ವಿಧವೆ ಮತ್ತು ಅವಳ ಮಗ
ಅನುವಾದ: ವಿದ್ಯಾ
ಮೂಲ: ಖಲೀಲ್ ಗಿಬ್ರಾನ್
ಉತ್ತರ ಲೆಬನಾನಿನ ಮೇಲೆ ಕತ್ತಲಾವರಿಸಿತು. ಚರ್ಮದ ದಪ್ಪ ಹಾಳೆಯ ಮೇಲೆ ಕ್ರುದ್ಧ ಪ್ರಕೃತಿ ತನ್ನ ಕಾರ್ಯಗಳನ್ನು ದಾಖಲಿಸುತ್ತಿದೆಯೇನೋ ಎಂಬಂತೆ ಕದೀಶಾ ಕಣಿವೆಯಿಂದ ಆವೃತವಾದ ಹಳ್ಳಿ ಹೊಲಗದ್ದೆ, ಹುಲ್ಲುಗಾವಲುಗಳ ಮೇಲೆ ಹಿಮವು ಆವರಿಸಿತ್ತು.ಇರುಳನ್ನು ಮೌನ ನುಂಗುತ್ತಿದ್ದಂತೆ ಗಂಡಸರು ಬೀದಿಗಳಿಂದ ತಮ್ಮ ಮನೆಗಳಿಗೆ ಹಿಂದಿರುಗಿದರು.
ಆ ಹಳ್ಳಿಗಳ ಬಳಿಯಿದ್ದ ಒಂಟಿ ಮನೆಯೊಂದರಲ್ಲಿ ವಾಸವಾಗಿದ್ದ ಹೆಂಗಸೊಬ್ಬಳು ಬೆಂಕಿಗೂಡಿನ ಬಳಿ ಉಣ್ಣೆ ಸುತ್ತುತ್ತಾ ಕುಳಿತಿದ್ದಳು. ಅವಳ ಪಕ್ಕದಲ್ಲಿ ಅವಳ ಒಬ್ಬನೇ ಮಗ ತನ್ನ ತಾಯಿಯನ್ನೊಮ್ಮೆ, ಬೆಂಕಿಯನ್ನೊಮ್ಮೆ ನೋಡುತ್ತ ಕುಳಿತಿದ್ದ.
ಇದ್ದಕ್ಕಿದ್ದಂತೆ ಮನೆಯನ್ನೇ ಅಲುಗಿಸುವಂತಹ ಗುಡುಗಿನ ಭಯಂಕರ ಸದ್ದಿಗೆ ಹುಡುಗ ಬೆಚ್ಚಿಬಿದ್ದ. ಪ್ರಕೃತಿಯಿಂದ ರಕ್ಷಿಸಿಕೊಳ್ಳಲು ತಾಯಿಯ ಪ್ರೀತಿಗಾಗಿ ತನ್ನೆರಡೂ ತೋಳುಗಳನ್ನೂ ತಾಯಿಯೆಡೆಗೆ ತೆರೆದ. ಅವಳು ಮಗುವನ್ನು ತನ್ನೆದೆಗಪ್ಪಿ ಮುದ್ದಿಸಿ, ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಹೇಳಿದಳು – “ಹೆದರಬೇಡ ಮಗನೇ, ಪ್ರಕೃತಿಯು ಮನುಷ್ಯ ದೌರ್ಬಲ್ಯದೊಂದಿಗೆ ತನ್ನ ಅಗಾಧ ಶಕ್ತಿಯನ್ನು ಹೋಲಿಸಿಕೊಳ್ಳುತ್ತಿದೆ. ಹಿಮಪಾತ, ದಟ್ಟ ಮೋಡಗಳು, ಬೀಸುವ ಗಾಳಿಯ ಹಿಂದೊಂದು ಪರಮ ಆತ್ಮವಿದೆ. ಅವನೇ ಭೂಮಿಯನ್ನು ಸೃಷ್ಟಿಸಿದ್ದರಿಂದ ಭೂಮಿಗೇನು ಬೇಕೆಂಬುದು ಅವನಿಗೆ ಗೊತ್ತು. ಅವನು ದುರ್ಬಲರನ್ನು ಕರುಣೆಯಿಂದ ಕಾಣುತ್ತಾನೆ.”

