ವಸುಧೇಂದ್ರ ಕಂಡ ‘ತಿಥಿ’

ಶುಭ ‘ತಿಥಿ’

vasudhendra1

ವಸುಧೇಂದ್ರ

ಇತ್ತೀಚಿನ ದಿನಗಳಲ್ಲಿ FB ಯಲ್ಲಿನ ವಿಪರೀತ ಹೊಗಳಿಕೆಗೆ ಮರುಳಾಗಿ ಕನ್ನಡ ಸಿನಿಮಾ ನೋಡಲು ಹೋದರೆ, ನಿರಾಸೆಯಾಗಿ ಬಂದಿದ್ದೇ ಹೆಚ್ಚು. ಆದ್ದರಿಂದ ’ತಿಥಿ’ ನೋಡಲು ಹೋಗುವಾಗ ಅನುಮಾನವಂತೂ ಇತ್ತು. ಆದರೆ ಆ ಎಲ್ಲಾ ಅನುಮಾನಗಳು ಮೀರುವಂತೆ ಸಿನಿಮಾ ಇಷ್ಟವಾಯ್ತು. ನಿಸ್ಸಂಶಯವಾಗಿ ಕನ್ನಡದ ಮುಖ್ಯ ಸಿನಿಮಾಗಳಲ್ಲಿ ಇದೂ ಒಂದು. ಸಾವಿನ ನೆರಳಲ್ಲಿ ಬದುಕಿನ ಹೊಯ್ದಾಟಗಳನ್ನು, ಬವಣೆಗಳನ್ನು, ಸುಖಗಳನ್ನು ಕಟ್ಟಿಕೊಡುವ ಈ ಚಿತ್ರ ತನ್ನದೇ ವಿಶೇಷ ಚೆಲುವನ್ನು ಹೊಂದಿದೆ.

ಸಿನಿಮಾದ ನಿರೂಪಣೆಯಲ್ಲಿನ ಸಹಜತೆಯೇ ಈ ಚಿತ್ರದ ಗಮನಾರ್ಹ ಅಂಶ. ಎಲ್ಲಿಯೂ ನಾಟಕೀಯತೆ ಕಾಣುವದಿಲ್ಲ. ಸುಮ್ಮನೆ ಊರಿನ ಜನರನ್ನು ಬಳಸಿಕೊಂಡು ಇಷ್ಟೊಂದು ಸಹಜತೆಯನ್ನು ಸಿನಿಮಾಕ್ಕೆ ತಂದು ಕೊಡಬಹುದೆ ಎಂದು ಅಚ್ಚರಿಯಾಯ್ತು. ಕಾಡಜ್ಜನು ತನ್ನ ಹಣದಲ್ಲಿ ಕುರಿ ಕಾಯುವ ಹುಬ್ಬಳ್ಳಿ ಕಡೆಯವರಿಗೆ ಕೋಳಿ, ಮದ್ಯ ತರಿಸಿಕೊಟ್ಟಾಗ, ಆ ಗುಂಪಿನಲ್ಲಿ ಮೂಡುವ ಸಂಭ್ರಮ, ಸಡಗರ ಇನ್ನೂ ಕಣ್ಣ ಮುಂದೆ ಕುಣಿಯುತ್ತಿದೆ. ಭೂಮಿ ದಂಧೆಯ ಶ್ರೀಮಂತನಿಂದ ಹಣ ತುಂಬಿದ ಸೂಟ್‌ಕೇಸಿನಿಂದ ತಮ್ಮಣ್ಣ ಹೊಡೆಸಿಕೊಳ್ಳುವ ದೃಶ್ಯ ಹೃದಯ ಕಲುಕಿ ಬಿಟ್ಟಿತು.

tithi3

ಹಳ್ಳಿಯ ಸಿನಿಮಾವೆಂದರೆ ಅದರಲ್ಲಿ ಎಗ್ಗಿಲ್ಲದಂತೆ ಅಶ್ಲೀಲ ಸಂಭಾಷಣೆಗಳು ಇರಬೇಕು ಎನ್ನುವ ವಾದವೊಂದು ಇತ್ತೀಚೆಗೆ ಕನ್ನಡದಲ್ಲಿ ಹುಟ್ಟಿಕೊಂಡಿತ್ತು. ನಿರ್ದೇಶಕನಲ್ಲಿ ವಿಫುಲ ಸೃಜನಶೀಲತೆ ಇದ್ದರೆ, ಇಂತಹ ಪೇಲವ ವಾದಗಳಿಗೆ ಅರ್ಥವಿಲ್ಲವೆನ್ನುವ ಸಂಗತಿ ’ತಿಥಿ’ ನಮಗೆ ತಿಳಿಸಿ ಕೊಡುತ್ತದೆ.

ದೋಷಗಳಿಲ್ಲವೆಂದಲ್ಲ. ಕತೆಗೆ ಇನ್ನಷ್ಟು ಬಿಗಿ, ಹೊಸತನ ಬೇಕಿತ್ತು ಎಂದು ನನಗನ್ನಿಸಿತು. ಸಾವಿನ ಮನೆಯಲ್ಲಿ ಬದುಕಿನ ಸಂಗತಿಗಳು ಕೆರಳುವ ಕತೆಗಳು ’ಸಂಸ್ಕಾರ’ದಿಂದ ಶುರುವಾಗಿ ಬೇಕಾದಷ್ಟು ಕನ್ನಡದಲ್ಲಿ ಬಂದಿವೆ. ಕುಂವೀಯವರ ಒಂದು ಕತೆಯಂತೂ ಹೆಚ್ಚೂ ಕಡಿಮೆ ಇಂತಹದೇ ದಾಟಿಯಲ್ಲಿ ನಡೆಯುತ್ತದೆ (ಕತೆಯ ಹೆಸರು ನೆನಪಿಲ್ಲ). ಇಲ್ಲಿಯೂ ಅದೇ ಕತೆಯಾದ್ದರಿಂದ, ಸಿನಿಮಾ ಆರಂಭವಾದ ಕೆಲವೇ ಹೊತ್ತಿನಲ್ಲಿ ಇಡೀ ಕತೆಯ ಹಂದರ ಕಣ್ಣಮುಂದೆ ಸುಳಿದು ಹೋಗುತ್ತದೆ.

ಚಿತ್ರ ಯಾವುದೇ ಅನಿರೀಕ್ಷಿತ ತಿರುವುಗಳಿಲ್ಲದಂತೆ ಅದೇ ದಾರಿಯಲ್ಲಿ ಸಾಗುತ್ತದೆ. ಹುಬ್ಬಳ್ಳಿಯ ಜನರು ಆ ಪರಿ ರಾಗಿ ಮುದ್ದೆ ಯಾಕೆ ತಿನ್ನುತ್ತಾರೆ, ಹುಬ್ಬಳ್ಳಿ ಹುಡುಗಿ ಒಮ್ಮೊಮ್ಮೆ ಇದ್ದಕ್ಕಿದ್ದಂತೆಯೇ ಬೆಂಗಳೂರು ಭಾಷೆ ಯಾಕೆ ಮಾತನಾಡುತ್ತಾಳೆ – ಎನ್ನುವಂತಹ ಸಣ್ಣ ಪುಟ್ಟ ಗೊಂದಲಗಳೂ ಇವೆ. ಆದರೆ ನನಗೆ ಸಿನಿಮಾವೊಂದನ್ನು ಸಂತೋಷದಿಂದ ನೋಡಲು ಅವೆಲ್ಲಾ ಅಡ್ಡಿಯಾಗಿ ಕಾಣುವದಿಲ್ಲ.

ಸದ್ಯದ ಬಿರುಬಿಸಿಲಿಗೆ ಬಾಡಿರುವ ಕನ್ನಡ ಸಿನಿಮಾದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡರೆ, ಮುಂಗಾರಿಗೆ ಒಳ್ಳೆಯ ’ತಿಥಿ’ಯೇ ಬಂದಿದೆ. ಮುಂದಿನ ದಿನಗಳಲ್ಲಿ ಬರುವ ಸಿನಿಮಾಗಳು ಯಾವ ಮಟ್ಟದಲ್ಲಿರಬೇಕು ಎನ್ನುವುದಕ್ಕೂ ಈ ಚಿತ್ರ ಮುನ್ನುಡಿಯನ್ನು ಬರೆದಿದೆ. ಈ ವರ್ಷ ಭರ್ಜರಿ ಮಳೆ ಬರುತ್ತದೆಂದು ಹವಾಮಾನ ಇಲಾಖೆ ಶುಭ ನುಡಿದಿದ್ದಾರೆ!

ವಿಶೇಷವೆಂದರೆ ನನ್ನ ಮಲೆಯಾಳಿ ಗೆಳೆಯನೊಬ್ಬನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದೆ. ಅವನಿಗೆ ಈ ಸಿನಿಮಾ ನನಗಿಂತಲೂ ಹೆಚ್ಚು ಇಷ್ಟವಾಯ್ತು. ಕನ್ನಡಿಗರಿಗೆ ಇಂತಹ ಅವಕಾಶ ಸಿಗದೆ ಅದೆಷ್ಟು ವರ್ಷಗಳಾಗಿದ್ದವು!

’ತಿಥಿ’ ತಪ್ಪದೆ ಒಮ್ಮೆ ನೋಡಬೇಕಾದ ಸಿನಿಮಾ.

‍ಲೇಖಕರು Admin

May 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shama, Nandibetta

    “ಮಲೆಯಾಳಿ ಗೆಳೆಯನೊಬ್ಬನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದೆ. ಅವನಿಗೆ ಈ ಸಿನಿಮಾ ನನಗಿಂತಲೂ ಹೆಚ್ಚು ಇಷ್ಟವಾಯ್ತು. ಕನ್ನಡಿಗರಿಗೆ ಇಂತಹ ಅವಕಾಶ ಸಿಗದೆ ಅದೆಷ್ಟು ವರ್ಷಗಳಾಗಿದ್ದವು!”

    ಪ್ರತಿಕ್ರಿಯೆ
  2. ಆದಿವಾಲ ಗಂಗಮ್ಮ

    ‘ಬೋ……ಪಸಂದಾಗದೆ’ ಅಂದ್ಕೊಂಡು ಬಾಯಿ ಚಪ್ಪರಸಿಕೊಂಡು,ಕೈ ನೆಕ್ಕೊಂಡು ‘ ತಿಥಿ’ ಊಟ ಉಣ್ತಿದಿರಲ್ಲಾ ನನ್ ಹೊಟ್ಟೆ ಉರಿಸ್ಕಂಡು.ನಾನಿಲ್ಲಿ ಇನೈದ್ ತಿಂಗ್ಳು ಹಿಂಗೇಯ ಅಮೆರಿಕ್ದ್ಗಾಗೆ ನಿಮ್ನೆ ನೋಡ್ಕಂಡು ಕೂತ್ಕಬೇಕಾ? ಇಲ್ಲಾ ಒಸಿ ಯೋಳಿ ‘ಆ ರಂಗಿತರಂಗಿ’ ಇಲ್ಲೂ ಓಕ್ಳಿ ಆಡ್ದಂಗೆ, ನೀವೂ ಏನಾರ, ” ತಿಥಿ” ಊಟ ಇಲ್ಲೇ ಬಡ್ಸ್ತ್ತೀರ ಹೆಂಗೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: