ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ವಾಂತಿ ಪುರಾಣ' – ಸಂಗೀತ ರವಿರಾಜ್ ಬರೀತಾರೆ

ಸಂಗೀತ ರವಿರಾಜ್

ಈ ವಾಂತಿಯು ಸೃಷ್ಡಿಸಿದ ಅವಾಂತರಗಳನ್ನು ಎಲ್ಲಿಂದ ಹೇಗೆ ನಿರೂಪಿಸಲಿ ಎಂಬುದೆ ತಿಳಿಯುತ್ತಿಲ್ಲ. ನನಗೆ ಬುದ್ದಿ ತಿಳಿದಂದಿನಿಂದ ನನ್ನ ಮತ್ತು ಇದರ ನಂಟು ಬಲು ಆಪ್ತ.ನನಗೆ ಬುದ್ಧಿ ತಿಳಿಯುವ ಮೊದಲೇ ಈ ಚಾಳಿ ಇತ್ತಾದರು ನನ್ನ ನೆನಪಿನಲ್ಲಿ ಇಲ್ಲವಷ್ಟೆೆ! ಅಜೀರ್ಣರಾದವರಿಗೆ, ಗರ್ಭಿಣಿಯರಿಗೆ ಸಾಮಾನ್ಯವಾಗಿರುವ ವಾಂತಿ ನನಗೆ ಮಾತ್ರ ಎಲ್ಲಾ ಕಾಲದಲ್ಲಿಯು ಸಾಮಾನ್ಯವಾಗಿಬಿಟ್ಟಿದೆ. ಒಂದು ಹಂತದಲ್ಲಿ ಇದು ಎಷ್ಟು ಜಾಸ್ತಿಯಾಗಿಬಿಟ್ಟಿತೆಂದರೆ ಬಸ್ ನಿಲ್ದಾಣಕ್ಕೆ ಹೋಗುವಾಗಲೆ ಏನೋ ಅವ್ಯಕ್ತ ಭಯ ಮತ್ತು ಭ್ರಮೆಯಿಂದ ವಾಕರಿಕೆ ಬರುವಂತಾಗುತಿತ್ತು. ಆಗ ಮೂಗು ಬಾಯನ್ನು ಉಸಿರಾಡದಂತೆ ಗಟ್ಟಿಯಾಗಿ ಅದುಮಿ ನಿಂತುಬಿಡುತ್ತಿದ್ದೆ. ನನ್ನ ವಾಂತಿಯ ದುರಾಭ್ಯಾಸಕ್ಕೆ ತಕ್ಕುದಾಗಿ ನಿರ್ಧಿಷ್ಟ ಮನೆ ಮತ್ತು ಶಾಲೆ ದಕ್ಕಿದ್ದರೆ ಅನುಕೂಲವಾಗುತಿತ್ತು. ಆದರೆ ಶಿಕ್ಷಕ ದಂಪತಿಗಳಾದ ನನ್ನ ತಂದೆ ತಾಯಿಗೆ ವರ್ಗಾವಣೆ ಸಾಮಾನ್ಯವಾಗಿತ್ತು. ಇದರೊಂದಿಗೆ ನನ್ನ ಬಸ್ ಪ್ರಯಾಣವು ಸಾಮಾನ್ಯವಾಗಿತ್ತು. ಜೊತೆಗ ನನ್ನ ವಾಂತಿಯೂ…!
ಒಂದನೇ ತರಗತಿಗೆ ತಂದೆ ಗುರುಗಳಾಗಿದ್ದ ದೇವರಕೊಲ್ಲಿಯ ಶಾಲೆಗೆ ಸೇರ್ಪಡೆಗೊಳಿಸಿದರು. ಶಾಲೆಯ ಪಕ್ಕದಲ್ಲಿ ಬಾಡಿಗೆ ಮನೆ ಗೊತ್ತುಮಾಡಿ ಅಲ್ಲಿ ವಾಸವಾಗಿದ್ದೆವು. ಸರಕಾರಿ ಉದ್ಯೋಗಿಗಳಿಗೆ ಕ್ವಾಟರ್ಸನಲ್ಲಿ ಮನೆ ಖಾಲಿ ಇದೆ ಎಂದು ತಿಳಿದ ಕೂಡಲೇ ಬಾಡಿಗೆ ಕೊಡುವ ಉಸಾಬರಿ ಬೇಡವೆಂದು ದೇವರಕೊಲ್ಲಿಯಿಂದ ಸಂಪಾಜೆಗೆ ನಮ್ಮ ಬಿಡಾರ ಬಂತು. ದೇವರಕೊಲ್ಲಿಯಲ್ಲಿ ಶಾಲೆಗೆ ಸೇರಿಯಾದ್ದರಿಂದ ತಂದೆಯೊಡನೆ ಸಂಪಾಜೆಯಿಂದ ಪ್ರತಿದಿನ ಬಸ್ನಲ್ಲಿ ಹೋಗುವ ಪರಿಪಾಠ ಪ್ರಾರಂಭವಾಯ್ತು. ಸಂಪಾಜೆ ಗೇಟ್ ದಾಟಿ ಹೋಗುತ್ತಿದ್ದಂತೆ ತಿರುವು ಮುರುವು ಏರಿಳಿತಗಳ ಘಾಟಿ ರಸ್ತೆಯಲ್ಲಿ ಹೊಟ್ಟೆ ತೊಳೆಯಿಸಿಕೊಂಡು ಬರುತಿತ್ತು. ಅಲ್ಲಿಂದ ಮುಂದೆ ಎಲ್ಲರಿಗು ಅರಿವಾಯಿತು ನೋಡಿ ನನ್ನ ವಾಂತಿ ಪಜೀತಿಯ ಪರಿಚಯ. ಉಮ್ಮಳಿಸಿ ಬರುವ ವಾಂತಿಯನ್ನು ಆ ಪುಟ್ಟ ಕೈಗಳಲ್ಲಿ ಅದುಮಿ ಹಿಡಿಯುವಷ್ಟರಲ್ಲಿ ಅಪ್ಪ ಪಾಸ್ಟಿಕ್ ಕವರ್ ಬಿಚ್ಚಿ ಹಿಡಿಯುತ್ತಿದ್ದರು. ನನ್ನ ವಾಂತಿಯಿಂದ ಭೀತಿಗೊಂಡ ಅಪ್ಪ ಪುನ; ದೇವರಕೊಲ್ಲಿಗೆ ಬಾಡಿಗೆ ಮನೆಗೆ ಒಂದು ವರ್ಷದ ಮಟ್ಟಿಗೆ ಹೋಗಬೇಕೆ!ಇಲ್ಲಿಗೆ ನಿಲ್ಲಲಿಲ್ಲ ನನ್ನ ವಾಂತಿ ಅವಾಂತರಗಳು.
ಅಮ್ಮನಿಗೆ ಮೊದಲ ಸಲ ಶಿಕ್ಷಕಿಯಾಗಿ ಬಂಟ್ವಾಳ ತಾಲ್ಲೂಕಿನ ದೇವಸ್ಯಮುಡೂರು ಎಂಬ ಹಳ್ಳಿ ಶಾಲೆಯಲ್ಲಿ ನೇಮಕವಾಯಿತು.ಅಮ್ಮ ಒಬ್ಬರೆ ಅಲ್ಲಿ ಹೋಗಿ ಇರಬೇಕೆಂಬ ಕಾರಣದಿಂದ ಅಪ್ಪ ನನ್ನನ್ನು ಅಲ್ಲಿಗೆ ಎರಡನೆ ತರಗತಿಗೆ ಕಳುಹಿಸಿ ಬಾಡಿಗೆ ಮನೆ ಗೊತ್ತು ಮಾಡಿದರು.ತಂದೆ ಮತ್ತು ತಮ್ಮ ಸಂಪಾಜೆಯಲ್ಲಿ ವಾಸ ಮುಂದುವರಿಸಿದರು. ಒಂದು ವಾರನಾವಿಬ್ಬರು ಸಂಪಾಜೆಗೆ ಹೋದರೆ ಇನ್ನೊಂದು ವಾರ ಅವರಿಬ್ಬರು ಬರುತ್ತಿದ್ದರು. ಮತ್ತೆ ಹತ್ತಿಕ್ಕಿಕೊಂಡಿತು ನೋಡಿ ವಾಂತಿ ತಾಪತ್ರಯ. ಶನಿವಾರ ಮಧ್ಯಾಹ್ನ ನಾವು ಸುಮಾರು 50 ಕಿ.ಮೀ. ದೂರದ ಸಂಪಾಜೆಗೆ ಹೊರಟು ಬರಬೇಕಿತ್ತು. ನಾವು ಕೆಂಪು ಬಸ್ ಹತ್ತಿದೊಡನೆ ಅಮ್ಮ ಕಿಡಕಿ ಬದಿಯ ಆಸನಕ್ಕಾಗಿ ಹುಡುಕುತ್ತಿದ್ದರು. ಸಿಗದಿದ್ದರೆ ಅವರಿವರಿಗೆ ದಮ್ಮಯ್ಯ ಹಾಕಿ ಸೀಟ್ ದಕ್ಕಿಸಿಕೊಳ್ಳಲೆ ಬೇಕಿತ್ತು. ಅದೂ ಎಡಬದಿಯಲ್ಲಿಯೆ ಆಗಬೇಕು. ಬಲಬದಿಯಲ್ಲಿ ಕಳಿತು ವಾಕರಿಸಿದರೆ ನಿವರ್ಾಹಕನ ಸಹಸ್ರ ನಾಮಾರ್ಚನೆಯನ್ನು ಕೇಳಬೇಕಿತ್ತು. ಕೆಕ್ಕರಿಸಿ ನೋಡುವ ಸಹಪ್ರಯಾಣಿಕರೊಂದಿಗೆ ಏಗುವುದೇ ದೊಡ್ಡ ಸಾಹಸ ಆಗ. ಮತ್ತೆ ವಾಪಾಸ್ ಸೋಮವಾರ ಬೆಳಗ್ಗೆ ಹೊರಡು ಬರುವಾಗ ಮತ್ತದೆ ಕಥೆಯ ವ್ಯಥೆ. ಅಮ್ಮನಿಗೆ ನನ್ನ ಮೇಲೆ ಕನಿಕರವುಂಟಾಗಿ ಇನ್ನು ಪ್ರತಿವಾರವು ನೀವೆ ಬಂದು ಹೋಗಿ ಇಲ್ಲಿಗೆ ಎಂಬುದಾಗಿ ತಂದೆಗೆ ತಾಕೀತು ಮಾಡಿದ್ದರು. ನಾನು ಐದನೆ ಇಯತ್ತೆಗೆ ಬಂದಾಗ ತಂದೆ ಇನ್ನಿಲ್ಲದಂತೆ ಓಡಾಡಿ ಅಮ್ಮನನ್ನು ಸಂಪಾಜೆಗೆ ವರ್ಗ ಮಾಡಿಸಿದರು.
ತದನಂತರ ಮನೆ ಹತ್ತಿರದ ಶಾಲೆಗೆ ನಡೆದು ಹೋಗುವ ಪರಿಪಾಟ ಪ್ರಾರಂಭವಾದಂದಿನಿಂದ ತಾತ್ಕಾಲಿಕವಾಗಿ ನನ್ನ ವಾಂತಿ ಪುರಾಣ ನಿಂತತಾಯಿತು. ಆದರು ಬಸ್ಸಿನಲ್ಲಿ ಹೋಗುವ ಪ್ರಮೇಯ ಬಂದೆ ಬರುತ್ತಿತ್ತು. ನನಗೆ ನೆನಪಿದ್ದಂತೆ ಚಿಕ್ಕಂದಿನಲ್ಲಿ ಪ್ರತಿ ಬಾರಿಯ ಬಸ್ ಪ್ರಯಾಣದಲ್ಲಿ ವಾಂತಿ ಕಟ್ಟಿಟ್ಟ ಬುತ್ತಿ. ನೀರು ಮತ್ತು ಪ್ಲಾಸ್ತಿಕ್ ಕವರ್ ಖಾಯಂ ಗಿರಾಕಿಯೆನಗೆ. ಒಂದು ಬಾರಿ ಉಮ್ಮಳಿಸಿ ಬಂದ ವಾಂತಿಯನ್ನು ಅದುಮಿ ಹಿಡಿದು ಇನ್ನೇನು ಕಿಟಕಿಗೆ ಬರಬೇಕನ್ನುವಷ್ತರಲ್ಲಿ ಬಟ್ಟೆ ಮೇಲೆ ರಂಗೋಲಿ ಇಟ್ಟಾಯ್ತು. ಆ ಹೊತ್ತಿನಲ್ಲಿ ಅಮ್ಮನನ್ನು , ನನ್ನನ್ನು ದುರುಗುಟ್ಟ್ತಿಕೊಂಡು ನೋಡುವ ಸಹಪ್ರಯಾಣಿಕರ ನೋಟವು ಸಹಿಸಲಾಧ್ಯ. ಅನುಕಂಪವಿರುವ ನಿರ್ವಾಹಕರಿದ್ದರೆ ಅದು ನಮ್ಮ ಬಾಗ್ಯ. ಇಲ್ಲದಿದ್ದರೆ ನಮ್ಮ ಫಜೀತಿ ದೇವರಿಗೆ ಪ್ರೀತಿ. ಆ ಫಜೀತಿಗಳನ್ನು ಈಗ ಆಲೋಚಿಸಿದರೆ ನಗು ತಡೆಯಲಾಗದಂತೆ ಬರುತ್ತದೆ. ಈ ವಾಂತಿಯ ಕಷ್ಡವನ್ನರಿತ ನಾನು ವಿಜಯಕರ್ನಾಟಕದ ವಾಚಕರ ವಿಜಯ ವಿಭಾಗಕ್ಕೆ ಸಾರಿಗೆ ಇಲಾಖೆಯವರು ಪ್ರತಿ ಆಸನಕ್ಕೋಂದರಂತೆ ಪ್ಲಾಸ್ಟಿಕ್ ಕವರ್ ನೀಡಿ ವಾಂತಿ ತಾಪತ್ರಯದವರಿಗೆ ಅನುಕೂಲವಾಗಲಿ ಎಂಬುದಾಗಿ ಬರೆದ ಪತ್ರ ಪ್ರಕಟವಾಗಿತು.

ಮುಂದೆ ಹೈಸ್ಕೂಲ್, ಪಿಯುಸಿ, ಡಿಗ್ರಿ ಹೀಗೆ ಓದುವಾಗ ನಮ್ಮ ಮೂಲಮನೆ ಗೂನಡ್ಕದಿಂದ ಹೋಗುವಂತಾಗಿ ನಿರುಮ್ಮಳಳಾಗಿದ್ದೆ. ಏಕೆಂದರೆ ಸುಳ್ಯಕ್ಕೆ ಹೋಗುವ ರಸ್ತೆ ತಿರುವು ಮುರುವು ಕಡಿಮೆ. ಸಾಧಾರಣ ನೇರ ರಸ್ತೆಯ ಮಂಗಳೂರು ಹಾದಿಯಲ್ಲಿ ನನ್ನ ವಾಂತಿಯ ಚಟಕ್ಕೆ ಸ್ವಲ್ಪ ಮಟ್ಟ್ತಿಗೆ ಸುಗಮವಾಗಿ ಹಾಯೆನಿಸುತ್ತಿತ್ತು. ಪ್ರಾಯದಲ್ಲು ಸ್ವಲ್ಪ ದೊಡ್ಡವಳಾದ್ದರಿಂದ ವಾಂತಿಯನ್ನು ನಿಗ್ರಹಿಸುವ ಕಲೆಯು ಒಲಿದಿತ್ತು. ಸುಳ್ಯಕ್ಕೆ ಹೋಗಿಬರುವ ಹಾದಿಯಲ್ಲಿ ನಾವು ಬಸ್ಗಿಂತ ಹೆಚ್ಚಾಗಿ ವ್ಯಾನ್ಗಳನ್ನು ಹಿಡಿಯುತ್ತಿದ್ದೆವು. ಅದರಲ್ಲಿ ಚಾಲಕನ ಹಿಂಬದಿ ಉಲ್ಟಾ ಮುಖ ಮಾಡಿ ಕೂರುವ ಆಸನಗಳಿರುತ್ತಿದ್ದವು. ಬೇರೆ ಜಾಗವಿಲ್ಲದೆ ಆ ಸೀಟಿನಲ್ಲಿ ನಾ ಕೂತೆನೆಂದರೆ ಹೊಟ್ಟೆಯಲ್ಲಿ ಸುನಾಮಿ ಪ್ರಾರಂಭವಾಗಿ ಒಂದು ನಿಮಿಷದಲ್ಲಿ ಎದ್ದು ನಿಲ್ಲುತ್ತಿದ್ದೆ. ಮುಂದೆ ಬೆಂಗಳೂರಿನಲ್ಲಿ ಬಿ.ಇಡಿ ಮಾಡುವ ಹಂತದಲ್ಲಿ ಊರಿಗೆ ಬರುವ ಹಾದಿ ಮಗದೊಮ್ಮೆ ದುರ್ಗಮ. ಕುಶಾಲನಗರ ದಾಟಿದಂತೆ ಹೊಟ್ಟೆ ತೊಳೆಯಿಸಿಕೊಂಡು ಮತ್ತೆ ಬಸ್ ರಂಗಾಗುತ್ತಿತ್ತು. ತಿರುಗಿ ಹೊರಟಾಗ ಮಡಿಕೇರಿ ತಲುಪುವ ಮೊದಲೆ ವ್ಯಾಕ್ ವ್ಯಾಕ್! ಶಾಲಾ ಕಾಲೇಜ್ಗಳಲ್ಲಿದ್ದಾಗ ಪ್ರವಾಸ ಸಂಧರ್ಭದಲ್ಲಿ ನಮ್ಮಂಥವರಿಗೆ ಅಂದರೆ ವಾಂತಿಯ ದೊರೆಗಳಿಗೆ ಮೊದಲೆ ಮಾತ್ರೆ ತೆಗೆದುಕೊಳ್ಳಿ ಎಂಬುದಾಗಿ ತಾಕೀತು ಮಾಡುತ್ತಿದ್ದರು. ಆಗ ಮಾತ್ರೆ ತೆಗೆದುಕೊಂಡಿದ್ದೆನಾದರು ಅದರ ಫಲಿತಾಂಶ ಬಗ್ಗೆ ಈಗ ಸರಿಯಾಗಿ ನೆನಪಿಲ್ಲ. ಯಾಕೆಂದರೆ ಮಾತ್ರೆ ತಿಂದು ವಾಂತಿಯಾದ ಉದಾಹರಣೆಗಳು ನನಗೆ ಗೊತ್ತಿವೆ. ಹಲವಾರು ಬಾರಿ ಮಾತ್ರೆ ತೆಗೆದುಕೊಂಡರೆ ಅಡ್ಡ ಪರಿಣಾಮಗಳು ಜಾಸ್ತಿ ಎಂಬ ಆಂಟಿಯ ಉಚಿತ ಸಲಹೆಯ ಮೇರೆಗೆ ಅದನ್ನು ನುಂಗುತ್ತಿರಲಿಲ್ಲ. ಕೈಯಲ್ಲಿ ನಿಂಬೆಹಣ್ಣು ಇರಿಸಿಕೊಳ್ಳುವುದು ಮಾಡುತ್ತಿದ್ದರು ಇದ್ಯಾವುದು ನನ್ನ ವಾಂತಿಗೆ ನಿಲುಕದ ಸಂಗತಿ!
ಮುಂದೆ ಮದುವೆಯಾಗಿ ಮತ್ತೆ ವಾಪಾಸ್ ಸಂಪಾಜೆ ಘಾಟಿಯ ತಪ್ಪಲಿಗೆ ಬಂದೆ. ಆಡಳಿತಾತ್ಮಕವಾಗಿ ನಮ್ಮೆಲ್ಲಾ ಚಟುವಟಿಕೆಗಳು ಕೊಡಗಿಗೆ ಸೇರಿದಾದ್ದರಿಂದ ಮತ್ತೆ ಪುನ; ವಾಂತಿ ಹತ್ತಿಕ್ಕಿಕೊಂಡಿತು ನೋಡಿ! ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ, ಎಂ. ಎ. ಪರೀಕ್ಷೆ ತೆಗೆದುಕೊಂಡಾಗ ಹೀಗೆ ಹಲವು ಬಾರಿ ಮಡಿಕೇರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಇಲ್ಲಿಯವರೆಗೂ ಬಸ್ ಪ್ರಯಾಣದಲ್ಲಿ ವಾಂತಿ ಮಾಡಿಯೆ ಜೀವನ ಕಳೆದ ನಾನು ಕುಗ್ಗಿ ಹೋಗಲಿಲ್ಲ, ಬದಲಿಗೆ ಸ್ವಲ್ಪ ಗಟ್ಟಿಗಿತ್ತಿಯಾಗಿ ವಾಂತಿಯನ್ನು ಹತ್ತಿಕ್ಕಿಕೊಳ್ಳುವ ಮಟ್ಟ್ತದವರೆಗೆ ಬಂದಿದ್ದೆ. ಮದುವೆಯಾದ ನಂತರವು ಬಸ್ಸಿನಲ್ಲಿ ವಾಂತಿ ಮಾಡುವುದೆಂದರೆ ನಾಚಿಕೆಯ ವಿಷಯವಲ್ಲವೆ? ಆದರು ಕೆಲವೊಮ್ಮೆ ಮಡಿಕೇರಿಗೆ ಹೋಗಿ ಬರುವ ಹಾದಿಯಲ್ಲಿ ಹತೋಟಿ ಮೀರಿ ಕಕ್ಕಿಬಿಡುತ್ತಿದ್ದೆ. ನನ್ನ ವಾಂತಿ ಕಾದಂಬರಿ ಇಲ್ಲಿಗೆ ಮುಗಿಯಲಿಲ್ಲ. ಗಂಡನ ಎ.ಸಿ ಕಾರಲ್ಲಿ ಮನೆಮಂದಿಯೆಲ್ಲಾ ಜೊತೆಗೆ ಹೊರಟಾಗ ಧುಮ್ಮಿಕ್ಕುವ ಪ್ರವಾಹದಂತೆ ವಾಂತಿ ಸಮಸ್ಯೆ ಎದುರಾಗುತ್ತದೆ. ವಾಂತಿ ಅಭ್ಯಾಸ ಇರುವವರಿಗೆ ಎ.ಸಿ.ಯಿಂದ ಹೊರಬರುವ ಕ್ಲೋರೋ ಪ್ಲೋರೋ ಕಾರ್ಬನ್ ಆಗಿಬರುವುದಿಲ್ಲ. ಕಾರಲ್ಲಿಯು ವಾಂತಿ ಅಂದರೆ ಗಂಡನಿಗೆ ಎಲ್ಲಿಲ್ಲದ ಸಿಟ್ಟು ಹಾಜರಾಗುತ್ತದೆ. ಬಸ್ಸು ,ಕಾರು ಯಾವುದು ಆಗದಿದ್ರೆ ನಡ್ಕೊಂಡು ಬಾ ಇಲ್ದಿದ್ರೆ ತೆಪ್ಪಗೆ ಮನೆಯಲ್ಲಿರು ಎಂಬ ಸಹಸ್ರನಾಮಾರ್ಚನೆ. ನಮ್ಮ ಮನೆಯಲ್ಲಿ ಯಾರಿಗು ಇಲ್ಲದ ವಾಂತಿ ಇವಳಿಗೆಲ್ಲಿಂದ ಬಂತಪ್ಪಾ ಎಂದು ನಮ್ಮಮ್ಮ ಈಗಲೂ ತಲೆ ಚಚ್ಚಿಕೊಳ್ಳುತ್ತಾರೆ. ಆದರೆ ನನ್ನ ಮಗಳಿಗೆ ಇದು ನನ್ನಿಂದ ಬಳುವಳಿಯಾಗಿ ಬಂದುಬಿಟ್ಟಿದೆ. ಗಂಡನ ಸಿಟ್ಟು ಇನ್ನು ತಾರಕ್ಕಕ್ಕೇರಿದೆ. ಎಲ್ಲಿ ಕಾರೊಳಗೆ ಗಲೀಜು ಮಾಡಿಬಿಡುತ್ತೇವೋ ಅಂತ ಭಯದಿಂದ ಹೊರಡುವ ಮೊದಲು ಏನನ್ನು ಮರೆತರು ಕಾರೊಳಗೆ ಸಣ್ಣ ಬಕೆಟ್ವೊಂದನ್ನು ಇಡಲು ಮರೆಯುವುದಿಲ್ಲ.
ನನಗೆ ಇರಿಸು ಮುರಿಸಾದ ಇನ್ನು ಒಂದು ಪ್ರಸಂಗವನ್ನು ನಿಮಗಿಲ್ಲಿ ಹೇಳುತ್ತೇನೆ. ಹತ್ತಿರದ ಸಂಬಂಧಿಕರ ಎಂಗೇಜ್ಮೆಂಟ್ ಸಲುವಾಗಿ ಹುಡುಗಿ ಮನೆ ತೀರ್ಥಹಳ್ಳಿಗೆ ಹೋಗುವ ಸಂಧರ್ಭ ಬಂದಿತ್ತು. ದೂರದ ಊರು ಹೋಗದ ಊರೆಂದು ಭಾರಿ ಜೋರಾಗಿಯೆ ತಯರಾಗಿ ನಾನು, ಮಗಳು ಮತ್ತು ಅತ್ತೆ ಹೊರಟೆವು. ಊರ ಹೆಸರು ಕೇಳಿಯೆ ನನ್ನ ಸ್ಥಿತಿಯ ಅರಿವಾಗಿರಬಹುದು ನಿಮಗೆ! ನಾವು ಮೂವರು ನನ್ನ ಚಿಕ್ಕಪ್ಪನ ಕಾರಲ್ಲಿ ಅವರೊಂದಿಗೆ ಹೋಗುವುದೆಂದು ತೀರ್ಮಾನವಾಯ್ತು. ಬೆಳ್ಳಂಬೆಳಗೆ 4 ಗಂಟೆೆಗೆ ಎ.ಸಿ ಕಾರೊಳಗೆ ನುಗ್ಗಿದ್ದೆ ತಡ ಅತ್ತರಿನ ಘಮದೊಂದಿಗೆ ಆಗಲೇ ಹೊಟ್ಟೆಯೊಳಗೆ ತಿರುಗಾಟ ಶುರುವಾಯಿತು. ಜೊತೆಗೆ ಮಗಳು ಬೇರೆ ಏನು ತೋಚದವಳು. ಹೊಟ್ಟೆಗೆ ಏನು ತಿನ್ನದಿದ್ದರು ವಾಕರಿಕೆ ಬರುವುದಕ್ಕೇನು ಕಡಿಮೆಯಿರಲಿಲ್ಲ. ಹೊರಡುವ ತರಾತುರಿಯಲ್ಲಿ ನಮಗಿಬ್ಬರಿಗು ಬೇಕಾದಷ್ಟು ವಾಂತಿಯ ಪರಿಕರಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಬೀಸಿರೋಡಲ್ಲಿ ಬೆಳಗಿನ ತಿಂಡಿಗೆ ಕಾರ್ ನಿಲ್ಲಿಸುವಾಗ ಹೊಟ್ಟೆ ತುಂಬಾ ತಿಂದರೆ ವಾಂತಿ ಸಮಸ್ಯೆ ಕಡಿಮೆಯೆಂದು ಯಾರೋ ಹೇಳಿದ ಪೊಳ್ಳು ಆಶ್ವಾಸನೆ ಮೇರೆಗೆ ಸೇರದಿದ್ದರು ತಿಂದೆ. ಮತ್ತೆ ಪ್ರಾರಂಭವಾಯಿತು ನೋಡಿ, ಆಗಾಗ ಕಾರ್ ನಿಲ್ಲಿಸಿ ಅಂತ ದುಂಬಾಲು ಬೀಳುತ್ತಿದ್ದೆ. ಜೊತೆಗೆ ಮಗಳು ಬೇರೆ ಹೇಳದೆ ಕೇಳದೆ ಕಾರೊಳಗೆ ನನ್ನ ಮೇಲೆ ಲೆಕ್ಕವಿಲ್ಲದಷ್ತು ಸಲ ವಾಂತಿ ಮಾಡಿಯೆ ಬಿಟ್ಟಳು. ಅಲ್ಲಲ್ಲಿ ನಿಲ್ಲಿಸಿ ತೊಳೆದು ಹೊಗುವ ಹೊತ್ತಿಗೆ ಚಿಕ್ಕಪ್ಪನಿಗೆ ಸಾಕು ಸಾಕಾಗಿ ಹೋಯಿತು.
ಪುಣ್ಯಕ್ಕೆ ಅತ್ತೆ ಇದ್ದಿದ್ದರಿಂದ ಮಗುವನ್ನು ಅವರು ಸುಧಾರಿಸುತ್ತಿದ್ದರು. ನನ್ನ ಸುಧಾರಣೆ ನನಗೆ ತಾನೆ!?ಕೊನೆಗು ತೀರ್ಥಹಳ್ಳಿ ತಲುಪಿ ಔಪಚಾರಿಕವಾಗಿ ವಾಂತಿಯಿಂದ ತಡ ಆಯ್ತು ಎಂದಾಗ, ಅಲ್ಲಿನ ನೆಂಟರು ಅಂದು ನಾವು ನಿಮ್ಮೂರಿಗೆ ಬಂದಾಗ ಇದೆ ಕತೆಯಾಗಿತ್ತು. ಕಾರನ್ನು ನದಿ ಕಂಡಲ್ಲಿ ನಿಲ್ಲಿಸಿ ತೊಳೆದು ಬಂದದ್ದು ಎಂದಾಗ ನನ್ನ ಜಾತಿಯವರು ಎಲ್ಲಾ ಕಡೆ ಇದ್ದಾರೆಂದು ಒಳಗೊಳಗೆ ಕುಶಿಪಟ್ಟೆ! ಮತ್ತೆ ತೀರ್ಥಹಳ್ಳಿಯಿಂದ ತಿರುಗಿ ಬರುವಾಗ ಅದೇ ತಿರುವು ಮುರುವು ರಸ್ತೆಯ ಘಾಟಿಯಲ್ಲಿ ವಾಂತಿ ಬರಲಿಲ್ಲವೆಂದು ಹೇಗೆ ಹೇಳಲಿ? ಊರಿಗೆ ಬಂದ ನಂತರ ಸರ್ವೀಸ್ ಸ್ಟೇಷನ್ನಲ್ಲಿ ಚಿಕ್ಕಪ್ಪ ಕಾರನ್ನು ಒಳಗೆ ಹೊರಗೆ ಸಾಧ್ಯವಾದಷ್ಟು ಸಲ ತೊಳೆಯಿಸಿದ್ದು ಬೇರೆ ವಿಷಯ.
ಇಷ್ಟೆಲ್ಲಾ ವಾಂತಿ ಮಾಡಿದ ನಾನು ಗರ್ಭಿಣಿಯಾಗಿದ್ದಾಗ ವಾಂತಿ ಮಾಡಿದ್ದು ಬಲು ಅಪರೂಪ ಎಂಬುದು ಬಲು ಅಚ್ಚರಿಯ ನಿರ್ವಿವಾವಾದ ಸಂಗತಿ. ತೀರ್ಥಹಳ್ಳಿಯಿಂದ ಬಂದ ನಂತರ ವಾಂತಿ ತಡೆಯುವ ಮಾತ್ರೆಯನ್ನು ಅತ್ತೆ ಮನೆಯಲ್ಲಿ ತಂದಿಟ್ಟಿದ್ದಾರೆ. ದೂರ ಹೊರತಾಗಲೆಲ್ಲಾ ಮಾತ್ರೆ ನುಂಗದೆ ಕಳುಹಿಸುತ್ತಿಲ್ಲ. ನಾವಿಬ್ಬರು ವಿಮಾನದಲ್ಲಿ ಹೋದಾಗ ಹೇಗಮ್ಮ ವಾಂತಿ ಮಾಡೋದು ಎಂಬ ಮಗಳ ಮುಗ್ದ ಪ್ರಶ್ನೆಗೆ ನಾನು ಪೆದ್ದು ಪೆದ್ದು ಉತ್ತರ ಕೊಟ್ಟು ಅವಳನ್ನು ನಗಿಸುತ್ತೇನೆ. ಮನುಷ್ಯರೆಲ್ಲರು ತಮ್ಮ ಜೀವನದ ಒಂದಾದರು ಸಂಧರ್ಭದಲ್ಲಿ ವಾಂತಿ ಮಾಡಿಯೆ ಮಾಡಿರುತ್ತಾರೆ ಎಂಬ ಬಾವನೆ ನನ್ನದು.
 
 

‍ಲೇಖಕರು G

2 July, 2014

4 Comments

  1. vijaykanth patil

    ee hotthiguu vanthi madikollada nanage nimma vaanthi purana vakarike tharalilla…prabandha chhendha…

  2. smitha Amrithraj

    haha..)) chennaagide sangeetha ,vaanthi pajeethi-smitha.

  3. P. Bilimale

    Vimanadalli Delhige bandre Vanthi agolla,

  4. sangeetha raviraj

    ee barahakke hakida sandrbika chitra thumba sukthavagide mathu chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading