ನಾರಾಯಣ ಯಾಜಿ
**
ವಿಶ್ವ ಪ್ರಸಿದ್ಧ ಇಂಗ್ಲೀಷ್ ಕವಿ ಮತ್ತು ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಬರೆದ ನಾಟಕ ‘ಒಥೆಲೋ.’
ಸಾಹಿತಿ ನಾರಾಯಣ ಯಾಜಿ ಅವರು ಈ ನಾಟಕದ ಎರಡು ಮುಖ್ಯ ಪಾತ್ರಗಳ ಕುರಿತು ಬರೆದ ಬರಹ ಇಲ್ಲಿದೆ.
ಈ ಸಂಚಿಕೆಯಲ್ಲಿ ನಿಮ್ಮ ಮುಂದೆ ಬಂದಿದ್ದಾನೆ- ಇಯಾಗೋ
**
ಕೇಡಿಗ ಇಯಾಗೋ ಸಂಕೀರ್ಣತೆಯ ಸ್ವಸಮ್ಮೋಹಿತ ವ್ಯಕ್ತಿ
ವಿಲಿಯಂ ಷೇಕ್ಸ್ ಪಿಯರ್ ನಾಟಕಗಳಲ್ಲಿ ಬಹುವಾಗಿ ಕಾಡುವುದು “ಒಥೆಲೋ” ನಾಟಕದ ಡೆಸ್ಡಿಮೋನಾಳ ಪಾತ್ರ. ಬೆಳದಿಂಗಳ ಬಾಲೆಯಾದ ಇವಳು ತನ್ನ ತಂದೆ ಬಂಧು ಬಾಂಧವರೆಲ್ಲರ ವಿರೋಧವನ್ನು ಕಟ್ಟಿಕೊಂಡು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ತನ್ನ ಗಂಡ ಒಥೆಲೋನಿಂದಲೇ ಅವಳು ಒದ್ದಾಡುತ್ತಾ ಸಾಯುವಾಗ ಮನ ಮುಲುಕಾಡುತ್ತವೆ.
“ಇಂದು ಕೊಲ್ಲದಿರು ನನ್ನರಸ, ನಾಳೆ ಬೇಕಾದರೆ ಕೊಲ್ಲು, ಇದೊಂದು ರಾತ್ರಿ ನನ್ನನ್ನು ಬದುಕಲು ಬಿಡು; ಕನಿಷ್ಟ ಒಂದರ್ಧ ಗಂಟೆಯಾದರೂ ಬದುಕಲು ಬಿಡು” ಎಂದು (Kill me to-morrow: let me live to night…) ಗೋಳಿಡುತ್ತಿದ್ದರೂ ಬಿಡದೇ ಕುತ್ತಿಗೆ ಹಿಚುಕುವ ದೃಶ್ಯ ಎದೆಯೊಳಗೆ ಕಂಪನ ಮೂಡಿಸುತ್ತದೆ. ಪೂರ್ತಿ ಸಾಯದೇ ಒದ್ದಾಡುತ್ತಿರುವಾಗಲೂ ತನ್ನ ಸಖಿ ಎಮಿಲಿಯಾಳ ಹತ್ತಿರ “ತಾನು ಅಕಳಂಕಿತೆ, ತನ್ನ ಸಾವಿಗೆ ಯಾರೂ ಕಾರಣರಲ್ಲ; ತಾನೇ (Nobody; I myself. Farewell Commend me to my kind lord: O, farewell) ತನ್ನ ದಯಾಳುವಾದ ದೊರೆಗೆ ತನ್ನನ್ನು ನೆನಪಿಸು, ಶುಭವಾಗಲಿ” ಎನ್ನುತ್ತಾ ಸಾಯುವಾಗಿನ ದೃಶ್ಯವನ್ನು ಓದಲಾಗದೇ ಪುಸ್ತಕವನ್ನು ಮಡಿಸಿಟ್ಟಿರುವುದೂ ಇದೆ. ಬದುಕಿನಲ್ಲಿ ಸಾವಿರ ಕನಸನ್ನು ಕಟ್ಟಿಕೊಂಡು ‘ಸೈಪ್ರಸ್ಸಿ’ಗೆ ಬಂದ ಈಕೆಗೆ ತನ್ನ ತಾಯ್ನಾಡನ್ನು ಒಮ್ಮೆ ನೋಡಬೇಕೆನ್ನುವ ಕನಸು ನನಸಾಗುವುದೇ ಇಲ್ಲ.
ಈ ದುರಂತಕ್ಕೆ ಕಾರಣನಾದ ಇಯಾಗೋನನ್ನು ಶಪಿಸುತ್ತೇವೆ. ಈ “ಇಯಾಗೋ” ಷೇಕ್ಸ್ ಪಿಯರ್ ನ ಖಳನಾಯಕರಲ್ಲಿಯೇ ಭಯಾನಕನಾದವನು. ಆತನ ನಾಟಕದಲ್ಲಿ ಖಳ ಪಾತ್ರಗಳು ನಾಯಕನಿಗಿಂತಲೂ ಹೆಚ್ಚಿನ ಪ್ರಸಿದ್ಧಿ ಗಳಿಸಿವೆ. ಮೂರನೆಯ ರಿಚರ್ಡ್ ನಾಟಕ ರಿಚರ್ಡ್ ಆಗಲಿ, ವೆನಿಸ್ ನಗರದ ವರ್ತಕ ನಾಟಕದ ಶೈಲಾಕ್ ಆಗಲಿ, ಟೈಬಾಲ್ಟ್ (ರೋಮಿಯೋ ಮತ್ತು ಜ್ಯುಲಿಯಟ್) ರೇಗನ್ (ಕಿಂಗ್ ಲಿಯರ್) ಹೀಗೆ ಯಾವ ಖಳ ಪಾತ್ರಗಳನ್ನು ತೆಗೆದುಕೊಂಡರೂ ಮತ್ತೊಬ್ಬ ಇಯಾಗೋನನ್ನು ಹುಡುಕಲು ಸಾಧ್ಯವಿಲ್ಲ. ಆತ ಶ್ವೇತವರ್ಣದ ಸ್ಪುರದ್ರೂಪಿಯ ಮನುಷ್ಯ. ಅವನ ಉಸಿರೂ ಸಹ ಕೊಳಕು ಮಂಡಳದ ವಿಷ. ವಿಲಿಯಂ ಷೇಕ್ಸ್ ಪಿಯರ್ ನಾಟಕಗಳನ್ನು ಓದುವಾಗ ಆತನ ಪಾತ್ರಗಳ ಸೃಷ್ಟಿಯ ನೈಪುಣ್ಯತೆಗೆ ಬೆರಗಾಗುತ್ತೇವೆ. ಮನುಷ್ಯನ ಹುಚ್ಚುತನ, ಸ್ವಾರ್ಥ ಮೋಸ, ಕ್ರೌರ್ಯ, ರಾಜಕೀಯ ಗೊಂದಲ ಇವೆಲ್ಲವೂ ಅವನ ಮೂಸೆಯಲ್ಲಿ ಮನಸ್ಸನ್ನು ತಲ್ಲಣಗೊಳಿಸುತ್ತದೆ. ಆತನ ನಾಟಕಗಳಲ್ಲಿ. ಸಂಭಾವಿತರು ಮತ್ತು ಖಳಪಾತ್ರಗಳು ಎರಡು ವಿರುದ್ಧ ದಿಕ್ಕಿನಲ್ಲಿರುವ ವ್ಯಕ್ತಿಗಳು. ಈತನ ನಾಟಕಗಳಲ್ಲಿ ಅಬ್ಬರದ ಸೀನರಿಗಳು ಬೇಕಾಗಿಲ್ಲ. ಸರಳವಾದ ರಂಗಸಜ್ಜಿಕೆಯಲ್ಲಿ ಮೇಲೆ ಸಹಜವಾಗಿ ಮೂಡಿಬರುವ ದೃಶ್ಯಾವಳಿಗಳಿಂದಾಗಿ ಪಾತ್ರಗಳ ಗುಣಗಳು ಎದ್ದುಕಾಣುತ್ತವೆ.
ನಮ್ಮ ಯಕ್ಷಗಾನದ ಪಾತ್ರಗಳು ಸಹ ಹೀಗೆ ಎದ್ದು ತೋರುತ್ತವೆ. ಪಾತ್ರ ರಚನೆಯಲ್ಲಿ ಆತನಲ್ಲಿರುವ ರೂಪಕದ ಮತ್ತು ಆ ಕಾಲದಲ್ಲಿ ಪ್ರಚಲಿತವಿದ್ದ ಭಾಷೆಯನ್ನು ದುಡಿಸಿಕೊಂಡಿರುವುದು ಕಾರಣವಾಗಿದೆ. ಷೇಕ್ಸ್ ಪಿಯರ್ ಜನಿಸುವದಕ್ಕಿಂತ ನೂರು ವರ್ಷಗಳ ಮೊದಲು ಸುಮಾರು ಮೂವತ್ತು ವರ್ಷಗಳ ಕಾಲ ನಡೆದ Wars of Roses (ಗುಲಾಬಿ ಯುದ್ಧಗಳು) ಈತನ ಹುಟ್ಟೂರು ಸ್ಟ್ರಾಟ್ಫ಼ರ್ಡಿನ ಸುತ್ತಮುತ್ತಲೇ ನಡೆದಿರುವುದರಿಂದ ಆ ಅಂತರ್ಯುದ್ಧದಲ್ಲಿ ಆಗಿ ಹೋದ ಘಟನಾವಳಿಗಳೂ ಮತ್ತು ಮೋಸ ವಂಚನೆಯ ಸಂಗತಿಗಳೆಲ್ಲವೂ ಜನಸಾಮಾನ್ಯರಲ್ಲಿ ಲಾವಣಿಗಳಾಗಿಯೋ ಅಥವಾ ಕಥೆಗಳ ರೂಪದಲ್ಲಿಯೋ ಹರಿದಾಡುತ್ತಿರುವುದು ಈತನ ಕಿವಿಗೂ ಜೋಗುಳದ ಸಂಗಡವೇ ಕೇಳಿಸಿರಬಹುದು. ಹಾಗಾಗಿ ಈತನ ರುದ್ರ ನಾಟಕಗಳು ಮರಣವನ್ನು ವೈಭವೀಕರಿಸುತ್ತಾ ಸಾಗುತ್ತದೆ.
ಒಥೆಲೋದಲ್ಲಿಯಂತೂ ನತದೃಷ್ಟ ಡೆಸ್ಡಿಮೋನಳು ಸಾಯುವಾಗ ಅವಳಿಗೆ ಬದುಕಿನಲ್ಲಿ ಸಿಕ್ಕಿರುವುದು ಏನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆಲ್ಲ ಕಾರಣನಾದ “ಇಯಾಗೋ”. ಮೊದಲೊಮ್ಮೆ ಯಾವುದೋ ಒಂದು ಪತ್ರಿಕೆಯಲ್ಲಿ ಈತನನ್ನು ಮಹಾಭಾರತದ ಶಕುನಿಗೆ ಹೋಲಿಸಿ ಬರೆದಿರುವುದನ್ನು ಓದಿದ ನೆನಪಾಗುತ್ತದೆ. ಆದರೆ ಶಕುನಿಯಾಗಲೀ, ಮತ್ತೋರ್ವ ಚಾಡಿಕೋರನಾದ ಕಣಿಕನಾಗಲಿ, ಇಯಾಗೋವಿನ ಪಾತ್ರಗಳಂತೆ ಇಲ್ಲ. ಇವೆರಡೂ ಮನೆ ಹಾಳು ಮಾಡುವ ಪಾತ್ರಗಳಾದರೂ ವ್ಯಾಸರು ಅವರನ್ನು ಶುಕ್ರನೀತಿಗನುಗಣವಾಗಿ ಹಣೆದಿದ್ದಾರೆ. ಮಹಾಭಾರತದ ಶಕುನಿ ಮತ್ತು ಕಣಿಕರಿಬ್ಬರಿಗೂ ವಯಕ್ತಿಕ ಲಾಭವೆನೂ ಇಲ್ಲ. ಹಾಗಾಗಿ ಆ ಕುರಿತು ತೌಲನಿಕವಾಗಿ ಆಲೋಚಿಸುವುದಕ್ಕಿಂತ ಇವುಗಳನ್ನು ಪಾಶ್ಚಾತ್ಯ ವಿಮರ್ಶೆಯ ಪರಿಭಾಷೆಯಲ್ಲಿಯೇ ನೋಡುವುದು ಒಳ್ಳೆಯದು.

ಮತ್ತೊಂದು ವಿಷಯವೆಂದರೆ ಈ ನಾಟಕದ ಪಾತ್ರಗಳು ಷೇಕ್ಸ್ ಪಿಯರ್ ನ ಸ್ವಂತ ಸೃಷ್ಟಿಯಲ್ಲ. ಇಟಲಿಯ Giraldi Cinthio ಎನ್ನುವವನ Hecatommithi ಕೃತಿಯಲ್ಲಿ ಪ್ರಕಟವಾದ ಕಥೆಯನ್ನು ಆಧರಿಸಿ ಬರೆದಿದ್ದಾನೆ, ಈ ನಾಟಕದ ನಾಯಕ ಒಥೆಲೋ ವೆನಿಸಿನ ಸೈನ್ಯದ ಕಮಾಂಡರ್. ಆತ ಮೂಲತಃ ವಾಯವ್ಯ ಆಫ್ರಿಕಾದ ಕರಿಯ. ತನ್ನ ಶೌರ್ಯ ಮತ್ತು ಪರಾಕ್ರಮದಿಂದಾಗಿ ವೆನಿಸಿನಲ್ಲಿ ಮುಖ್ಯ ಸೈನ್ಯಾಧಿಕಾರಿಯ ಹುದ್ದೆಗೆ ಏರಿರುತ್ತಾನೆ. ವೆನಿಸ್ಸಿನ ಸೆನೆಟರ್ ಬ್ರಬಾನ್ಸಿಯೋಗೆ ಒಥೆಲೋ ಅಚ್ಚುಮೆಚ್ಚು. ಆತ ಈತನನ್ನು ಆಗಾಗ ತನ್ನ ಮನೆಗೆ ಕರೆಯುತ್ತಿರುತ್ತಾನೆ. ಅಲ್ಲಿ ಆತನ ಮಗಳು ಡೆಸ್ಡಿಮೋನಾಳ ಪರಿಚಯವಾಗುತ್ತದೆ. ಅವಳು ಆತನ ಸಾಹಸದ ಕಥೆಗಳನ್ನು, ಯುದ್ಧಗಳ ವೈಭವಗಳನ್ನೆಲ್ಲ ಅವನ ಬಾಯಿಯಿಂದಲೇ ಕೇಳುತ್ತಾಳೆ. ತಾನು ಸೆರೆಯಾಗಿ ಗುಲಾಮನಾಗಿ ಮಾರಾಟವಾಗಿದ್ದು, ಭುಜದಕೆಳಗೆ ಶಿರಗಳಿರುವ ಭಯಂಕರ ನರಭಕ್ಷರಿಂದ ಪಾರಾಗಿರುವುದು, ಮರುಭೂಮಿಯ ಬಿರುಗಾಳಿಯಲ್ಲಿ ಸಿಲುಕಿ ಬದುಕಿ ಬಂದಿರುವುದು, ನಂತರ ತನ್ನ ಸಾಹಸದಿಂದ ವೆನಿಸ್ಸಿಗೆ ಅನೇಕ ಯುದ್ಧಗಳನ್ನು ಗೆದ್ದು ಕೊಟ್ಟಿರುವುದನ್ನು ಕೇಳಿದ ಆಕೆ ಇವನನ್ನು ಪ್ರೀತಿಸುತ್ತಾಳೆ. ಇಬ್ಬರೂ ರಹಸ್ಯವಾಗಿ ಮದುವೆಯಾಗುತ್ತಾರೆ.
ಇದು ಸ್ವಭಾವತಃ ಮಹತ್ವಾಕಾಂಕ್ಷೆಯವನಾದ ಮತ್ತು ಸ್ಪುರದ್ರೂಪಿಯೂ ಆದ ಇಯಾಗೋವಿಗೆ ತಲುಪುತ್ತದೆ. ಆತ ಒಥೆಲೋನ ಧ್ವಜಧಾರಿ (Ensign). ಆತನಿಗಿಂತಲೂ ಅರ್ಹತೆಯುಳ್ಳ ಮತ್ತೋರ್ವ ಮೈಕೆಲ್ ಕ್ಯಾಸಿಯೋ ಎನ್ನುವನನ್ನು ದ್ವಿತೀಯ ಸೈನ್ಯಾಧಿಕಾರಿಯಾಗಿ ನೇಮಿಸಿರುದರಿಂದ ಇಯಾಗೋವಿಗೆ ಒಥೆಲೋನ ಮೇಲೆ ಒಳಗಿಂದೊಳಗೇ ದ್ವೇಷ. ಒಥೆಲೋ ಮತ್ತು ಕ್ಯಾಸಿಯೋ ಇಬ್ಬರಮೇಲೂ ಪ್ರತಿಕಾರ ತೀರಿಸಲು ಆತ ಯೋಚಿಸುತ್ತಿರುವಾಗ ಆತನಿಗೆ ವೆನಿಸಿನ ಶ್ರೀಮಂತರಲ್ಲೋರ್ವನಾದ ರೊಡೆರಿಗೊ ಡೆಸ್ಡಿಮೋನಳನ್ನು ಪ್ರೀತಿಸುತ್ತಿರುವುದು ತಿಳಿದು ನಾಟಕದ ಪ್ರಾರಂಭದಲ್ಲಿಯೇ ಆತನಿಗೆ ಈ ಇಬ್ಬರ ರಹಸ್ಯದ ಮದುವೆಯ ಕುರಿತು ಕಿವಿಚುಚ್ಚಿ, ಕರಿಯ ಓರ್ವ ಸೆನೆಟರನ ಮಗಳನ್ನು ಮದುವೆಯಾಗಿರುವ ವಿಷಯವನ್ನು ಬಯಲು ಮಾಡುತ್ತಾನೆ. ಆಗಲೇ ತನ್ನ ಸ್ವಭಾವೇನೂ ಎನ್ನುವುದನ್ನು “I am not what I am,” (Act.I.1-65). ಎನ್ನುವ ಮಾತಿನ ಮೂಲಕ ಷೇಕ್ಸಫಿಯರ್ ಹೇಳುತ್ತಾನೆ. ಇದು ಬೈಬಲ್ಲಿನಲ್ಲಿ ದೇವರು ಮೋಸೆಸನಿಗೆ ಕೊಡುವ ಮೂರನೆಯ ಪ್ರತಿಕ್ರಿಯೆ “Iam that I am”. ತಾನೇ ಸರ್ವಶಕ್ತ ಎನ್ನುವುದರ ಸಂದೇಶ ಇದು.
ಭಾರತೀಯ ವೇದಾಂತದಲ್ಲಿ ಬರುವ “ಅಹಂ ಬ್ರಹ್ಮಾಸ್ಮಿಯನ್ನು” ಗಮನಿಸಿದರೆ ಇದರ ಅರ್ಥ ಸುಲಭವಾಗುತ್ತದೆ. ಇಯಾಗೋ ಇಲ್ಲಿ ಅದರ ವಿರುದ್ಧಾರ್ಥಕವನ್ನು ಹೇಳುತ್ತಿದ್ದಾನೆ. ತಾನು ಡೇವಿಲ್ ಎನ್ನುವುದನ್ನು ಇಯಾಗೋನ ಬಾಯಿಯಲ್ಲಿ ಹೇಳಿಸುವುದರ ಮೂಲಕ ಮೂಲತಃ ಅವನೊಳಗೆ ಇರುವ ಕುಬುದ್ಧಿಯನ್ನು ತೆರೆದಿರಿಸಲಾಗಿದೆ. ಸುಳ್ಳು ಆತನೊಳಗೇ ಕುಣಿಯುತ್ತಿರುತ್ತದೆ. ಸುಂದರಿಯಾದ ಅವನ ಹೆಂಡತಿ ಎಮಿಲಿಯಾಳನ್ನೂ ಸೇರಿಸಿ ಆತ ಹೃದಯಪೂರ್ವಕವಾಗಿ ಯಾರನ್ನೂ ಪ್ರೀತಿಸುವುದಿಲ್ಲ. ತನ್ನ ಉದ್ಧೇಶ ಸಾಧನೆಗಾಗಿ ಜನರನ್ನು ಮರಳುಗೊಳಿಸುವ ಕಲೆ ಅವನಿಗೆ ಚನ್ನಾಗಿ ಗೊತ್ತು. ಅದಕ್ಕೆ ಸರಿ ಹೊಂದುವ ಕಥೆಗಳನ್ನು ಕಟ್ಟಿ ಬಲೆಗೆ ಬೀಳಿಸುತ್ತಾನೆ. ಇತರರ ದೌರ್ಬಲ್ಯವನ್ನು ಗಮನಿಸಿ ಅವರನ್ನು ತನ್ನ ಸ್ವಾರ್ಥ ಸಾಧನೆಗಾಗಿ ನಯವಂಚನೆಗಾಗಿ ಬಳಸಿಕೊಳ್ಳುತ್ತಾನೆ. ನಿಗ್ರೋ ಓರ್ವ ಬಿಳಿಯ ಕುಲೀನ ಮನೆತನದವಳನ್ನು ಮದುವೆಯಾಗುವುದು ಆತನಿಗೆ ಸಹ್ಯವಿಲ್ಲ. ಅದನ್ನು ಡೆಸ್ಡಿಮೋನಾಳ ತಂದೆ ಸೆನೆಟರ್ ಬ್ರಬಾನ್ಶಿಯೋನಿಗೆ ವಿಷಯವನ್ನು ತಲುಪಿಸಬೇಕಾಗಿದೆ. ಆಗಿನ ವೆಸ್ಸಿನಲ್ಲಿ ಬಿಳಿಯರಿಗೆ ತಾವು ಕರಿಯರಿಗಿಂತಲೂ ಮೇಲು ಎನ್ನುವ ಭಾವನೆ ಇತ್ತು. ತನ್ನ ಸಾಮರ್ಥ್ಯದಿಂದ ಮೇಲೆ ಬಂದ ಒಥೆಲೋ ಇಟಲಿಗೆ ಅನಿವಾರ್ಯವಾಗಿದ್ದ. ಇಯಾಗೋವಿನಲ್ಲಿ ಸ್ವಸಮ್ಮೋಹಿತ ವ್ಯಕ್ತಿತ್ವವಿತ್ತು. ಅದನ್ನು Machiavellian Traits ಎಂದು ಕರೆಯುತ್ತಾರೆ.
ಆತ ಈ ಮೇಲು ಕೀಳಿನ ಭಾವನೆಯನ್ನು ಡೆಸ್ಡಿಮೋನಾಳ ತಂದೆ ಸೆನೆಟರ್ ಬ್ರಬಾನ್ಶಿಯೋಗೆ ಹೇಳುವುದು “Zounds, sir.. ; Even now, now, very now, an old black ram Is topping your white ewe” ಕಪ್ಪು ಟಗರು ನಿಮ್ಮ ಬಿಳಿಕುರಿಯನ್ನು.. ಎನ್ನುವ ಮಾತುಗಳು ಯಾವ ತಂದೆಗಾದರೂ ಕೋಪತಾರದಿರದು. (‘Zounds, sir, you are one of those that will not serve God, if the devil bid you. Because we come to do you service and you think we are ruffians, you’ll have your daughter covered with a Barbary horse; you’ll have your nephews neigh to you; you’ll have coursers for cousins and gennets for germans. I am one Sir, that comes to tell you, your daughter and the Moor are now making the beast with two backs). ಆತ ಇಲ್ಲಿ ಬ್ರಬಾನ್ಸಿಯೋನ ಹತ್ತಿರು ಉದುರಿಸುವ ನುಡಿಮುತ್ತುಗಳು ಭಾಷೆಯ ಮರ್ಯಾದೆಯನ್ನು ದಾಟಿವೆ. ಹಾಗಾಗಿ ಅನುವಾದವನ್ನು ಮಾಡಿಲ್ಲ. ‘ಏಸುವಿನ ಪವಿತ್ರ ರಕ್ತದಾಣೆ’ ಎನ್ನುವಾಗ ಆತನಿಗೆ ಯಾವ ಹಿಂಜರಿಕೆಯೂ ಮೂಡುವುದಿಲ್ಲ. ವಿಕೃತ ಮನಸ್ಸಿನವ ಆತ. ಮೂಲ ಕಥೆಯಾದ ಸಿಂತಿಯೋದಲ್ಲಿ ಸಹ ಆತ ದುಷ್ಟನೇ, ಅದರ ಜೊತೆಗೆ ಆತ ಒಳಗೊಳಗಿಂದ ಡೆಸ್ಡಿಮೋನಾಳನ್ನು ಅನುಭವಿಸಲು ಬಯಸುತ್ತಿದ್ದ. ಇಲ್ಲಿ ಆತನಿಗೆ ಅಧಿಕಾರ ಮುಖ್ಯವೇ ಹೊರತೂ ಮತ್ತೇನೂ ಅಲ್ಲ. ಆತ ಆಡುವ ಮಾತುಗಳು ಅಸಹ್ಯವಾದ ರೀತಿಯಲ್ಲಿ ಇದ್ದರೂ ಅದರಲ್ಲಿ ಆತ ಬಳಸುವ ನಯವಂತಿಕೆಯನ್ನು ಗಮನಿಸಿದರೆ ಸೀಸರ್ ಸತ್ತಾಗ ಅಂಟೋನಿಯೋ ಮಾಡುವ ಭಾಷಣದ ನೆನಪಾಗುತ್ತದೆ.
ಹಾಗಂತ ಇಯಾಗೋನಿಗೆ ಬಹಿರಂಗವಾಗಿ ತನ್ನ ಮೇಲಧಿಕಾರಿ ನಿಗ್ರೋನನ್ನು ಎದುರಿಸುವ ಧೈರ್ಯವಿಲ್ಲ. “Though I do hate him as I do hell-pains. Yet, for necessity of present life, I must show out a flag and sign of love, Which is indeed but sign. That you shall surely find him, Lead to the Sagittary the raised search; And there will I be with him. So, farewell. “ನಾನು ನರಕಯಾತನೆಯಂತೆ ಅವನನ್ನು ದ್ವೇಷಿಸಿದರೂ, ವರ್ತಮಾನದ ಬದುಕಿನ ಅವಶ್ಯಕತೆಗಾಗಿ ಅವನಲ್ಲಿ ಸ್ನೇಹಪತಾಕೆಯನ್ನು ತೋರಲೇ ಬೇಕಾಗಿದೆ. ಅದು ಕೇವಲ ಕುರುಹು. ಧನುಸ್ಸಿನ ಚಿಹ್ನೆ ಇರುವಕಡೆ ಶೋಧವ (ವೆನಿಸ್ಸಿನ ಆಯುಧಾಗಾರ- ಅಲ್ಲಿ ಹೆದೆಯೇರಿಸಿದ ಬಿಲ್ಲುಗಾರನ ಚಿತ್ರವಿತ್ತು) ಎಚ್ಚರದಿಂದ ಮುಂದುವರಿಸು. ಅಲ್ಲಿ(ಆತನ ಕೇಡುಗಾಲದಲ್ಲಿಯೂ) ನಾನಿರುವೆ ಅವನಜೊತೆ, ಸರಿ, ಶುಭವಾಗಲಿ” ಎನ್ನುವ ಮೂಲಕ ತನ್ನ ಕಾರ್ಯದಲ್ಲಿ ವಿಫಲನಾಗಬೇಡ ಮುಂದುವರಿ, ಆತನ ದೌರ್ಬಲ್ಯದ ಕಡೆ ನಿಪುಣ ಹೆದೆಗಾರ ಗುರಿಯೆಡೆ ತಾಳ್ಮೆಯಿಂದ ಗುರಿಯಿಟ್ಟು ಕಾಯುವಂತೆ ತಣ್ಣಗೆ ಕಾಯುತ್ತಿರು” ಎನ್ನುವ ಧ್ವನಿ ಪೂರಣ ಮಾತುಗಳನ್ನು ಇಲ್ಲಿ ಗಮನಿಸಬಹುದು.

ಷೇಕ್ಸ್ ಪಿಯರ್ ರೂಪಕಗಳ ಮೂಲಕ ಕಥೆಯನ್ನು ಬೆಳೆಸುತ್ತಿದ್ದಾನೆ. ಹಾಗಾಗಿ ಶ್ರೀಮಂತ ಮತ್ತು ಡೆಸ್ಡಿಮೋನಾಳಿಗಾಗಿ ಹಂಬಲಿಸುತ್ತಿರುವ ರೇಡಾರಿಗೊನನ್ನು ಒಥೆಲೋನ ವಿರುದ್ಧ ಎತ್ತಿಕಟ್ಟುತ್ತಾ ಇರುತ್ತಾನೆ. ತಾನು ರೇಡಾರಿಗೊನ ಹಿತೈಷಿ, ಅವನಿಗೆ ಉಪಕಾರ ಮಾಡುತ್ತಿದ್ದೇನೆ ಎನ್ನುವ ರೀತಿಯಲ್ಲಿ ಅವನನ್ನು ಬಲೆಗೆ ಬೀಳಿಸುತ್ತಾನೆ. ಒಥೆಲೋ ಡೆಸ್ಡಿಮೋನಾಳಿಂದ ದೂರವಾದರೆ ಅವಳು ರೇಡಾರಿಗೊನಿಗೇ ದಕ್ಕುತ್ತಾಳೆ ಎನ್ನುವ ಆಸೆಯನ್ನು ತೋರಿಸುತ್ತಾನೆ. ಈ ಕಾರಣಕ್ಕಾಗಿ ಆತ ಅವನಿಂದ ಹಣವನ್ನು ಪೀಕುತ್ತಾನೆ. ತುಂಬಾ ಸಂಕೀರ್ಣವಾದ ಕುತ್ಸಿತ ಮನೋಭಾವದವ ಎಂದು ಇಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತದೆ. ಏಕ ಕಾಲಕ್ಕೆ ಬ್ರಭಾನ್ಸಿಯೋ ಮತ್ತು ರೇಡಾರಿಗೊನನ್ನು ಒಥೆಲೋವಿನ ವಿರುದ್ಧ ಎತ್ತಿ ಕಟ್ಟುತ್ತಾನೆ. ಬ್ರಬಾನ್ಸಿಯೋ ಕುಲೀನ ಮನೆತದನವ ಮತ್ತು ವೆನಿಸಿನ ಸೆನೆಟರ್. ಹಾಗಾಗಿ ಆತ ತನ್ನ ಮಗಳು ಈ ನಿಗ್ರೋನನ್ನು ಲಗ್ನವಾಗುವುದನ್ನು ಸಹಿಸಲಾರ. ಒಥೆಲೋನ ಮೇಲೆ ಸೆನೆಟಿನಲ್ಲಿ ಕರಿಯ ತನ್ನ ಮಗಳಮೇಲೆ ಮಾಟಮಾಡಿ ವಶೀಕರಿಸಿಕೊಂಡಿದ್ದಾನೆ ಎಂದು ಆಪಾದನೆ ಮಾಡಿದರೂ, ಡೆಸ್ಡಿಮೋನಾ ಅಲ್ಲಿಗೆ ಬಂದು ತಾನು ಮನಸಾರೆ ಒಥೆಲೋನನ್ನು ಪ್ರೀತಿಸಿರುವುದಾಗ ಹೇಳಿಕೆ ನೀಡಿರುವುದರಿಂದ ಆತನ ವಾದ ಬಿದ್ದು ಹೋಗುತ್ತದೆ. ಅದಕ್ಕೆ ಆಗಿನ ಗ್ರೀಸಿನ ಪರಿಸ್ಥಿತಿಯೂ ಕಾರಣ.
ಆಟಮ್ ತುರ್ಕರು ವೆನಿಸ್ಸಿನ ಆಧೀನದಲ್ಲಿದ್ದ ಸೈಪ್ರಸ್ಸಿನ ಮೇಲೆ ದಾಳಿಮಾಡಲು ನೌಕಾಬಲದೊಂದಿಗೆ ಹೊರಟಿದ್ದಾರೆ. ಅವರನ್ನು ಎದುರಿಸಲು ಸಾಹಸಿ ಈ ಕರಿಯನೇ ಬೇಕು. ಸೆನೆಟ್ ಬ್ರಬಾನ್ಸಿಯೋನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದಕ್ಕೆ ಇದೂ ಒಂದು ಕಾರಣ. ವೆನಿಸ್ಸಿನ ಡ್ಯೂಕ್ ಒಥೆಲೋನಿಗೆ ನೌಕಾಸೇನೆಯ ನೇತ್ರತ್ವವನ್ನು ತೆಗೆದುಕೊಂಡು ವೆನಿಸ್ಸಿಗೆ ಹೋಗು ಎಂದಾಗ ಆತ ತನ್ನೊಂದಿಗೆ ತನ್ನ ಹೆಂಡತಿಯನ್ನೂ ಅವಳಿಗೋರ್ವ ಸಖಿಯನ್ನೂ ಕರೆದೊಯ್ಯಲು ಅನುಮತಿ ಪಡೆಯುತ್ತಾನೆ. ಅವಮಾನದಿಂದ ಕುದಿಯುತ್ತಿರುವ ಬ್ರಬಾನ್ಸಿಯೋ ಒಥೆಲೋನ ಕುರಿತು “Look to her, Moor, if thou hast eyes to see: She has deceived her father, and may thee”. “ಮೂರ್, ನಿನಗೆ ನೋಡಲು ಕಣ್ಣಿದ್ದರೆ ಅವಳೆಡೆ ತ್ವೆರೆಯಿಂದ ಲಕ್ಷವಿಡು. ತನ್ನ ತಂದೆಗೇ ಮೋಸಮಾಡಿದವಳು ಅವಳು ಬಹುಶಃ ನಿನಗೂ” ಎಂದು ಹೇಳಿ ಹೋಗುತ್ತಾನೆ. ಇಡೀ ನಾಟಕದ ಎರಡನೇಯ ಬೀಜವಾಕ್ಯವಿರುವುದು ಇಲ್ಲಿಯೇ. (ಮೊದಲನೆಯದು I am not what I am). ಇಂತಹ ಮಾತುಗಳು ತಕ್ಷಣಕ್ಕೆ ಪರಿಣಾಮವನ್ನು ಬೀರುವುದಿಲ್ಲ; ಆದರೆ ಮಳೆಗಾಲದಲ್ಲಿ ಹುಟ್ಟಿಕೊಳ್ಳುವ ಪಾರ್ಥೇನಿಯಮ್ಮಿನ ಹಾಗೆ ಸಂಶಯವೆನ್ನುವುದು ಹುಟ್ಟಿಕೊಂಡರೆ ಸಾಕು, ಸಮಯಬಂದಾಗ ಇಂತಹವುಗಳೆಲ್ಲವೂ ಹೊರಬಂದು ಮನಸ್ಸನ್ನು ಹಾಳುಮಾಡಿಬಿಡುತ್ತದೆ.
ತಾನೋರ್ವ ಕರಿಯ, ಗುಲಾಮನಾಗಿದ್ದೆ ಎನ್ನುವ ಕೀಳರಿಮೆ ಒಥೆಲೋನಲ್ಲಿ ಸಹಜವಾಗಿ ಇತ್ತು. ರೇಡಾರಿಗೊ ಡೆಸ್ಡಿಮೋನಾಳಿಗಾಗಿ ತನ್ನ ಜಮೀನನ್ನು ಮಾರಿ ಹಣವನ್ನು ಇಯಾಗೋನಿಗೆ ಕೊಟ್ಟು ತಾನೂ ಅವನ ಸಂಗಡ ಸೈಪ್ರಸ್ಸಿಗೆ ಹೊರಡುತ್ತಾನೆ. ಸಂಗಡ ಕ್ಯಾಸಿಯೋ ಹಾಗೂ ಡೆಸ್ಡಿಮೋನಾಳ ಸಖಿಯಾಗಿ ಇಯಗೋವಿನ ಹೆಂಡತಿ ಎಮಿಲಿಯಾ ಸಹ ಹೊರಡುತ್ತಾರೆ. ಕ್ಯಾಸಿಯೂ ಒಥೆಲೋನ ನಂಬಿಗಸ್ಥ ಗೆಳಯನಾಗಿರುವ ಕಾರಣದಿಂದ ಡೆಸ್ಡಿಮೋನಾಳ ಜೊತೆಗೂ ಸಲುಗೆಯಿಂದ ಇರುತ್ತಾನೆಯೇ ಹೊರತೂ ಅದರಲ್ಲಿ ಯಾವುದೇ ದುರುದ್ಧೇಶವಿರುವುದಿಲ್ಲ. ಕ್ಯಾಸಿಯೋವನ್ನು ದ್ವೇಷಿಸುವ ಇಯಾಗೋ ಸಂದರ್ಭ ನೋಡಿ ಆತನಿಗೂ ಮತ್ತು ಡೆಸ್ಡಿಮೋನಾಳಿಗೂ ಸಂಬಂಧ ಕಲ್ಪಿಸಿ ಒಥೆಲೋನ ಮನಸ್ಸನ್ನು ಕೆಡಿಸುವ ಸಂಚು ಹೂಡುತ್ತಾನೆ. ಪ್ರತೀ ಪ್ರೇಮಿನಲ್ಲಿಯೂ ಇಯಾಗೋವಿನ ಜಾಲ ಒಥೆಲೋ ಡೆಸ್ಡಿಮೋನಾ ಮತ್ತು ಕ್ಯಾಸಿಯೋನ ಸುತ್ತ ಕವಿಯುತ್ತಲೇ ಹೋಗುತ್ತದೆ. ಯಾರಿಗೂ ಅದರ ಅರಿವಾಗುವುದೇ ಇಲ್ಲ. ಷೇಕ್ಸ್ ಪಿಯರ್ ಕಥೆಯ ಮುಂದಿನ ದೃಶ್ಯ ಹೇಗಾಗಬಹುದು ಎನ್ನುವ ಕುತೂಹಲವನ್ನು ಕೆರಳಿಸುತ್ತಲೇ ಸಾಗುತ್ತಾದೆ.
**
ನಾಳೆ ಓದಿ-
ಡೆಸ್ಡಿಮೋನಾಳ ಕಣ್ಣೀರಿಗೆ ನೆಪವಾದ ಕರವಸ್ತ್ರ






0 Comments