ವಿದ್ಯಾರಶ್ಮಿ ಪೆಲತ್ತಡ್ಕ

ಜೂನ್ ತಿಂಗಳು ಬಂತು. ಜತೆಗೆ ಮಳೆಗಾಲವೂ. ಅಣ್ಣ-ತಂಗಿ ಇಬ್ಬರೂ ಶಾಲೆಗೆ ಹೊರಟರು. ಅಪ್ಪ ಇಬ್ಬರಿಗೂ ಒಂದೊಂದು ಒಳ್ಳೆಯ ಕೊಡೆ ತೆಗೆದುಕೊಟ್ಟರು. ಒಂದನೇ ಕ್ಲಾಸಿಗೆ ಸೇರಿದ್ದ ತಂಗಿಗೆ ಅದು ಮೊದಲ ಕೊಡೆ. ತನ್ನ ವಸ್ತುಗಳನ್ನೆಲ್ಲ ಜೋಪಾನವಾಗಿಟ್ಟುಕೊಳ್ಳುವ ಆ ಕೂಸಿಗೆ ಕೊಡೆ ಹಿಡಿದು ನಡೆಯುವುದೇ ಸಂಭ್ರಮ. ಅವಳು ಮಳೆಗೆ ಕೊಡೆ ಹಿಡಿದಳು. ಮಳೆ ಇಲ್ಲದಿರುವಾಗ ಕೊಡೆ ಮಡಿಸಿ ಅಮ್ಮ-ಮಗುವಿನಾಟ ಆಡಿದಳು. ಮಳೆ ಮುಗಿದ ಮೇಲೆ ಮಡಿಸಿ ಕಪಾಟಿನಲ್ಲಿಟ್ಟಳು.
ಮರು ವರ್ಷವೂ ಹೀಗೇ ಜೂನ್ ಬಂತು, ಮಳೆ ಶುರುವಾಯ್ತು. ಇಬ್ಬರ ಕೈಯಲ್ಲೂ ಅಪ್ಪ ಹಿಂದಿನ ವರ್ಷ ಕೊಡಿಸಿದ್ದ ಕೊಡೆ ಇತ್ತು. ಹಿಡಿದುಕೊಂಡು ಹೊರಟರು. ಶಾಲೆ ಶುರುವಾದ ನಾಲ್ಕು ದಿನದಲ್ಲಿ ಅಣ್ಣ ಕೊಡೆಯನ್ನು ಶಾಲೆಯಲ್ಲೆಲ್ಲೋ ಕಳೆದು ಬಂದ. ತಂಗಿಯ ಕೈಯಲ್ಲಿ ಕೊಡೆ ಜೋಪಾನವಾಗಿತ್ತು. ಅಪ್ಪ ಅಣ್ಣನಿಗೆ ಹೊಸ ಕೊಡೆ ತೆಗೆದುಕೊಟ್ಟರು. ತನಗೆ ಮಾತ್ರ ಹೊಸ ಕೊಡೆ ಇಲ್ಲವಲ್ಲ ಎಂದು ತಂಗಿಗೆ ಬೇಸರ. ಕೊಡೆಯನ್ನೇ ದಿಟ್ಟಿಸಿ ನೋಡಿದಳು. ಕೊಡೆ ತುದಿಯಲ್ಲಿ ಕೊಂಚ ಹರಿಯಲು ಶುರುವಾಗಿತ್ತು. ಒಂದುಪಾಯ ಹೊಳೆಯಿತು. ಅದನ್ನು ಇನ್ನೂ ಒಂದಷ್ಟು ಹರಿದು, ಱಅಪ್ಪಾ, ನನ್ ಕೊಡೆ ಹರಿದಿದೆ… ಹೊಸ ಕೊಡೆ ತೆಕ್ಕೊಡು’ ಅಂದಳು. ಅಪ್ಪ ಕೊಡೆ ಕೈಗೆತ್ತಿಕೊಂಡು ಮರುದಿನವೇ ಅದನ್ನು ಹೊಲಿಸಿ ಸರಿಮಾಡಿ ಕೊಟ್ಟರು. ತಂಗಿ ಅಣ್ಣನ ಹೊಸ ಕೊಡೆಯನ್ನೇ ನೋಡುತ್ತ ತನ್ನ ಅದೇ ಹಳೆಯ ಕೊಡೆಯನ್ನು ಅಪ್ಪಿ ಹಿಡಿದು ಶಾಲೆಗೆ ಹೊರಟಳು.
೦೦೦೦೦೦೦೦೦
ಭೋರೆಂದು ಸುರಿವ ಮಳೆಯಲ್ಲಿ ನೆನೆಯುತ್ತಾ ಬಿದ್ದಿತ್ತು ಆ ರಸ್ತೆ. ಆಗೊಮ್ಮೆ ಈಗೊಮ್ಮೆ ಅಲ್ಲಿ ಜನರು ಬರುತ್ತಿದ್ದರು. ರೈನ್‌ಕೋಟ್ ತೊಟ್ಟು ಶಾಲೆಗೆ ಹೋಗುವ ಪುಟಾಣಿ ಮಕ್ಕಳು, ಕಚೇರಿಗೆ ಹೋಗಲೆಂದು ಬಸ್ ಹಿಡಿಯುವ ಅವಸರದಲ್ಲಿರುವ ದೊಡ್ಡವರು, ದಿನಸಿ ತರಲೆಂದು ಅಂಗಡಿಗೆ ಹೊರಟ ಗೃಹಿಣಿಯರು… ಕೆಲವೊಮ್ಮೆ ಯಾರೂ ಬಾರದೇ ರಸ್ತೆ ಒಬ್ಬಂಟಿಯಾಗಿರುತ್ತಿತ್ತು.
ರಸ್ತೆ ಹೀಗೆ ಖಾಲಿಯಾಗಿದ್ದ ಸಮಯದಲ್ಲಿ ಒಬ್ಬ ಮಹಿಳೆ ಕೊಡೆ ಹಿಡಿದು ಓಡು ನಡಿಗೆಯಲ್ಲಿ ಬಂದಳು. ಅವಳನ್ನೇ ಹಿಂಬಾಲಿಸಿ ಒಬ್ಬ ಪುರುಷನೂ ಬಂದ. ಹಿಂದಿನಿಂದಲೇ ಆಕೆಯನ್ನು ಕರೆಯುತ್ತಿದ್ದ. ಅವಳು ನಿಲ್ಲದೆ ನಡೆದಳು. ಇವನು ಇನ್ನೂ ಜೋರಾಗಿ ನಡೆದು ಅವಳನ್ನು ಸಮೀಪಿಸಿದ. ಏನೋ ಮಾತಾಡುತ್ತಲೇ ಅವಳ ಕೊಡೆಯಡಿಯಲ್ಲಿ ಇವನೂ ತೂರಿಕೊಂಡ. ನೋಡನೋಡುತ್ತಿದ್ದಂತೆ ಅವಳನ್ನು ಬಳಸಿದ. ಅವಳು ಕೊಸರಿಕೊಂಡಳು. ಇವನು ಅವಳನ್ನು ಮುದ್ದು ಮಾಡುತ್ತಿದ್ದಾನೇನೋ ಎಂಬಂತೆ ಅವಳನ್ನು ಬಲವಾಗಿ ಹಿಡಿದು ಅವಳ ರವಿಕೆಯೊಳಗೆ ಕೈ ಹಾಕಿದ. ತಕ್ಷಣವೇ ಕೈ ಹೊರತೆಗೆದ, ಅವನ ಕೈಯಲ್ಲಿ ನೂರರ ನೋಟುಗಳು. ಅವನ ಕಣ್ಣು ಹೊಳೆಯುತ್ತಿತ್ತು. ಅವಳು ಕಿತ್ತುಕೊಳ್ಳಲು ಪ್ರಯತ್ನಿಸಿದಳು. ಆಗಲಿಲ್ಲ. ಅದನ್ನು ಹಿಡಿದುಕೊಂಡು ಅವನೆತ್ತಲೋ ಓಡಿದ. ಮಳೆ ಜೋರಾಯ್ತು. ಅವಳ ಕಣ್ಣೀರು ಮಳೆಯೊಂದಿಗೆ ಸೇರಿಹೋಯಿತು.
೦೦೦೦೦೦೦೦
ಒಂದೇ ಸಮನೆ ಸುರಿಯುವ ಮಳೆ. ಪರಸ್ಪರ ಮಾತಾಡಿದ್ದೂ ಕೇಳಿಸದಷ್ಟು ಮಳೆಯ ಮಾತಿನದ್ದೇ ಅಬ್ಬರ. ಆ ತುಂಟರಿಬ್ಬರು ಮಾತ್ರ ಈ ಮಳೆಯಲ್ಲಿಯೂ ಏನೋ ಪಿಸಿಪಿಸಿ ಮಾತಾಡಿಕೊಂಡದ್ದು ಅವರಿಗಷ್ಟೇ ಕೇಳಿಸಿತು.
ಊರ ಹೊಳೆ ತುಂಬಿ ಹರೆಯುತ್ತಿದೆಯೆಂದು ಶಾಲೆಗೆ ರಜೆ ಸಿಕ್ಕ ಕಾರಣ ಅವರಿಗೆ ಮಜಾ. ಅದಕ್ಕೇ ಮನೆಯಲ್ಲೇ ಒಂದು ಕಾರ್‍ಯಾಚರಣೆ ಹಮ್ಮಿಕೊಂಡಿದ್ದಾರವರು. ಅದರ ಪ್ರಯುಕ್ತ ಇಬ್ಬರೂ ಮೆತ್ತಗೆ ಅಲ್ಲೇ ನೇತುಹಾಕಿದ್ದ ಅಪ್ಪನ ಅಂಗಿ ಜೇಬಿಗೆ ಕೈ ಹಾಕಿ ಐದು ಬೀಡಿ ತೆಗೆದುಕೊಂಡರು. ಅಡುಗೆ ಕೋಣೆಯಲ್ಲಿದ್ದ ಅಮ್ಮನಿಗೆ ಗೊತ್ತಾಗದಂತೆ ಬೆಂಕಿ ಪೊಟ್ಟಣವನ್ನೂ ತೆಗೆದುಕೊಂಡರು. ಮೆತ್ತಗೆ ಮನೆಯಿಂದ ಐವತ್ತು ಮೀಟರ್ ದೂರದಲ್ಲಿದ್ದ ಬೈಹುಲ್ಲಿನ ಬಣವೆಯತ್ತ ನಡೆದರು. ಹುಲ್ಲಿನ ಮೇಲೆ ಬಿದ್ದು ಹೊರಳಾಡಿದರು. ಬೆಚ್ಚಗಾಯಿತು. ಈಗ ಇನ್ನಷ್ಟು ಮೈ ಬೆಚ್ಚಗೆ ಮಾಡೋಣ ಅನ್ನುತ್ತ ಅಣ್ಣ ಜೇಬಿನಿಂದ ಬೀಡಿ ತೆಗೆದು ಬಾಯಿಗಿಟ್ಟು ಬೆಂಕಿ ಹಚ್ಚಿಯೇ ಬಿಟ್ಟ. ತಮ್ಮನಿಗೂ, ಱತಗೋ, ನೋಡು ಮಜಾ’ ಅಂದ. ತಮ್ಮನೂ ಹೊಗೆ ಬಿಟ್ಟ. ತಂದಿದ್ದ ಬೀಡಿ ಎಲ್ಲ ಮುಗಿದ ಮೇಲೆ ಮನೆಗೆ ಹೋಗಿ ತಣ್ಣಗೆ ತಮ್ಮ ಪಾಡಿಗೆ ಪುಸ್ತಕ ಹಿಡಿದು ಕೂತರು.
ಅಷ್ಟರಲ್ಲಿ ತೋಟಕ್ಕೆ ಹೋಗಿದ್ದ ಅಪ್ಪ ಬಂದ. ಹುಲ್ಲಿನ ಬಣವೆಯಿಂದ ಹೊಗೆ ಏಳುತ್ತಿತ್ತು! ನೋಡಿದ, ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿತ್ತು. ಆ ಕುಂಭದ್ರೋಣ ಮಳೆಯಲ್ಲೂ ಅಪ್ಪನ ಮನತುಂಬ ಧಗೆ. ಅಪ್ಪ ಮನೆಯವರನ್ನೆಲ್ಲ ಕರೆದ, ಎಲ್ಲರೂ ಸೇರಿ ಬೆಂಕಿ ಆರಿಸಿದರು. ಱಮಳೆ ಇದ್ದುದಕ್ಕೆ ಬೆಂಕಿ ಅಷ್ಟು ಬೇಗ ಹರಡಲಿಲ್ಲ, ಇಲ್ಲದಿದ್ದರೆ ಇನ್ನೇನಾಗುತ್ತಿತ್ತೋ’ ಎಂದರು ಅಮ್ಮ.
ಕೋಣೆ ಸೇರಿಕೊಂಡ ಹುಡುಗರಿಗೆ ಸತ್ಯ ಹೇಳುವ ಆಸೆ. ಹೇಳಿದರೆ ಅಪ್ಪನ ಬೈಯ್ಗುಳದ ಗುಡುಗು ಸಿಡಿಲನ್ನು ಎದುರಿಸುವುದು ಹೇಗೆಂಬ ಭಯ. ಬೇರೆ ದಾರಿ ಕಾಣದೆ ಕಣ್ಣೀರ ಮಳೆ ಸುರಿಸುತ್ತಾ ಮಲಗಿದರು ಹುಡುಗರು. ಮನೆಯನ್ನೆಲ್ಲ ಮೌನದ ಕಾರ್ಮೋಡ ಕವಿಯಿತು.
೦೦೦೦೦೦೦೦
ಅವನ ನಡೆ ಇವಳಲ್ಲಿ ಇತ್ತೀಚೆಗೆ ಅನುಮಾನ ತರಿಸಿತ್ತು. ಇವನೇಕೆ ದಿನವೂ ರಾತ್ರಿ ತಡವಾಗಿ ಬರುತ್ತಾನೆ? ಮನೆಯಲ್ಲೇ ಇದ್ದವನು ಇದ್ದಕ್ಕಿದ್ದಂತೆ ಹೊರಟು ಹೋಗುತ್ತಾ, ಎಲ್ಲಿ ಹೋಗುತ್ತಾನೆಂಬುದಕ್ಕೆ ಒಂದು ಸೂಚನೆಯಿಲ್ಲ. ಮಾತಿಲ್ಲ, ಕಥೆಯಿಲ್ಲ. ಅವಳಲ್ಲಿ ಚಿಂತೆಯ ಕಾರ್ಮೋಡ. ಮನ ತುಂಬ ಸಂಶಯದ ಮುಸುಕು. ಇಂದು ಬರಲಿ, ಕೇಳಿಯೇ ಬಿಡುತ್ತೇನೆಂಬ ನಿರ್ಧಾರ. ಆದರೂ, ಅವನಲ್ಲಿ ಜಗಳವಾಡಿದರೆ ಅದು ವಿಕೋಪಕ್ಕೆ ಹೋಗುತ್ತದೆಂಬ ಹಿಂಜರಿಕೆ. ಅಕ್ಕಪಕ್ಕದ ಮನೆಗಳಿಗೆಲ್ಲ ಕೇಳಿಸುತ್ತದೆಂಬ ಆತಂಕ, ಮರ್‍ಯಾದೆಗಂಜುವ ಮನಸ್ಸು. ಅದಕ್ಕೇ ಮನದಲ್ಲೇ ಹಿಂದೆ-ಮುಂದೆ ತೂಗುತ್ತಾ ನಿಂತಿದ್ದಳು.
ಅಷ್ಟರಲ್ಲಿ ಅವನು ಬಂದ. ಇವಳು ಕೇಳಿಯೇ ಬಿಟ್ಟಳು. ಜಗಳ ಗುಡುಗಿತು. ಅವನು ಪಾತ್ರವೆತ್ತಿ ಕುಕ್ಕಿದ. ಇವಳ ಎದೆ ನಡುಗಿತು. ಅಷ್ಟರಲ್ಲಿ ಜೋರು ಮಳೆ. ಇವನ ಬೊಬ್ಬೆಯನ್ನೂ ಮೀರಿಸುವಷ್ಟು ಮಳೆಯದ್ದೇ ಗಲಾಟೆ. ಇವಳು ಸದ್ಯ, ಪಕ್ಕದ ಮನೆಗೆಲ್ಲ ಕೇಳಿಸಲಿಕ್ಕಿಲ್ಲ ಎಂದು ನಿಟ್ಟುಸಿರು ಬಿಟ್ಟಳು. ಕರೆಂಟ್ ಹೋಯಿತು. ಅವನು ಸುಮ್ಮನೇ ಮಲಗಿದ. ಮಳೆಯ ಒಡ್ಡೋಲಗ ಮುಂದುವರೆಯಿತು.
೦೦೦೦೦೦೦೦
ಅದೇಕೋ ಏನೋ, ಆಕಾಶದಿಂದ ಹನಿ ಬೀಳಲು ಶುರುವಾದಾಗಲೆಲ್ಲಾ ಇವಳು ಇದ್ದಲ್ಲೇ ಪ್ರತಿಮೆಯಾಗುತ್ತಾಳೆ. ಕಾಲು ತನಗರಿವಿಲ್ಲದಂತೆಯೇ ಕಿಟಕಿಯತ್ತ ಎಳೆಯುತ್ತದೆ. ಮಳೆರಾಯನ ಸಂಗೀತ ಕಚೇರಿ ನೋಡುತ್ತಿದ್ದರೆ ಇವಳ ಮನ ತುಂಬ ಅವನ ಹಾಡಿನ ನೆನಪು. ತನ್ನ ನೆನಪಿನಲ್ಲೇ ಅವನು ಅದೆಷ್ಟು ಕವನ ಬರೆದಿದ್ದನಲ್ಲವೇ… ಹಳೆಯ ಪೆಟ್ಟಿಗೆ ತೆರೆದು ನೋಡುತ್ತಾಳೆ, ಅವನ ಅಕ್ಷರಗಳ ಸಾಲು ಪ್ರವಾಹದಂತೆ ಅವಳನ್ನು ಕೊಚ್ಚಿಕೊಂಡು ಹೋಗುತ್ತವೆ.
ಇಂದೇಕೋ ಅವನ ಹಾಡುಗಳು ಮತ್ತೆ ಮತ್ತೆ ಮನದಲ್ಲಿ ಅನುರಣಿಸುತ್ತಿವೆ. ಒಮ್ಮೆ ಅವನನ್ನು ನೋಡಿಯೇ ಬಿಡುತ್ತೇನೆ, ಕಾಡುವ ತವಕ. ಮನದೊಳಗಿನ ಬಯಕೆ ಭೋರ್ಗರೆದಿದೆ. ಸಂಯಮದ ಅಣೆಕಟ್ಟು ಒಡೆದಿದೆ. ಅವಳು ಹೊರಟೇ ಬಿಟ್ಟಿದ್ದಾಳೆ ಅವನನ್ನು ಹುಡುಹುಡುಕಿ. ಅಪ್ಪ-ಅಮ್ಮ ಈ ಇವನು ಬೆರಗಾಗಿ ನೋಡುತ್ತಲೇ ಇದ್ದಾನೆ. ಇವನು ಇವಳಿಗೆ ಬೇಡ. ಅವರು ಬೇಡವೆಂದ ಆ ಅವನೇ ಇವಳ ಗುರಿ. ಎಲ್ಲರೂ ಸುಮ್ಮನೇ ನೋಡುತ್ತ ನಿಂತರು. ಅವಳಿಗೆ ಒಡ್ಡು ಕಟ್ಟುವ ಧೈರ್ಯ ಯಾರಿಗೂ ಬರಲಿಲ್ಲ.







Lovely stories!
ಭಾನುವಾರ,ಹೊರಗೆ ಕಾಲಿಡಲಾಗದ ಹಾಗೆ ಮಳೆ,ಮನೆಯೊಳಗೆ ಕಾಡಿಗೆಯಂಥ ಕತ್ತಲೆ, ಕೈಯಲ್ಲಿ ಬಿಸಿ ಬಿಸಿ ಕಾಪಿ,ಜೊತೆಗೆ ಕರಿದ ಹಲಸಿನ ಹಪ್ಪಳ ಇದ್ದಾಗ ಒಂದು ವಿವರಿಸಲಾಗದ ಗಮ್ಮತ್ತು ಇರುತ್ತಲ್ಲ..
ಹಾಗಿವೆ ವಿದ್ಯಾರಶ್ಮಿ ಅವರ ಕತೆಗಳು..
nice story madame
ಬೇಗುದಿಯ ಮನದೊಳಗೇ ಮಳೆ ಸುರಿಸಿ ತಂಪೆರೆದಂತಾ ಭಾವ ಒಂದೆಡೆಯಾದರೆ, ಮಳೆ ಗಾಳಿಯ ಚಳಿಗೆ ಬೆಚ್ಚನೆಯ ಕಚಗುಳಿಯಿಟ್ಟದ್ದು ಮತ್ತೊಂದೆಡೆ.
ಕಥೆಗಳು ತುಂಬ ಚೆನ್ನಾಗಿವೆ.
mungaru maleyalli manada bhavanegalige rekke mudide fine………
ಕತೆಗಳು ಹಿತವಾಗಿವೆ.
ಹಳೆ ನೆನಪುಗಳನ್ನು ಮರುಕಳಿಸುವ ಅದ್ಭುತ ಕಥೆಗಳು.
thanks all
eshtollhe bhaashe..chendaneya nudi chitragalhu..kattalalli geerida belhaka kaddiya tara..vidyaa returns! expecting..more and more..
Mungarina hanigala leeleya hageye kathegaliwe.thumba aaptha ansthu.fine 2