ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದ್ಯಾ ಅನುವಾದಿಸಿದ ಖಲೀಲ್ ಗಿಬ್ರಾನ್

ದುಷ್ಟ

ವಿದ್ಯಾ ರಾವ್

ಹಸಿವಿನಿಂದ ದುರ್ಬಲನಾದ ಸುಧೃಢ ಶರೀರದ ಯುವಕನೊಬ್ಬ ಹಾದಿಬದಿಯಲ್ಲಿ ಕೂತು, ಹಸಿವು ಮತ್ತು ಅಪಮಾನಗಳಿಂದ ನೋಯುತ್ತ ತನ್ನ ಜೀವನದ ಸೋಲನ್ನೇ ಹಾಡಾಗಿಸಿ ದಾರಿಹೋಕರತ್ತ ಕೈಚಾಚಿ ಭಿಕ್ಷೆ ಬೇಡುತ್ತಿದ್ದ.
ರಾತ್ರಿಯ ಹೊತ್ತಿಗೆ ಅವನ ನಾಲಿಗೆ ಒಣಗಿತ್ತು, ಆದರೆ ಅವನ ಹೊಟ್ಟೆಯಂತೆಯೇ ಅವನ ಕೈಯೂ ಬರಿದಾಗಿತ್ತು.
ತನ್ನೆಲ್ಲ ಶಕ್ತಿಯನ್ನೂ ಒಗ್ಗೂಡಿಸಿಕೊಂಡು ಅವನು ಶಹರದಿಂದ ಹೊರಬಂದು ಒಂದು ಮರದ ಕೆಳಗೆ ಕುಳಿತು ಮನನೊಂದು ಅತ್ತ. ಒಳಗೆ ಹಸಿವು ಬಾಧಿಸುತ್ತಿದ್ದಂತೆ, ತನ್ನ ಗೊಂದಲಕ್ಕೊಳಗಾದ ಕಣ್ಣುಗಳಿಂದ ಆಕಾಶ ದಿಟ್ಟಿಸಿ ಹೇಳಿದ, “ಓ ದೇವರೇ! ನಾನು ಧನಿಕನೊಬ್ಬನಲ್ಲಿ ಕೆಲಸಕ್ಕಾಗಿ ಯಾಚಿಸಿದೆ, ಅವನು ನನ್ನ ಕೊಳಕುತನಕ್ಕೆ ಅಸಹ್ಯಪಟ್ಟು ನಿರಾಕರಿಸಿದ. ಒಂದು ಶಾಲೆಯ ಬಾಗಿಲನ್ನು ತಟ್ಟಿದೆ, ನನ್ನ ಕೈ ಬರಿದಾಗಿದ್ದರಿಂದ ಸಾಂತ್ವನವೂ ಸಿಗಲಿಲ್ಲ. ನನಗೆ ಅನ್ನ ಕೊಡುವ ಯಾವುದೇ ಕೆಲಸವನ್ನಾದರೂ ಮಾಡಲು ಇಚ್ಛಿಸಿದೆ, ಆದರೆ ಸಿಗಲಿಲ್ಲ. ಹತಾಶೆಯಿಂದ ಭಿಕ್ಷೆ ಬೇಡಿದೆ, ಆದರೆ ನಿನ್ನ ಭಕ್ತರು ಇವನು ಸುಧೃಢ, ಅಲ್ಲದೇ ಸೋಮಾರಿ, ಇವನು ಭಿಕ್ಷೆ ಬೇಡಬಾರದೆಂದರು.”

“ಓ ದೇವರೇ! ನನ್ನ ತಾಯಿ ನನಗೆ ಜನ್ಮ ಕೊಟ್ಟಿದ್ದು ನಿನ್ನ ಸಂಕಲ್ಪ. ಈಗ ಸಮಾಪ್ತಿಯ ಮೊದಲು ಭೂಮಿ ನನ್ನನ್ನು ನಿನಗೆ ಮರಳಿಸುತ್ತಿದೆ.”
ಹೀಗೆ ಹೇಳುತ್ತಿದ್ದಂತೆ ಅವನ ಮುಖಭಾವ ಬದಲಾಯಿತು. ಅವನು ಎದ್ದುನಿಂತ. ಅವನ ಕಣ್ಣುಗಳು ಒಂದು ನಿರ್ಧಾರದಿಂದ ಮಿಂಚಿದವು. ಮರದ ಟೊಂಗೆಯೊಂದನ್ನು ಸುಲಿದು, ಕಿತ್ತು ಅದನ್ನು ಶಹರದ ಕಡೆಗೆ ತೋರಿಸಿ ಕೂಗುತ್ತ ಹೇಳಿದ, “ಒಂದು ತುತ್ತು ಅನ್ನಕ್ಕಾಗಿ ನನ್ನ ಕಂಠದಲ್ಲಿನ ಎಲ್ಲ ಶಕ್ತಿಯನ್ನೂ ಬಳಸಿ ಕೇಳಿದೆ, ನೀವು ತಿರಸ್ಕರಿಸಿದಿರಿ. ಈಗ ನಾನು ಅದನ್ನು ನನ್ನ ದೇಹಬಲದಿಂದ ಪಡೆದುಕೊಳ್ಳುವೆ. ಪ್ರೀತಿ ಮತ್ತು ಅನುಕಂಪದ ಹೆಸರಿನಲ್ಲಿ ಅನ್ನವನ್ನು ಯಾಚಿಸಿದೆ. ಆದರೆ ಮಾನವತೆಯು ಗಮನಕೊಡಲಿಲ್ಲ. ಈಗ ನಾನು ದುಷ್ಟತನದಿಂದ ಅದನ್ನು ಪಡೆದುಕೊಳ್ಳುತ್ತೇನೆ.”
ನಂತರದ ದಿನಗಳು ಅವನನ್ನು ಕಳ್ಳನನ್ನಾಗಿಯೂ, ಕೊಲೆಗಡುಕನನ್ನಾಗಿಯೂ ಮಾರ್ಪಡಿಸಿದವು. ಅವನು ತನ್ನ ವಿರೋಧಿಗಳನ್ನೆಲ್ಲ ಬಗ್ಗುಬಡಿದ. ಅಪರಿಮಿತ ಸಂಪತ್ತನ್ನು ದೋಚಿ ಅಧಿಕಾರವುಳ್ಳವರಿಗೆ ಸಡ್ಡು ಹೊಡೆದು ನಿಂತ. ತನ್ನ ಜೊತೆಗಾರರಿಂದ ಪ್ರಶಂಸಿಸಲ್ಪಟ್ಟ, ಇತರ ಕಳ್ಳರಿಂದ ಮತ್ಸರಿಸಲ್ಪಟ್ಟ. ಜನರಂತೂ ಇವನಿಗೆ ಹೆದರಿ ನಡುಗಿದರು.
ತನ್ನ ಸಂಪತ್ತು ಹಾಗೂ ಸುಳ್ಳು ಅಂತಸ್ತಿನ ಬಲದಿಂದ ಶಹರದ ಮೇಲಧಿಕಾರಿಗಳು ಅವನನ್ನು ತಮ್ಮ ಕೆಳ ಅಧಿಕಾರಿಯನ್ನಾಗಿ ನೇಮಿಸಿಕೊಂಡರು. ಕಳ್ಳತನವನ್ನು ಕಾನೂನುಬದ್ಧಗೊಳಿಸಲಾಯಿತು. ಶೋಷಣೆಯು ಅಧಿಕಾರಿಗಳಿಂದಲೇ ಬೆಂಬಲಿಸಲ್ಪಟ್ಟಿತು. ದುರ್ಬಲರನ್ನು ತುಳಿಯುವುದೊಂದು ಸಾಮಾನ್ಯ ಸಂಗತಿಯಾಯಿತು. ಇಂಥ ಕ್ರೌರ್ಯವು ಪ್ರಶಂಸಿಸಲ್ಪಟ್ಟಿತು.
ಹೀಗೆ, ಮಾನವ ಜನಾಂಗದ ಸ್ವಾರ್ಥವು ದೀನರನ್ನು ದುಷ್ಟರನ್ನಾಗಿಯೂ, ಶಾಂತವಾದ ಮಕ್ಕಳನ್ನು ಕೊಲೆಗಡುಕರನ್ನಾಗಿಯೂ ಮಾಡಿತು. ಆರಂಭದಲ್ಲಿ ಮಾನವರ ದುರಾಸೆ ಹೀಗೆಯೇ ಬೆಳೆದು ಮಾನವರನ್ನೇ ಸಾವಿರ ಪಟ್ಟು ಘಾತಿಸಿತು!
ಮೂಲ- ಖಲೀಲ್ ಗಿಬ್ರಾನ್
 
 

‍ಲೇಖಕರು G

11 October, 2014

5 Comments

  1. ramesh gabbur

    ಅಬಿನಂದನೆಗಳು.. ಚೆನ್ನಾಗಿದೆ.

  2. mmshaik

    khlil gibraan maha manavatavaadi..katu vaastava!!!!

  3. mahesh kalal

    thumba chennagide

  4. ಕುಸುಮಬಾಲೆ

    ನಿಜ ಅಲ್ವ?

  5. ಅಕ್ಕಿಮಂಗಲ ಮಂಜುನಾಥ

    ಖಲೀಲ್ ಗಿಬ್ರಾನರ ಸಾಲುಗಳೇ ಹಾಗೆ. ಕಾಡುವುದೇ ಅವುಗಳ ಗುಣ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading