ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದ್ಯಾ ಕಂಡ 'ಕನ್ನಡ ರಂಗಭೂಮಿಯಲ್ಲಿ ಹಾಸ್ಯ'

ಖ್ಯಾತ ನಟಿ ಎಂ ಎಸ್ ವಿದ್ಯಾ ಅವರ ಪ್ರೌಢ ಪ್ರಬಂಧ- `ಕನ್ನಡ ರಂಗಭೂಮಿಯಲ್ಲಿ ಹಾಸ್ಯ’
ಕನ್ನಡ ರಂಗಭೂಮಿಯಲ್ಲಿ ಅರಳಿದ ನಗುವಿನ ಬುಗ್ಗೆಯನ್ನು ಹಿಡಿದಿಡುವ ಪ್ರಯತ್ನವನ್ನು ವಿದ್ಯಾ ಮಾಡಿದ್ದಾರೆ.
‘ಚಾರುಮತಿ ಪ್ರಕಾಶನ’ ಪ್ರಕಟಿಸಿರುವ ಈ ಕೃತಿ ಇಂದು ಬಿಡುಗಡೆಯಾಗುತ್ತಿದೆ.
ಈ ಕೃತಿಗೆ ರಂಗಾಯಣ ರಂಗ ಸಮಾಜದ ಸದಸ್ಯರೂ, ಹಿರಿಯ ರಂಗಕರ್ಮಿಯೂ ಆದ ಡಾ ಬಿ ವಿ ರಾಜಾರಾಂ ಬರೆದ ಮುನ್ನುಡಿ ಇಲ್ಲಿದೆ-
ಡಾ. ಬಿ.ವಿ. ರಾಜಾರಾಂ
`ಕಲೆ ವಿಲಾಸಕ್ಕಾಗಿ ಅಲ್ಲ ಜೀವನ ವಿಕಾಸಕ್ಕಾಗಿ’. ಈ ಮಾತು ರಂಗಭೂಮಿಯ ಪ್ರಸ್ತುತತೆಗೆ ಅತಿ ಮುಖ್ಯವಾದದ್ದು. ಭಾರತೀಯ ರಂಗ ಇತಿಹಾಸದ ಮಾತು ಅದೇ. ಭರತನ-ನಾಟ್ಯಶಾಸ್ತ್ರ ಎಂಟು ರಸ-ಭಾವಗಳನ್ನು ಪ್ರಧಾನವಾಗಿ ತಿಳಿಸಿದ್ದರೂ, ಅಭಿನವ ಗುಪ್ತನ-ಅಭಿನವ ಭಾರತೀ, ಒಂಭತ್ತನೇ ರಸ ಶಾಂತವನ್ನು ಪ್ರಸ್ತಾಪಿಸಿದ ನಂತರ- ಈ ಸಾವಿರ ವರ್ಷಗಳಲ್ಲಿ ಪ್ರೇಕ್ಷಕರಿಗೆ ಸಂವಹನವಾಗುತ್ತಿದ್ದದ್ದು ಒಟ್ಟಾರೆಯಾಗಿ ಈ ಒಂಭತ್ತು ರಸ-ಭಾವಗಳೇ. ಪಾಶ್ಚಾತ್ಯರ ಟ್ರಾಜಿಡಿ-ಕಾಮಿಡಿ-ಸೆಟೈರ್‌ಗಳ ಸೂತ್ರವೇ ಬೇರೆ.
ಪ್ರಸ್ತುತ ಡಾ. ಎಂ.ಎಸ್. ವಿದ್ಯಾರವರ `ಕನ್ನಡ ರಂಗಭೂಮಿಯಲ್ಲಿ ಹಾಸ್ಯ’- ಈ ಕೃತಿಯು ಹಾಸ್ಯರಸದ ಚಿಂತನೆಗೆ ಮತ್ತು ಅದರ ವ್ಯಾಪ್ತಿ-ಉಗಮ-ಬೆಳವಣಿಗೆ ಹೀಗೆ ಹಲವು ಹಂತಗಳ ಅಧ್ಯಯನಕ್ಕೆ ಒಳಗಾಗಿದೆ. ಈ ತರಹದ ಒಂದು ಶಿಸ್ತೀಯ ಅಧ್ಯಯನ ಮತ್ತು ಬರವಣಿಗೆಯ ಅಗತ್ಯ ಇತ್ತು. ಅದು ಇಲ್ಲಿ ಸಫಲತೆ ಕಂಡಿದೆ. ವಿಸ್ತಾರದ ಓದು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಮಂಡಿಸಿರುವುದು ಇಲ್ಲಿ ಕಂಡುಬರುತ್ತದೆ. ಅಂತೆಯೇ ಆಧುನಿಕ ರಂಗಪ್ರಯೋಗಾಸಕ್ತರಿಗೆ ಗೊತ್ತಿಲ್ಲದ ಎಷ್ಟೋ ನಾಟಕ ಕೃತಿಗಳ, ನಾಟಕಕಾರರ ಹೆಸರುಗಳು ಸಹ ಇಲ್ಲಿ ಕಾಣಸಿಗುತ್ತವೆೆ. ನಾಟಕಕಾರರು, ನಾಟಕ ಕೃತಿಗಳು, ರಂಗ ಪ್ರಯೋಗಗಳು, ರಂಗ ತಂಡಗಳು, ನಟರು, ನಟಿಯರು, ನಿರ್ದೇಶಕರು, ಆಯಾ ಕಾಲದಲ್ಲಿ ರಂಗ ಬೆಳೆದು ಬಂದ ರೀತಿಗಳನ್ನು ಸಹ ಇವುಗಳಿಂದ ಗುರುತಿಸಬಹುದು.
ಸಂಸ್ಕೃತ ನಾಟಕಗಳ ಅನುವಾದ-ರೂಪಾಂತರ, ಪಾಶ್ಚಾತ್ಯ ನಾಟಕಗಳ ಅನುವಾದ-ರೂಪಾಂತರ, ಜಾನಪದ ರಂಗ, ವೃತ್ತಿ ರಂಗ, ವಿಲಾಸಿ ರಂಗ, ಹವ್ಯಾಸಿ ರಂಗ, ಆಧುನಿಕ ಅರೆ ವೃತ್ತಿ ಪ್ರಯೋಗಗಳು, ಮಕ್ಕಳ ನಾಟಕ ಪ್ರಯೋಗಗಳು, ಮಹಿಳಾ ನಾಟಕ ರಂಗ ಪ್ರಯೋಗಗಳು- ಈ ರೀತಿಯಾಗಿ ಹಲವಾರು ಹಂತದ ಬೆಳವಣಿಗೆಯನ್ನು ಗಮನಿಸುತ್ತಲೇ ಅವುಗಳಲ್ಲಿ ಹಾಸ್ಯದ ಹರಿವು ಹೇಗಿತ್ತು ಎನ್ನುವುದನ್ನು ವಿಶ್ಲೇಷಿಸಿದ್ದಾರೆ. ಸಾಹಿತ್ಯ ರಚನೆಯಲ್ಲಿ ಓದುಗನಿಗೆ ಸಿಗುವ ಹಾಸ್ಯ ಹಾಗೂ ರಂಗ ಕೃತಿಯಲ್ಲಿ ಪ್ರೇಕ್ಷಕನಿಗೆ ದೊರಕುವ ಅಭಿನಯ- ಧ್ವನಿಪೂರ್ಣದ ಹಾಸ್ಯವೇ ಬೇರೆ ರೀತಿಯದು. ವೇಷ-ಭೂಷಣ, ಪ್ರಸಾಧನ, ಮಾತಿನ ಏರಿಳಿತಗಳು, ಅಂಗಚೇಷ್ಟೆಗಳು, ಅಭಿನಯ, ಬೆಳಕು, ರಂಗಸಜ್ಜಿಕೆ, ಹಿನ್ನಲೆ ಧ್ವನಿ, ಹಾಡು ಈ ಎಲ್ಲ ರೀತಿಯ ಹಾವಭಾವಗಳ ಪರಿಪೂರ್ಣ ಪ್ರದರ್ಶನದಿಂದ ‘ಹಾಸ್ಯ’ರಸದ ಕಳೆ ಏರುತ್ತದೆ. ಸಹೃದಯ ಪ್ರೇಕ್ಷಕನಿಗೆ ತಲುಪುತ್ತದೆ. ಸಂಭಾಷಣೆಯಲ್ಲಿನ ಹಾಸ್ಯ, ಅಭಿನಯದ ಹಾಸ್ಯ, ಸನ್ನಿವೇಶದ ಹಾಸ್ಯ ಹೀಗೆ ಹಲವು ಮಜಲುಗಳ ಹಾಸ್ಯಾಭಿನಯ ನಾಟಕ ಪ್ರಯೋಗಕ್ಕೆ ಜೀವಂತಿಕೆಯನ್ನು ನೀಡುತ್ತದೆ.

ಪಾಶ್ಯಾತ್ಯ ರಂಗಭೂಮಿಯಲ್ಲಿ ಹಾಸ್ಯ ಪ್ರಕಾರದ ಬೆಳೆ ಬೇರೆ ರೀತಿಯದೇ ಇದೆ. ಅದರದೇ ಪ್ರಕಾರದ ರಂಗ ಪ್ರಯೋಗಗಳಿAದಾಗಿ ಗಮನ ಸೆಳೆಯುತ್ತದೆ. ಹಾಸ್ಯಾಭಿನಯಕ್ಕೆ ಹೆಚ್ಚು ಒತ್ತು ಕೊಟ್ಟು ಸಿದ್ಧಗೊಂಡ ಪ್ರಯೋಗಗಳು ಈ ಕಾಲದಲ್ಲಿ ನಮಗೆ ನೋಡಲು ಸಿಗುತ್ತವೆ. ಮೋಲಿಯೇರ್, ಡೇರಿಯೋ ಫೋ ಮುಂತಾದವರ ವಿಡಂಬನಾತ್ಮಕ ಪ್ರಯೋಗಗಳು ಈ ಕಾಲದಲ್ಲಿ ನಮಗೆ ದೊರಕುತ್ತವೆ. ಅವುಗಳ ರಂಗಪ್ರಯೋಗಗಳೂ ಕಂಡುಬAದಿವೆ. ಆ ರೀತಿಯ ಅನೇಕ ನಾಟಕಗಳ ರೂಪಾಂತರದ ಪ್ರಯೋಗಗಳೂ ಆಗಿವೆ. ಆ ಮಾದರಿಗಳನ್ನು ಬಳಸಿಕೊಂಡು, ಬೇರೆ ಬೇರೆ ರೀತಿಯ ರಂಗಪ್ರಯೋಗಗಳಲ್ಲಿ ಬಳಕೆಯನ್ನೂ ಮಾಡಿದ್ದಿದೆ. ಶೇಕ್ಸ್ಪಿಯರನ ಕಾಮಿಡಿಗಳ ಅನೇಕ ವಿಭಿನ್ನ ಪ್ರಯೋಗಗಳಾಗಿವೆ. ಅನುವಾದ ಹಾಗೂ ರೂಪಾಂತರಗೊAಡ ಪ್ರದರ್ಶನಗಳಾಗಿವೆ.
ಹೀಗೆ ಕನ್ನಡ ರಂಗಭೂಮಿಯಲ್ಲಿ ವಿಲಾಸಿ, ಹವ್ಯಾಸಿ, ಆಧುನಿಕ ರೆಪರ್ಟರಿ ಪ್ರಯೋಗಗಳಲ್ಲಿ ಇವುಗಳನ್ನು ಗಮನಿಸಬಹುದಾಗಿದೆ. ಈ ನಾಟಕ ಕೃತಿಗಳ ಪ್ರಯೋಗಗಳ ವಿವೇಚನೆಯೂ ಈ ಕೃತಿಯಲ್ಲಿ ಬಂದಿದೆ. ಹಾಗಾಗಿ ರಂಗ ವಿದ್ಯಾರ್ಥಿಗಳಿಗೆ ಆರಂಭದಿAದ ಈ ಕಾಲದವರೆಗೆ ನಡೆದಿರುವ ‘ಹಾಸ್ಯ’ ಪ್ರಯೋಗಗಳ ಪರಿಚಯ ದೊರಕುತ್ತದೆ. ಏನೇ ಆದರೂ ಬರವಣಿಗೆ ತಿಳಿಸುತ್ತದೆ – ಪ್ರಯೋಗ ಸಾಕ್ಷಾತ್ ದರ್ಶನ ಮಾಡಿಸುತ್ತದೆ. ಆದ್ದರಿಂದಲೇ ಈ ಮಾತು Theater dies every night. ಅಂದಂದಿನ ಪ್ರಯೋಗ, ಅದರ ವಿಶೇಷತೆಯೇ ಬೇರೆ. ಪ್ರತಿ ಪ್ರದರ್ಶನವೂ ವಿಶಿಷ್ಟವಾದದ್ದು. ಸಫಲವೂ ಆಗಬಹುದು – ವಿಫಲವೂ ಆಗಬಹುದು. ಮತ್ತೆ ಮರು ಪ್ರದರ್ಶನದಲ್ಲಿ ಗೆಲ್ಲಲೂಬಹುದು – ಸೋಲಲೂಬಹುದು. ಇದು ರಂಗ ಪ್ರದರ್ಶನಗಳ ಹಿರಿಮೆ-ಸಾಧ್ಯತೆ. ಹೀಗೆ ಡಾ. ವಿದ್ಯಾರವರು ತಾವು ಓದಿದ ನಾಟಕಗಳ ಹಾಗೂ ನೋಡಿದ ಪ್ರಯೋಗಗಳ ವಿಶ್ಲೇಷಣೆ ಈ ಕೃತಿಯಲ್ಲಿರುವುದು ಮುಂದಿನ ತಲೆಮಾರಿಗೆ ದಾಟಿಸಬೇಕಾಗಿರುವ ಅಮೂಲ್ಯ ಮಾಹಿತಿ ದೊರೆತಂತಾಗುತ್ತದೆ.
ಕನ್ನಡ ರಂಗಭೂಮಿಯ ಜನಪದ ರಂಗ, ವೃತ್ತಿರಂಗಗಳ ಸಾಕಷ್ಟು ನಾಟಕ ಪ್ರಯೋಗಗಳ ವಿವೇಚನೆಯೂ ಇಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಗಮನಿಸಬೇಕಾದದ್ದು ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ಮತ್ತು ನಾಟಕರತ್ನ ಗುಬ್ಬಿ ವೀರಣ್ಣನವರಿಗೆ ಸಂದ ಸನ್ಮಾನ, ಗೌರವಗಳು. ಜನಪದ ಮತ್ತು ವೃತ್ತಿ ರಂಗದ ಆರಂಭದಿAದಲೂ `ಹಾಸ್ಯ’ಕ್ಕೆ ಮಹತ್ವ ನೀಡಿದ್ದು. ದೂತ ಕೋಡಂಗಿ, ವಿದೂಷಕ, ಹನುಮನಾಯಕ, ಸಾರಥಿ ಹೀಗೆ ಪಾತ್ರಗಳ ರಚನೆ ಮತ್ತು ಪ್ರದರ್ಶನ ಜನರನ್ನು ಸೆಳೆಯುತ್ತಿದ್ದದ್ದು ಗಮನಿಸಬೇಕಾದ್ದು. ಜನರ ಆಡುನುಡಿಗೆ ಹಾಗೂ ಸಾಮಯಿಕ ಸಂದರ್ಭಕ್ಕೆ ತಕ್ಕಂತೆ ಮಾತುಗಳು ಮೂಡಿಬರುತ್ತಿದ್ದದ್ದು ಅದು ಜನರ ರಂಗಭೂಮಿ ಆಗಿ ಪರಿಣಾಮ ಬೀರುತ್ತಿದ್ದದ್ದು ವಿಶೇಷ. ಮಾಸ್ಟರ್ ಹಿರಣ್ಣಯ್ಯ, ಶಾಂತಕುಮಾರ ಮುಂತಾಗಿ ಅನೇಕ ಹೆಸರಾಂತ ವೃತ್ತಿರಂಗಭೂಮಿ ನಟರು ಹಾಸ್ಯರಸಕ್ಕೆ ಪ್ರಧಾನ್ಯತೆ ಕೊಟ್ಟಿದ್ದನ್ನು ಗಮನಿಸಬೇಕು.

ವಿಲಾಸಿ-ಹವ್ಯಾಸಿ ರಂಗದಲ್ಲAತೂ ಕೈಲಾಸಂ ಪ್ರಹಸನಗಳು ಶ್ರೀರಂಗರ ಏಕಾಂಕಗಳು-ಶಿವರಾಮ ಕಾರಂತರ ವಿಡಂಬನಾತ್ಮಗಳು, ಲಂಕೇಶ ಮತ್ತು ಚಂಪಾರವರ ವ್ಯಂಗ್ಯಗಳು, ನಾ. ಕಸ್ತೂರಿ, ಪರ್ವತವಾಣಿ ಮುಂತಾಗಿ ಅನೇಕರು ಪಾಶ್ಚಾತ್ಯರಂಗದ ಪ್ರಭಾವದಿಂದಾಗಿ ಹಾಸ್ಯವನ್ನು ಬಳಸಿದ್ದಾರೆ, ಬೆಳೆಸಿದ್ದಾರೆ. ಡ್ರಾಯಿಂಗ್ ರೂಂ ಕಾಮಿಡಿಗಳು, ನಂತರ ಆಧುನಿಕ ಪ್ರಯೋಗಗಳು, ಶೈಲೀಕೃತ ಅಭಿನಯಗಳು, ವ್ಯಂಗ್ಯ ವಿಡಂಬನಾತ್ಮಕಗಳು, ಬೀದಿ ನಾಟಕ ಪ್ರಯೋಗಗಳು ಹೀಗೆ ನಿರಂತರವಾಗಿ ‘ಹಾಸ್ಯ’ಕ್ಕೆ ಒತ್ತು ಕೊಟ್ಟಿದ್ದಾರೆ. ಈ ವಿಷಯಗಳನ್ನು ಈ ಕೃತಿಯಲ್ಲಿ ಗಮನಿಸಬಹುದು. ನೂರಾರು ನಾಟಕಗಳ ಮಾಹಿತಿ ಮತ್ತು ಹಾಸ್ಯಭಿನಯದ ನಟರು, ಪ್ರಯೋಗಗಳು ಇಲ್ಲಿ ವಿಶ್ಲೇಷಿಸಲ್ಪಟ್ಟಿವೆ. ಮಕ್ಕಳ ನಾಟಕ ಪ್ರಯೋಗಗಳು, ಮಹಿಳಾ ರಂಗದ ನಟನೆ-ಸಂಘಟನೆ-ರಚನೆ ಮತ್ತು ಪ್ರಯೋಗಗಳ ಬಗ್ಗೆಯೂ ಮಾಹಿತಿ ಇದೆ. ಅಸಂಗತ, ನವ್ಯ ರಚನೆ ಪ್ರಯೋಗಗಳ ಚಿಂತನೆಯೂ ಇದೆ. ರಂಗ ಶಿಕ್ಷಣ, ರಂಗ ತರಬೇತಿ, ಸುಶಿಕ್ಷಿತ ನಾಟಕಕಾರ, ಪ್ರೇಕ್ಷಕ, ನಿರ್ದೇಶಕ, ಸಂಘಟಕ ಹೀಗೆ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯ ಹಂತಗಳನ್ನು ಈ ಕೃತಿಯಲ್ಲಿ ಗುರುತಿಸಲಾಗಿದೆ.
ಈ ಪ್ರಯತ್ನದ ಹಿಂದೆ ಡಾ. ವಿದ್ಯಾರವರ ರಂಗಶ್ರದ್ಧೆ ಎದ್ದುಕಾಣುತ್ತದೆ. ಇವರು ರಂಗ ನಟಿಯಾಗಿರುವುದು, ರಂಗಭೂಮಿಯಲ್ಲಿ ಪದವಿ, ಸಾಹಿತ್ಯಭ್ಯಾಸಿಯಾಗಿ ಎಂ.ಎ. ಕನ್ನಡ ಸ್ನಾತಕ ಪಡೆದದ್ದು, ಸಾವಿರಾರು ರಂಗಪ್ರಯೋಗಗಳನ್ನು ನೋಡಿರುವುದು ಮತ್ತು ರೇಡಿಯೋ ಕಲಾವಿದೆಯಾಗಿಯೂ ದುಡಿದಿರುವ ಅನುಭವ ಈ ಕೃತಿಯ ಘನತೆಯನ್ನು ಹೆಚ್ಚಿಸಿದೆ.
ಇಂತಹ ಕೃತಿಗಳು ಮತ್ತು ವಿಷಯಾಧಾರಿತ ರಚನೆಗಳು ಕನ್ನಡದಲ್ಲಿ ಹೆಚ್ಚಾಗಿ ಬರಬೇಕು. ಇದರಿಂದಾಗಿ ರಂಗಾಭ್ಯಾಸಿಗಳಿಗೆ ತಮ್ಮ ಕ್ಷೇತ್ರದಲ್ಲಿ ತೊಡಗಲು ಅನುವು ಆಗುತ್ತದೆ. ರಂಗಭೂಮಿಯ ನೂರಾರು ವರ್ಷಗಳ ಚಲನೆಯನ್ನು ದಾಖಲಿಸದಂತಾಗುತ್ತದೆ. ಈ ಕೃತಿಯನ್ನು ರಚಿಸಿರುವ ಡಾ. ಎಂ.ಎಸ್. ವಿದ್ಯಾ ಅವರಿಗೂ, ಇದನ್ನು ಪ್ರಕಟಿಸುತ್ತಿರುವ ರಂಗಕರ್ಮಿ ಬಿ.ಎಸ್. ವಿದ್ಯಾರಣ್ಯರವರಿಗೂ, ಇದನ್ನು ತಮ್ಮ ಅಭ್ಯಾಸಕ್ಕೆ ಓದುವವರಿಗೂ ನನ್ನ ಅಭಿನಂದನೆಗಳು. ರಂಗಭೂಮಿ ಚಿರಾಯುವಾಗಲಿ. ರಂಗಚಟುವಟಿಕೆ ನಿರಂತರವಾಗಿರಲಿ.

‍ಲೇಖಕರು avadhi

1 December, 2019

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. T S SHRAVANA KUMARI

    ಹಾರ್ಧಿಕ ಶುಭಾಶಯಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading