ಶಿವಕುಮಾರ ಎಂ

ಕೇಂದ್ರ ಸರ್ಕಾರದಿಂದ ಬೃಹತ್ ಯೋಜನೆಯಾದ ಬುಲೆಟ್ ಟ್ರೈನ್ ಹೈಸ್ಪೀಡ್ ಟ್ರೇನ್‌ಗಳಂತಹ ಕನಸನ್ನು ಕಾಣುತ್ತಿರುವುದನ್ನು ನೋಡುತ್ತಿದ್ದರೆ, ಭಾರತೀಯ ರೈಲ್ವೆ ಈ ದೇಶದ ಜನಸಾಮಾನ್ಯರಿಂದ ದೂರ ಓಡಬಹುದು ಎಂಬ ಅನುಮಾನ ಹುಟ್ಟುತ್ತಿದೆ. ಜೊತೆಗೆ ರೈಲು ನಿಲ್ದಾಣಗಳನ್ನು ಖಾಸಗೀಕರಣ ಮಾಡುವುದಕ್ಕೆ ಈ ಯೋಜನೆಯನ್ನು ಕಲ್ಪಿಸಿಕೊಂಡಿವೆ. ಒಂದು ಕಡೆ ಭಯದ ಛಾಯೆ ಆವರಿಸಿದರೆ, ಮತ್ತೊಂದು ಕಡೆ ದುಃಖವು ಕಟ್ಟಿಟ್ಟ ಬುದ್ಧಿ. ಏಕೆಂದರೆ ಬೆಂಗಳೂರಿನಲ್ಲಿ ಸಧ್ಯಕ್ಕೆ ಓಡಾಡುತ್ತಿರುವ ನಮ್ಮ ಮೆಟ್ರೋ 2006 ಏಪ್ರಿಲ್ 25 ರಂದು ಕೇಂದ್ರ ಸಂಪುಟದಲ್ಲಿ ಅನುಮೋದನೆ ಪಡೆಯಿತು. ಮೊದಲ ವಿಭಾಗದಲ್ಲಿ ಕಾಮಗಾರಿಯ ನಿರ್ಮಾಣ, ರೀಚ್ 1 ಬೈಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆ ನಡುವೆ ನೇರಳೆ ಮಾರ್ಗವು, 15 ಏಪ್ರಿಲ್ 2007 ರಂದು ಆರಂಭವಾಯಿತು. ದೇಶದ ಕೆಲವು ನಗರಗಳಲ್ಲಿ ಮೆಟ್ರೋ ರೈಲುಗಳು ನಷ್ಟದಲ್ಲೆ ಓಡುತ್ತಿರುವುದನ್ನ ನಾವು ಕಾಣಬಹುದು. ಇದರ ಬೆನ್ನಲ್ಲೇ ದೇಶಾದ್ಯಂತ ಬುಲೆಟ್ ಟ್ರೈನ್ ಓಡಾಡಿಸುವ ಆಸೆ ಪ್ರಧಾನಿ ನರೇಂದ್ರ ಮೋದಿಯವರದ್ದು. ಈ ಬುಲೆಟ್ ಟ್ರೈನಿನ ಮಾರ್ಗದ ಕಾಮಗಾರಿ ಮುಗಿಯುವ ವಿಷಯವು ಅಸ್ಪಷ್ಟ. ಎಷ್ಟು ರೈತರ ಭೂಮಿ ಈ ಕಾಮಗಾರಿಯ ವಶಕ್ಕೆ ಹೋಗುವುದು? ಎಲ್ಲವು ಅಸ್ಪಷ್ಟ.
“ಮೈಸೂರು-ಬೆಂಗಳೂರು- ಚೆನ್ನೈ ಮಧ್ಯೆ ಗಂಟೆಗೆ 320 ಕಿ.ಮೀ. ವೇಗದಲ್ಲಿ ಚಲಿಸುವ ಬುಲೆಟ್ ಟ್ರೇನ್ ಯೋಜನೆ ಕುರಿತ ಅಂತಿಮ ಕಾರ್ಯಸಾಧ್ಯತಾವರದಿಯನ್ನು ಭಾರತ ಸರಕಾರಕ್ಕೆ ಜರ್ಮನಿ ಸಲ್ಲಿಸಿದೆ” ಎಂದು ಎಲ್ಲಾ ಮಾಧ್ಯಮ ಗಳು ವರದಿ ಮಾಡಿವೆ. ಇದಕ್ಕೆ ಜರ್ಮನ್ ರಾಯಭಾರಿ ಮಾರ್ಟಿನ್ ನೇಯ್ ರೈಲ್ವೇ ಮಂಡಳಿಯ ಅಧ್ಯಕ್ಷ ಅಶ್ವನಿ ಲೋಹಾನಿ ಅವರಿಗೆ ವರದಿ ಸಲ್ಲಿಸಿದ್ದಾರೆ. 435 ಕಿ.ಮೀ ದೂರವನ್ನು ಕೇವಲ 2 ಗಂಟೆ 25 ನಿಮಿಷದಲ್ಲಿ ಕ್ರಮಿಸುವ ಈ ಯೋಜನೆಗೆ 1 ಲಕ್ಷ ಕೋಟಿ ರೂ ವೆಚ್ಚ ತಗುಲುವ ಅಂದಾಜು ಮಾಡಲಾಗಿದ್ದು, ಇದರ ಸಂಪೂರ್ಣ ವೆಚ್ಚವನ್ನು ಜರ್ಮನಿ ಸರಕಾರವೇ ಒದಗಿಸುತ್ತದೆ ಎಂದು ತಿಳಿಸಿದ್ದಾರೆ. ಈ ಕಾಮಗಾರಿಗೂ ಮೊದಲು ಗುಜರಾತಿನ ಅಹ್ಮದಾಬಾದ್ ಮತ್ತು ಮುಂಬೈ ನಡುವೆ ಬುಲೆಟ್ ಟ್ರೈನ್ ಯೋಜನೆಗೆ ಜಪಾನ್ ಸರ್ಕಾರ ಸಾಲ ನೀಡಲು ಮುಂದೆ ಬಂದಿದ್ದಾಗಿದೆ. ಇದು ಸುಮಾರು 1.10 ಲಕ್ಷ ಕೋಟಿ ರೂಪಾಯಿ ವೆಚ್ಚದ ಯೋಜನೆ. ಮುಂಬೈ-ಅಹಮದಾಬಾದ್ ನಡುವಿನ 508 ಕಿ.ಮೀ ದೂರವನ್ನು 2.58 ಗಂಟೆಯಲ್ಲಿ ಕ್ರಮಿಸಬಹುದಾದ ಹೈಸ್ಪೀಡ್ ಹಾಗೂ ಕೇವಲ 2.07 ಗಂಟೆಯಲ್ಲಿ ತಲುಪಬಹುದಾದ ರ್ಯಾಪಿಡ್ ಹೈಸ್ಪೀಡ್ ಆಯ್ಕೆಯಿದೆಯಂತೆ. ಇದು ಯಾವ ರೀತಿಯ ವ್ಯವಹಾರವೆಂಬುದು ತಿಳಿಯುತ್ತಿಲ್ಲ. ಅಥವಾ ವ್ಯಾಪಾರ ಸಂಬಂಧ ಗಟ್ಟಿ ಮಾಡಿಕೊಳ್ಳುವುದಕ್ಕೆ ಬುಲೆಟ್ ಟ್ರೈನ್ ಯೋಜನೆಯ ವ್ಯವಸ್ಥೆಯನ್ನು ಮುಂದಿಟ್ಟುಕೊಂಡಿದ್ದಾರೆನೋ?

ಈ ಬುಲೆಟ್ ಟ್ರೈನ್ ಹೊರತಾಗಿ ನಮ್ಮಲ್ಲಿರುವ ರೈಲ್ವೆ ಇಲಾಖೆಗೆ ಬಂದರೆ ಪ್ರತಿದಿನ 1.8 ಕೋಟಿಗೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ, 3 ಕೋಟಿ ಟನ್‌ಗೂ ಹೆಚ್ಚಿನ ಸರಕನ್ನು ಸಾಗಾಟ ಮಾಡುವ, ಪ್ರಪಂಚದ ಅತಿದೊಡ್ಡ ಮತ್ತು ಅತಿ ಚಟುವಟಿಕೆಯ ಭಾರತೀಯ ರೈಲ್ವೆ ಹಾಗೂ 16 ಲಕ್ಷಕ್ಕೂ ಹೆಚ್ಚಿನ ನೌಕರರನ್ನು ಹೊಂದಿರುವ ದೇಶ ನಮ್ಮದು. 67,312 ಸಾವಿರ ಕಿಲೋಮೀಟರ್ ಉದ್ದದ ರೈಲು ಮಾರ್ಗ ಹೊಂದಿರುವ, ಪ್ರತಿದಿನ 12,617 ಪ್ರಯಾಣಿಕ ರೈಲುಗಳು ಹಾಗೂ 7,421 ಸರಕು ರೈಲುಗಳು ಸಂಚರಿಸುವ ಭಾರತೀಯ ರೈಲ್ವೆ ಇಲಾಖೆ ಖಾಸಗಿ ವಲಯದ ಒಡೆತನಕ್ಕೆ ಸಿಕ್ಕಿ ಶ್ರೀಸಾಮಾನ್ಯರಿಂದ ದೂರವಾಗಬಹುದು ಎಂಬ ಪ್ರಶ್ನೆ ಕಾಡುತ್ತಿದೆ. ಮೋದಿ ಸರ್ಕಾರದ ಉದ್ದೇಶವನ್ನು ಗಮನಿಸಿದರೆ ವಿದೇಶಿ ಹೂಡಿಕೆಗೆ ಆಹ್ವಾನ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಆರೈಕೆಗಳು ಹೆಚ್ಚಾದಂತೆ ಕಾಣುತ್ತಿದೆ. ವರ್ಷಕ್ಕೆ ಎರಡು ಬಾರಿ ರೈಲ್ವೆ ಪ್ರಯಾಣ ಮತ್ತು ಸಾಗಾಣಿಕೆ ದರವನ್ನು ಹೆಚ್ಚಿಸುತ್ತಿದ್ದಾರೆ. ಅಲ್ಲದೆ ರೈಲ್ವೆ ಬಜೆಟ್ನಲ್ಲಿ ಸಚಿವರು ರೈಲ್ವೆ ಇಲಾಖೆಯ ಅಭಿವೃದ್ದಿಗೆ 6 ರಿಂದ 8 ಲಕ್ಷ ಕೋಟಿ ರೂ, ಹೂಡಿಕೆಯ ಅಗತ್ಯವಿದೆ, ಆದರೆ ನಮ್ಮಲ್ಲಿ ಹಣವಿಲ್ಲ ಎಂದು ಪ್ರತಿ ಬಜೆಟ್ನಲ್ಲೂ ಹೇಳುತ್ತಲೆ ಬಂದಿದ್ದಾರೆ. ಆದರೆ ಬುಲೆಟ್ ರೈಲಿನ ಯೋಜನೆಗೆ ಹಣವನ್ನು ಎಲ್ಲಿಂದ ತರುತ್ತಾರೆ? ಹಿಂದಿನ ಯುಪಿಎ ಸರ್ಕಾರ 2012ರ ಫೆಬ್ರವರಿಯಲ್ಲಿ ರೈಲ್ವೆ ದರ ಏರಿಸಿದ್ದನ್ನು ಅಂದು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕಟುವಾಗಿ ಖಂಡಿಸಿದ್ದರು. “ಲೋಕಸಭೆಯಲ್ಲಿ ಚರ್ಚಿಸದೇ ಹಿಂದಿನ ಬಾಗಿಲ ಮೂಲಕ ರೈಲ್ವೆ ದರಗಳನ್ನು ಏರಿಸಿ, ಲೋಕಸಭೆಯ ಸಾರ್ವಭೌಮತೆಗೆ ಯುಪಿಎ ಸರ್ಕಾರ ಧಕ್ಕೆಯನ್ನು ಉಂಟುಮಾಡಿದೆ. ಶೀಘ್ರದಲ್ಲಿ ರಾಷ್ಟ್ರದ ಅರ್ಥವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ದರಗಳ ಹೆಚ್ಚಳವನ್ನು ಹಿಂಪಡೆಯಬೇಕು’ ಎಂದಿದ್ದರು. ಇಂದು ಪ್ರಧಾನಿಯವರು ರೈಲ್ವೆ ದರ ಏರಿಕೆಯ ಬಗ್ಗೆ ಮೌನ ದರ್ಶನವನ್ನು ಕೊಡುತ್ತಿದ್ದಾರೆ.
ಸದ್ಯಕ್ಕಿರುವ ರೈಲ್ವೆ ವ್ಯವಸ್ಥೆಯನ್ನೇ ಸರಿಯಾಗಿ ತೂಗಿಸದೆ, ಗುಜರಾತ್‌ನ ಅಹಮದಾಬಾದ್ ನಿಂದ ಮುಂಬೈಗೆ ದೇಶದ ಮೊದಲ ಬುಲೆಟ್ ಟ್ರೇನನ್ನು ಮತ್ತು ಮೈಸೂರು-ಬೆಂಗಳೂರು-ಚೆನೈ ಎರಡನೇ ಹಂತದ ಟ್ರೈನಿನ ಯೋಜನೆಗೆ ಕೈ ಹಾಕಿದೆ. ಇದರ ಜೊತೆಯಲ್ಲೇ ದಿಲ್ಲಿ-ಆಗ್ರಾ, ದಿಲ್ಲಿ-ಚಂಡೀಗಢ, , ಮುಂಬೈ-ಗೋವಾ, ಹೈದರಾಬಾದ್-ಸಿಕಂದರಾಬಾದ್ ನಡುವೆಯೂ ಸೂಪರ್‌ಫಾಸ್ಟ್ ಟ್ರೇನ್ ಸಂಚರಿಸಲಿವೆ ಎಂದು ಹೇಳಿದ್ದಾರೆ.
