ಅನಾಮಿಕಾ@ಹ್ಯಾಂಡ್ ಪೋಸ್ಟ್ : ಜಗ ಬೆಳಗದೆ ಹೊಸ್ತಿಲಿಗೆ ಮಾತ್ರ ಸೀಮಿತವಾದರೆ…

ಭಾಷೆಯೆಂಬ ಕೋಟಿ ಕಾರ್ತಿಕೋತ್ಸವದ ಬೆಳಕು
ಜಗ ಬೆಳಗದೆ ಹೊಸ್ತಿಲಿಗೆ ಮಾತ್ರ ಸೀಮಿತವಾದರೆ…

ಆಧುನಿಕ ವಿದ್ಯಮಾನಗಳ ಬಗ್ಗೆ ಕಣ್ಣಿದ್ದೂ ಕುರುಡಿಯಾಗಿರುವ, ಕಿವಿಯಿದ್ದೂ ಕಿವುಡಳಾಗಿರುವ ನನಗೆ ರಾಜ್ಯದ ಗೃಹಮಂತ್ರಿ ಬದಲಾದ ವಿಷಯ ಗೊತ್ತಾಗಿದ್ದೇ ರಸ್ತೆ ಪಕ್ಕ ಹಾಕಿದ್ದ ದೊಡ್ಡ ಬೋರ್ಡ್ ಒಂದನ್ನ ನೋಡಿ. ಸಮಕಾಲೀನ ಸನ್ನಿವೇಶದಲ್ಲಿ ಎಂದೂ ಜೀವಿಸದ, ಪ್ರಚಲಿತದ ಬಗೆಗೆ ಯಾವತ್ತೂ ಎಲ್ಲಿಯೂ ವಸ್ತುನಿಷ್ಠವಾಗಿ ಅಭಿಪ್ರಾಯ ಮಂಡಿಸದೆ ನಿರ್ಲಿಪ್ತಳಾಗಿದ್ದವಳ ಗಮನಕ್ಕೆ ಈ ವಿಷಯ ಬಿದ್ದಿದ್ದಕ್ಕೆ ಅದರ ಬಗ್ಗೆ ಬರೆಯಬೇಕೆನಿಸಿದುದರ ಬಗ್ಗೆ ಮನದಲ್ಲಿ ವಿಚಿತ್ರ ಸಂಕಟ ಉಂಟಾಗುತ್ತಿದೆ.

ಜಗದ ಗೊಂದಲಗಳನ್ನೆಲ್ಲ ಮರೆಯುವಂತೆ ಮಾಡಿ, ವ್ಯಥೆಗಳನ್ನೂ ಹಾಡು ಮಾಡುವ ಭಾಷೆ, ಸಾಹಿತ್ಯ ಮತ್ತು ಲಲಿತಕಲೆಗಳನ್ನು ಭಾವವಿರೇಚನ (ಕೆಥಾರ್ಸಿಸ್) ಎಂದೇ ಭಾವಿಸಿರುವ ನನಗೆ ಭಾಷೆಯನ್ನು ಕಲಿಸುವವರ ಜಾತಿಯಿಂದ ಉಂಟಾಗಿರುವ ಈ ಗೊಂದಲದಿಂದಾಗಿ ಶಿಕ್ಷಣ ಕ್ಷೇತ್ರ ಸದ್ಯ ಕುರುಕ್ಷೇತ್ರದಂತೆ ಭಾಸವಾಗುತ್ತಿದೆ. ಹೊಟ್ಟೆಯಲ್ಲಿನ ವಿಷ ವಸ್ತುಗಳನ್ನು ತೆಗೆದು ಹಾಕಲು ಹೇಗೆ ಜುಲಾಬು ಗುಳಿಗೆಗಳನ್ನು ಉಪಯೋಗಿಸುತ್ತೇವೆಯೋ ಹಾಗೆಯೇ ಮನಸ್ಸಿಗೆ ಭಾರವಾಗಿರುವ ವಿಷಯಗಳನ್ನು ಮನದಿಂದ ಹೊರದೂಡಿ ಹಗುರ ಮಾಡುವ ಪ್ರಕ್ರಿಯೆಯೇ ಕೆಥಾರ್ಸಿಸ್. ಒಂದು ಕಥೆಯ ಓದಿನಲ್ಲಿ, ಒಂದು ನಾಟಕ ಅಥವಾ ಸಿನೆಮಾ ನೋಟದಲ್ಲಿ ನಾಯಕ ಸಂಕಟಕ್ಕೆ ತುತ್ತಾಗಿ ನೋವು ಅನುಭವಿಸುವುದನ್ನು ಕಂಡು ಅಯ್ಯೋ ಪಾಪ ಎಂದು ಮಿಡುಕಿ ನಮ್ಮ ಜೀವನದ ದುಃಖಗಳನ್ನು ಮರೆಯಲು ಪ್ರಾರಂಭಿಸುತ್ತೇವೆ.

ಹೀಗೆ ಮನವನ್ನು ಹಗುರ ಮಾಡುವ ಕ್ರಿಯೆಯನ್ನು ಭಾಷೆ, ಸಾಹಿತ್ಯ, ಕಲೆ ಮಾಡುತ್ತದೆ. ಮನುಷ್ಯ ನಿರ್ಮಿತ ಜಾತಿ ಸರಹದ್ದಿನ ಆಧಾರದ ಮೇಲೆ ಭಾಷಾ ಕಲಿಕೆಯನ್ನು ನೋಡುತ್ತಿರುವ ಈ ಹೊತ್ತಿನಲ್ಲಿ ಬೇಂದ್ರೆ ಅವರು ಅಲ್ಲಮ ಪ್ರಭುವಿನ ಕುರಿತು ಬರೆದ ಸಾನೆಟ್ ನಲ್ಲಿ ‘ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು, ಶಿಷ್ಯ, ಪ್ರೀತಿಯ ಜಾತಿಗಾರ!’ ಎಂದು ಬರೆಯುತ್ತಾರೆ. ಕಿ.ರಂ. ಇದನ್ನು ಹೊಸಗನ್ನಡ ಕಾವ್ಯದ ‘ಮೋನಾಲಿಸಾ’ ಎಂದು ಕರೆದಿದ್ದರಂತೆ. ಕಲೆಯ ಜಾತಿಗೆ ಸೇರಿದವರು ಕಾಲ-ದೇಶ, ಗಡಿಗಳನ್ನು ಮೀರಿದವರು ಎನ್ನುವ ವಿಶಾಲ ಅರ್ಥ ಸ್ಫುರಣೆಯ ಮಧ್ಯದಲ್ಲೆಲ್ಲೋ ಕುಮೇನಿಯಸ್ ನ ಧ್ವನಿ (ಕುಮೇನಿಯಸ್ – ಗ್ರೀಕ್ ನಾಟಕಗಳಲ್ಲಿ ಬೇಕು ಬೇಕಂತಲೇ ಹಾಡು ಮರೆತು ಮೇಳ ಕೆಡಿಸಲು ಹುಸಿಕೆಮ್ಮು ಕೆಮ್ಮುವ ಮೇಳದವನ ಹೆಸರು) ಕೇಳುತ್ತಿದೆ. ಅರ್ಥದ ಗೊಡವೆ ದಾಟಿ ಸಂವಹಿಸಿ ಮನಸ್ಸು ಮುಟ್ಟುವ ತಾಕತ್ತಿದೆ ಭಾಷೆಗೆ. ಹಾಗಿದ್ದಾಗ ಕಲಿಯುವವರಿಗೆ ಕಲಿಸುವವವರ ಜಾತಿ ಏಕೆ ಬೇಕು? ಕಲಿಯುವವರ ಮತ್ತು ಕಲಿಸುವವರ ನಡುವಿನದು ಕವಿ ಮತ್ತು ಸಹೃದಯರ ನಡುವಿನಷ್ಟೇ ಆಪ್ತಭಾವ. ಇಲ್ಲಿ ‘ಮುಜಸೇ ಬೆಹತರ್ ಕೆಹನೆ ವಾಲೆ, ತುಮಸೇ ಬೆಹತರ್ ಸುನನೇ ವಾಲೆ’ ಎನ್ನುವ ಸವಾಲ್-ಜವಾಬ್ ಕೇವಲ ಕಾಲದ ಮಾತಲ್ಲದ, ಕಲೆಯ ಹಮ್ಮೂ ಅಲ್ಲದ ಸಮಭಾವವಾದಾಗ, ಜತೆಗೆ ಮಾಗುವ ದಿವ್ಯವಾಗಿರುವ ಕಲಿಯುವಿಕೆ ಮತ್ತು ಕಲಿಸುವಿಕೆಯ ನಡುವೆ ಜಾತಿ ಪ್ರವೇಶ ಹೇಗೆ ಸಾಧ್ಯ.

ಹಿಂದಿನ ತಲೆಮಾರು ಇಪ್ಪತ್ತೈದರಲ್ಲಿ ಕಂಡಿದ್ದನ್ನು ನಾವು ತೊಟ್ಟಿಲಲ್ಲೇ ಕಾಣುತ್ತೇವೆ. ಉಂಡರೂ ಹಸಿವಿರುವ, ಉಟ್ಟರೂ ಬೆತ್ತಲೆಯಾಗುವ ತಲೆಮಾರಿನ ತಳಮಳವನ್ನು ನಾನು ಮರೆಯುವುದೇ ಭಾಷೆಯ ಮುಕ್ತ ಮಾರ್ಗದಲ್ಲಿ ಮತ್ತು ಕಲೆಯ ಸಹವಾಸದಲ್ಲಿ. ಭಾಷೆಯೆಂಬ ಕೋಟಿ ಕಾರ್ತಿಕೋತ್ಸವದ ಬೆಳಕು ಜಗ ಬೆಳಗದೆ ಹೊಸ್ತಿಲಿಗೆ ಮಾತ್ರ ಸೀಮಿತವಾದರೆ ಹೇಗೆ ಎಂದು ಕಳವಳವಾಗುತ್ತಿದೆ. ಕಂಡ ಕನಸುಗಳೆಲ್ಲ ಮಣ್ಣ ಪಾಲಾದಾಗ ಭೂಮಿಯನ್ನು ಮುಟ್ಟಿಯೂ, ಮುಟ್ಟದೆಯೂ ಬದುಕುವ ಒಂದು ಛಲವನ್ನು ನನ್ನೊಳಗೆ ಹುಟ್ಟು ಹಾಕುವುದೇ ಒಂದು ಓದು, ಒಂದು ಸಿನೆಮಾ. ಅದನ್ನು ಬರೆದವರ, ನಿರ್ದೇಶಿಸಿದವರ ಜಾತಿ ಇದು ಎಂದು ಅವೆಲ್ಲದರಿಂದ ನಾನು ದೂರವೇ ಉಳಿದರೆ ಕಲುಷಿತಗೊಂಡ ವೃಷಭೆಯ ಕೊಚ್ಚೆ ವಾಸನೆಯ ನಡುವೆ ಅದೇ ನೀರಸ ಬೆಳಗಿನ, ಬೇಸರಿನ ಸಂಜೆಯ ಏಕಾಂತ ನೀಗುವ ಭಾಷೆ, ಕಲೆ-ಸಾಹಿತ್ಯದ ‘ಮಾಂತ್ರಿಕ ವಾಸ್ತವ’ದಲ್ಲೇ ತುಸು ಹಿತ ಕಾಣುವ ನನ್ನಂತವರ ಪಾಡೇನು?

ಅಂತರಂಗದ ಅಭಿವ್ಯಕ್ತಿಗೆ ಮಾಧ್ಯಮವಾದ ಭಾಷೆಯ ಔನ್ಯತ್ಯ ಈಗ ಖುಲ್ಲಾ ಬಜಾರಿನಲ್ಲಿ ಸಸ್ತಾದಲ್ಲಿ ಬಿಕರಿಯಾಗುತ್ತಿರುವ ಈ ವಿಚಿತ್ರ ರೂಪಾಂತರವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂದು ತಿಳಿಯದೇ ಅಯೋಮಯಳಾದ ಈ ಹೊತ್ತಿನಲ್ಲಿ,
ಕತ್ತಿಯಲ್ಲಿ ಬಿತ್ತಿದುದು ಕತ್ತಿಯಲ್ಲೇ ಕೊಯ್ಲಾಗುತ್ತದೆ. ನಾನು ಯಾವ ಜಾತಿಗೂ ಸೇರಿದವನಲ್ಲ. ಒಲವೊಂದೇ ನನ್ನ ಮತ. ಎಲ್ಲರ ಎದೆಮನೆಯೇ ನನ್ನ ದೇವಾಲಯ ಎಂದ ರೂಮಿ,
ಅನ್ನ ನೆಲ ಮಾತು ಮತ ಎಲ್ಲ ಬೇರೆಯಾದರೂ ಅವನ್ನೆಲ್ಲ ಪ್ರೀತಿಯಲಿ ಕಲಸಿ, ಗಡಿ ಮೀರಿ, ಮಡಿ ಮೀರಿ, ನಡೆ-ನುಡಿ ಕಾಡುವ ನನ್ನ ನೆಲದ ಶರೀಫ,

ವಿಚಾರದ ಮಟ್ಟದಲ್ಲಿ ಆಕ್ಷೇಪಿಸುವಂತೆಯೇ ಇರದ ವಿಷಯವೊಂದರ ಕುರಿತು ತೇಜಸ್ವಿ ಅವರಿಗೆ ಪ್ರತಿಕ್ರಿಯಿಸುವಾಗ, “ನೀನು ಈ ರೀತಿಯ ಭಾಷೆಯನ್ನು ಬಳಸಿ ನಿನ್ನ ವಿಚಾರಗಳನ್ನೇ ಕೀಳುಗೈದಿದ್ದೀಯ. ಜೊತೆಗೆ ಈ ತರಹದ ಭಾಷೆಯಿಂದ ನೀನು ನಿನ್ನ ಎದುರಿರುವವರನ್ನು ನೋಯಿಸಬಹುದಷ್ಟೇ. ಅವರ ಮನ ಒಲಿಸಲಾಗಲೀ, ಪರಿವರ್ತನೆ ಮಾಡಲಾಗಲೀ ಈ ಧೋರಣೆಯಿಂದ ಎಂದೂ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಈ ಕುರಿತು ದೂರದಲ್ಲಿ ತಟಸ್ಥರಾಗಿರುವವರನ್ನೂ, ಸಹಾನುಭೂತಿ ಇರುವವರನ್ನೂ ಸಹ ನೀವೇ ನಿಮ್ಮ ವಿರೋಧಿಗಳನ್ನಾಗಿ ಪರಿವರ್ತಿಸುತ್ತೀರಿ. ನೀನು ಯಾರನ್ನು ಎಷ್ಟೇ ಪ್ರತಿಭಟಿಸಿ ವಿರೋಧಿಸಿದರೂ ಅವರೂ ನಿನ್ನಂತೆಯೇ ಅನ್ನ ತಿನ್ನುವ ಮನುಷ್ಯರು. ನಿನಗೆ ಸರಿ ಅನ್ನಿಸಿದ್ದು ಅವರಿಗೂ ಸರಿ ಅನ್ನಿಸುವಂತೆ ಮಾಡಬಹುದು ಎನ್ನುವ ನಂಬಿಕೆಯನ್ನು ಎಂದೂ ನೀನು ಕಳಕೊಳ್ಳಕೂಡದು. ಲಿಬರಲಿಸಂ, ಸೆಕ್ಯೂಲರಿಸಂ ಎಂದರೆ ಇನ್ನೇನೂ ಅಲ್ಲ. ಎಲ್ಲರೂ ನನ್ನಂತೆಯೇ ಎನ್ನುವ ಅತ್ಯಂತ ಸರಳ ಅನುಭೂತಿ,” ಎಂದರು ಕುವೆಂಪು,

ಉಭಯ ದೇಶಗಳ ನಡುವಿನ ಸಾಕಷ್ಟು ವಿರಸದ ಮಧ್ಯೆ, ನಿರಕ್ಷರಕುಕ್ಷಿಯಾಗಿದ್ದರೂ ಎಲ್ಲಿಯೂ ‘ಗಡಿಬಿಡಿ’ ಮಾಡಿಕೊಳ್ಳದೆ, “ಭಾಷೆಗೆ ಜಾತಿ, ಗಡಿಯ ಗೊಡವೆಯಿಲ್ಲ. ಭಾಷೆಗಳು ಎಲ್ಲೆಲ್ಲಿಯೂ ಸಲ್ಲುತ್ತದೆ, ಎಲ್ಲರಿಗೂ ಸೇರುತ್ತವೆ,” ಎಂದು ತನ್ನ ಕಂಚಿನ ಕಂಠದಲ್ಲಿ ದೊಡ್ಡ ಮಾತನ್ನು ತಣ್ಣಗೆ ನುಡಿದ ಗಾಯಕಿ ರೇಷ್ಮಾ, – ನನ್ನ ಪುಣ್ಯದಂತೆ ಕಾಣುತ್ತಿದ್ದಾರೆ.

‍ಲೇಖಕರು avadhi

December 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಒಳ್ಳೆಯ ಲೇಖನ.“ಭಾಷೆಗೆ ಜಾತಿ, ಗಡಿಯ ಗೊಡವೆಯಿಲ್ಲ. ಭಾಷೆಗಳು ಎಲ್ಲೆಲ್ಲಿಯೂ ಸಲ್ಲುತ್ತದೆ, ಎಲ್ಲರಿಗೂ ಸೇರುತ್ತವೆ,” ಒಪ್ಪುವ ಮಾತುಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: