ವಸು ವತ್ಸಲೆ ಕಥೆ – ಕಪ್ಪೆ ಮದುವೆ..

ವಸು ವತ್ಸಲೆ

ವಸು ವತ್ಸಲೆ (ವತ್ಸಲ) ವೃತ್ತಿಯಲ್ಲಿ ಶಿಕ್ಷಕಿಯಾಗಿ ಆನೇಕಲ್ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಕತೆ, ಕವನ, ಭಾವಗೀತೆ, ಚಲನಚಿತ್ರ ಸಾಹಿತ್ಯ ಕಾದಂಬರಿ, ಮಕ್ಕಳ ಕತೆ, ಸಂಘಟನೆ, ಕೃತಿ ಸಂಪಾದನೆ ಇವರ ಪ್ರವೃತ್ತಿ. ಇಲ್ಲಿಯವರೆಗೆ ೧೧ ಕೃತಿಗಳು ಹೊರಬಂದಿವೆ.

ಇವರ ‘ಕಪ್ಪೆ ಮದುವೆ’ ಕೃತಿ ಇತ್ತೀಚಿಗೆ ಬಿಡುಗಡೆಗೊಂಡಿದೆ.

‘ಕಪ್ಪೆ ಮದುವೆ’ ಪುಸ್ತಕದಿಂದ ಆಯ್ದ ಒಂದು ಕಥೆ ಇಲ್ಲಿದೆ.

ಮೀಕು ಕಪ್ಪೆ ಭಯಗೊಂಡು ಒಂದೇ ಉಸಿರಿಗೆ ಜಿಗಿಯುತ್ತಾ ಕಲ್ಲಿನ ಸಂದಿ ಬಂದು ಕುಳಿತಿತು. ಅದರ ಎದೆ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಏದುಸಿರು ಬಿಡುತ್ತಾ…. ‘ನಾ ಬದುಕಿದೆ ಕಣೋ ಜೀಕು’ ಎಂದು ವಟಗುಟ್ಟಿತ್ತು. . ಸ್ನೇಹಿತ ಜೀಕು “ಲೋ ಮೀಕು  ಯಾಕೋ ಹಿಂಗೆ‌ ಓಡಿ ಬಂದೆ? … ಏನಾದ್ರು ದಾರಿಲಿ ಆ ಕರಿ ನಾಗಣ್ಣನ್ನ  ಕಂಡೆಯೇನೋ? “ಎಂದು ಕೇಳಿತು.

ಮೀಕುವಿಗೆ ಇನ್ನೂ ಸಮಾಧಾನವಾಗಿರಲಿಲ್ಲ…. ಸುಸ್ತಾದಂತೆ ಉಸಿರು ಬಿಡುತ್ತಾ…” ಲೋ ಆ ಕರಿ ನಾಗಣ್ಣನ ಕೈಲಿ ಸಿಕ್ಕರೆ ಒಂದೇ ಸಾರಿ ಸಾಯ್ತೀವಿ. ಈ ಮನುಷ್ಯರ ಕೈಲಿ ಸಿಕ್ಕರೆ ಕ್ಷಣ ಕ್ಷಣಕ್ಕೂ ಸಾಯೋದೆ….” ಎಂದು ಆಯಾಸದಿಂದ ‘ಅಯ್ಯಪ್ಪ… ಬದುಕಿದೆ” ಎಂದು ಜೋರಾಗಿ ಒಂದ್ಸಲ ತಲೆ ಒದರಿ ಕಲ್ಲಿನ ಮೇಲೆ ನೆಗೆದು ಕುಳಿತಿತು.

ಜೀಕು ಹೊಳೆಯತ್ತ ತಿರುಗಿ, “ಆ ಮೀನುಗಳು ನೋಡಲ್ಲಿ! ಅವುಕ್ಕೆ ಭಯಾನೇ ಇಲ್ಲ. ದಿನಾಲೂ ಪಾಪ ಅವುಗಳನ್ನ ಬಲೆ ಹಾಕಿ ಹಿಡಿದು ಮೂಳೆನೂ ಬಿಡದೆ ತಿಂದು ಹಾಕ್ತಾರೆ ಈ ಜನ. ನಮಗೇನು ಆ ಕಷ್ಟ ಇಲ್ಲವಲ್ಲ” ಎಂದು ಕಾಲಿನ ಬಳಿ ಬಂದ ಸಣ್ಣ ಮೀನೊಂದನ್ನು ನಾಲಿಗೆ ಚಾಚಿ ಗಬಕ್ಕನೆ ಜೀಕು ಬಾಯಿಗೆ ಹಾಕಿಕೊಂಡಿತು.

“ಸುಮ್ಮನಿರಪ್ಪ ….’ಜೀಕು’ ಈ ಹುಡುಗರು ಏನು ಮಾಡಿದ್ರು ಗೊತ್ತಾ?  ಬೆಳಗ್ಗೆ ನನ್ನ ಪಾಡಿಗೆ ನಾನು ಕಲ್ಲಿನ ಮೇಲೆ ಕೂತು ಹಾಡಿಕೊಳ್ಳುತ್ತಿದ್ದೆ…. ಅದ್ಯಾವಾಗ ಬಂದ್ರೋ… ಈ ತರ್ಲೆ ಹುಡುಗರು, ನನ್ನ ಹಿಡಿದುಕೊಂಡು ಕಾಲಿಗೆ ದಾರ ಕಟ್ಟಿ ನೀರಿಗೆ ಎಸೆಯದು… ಎಳೆಯದು. ನನ್ನ ಜೀವಾನ ಅರ್ಧ ಮಾಡಿಬಿಟ್ರು “ಎಂದು ಕಾಲಿನ ದಾರವನ್ನು ಬಿಚ್ಚಿಕೊಳ್ಳಲು ಪ್ರಯತ್ನಿಸಿತು. ಜೀಕು “ಹೌದಾ! ಮತ್ತೆ ಹೇಗೆ ತಪ್ಪಿಸಿಕೊಂಡೆ ಗೆಳೆಯ”ಎಂದು ಆಶ್ಚರ್ಯದಿಂದ ಕೇಳಿತು. ಮೀಕು ಬೆವರು ಒರೆಸಿಕಳ್ಳುತ್ತಾ” ನೀರಿಗೆ ಎಸೆದು ಎಳೆಯುವಾಗ ಆ ದಾರ ಚೂಪಾದ ಕಲ್ಲಿಗೆ ಸಿಕ್ಕಿ ಹರಿತು… ನಾನು ತಪ್ಪಿಸಿಕೊಂಡೆ ಕಣೊ” ಎಂದು ತನ್ನ ಯಶೋಗಾಥೆಯನ್ನು ಹೇಳಿಕೊಂಡಿತು. 

ಜೀಕು “ಹೋಗಲಿ‌ ಬಿಡು… ನಾಳೆ ನಾನು ಪಕ್ಕದೂರಲ್ಲಿರೋ ಹೇಮಾವತಿ ನದಿಗೆ ನನ್ನ ಕಸೀನ್ಸ್ ಜೊತೆ ಹೋಗ್ತಿದ್ದೀನಿ. ನೀನು ಬರ್ತೀಯ? ಎಂದು ಕೇಳಿತು. ಇಲ್ಲವೋ..ಜೀಕು ನಾಳೆ ನನ್ನ ಅತ್ತೆ ಮಗಳು ಬನ್ನೇರುಘಟ್ಟ ಜೂ ಗೆ ಬರ್ತಿದ್ದಾಳೋ… ಅವಳನ್ನ ಹೇಗಾದ್ರೂ ಮಾತಾಡಿಸಿಕೊಂಡು ಬರಬೇಕು. ಅವಳು ಅಂತರಾಷ್ಟ್ರೀಯ ನೃತ್ಯಗಾತಿ…. ಗೊತ್ತಾ! ಎಂದಿತು. ಮೀಕು ಆಸೆಯಿಂದ “ಲೋ ಹಾಗಾದರೆ ನಾನು ಬರ್ತೀನಿ ಕಣೋ ಕರೆದುಕೊಂಡು ಹೋಗೋ” ಎಂದಿತು. ಮೀಕು ಜೀಕುವನ್ನು ಕರೆದುಕೊಂಡು ಹೋಗುವ ಮನಸ್ಸಿರಲಿಲ್ಲ. ನೋಡೋಣ ಎಂದಷ್ಟೇ ಹೇಳಿ ಸುಮ್ಮನಾಯಿತು.

ಇಬ್ಬರೂ ಆಡಿ ಕುಣಿದು ಹುಳ ಉಪ್ಪಟೆ ತಿಂದು ಮಾತಾಡಿಕೊಂಡು ದಂಡೆಯ ಮೇಲೆ ವಟಗುಡುತ್ತಾ ಕುಳಿತ್ತಿದ್ದವು. ಜೀಕುವನ್ನು ಅವರ ಅಜ್ಜಿ ಕರೆಯುತ್ತಿದ್ದಂತೆ “ಇರೋ ಬರ್ತೀನಿ” ಎಂದು ಹೇಳಿ ಹೊರಟಿತು. ಚೆನ್ನಾಗಿ ತಿಂದು ಮೀಕು ತೂಕಡಿಸುತ್ತಿತ್ತು. ಯಾರೋ ಹಿಂದಿನಿಂದ ಬಂದು ಅದರ ಕಾಲಿಗೆ ಕಟ್ಟಿದ ದಾರವನ್ನು ಜಗ್ಗಿದಂತಾಯಿತು.‌ ನಿದಿರೆ ಮಂಪರಿನಿಂದ ಎಚ್ಚರಾಗಿ ಎದ್ದು ಕಣ್ಣರಳಿಸಿ ನೋಡಿತು. ಮತ್ತದೇ ಮನುಷ್ಯರು ! ಅದರ ಕಾಲಿಗೆ ಕಟ್ಟಿದ ದಾರದ ತುಂಡನ್ನು ಹಿಡಿದಿದ್ದರು. ಮೀಕುವಿಗೆ ಥೇಟ್ ಯಮಧೂತರಂತೆ ಕಂಡಿದ್ದರು. 

“ಜೀಕು ಕಾಪಾಡೋ.. ಎಲ್ಲೋ ಇದ್ದೀಯಾ…. ಮಿತ್ರ ದ್ರೋಹಿ” ಎಂದು ಮೀಕು ಕೂಗುತ್ತಲೇ ಇತ್ತು. ಜೀಕು ಕಲ್ಲಿನ ಸಂದಿಯಿಂದ ಮೆಲ್ಲನೆ ಇಣುಕಿ ” ಅಯ್ಯೋ ಮೀಕು …. ಏನು ಗತಿ ಬಂತು ನಿನಗೆ ? ಹೇಗೆ ಕಾಪಾಡೋದು! ಮಿತ್ರಾ….” ಎಂದು ಪೇಚಾಡಿತು. ಮೀಕುವಿನ ಕಣ್ಣಿನಲ್ಲಿದ್ದ ಕಣ್ಣೀರೆಲ್ಲಾ ಖಾಲಿಯಾಯಿತು. ಆದರೆ ಈ ಬಾರಿ ಪಾರಾಗುವುದು ಕಷ್ಟವಿತ್ತು. ಮೀಕು ದಿಕ್ಕು ತೋಚದೆ, ಕಂಗಾಲಾಯಿತು.

ಮೀಕುವನ್ನು ಎತ್ತುಕೊಂಡು ಹೋಗಿ, ಕಾಲಿಗೆ ದಾರ ಕಟ್ಟಿ ಒಂದು ಸಣ್ಣ ತಂತಿಗೆ ಬಿಗಿದಿದ್ದರು. ಇನ್ನೊಂದು ಕಪ್ಪೆಯನ್ನು ಮತ್ತೊಂದು ಕಡೆಗೆ ಕೂಡಿ ಹಾಕಿದ್ದರು. ಮೀಕುವಿಗೆ ಆ ಕಪ್ಪೆ ದೂರದ ಜಗುಲಿಯ ಮೇಲೆ ಕಂಡಿತು. ಮೀಕುವಿಗೆ ಮತ್ತೂ ಭಯವಾಯಿತು. ಕಪ್ಪೆಗಳನ್ನೆಲ್ಲ ತಂದು ಕೊಲ್ಲುತ್ತಿರುವರೇನೋ! ಕಪ್ಪೆಗಳನ್ನು ತಿನ್ನಲು ಆರಂಭಿಸಿದರೇ ಈ ಮನುಷ್ಯರು…?? ಮುಂದಿನ ಸರದಿ ಖಂಡಿತ ಜೀಕುವಿದೆ ಇರಬೇಕು ಎಂದುಕೊಂಡಿತು. ಹೀಗೆ ನೂರಾರು ಪ್ರಶ್ನೆಗಳ ಜೊತೆಗೆ ರಾತ್ರಿ ಊಟವನ್ನು ಕೊಡದೆ ಉಪವಾಸ ಹಾಕಿದ್ದು ತಿಂಡಿ ಪೋತ ಮೀಕುವಿಗೆ ಮತ್ತೂ ಆಘಾತವಾಯಿತು. 

ರಾತ್ರಿ ಹತ್ತಾರು ಹಿರಿಯರು ಜಗುಲಿಯ ಮೇಲೆ ಬಂದು ಕುಳಿತು ಮದುವೆ ಪ್ರಸ್ತಾಪ ಮಾಡಿದರು. ಯಾರ ಮದುವೆ ಎಂದೆಲ್ಲಾ ಯೋಚಿಸುವಾಗ, ” ಈ ಗಂಡು ಕಪ್ಪೆ ಕಡೆಯವರು ನಾವು, ಆ ಹೆಣ್ಣು ಕಪ್ಪೆ ಕಡೆಯವರು ಆ ಬೀದಿಯವರು…. ಥೇಟ್ ಮದುವೆ ಹಾಗೇ ನಡೆಯಬೇಕು” ಎಂದು ತಮ್ಮನ್ನು ತಾವೇ ವಿಂಗಡಿಸಿಕೊಂಡು ತಾಳಿ, ಊಟ, ಬೀಗರ ಊಟದ ಬಗ್ಗೆ  ಮಾತನಾಡುತ್ತಿರುವುದು ಮೀಕುವಿಗೆ ಜೀವವೇ ಹೋದಂತಾಗಿ,  “ಮದುವೆನಾ…!! ನನಗಾ!!” ಎಂದು ತಿಳಿದು ಮೂರ್ಛೆ ಹೋಯಿತು. ಕೆಲ ಹೊತ್ತಿನ ನಂತರ “ಅಯ್ಯೋ ಏನು ಕೇಡುಗಾಲ ಬಂತು!!! ನನಗೆ ಮದುವೆ ಮಾಡಲು ಇವರ್ಯಾರು…?? ಲೋ ಗೆಳೆಯ ಎಲ್ಲೋ ಇದ್ದೀಯ? ಕಾಪಾಡೋ” ಎಂದು ಕೂಗಿಕೊಂಡು, ತಲೆ ತಲೆ ಚಚ್ಚಿಕೊಂಡು ವಟಗುಡುತ್ತಿತ್ತು. ಮೆಲ್ಲನೆ ಜೀಕು ಜಗುಲಿಯ ಬಳಿ ಬಂದು, “ಗೆಳೆಯಾ.. ನಾನೆಲ್ಲೇ ಇದ್ದೇನೆ… ನಾನೇನು ಮಾಡಲಿ, ನನ್ನ ಕೈಯಲ್ಲಿ ನಿನ್ನನ್ನು ಬಿಡಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ” ಎಂದು ಪರಿತಪಿಸಿತು. 

“ಮೂರು ವರ್ಷದಿಂದ ಊರಿಗೆ ಮಳೆಯಾಗಿಲ್ವಂತೆ, ಅದಕ್ಕೆ ಊರಿನ ಜನ ಕಪ್ಪೆ ಮದುವೆ ಮಾಡುವ ದೊಡ್ಡ ದಡ್ಡ ಯೋಜನೆಯೊಂದನ್ನು ಆಯೋಜಿಸಿ, ಚಪ್ಪರ ಹಾಕಿ, ಗುಡಿಯಲ್ಲಿ ಮದುವೆ ತಯಾರಿ ಮಾಡಿದ್ದಾರೆ. ಮೀಕು ಆಡಿಕೊಂಡಿದ್ದ ಮುಗ್ಧ ಹುಡುಗ , ಮದುವೆಯ ಬಗ್ಗೆ ಯೋಚಿಸದ ಪಾಪಚ್ಚಿ. ಜೀಕುವಿನ ಸಂಗ, ಶಾಲೆ, ಆಟ ಪಾಠ ಬಿಟ್ಟರೆ ಬೇರೆ ಪ್ರಪಂಚವೇ ಇರಲಿಲ್ಲ. ಆದರೆ ನಾಳೆ ಬೆಳಗ್ಗೆ ಅವನ ಮದುವೆ. ಮೀಕು “ಹೋಗಲಿ ಹುಡುಗಿ ಹೇಗಿದ್ದಾಳೆ? ನೋಡೋಣ” ವೆಂದು ಪ್ರಯಾಸ ಪಟ್ಟು ಇಣುಕಿದ. ಅಯ್ಯೋ ಬಣ್ಣವಲ್ಲದ ಬಣ್ಣ. ವಯಸ್ಸು ಬೇರೆ ಹೆಚ್ಚು, ಅವನ ಮನಸ್ಸಿಗೆ ಕಿಚ್ಚು ಬಿತ್ತು. “ಜೀಕು…. ಜೀಕು ಮಿತ್ರ ದ್ರೋಹಿ ಏನಾದ್ರು ಮಾಡೋ” ಗೋಗರೆಯುತ್ತಾ ಮೀಕು ಸುಸ್ತಾಗಿ ನೆಲಕ್ಕುರುಳಿತು.

ಮದುವೆ ಮನೆ ತಯಾರಾಗಿದೆ. ಒಲೆಗಳ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ವಿವಿಧ ಭಕ್ಷ್ಯ ಭೋಜನ, ಹಣ್ಣು, ಹಂಪಲು, ಅಕ್ಷತೆ, ತಾಳಿ ಎಲ್ಲ ಸಿದ್ದಪಡಿಸಿದ್ದಾರೆ. ಓಲಗ, ವಾದ್ಯಗಳು ನುಡಿಯುತ್ತಿವೆ. ಊರಿನ ಹಿರಿಯರು ಮೀಕು ಒದ್ದಾಟ ಬೇಡ. ನಾನಿನ್ನು ಹಾರುವುದು, ಬೇಟೆಯಾಡುವುದು, ಹಲವು ತಂತ್ರ ಕಲಿಯಬೇಕಿದೆ. ಎಷ್ಟೊಂದು ಓದುವುದು ಇದೆ ಮದುವೆಯಾದರೆ ಮುಗೀತು. ಅಮ್ಮ ಮನೆಗೆ ಸೇರಿಸಿಯಾಳ? ಜಾತಿ , ಕುಲವೆಂದು ಬಾಯಿ ಬಡಿದುಕೊಂಡು ಆಚೆಗೆ ಹಾಕುತ್ತಾಳೆ. ದಕ್ಷಿಣ ಆಫ್ರಿಕಾದಿಂದ ಬಂದು ಬನ್ನೇರುಘಟ್ಟದಲ್ಲಿ ಬಂದಿಯಾಗಿರುವ ಟೀಕುವನ್ನು ಬಿಡಿಸಿಕೊಂಡು ಬರಬೇಕಿತ್ತು. ನನಗೆ ಏನು ಕೇಡುಗಾಲ ಒದಗಿಸಿದೆ ಎಂದು ಭಗವಂತನಲ್ಲಿ ಮೊರೆ ಇಡುತ್ತಾ  ದುಃಖಿತನಾದ. 

ಇತ್ತ ಬೆಳಗಿನ ಶುಭ ಮಹೂರ್ತಕ್ಕೆ ಮೀಕು ಮದುವೆಗೆ ಅಣಿ ಮಾಡಲು ರಾತ್ರಿಯೆಲ್ಲಾ ಎದ್ದು ಓಡಾಡಿಕೊಂಡು, ಜನ ಉತ್ಸುಕರಾಗಿದ್ದರು. ಕೊನೆಗೆ ಸಾಕಾಗಿ ಕೆಲವು ಹೊತ್ತಿನ ನಂತರ ಎಲ್ಲರೂ ಮಲಗಿದರು. ಮೀಕು ಇದೇ ಸರಿಯಾದ ಸಮಯ. ನಾನು ತಪ್ಪಿಸಿಕೊಂಡರೆ ಗೆದ್ದೆ ಎಂದು ‘ಜೀಕು…. ಜೀಕು’ ಎಂದು ವಟಗುಟ್ಟಿತು. ಆಪ್ತ ಗೆಳೆಯನಿಗಾಗಿ ಅಲ್ಲೇ ಜಗುಲಿಯ ಹಿಂದೆ ಕುಳಿತಿದ್ದವನು ತಟ್ಟನೆ ‘ಮಿತ್ರಾ…..ಬಂದೆ” ಎಂದು ಮೀಕುವಿನ ಮುಂದೆ ಪ್ರತ್ಯಕ್ಷನಾದ. 

ಮೀಕು ಗೆಳೆಯನ ತಬ್ಬಿಕೊಂಡು, “ಜೀಕು … ಏನೋ ಈ ಮನುಷ್ಯರು ನನ್ನ ಮದುವೆ ಮಾಡ್ತಾರಂತೆ, ಆ ಮುದಿ ಕಪ್ಪೆನಾ ಹಿಡಿದು ತಂದಿದ್ದಾರೆ” ಎಂದು ಅತ್ತುಕೊಂಡ. ಜೀಕು “ಪಾಪ ಆ ಕಪ್ಪೆ ಕೂಡಾ ಅಳುತ್ತಿತ್ತು ಕಣೋ ಮನೆಯಲ್ಲಿ ಮಕ್ಕಳು ಅಳುತ್ತಾವೆ ಬಿಡ್ರೋ ಅಂತ…. ಪಾಪ ಕಣೋ” ಎಂದಿತು. ಸರಿ ನಿನ್ನನ್ನು ಬಿಡಿಸುವ ಉಪಾಯ ಮಾಡಿರುವೆ. ಇವರೆಲ್ಲ ಮಲಗುವುದನ್ನೇ ಕಾದಿದ್ದೆ” ಎಂದು ಒಂದು ಬಗೆಯ ಸದ್ದು ಮಾಡಿ ಯಾರನ್ನೋ ಕರೆಯಿತು.

ಜೀಕು, ಮೀಕುವನ್ನು ಬಿಡಿಸಲು ಸಣ್ಣ ಕಪ್ಪೆ ಸೈನ್ಯವನ್ನು ಏರ್ಪಾಟು ಮಾಡಿದ್ದ. ರಾತ್ರಿ ಕಪ್ಪೆಗಳ ಸೈನ್ಯ ಜೀಕುವಿನ ನಾಯಕತ್ವದಲ್ಲಿ ಸಜ್ಜಾಗಿ ನಿಂತಿದ್ದವು. ಜೀಕುವಿನ ಒಂದು ಸಿಗ್ನಲ್ ಗೆ ಕಾದಿದ್ದವು.  ಕಪ್ಪೆಗಳು ಶಿಸ್ತಿನಿಂದ ಜೀಕುವಿನ ಆಣತಿಯ ಮೇರೆಗೆ ಮೀಕುವಿದ್ದಲ್ಲಿಗೆ ಮೆಲ್ಲಗೆ ಕುಪ್ಪಳಿಸಿ ಬಂದವು. ಜನ ಮಲಗಿದ್ದರು. ಅವರ ಮೇಲೆ ಹಾರಿಕೊಂಡೇ ಕೆಲವು ತರಬೇತಿ ಪಡೆದ ಕಪ್ಪೆಗಳು ದಾರ ಕತ್ತರಿಸಿ ಮೀಕುವನ್ನು ಬಿಡಿಸಿದರೆ, ಇನ್ನು ಕೆಲವು ಯಾರಾದರು ಬರುವುದನ್ನು ನೋಡುತ್ತಾ ಗಸ್ತು ತಿರುಗುತ್ತಿದ್ದವು. ಅಂತೂ ಜೀಕು ಸೈನ್ಯ ಮೀಕುವನ್ನು ಬಿಡಿಸಿದವು. ಆಹಾರ ವಿಲ್ಲದೆ ಬಳಲಿದ್ದ ಮೀಕುವನ್ನು ಹೆಗಲು ಕೊಟ್ಟು ನಡೆಸಿಕೊಂಡು  ಹೊರಟವು. ಅತ್ತ ಕಟ್ಟಿದ್ದ ಆಂಟಿ ಕಪ್ಪೆಯನ್ನು ಬಿಡಿಸಿ ಕಳುಹಿಸಿದವು. ಆಂಟಿ ಕಪ್ಪೆ ಧನ್ಯವಾದಗಳನ್ನು ತಿಳಿಸಿ ಮಕ್ಕಳ ಕಡೆಗೆ ಓಡಿತು.

ಮೀಕುವನ್ನು ಒಂದು ಗುಪ್ತ ಸ್ಥಳಕ್ಕೆ ಕರೆ ತಂದವು. ಜೀಕು  ಆಹಾರವಿಲ್ಲದೆ ಬಳಲಿದ್ದ ಗೆಳೆಯ ಮೀಕುವಿಗೆ, ತಾವರೆ ಎಲೆ ತುಂಬ ಇಷ್ಟವಾದ ಬಸವನ ಹುಳು, ಸಣ್ಣ ಮೀನು ಉಪ್ಪಟೆಗಳ ಭಕ್ಷ್ಯವನ್ನು ನೀಡಿ ಸತ್ಕರಿಸಿತು. ಪ್ರೀತಿಯ ಗೆಳೆಯನ ಸತ್ಕಾರಕ್ಕೆ ಮೀಕು ಮನ ಸೋತಿತು.

ಮೀಕು ಹೊಟ್ಟೆ ತುಂಬ ತಿಂದು ಘಟನೆಯ ಬಗ್ಗೆ ಮಾತನಾಡತೊಡಗಿದ. “ಅಲ್ಲಾ ಈ ಮನುಷ್ಯರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಮಳೆ ಬಾರದಿದ್ದರೆ, ಕಪ್ಪೆಗಳ ಮದುವೆ ಮಾಡುವ ಖಯಾಲಿ ಯಾಕೋ” ಎಂದಿತು. ಮತ್ತೊಂದು ಕಪ್ಪೆ ಡೀಕು “ಮೂಢನಂಬಿಕೆ  ಅಷ್ಟೆ, ಅತೀ ಬುದ್ಧಿವಂತರಂತೆ ಇವರೆಲ್ಲಾ!!!” ಎಂದು ನಕ್ಕಿತು. ಡಿಂಪು ಕಪ್ಪೆ” ನಮಗೂ ನೀತಿ ನಿಯಮ ಇಲ್ಲವೇ? ಬಲವಂತದ ಮದುವೆ ಸರಿನಾ???” ಎಂದಿತು. ಮತ್ತೊಂದು ಕಪ್ಪೆ “ಇಂಥಹ ಸಂದರ್ಭಗಳನ್ನು ನಾವು ಒಪ್ಪಿಕೊಳ್ಳದೆ ವಿರೋಧಿಸಬೇಕು. ಒಗ್ಗಟ್ಟಿನಲ್ಲಿ ಬಲವಿದೆ” ಎಂದು ಕೂಗಿ ಹೇಳಿತು.

ಅಷ್ಟರಲ್ಲಿ ಗುಡುಗು ಸಹಿತ ಮಳೆ ಜೋರಾಯಿತು…. ಮೀಕು “ಆದದ್ದನ್ನೆಲ್ಲ ಮರೆತು ಮಳೆಯಲ್ಲಿ ಹಾಡಿ ಕುಣಿದು ಸಂಭ್ರಮಿಸೋಣ” ಎಂದು ಕರೆ ಕೊಟ್ಟಿತು. ಎಲ್ಲ ಕಪ್ಪೆಗಳು ವಟಗುಡುತ್ತಾ ಮಳೆಯಲ್ಲಿ ಹಾಡಿ ಕುಣಿದವು. ಜೀಕು “ಮೀಕು ನಿನ್ನ ಮದುವೆ ನಿಂತು ಹೋಗಿದ್ದಕ್ಕೆ ಮಳೆ ಬಂತು ಕಣೋ” ಎಂದು ನಕ್ಕಿತು.

‍ಲೇಖಕರು avadhi

May 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: