* ವಿದ್ಯಾರಶ್ಮಿ ಪೆಲತ್ತಡ್ಕ
ಅಚಿಂತ್ಯನೆಂಬೋ ಮಹಾಜ್ಞಾನಿ ಇದ್ದ. ಈತ ಊರ ಹೊರವಲಯದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ.
ಒಂದು ದಿನ ಈತನ ಬಳಿ ಆ ರಾಜ್ಯದ ಮಹಾರಾಜ ಬಂದು ತನ್ನ ಪುತ್ರನಿಗೆ ಜ್ಞಾನಧಾರೆಯೆರೆಯಬೇಕೆಂದು ಕೇಳಿಕೊಂಡ. ಅಚಿಂತ್ಯ ಯಾವುದೇ ಮಾತಾಡಲಿಲ್ಲ. ಆತನ ಮೌನವನ್ನೇ ಸಮ್ಮತಿಯೆಂದು ತಿಳಿದುಕೊಂಡ ರಾಜ ತನ್ನ ಪುತ್ರ ಅರ್ಕನನ್ನು ಅಚಿಂತ್ಯನ ಬಳಿ ಬಿಟ್ಟುಹೊದ.
ಅಂದಿನಿಂದ ಅರ್ಕ ಸದಾ ಅಚಿಂತ್ಯನ ಮಾರ್ಗದರ್ಶನಕ್ಕಾಗಿ ಎದುರು ನೋಡತೊಡಗಿದ.
ವಾರವಾಯಿತು, ತಿಂಗಳೇ ಕಳೆಯಿತು. ಅಚಿಂತ್ಯನಿಂದ ಅರ್ಕನಿಗೆ ಯಾವ ಬೋಧನೆಯೂ ಆಗಲಿಲ್ಲ. ಒಂದು ದಿನ ಅರ್ಕ ತಾನೇ ಗುರುವನ್ನು ಕೇಳಿದ,
‘ಗುರುಗಳೇ, ನೀವೇಕೆ ನನಗ್ಯಾವ ಪಾಠವನ್ನೂ ಹೇಳುತ್ತಿಲ್ಲ?’
ಅಚಿಂತ್ಯ ಯಾವ ಪ್ರತಿಕ್ರಿಯೆಯನ್ನೂ ನೀಡದೆ ತನ್ನ ಪಾಡಿಗೆ ತಾನಿದ್ದ. ಅರ್ಕ ಸುಮ್ಮನಾದ. ತನ್ನ ಪಾಡಿಗೆ ಆಶ್ರಮದಲ್ಲಿ ಕಾಲಕಳೆಯಹತ್ತಿದ. ಹೀಗೇ ದಿನಗಳು ಕಳೆಯುತ್ತಲೇ ಹೋದವು. ಆರು ತಿಂಗಳ ಬಳಿಕ ಮತ್ತೆ ಅರ್ಕ ಪ್ರಶ್ನಿಸಿದ,
‘ಗುರುಗಳೇ, ನನಗೇಕೆ ನೀವು ಮಾರ್ಗದರ್ಶನ ಮಾಡುತ್ತಿಲ್ಲ?’
ಈಗಲೂ ಅಚಿಂತ್ಯ ಯಾವುದೇ ಮಾತಾಡಲಿಲ್ಲ. ಅರ್ಕ ಮತ್ತೆ ಸುಮ್ಮನಾದ. ತಿಂಗಳುಗಳುರುಳಿ ಒಂದು ವರ್ಷವೇ ಕಳೆಯಿತು. ಅರ್ಕನಿಗೆ ತಾಳ್ಮೆ ತಪ್ಪಿತು. ಅಚಿಂತ್ಯನ ಆಶ್ರಮ ಬಿಟ್ಟು ತೆರಳಿಯೇ ಬಿಟ್ಟ. ಆದರೆ, ಅರ್ಕ ಜ್ಞಾನವಂತನಾಗದೆ ಅರಮನೆಗೆ ತೆರಳುವಂತಿರಲಿಲ್ಲ. ಬದುಕಲು ಯಾವುದೇ ಮಾರ್ಗ ತಿಳಿದಿರಲೂ ಇಲ್ಲ.
ಊರ ಹೊರವಲಯದಲ್ಲಿದ್ದ ಅಚಿಂತ್ಯನ ಆಶ್ರಮ ಬಿಟ್ಟು ಕಾಡಿನಲ್ಲಿ ನಡೆಯುತ್ತ ಹೊರಟವನಿಗೆ ಎರಡು ದಿನಗಳ ಕಾಲ ಸರಿಯಾಗಿ ಆಹಾರವೇ ಸಿಗದೆ ಸೋತು ಸುಣ್ಣವಾದ. ಹೀಗೆ ಹಸಿದು ಹಸಿದು ನಡೆಯುವುದಕ್ಕೂ ಶಕ್ತಿ ಸಾಲದೆ ಮರದ ಬುಡಕ್ಕೆ ಒರಗಿದ್ದಾಗ ಆ ದಾರಿಯಲ್ಲೇ ಸಾಗುವಾತನೊಬ್ಬ ಅರ್ಕನನ್ನು ಕಂಡು ಕನಿಕರದಿಂದ ತನ್ನ ಬುತ್ತಿಯಲ್ಲಿ ಅರ್ಧದಷ್ಟನ್ನು ನೀಡಿದ. ದಿನವೂ ಮೃಷ್ಟಾನ್ನ ಭೋಜನ ಮಾಡುತ್ತಿದ್ದ ಅರ್ಕನಿಗೆ ಆ ತಂಗಳನ್ನವೂ ಇಷ್ಟವಾಯಿತು. ‘ಹಸಿವಾಗಿ ಉಂಡರೇ ಅನ್ನ ರುಚಿ’ ಎನ್ನುತ್ತಾ ಆ ದಾರಿಹೋಕ ಅರ್ಕನನ್ನು ಬೀಳ್ಕೊಂಡ.
ಅರ್ಕ ಇನ್ನೂ ಒಂದಷ್ಟು ಮುಂದೆ ಹೋದಾಗ ಎಣ್ಣೆ ತಯಾರಿಸುವ ಗಾಣಿಗನೊಬ್ಬ ಎದುರಾದ. ತಾನು ಈ ನಾಡಿನ ಯುವರಾಜನೆಂದು ಪರಿಚಯಿಸಿಕೊಂಡು ತನಗೆ ಆಹಾರ ಬೇಕೆಂದು ಕೇಳಿದ ಅರ್ಕನಿಗೆ ಗಾಣಿಗ ಯಾವ ಕರುಣೆಯನ್ನೂ ತೋರಲಿಲ್ಲ. ಊಟ ಬೇಕಿದ್ದರೆ ನಾಲ್ಕು ಗಂಟೆಗಳ ಕಾಲ ಎಣ್ಣೆ ಯಂತ್ರವನ್ನು ತಿರುಗಿಸು ಎಂದ. ಬೇರೆ ದಾರಿಗಾಣದೆ ಯುವರಾಜ ಆ ಕೆಲಸ ಮಾಡಿದ, ಉಂಡು ಹೊರಟ. ಗಾಣಿಗ ಅರ್ಕನನ್ನು ಬೀಳ್ಕೊಡುತ್ತಾ ಹೇಳಿದ, ‘ಕಷ್ಟಪಟ್ಟು ಸಂಪಾದಿಸಿದ ಆಹಾರ ತಿನ್ನುವುದರಲ್ಲಿ ಇರೋ ತೃಪ್ತಿ ಬೇರಾವುದರಲ್ಲೂ ಇಲ್ಲ’
ಇನ್ನಷ್ಟು ಮುಂದೆ ಹೋದಾಗ ರೈತನೊಬ್ಬ ಜಮೀನಿನಲ್ಲಿ ಉಳುತ್ತಿರುವುದು ಕಾಣಿಸಿತು. ಅರ್ಕ ತಾನಾಗಿ ಆ ರೈತನ ಕೈಯಿಂದ ನೇಗಿಲು ಪಡೆದು ಉಳಲು ಶುರುಮಾಡಿದ. ಆದರೆ, ಹೊಲ ಉಳುವ ವಿಧಾನವನ್ನು ತಿಳಿಯದ ಅರ್ಕ ರೈತನಂತೆ ಉಳುವುದಕ್ಕಾಗದೆ ಆತನ ಕಾಲಿಗೆ ಗಾಯವಾಯಿತು. ರೈತ ಶುಷ್ರೂಷೆ ಮಾಡುತ್ತಾ, ‘ನೀನು ನಾನು ಹೊಲ ಉಳುವ ವಿಧಾನವನ್ನು ನೋಡದೇ ನೇಗಿಲು ಹಿಡಿದು ಉಳಲಾರಂಭಿಸಿದೆ. ಕಾಯಕಕ್ಕೆ ಹೊರಡುವ ಮುನ್ನ ಅನುಭವಿಗಳ ಕೆಲಸವನ್ನು ನೋಡಿ ಕಲಿಯುವ ತಾಳ್ಮೆ ಬೇಕು’ ಎಂದ.

ಈ ಮೂವರನ್ನೂ ಬೀಳ್ಕೊಂಡ ಅರ್ಕ ಒಂದು ವರ್ಷದ ತನಕ ಯಾರ ಕಣ್ಣಿಗೂ ಬೀಳಲಿಲ್ಲ.
ವರ್ಷದ ಬಳಿಕ ಮತ್ತೆ ಅಚಿಂತ್ಯನ ಬಳಿ ಬಂದ. ಬಂದವನೇ, ‘ಗುರುಗಳೇ, ಅಂದು ನಿಮ್ಮ ಬಳಿ ಬಂದಾಗ ನನಗೆ ಜ್ಞಾನದ ಹಸಿವು ಇರಲಿಲ್ಲ. ಜ್ಞಾನವನ್ನು ಕಷ್ಟಪಟ್ಟು ಸಂಪಾದಿಸಬೇಕೆಂಬ ಪ್ರಜ್ಞೆಯೂ ಇರಲಿಲ್ಲ. ನಿಮ್ಮನ್ನು ನೋಡಿ ಕಲಿಯುವ ತಾಳ್ಮೆಯೂ ಇರಲಿಲ್ಲ. ಈಗ ನನ್ನ ಒಳಗಣ್ಣು ತೆರೆದಿದೆ. ಕಳೆದೊಂದು ವರ್ಷದಲ್ಲಿ ನಾನಾಗಿಯೇ ಕೊಂಚ ಅಧ್ಯಯನವನ್ನೂ ಮಾಡಿದ್ದೇನೆ. ಹೆಚ್ಚಿನ ಜ್ಞಾನಸಂಪಾದನೆಗೆ ನಿಮ್ಮ ಮಾರ್ಗದರ್ಶನ ಬೇಕು. ಮಾಡುವಿರಾ?’ ಎಂದ.
ಅಚಿಂತ್ಯ ನಸುನಕ್ಕು ಅರ್ಕನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ.






ಸರಳವಾಗಿದೆ…ಚೆನ್ನಾಗಿದೆ…
good preachings from VRP…thro guru 🙂
Story thumba chengidey. Esata ayethu
Rashmi….impressively interesting and simple..
ಅದ್ಬುತ ಬರಹ,ಚನ್ನಾಗಿದೆ.
ಎಲ್ಲರಿಗೂ ಥ್ಯಾಂಕ್ಸ್..
good one!
kathe tumba impressive agide.kate bariyodannu namagu swalpa helikodi d.ravi varma hospet