ವಸುಧೇಂದ್ರ ಮತ್ತು ಎವರೆಸ್ಟ್

ವಸುಧೇಂದ್ರ ಇತ್ತೀಚಿಗೆ ತಾನೇ ಎವರೆಸ್ಟ್ ಕುರಿತ ಕೃತಿಯನ್ನು ಅನುವಾದಿಸಿದ್ದಾರೆ.

ಜಾನ್ ಕ್ರಾಕೌರ್ ಪರ್ವಾತಾರೋಹಣದ ಸವಾಲುಗಳನ್ನು ಬಣ್ಣಿಸುತ್ತಲೇ ಅಲ್ಲಿನ ದುರಂತ ಬದುಕನ್ನು ಕಟ್ಟಿಕೊಡುತ್ತಾರೆ

ಈ ಕೃತಿ ಕೊಳ್ಳಲು ಇಲ್ಲಿ ಲಭ್ಯ

everest2-revised (1)

ಏಪ್ರಿಲ್ ೨೬ರಂದು ಮುಂಜಾನೆ ರಾಬ್ ಹಾಲ್ ತಂಡದ ಆಂಗ್ ದೋರ್ಜೆ, ಲಾಕ್ಪಾ ಶೆರ್ಪಾ, ಫಿಷರ್ ತಂಡದ ಮಾರ್ಗದರ್ಶಿಯಾದ ಎನಾಟೊಲಿ ಬೊಕ್ರೀವ್ ಮತ್ತು ಬರ್ಲ್‌ಸನ್ ತಂಡದಿಂದ ಮತ್ತೊಬ್ಬ ಶೆರ್ಪಾ – ಎಲ್ಲರೂ ಹೊರಟಾಗ, ಅವರ ಜೊತೆ ಹೊರಡಬೇಕಾದ ದಕ್ಷಿಣ ಆಫ್ರಿಕಾ ಮತ್ತು ಥೈವಾನಿನ ತಂಡದ ಶೆರ್ಪಾಗಳು ನಿದ್ರಾಚೀಲದಲ್ಲಿ ಮಲಗಿಕೊಂಡವರು ಮಿಸುಕಾಡದೆ ಬರಲು ನಿರಾಕರಿಸಿದರು. ಆ ದಿನ ಮಧ್ಯಾಹ್ನ ಎರಡನೆಯ ಕ್ಯಾಂಪ್‌ಗೆ ಬಂದ ರಾಬ್ ಹಾಲ್‌ಗೆ ಈ ವಿಷಯ ತಿಳಿದಿದ್ದೇ, ರೇಡಿಯೋ ಮೂಲಕ ಕರೆಗಳನ್ನು ಮಾಡಿ ಯೋಜನೆಯು ಮುರಿದು ಬೀಳಲು ಕಾರಣವೇನೆಂದು ವಿಚಾರಿಸತೊಡಗಿದ.  ಥೈವಾನ್ ತಂಡದ ಸರದಾರ ಕಾಮಿ ದೊರ್ಜೆ ಶೆರ್ಪಾ ತಕ್ಷಣವೇ ಕ್ಷಮೆಯನ್ನು ಯಾಚಿಸಿ, ನಡೆದ ಪ್ರಮಾದವನ್ನು ಸರಿಪಡಿಸುವುದಾಗಿ ಹೇಳಿದ. ಆದರೆ ಅಸಹನೆಯ ವ್ಯಕ್ತಿತ್ವದ ದಕ್ಷಿಣ ಆಫ್ರಿಕಾ ತಂಡದ ನಾಯಕ ವುಡ್‌ಆಲ್ ಮಾತ್ರ ರಾಬ್ ಹಾಲ್ ಮೇಲೆ ಹರಿಹಾಯ್ದು ಅಸಹ್ಯದ ಮತ್ತು ಅವಮಾನಕರ ಮಾತುಗಳನ್ನು ಆಡತೊಡಗಿದ.

“ಪ್ಲೀಜ್, ಮರ್ಯಾದೆಯಾಗಿ ಮಾತಾಡೋಣ. ನಮ್ಮಲ್ಲಿ ಇದು ಮೊದಲೇ ಒಪ್ಪಂದ ಆಗಿತ್ತು’’ ಅಂತ ಹಾಲ್ ಬೇಡಿಕೊಂಡ. ತನ್ನ ಶೆರ್ಪಾಗಳ ಸಹಾಯ ಬೇಕೆಂದು ಕೇಳಲು ಯಾರೂ ಅವರಲ್ಲಿಗೆ ಹೋಗಿಲ್ಲವೆಂದೂ, ಆದ್ದರಿಂದಲೇ ಅವರು ಗುಡಾರದಲ್ಲಿಯೇ ಉಳಿದರೆಂದು ವುಡ್‌ಆಲ್ ಉತ್ತರಿಸಿದ. ಈ ಮಾತಿನಿಂದ ಸಿಟ್ಟಿಗೆದ್ದ ರಾಬ್ ಹಾಲ್, ತನ್ನ ಶೆರ್ಪಾ ಆಂಗ್ ದೋರ್ಜೆ ಹಲವಾರು ಬಾರಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಅವರು ಆತನ ಬೇಡಿಕೆಯನ್ನು ನಿರ್ಲಕ್ಷಿಸಿದರೆಂದು ವಾದಿಸಿದ. “ಇಲ್ಲಾ ನೀನು ಮಹಾಸುಳ್ಳ ಅಥವಾ ನಿನ್ನ ಶೆರ್ಪಾ ಮಹಾಸುಳ್ಳ’’ ಎಂದು ವುಡ್‌ಆಲ್ ಘೋಷಿಸಿದ.  ಅದಷ್ಟೇ ಸಾಲದೆಂಬಂತೆ, ತನ್ನ ಶೆರ್ಪಾಗಳನ್ನು ಆಂಗ್ ದೋರ್ಜೆ ಬಳಿ ಕಳುಹಿಸಿ, ಮುಷ್ಟಿಯಿಂದ ಗುದ್ದಿ ಬುದ್ಧಿ ಕಲಿಸಿ ಎಲ್ಲವನ್ನೂ ಸರಿ ಮಾಡಿಸುವುದಾಗಿ ಹೆದರಿಸಿದ.

ಈ ಅಪ್ರಿಯವಾದ ಮಾತುಕತೆಯ ನಂತರ ಸುಮಾರು ಎರಡು ದಿನಗಳ ಕಾಲ ನಮ್ಮ ತಂಡ ಮತ್ತು ದಕ್ಷಿಣ ಆಫ್ರಿಕಾದ ತಂಡದ ಮಧ್ಯೆ ರಸಿಕಸಿ ಜೋರಾಗಿಯೇ ಇತ್ತು.  ಎರಡನೆಯ ಕ್ಯಾಂಪ್‌ನಲ್ಲಿದ್ದ ಈ ರಸಿಕಸಿಯನ್ನು ಇನ್ನಷ್ಟು ಹೆಚ್ಚಿಸುವಂತೆ ನಾಗಾವಾಂಗ್ ತೋಪ್ಚೆಯ ಅವಸಾನದ ಸುದ್ದಿಯ ತುಣುಕುಗಳು ಬರುತ್ತಲೇ ಇದ್ದವು. ಎಷ್ಟೇ ಕೆಳಗಿನ ಪ್ರದೇಶಕ್ಕೆ ಹೋದರೂ ಅವನ ಆರೋಗ್ಯದಲ್ಲಿ ಪ್ರಗತಿಯಾಗದ್ದನ್ನು ಕಂಡ ಡಾಕ್ಟರರು, ಇದು ಕೇವಲ ಊಂPಇ ಕಾಯಿಲೆ ಅಲ್ಲವೇ ಅಲ್ಲ; ಅದರ ಜೊತೆಯಲ್ಲಿ ಅವನ ದೇಹದಲ್ಲಿ ಮೊದಲೇ ಇದ್ದಿರಬಹುದಾದ ಕ್ಷಯದಂತಹ ಇತರ ಯಾವುದೋ ಪ್ರಾಣಾಂತಿಕ ಕಾಯಿಲೆ ಸೇರಿಕೊಂಡು ಇಂತಹ ಸ್ಥಿತಿ ಬಂದಿರಬೇಕು ಎಂದು ಅಭಿಪ್ರಾಯ ಪಡಲಾರಂಭಿಸಿದರು. ನಮ್ಮ ಜೊತೆಯಲ್ಲಿದ್ದ ಶೆರ್ಪಾಗಳು ಮಾತ್ರ ಬೇರೆಯದೇ ಕಾರಣವನ್ನು ಇದಕ್ಕೆ ಹೆಣೆಯಲಾರಂಭಿಸಿದರು. ಅವರ ಪ್ರಕಾರ ಫಿಷರ್ ತಂಡದಲ್ಲಿರುವ ಯಾರೋ ಒಬ್ಬರು ಎವರೆಸ್ಟ್ ಪರ್ವತವನ್ನು ಅಂದರೆ ಸಾಗರಮಾತಾ ದೇವತೆಯನ್ನು ಕೆರಳಿಸಿದ್ದಾರೆ. ಆದ್ದರಿಂದ ಆಕೆ ತನ್ನ ಸಿಟ್ಟನ್ನು ನಾಗಾವಾಂಗ್‌ನ ಮೇಲೆ ತೀರಿಸಿಕೊಳ್ಳುತ್ತಿದ್ದಾಳೆ.

ಇವರು ಹೇಳುವ ಆ ವ್ಯಕ್ತಿ, ಲೋಟ್ ಪರ್ವತವನ್ನು ಹತ್ತಲು ಬಂದಿದ್ದ ಮತ್ತೊಬ್ಬ ಪರ್ವತಾರೋಹಣ ತಂಡದ ವ್ಯಕ್ತಿಯೊಡನೆ ಸಂಬಂಧವಿಟ್ಟುಕೊಂಡಿದ್ದಾಳೆ. ಕ್ಯಾನ್‌ವಾಸ್ ಬಟ್ಟೆಯಿಂದ ಮಾಡಿದ ಗುಡಾರಗಳ ಈ ಕ್ಯಾಂಪ್‌ಗಳಲ್ಲಿ ವೈಯಕ್ತಿಕವೆನ್ನುವುದು ಸಾಧ್ಯವೇ ಇಲ್ಲದ ಕಾರಣ, ಆ ಮಹಿಳೆಯ ಗುಡಾರದಲ್ಲಿ ನಡೆದ ಪ್ರೀತಿಯ ಮಿಲನಗಳು ಆ ತಂಡದವರಿಗೆಲ್ಲಾ ಗೊತ್ತಾಗಿತ್ತು. ಅದರಲ್ಲಿಯೂ ಹೊರಗಡೆ ಕುಳಿತಿದ್ದ ಶೆರ್ಪಾಗಳು ಆ ಭೇಟಿಗಳನ್ನು ಕೈ ಸನ್ನೆ ಮಾಡಿ ತೋರಿಸುತ್ತಾ, ಮುಸಿಮುಸಿ ನಗುತ್ತಾ ಆಡಿಕೊಂಡಿದ್ದರು. “ಆತ ಮತ್ತು ಆಕೆ ಸೇರಿ ಚಟ್ಣಿ ಮಾಡುತ್ತಿದ್ದಾರೆ, ಚಟ್ಣಿ’’ ಎಂದು ಹಲ್ಲು ಕಿರಿಯುತ್ತಾ, ಬೆರಳುಗಳಿಂದ ಉಂಗುರುವನ್ನು ಮಾಡಿ ಅದರಲ್ಲಿ ಮತ್ತೊಂದು ಕೈಯ ಬೆರಳನ್ನು ವೇಗದಿಂದ ಹಿಂದೆ ಮುಂದೆ ಮಾಡಿ, ಸಂಭೋಗದ ಕ್ರಿಯೆಯನ್ನು ತೋರಿಸಿದ್ದರು.

ಶೆರ್ಪಾಗಳ ನಗುವಿನ ಸಂಗತಿ ಏನೇ ಇರಲಿ, (ಅವರ ಕುಖ್ಯಾತ ಅಸಭ್ಯ ಹವ್ಯಾಸಗಳ ಬಗ್ಗೆ ಇಲ್ಲಿ ಮಾತು ಬೇಡ) ಮೂಲತಃ ಶೆರ್ಪಾ ಸಮುದಾಯಕ್ಕೆ ಸಾಗರಮಾತೆಯ ದಿವ್ಯ ಅಂಗಳದಲ್ಲಿ ಮದುವೆಯಾಗದ ಹೆಣ್ಣು-ಗಂಡುಗಳು ಕೂಡುವುದಕ್ಕೆ ವಿರೋಧವಿತ್ತು. ಯಾವಾಗ ಆಕಾಶದಲ್ಲಿ ಮೋಡಗಳು ದಟ್ಟೈಸಿ ಆತಂಕ ಮೂಡಿಸಿದರೆ ಸಾಕು, ಶೆರ್ಪಾಗಳು ಒಬ್ಬರಿಗೊಬ್ಬರು ನೋಡಿಕೊಳ್ಳುತ್ತಾ, ಆಕಾಶದ ಕಡೆಗೆ ಕೈ ಮಾಡಿ ತೋರಿಸುತ್ತಾ “ಯಾರೋ ಚಟ್ಣಿ ಮಾಡ್ತಾ ಇದಾರೆ. ದುರಾದೃಷ್ಟ ಬಂದು ವಕ್ಕರಿಸುತ್ತೆ. ಈಗ ಚಂಡಮಾರುತ ಬರುತ್ತೆ’’ ಎನ್ನುತ್ತಿದ್ದರು.

ಸ್ಯಾಂಡಿ ಪಿಟ್‌ಮನ್‌ಳು ತನ್ನ ೧೯೯೪ರ ಎವರೆಸ್ಟ್ ಪರ್ವತಾರೋಹಣ ಸಂದರ್ಭದಲ್ಲಿ, ಈ ಮೂಢನಂಬಿಕೆಯ ಬಗ್ಗೆ ಬರೆದ ದಿನಚರಿಯನ್ನು ೧೯೯೬ರಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಿದ್ದಾಳೆ:

ಏಪ್ರಿಲ್ ೨೯, ೧೯೯೪

ಎವರೆಸ್ಟ್ ಬೇಸ್ ಕ್ಯಾಂಪ್ (೧೭,೮೦೦ ಅಡಿ ಎತ್ತರ)

ಕಾಂಗ್ ಶುಂಗ್ ಫೇಸ್ ಪರ್ವತ, ಟಿಬೆಟ್

…ಆ ದಿನ ಮಧ್ಯಾಹ್ನ ಅಂಚೆಯವನು ಮನೆಯಿಂದ ಬಂದ ಪತ್ರಗಳನ್ನು ತಂದಿದ್ದ. ಅದರ ಜೊತೆಯಲ್ಲಿ ಒಂದು ವಯಸ್ಕರ ಪತ್ರಿಕೆಯನ್ನೂ ಯಾರೋ ಪರ್ವತಾರೋಹಣ ಗೆಳೆಯರು ತಮಾಷೆಯಾಗಿ ಕಳುಹಿಸಿದ್ದರು. ಅರ್ಧಕ್ಕರ್ಧ ಶೆರ್ಪಾಗಳು ಅದನ್ನು ಕೂಲಂಕಷವಾಗಿ ನೋಡಿ ಆನಂದಿಸಲು ತಮ್ಮ ಗುಡಾರಗಳಿಗೆ ತೆಗೆದುಕೊಂಡು ಹೋದರೆ, ಉಳಿದ ಶೆರ್ಪಾಗಳು ಅಂತಹ ಸಂಗತಿಗಳಿಂದ ನಡೆಯಬಹುದಾದ ಪ್ರಮಾದಗಳನ್ನು ಊಹಿಸಿ ನಡುಗಿದ್ದರು. ಅವರ ಪ್ರಕಾರ ಚೋಮೋಲುಂಗ್ಮಾ ದೇವತೆ ಇಂತಹ “ತೋಬಾ ತೋಬಾ’’ ಹೊಲಸು ಸಂಗತಿಗಳನ್ನು ತನ್ನ ಪವಿತ್ರ ಪರ್ವತಗಳಲ್ಲಿ ಸಹಿಸುವುದಿಲ್ಲ.

 

ಕುಂಭು ತರಹದ ಎತ್ತರದ ಪರ್ವತ ಪ್ರದೇಶಗಳ ಆಚರಣೆಯಲ್ಲಿರುವ ಬೌದ್ಧ ಧರ್ಮವು ನಿರ್ಜೀವದಲ್ಲೂ ಜೀವವನ್ನು ಕಾಣುತ್ತದೆ. ಪರ್ವತ, ನದಿ, ಶಿಖರಾಗ್ರ – ಪ್ರತಿಯೊಂದರಲ್ಲೂ ಅವರು ದೈವವೋ, ಭೂತವೋ ಇರುವುದಾಗಿ ನಂಬುತ್ತಾರೆ.  ಈ ದುರ್ಗಮವಾದ ದಾರಿಗಳಲ್ಲಿ ಸುರಕ್ಷಿತವಾಗಿ ಸಾಗಲು ಈ ಎಲ್ಲಾ ಅತಿಮಾನುಷ ಶಕ್ತಿಗಳಿಗೆ ಗೌರವ ನೀಡುವುದು ಅತ್ಯಂತ ಅವಶ್ಯಕವೆಂಬುದು ಅವರ ನಂಬಿಕೆಯಾಗಿದೆ.

ಸಾಗರಮಾತೆಯನ್ನು ಸಂಪ್ರೀತಗೊಳಿಸಲು ಪ್ರತಿ ಎವರೆಸ್ಟ್ ಪ್ರವಾಸಕ್ಕೂ ಮುಂಚೆ ಒಂದು ಸುಂದರವಾದ ಕಲ್ಲಿನ ಸ್ಥೂಪವನ್ನು ಅಚ್ಚುಕಟ್ಟಾಗಿ ಕಟ್ಟುತ್ತಾರೆ. ಬೇಸ್ ಕ್ಯಾಂಪಿನಲ್ಲಿ ಇಂತಹ  ಹಲವಾರು ಸ್ಥೂಪಗಳಿವೆ. ಐದು ಅಡಿಯ ಚೌಕದ ಕಟ್ಟೆಯ ಮೇಲೊಂದು ಗರ್ಭ ಗುಡಿ, ಅದಕ್ಕೊಂದು ಗೋಪುರ ಮಾಡಿ, ಆಯ್ಕೆ ಮಾಡಿಕೊಂಡ ವಿಶೇಷ ಕಲ್ಲುಗಳನ್ನು ಅದಕ್ಕೆ ಬಳಸುತ್ತಾರೆ. ಹತ್ತು ಅಡಿ ಎತ್ತರದ ಒಂದು ಕಂಬವನ್ನು ಇದರ ಮೇಲೆ ಸ್ಥಾಪಿಸಲಾಗಿರುತ್ತಿತ್ತು. ಅದರ ತುದಿಯಲ್ಲೊಂದು ಕಲಾತ್ಮಕ ಕಳಶ. ಐದು ಆಕರ್ಷಕ ಬಣ್ಣದ ಪವಿತ್ರ ಬಾವುಟಗಳನ್ನು ಒಂದು ಹಗ್ಗಕ್ಕೆ ಕಟ್ಟಿ, ಅದರ ಒಂದು ತುದಿಯನ್ನು ಕಂಬದ ತುದಿಗೆ ಕಟ್ಟಿದ್ದರೆ, ಮತ್ತೊಂದನ್ನು ನಮ್ಮ ಗುಡಾರಕ್ಕೆ ಕಟ್ಟಿರುತ್ತಿದ್ದರು. ಇದು ಕ್ಯಾಂಪ್‌ನ ರಕ್ಷಣೆ ಮಾಡುತ್ತದೆನ್ನುವುದು ಅವರ ನಂಬಿಕೆಯಾಗಿತ್ತು. ಪ್ರತಿ ದಿನ ಸೂರ್ಯೋದಯಕ್ಕೆ ಮುಂಚೆ ನಮ್ಮ ತಂಡದ ಸರದಾರನು ಊದುಬತ್ತಿಗಳನ್ನು ಬೆಳಗಿ, ಸಾಕಷ್ಟು ಮಂತ್ರಗಳನ್ನು ಪಠಿಸುತ್ತಿದ್ದ. ನಲವತ್ತರ ಆಸುಪಾಸಿನ ಈ ಗೌರವಾನ್ವಿತ ಶೆರ್ಪಾನ ಹೆಸರು ಆಂಗ್ ತ್ಶೇರಿಂಗ್. ಹಿಮಜಲಪಾತದ ಕಡೆಗೆ ಚಾರಣಕ್ಕೆ ಹೊರಡುವಾಗ ಶೆರ್ಪಾಗಳು ಮತ್ತು ಪಾಶ್ಚಿಮಾತ್ಯರೆಲ್ಲರೂ ಈ ಪವಿತ್ರ ಸ್ಥೂಪದ ಎಡಕ್ಕೆ ಹೋಗಬೇಕಿತ್ತು. ಆಂಗ್ ತ್ಶೇರಿಂಗ್ ಬೆಳಗಿಸಿದ ಊದುಬತ್ತಿಗಳ ಆಹ್ಲಾದಕರ ಪರಿಮಳ ಗಾಳಿಯಲ್ಲಿ ಸೇರಿರುತ್ತಿತ್ತು.

ಇಂತಹ ಆಚರಣೆಗಳೇನಿದ್ದರೂ, ಶೆರ್ಪಾಗಳು ಅನುಸರಿಸುವ ಬೌದ್ಧಧರ್ಮ ಅನುಕೂಲಸಿಂಧುವಾಗಿದ್ದು, ಕಾಠಿಣ್ಯತೆ ಅದರಲ್ಲಿರಲಿಲ್ಲ. ಸಾಗರಮಾತಾಳ ಕೃಪಾಕಟಾಕ್ಷದಲ್ಲಿ ಇರಬೇಕೆಂದರೆ, ಆಕೆಗಾಗಿ ಒಂದು ದೊಡ್ಡ ಪೂಜೆಯೊಂದನ್ನು ಮಾಡದೆ ಯಾವ  ತಂಡದವರೂ ಹಿಮಜಲಪಾತದಲ್ಲಿ ಕಾಲಿಡುವಂತಿರಲಿಲ್ಲ. ಆದರೆ ಆ ಪೂಜೆಯನ್ನು ಮಾಡಿಸಬೇಕಾದ ತೆಳ್ಳನೆಯ ದುರ್ಬಲನಾದ ಲಾಮ ಆ ದಿನ ಬರಲು ಸಾಧ್ಯವೇ ಆಗದ ಕಾರಣ, ಆಂಗ್ ತ್ಶೇರಿಂಗ್ ಯಾವುದೇ ಕಠಿಣ ನಿರ್ಧಾರ ಹೇರದೆ ಪೂಜೆಯಿಲ್ಲದೆ ಹೋಗಲು ಅಡ್ಡಿಯಿಲ್ಲ ಎಂದು ಘೋಷಿಸಿದ. ಪೂಜೆ ಮಾಡಬೇಕೆಂಬ ನಮ್ಮ ಪ್ರಯತ್ನ ಸಾಗರಮಾತೆಗೆ ಹೇಗೂ ಗೊತ್ತಾಗಿರುತ್ತದೆ, ಅನಂತರ ಮಾಡಿದರೆ ಆಕೆ ತಪ್ಪು ತಿಳಿದುಕೊಳ್ಳುವುದಿಲ್ಲ ಎಂದು ಸಮಜಾಯಿಷಿ ಕೊಟ್ಟ.

ಅದರಂತೆಯೇ ಸಾಗರಮಾತೆಯ ಮಡಿಲಲ್ಲಿ ಮದುವೆಯಾಗದ ಜೋಡಿಯ ಸಮಾಗಮದ ಬಗ್ಗೆ ಶೆರ್ಪಾಗಳು ಮಾತನಾಡಿಕೊಂಡರೂ, ಯಾರೂ ಪ್ರಬಲವಾಗಿ ವಿರೋಧಿಸಲು ಹೋಗಲಿಲ್ಲ. ೧೯೯೬ರ ಬೇಸಿಗೆಯ ಈ ಚಾರಣದಲ್ಲಿ ಒಬ್ಬ ಶೆರ್ಪಾ ಮತ್ತು Iಒಂಘಿ ತಂಡದ ಒಬ್ಬ ಅಮೇರಿಕಾದ ಮಹಿಳೆಯ ಮಧ್ಯೆ ಪ್ರೇಮವು ಅರಳಿ, ಸಾಕಷ್ಟು ರಾಸಲೀಲೆ ಎಗ್ಗಿಲ್ಲದಂತೆ ನಡೆಯಿತು. ಆದ್ದರಿಂದ ನಾಗಾವಾಂಗ್‌ನ ಕಾಯಿಲೆಗೂ, ಮೌಂಟೆನ್ ಮ್ಯಾಡ್‌ನೆಸ್ ಗುಡಾರದಲ್ಲಿ ನಡೆದ ಕಾಮಕೇಳಿಗೂ ಸಂಬಂಧ ಹಚ್ಚುವುದು ವಿಚಿತ್ರವೆನ್ನಿಸಿತು. ಸ್ಕಾಟ್ ಫಿಷರ್ ತಂಡದ ಸರದಾರ, ೨೩ ವರ್ಷದ ಲೋಪ್ಸಾಂಗ್ ಜಂಗ್ಬು ಶೆರ್ಪಾ ಜೊತೆಯಲ್ಲಿ ನಾನು ಈ ವಿಚಾರವಾಗಿ ಮಾತನಾಡಿದೆ. ಫಿಷರ್ ತಂಡದ ಆ ಮಹಿಳೆ ಬೇಸ್ ಕ್ಯಾಂಪ್ ನಲ್ಲಿ ‘ಚಟ್ಣಿ’ ಮಾಡ್ತಾ ಇದಾಳೆ ಅನ್ನೋದು ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ. ಆದರೆ ಇದಕ್ಕೂ ಮೇಲೆ ಪರ್ವತ ಏರಿದರೂ ಕೂಡ ಆಕೆ ತನ್ನ ಪ್ರಿಯತಮನ ಜೊತೆ ಕೂಡುವ ಚಟವನ್ನು ನಿಲ್ಲಿಸುತ್ತಿಲ್ಲ.

“ಮೌಂಟ್ ಎವರೆಸ್ಟ್ ನನಗೆ ದೇವರು ಇದ್ದಂತೆ; ಅದು ಎಲ್ಲಾರಿಗೂ ದೇವರೇ ಬಿಡು’’ ಎಂದು ಹತ್ತು ದಿನಗಳ ನಂತರ ಲೋಪ್ಸಾಂಗ್ ಗಂಭೀರನಾಗಿ ನನ್ನ ಮುಂದೆ ಹೇಳಿದ. “ಗಂಡ-ಹೆಂಡತಿ ಜೊತೆಗೂಡಿದ್ರೆ ಏನೂ ತಪ್ಪಿಲ್ಲ. ಆದರೆ ಮದುವೆಯಾಗದ ಜೋಡಿ ಕೂಡಿದ್ರೆ ನನ್ನ ತಂಡಕ್ಕೆ ಕೇಡು ಬರುತ್ತೆ. ನಾನು ಸ್ಕಾಟ್‌ಗೆ ಎಷ್ಟೊಂದು ಸಲ ಹೇಳಿದೀನಿ; ದಯವಿಟ್ಟು ಆಕೆ ಎರಡನೆಯ ಕ್ಯಾಂಪ್‌ನಲ್ಲಿ ಆ ಗೆಣೆಕಾರನ ಜೊತೆ ಸೇರೋ ಹಂಗಿಲ್ಲ ಅಂತ ನೇರವಾಗಿ ಹೇಳಿಬಿಡು ಅಂತ. ಆದರೆ ಸ್ಕಾಟ್ ನನ್ನ ಮಾತಿಗೆ ನಗ್ತಾನೆ. ಮೊದಲನೆ ದಿನ ಇವರಿಬ್ಬರೂ ಕೂಡಿದ್ರಲ್ಲ, ಆವತ್ತೇ ನಾಗಾವಾಂಗ್‌ಗೆ ಎರಡನೆಯ ಕ್ಯಾಂಪ್‌ನಲ್ಲಿ ಆರೋಗ್ಯ ಕೈಕೊಟ್ಟಿದ್ದು. ಈಗಂತೂ ಸತ್ತೇ ಹೋದ.’’

ನಾಗಾವಾಂಗ್ ಶೆರ್ಪಾನು ಲೋಪ್ಸಾಂಗ್ ಶೆರ್ಪಾನ ಮಾವ; ಅವರಿಬ್ಬರೂ ಅನ್ಯೋನ್ಯವಾಗಿದ್ದರಲ್ಲದೆ, ಏಪ್ರಿಲ್ ೨೨ರ ರಾತ್ರಿ ನಾಗಾವಾಂಗ್‌ನ ರಕ್ಷಣಾ ಕಾರ್ಯದಲ್ಲಿ ಹಿಮಜಲಪಾತದಗುಂಟ ಅವನನ್ನು ಇಳಿಸಿಕೊಂಡು ಬಂದವರಲ್ಲಿ ಲೋಪ್ಸಾಂಗ್ ಕೂಡಾ ಒಬ್ಬನಾಗಿದ್ದ. ಫೆರಿಚೆಯಲ್ಲಿ ನಾಗಾವಾಂಗ್ ಉಸಿರಾಡುವುದನ್ನು ನಿಲ್ಲಿಸಿದಾಗ ಲೋಪ್ಸಾಂಗ್ ಬೇಸ್ ಕ್ಯಾಂಪಿನಿಂದ ಮಾವನ ಸಲುವಾಗಿ ಓಡಿದ್ದ. ಅದಕ್ಕೆ ಸ್ಕಾಟ್ ಫಿಷರ್‌ನ ಅನುಮತಿಯೂ ಇತ್ತು. ನಾಗಾವಾಂಗ್‌ನನ್ನು ಕಾಠ್ಮಂಡುವಿಗೆ ಕರೆದೊಯ್ಯುವ ಹೆಲಿಕಾಪ್ಟರಿನಲ್ಲಿ ಜೊತೆಯಾಗಿದ್ದ. ಹೀಗೆ ಕಾಠ್ಮಂಡುವಿಗೆ ಹೋಗಿ, ಮತ್ತೆ ಅಲ್ಲಿಂದ ತಕ್ಷಣವೇ ಬೇಸ್ ಕ್ಯಾಂಪಿಗೆ ಹೊರಟು ಬಂದಿದ್ದರಿಂದ ಲೋಪ್ಸಾಂಗ್ ವಿಪರೀತ ಸುಸ್ತಾಗಿದ್ದ ಮತ್ತು ವಾತಾವರಣಕ್ಕೆ ಅವನು ಮತ್ತೊಮ್ಮೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ. ಸ್ಕಾಟ್ ಫಿಷರ್‌ನ ತಂಡಕ್ಕೆ ಇದು ಒಳ್ಳೆಯ ಸಂಗತಿಯಂತೂ ಆಗಿರಲಿಲ್ಲ. ರಾಬ್ ಹಾಲ್‌ನು ಆಂಗ್ ದೋರ್ಜೆಯ ಮೇಲೆ ಅವಲಂಬಿತನಾದಷ್ಟೇ, ಸ್ಕಾಟ್ ಫಿಷರ್‌ನು ಲೋಪ್ಸಾಂಗ್ ಮೇಲೆ ಅವಲಂಬಿತನಾಗಿದ್ದ.

ಈ ೧೯೯೬ರ ನೇಪಾಳದ ಮೂಲಕ ಮಾಡುತ್ತಿದ್ದ ಎವರೆಸ್ಟ್ ಪರ್ವತಾರೋಹಣದಲ್ಲಿ ಸಾಕಷ್ಟು ಪ್ರಸಿದ್ಧ ಹಿಮಾಲಯ ಪರ್ವತ ಪ್ರವೀಣರು ಸೇರಿಕೊಂಡಿದ್ದರು. ನಿಪುಣರಾದ ರಾಬ್ ಹಾಲ್, ಸ್ಕಾಟ್ ಫಿಷರ್, ಬ್ರೇಷರ್ಸ್, ಪೀಟ್ ಶೋನಿಂಗ್, ಆಂಗ್ ದೋರ್ಜೆ, ಮೈಕ್ ಗ್ರೂಮ್ ಮತ್ತು Iಒಂಘಿ ತಂಡದ ಆಸ್ಟ್ರಿಯನ್ ರಾಬರ್ಟ್ ಶೌರ್ ಮುಖ್ಯವಾದವರು. ಆದರೆ ಈ ಎಲ್ಲಾ ಸಮರ್ಥರ ನಡುವೆ ನಾಲ್ಕು ಜನ ನಕ್ಷತ್ರದಂತೆ ಹೊಳೆಯುತ್ತಿದ್ದರು. ೨೬,೦೦೦ ಅಡಿ ಎತ್ತರದ ಮೇಲೆ ತಮ್ಮದೇ ವೀರ್ಯವಂತಿಕೆಯನ್ನು ಮೆರೆದ ಈ ನಾಲ್ವರೂ ತಮಗೆ ತಾವೇ ಸಾಟಿಯಾಗಿದ್ದರು. Iಒಂಘಿ ಸಿನಿಮಾದಲ್ಲಿ ನಟಿಸುತ್ತಿದ್ದ ಅಮೇರಿಕಾದ ಪ್ರಜೆ ಎಡ್ ವೈಸ್ಟಿಯುವರ್ಸ್, ಸ್ಕಾಟ್ ಫಿಷರ್ ತಂಡದಲ್ಲಿ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ ಕಝಕಿಸ್ಥಾನದ ಎನಾಟೊಲಿ ಬೊಕ್ರೀವ್, ಆಂಗ್ ಬಾಬು ಶೆರ್ಪಾ ಮತ್ತು ಲೋಪ್ಸಾಂಗ್ ಶೆರ್ಪಾ.

ನೋಡಲು ಸುಂದರನಾದ, ಸ್ನೇಹ ಸ್ವಭಾವದ, ಕ್ಷಮಾಗುಣ ಹೊಂದಿದ ಲೋಪ್ಸಾಂಗ್ ಸ್ವಲ್ಪ ಜಂಭದ ವ್ಯಕ್ತಿತ್ವದವನಾದರೂ ಸಾಕಷ್ಟು ಇಷ್ಟವಾಗುತ್ತಿದ್ದ. ತಂದೆ-ತಾಯಿಯರ ಒಬ್ಬನೇ ಮಗನಾದ ಈತ ರೋಲ್ವಾಲಿಂಗ್ ಪ್ರಾಂತದಲ್ಲಿಯೇ ಬೆಳೆದಿದ್ದ. ಈತ ಕುಡಿಯುತ್ತಲೂ ಇರಲಿಲ್ಲ, ಧೂಮಪಾನ ಮಾಡುತ್ತಲೂ ಇರಲಿಲ್ಲ. ಶೆರ್ಪಾಗಳ ಮಧ್ಯೆ ಇದು ಅತ್ಯಂತ ಅಸಹಜ ಸಂಗತಿಯಾಗಿತ್ತು. ಬಂಗಾರದ ಹಲ್ಲೊಂದನ್ನು ಕಟ್ಟಿಸಿಕೊಂಡಿದ್ದ ಈತ ಸಹಜವಾಗಿ ನಗುತ್ತಿದ್ದ. ಇವನ ಗಾತ್ರ ತುಸು ಚಿಕ್ಕದಾಗಿದ್ದರೂ, ಅವನ ಆಕರ್ಷಕ ನಡೆನುಡಿ, ಕಷ್ಟದ ಕೆಲಸಗಳನ್ನು ಮಾಡಲು ತೋರುವ ಉತ್ಸಾಹ ಮತ್ತು ವರದಾನವೆನ್ನುವಂತೆ ಅವನಿಗಿದ್ದ ಸ್ಪರ್ಧಾಳುವಿನ ದೇಹ ದಾರ್ಢ್ಯತೆಯಿಂದಾಗಿ ಪ್ರಸಿದ್ಧ ಫುಟ್‌ಬಾಲ್ ಆಟಗಾರನಂತೆ ಕಾಣುತ್ತಿದ್ದ. ಸ್ಕಾಟ್ ಫಿಷರ್ ಅವನ ಬಗ್ಗೆ ಮಾತನಾಡುವಾಗ “ಈತ ನಂಗೆ ರಿಯನ್ ಹೋಲ್ಡ್ ಮೆಸ್ನೆರ್‌ನ ಎರಡನೆಯ ಅವತಾರ ಅನ್ನಿಸ್ತದೆ’’ ಎಂದಿದ್ದ. ರಿಯನ್ ಹೋಲ್ಡ್ ಮೆಸ್ನೆರ್‌ನು ಟೈರೋಲಿನ್‌ನವನಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ಪರ್ವತಾರೋಹಿ ಎಂದು ಹೆಸರು ಪಡೆದವನಾಗಿದ್ದಾನೆ.

೧೯೯೩ರಲ್ಲಿ ಭಾರತ ಮತ್ತು ನೇಪಾಳ ದೇಶಗಳೆರಡೂ ಸೇರಿ ಮಾಡಿದ ಪರ್ವತಾರೋಹಣ ತಂಡದಲ್ಲಿ ಇವನಿಗೆ ಪ್ರಥಮ ಅವಕಾಶ ಸಿಕ್ಕಿತ್ತು. ಆ ತಂಡದ ನಾಯಕತ್ವವನ್ನು ಭಾರತೀಯಳಾದ ಬಚೇಂದ್ರಿ ಪಾಲ್ ಸಿಂಗ್ ವಹಿಸಿಕೊಂಡಿದ್ದಳು. ಈ ತಂಡದಲ್ಲಿ ಹೆಚ್ಚಾಗಿ ಮಹಿಳೆಯರೇ ತುಂಬಿದ್ದರು. ತಂಡದ ಅತ್ಯಂತ ಕಿರಿಯನಾದ್ದರಿಂದ ಆರಂಭದಲ್ಲಿ ಅವನಿಗೆ ಕೂಲಿಯ ಕೆಲಸವನ್ನು ವಹಿಸಿದ್ದರು. ಆದರೆ ಅವನ ಶಕ್ತಿ ಸಾಮರ್ಥ್ಯಗಳು ಎಷ್ಟು ಕಣ್ಸೆಳೆಯುವಂತಿದ್ದವೆಂದರೆ, ಕಡೆಯ ಗಳಿಗೆಯಲ್ಲಿ ಅವನನ್ನು ಶಿಖರಾಗ್ರದ ತಂಡದಲ್ಲಿ ಸೇರಿಸಿಕೊಳ್ಳಲಾಯಿತು. ಮೇ ೧೬ರಂದು ಅವನು ಯಾವುದೇ ಪೂರಕ ಆಮ್ಲಜನಕದ ಅವಶ್ಯಕತೆಯಿಲ್ಲದಂತೆ ಉತ್ತುಂಗವನ್ನು ಹತ್ತಿ ನಿಂತಿದ್ದ.

ಇದಾದ ಐದು ತಿಂಗಳ ನಂತರ ಲೋಪ್ಸಾಂಗ್, ಜಪಾನ್ ತಂಡದೊಂದಿಗೆ ಸೇರಿ ಚೋ ಓಯು ಪರ್ವತವನ್ನು ಏರಿ ಬಂದ. ೧೯೯೪ರ ಬೇಸಿಗೆಯಲ್ಲಿ, ಸ್ಕಾಟ್ ಫಿಷರ್‌ನ ಸಾಗರಮಾತಾ ಎನ್ವಿರಾನ್‌ಮೆಂಟಲ್ ಎಕ್ಸ್‌ಪೆಡಿಷನ್ ತಂಡವನ್ನು ಸೇರಿಕೊಂಡು, ಎರಡನೆಯ ಬಾರಿ ಎವರೆಸ್ಟ್ ತಲೆಯನ್ನು ಮುಟ್ಟಿ ಬಂದ. ಈ ಬಾರಿಯೂ ಅವನು ಯಾವುದೇ ಪೂರಕ ಆಮ್ಲಜನಕವನ್ನು ಬಳಸಿರಲಿಲ್ಲ. ಮುಂದಿನ ಸೆಪ್ಟಂಬರ್ ತಿಂಗಳಲ್ಲಿ ಒಂದು ನಾರ್ವೆ ತಂಡದ ಜೊತೆ ಸೇರಿಕೊಂಡು, ಪಶ್ಚಿಮ ದಿಬ್ಬದ ಮೂಲಕ ಎವರೆಸ್ಟ್ ಹತ್ತಲು ಪ್ರಯತ್ನಿಸುತ್ತಿದ್ದ. ಆದರೆ ಒಂದು ಬಲವಾದ ಹಿಮಪಾತದ ಹೊಡೆತಕ್ಕೆ ಸಿಕ್ಕಿ ಕಣಿವೆಯೊಳಕ್ಕೆ ಬಿದ್ದ. ೨೦೦ ಅಡಿ ಬಿದ್ದ ನಂತರ ಅದು ಹೇಗೋ ಚಾಣಾಕ್ಷತನದಿಂದ ತನ್ನ ಹಿಮಗೊಡಲಿಯನ್ನು ಬಳಸಿ ಬೀಳುವುದನ್ನು ತಪ್ಪಿಸಿಕೊಂಡ. ಅವನ ಹಗ್ಗಕ್ಕೆ ಕಟ್ಟಿಕೊಂಡಿದ್ದ ಇನ್ನಿಬ್ಬರು ಪರ್ವತಾರೋಹಿಗಳ ಜೀವವೂ ಉಳಿದಿತ್ತು. ಆದರೆ ಅವನ ಚಿಕ್ಕಪ್ಪ ಮಿಂಗ್‌ಮಾ ನೊರ್ಬು ಶೆರ್ಪಾ ಮಾತ್ರ ಈ ಹಗ್ಗಕ್ಕೆ ಕಟ್ಟಿಕೊಂಡಿರಲಿಲ್ಲ. ಆತನನ್ನು ಹಿಮಪಾತ ಸೆಳೆದುಕೊಂಡು ಹೋಯಿತು. ಈ ಘಟನೆ ಲೋಪ್ಸಾಂಗ್‌ನನ್ನು ಅಲ್ಲಾಡಿಸಿ ಬಿಟ್ಟಿತು. ಆದರೂ ಪರ್ವತಾರೋಹಣದ ಆಕರ್ಷಣೆಯನ್ನು ಅವನಲ್ಲಿ ಕಿಂಚಿತ್ತೂ ಕಡಿಮೆ ಮಾಡಲಿಲ್ಲ.

೧೯೯೫ರಲ್ಲಿ ಅವನು ಮೂರನೆಯ ಬಾರಿ ಪೂರಕ ಆಮ್ಲಜನಕದ ಅವಶ್ಯಕತೆಯಿಲ್ಲದೆ ಎವರೆಸ್ಟ್ ಏರಿ ಬಂದ. ಈ ಬಾರಿ ಅವನು ರಾಬ್ ಹಾಲ್‌ನ ಪರ್ವತಾರೋಹಣ ತಂಡದ ಕೆಲಸಗಾರನಾಗಿದ್ದ. ಅದಾದ ಮೂರೇ ತಿಂಗಳಿಗೆ ಪಾಕಿಸ್ತಾನದಲ್ಲಿರುವ ೨೬,೪೦೦ ಅಡಿ ಎತ್ತರದ ಬ್ರಾಡ್ ಪೀಕ್ ಎಂಬ ಪರ್ವತವನ್ನು, ಫಿಷರ್ ತಂಡದ ಕೆಲಸಗಾರನಾಗಿ ಹತ್ತಿ ಬಂದ. ಅವನು ಪರ್ವತಗಳನ್ನು ಹತ್ತಲು ಶುರು ಮಾಡಿ ಕೇವಲ ಮೂರು ವರ್ಷವಾಗಿತ್ತು. ಆದರೆ ಆ ಅಲ್ಪಾವಧಿಯಲ್ಲಿ ಹತ್ತಕ್ಕೂ ಹೆಚ್ಚು ಹಿಮಾಲಯದ ಶಿಖರಗಳನ್ನು ಏರಿ ಬಂದು, ಎತ್ತರ ಪರ್ವತಗಳ ಮಹತ್ವದ ಪರ್ವತಾರೋಹಿ ಎಂಬ ಖ್ಯಾತಿಯನ್ನು ಪಡೆದಿದ್ದ.

೧೯೯೪ರಲ್ಲಿ ಜೊತೆಯಲ್ಲಿಯೇ ಪರ್ವತಾರೋಹಣ ಮಾಡಿದ ಸ್ಕಾಟ್ ಫಿಷರ್ ಮತ್ತು ಲೋಪ್ಸಾಂಗ್ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಮೆಚ್ಚಿಕೊಳ್ಳಲಾರಂಭಿಸಿದರು. ಇಬ್ಬರಿಗೂ ಸೀಮಾತೀತವಾದ ಶಕ್ತಿ, ಸೆಳೆಯುವಂತಹ ಚೆಲುವು ಮತ್ತು ಹುಡುಗಿಯರನ್ನು ಸುಲಭವಾಗಿ ಮರುಳು ಮಾಡುವ ನೈಪುಣ್ಯವಿತ್ತು. ಲೋಪ್ಸಾಂಗ್ ಫಿಷರ್‌ನಿಗೆ ಎಂತಹ ಶಿಷ್ಯನಾದನೆಂದರೆ, ಅವನಂತೆಯೇ ಕೂದಲನ್ನು ಪೋನಿಟೇಲ್ ಮಾಡಿಕೊಂಡ. “ಸ್ಕಾಟ್ ಸಿಕ್ಕಾಪಟ್ಟೆ ಗಟ್ಟಿಗ. ನಾನೂ ಗಟ್ಟಿಗ’’ ಎಂದು ಒಮ್ಮೆ ಲೋಪ್ಸಾಂಗ್ ಯಾವುದೇ ಸಂಕೋಚವಿಲ್ಲದಂತೆ ನನ್ನೊಡನೆ ಹೇಳಿಕೊಂಡ. “ನಾವಿಬ್ಬರೂ ಒಳ್ಳೆ ಜೋಡಿ ಆಗ್ತೀವಿ. ಸ್ಕಾಟ್ ನಂಗೆ ಅಷ್ಟೊಂದು ದುಡ್ಡು ಕೊಡಲ್ಲ. ರಾಬ್ ಹಾಲ್ ಅಥವಾ ಜಪನೀಸ್ ತಂಡ ಅವನಿಗಿಂತಲೂ ಹೆಚ್ಚು ಹಣ ಕೊಡುತ್ತೆ. ಆದರೆ ನಂಗೆ ದುಡ್ಡು ಬೇಡ. ನನ್ನ ಭವಿಷ್ಯ ನಂಗೆ ಮುಖ್ಯ. ಸ್ಕಾಟ್ ನನ್ನ ಭವಿಷ್ಯ. ಅವನು ನಂಗೆ ಏನು ಹೇಳ್ತಾನೆ ಗೊತ್ತಾ? ‘ಲೋಪ್ಸಾಂಗ್, ನನ್ನ ಶಕ್ತಿವಂತ ಶೆರ್ಪಾ! ನಾನು ನಿನ್ನನ್ನು ಪ್ರಖ್ಯಾತ ಮಾಡ್ತೀನಿ’… ನನಗೆ ಏನನ್ನಿಸುತ್ತೆ ಅಂದ್ರೆ, ಸ್ಕಾಟ್ ನನ್ನ ಸಲುವಾಗಿ ತನ್ನ ಮೌಂಟನ್ ಮ್ಯಾಡ್‌ನೆಸ್‌ನಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾನೆ.’’

ವಸುಧೇಂದ್ರ ಫೋಟೋ : ಯು ಬಿ ಪವನಜ

‍ಲೇಖಕರು admin

December 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. kumbar Veerabhadrappa

    ಎವರೆಸ್ಟ್ ಸಿನೆಮಾ ನೋಡಿದ್ದೆ..ಬಾಲ್ಟಸರ್ ಕೊರ್ಮಾಕುರ್ ನಿರ್ದೇಶನದ್ದು, ಅದಕ್ಕೆ ಪೂರಕವಾಗಿ ಜಾನ್ ಕ್ರಾಕೌರ್ ನ ಎವರೆಸ್ಟ್ ಓದುತ್ತಿರುವೆ. ಅದೂ ನಮ್ಮೆಲ್ಲರ ಪ್ರೀತಿಯ ಲೇಖಕ ವಸುಧೇಂದ್ರ ಸೊಗಸಾಗಿ ಅನುವಾದಿಸಿರೋದನ್ನು. ಸುಮಾರು ಅರವತ್ತೆಪ್ಪತ್ತು ಸಾವಿರಾನ ಮೂಲ ಲೇಖಕರಿಗೆ ನೀಡಿ ಅನುಮತಿ ಪಡಕೊಂಡು ಕನ್ನಡಕ್ಕೆ ತಂದಿದ್ದಾರೆ. ಇದೊಂದು ಸೃಜನಶೀಲ ಥ್ರಿಲ್ಲರ್. ಓದಿದರೆ ನಿಮಗೇ ಲಾಭ
    ಕುಂವೀ

    ಪ್ರತಿಕ್ರಿಯೆ
  2. ಮಾಲಿನಿ

    ಓದುತ್ತಿದ್ದೇನೆ, ನಿಮ್ಮೆಲ್ಲ ಪುಸ್ತಕಗಳ ರೀತಿಯೇ ಅಥವಾ ಅವೆಲ್ಲಕ್ಕಿಂತ ಕೊಂಚ ಭಿನ್ನವಾಗಿ ಅದೇ ಓದಿಸಿಕೊಳ್ಳುತ್ತಿದೆ. ಅಭಿನಂದನೆಗಳು ಮತ್ತು ವಂದನೆಗಳು.

    ಪ್ರತಿಕ್ರಿಯೆ
  3. ಮುಗಿಯದ ಮೌನ- GKN

    ಎವರೆಸ್ಟಿನ ಕುತೂಹಲ ತಣಿಸಲು ಬಹಳ ಒಳ್ಳೆಯ ಪುಸ್ತಕ,,,,,, ಇನ್ನೊಂದು ವಿಷಯವೆಂದರೆ, ತೇನ್ ಸಿಂಗ್ ನೋರ್ಗೆ ಬರೆದ (ಬರೆಸಿದ) ಅವನ ಜೀವನ ಚರಿತ್ರೆ,,,,,,, ಎವೆರೆಸ್ಟಿನ ಸಂಪೂರ್ಣ ಚಿತ್ರಣದ ಜೊತೆಗೆ, ಅಂದಿನ ಜೀವನ ಶೈಲಿಯ ಪರಿಚಯ ಮಾಡಿಕೊಡುತ್ತದೆ, ಆಸಕ್ತರೂ ಅದನ್ನೂ ಓದಬಹುದು.

    ಪ್ರತಿಕ್ರಿಯೆ
  4. ವಸುಧೇಂದ್ರ

    ಅವಧಿ, ಕುಂವೀ, ಮಾಲಿನಿ, ಜಿಕೆಎನ್ – ಎಲ್ಲರಿಗೂ ಧನ್ಯವಾದಗಳು

    ಪ್ರತಿಕ್ರಿಯೆ
  5. ವಿನತೆ ಶರ್ಮ

    What happened on May 10/11, 1996 up on the big mountain has become one of the best retold human narratives in the history of mountaineering. How people died or survived is still being discussed in Sports Psychology field from several angles – team work, cohesion etc. Glamourising the Big 8 climbs, too much competition between expedition teams and leaders, untrained climbers and of course the overpowering natural world…Jon Krakauer sold the story well for big money; later accepted that several facts in his account (in his published book) were incorrect. Jaana!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: