ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಶ್ರೀ ಹಾಲಾಡಿ ಹೊಸ ಕವಿತೆ – ಆ ನಿರ್ಭಾವುಕ ಪಯಣ…

ವಿಜಯಶ್ರೀ ಹಾಲಾಡಿ

ಆ ಸುದೀರ್ಘ ಕಡು
ಇರುಳ ಪಯಣದಲ್ಲಿ
ದಡಿಯ ಬೆಕ್ಕು ಪಕ್ಕ
-ದಲ್ಲೇ ಕುರುಗುಡುತ್ತಿತ್ತು
ಬಿಸಿ ಕಾಫಿಯ ಹಾಗೆ
ಅವನೋ ಹೊಗೆಯಾಡು
ತ್ತಲೇ ಇದ್ದ ಎಂದಿನಂತೆ
ನೆತ್ತರಂತೆ …..
ಕಗ್ಗತ್ತಲ ತಿರುವು
-ಗಳಲ್ಲಿ ನನ್ನೊಳಗೆ
ಹಸಿರು ಮರ-ಉದುರಿದ
ತರಗೆಲೆ ಒಣಕೊಂಬೆ
ನೆಲದೆದೆಗೆ ಸ್ಪರ್ಶಿಸುವ
ನೀಲ ಹೂಪಕಳೆಗಳು
ಅಲೆದಾಡುತ್ತಿದ್ದವು.
ಕಣಿವೆ ಹುಲ್ಲಿನ ಗಂಧ
ಬೇಡವೆಂದರೂ ಅಡರುತ್ತಿತ್ತು
ಪರ್ವತಗಳು ಹೊಗೆ
ಎಬ್ಬಿಸಿದಂತೆ ಭಾಸ
-ವಾಗುತ್ತಿದ್ದವು
ಮೆಲ್ಲಗೆ ತುಸು ಹದ
ವಾಗಿ ಬೆಕ್ಕು
ಗುರುಗುಟ್ಟುತ್ತಿತ್ತು.

ಅವನ ನಿರ್ಭಾವುಕ
ಕಣ್ಣು ಮೂಗು ತುಟಿ
-ಗಳತ್ತ ದಿಟ್ಟಿಸಿದೆ
ಅದೆಲ್ಲಿಂದಲೋ ಅಲೆ
ಅಲೆಯಾಗಿ ಬಂದ
ಸಂಗೀತವೂ ಮುಗಿಯಿತು
ನಡುವೆ ಬಿದ್ದುಕೊಂಡ
ಗಾಢಮೌನಕ್ಕೆ ಮುತ್ತಿಟ್ಟು
ಕತ್ತಲಿಗೆ ಮಿದು ಬೆರಳಿಟ್ಟೆ
ನೇರಳೆ ಹಳದಿ ಊದಾ
ಬಣ್ಣಗಳು ಮೂವರನ್ನೂ
ಆವರಿಸಿದವು …
ಹೊಳೆವ ಬೆಕ್ಕಿನ
ಕಣ್ಣುಗಳೆದುರು
ಗುನುಗಿಕೊಳ್ಳತೊಡಗಿದೆ
ಕೇವಲ ನನ್ನೊಂದಿಗೆ …

‍ಲೇಖಕರು Admin

1 September, 2022

1 Comment

  1. ನೂತನ ದೋಶೆಟ್ಟಿ

    ಸುತ್ತ ನಡೆಯುತ್ತಿರುವಂತೆ ತಣ್ಣನೆಯ …ವಿಶಿಷ್ಟ ಅನುಭವ ಕೊಡುತ್ತೆ ಇದರ ಓದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading