ಪ್ರೊ ಎಚ್ ಟಿ ಪೋತೆ ಅವರ ಕಾದಂಬರಿ ‘ಮಹಾಯಾನ’
‘ಸಪ್ನ ಬುಕ್ ಹೌಸ್ ‘ ಈ ಕಾದಂಬರಿಯನ್ನು ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ.
ಬಾಬಾಸಾಹೇಬ್ ಡಾ. ಅಂಬೇಡ್ಕರ್ ಎಂಬ ಹೆಸರು ಪರಂಪರಾಗತ ಭಾರತೀಯ ಸಮಾಜದ ಪರಿಕಲ್ಪನೆಗಳನ್ನು ಮೌಲಿಕವಾಗಿ ಪ್ರಶ್ನಿಸಿದ ಮತ್ತು ಮರುರೂಪಿಸಿದ ಸಾಮಾಜಿಕ ಜಾಗೃತಿಯ ಸಂಕೇತ. ಈ ನೆಲದ ನಿರಾಕರಣೆಗೊಳಪಟ್ಟ ಸಮುದಾಯಗಳ ಬದುಕಿನ ಸ್ವಾಭಿಮಾನದ ಸ್ವರವುಳ್ಳ, ಜ್ಞಾನದ ಬೆಳಕನ್ನು ಸರ್ವರಿಗೂ ಹಂಚಬೇಕೆನ್ನುವ ಋಷಿತುಲ್ಯ ವ್ಯಕ್ತಿತ್ವವುಳ್ಳ, ಸಾಮಾಜಿಕ ಸಮಾನತೆಯ ಕನಸು, ಮಾನವೀಯ ಅಂತಃಕರಣವುಳ್ಳಂಥವರು ಅಂಬೇಡ್ಕರ್. ಇಂತಹ ಅಪರೂಪದ ವ್ಯಕ್ತಿತ್ವವನ್ನು ಕುರಿತು ಕಾದಂಬರಿಯನ್ನು ಬರೆದುದು ಅವರ ಜೀವನಗಾಥೆಯನ್ನು ಕಾವ್ಯಮಯವಾಗಿ ಕಟ್ಟಿಕೊಡಬೇಕೆನ್ನುವ ಉದ್ದೇಶದಿಂದಲ್ಲ.
ಬದಲಿಗೆ ಅವರ ಬದುಕನ್ನು ಕೇವಲ ಚಾರಿತ್ರಿಕವಾಗಿ ನೋಡದೆ, ಅವರ ಅಂತರಂಗ, ನೋವು, ಹೋರಾಟ, ತಲ್ಲಣಗಳನ್ನು ಕಲ್ಪನೆ ಮತ್ತು ಅನುಭವಗಳ ಮೂಲಕ ಓದುಗರ ಮುಂದಿಡಬೇಕೆನ್ನುವ ಇಚ್ಛೆಯಿಂದ ಬರೆದುದು. ಕಾರಣವಿಷ್ಟೆ: ಅಂಬೇಡ್ಕರ್ ಬದುಕು ಒಂದು ಕಾಲದ ಸಾಂದರ್ಭಿಕ ಚರಿತ್ರೆಯಲ್ಲ. ಅದು ಅನುದಿನವೂ ನಡೆಯುತ್ತಿರುವ ಸಾಮಾಜಿಕ-ನೈತಿಕ ಸಂಘರ್ಷಗಳ ಸಂಕೇತ; ಬಹುಕಾಲದಿಂದಲೂ ನಿರಾಕರಿಸಲ್ಪಟ್ಟ ಸಮುದಾಯಗಳ ಆಂತರ್ಯದ ಭಾವನೆಗಳ ಪ್ರತೀಕ; ಭಾರತೀಯ ಬಹುರೂಪಿ ಸಮಾಜದ ಸಾಂಸ್ಕೃತಿಕ ವೈರುಧ್ಯಗಳು ಸೃಷ್ಟಿಸಿದ ಆತಂಕಗಳನ್ನು ಎದುರಿಸಲಿಕ್ಕೆ ಬೇಕಾದ ಧೈರ್ಯವನ್ನು ತುಂಬಿದ ಪ್ರಚೋದಕ ಶಕ್ತಿ. ಅಂತಹ ಬದುಕಿನ ಹೊರಗಣ-ಒಳಗಣಗಳೆರಡನ್ನೂ ಮೇಳೈಸಿದ ಸೃಜನ ಬರಹವಿದು. ಅಂಬೇಡ್ಕರರ ಬದುಕನ್ನು ಸೃಜನರೂಪದಲ್ಲಿ ಹೇಳುವ ಮೂಲಕ ಓದುಗರಿಗೆ ಭಾವನಾತ್ಮಕವಾಗಿಯೂ ಸನಿಹವಾಗಿಸುವ ಪ್ರಯತ್ನದ ಭಾಗವೂ ಹೌದು. ಹಾಗಾಗಿ ಇಲ್ಲಿ ನನ್ನದು ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ.
ಈ ಕಾರಣಕ್ಕಾಗಿ ಇಲ್ಲಿಯ ಎಲ್ಲ ಅಂಶಗಳನ್ನು ನಿಖರ ಚರಿತ್ರೆಯ ಮಸೂರದಲ್ಲಿ ನೋಡುವ ಅಗತ್ಯವಿಲ್ಲ. ಹಾಗಂತ ಅಂಬೇಡ್ಕರರ ಆತ್ಮ ಮತ್ತು ಚಿಂತನೆಗಳೆಲ್ಲವನ್ನೂ ಕಲ್ಪಿತಗೊಳಿಸಿಲ್ಲ. ವಾಸ್ತವ-ಕಲ್ಪಿತಗಳ ಹದವಾದ ಮಿಶ್ರಣದೊಂದಿಗೆ ಮುಂದಡಿಯಿಟ್ಟಿದ್ದೇನೆ. ಅಂದರೆ ಕೆಲವು ಸಂಗತಿಗಳು ಕಲ್ಪಿತವಾಗಿದ್ದಾಗಲೂ ಅವು ಅವರ ಬದುಕಿನ ಪ್ರಮುಖ ಘಟನಾವಳಿಗಳೊಂದಿಗೆ, ಅವರ ತಾತ್ವಿಕ ಚಿಂತನೆಯೊಂದಿಗೆ ಬೆರೆತುಕೊಂಡ ಸತ್ಯಾಧಾರಿತ ಸಂಗತಿಗಳಾಗಿವೆ. ಅಂಬೇಡ್ಕರರ ಬಾಲ್ಯದ ಬಡತನ, ಅಕ್ಷರ ಕಲಿಕೆಯ ಹಂಬಲ, ಪಾರಂಪರಿಕ ಅಸ್ಪೃಶ್ಯತೆಯ ನೋವು, ರಾಜಕೀಯ ಚಟುವಟಿಕೆ, ಸಮಾಜೋ-ಧಾರ್ಮಿಕ ಚಳುವಳಿ, ಸಂವಿಧಾನ ರಚನೆಯ ಉತ್ಸಾಹ, ಬೌದ್ಧಧರ್ಮದೆಡೆಗಿನ ತಿರುವು… ಇವೆಲ್ಲವೂ ಇಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಸಂಗತಿಗಳು.
ಮಾನವೀಯ ಧ್ಯೇಯದ ಮಾರ್ಗದರ್ಶಿಯಾದ ಅಂಬೇಡ್ಕರ್ ಚಿಂತನೆಗಳನ್ನು ವರ್ತಮಾನದ ತಲೆಮಾರಿಗೆ ಪರಿಚಯಿಸಬೇಕೆನ್ನುವ ತಹತಹವೂ ಸಹ ಈ ಕಾದಂಬರಿಯ ರಚನೆಗೆ ಮುಖ್ಯ ಪ್ರೇರಣೆಯಾಗಿದೆ. ‘ವಾಸ್ತವಿಕ ಪ್ರಜಾಪ್ರಭುತ್ವ’ದ ಕನಸುಗಾರರಾಗಿದ್ದ ಅಂಬೇಡ್ಕರರ ಆಶಯವು ಅಂಬೇಡ್ಕರೋತ್ತರ ಕಾಲದಲ್ಲಿ ಎಷ್ಟರ ಮಟ್ಟಿಗೆ ಈಡೇರಿದೆ? ಎಂಬ ಮೂಲಭೂತ ಪ್ರಶ್ನೆಯೂ ಸಹ ಈ ಕಾದಂಬರಿಯ ರಚನೆಯಲ್ಲಿ ನನಗೆ ಸದಾ ಕಾಡಿದೆ ಮತ್ತು ಪ್ರೇರಣೆಯನ್ನು ನೀಡಿದೆ. ಹಾಗಾಗಿ ಅಂಬೇಡ್ಕರೋತ್ತರ ಕಾಲದಲ್ಲಿ ಈ ನೆಲದ ಸಮಾಜ ಎಷ್ಟು ಬದಲಾಗಿದೆ? ಅವರ ಕನಸುಗಳು ಎಲ್ಲಿ ನಿಂತಿವೆ? ಎನ್ನುವುದನ್ನೂ ಸಹ ಇಂದಿನ ತಲೆಮಾರು ಆಲೋಚಿಸಬೇಕಿದೆ.
ಈ ಕಾದಂಬರಿಯನ್ನು ಓದುವಾಗ ಅಲ್ಲಿನ ಪಾತ್ರಗಳನ್ನಷ್ಟೇ ನೋಡಬಾರದು. ಬದಲಿಗೆ ತನ್ನನ್ನು ತಾನು ಆ ಪಾತ್ರಗಳೊಳಗೆ ನೋಡಿಕೊಳ್ಳಬೇಕು. ಇನ್ನು ಈ ಕಾದಂಬರಿಯನ್ನು ಬರೆಯಲಿಕ್ಕೆ ನಾನು ತೆಗೆದುಕೊಂಡ ಅವಧಿಯೂ ದೀರ್ಘವಾದುದು. ಮಾಹಿತಿಯನ್ನು ಸಂಗ್ರಹಿಸಲಿಕ್ಕೆ ಮಾಡಿದ ಹುಡುಕಾಟವೂ ಅಪಾರ. ಅಂಬೇಡ್ಕರರ ಮೂಲ ಕೃತಿಗಳನ್ನು, ಕನ್ನಡ ಸೇರಿದಂತೆ ಇಂಗ್ಲಿಷ್, ಮರಾಠಿ, ಹಿಂದಿಯಲ್ಲಿರುವ ಅವರ ಕುರಿತಾದ ಅನೇಕ ಪುಸ್ತಕಗಳನ್ನು ಈ ಕಾದಂಬರಿಯ ರಚನೆಗೆ ಬಳಸಿಕೊಂಡಿದ್ದೇನೆ.
ಈ ಎಲ್ಲ ಬರೆಹಗಳು ನನ್ನ ಬರೆಹಕ್ಕೆ ಅತ್ಯಮೂಲ್ಯವಾಗಿ ಸಹಾಯಕವಾಗಿವೆ ಎನ್ನುವುದನ್ನು ಅತ್ಯಂತ ವಿನಮ್ರವಾಗಿ ನೆನೆಯುತ್ತೇನೆ. ಸಾಂಸ್ಕೃತಿಕ ಸಮಷ್ಟಿ ಧ್ಯಾನದ ಮೂಲಕ ಭಾರತೀಯ ಸಾಮಾಜಿಕತೆಯನ್ನು ಭಿನ್ನ ಶೈಲಿಯಲ್ಲಿ ನಿರ್ವಚಿಸಿ, ಪರಂಪರೆಯ ನಾದಗಳನ್ನು ಹೊಸ ನಿನಾದದೊಂದಿಗೆ ಮರುರೂಪಿಸಿದ ಅಂಬೇಡ್ಕರ್ ಬದುಕನ್ನು ಸೃಜನಕೃತಿಯಲ್ಲಿ ಓದುಗರ ಮಡಿಲಿಗೆ ಹಾಕುತ್ತಿದ್ದೇನೆ. ಇದರ ಪೋಷಣೆ ಏನಿದ್ದರೂ ಓದುಗ ಮನಸ್ಸುಗಳದ್ದೇ….






0 Comments