ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಕಾಸ್ ಕತೆಗಳಲ್ಲಿ ಒಂದು ವಿಲಕ್ಷಣ ಮ್ಯಾಜಿಕ್ ಇದೆ.

ಪತ್ರಕರ್ತ, ಪ್ರಸ್ತುತ ‘ಕಲರ್ಸ್ ಕನ್ನಡ’ದಲ್ಲಿ ಕೆಲಸ ಮಾಡುತ್ತಿರುವ ವಿಕಾಸ ನೇಗಿಲೋಣಿ ೬ ವರ್ಷಗಳ ನಂತರ ಹೊಸ ಕೃತಿಯನ್ನು ಹಿಡಿದು ನಿಂತಿದ್ದಾರೆ.

ನಾಳೆ ಈ ಕೃತಿ ಬಿಡುಗಡೆಯಾಗಲಿದೆ.

ಅಂಕಿತ ಪ್ರಕಟಿಸುತ್ತಿರುವ ಈ ಕೃತಿ ಬರುತ್ತಿರುವ ಸಂದರ್ಭದಲ್ಲಿ ವಿಕಾಸ್ ಹಂಚಿಕೊಂಡ ಮಾತು ಹಾಗೂ ಈ ಕಥೆಗಳ ಬಗ್ಗೆ ಹರೀಶ್ ಕೇರ ಬರೆದ ಪುಟ್ಟ ನೋಟ ಇಲ್ಲಿದೆ.

ವಿಕಾಸ ನೇಗಿಲೋಣಿ 

ಆರು ವರುಷಗಳಾದವು!

ನನ್ನ ಮೊದಲ ಕಥಾ ಸಂಕಲನ ‘ಮಳೆಗಾಲ ಬಂದು ಬಾಗಿಲು ತಟ್ಟಿತು’ ಪ್ರಕಟವಾಗಿದ್ದು 2013ರಲ್ಲಿ.

ಆ ಕಥಾಸಂಕಲನದಿಂದ ನನಗೆ ಸಿಕ್ಕ ಪ್ರೀತಿ, ದೊರೆತ ಓದುಗರು, ಅಜ್ಞಾತರು ಅಪಾರ. ಅದಾದಮೇಲೆ ‘ರಥಬೀದಿ ಎಕ್ಸ್ ಪ್ರೆಸ್’- ಅಡಲಸೆಂಟ್ ಆತ್ಮಚರಿತ್ರೆ ಬಂತು, ಆ ಮಧ್ಯೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಮೃತ ಮಹೋತ್ಸವ ಪುಸ್ತಕಮಾಲೆಗೋಸ್ಕರ ನಿರ್ಮಾಪಕ, ವಿತರಕ ಎ.ಸಿ. ನರಸಿಂಹಮೂರ್ತಿ ಅವರ ವ್ಯಕ್ತಿ ಚಿತ್ರದ ಒಂದು ಪುಟ್ಟ ಪುಸ್ತಕ ಬರೆದೆ. ಹೀಗೆ ಲೆಕ್ಕದ ಪ್ರಕಾರ ನಾಲ್ಕನೆಯದು ಮತ್ತು ಕಥಾ ಸಂಕಲನವಾಗಿ ಎರಡನೆಯದು ಬಿಡುಗಡೆಯಾಗುತ್ತಿದೆ. ಅಂಕಿತ ಪುಸ್ತಕ ಪ್ರಕಟಿಸುತ್ತಿರುವ ಈ ಸಂಕಲನದ ಹೆಸರು: ಬಸವರಾಜ ವಿಳಾಸ- Address Not Found.

ಇದರಲ್ಲಿ ಒಟ್ಟು 16 ಕತೆಗಳಿವೆ, ಗಾತ್ರದಿಂದ ಕೊಂಚ ದೊಡ್ಡದೇ ಆಯ್ತು. ನಾನು ಈ ಆರು ವರ್ಷಗಳಲ್ಲಿ ಬರೆದ ಕತೆಗಳಲ್ಲಿ ಆರಿಸಿ ಇಷ್ಟನ್ನು ಸಂಕಲನಕ್ಕೆ ಸೇರಿಸಿದ್ದೇನೆ. ಆದರೆ ವಿಶೇಷ ಎಂದರೆ ಈ 2 ವರ್ಷದಲ್ಲಿ ಬರೆದ ಕತೆಗಳ ಸಂಖ್ಯೆಯೇ ಹೆಚ್ಚಿದೆ, ಕಾಕತಾಳೀಯವೆಂದರೆ ಪತ್ರಿಕೋದ್ಯಮ ಬಿಟ್ಟು ಮನರಂಜನಾ ಮಾಧ್ಯಮಕ್ಕೆ ಬಂದೂ 2 ವರ್ಷವಾಯಿತು! ಕತೆಗಳನ್ನು ಬರೆಯದೇ ಇರಲಾರೆ, ಆ ಒತ್ತಡ, ಒತ್ತಾಯದಲ್ಲೇ ಬರೆಸಲ್ಪಟ್ಟ ಕತೆಗಳಿವು. ಈ ಕತೆಗಳು ಶ್ರೇಷ್ಠವೆಂಬ ಅಹಮ್ಮಿಲ್ಲ, ಈ ಕತೆಗಳಲ್ಲಿ ಒಂದೊಂದೂ ನನ್ನನ್ನು ಸಮಾಧಾನಗೊಳಿಸಿವೆ, ಸಾಂತ್ವನ ಕೊಟ್ಟಿವೆ. ಈ ಕತೆ ನನ್ನನ್ನು ಕರೆದೊಯ್ದು ತೋರಿಸಿದ ವಿಶನ್ ಗೆ ನಾನು ಕೃತಜ್ಞ.

 

ವಿಕಾಸ್ ಕತೆಗಳಲ್ಲಿ ಒಂದು ವಿಲಕ್ಷಣ ಮ್ಯಾಜಿಕ್ ಇದೆ.

ಹರೀಶ್ ಕೇರ

ವಿಕಾಸ್ ಕತೆಗಳಲ್ಲಿ ಒಂದು ವಿಲಕ್ಷಣ ಮ್ಯಾಜಿಕ್ ಇದೆ. ಈ ಬದುಕಿನ ಅನೂಹ್ಯ ಮಗ್ಗುಲುಗಳನ್ನು ಕಾಣಿಸಿ, ಇದು ಹೇಗೆ ಸಾಧ್ಯವಾಯಿತೆಂಬ ವಿಸ್ಮಯವನ್ನು ಉಳಿಸಿ, ಜಾದೂಗಾರ ತೆರೆಯನ್ನು ಇಳಿಸುವಂತೆ ಕತೆಗಾರ ಬದಿಗೆ ಸರಿಯುತ್ತಾನೆ. ಅವನು ಕತ್ತರಿಸಿದ ಹುಡುಗಿಯನ್ನು ಮರಳಿ ಜೋಡಿಸದೆ ಇದ್ದಿದ್ದರೆ ಏನಾಗುತ್ತಿತ್ತು ಎಂಬಂಥ ವಿಹ್ವಲ ಕಂಪನವೊಂದು ನಮ್ಮಲ್ಲಿ ಉಳಿಯುತ್ತದೆ. ವಿಕಾಸ್ ಇಂಥ ಕಂಪನ ವಿಸ್ತಾರದ ಕತೆಗಾರ. ವಿಚಿತ್ರ ರೀತಿಯಲ್ಲಿ ಕತೆಯನ್ನು ಮುಗಿಸುವ ಶೈಲಿಯೊಂದನ್ನು ಅವರು ರೂಢಿಸಿಕೊಂಡಿದ್ದಾರೆ. ಇದು ಅಕ್ಷರಗಳಲ್ಲಿ ಮುಗಿದರೂ ಕಲ್ಪನೆಯಲ್ಲಿ ಓದುಗನೊಳಗೆ ನಾನಾ ಬಗೆಯಲ್ಲಿ ಮುಂದುವರಿಯುವ ವಿಕಾಸವಾದ!

ಅವರ ಕತೆಗಳಲ್ಲಿ ತೀರ್ಥಹಳ್ಳಿಯ ಕಾಡಿನ ನಿಗೂಢ ಮೌನ ಮತ್ತು ನೀರಿನ ತಿಳಿಯಾದ ಸಪ್ಪಳ, ಒಂಟಿ ಮನೆಗಳ ಏಕಾಂತದ ನಿಟ್ಟುಸಿರು, ಕಿರುದಾರಿಗಳಲ್ಲಿ ಎದುರಾಗುವ ದಾರಿಹೋಕರ ಮುಗುಳ್ನಗು, ಶಿರಸಿಯ ಜಾತ್ರೆಯ ದಿಗಿಲುಕ್ಕಿಸುವ ರಾಟವಾಳಗಳೆಲ್ಲ ಎದುರಾಗುತ್ತವೆ. ಅವಳು ನಲ್ಲನ ಹಿಂದೆ ಹೋದಳೇ ಗಂಡನ ಜೊತೆಗೇ ಉಳಿದಳೇ, ಮಗಳು ತಂದ ಕಪ್ಪು ಮಾಳ ಬೆಕ್ಕಿನ ಕಣ್ಣು ಹಲ್ಲುಗಳು ತಂದೆಗೆ ಮಾತ್ರ ಕ್ರೂರವಾಗಿ ಕಾಣಿಸುವುದೇಕೆ, ಬಾಗಿಲ್ತಾಯರು ನೀರಿನಲ್ಲಿ ತೇಲಿ ಹೋಗುವುದಕ್ಕೂ ಮಂಗನ ಕಾಟಕ್ಕೂ ಏನು ಸಂಬಂಧ, ನಡುಗಡ್ಡೆಯಲ್ಲಿರುವ ಒಂಟಿ ಜೀವಗಳ ಮನೆಯ ಬಾಗಿಲನ್ನು ರಾತ್ರಿ ನಿಜಕ್ಕೂ ಹುಲಿ ಪರಚಿತೇ, ಬಸವರಾಜ ಹುಡುಕುತ್ತಿದ್ದ ಹುಡುಗಿ ಆ ಮನೆಯಲ್ಲಿದ್ದಳೇ, ಕತೆಯ ಪಾತ್ರವೇ ಬಂದು ಕತೆಯನ್ನು ಬದಲಿಸು ಎಂದು ಕದ ತಟ್ಟಿತೇ, ಸಾಯುವ ಮುನ್ನ ಚಿದಂಬರನಿಗೆ ಅವಳು ಬರೆ ಹಾಕಿದ್ದೇಕೆ- ಇಂಥ ಪ್ರಶ್ನೆಗಳು ವಿಕಾಸರ ಇನ್ನೊಂದು ಕತೆ ಓದುವಂತೆ ನಮ್ಮನ್ನು ಕೈ ಹಿಡಿದು ಜಗ್ಗುತ್ತವೆ.

ಈ ಕತೆಗಳನ್ನು ಹೇಳದೆ ಬಿಡುಗಡೆಯೇ ಇಲ್ಲ ಎಂಬಂತೆ ತೀವ್ರವಾಗಿ ವಿಕಾಸ್ ಬರೆದಿದ್ದಾರೆ. ಜೀವನವೆಂಬುದು ಒಮ್ಮೆ ಉರುಳಲು ಶುರುವಾದರೆ ನಿಲ್ಲಿಸಲು ಸಾಧ್ಯವಾಗದ ದೈತ್ಯ ಚಕ್ರ. ವಿಕಾಸರ ಕತೆಗಳು ಈ ಗಾಲಿಯ ಅಂಚಿನಿಂದ ಫಕ್ಕನೆ ಹಾರಿದ ಚಿಟ್ಟೆ.

‍ಲೇಖಕರು avadhi

2 November, 2019

1 Comment

  1. T S SHRAVANA KUMARI

    ಓದಬೇಕಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading