ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದ್ಯಾರಶ್ಮಿ ಬರೆದ ಕಥೆ: ಸಾಧನೆ

ವಿದ್ಯಾರಶ್ಮಿ ಪೆಲತ್ತಡ್ಕ

ಮೂವತ್ತೈದರ ಸುಮಾರಿನ ಆ ವ್ಯಕ್ತಿ ಒಂದು ದಿನ ಸಂಜೆ ಇದ್ದಕ್ಕಿದ್ದಂತೆ ಬಂದು ಗುರುಗಳನ್ನು ಕೇಳಿದ,

`ಗುರುಗಳೇ, ನನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ನನಗೀಗ ಬದುಕಿನಲ್ಲಿ ಯಾವ ಆಸಕ್ತಿಯೂ ಉಳಿದಿಲ್ಲ. ಹೀಗಾಗಿ, ಆಧ್ಯಾತ್ಮಿಕವಾಗಿ ಮಹತ್ಸಾಧನೆ ಮಾಡಬೇಕೆಂದಿದ್ದೇನೆ. ಅದಕ್ಕೇನು ಮಾಡಲಿ?’

`ಸರಿ ಹಾಗಿದ್ದರೆ. ಮೊದಲು ಈ ದೇವಸ್ಥಾನದ ಜಗಲಿಯಲ್ಲಿಯೇ ಕುಳಿತು ಧ್ಯಾನ ಮಾಡುವುದಕ್ಕೆ ತೊಡಗು. ಧ್ಯಾನದಲ್ಲಿ ನಿನ್ನ ಮನಸ್ಸು ತೊಡಗಿದ ಮೇಲೆ ಮುಂದಿನದು…’ ಅಂದರು ಗುರುಗಳು.

ಅಂದಿನಿಂದಲೇ ಧ್ಯಾನಕ್ಕೆ ಶುರುಮಾಡಿಕೊಂಡನಾತ. ದೇಗುಲದ ಜಗಲಿಯಲ್ಲಿ ಕಣ್ಣುಮುಚ್ಚಿ ಕುಳಿತವನಿಗೆ ಮನೆ ಬಿಟ್ಟು ಹೋದ ಪತ್ನಿಯ ಚಿತ್ರ ಕಾಡಿತು. ಅದ್ಯಾಕೋ ಧ್ಯಾನದಲ್ಲಿ ಮನಸ್ಸು ಕೂರುತ್ತಿಲ್ಲವೆಂದು ಗುರುಗಳ ಬಳಿ ಹೇಳಿ ಎದ್ದು ಹೋದ.

ಗುರುಗಳು ಮುಗುಳ್ನಕ್ಕು ಸುಮ್ಮನಾದರು.

ಆತ ಮರುದಿನ ಮತ್ತೆ ಬಂದ.

`ಮನೆ ಬಿಟ್ಟು ಹೋಗಿದ್ದ ನನ್ನ ಹೆಂಡತಿಯನ್ನು ಹುಡುಕುತ್ತಾ ಹೋದೆ. ಅವಳು ಇನ್ಯಾವನ ಜೊತೆಗೋ ಹೋಗಿ ಸುಖವಾಗಿ ಬಾಳುತ್ತಿದ್ದಾಳೆ. ಈಗ ನಿಜಕ್ಕೂ ನನಗೆ ಲೌಕಿಕ ಬದುಕಿನ ಮೇಲೆ ವ್ಯಾಮೋಹವಿಲ್ಲ, ಇವತ್ತಿನಿಂದ ಮತ್ತೆ ಸಾಧನೆಗೆ ತೊಡಗುತ್ತೇನೆ’ ಅಂದ.

ಮತ್ತೆ ಧ್ಯಾನಕ್ಕೆ ಕುಳಿತ. ಎಷ್ಟೇ ಬಿಗಿಯಾಗಿ ಕಣ್ಣು ಮುಚ್ಚಿದರೂ ಮನಸ್ಸಿನ ತುಂಬಾ ಏನೋ ಕಸಿವಿಸಿ. `ಮನೆಯಲ್ಲಿ ನಾಲ್ಕು ವರ್ಷದ ಪುಟ್ಟ ಮಗನಿದ್ದಾನೆ. ಅವನನ್ನೊಮ್ಮೆ ನೋಡಿ ಬರುತ್ತೇನೆ’ ಎಂದು ಹೊರಟ.

ಮತ್ತೆ ಮುಗುಳ್ನಕ್ಕರು ಗುರುಗಳು.

ಮರುದಿನ ಮತ್ತೆ ಬಂದ.

`ನನ್ನ ಮಗನನ್ನು ನೋಡಿಕೊಳ್ಳಲು ಕೆಲಸದವಳ ವ್ಯವಸ್ಥೆ ಮಾಡಿ ಬಂದಿದ್ದೇನೆ. ಇನ್ನು ಮುಂದೆ ಮನಸ್ಸು ನಿರಾತಂಕವಾಗಿ ಧ್ಯಾನದಲ್ಲಿ ತೊಡಗಬಹುದು’ ಅಂದ.

ಮತ್ತೆ ದೇವಸ್ಥಾನದ ಜಗಲಿಯಲ್ಲಿ ಕಣ್ಣು ಮುಚ್ಚಿ ಕುಳಿತ. ಮನಸ್ಸು ದೇವರ ಧ್ಯಾನದಲ್ಲಿ ಏಕಾಗ್ರಗೊಳ್ಳುತ್ತಿದೆ ಎನ್ನುವಷ್ಟರಲ್ಲಿ ಮಗುವೊಂದರ `ಅಪ್ಪಾ, ಅಮ್ಮಾ’ ಎಂಬ ಧ್ವನಿ ಕೇಳಿಸಿದಂತಾಯಿತು ಆತನಿಗೆ. ಯಾವುದೋ ಮಗು ಭಿಕ್ಷೆ ಬೇಡುತ್ತಿರಬೇಕು ಎಂದುಕೊಂಡು ಕಣ್ಣು ಬಿಡದೆ ಕುಳಿತ. ಸ್ವಲ್ಪ ಹೊತ್ತಿನಲ್ಲಿ ಆ ಧ್ವನಿ ತೀರಾ ಸಮೀಪಕ್ಕೆ ಬಂದಂತೆನಿಸಿತು. ಆದರೂ ಆತ ಕಣ್ತೆರೆದು ನೋಡಲಿಲ್ಲ. ಇಂದು ತಾನು ಧ್ಯಾನದಲ್ಲಿ ಸೋತರೆ ಗುರುಗಳ ಮುಂದೆ ನಗೆಪಾಟಲಿಗೀಡಾಗುತ್ತೇನೆನ್ನುವ ಅಳುಕಿನಲ್ಲಿಯೇ ಮನಸ್ಸು ಗಟ್ಟಿ ಮಾಡಿ ಕುಳಿತ. ಕೆಲವೇ ಕ್ಷಣಗಳಲ್ಲಿ ಎಳೆಯ ಕೈಗಳು ಬಂದು ಆತನನ್ನು ಮುಟ್ಟಿ `ಅಪ್ಪಾ…’ ಅಂದವು.

ಕಣ್ತೆರೆದು ನೋಡುತ್ತಾನೆ, ತನ್ನ ಮಗನೇ ಭಿಕ್ಷುಕ ಬಾಲಕನ ವೇಷದಲ್ಲಿದ್ದಾನೆ. ಎದುರಿನಲ್ಲಿ ಭಿಕ್ಷುಕಿಯೊಬ್ಬಳು ಆ ಮಗುವಿನ ವಾರಸುದಾರಿಣಿಯೆಂಬಂತೆ ನಿಂತಿದ್ದಾಳೆ. ತಕ್ಷಣವೇ ತನ್ನ ಮಗನನ್ನು ಬಿಗಿದಪ್ಪಿ ಎತ್ತಿಕೊಂಡು ಮನೆಯ ಕಡೆಗೆ ಧಾವಿಸಿದನಾತ.

ಗುರುಗಳು ಮತ್ತೆ ನಸುನಕ್ಕರು.

ಹೀಗೆ ತೆರಳಿದ ಆತ ಇಪ್ಪತ್ತೈದು ವರ್ಷಗಳ ಬಳಿಕ ಆ ಗುರುಗಳ ಬಳಿಗೆ ಮತ್ತೆ ಬಂದ.

`ಗುರುಗಳೇ, ಮಗನನ್ನು ಬೆಳೆಸಿ ಅವನ ಕಾಲ ಮೇಲೆ ನಿಲ್ಲಿಸಿದ್ದೇನೆ, ಅವನಿಗೆ ಮದುವೆಯನ್ನೂ ಮಾಡಿದ್ದೇನೆ. ನನಗೀಗ ಲೌಕಿಕದ ಯಾವ ಕರ್ತವ್ಯವೂ ಉಳಿದಿಲ್ಲ, ಯಾವುದರ ಬಗ್ಗೆಯೂ ಮೋಹ ಇಲ್ಲ. ಆದರೆ ಇಲ್ಲಿ ಬಂದು ಧ್ಯಾನ ಮಾಡುತ್ತಾ ಆಧ್ಯಾತ್ಮಿಕ ಸಾಧನೆ ಮಾಡುವ ಅಗತ್ಯವಾಗಲೀ, ಬಯಕೆಯಾಗಲೀ ಈಗ ನನಗಿಲ್ಲ. ಸಮಾಜದಲ್ಲಿ ದಿಕ್ಕಿಲ್ಲದ ಅನಾಥರೆಷ್ಟೋ ಜನಕ್ಕೆ ಸೇವೆ ಮಾಡಬೇಕೆಂದಿದ್ದೇನೆ. ಲೌಕಿಕದ ನೆರಳಿನಲ್ಲೇ ಪಾರಲೌಕಿಕ ಸಾಧನೆ ಮಾಡುವ ಬಗೆಯೂ ನನಗೀಗ ತಿಳಿದಿದೆ’ ಎಂದು ನಮಸ್ಕರಿಸಿ ತೆರಳಿದ.

ಗುರುಗಳು ನೋಡುತ್ತ ನಿಂತರು.

 

 

 

 

 

 

 

 

‍ಲೇಖಕರು G

20 July, 2011

8 Comments

  1. Sukhesh M.G.

    Hmmm…

  2. ಸಿ ಪಿ ನಾಗರಾಜ

    ” ಇಲ್ಲಿ ಬಂದು ಧ್ಯಾನ ಮಾಡುತ್ತಾ ಆಧ್ಯಾತ್ಮಿಕ ಸಾಧನೆ ಮಾಡುವ ಅಗತ್ಯವಾಗಲೀ, ಬಯಕೆಯಾಗಲೀ ಈಗ ನನಗಿಲ್ಲ. ಸಮಾಜದಲ್ಲಿ ದಿಕ್ಕಿಲ್ಲದ ಅನಾಥರೆಷ್ಟೋ ಜನಕ್ಕೆ ಸೇವೆ ಮಾಡಬೇಕೆಂದಿದ್ದೇನೆ. ಲೌಕಿಕದ ನೆರಳಿನಲ್ಲೇ ಪಾರಲೌಕಿಕ ಸಾಧನೆ ಮಾಡುವ ಬಗೆಯೂ ನನಗೀಗ ತಿಳಿದಿದೆ’ ಎಂದು ನಮಸ್ಕರಿಸಿ ತೆರಳಿದ.” – ತುಂಬಾ ಒಳ್ಳೆಯ ಜೀವನ ದೃಷ್ಟಿಯನ್ನು ಸರಳವಾಗಿ ಮತ್ತು ನೇರವಾಗಿ ತಿಳಿಸುವ ಈ ಕತೆಯು ಬಹಳ ಸೊಗಸಾಗಿದೆ . ಅಧ್ಯಾತ್ಮ ಅಥವಾ ಆಧ್ಯಾತ್ಮಿಕ ಸಾಧನೆಯ ಸೋಗಿನಲ್ಲಿ ಆಧುನಿಕ ದೇವಮಾನವರ ಪಾದಕಮಲಗಳ ಬಳಿಯಲ್ಲಿ ಬಿದ್ದು ಹೊರಳಾಡುವ ಮಧ್ಯಮ ಮೇಲುವರ್ಗದ ಭಕ್ತರ ಒಳಗಣ್ಣನ್ನು ತೆರೆಯಿಸುವಂತಿದೆ .

  3. ಆಸು ಹೆಗ್ಡೆ

    “ಲೌಕಿಕದ ನೆರಳಿನಲ್ಲೇ ಪಾರಲೌಕಿಕ ಸಾಧನೆ ಮಾಡುವ ಬಗೆ”ಯನ್ನು ಅರಿತರೆ ಈ ಸಮಾಜದ ಸುಧಾರಣೆಯಾದೀತು!
    ಮಂತ್ರ-ತಂತ್ರ, ಧ್ಯಾನ, ಕುಂಡಲಿನಿ, ವಿದ್ಯೆಗಳ ನೆಪದಲ್ಲಿ ಕೋಟ್ಯಾನು ಕೋಟಿ ಕಬಳಿಸುತ್ತಾ ಈ ಸಮಾಜಕ್ಕೆ ರಾಜಾರೋಷವಾಗಿ ದ್ರೋಹಬಗೆಯುತ್ತಿರುವ, ಪ್ರಚಾರಪ್ರಿಯ ಗುರುಗಳಿಗೆಲ್ಲಾ ತಪರಾಕಿ ನೀಡಿದಂತಿದೆ, ಈ ಮಾತು.

  4. Vasanth

    Hermann Hesse’s Novel Siddarath is coming to my mind.

  5. charan

    if half of the world knows how to help others, this place can easily replace heaven…
    an eye-opening story indeed… 🙂

  6. Vidyarashmi Pelathadka

    thanks all. @ Vasanth,I will read Herman Hesse’s novel, thank you.

  7. dinesh patwardhan

    bduke vichitra. aadu aneka putgala etihasa, baredastu, bagedastu mugiyada adyaya. asto tande tarayandira jotege makkalu bhikse beduttare ! antha virudhya !

  8. D.RAVIVARMA

    nimma kathe tunva impressive agide bidabekennuvudu astu saralavalla bitenendare bidadee maye but neeevu konege kotta message illiddu esamajada jote ondistu seve madi alliye krutartaraguvudu ideyalla adu arthapoorna tumba chanda kathe barethiri marayre vijaya next nallu nimma lekhana oduttiruve bareyuttiri d.ravi varma hospet

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading