದು ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತದೆ. ಕಾಲೇಜಿನಿಂದ ನಮ್ಮ ಮನೆಗೆ ಒಂದು ಮೈಲಿಗೂ ಹೆಚ್ಚು ದೂರವಿದೆ ಒಂದು ಕ್ಷಣವಾದರೂ ನನಗೆ ಸುಸ್ತಾಗಲಿಲ್ಲ. ಎಲ್ಲಿಯೂ ನಿಲ್ಲಲಿಲ್ಲ. ಮನೆ ತಲುಪಿದವನೇ ಖುಷಿಯಲ್ಲಿ ನನಗೆ ಬಹುಮಾನ ಬಂದಿದ್ದನ್ನು ಕಿರುಚಿ ಹೇಳಿದೆ.
ಮನೆಯ ಮುಂಭಾಗದ ಪುಟ್ಟ ಕೈತೋಟದಲ್ಲಿರುವ ಚಪ್ಪಡಿ ಕಲ್ಲಿನ ಬಳಿ ಅಮ್ಮ ಬಟ್ಟೆ ಓಗೆಯುತ್ತಿದ್ದಳು. ಕೈ ಒರೆಸಿಕೊಂಡು ಖುಷಿಯಲ್ಲಿ ನನ್ನ ಬಳಿ ಬಂದಳು. ಅವತ್ತು ನಮ್ಮ ಮನೆಯಲ್ಲಿ ಕೊಳಿ ಸಾರು.
ಅಲ್ಲಿಂದಾಚೆಗೆ ನಾನು ಅನ್ಯಾಯವಾಗಿ ಭಾಷಣಕಾರನಾದೆ, ಚರ್ಚಾಪಟುವಾದೆ. ಕರ್ನಾಟಕದ ಯಾವ ಮೂಲೆಯಲ್ಲಿ ಸ್ಪರ್ಧೆ ನಡೆಯಲ್ಲಿ ನಮ್ಮ ಕಾಲೇಜಿನಿಂದ ನಾನೇ ಸ್ಪರ್ಧೆ ನಗದು ಬಹುಮಾನ ಇದ್ದ ಎಲ್ಲಾ ಕಡೆ ನಾನು ಏನಾದರೂ ಮಾಡಿ ಗೆಲ್ಲಲೇಬೇಕೆಂದು ಪಣ ತೊಡುತ್ತಿದ್ದೆ. ಸಾಮಾನ್ಯವಾಗಿ ಗೆಲ್ಲುತ್ತಲೂ ಇದ್ದೆ. ಈ ಬೆಳವಣಿಗೆ ನನ್ನಲ್ಲಿ ಅಧ್ಯಯನವನ್ನು ಹೆಚ್ಚಿಸುತ್ತಾ ಹೋಯಿತು. ಊರೂರು ತಿರುಗುತ್ತಿದ್ದರಿಂದ ಅನುಭವವೂ ದಟ್ಟವಾಗುತ್ತಾ ಹೋಯಿತು. ಪಿಯುಸಿಯಲ್ಲಿ ಆರಂಭವಾದ ಈ ಯಾನ ಪದವಿಯಲ್ಲಿಯೂ ಮುಂದುವರೆಯಿತು. ಅಲ್ಲಿನ ಅನುಭವ ಇನ್ನೂ ಭಿನ್ನವಾದದು, ಅಮೋಘವಾದುದು.
ಪದವಿ ಹಂತದಲ್ಲೂ ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ನಂತರ ದ್ವಿತೀಯ ವರುಷದಲ್ಲಿದ್ದಾಗ ಕನಕಪುರದ ರೂರಲ್ ಕಾಲೇಜಿನಲ್ಲಿ ನಡೆದ ಘಟನೆ ನನ್ನ ಜೀವಮಾನದ ಅಪೂರ್ವ ಘಟನೆಗಳಲ್ಲಿ ಒಂದು ಅದನ್ನು ಮರೆಯುವುದು ಸಾಧ್ಯವೇ ಇಲ್ಲ.
ಕನಕಪುರ ರೂರಲ್ ಕಾಲೇಜಿನಲ್ಲಿ ಕಾಲೇಜು ಸಂಸ್ಥಾಪಕ ಎಂ.ಕರಿಯಪ್ಪ ಸ್ಮಾರಕ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯನ್ನು ನಡೆಸುತ್ತಾರೆ. ಅದು ಚರ್ಚಾ ಸ್ಪರ್ಧೆಗಳ ನಡುವೆ ತುಂಬಾ ಪ್ರಸಿದ್ಧವಾದದು. ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳಾಗಿ ನಾನು ಗೆಳತಿ ಸೀತಾ ನಾಯರ್ ಹಾಗೂ ದೃಶ್ಯ ಪ್ರದೀಪ್ ಮೂವರೂ ಹೋದೆವು. ಅದೊಂದು ಸಂಭ್ರಮದ ವಾತಾವರಣ ರಾಜ್ಯದ ದಕ್ಷಿಣ ಭಾಗದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಸ್ಪರ್ಧಿಗಳು ಬಂದಿದ್ದರು. ಸ್ಪರ್ಧೆ ಆರಂಭವಾಯಿತು. ತೀವ್ರ ತಯಾರಿಯಲ್ಲಿ ಬಂದಿದ್ದ ಸ್ಪರ್ಧಿಗಳು ತಮ್ಮ ವಾಗ್ಝರಿ ಹರಿಸಿದರು ಅಷ್ಟೋತ್ತಿಗಾಗಲೇ ಮಾರ್ಕ್ಸ್ ವಾದಿಯಾಗಿದ್ದ ನಾನು ಪ್ರಖರವಾದ ಬಾಣಗಳನ್ನು ಹರಿಬಿಟ್ಟೆ. ನೂರರಷ್ಟು ಸ್ಪರ್ಧಿಗಳಿದ್ದುದರಿಂದ ಬಹುಮಾನ ವಿತರಣೆಗಾಗಿ ಸಂಜೆವೆರೆಗೂ ಕಾಯಬೇಕಿತ್ತು. ಇಡೀ ದಿನ ಕನಕಪುರ ಸುತ್ತಾಡುತ್ತಾ ಭಾಷಣ ಕೇಳಿ, ಹರಟೆ ಹೊಡೆಯುತ್ತಾ, ಹೊಸ ಗೆಳೆಯರನ್ನು ಪರಿಚಯಿಸಿಕೊಳ್ಳುತ್ತಾ ಕಾಲ ಕಳೆದೆವು. ಸಂಜೆಯಾಯಿತು. ಬಹುಮಾನ ವಿತರಣೆಯ ಸಮಯ ಹತ್ತಿರ ಬಂತು. ಚರ್ಚಾ ಸ್ಪರ್ಧೆಯಲ್ಲಿ ಪರಿಗಣಿಸುವ ಮಾನದಂಡಗಳನ್ನು ಕುರಿತು ಅಧ್ಯಯನ ಮಾಡಿ ಅಷ್ಟಕ್ಕೆ ಸೀಮಿತಗೊಳಿಸಿ ಪೀಠಿಕೆ, ವಿಷಯಮಂಡನೆ ಉಪಸಂಹಾರಗಳನ್ನು ದಾಟಿ ಯಾವತ್ತೂ ಭಿನ್ನವಾಗಿಯೇ ಯೋಚಿಸುತ್ತಿದ್ದ, ವಿಷಯ ಮಂಡಿಸುತ್ತಿದ್ದ ನಾನು ನನ್ನ ಸ್ವಂತ ಕ್ರಮದಿಂದಾಗಿ ಹಲವು ಬಾರಿ ಗೆಲುವುಗಳನ್ನು ಮೈಗಂಟಿಸಿಕೊಳ್ಳದ ನಾನು ಅಷ್ಟೇನೂ ಎಕ್ಸೈಟ್ ಆಗಿರಲಿಲ್ಲ.
ಸಭಿಕರ ನಡುವೆ ಯಾವುದೋ ಸಾಲಿನಲ್ಲಿ ಎಲ್ಲರೂ ಸಾಲಾಗಿ ಕೂತೆವು. ಒಂದಿಬ್ಬರು ಗುಮಾಸ್ತರು ಟ್ರಾಲಿ ಸೂಟ್ ಕೇಸ್, ವಾಟರ್ ಫಿಲ್ಟರ್, ಮಿಕ್ಸಿ, ಐಯನ್ ಎಲ್ಲವನ್ನೂ ತಂದಿಟ್ಟರು. ನಾನು ಸ್ವಲ್ಪ ಗೊಂದಲಗೊಂಡೆ ಆದರೆ ಕ್ಷಣಮಾತ್ರದಲ್ಲಿ ನನ್ನ ತಲೆಗೆ ಹೊಳೆಯಿತು. ಆ ವಸ್ತುಗಳು ಬಹುಮಾನವಾಗಿ ಕೊಡಲಿಕ್ಕೆ ತಂದವು. ಈಗ ನಾನು ನಿಜಕ್ಕೂ ಎಕ್ಸೈಟ್ ಆದೆ. ನನ್ನ ಕಣ್ಣುಗಳು ವೇದಿಕೆ ಮೇಲಿದ್ದ ಕೈಲಾಷ್ ಮಿಕ್ಸಿಯನ್ನೇ ನೋಡುತ್ತಿದ್ದವು. ನಾನು ಅದನು ದೃಷ್ಟಿಯಿಟ್ಟು ನೋಡಿದೆ ಕ್ಷಣದಲ್ಲಿ ಸಭಿಕರು, ಶಾಮಿಯಾನ, ವೇದಿಕೆ, ಅತಿಥಿಗಳು ಎಲ್ಲರೂ ಮರೆಯಾಗಿ ಆ ಮಿಕ್ಸಿ ಮಾತ್ರ ನನಗೆ ಕಾಣ ತೊಡಗಿತು. ಮಿಕ್ಸಿಯ ಬಾಕ್ಸಿನಿಂದ ನನ್ನ ಮನೆಯ ಕಥೆ ಬಿಚ್ಚಿಕೊಂಡಿತು.
ನಾನಾಗಲೇ ನಿಮಗೆ ಹೇಳಿದ್ದೆನಲ್ಲ ನಾವು ತುಂಬಾ ಬಡವರಾಗಿದ್ವಿ. ಮನೆಗೆಂದು ಉಳಿಯುತ್ತಿದ ನೂರು ಎಂಬತ್ತು ರೂಪಾಯಿಯಲ್ಲಿ ಏನೇನೂ ಬರುತ್ತಿರಲಿಲ್ಲ. ನನ್ನ ಅತ್ತೆ ಏನೇನೋ ಕಷ್ಟಪಟ್ಟು ಅಕ್ಕಿ, ಅಷ್ಟಿಷ್ಟು ಸಾಮಾನು ತಂದು ಕೊಡುತ್ತಿದ್ದರು. ಕೆಲವೊಮ್ಮೆ ಸಾಂಬಾರು ಮಾಡಲು ಹಣ ಇರುತ್ತಿರಲಿಲ್ಲ. ಆಗ ನಮ್ಮಮ್ಮ ಪ್ರತಿ ದಿನ ಟೊಮಾಟೋ ಗೊಜ್ಜು ಮಾಡುತ್ತಿದ್ದರು. ಅದು ಸಾಕಾಗಿ ಬಾಯಿರುಚಿ ಕೆಟ್ಟ ಹೋದರೆ ತೆಂಗಿನ ಕಾಯಿ ಚಟ್ನಿ ಪರ್ವ ಆರಂಭವಾಗುತ್ತಿತ್ತು. ನಮ್ಮಮ್ಮ ಒರಳಿನಲ್ಲಿ ಕಾಯಿ ಆಡಿಸುತ್ತಿದ್ದರು. ನಮ್ಮಣ್ಣನ ಸಂಬಳ ಹೆಚ್ಚಾದಂತೆ ನಿತ್ಯ ಸಾಂಬಾರು ಮಾಡುವ ಕೆಲಸಕ್ಕೆ ಸಣ್ಣ ಚಾಲನೆ ಸಿಕ್ಕಿತು. ಅಪ್ಪ ಸತ್ತ ಮೇಲೆ ಗಾರೆ ಕೆಲಸ ಮಾಡಿ ಬಸವಳಿದಿದ್ದ ಜೀವ ನನ್ನ ಅಮ್ಮ. ತೆಂಗಿನ ಕಾಯಿ ಆಡಿಸಿ ಸುಸ್ತಾಗಿ ಹೋದಳು. ಕಾಯಿ ಆಡಿಸುವ ಕೆಲಸ ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿದಾಗ ಅವಳು ಒಂದು ಮಿಕ್ಸಿ ಕೊಳ್ಳುವ ತೀರ್ಮಾನಕ್ಕೆ ಬಂದಳು.

ನಾವಾಗ ಚರ್ಚ್ ಗೆ ಹೋಗುತ್ತಿದ್ದೆವು. ಅಲ್ಲಿಗೆ ಬರುತ್ತಿದ್ದ ಬಿ.ಎಸ್.ಎನ್.ಎಲ್. ಎಂಪ್ಲಾಯಿ ಜಯಕುಮಾರ್ ಮತ್ತವರ ಹೆಂಡತಿ ಮಸರ್ಗೆ ಆ ವಿಶಯ ಹೇಗೋ ಗೊತ್ತಾಯಿತು. ಅವರು ಅದಾಗ ತಾನೇ ಒಂದು ಹೊಸ ಮಿಕ್ಸಿ ಕೊಂಡಿದ್ದರು. ಹಳೆಯ ಮಿಕ್ಸಿಯನ್ನು ರಿಪೇರಿಯವನ ಬಳಿಯೇ ಬಿಟ್ಟುಬಿಟ್ಟಿದ್ದರು. ನಮಗವರ ಅಗತ್ಯವಿದೆ ಎಂದು ಗೊತ್ತಾಗಿದ್ದರಿಂದ ಆ ರಿಪೇರಿಯವನ ಬಳಿ ಮಿಕ್ಸಿಯನ್ನು ಸರಿಮಾಡಿಸಿ ನಮಗೆ ತಂದುಕೊಂಡರು ದೇವರು ಆಕಾಶದಿಂದ ‘ಮನ್ನಾ’ ಸುರಿಸಿದಷ್ಟೇ ಆನಂದದಿಂದ ನಾವು ಆ ಮಿಕ್ಸಿಯನ್ನು ಇಸಕೊಂಡೆವು ನಮ್ಮಮ್ಮ ದೇವರಿಗೆ ನೂರಾರು ಸಲ ಕೃತಜ್ಞತೆ ಹೇಳಿದಳು.
ಶುರುವಾಯಿತು ಮಿಕ್ಸಿಯಲ್ಲಿ ಕಾಯಿ ಸಾಂಬಾರು ಮಾಡುವ ಕೆಲಸ. ಹತ್ತುದಿನಗಳವರೆಗೆ ನಮ್ಮ ನಾಲಿಗೆಗೆ ಉತ್ಸವ ಹಾಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಿಕ್ಸಿ ಹೂತ್ತನೆ ಕೆಟ್ಟುಹೋಯಿತು. ಅದನ್ನು ಅಂಗಡಿಗೆ ತೆಗೆದುಕೊಂಡು ಹೋದೆವು. ಅದರ ಒಳಭಾಗ ಸಂಪೂರ್ಣ ಸುಟ್ಟುಹೋಗಿತ್ತು. ಆ ಹಳೆಯ ಮಿಕ್ಸಿ ಇಷ್ಟು ವರುಷ ಓಡಿದ್ದೇ ಸಾಧನೆ ( ನಮ್ಮನೆಯಲ್ಲಿ ಹತ್ತು ದಿನ ಅಷ್ಟೆ!) ಅದನ್ನು ಬಿಸಾಡಿ ಹೊಸದು ಕೊಂಡುಕೊಳ್ಳುವುದು ವಾಸಿ ಎಂದು ಅಂಗಡಿಯವನು ಉಚಿತ ಸಲಹೆ. ಅದನ್ನು ಸರಿಮಾಡೆಂದು ದೇವರನ್ನು ಪ್ರಾರ್ಥಿಸಿದರೂ ಏನೂ ಪ್ರಯೋಜನವಾಗಲಿಲ್ಲ.
ಮತ್ತೆ ನಮ್ಮ ಮನೆಯಲ್ಲಿ ಕಾಯಿ ಮಸಾಲೆಯಿಲ್ಲದ ಸಾಂಬಾರು ಕತೆ ಆರಂಭವಾಯಿತು. ರುಚಿ ಇಲ್ಲದೆ ಎಲ್ಲರೂ ಬಳಲಿದೆವು ನಮ್ಮಮ್ಮ ಒಂದೈದಾರು ದಿನ ಆಡಿಸಿದರು. ಎದೆ ನೋವು ಬಂತು. ಸುಮ್ಮನಾದರು. ಏನಾದರೂ ಮಾಡಿ ಹೊಸ ಮಿಕ್ಸಿ ತರುವ ಕೆಲಸ ಆರಂಭವಾಯಿತು ನಮ್ಮಮ್ಮ ಹಣ ಕೂಡಿಸಲು ಶುರುಮಾಡಿದಳು. ಸಂಬಳದ ಉಳಿಕೆ. ಬೇರೆಲ್ಲಾ ಮೂಲಗಳಿಂದ ಹಣ ಒಟ್ಟು ಮಾಡಿದರೂ ಐದುನೂರೂ ರೂಪಾಯಿ ದಾಟಲಿಲ್ಲ. ಮಿಕ್ಸಿ ಖರೀದಿಸಲು ಆವತ್ತಿಗೆ ಏನೆಂದರೂ ಸಾವಿರ ರೂಪಾಯಿಯಂತೂ ಅಗತ್ಯ ಅದೇ ದಿನ ನಾನು ಕನಕಪುರಕ್ಕೆ ಹೊರಟು ಬಂದಿದ್ದೆ.
ಈ ಫ್ಯಾಷ್ ಬ್ಯಾಕ್ ಮುಗಿದ ಮೇಲೆ ನನಗೆ ಮಿಕ್ಸಿ ಸ್ಪಷ್ಟವಾಗಿ ಕಾಣತೊಡಗಿತು. ವೇದಿಕೆ ಮೇಲೆ ಬಹುಮಾನ ವಿತರಣೆ ಆರಂಭವಾಯಿತು ಸ್ಪರ್ಧಿಗಳೆಲ್ಲರೂ ಕಾತರರಾಗಿ ಕೂತಿದ್ದರು. ನನ್ನ ಕಣ್ಣು ಮಿಕ್ಸಿಯ ಮೇಲೇ ನೆಟ್ಟಿತ್ತು. ಆ ವೇದಿಕೆಯಲ್ಲಿದ್ದ ಇತರ ವಸ್ತುಗಳನ್ನು ಗಮನಿಸಿದರೆ ಮಿಕ್ಸಿ ಮೊದಲನೇ ಬಹುಮಾನ ಖಂಡಿತಾ ಅಲ್ಲವೇ ಅಲ್ಲ ಎಂಬುದು ಖಚಿತವಿತ್ತು. ಲೆಕ್ಕಾಚಾರ ಮಾಡಿದರೆ ಕನಿಷ್ಟ ಐದು ಸಾವಿರ ರೂಪಾಯಿ ಬೆಲೆ ಬಾಳುವ ಟ್ರಾಲಿ ಸೂಟ್ ಕೇಸ್ ನಿಜವಾಗಿಯೂ ಮೊದಲನೆ ಬಹುಮಾನವಾಗಿ ನೀಡುವುದಕ್ಕೆ ಯೋಗ್ಯವಾದುದೇ. ಆದರೆ ಬಟ್ಟೆಗಳೇ ಇಲ್ಲದೆ ನಾನು ಏರ್ ಪೊರ್ಟ್ನಲ್ಲಿ ತಳ್ಳುವ ವ್ಹೀಲ್ ಸೂಟ್ಕೇಸ್ ಇಟ್ಟುಕೊಂಡು ಏನು ಮಾಡಲಿ?! ನನಗೆ ಬೇಕಾಗಿದ್ದು ಮಿಕ್ಸಿ. ಅದು ಬಂದರೆ ನಮ್ಮ ಮನೆಯ ಕಷ್ಟ ನೀಗುತ್ತದೆ. ರುಚಿಯಾದ ಊಟ ಮಾಡಬಹುದು. ಅಮ್ಮನ ಎದೆ ನೋವು ತಪ್ಪುತ್ತದೆ. ಎಲ್ಲರೂ ಖುಷಿಯಾಗಿರಬಹುದು.
ಹತ್ತನೇ ಸ್ಥಾನದಿಂದ ವಿಜೇತರ ಪಟ್ಟಿಯನ್ನು ಓದಲಾರಂಭಿಸಿದರು. ಒಬ್ಬೊಬ್ಬರು ಹೋಗುವಾಗಲೂ ಚಪ್ಪಾಳೆ ಸುರಿಮಳೆ ಬಿದ್ದವು. ನನ್ನ ಮನಸ್ಸಲ್ಲಿ ಮಾತ್ರ ಆತಂಕ, ಆ ಮಿಕ್ಸಿಯನ್ನು ಯಾರಿಗಾದರೂ ಕೊಟ್ಟುಬಿಟ್ಟರೆಂಬ ಭಯ. ಪ್ರತಿ ವಿಜೇತರಿಗೂ ಒಂದೊಂದು ವಸ್ತುವನ್ನು ಎತ್ತಿಕೊಟ್ಟರು. ಗೆಳತಿ ದೃಶ್ಯಳಿಗೆ ಐಯನ್ ಬಾಕ್ಸ್ ಸಿಕ್ಕಿತು. ನಂತರ ಘೋಷಣೆಯಾದದ್ದು ಐದನೆಯ ಬಹುಮಾನ, ಆ ಹುಡುಗನ ವೇದಿಕೆ ಮೇಲೇರಿ ಹೋದ ಚಪ್ಪಾಳೆ ಏರುತ್ತಿತ್ತು. ಪ್ರಶಸ್ತಿ ವಿತರಿಸುವವರು ನಗುತ್ತಿದ್ದರು, ಆ ಹುಡುಗನ ಮುಖ ಖುಷಿಯಿಂದ ಬೀಗುತ್ತಿತ್ತು ವಸ್ತುಗಳನ್ನು ಎತ್ತಿಕೊಡುವವರು ಮಿಕ್ಸಿಯನ್ನೆತ್ತಿ ಬಹುಮಾನ ನೀಡುಗರ ಕೈಗಿಟ್ಟರು. ಒಂದೇ ಏಟಿಗೆ ನನ್ನ ಕನಸೆಲ್ಲಾ ನುಚ್ಚು ನೂರಾಯಿತು. ಕಣ್ಣ ಕಟ್ಟೆ ಒಡೆದುಹೋಯಿತು. ನನ್ನ ಆಸೆ ಗಾಳಿಗೆ ತೂರಿ ಹೋಗಿದ್ದರಿಂದ ಒಮ್ಮಗೆ ಆಲೋಚನೆ ಶೂನ್ಯವಾಗಿಹೋಯಿತು. ಬಹುಮಾನ ನೀಡುಗರು ಮಿಕ್ಸಿಯನ್ನು ಇನ್ನೇನು ಕೈಗಿಡಬೇಕೆನ್ನುವಷ್ಟರಲ್ಲಿ ಹಿಂದೆ ನಿಂತಿದ್ದ ಸ್ಪರ್ಧೆಯ ಸಂಚಾಲಕರು ಐದನೆಯ ಬಹುಮಾನಕ್ಕೆ ಮಿಕ್ಸಿಯಲ್ಲ ವಾಟರ್ ಫಿಲ್ಟರ್ ಎಂದು ಹೇಳಿ ಅದನ್ನು ಕೇಳಗಿಳಿಸಿ ವಾಟರ್ ಫಿಲ್ಟರ್ ನೀಡಿದರು. ತಲೆಬಗ್ಗಿಸಿದ್ದ ನಾನು ಕಣ್ಣೆತ್ತಿ ವೇದಿಕೆ ನೋಡಿದೆ ನೀರು ತುಂಬಿದ ಕಣ್ಣಳಿಂದ ದೃಶ್ಯ ಅಸ್ಪಷ್ಟವಾಗಿ ಕಾಣುತ್ತಿತ್ತು. ಮಿಕ್ಸಿ ಕೆಳಗಿಟ್ಟಿದ್ದೆ ಕಣ್ಣೀರನ್ನೊರೆಸಿ ದೃಶ್ಯ ಸರಿ ಮಾಡಿದೆ.
ಎದೆ ಹಿಂದಿಗಿಂತಲೂ ಹೆಚ್ಚು ಒಡಕೊಳ್ಳಲು ಶುರುವಾಯ್ತು ಉಳಿದಿರುವುದು ನಾಲ್ಕೇ ಬಹುಮಾನ ಅಕಸ್ಮಾತ್ ಬಹುಮಾನ ಬಂದಿಲ್ಲವೇನೋ? ಮಿಕ್ಸಿ ಎಷ್ಟನೇ ಬಹುಮಾನ ಇರಬಹುದು ? ನನಗೆ ಬಹುಮಾನ ಬಂದರು ಮಿಕ್ಸಿ ಬರದಿದ್ದರೆ? ಹೀಗೆ ಏನೇನೋ ಯೋಚನೆ ತಲೆಯೊಳಗೆ ಗಿರಕಿ ಹೊಡೆಯಲು ಶುರುವಾಯ್ತು. ಸ್ಟೆಡಿಯಾಗಿ ಕೂತೆ ಮೈಕಿನಲ್ಲಿ ಹೇಳಿದರು ನಾಲ್ಕನೆಯ ಬಹುಮಾನ ವಿನಯ್ ಕುಮಾರ್ ಎಂ.ಜಿ ಪಿ.ಇ.ಎಸ್ ಕಾಲೇಜು ಮಂಡ್ಯ ಮಾಮೂಲು ಚಪ್ಪಾಳೆಯೊಡನೆ ನಾನು ವೇದಿಕೆಗೆ ಹೋದೆ. ಸುತ್ತಲಿದ್ದ ಎಲ್ಲವೂ ನನ್ನ ಪ್ರಜ್ಞೆಯಿಂದ ಹಾರಿಹೋಗಿವೆ ಅಲ್ಲಿರುವುದು ನಾನು ಮತ್ತು ನನ್ನ ಮಿಕ್ಸಿ ವೇದಿಕೆಯ ಒಂದೊಂದು ಮೆಟ್ಟಿಲು ಹತ್ತುವಾಗಲೂ ನನಗೆ ಮಿಕ್ಸಿ ಹತ್ತಿರಾಗುತ್ತಿದೆ. ಅಲ್ಲಿ ನಾಲ್ಜು ವಸ್ತುಗಳಿವೆ. ಮಿಕ್ಸಿ ಕೊಡದಿರುವುದೂ ಸಾಧ್ಯವಿದೆ ಮಿಕ್ಸಿ…. ಮಿಕ್ಸಿ… ಎಂದು ಎದೆಯೊಳಗೆ ಅಂದುಕೊಳ್ಳುತ್ತಲೇ ಹತ್ತಿರ ಹೋದೆ ಪ್ರಶಸ್ತಿ ಪತ್ರ ಕೈಗೆ ಬಂತು. ಪಕ್ಕದಲ್ಲಿ ನಿಂತವರು ಮಿಕ್ಸಿಯನ್ನೆತ್ತಿ ನನ್ನ ಕೈಗಿತ್ತರು. ನಾನು ಹಾಗೂ ಮಿಕ್ಸಿ ಎರಡು ಧೃವಗಳು. ಈಗ ಧೃವಗಳು ಒಂದಾಗಿವೆ. ಇದಕ್ಕಿಂತ ಮತ್ಯಾವ ಸಂತೋಷವಿದೆ! ಇಡೀ ಜಗತ್ತೇ ಈಗ ನನ್ನ ಕೈಲಿದೆ! ನನ್ನ ಕಣ್ಣಾಲಿಗಳು ಒದ್ದೆಯಾದವು. ಬಹುಮಾನ ನೀಡಿದವರಿಗೆ ಥ್ಯಾಂಕ್ಸ್ ಹೇಳಿದೆನೋ ಕೈ ಕುಲುಕಿದೆನೋ ಗೊತ್ತಿಲ್ಲ. ಕೈಲಿದ್ದ ನನ್ನದನ್ನು ಗಟ್ಟಿಯಾಗಿ ತದ್ದಿಹಿಡಿದು ನನ್ನ ಸೀಟಿನಲ್ಲಿ ಬಂದು ಕೂತು ತಲೆ ಬಗ್ಗಿಸಿಕೊಂಡೆ.
ದಾರಿಯಲ್ಲಿ ವಾಪಸ್ಸು ಬರುವಾಗ ನಡೆದಿದ್ದೆಲ್ಲವನ್ನೂ ಗೆಳತಿ ಸೀತಾಳಿಗೆ ಹೇಳಿದೆ ಅವಳು ಮಾತಾಡದೇ ನನ್ನತ್ತ ನೋಡಿದಳು. ಆ ನೋಟದಲ್ಲಿ ಎಲ್ಲವೂ ಇತ್ತು. ಚನ್ನಪಟ್ಟಣದಲ್ಲಿರುವ ಅವರ ಮನೆಗೆ ಹೋದೆವು. ನಾನು ರೂಮಿನ ಕದ ಹಾಕಿ ಹಾಸಿಗೆ ಮೇಲೆ ಬಿದ್ದೆ. ಲೈಟು ಆರಿಸಲಿಲ್ಲ ಮಿಕ್ಸಿಯನ್ನೇ ನೋಡುತ್ತಾ ಇದ್ದೆ. ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ.
ಮಾರನೆಯ ದಿನ ಬೇಗ ಎದ್ದು, ರೆಡಿಯಾಗಿ , ಬಸ್ಸು ಹಿಡಿದು ಊರಿಗೆ ಹೊರಟೆ ಮನೆ ತಲುಪಿದಾಗ ತಿಂಡಿ ತಿನ್ನಲು ಎಲ್ಲರೂ ನೆಲದ ಮೇಲೆ ಕೂತಿದ್ದರು. ಅಮ್ಮ ಮಿಕ್ಸಿಯ ಬಗ್ಗೆ ಮಾತಾಡುತ್ತಿದ್ದರು. ಸಾಲ ಮಾಡಿಯಾದರೂ ತರಬೇಕೆಂದು ತಮ್ಮವಾದ ಮಂಡಿಸುತ್ತಿದ್ದ. ಚಿಕನ್ ಸಾಂಬಾರಿಗೆ ಕಾಯಿ ಆಡಿಸಿ ಹಾಕಿದರೆ ಅದರ ಸೋಗಸೇ ಬೇರೆ ಎಂದು ರಾತ್ರಿ ಸಾಂಬಾರನ್ನು ಇಡ್ಲಿಗೆ ನೆಂಚಿಕೊಳ್ಳುತ್ತಿದ್ದ ಅಣ್ಣ ಹೇಳಿದ. ನಾನು ಅಷ್ಟರಲ್ಲಿ ಅಲ್ಲಿ ಹೋಗಿ ನಿಂತೆ. ಎಲ್ಲರೂ ನನ್ನ ಕಡೆ ನೋಡಿದರು. ನಾನು ನಮಗೆ ತೀರಾ ಅವಶ್ಯಕವಾದೊಂದು ವಸ್ತು ತಂದಿದ್ದೇನೆ. ಯಾವುದು ಹೇಳಿ? ಎಂದು ಕ್ವಿಜ್ ನಡೆಸಲು ಮುಂದಾದೆ. ಅವರು ಮುಖ ನೋಡಿಕೊಂಡು ಕೋರಸ್ ನಲ್ಲಿ ಮಿಕ್ಸಿ! ಅಂದರು ಅದಕ್ಕಿಂತಲೂ ತೀರಾ ಅವಶ್ಯಕವಾದದು ಆ ಸಮಯದಲ್ಲಿ ಯಾವುದೂ ಇರಲಿಲ್ಲ. ನಾನು ಹೌದೆಂಬಂತೆ ತಲೆಯಾಡಿಸಿ ಹೊಸ್ತಿಲಾಚೆ ಇಟ್ಟುಬಂದಿದ್ದ ಮಿಕ್ಸಿ ಬಾಕ್ಸನ್ನು ಹೊತ್ತು ತಂದೆ ನಮ್ಮಮ್ಮನಿಗೆ ಹೃದಯ ಉಕ್ಕಿ ಬಂತು. ಎಲ್ಲರ ಕಣ್ಣಲ್ಲೂ ನೀರು ನಮ್ಮೆಲ್ಲರ ಕನಸು ನನಸಾಗಿತ್ತು.
ಅವತ್ತು ರಾತ್ರಿ ನಮ್ಮ ಮನೆಯಲ್ಲಿ ಕೋಳಿ ಸಾರು…





ಏನ್ ಹೇಳ್ಬೇಕೊ ಗೊತ್ತಗ್ತಿಲ್ಲ ,ಬಡತನದ ಕಸ್ಟ ಅನುಭವಿಸಿದರಿಗೆ ಗೊತ್ತು ,ನಿಮ್ಮ ಲೇಕನ ಓದುತ್ತ ಕಣ್ಣೆಲ್ಲ ಮಂಜಾಯಿತು.
ಆದರೆ ಕಸ್ಟಪಟ್ಟು ದುಡಿಯುವ ಬಡವರಿಗೆ ದೇವರು ಯಾವತ್ತು ಮೋಸ ಮಡಲ್ಲ.
Such a disturbing story to read itself. And you have lived it and moved on successfully. Hats-off to you Vinay.
nimma horatada nenapugalannu baribeakalva comread……………………….
baritiri anno aashayavnnu hottiddene bariri
—————————
from –
k.sureshchawan. reporter at vijayakarnataka peper hospet.
I have been bowled over by your article Vinay. It reminded me of my childhood days.
it’s nice writeup
ನವೀನ್, ನಿನ್ನ ಅನುಭವ ಕಥನ ಓದಿದೆ.
ಅದೇ ಥೇಟ್ ನಿನ್ನ ತರಹವೇ ನನ್ನ ಅನುಭವಗಳು ಕೂಡ. ಬಡತನ ಉಂಡುಟ್ಟು ಬೆಳೆದ ನನ್ನ ಮತ್ತು ನಿನ್ನಂತವ ಅದೆಷ್ಟೋ ಗೆಳೆಯರ ಅನುಭಗಳೇ ಹೀಗೆ.. ಎಷ್ಟು ಹೇಳಿದರೂ ಮುಗಿಯಲಾರದಂತದ್ದು..
ನಿನ್ನ ಅನುಭವ ಓದುತ್ತಿದ್ದರೆ ನನಗೆ, ನಾನು ಪಿಯುಸಿ ಓದುವಾಗ ಗಜೇಂದ್ರಗಡದ ವಾಡೆವೊಂದರಲ್ಲಿ ರೂಮು ಮಾಡಿಕೊಂಡು, ತಂಗಳು ರೊಟ್ಟಿ ತಿನ್ನುತ್ತ ಕಾಲೇಜು ಓದಿದ ದಿನಗಳು ನೆನಪಾದವು. ಭಾಷಣ, ಪ್ರಬಂಧ, ಚರ್ಚೆ ಸ್ಪರ್ಧೆಗಳಲ್ಲಿ ನೀನು ಎದುರಿಸಿದ ತವಕ ತಲ್ಲಣಗಳನ್ನು ನಾನೂ ಎದುರಿಸಿದ್ದೇನೆ. ಇರಲಿ ಅವನ್ನೆಲ್ಲಾ ಹೇಳುವ ಅವಕಾಶದ ದಿನಗಳಿಗೆ ಕಾಯುತ್ತಿದ್ದೇನೆ. ಯಾಕೋ ಕೆಲ ಸಾಲುಗಳನ್ನು ಎರಡೆರಡು ಸಾರಿ ಓದಿದೆ. ಅದು ಆ ಕಾರಣಕ್ಕಾಗಿ, ಆ ಬದುಕನ್ನು ಅನುಭವಿಸಿದ ಕಾರಣಕ್ಕಾಗಿ ಅಲ್ಲವೇ ಗೆಳೆಯಾ..
ಬೆಂಗಳೂರಿನ ಟೌನ್ ಹಾಲ್ನಲ್ಲಿ ಮತ್ತು ಹಾಸನದಲ್ಲಿ ನಡೆದ ಶಿಬಿರವೊಂದರಲ್ಲಿ ಇಬ್ಬರೂ ಅದೆಷ್ಟೋ ಹೊತ್ತು ಕೂಡಿ ಮಾತಾಡಿದ್ದನ್ನು ನೆನಪಿಸಿಕೋ..
ನೆನಪಾದವಾ ಆ ದಿನಗಳು.. ಅದೇ ನಾನು “ಕಣಕಣದೇ ಶಾರದೇ..” ಹಾಡಿದೆ. ನೀನು ಸಿಕ್ಕಾಪಟ್ಟೆ ನಕ್ಕುಬಿಟ್ಟೆ.. ಜತೆಗೆ ಮಮತ್ ಕೂಡ ನಕ್ಕರು..
ನಿನ್ನ ಅನುಭವ ಕಥನ ನೀಡುತ್ತಿರುವ ಅವಧಿಗೆ ವಂದನೆ.
-ಗವಿಸಿದ್ಧ ಹೊಸಮನಿ
ಗೆಳೆಯ ಈ ನಿನ್ನ ಕೋಳಿ ಸಾರು(ಕಥೆ) ಸ್ವಲ್ಪ ಖಾರವಾದರು ತುಂಬ ರುಚಿಯಾಗಿದೆ…
ವಿನಯ್ ಬರಹ ಬಹಳ ಆರ್ದ್ರವಾಗಿದೆ.ಕೇವಲ ದಲಿತರ ಆತ್ಮಕಥೆಗಳಲ್ಲಿ ಮಾತ್ರ ಎಂಬಂತೆ ಓದಿದ ಇಂತಹ ಅನುಭವ ಬಡತನದ ಬೇಗೆಯ ಸಮಾನತೆಯನ್ನು ಸಾರುತ್ತದೆ
Tumba chennagide sir !! nav odbekadre chennage ansatte adre aa sandarbhagalannu edurisuvaga nimmolagina bhavanegalannu artha madikondare matra nimma ee baravanigege nijavada artha barutte !