ಈ ರೈಲುಗಳ ಮೇಲೆ ಹೂಡಿಕೆ ಮಾಡಲು ಸ್ವದೇಶವನ್ನು ಬಿಟ್ಟು, ವಿದೇಶಿ ಬಂಡವಾಳಿಗರನ್ನು ಕರೆಯುತ್ತಿರುವುದನ್ನು ನೋಡಿದರೆ, ಇದು ಜನ ಸಾಮಾನ್ಯರ ರೈಲಲ್ಲವೆಂದು ಸ್ಪಷ್ಟವಾಗಿ ಕಾಣುತ್ತಿದೆ. ಒಬ್ಬರಿಗೆ 5 ಸಾವಿರದಿಂದ 6 ಸಾವಿರವರೆಗೆ ದರವಿಡುವ ಈ ರೈಲುಗಳು ಸಿರಿವಂತರ ಸಂಚಾರದ ಸಾಧನಗಳಾಗಬಹುದು. ಕಳೆದ ವರ್ಷ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು “ಬುಲೆಟ್ ರೈಲು ಅಲ್ಲ. ಇದು ಮೋದಿಯ ಎಲೆಕ್ಷನ್ ರೈಲು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿಯೇ ಈ ಯೋಜನೆ ಸಿದ್ದಪಡಿಸಲಾಗಿತ್ತು. 2005 ರಿಂದ ಬುಲೆಟ್ ಟ್ರೈನ್ ಯೋಜನೆಗೆ ತಯಾರಿ ನಡೆದಿದೆ. ಮೂರು ವರ್ಷದಿಂದ ಸುಮ್ಮನಿದ್ದ ಮೋದಿ ಈಗ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಮುಂಬೈ-ಅಹಮದಾಬಾದ್ ಮಧ್ಯೆ 12 ನಿಲ್ದಾಣ ಬರಲಿವೆ. ಬುಲೆಟ್ ರೈಲಿಗೆ 12 ನಿಲ್ದಾಣಗಳು ಯಾಕೆ? ಅದರಲ್ಲೂ ಗುಜರಾತ್ನಲ್ಲೇ ಅತ್ಯಧಿಕ ನಿಲ್ದಾಣಗಳು ಬರಲಿದೆ. ಹೀಗಾಗಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿಗಿಂತ ಕಡೆಯಾಗಿ ಬುಲೆಟ್ ರೈಲು ನಿಲ್ದಾಣ ತಲುಪಲಿದೆ ಎಂದು ವ್ಯಂಗ್ಯವಾಡಿದರು.

ರೈಲ್ವೆ ವ್ಯವಸ್ಥೆಯನ್ನು ಚೀನಾ, ಜಪಾನ್, ಯೂರೋಪ್ ದೇಶಗಳ ಮಾದರಿಯಲ್ಲಿ ಮಾಡುವುದಕ್ಕಿಂತ, ಈಗಾಗಲೇ ಇರುವ ರೈಲ್ವೆ ಪ್ರಯಾಣ ದರ ಇಳಿಕೆ, ಐಟಿಐ, ಡಿಪ್ಲೊಮಾ ಮಾಡಿದ ವಿದ್ಯಾರ್ಥಿಗಳಿಗೆ ಇಲಾಖೆಯಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿಸಿದರೆ, ನಮ್ಮವರು ನೆಮ್ಮದಿಯಿಂದ ಬದುಕುತ್ತಾರೆ. ಜರ್ಮನಿ ಮತ್ತು ಜಪಾನ್ ದೇಶಗಳು ಈ ಬುಲೆಟ್ ಟ್ರೈನ್ ಯೋಜನೆಗೆ ಕಡಿಮೆ ಬಡ್ಡಿಗೆ, ದೀರ್ಘಾವಧಿ ನೆಲೆಯಲ್ಲಿ ಭಾರತಕ್ಕೆ ದೊಡ್ಡ ಮೊತ್ತದ ಸಾಲ ನೀಡುತ್ತಿದ್ದರೂ, ಮುಂದೊಂದು ದಿನ ಈ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಹೋದರೆ ದೇಶ ಪರಿಸ್ಥಿತಿ ಯಾವ ಹಂತಕ್ಕೆ ಹೋಗುತ್ತದೆ ಎಂಬುದು ಊಹಿಸಲು ಅಸಾಧ್ಯವಾಗಿದೆ.






0 Comments