“ಧೈರ್ಯದಿಂದಿರು ಮಗು. ಪ್ರಕೃತಿ ವಸಂತಕಾಲದಲ್ಲಿ ಮುಗುಳ್ನಗುತ್ತಾಳೆ, ಬೇಸಗೆಯಲ್ಲಿ ಜೋರಾಗಿ ನಗುತ್ತಾಳೆ ಮತ್ತು ಚಳಿಗಾಲದಲ್ಲಿ ಆಕಳಿಸುತ್ತಾಳೆ, ಆದರೆ ಈಗ ಅವಳು ಅಳುತ್ತಿದ್ದಾಳೆ; ಅವಳು ತನ್ನ ಕಣ್ಣೀರಿನಿಂದ ಭೂಮಿಯೊಳಗೆ ಹೂತ ಜೀವಿಗಳಿಗೆ ನೀರುಣಿಸುತ್ತಾಳೆ.”
“ಮಲಗು, ನನ್ನ ಪ್ರೀತಿಯ ಮಗುವೆ, ನಿನ್ನ ತಂದೆ ಸ್ವರ್ಗದಿಂದ ನಮ್ಮನ್ನು ನೋಡುತ್ತಿದ್ದಾರೆ. ಹಿಮ ಮತ್ತು ಗುಡುಗು ಈ ಸಮಯದಲ್ಲಿ ನಮ್ಮನ್ನು ಅವರ ಹತ್ತಿರಕ್ಕೆ ತರುತ್ತವೆ.”
“ನನ್ನ ಮುದ್ದಿನ ಕೂಸೇ, ಮಲಗು, ನಮ್ಮನ್ನು ಚಳಿಯಿಂದ ಸೆಟೆಯುವಂತೆ ಮಾಡುವ ಈ ಹಿಮದ ಕಂಬಳಿ ನೆಲದ ಬೀಜಗಳನ್ನು ಬೆಚ್ಚಗಿಡುತ್ತದೆ. ನಿಸಾನ್ ತಿಂಗಳು (ವಸಂತ ಋತು) ಬಂದಾಗ ಯುದ್ಧದಂತೆ ತೋರುವ ಇವೆಲ್ಲವೂ ಹೂಗಳನ್ನು ಅರಳಿಸುತ್ತವೆ.”
“ಆದ್ದರಿಂದ ಮಗುವೇ, ದು:ಖದಿಂದ ನೋಯದ ಹೊರತು, ಅಗಲಿಕೆಯಿಂದ ಬೇಯದ ಹೊರತು, ಸಹಿಸಿ ಕಹಿಯಾಗದ ಹೊರತು, ಕಡುಕಷ್ಟದಿಂದ ಕುಗ್ಗದ ಹೊರತು, ಪ್ರೀತಿಯನ್ನು ಮೊಗೆಯಲಾಗದು. ಮಲಗು, ನನ್ನ ಕಂದ, ಇರುಳ ಕಗ್ಗತ್ತಲೆಗೆ ಹೆದರದ, ಕಡಿವ ಮಂಜಿಗೆ ಬೆದರದ ನಿನ್ನನ್ನು ಸಿಹಿ ಕನಸುಗಳು ಅರಸಿ ಬರುವವು.”
ಪುಟ್ಟ ಹುಡುಗ ನಿದ್ರೆಯಿಂದ ಜೋಲುತ್ತಿದ್ದ ಕಣ್ಣುಗಳಿಂದ ತಾಯಿಯನ್ನೇ ನೋಡುತ್ತ ಹೇಳಿದ- “ಅಮ್ಮ, ನನ್ನ ರೆಪ್ಪೆಗಳು ಭಾರವಾಗಿವೆ. ಆದರೆ ಪ್ರಾರ್ಥಿಸುವವರೆಗೂ ನಿದ್ರಿಸಲಾರೆ.”
ತಾಯಿ ದೇವತೆಯಂಥ ಮಗುವಿನ ಮುಖವನ್ನೊಮ್ಮೆ ನೋಡಿದಳು, ಮಬ್ಬುಕಣ್ಣುಗಳಿಂದ ಅವಳ ದೃಷ್ಟಿ ಮಂಜಾಯಿತು. ಹೇಳಿದಳು- ” ನನ್ನೊಂದಿಗೆ ಹೇಳು ಮಗು- ‘ದೇವರೇ, ಬಡವರಿಗೆ ದಯೆ ತೋರು, ಅವರನ್ನು ಚಳಿಯಿಂದ ರಕ್ಷಿಸು; ತೆಳು ಬಟ್ಟೆ ತೊಟ್ಟ ಅವರ ದೇಹಗಳನ್ನು ನಿನ್ನ ಸ್ಪರ್ಶದಿಂದ ಬೆಚ್ಚಗಿರಿಸು; ಗುಡಿಸಲಲ್ಲಿ ಹಸಿವು ಮತ್ತು ಚಳಿಯಿಂದ ಬಳಲಿ ಮಲಗಿದ ಅನಾಥ ಮಕ್ಕಳನ್ನು ಕಾಪಾಡು; ಅಸಹಾಯಕರಾಗಿ ತಮ್ಮ ಹಸುಗೂಸುಗಳಿಗಾಗಿ ಭಯ ಪಡುವ ವಿಧವೆಯರ ಕೂಗನ್ನು ಕೇಳು ಓ ದೊರೆಯೇ; ದೀನರ ನೋವುಗಳೆಲ್ಲವೂ ಕಾಣುವಂತೆ ಎಲ್ಲರ ಹೃದಯಗಳನ್ನೂ ತೆರೆ ದೇವರೇ; ಆಶ್ರಯ ಬೇಡಿ ಬಾಗಿಲು ತಟ್ಟುವವರ ಮೇಲೆ ದಯೆ ತೋರು; ಯಾತ್ರಿಗಳನ್ನು ಬೆಚ್ಚಗಿನ ಸ್ಥಳಕ್ಕೆ ಕೊಂಡು ಹೋಗು; ಪುಟ್ಟ ಹಕ್ಕಿಗಳನ್ನು ಗಮನಿಸು, ಮರಗಳನ್ನೂ, ಹೊಲಗಳನ್ನೂ ಚಂಡಮಾರುತದ ಕೋಪದಿಂದ ರಕ್ಷಿಸು, ಏಕೆಂದರೆ ನೀನು ಪರಮ ಕರುಣಾಳು ಮತ್ತು ಪ್ರೇಮಮಯಿ.”
ನಿದ್ದೆಯ ಜೊಂಪು ಮಗುವಿನ ಆತ್ಮವನ್ನಾವರಿಸುತ್ತಿದ್ದಂತೆ, ತಾಯಿ ಅವನನ್ನು ಹಾಸಿಗೆಯ ಮೇಲೆ ಮಲಗಿಸಿ ಅವನ ಕಣ್ಣುಗಳಿಗೆ ನಡುಗುವ ತುಟಿಗಳಿಂದ ಮುತ್ತಿಟ್ಟಳು. ಪುನ: ಬೆಂಕಿಗೂಡಿನ ಬಳಿ ಕುಳಿತು ಮಗುವಿಗಾಗಿ ಉಣ್ಣೆ ಬಟ್ಟೆ ನೇಯತೊಡಗಿದಳು.






so nicely written ….