ವಲಸೆ ಹಕ್ಕಿಯ ಚಿತ್ತಾರ

ರಂಜನಾ

ಊರಿಂದ ಊರಿಗೆ ವಲಸೆ ಬಂದ ಹಕ್ಕಿಗಳು ನಾವು. ಸಾಗರದ ಪರಿಧಿಯನ್ನು ದಾಟಿ ಮತ್ತೊಂದು ಹೊಸ ಊರು, ದೇಶ ಭಾಷೆ, ಜನರ ಮಧ್ಯೆ ಬದುಕು ಕಟ್ಟಿಕೊಂಡು ಜೀವನದ ಜೋಕಾಲಿ ಜೀಕುತ್ತಿರುವವರು ನಾವು. ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ಹುಟ್ಟಿದೂರಿಗೆ ನೆಂಟರಂತಾದೊಡನೆ ಹಬ್ಬ ಹರಿದಿನಗಳಲ್ಲಿ ಊರ ನೆನಪುಗಳು ಮಹಾಪೂರದಂತೆ ಒತ್ತರಿಸಿ, ಇಂದು ನಾವು ಬದುಕುತ್ತಿರುವ ಇಲ್ಲಿಯ ಜೀವನಕ್ಕೂ, ಊರಲ್ಲಿ ಕಳೆದ ನೆನಪುಗಳಿಗೂ ಪೈಪೋಟಿ ಏರ್ಪಟ್ಟು ಹಲವು ಬಾರಿ ತಾಯ್ನಾಡ ನೆನಪೇ ಗೆದ್ದಿದೆ. ಇಂತಿಪ್ಪಾಗ ಮೊನ್ನೆಯಷ್ಟೇ ದೀಪಾವಳಿ ಹಬ್ಬದ ತಯಾರಿ ನಡೆಸುತ್ತಾ ಬಾಗಿಲ ಮುಂದೆ ರಂಗೋಲಿ ಗೀಚುತ್ತಾ ಗತಕಾಲಕ್ಕೆ ಕೊಂಚ ಸಮಯ ಹೋಗಿ ಬಂದೆ.

ನಮ್ಮೂರ ಜಾನಪದ ಸೊಗಡಿನ ದೀಪಾವಳಿ ಮತ್ತು ಕುಡಿ ದ್ವಾದಶಿಯಂದು ನಡೆಯುವ ತುಳಸಿ ಕಲ್ಯಾಣದಲ್ಲಿ ಮುಖ್ಯ ಪಾತ್ರವೆಂದರೆ ರಂಗೋಲಿಯೆಂದರೆ ತಪ್ಪಾಗಲಾರದು. ರಂಗೋಲಿಯೆಂದರೆ ಅಕ್ಕಿ ಹಿಟ್ಟು ಅಥವಾ ರಂಗೋಲಿ ಪುಡಿ ಮತ್ತು ಬಣ್ಣಗಳನ್ನು ಉಪಯೋಗಿಸಿ ಬರೆಯುವ ರಂಗೋಲಿಯಲ್ಲ ಇದು!

ಬೇಸಿಗೆಯಲ್ಲೇ ಕೆಂಪಾದ ಮಣ್ಣು ಸಿಗುವೆಡೆಯಿಂದ ಬುಟ್ಟಿ ತುಂಬಾ ಮಣ್ಣು ತಂದು, ಜಾಳಿಗೆಯಿಂದ ಕಲ್ಲು ಕಸ ಬೇರ್ಪಡಿಸಿ, ನುಣುಪಾದ ಮಣ್ಣಿಗೆ ಕೊಂಚ ನೀರು ಸೇರಿಸಿ ಉಂಡೆ ಕಟ್ಟಿ, ಒಣಗಿಸಿ ಶೇಖರಿಸಿಟ್ಟುಕೊಳ್ಳುವುದು. ಇನ್ನು ಗದ್ದೆಯ ಬದುಗಳ ಮೂಲೆಗಳಲ್ಲೋ, ತೋಟದ ಮಣ್ಣು ಗುಂಡಿಯಲ್ಲೋ ಇರುವ ಬಿಳಯಾದ ಜೇಡಿಮಣ್ಣು ತಂದು, ಹಸನು ಮಾಡಿ ನುಣುಪಾದ ಬೆಳ್ಳನೆಯ ಉಂಡೆಗಳನ್ನು ಮಾಡಿ ಒಣಗಿಸಿ ಅಟ್ಟದ ಮೂಲೆಯಲ್ಲಿಟ್ಟರೆ ಇವು ಹೊರ ಬರುವುದು ದೀಪಾವಳಿಗೆ ಕೊಂಚ ಮೊದಲು.

ಕೆಂಪಾದ ಕೆಮ್ಮಣ್ಣು ಉಂಡೆಗಳನ್ನು ನೀರಲ್ಲಿ ಕರಗಿಸಿ ಒಂದು ಮೆತ್ತಗಿನ ಕಾಟನ್ ಬಟ್ಟೆಯನ್ನು ಮಣ್ಣ ನೀರಲ್ಲಿ ಅದ್ದಿ ಬಲಿರಾಜನ ಕೂರಿಸುವ ಮಣೆ, ಬಿಂದಿಗೆ, ತುಳಸಿಕಟ್ಟೆಯ ಬದಿಗಳು, ಬಾವಿಯ ಕಟ್ಟೆ, ಕೊಟ್ಟಿಗೆಯ ಬಾಗಿಲುಗಳಿಗೆ ಚಿತ್ತಾರ ಬಿಡಿಸುವಷ್ಟು ಜಾಗದಲ್ಲಿ ನಾಜೂಕಾಗಿ ಬಳಿದರೆ ಕೆಂಪಾದ ಹಾಸು ಬಿಳಿಯ ಎಳೆಗಳ ಚಿತ್ತಾರ ಹೊತ್ತುಕೊಳ್ಳಲು ಸಿದ್ದ.

ಕೆಮ್ಮಣ್ಣ ಲೇಪ ಒಣಗಿದ ಮೇಲೆ ಬಿಳಿ ಜೇಡಿಮಣ್ಣಿನ ಉಂಡೆಯ ಮುರಿದು ನೀರಲ್ಲಿ ದೋಸೆ ಹಿಟ್ಟಂತೆ ಕಲಸಿದರೆ ಇದೇ ನಮ್ಮ ಪೇಂಟ್. ಒಣಗಿದ, ಕೊಂಚ ಮೆತ್ತಗಿನ ಅಡಿಕೆ ಸಿಪ್ಪೆಯನ್ನಾಯ್ದು ಅದನ್ನು ಪುಟ್ಟ ಬತ್ತಿಯಂತೆ ಹುರಿ ಹೊಸೆದುಕೊಂಡರೆ ನಮ್ಮ ಬ್ರಷ್ ರೆಡಿ. ಇಲ್ಲವಾದರೆ ಹತ್ತಿಯ ಎಳೆಗಳು. ಇದರ ತುದಿಯನ್ನು ಬಿಳಿ ಜೇಡಿಮಣ್ಣಲ್ಲಿ ಅದ್ದುತ್ತಾ ಕೆಮ್ಮಣ್ಣ ಲೇಪದ ಮೇಲೆ ಚಿತ್ತಾರ ಬೆರೆಯುತ್ತಾ ಹೋಗುವುದು ಧ್ಯಾನದಂತೆಯೇ ನನಗೆ. ಚುಕ್ಕಿ ರಂಗೋಲಿಗಳು, ಹಸುವಿನ ಹೆಜ್ಜೆ, ಹೂವು ಬಳ್ಳಿಗಳ ಬಗೆಬಗೆಯ ಚಿತ್ತಾರಗಳ ತದೇಕ ಚಿತ್ತದಿಂದ ಬರೆಯುತ್ತ ಹೋಗುವುದೊಂದೇ ಗೊತ್ತು. ಅಂತೂ ಎಲ್ಲ ಕಡೆಯೂ ಬರೆದು ಮುಗಿಸುವ ಹೊತ್ತಿಗೆ ಹಬ್ಬದ ಮುನ್ನಾದಿನ.

ಮಧ್ಯಾಹ್ನದ ಮೇಲೆ ಕೊಂಚ ಅಂಗಳದ ಬದಿಗೆ ಮುಖ ಚಾಚಿದಾಗ ಅಕ್ಕಪಕ್ಕದ ಮನೆಯ ಹೆಂಗಳೆಯರು ಒಬ್ಬರಿಗೊಬ್ಬರು ಮೊದಲು ಕೇಳುವ ಪ್ರಶ್ನೆ, “ಹಬ್ಬದ ತಯಾರಿ ಎಲ್ಲಿಯವರೆಗೆ ಬಂತು? ಶೇಡಿ ಬಿಡಿಸಿ ಮುಗಿಯಿತಾ?” ಎಂದು. (ಜೇಡಿ ಮಣ್ಣಿನ ಚಿತ್ತಾರ). ಇನ್ನು ಹಬ್ಬದ ೩ ದಿನಗಳು ದೇವರ ಎದುರು, ಮುಂಬಾಗಿಲ ಮುಂದೆ ಮತ್ತು ತುಳಸಿಯ ಎದುರಿನಲ್ಲಿ ರಂಗೋಲಿಯ ಸಂಭ್ರಮ.

ಇದಕ್ಕೆ ಮಾಮೂಲಿಯಾಗಿ ಬಳಸುವ ರಂಗೋಲಿ ಪುಡಿಯನ್ನೇ ಬಳಸುವುದೇ ಆದರೂ “ಈ ಬಾರಿಯ ರಂಗೋಲಿ ಹಿಟ್ಟು ಕೊಂಚ ಜಾಸ್ತಿಯೇ ತರಿ, ಚೆನ್ನಾಗಿ ಉದುರಿಸಲು ಬರುವುದೇ ಇಲ್ಲ” ಅಂತಲೋ “ಈ ಪುಡಿ ತುಂಬಾ ನುಣುಪು, ಹೋದ ಬಾರಿಯದು ಮತ್ತೂ ಚೆನ್ನಾಗಿತ್ತು” ಎಂದೋ ಮಾತುಗಳ ಮಾಲೆ ಪೋಣಿಸುತ್ತಾ ಬೆಳಗ್ಗೆ ಬಣ್ಣ ಬಣ್ಣದ ರಂಗೋಲಿ ಬರೆದು ಮುಗಿಸಿ ಬಿಡುತ್ತಿದ್ದೆ.

ಚಿಕ್ಕಂದಿನಿಂದಲೂ ಪಟಾಕಿಗಳ ಅಬ್ಬರದ ಸದ್ದಿಗಿಂತ, ಶಾಂತ ರಂಗೋಲಿಯ ಎಳೆಗಳು ಮತ್ತು ಬಣ್ಣಗಳ ಬಗೆಗಿನ ವ್ಯಾಮೋಹವೆನಗೆ. ದೀಪಾವಳಿ ಅಮಾವಾಸ್ಯೆಯಂದು ನಡೆಯುವ ಲಕ್ಷ್ಮಿ ಪೂಜೆಯಂದು ಬಂಧುಗಳ ಅಂಗಡಿಯೆದುರು ದೊಡ್ಡ ರಂಗೋಲಿ ಬರೆದು ಮುಗಿಸಿ, ನಿಧಾನವಾಗಿ ಸೊಂಟವನ್ನು ನೀವುತ್ತಿರುವಂತೆಯೇ ಅಕ್ಕಪಕ್ಕದ ಒಂದಿಬ್ಬರು ಅವರ ಅಂಗಡಿಯೆದುರೂ ಕೊಂಚ ಬರೆದುಕೊಡುವಂತೆ ಕೇಳಿಕೊಂಡಾಗ ಇಲ್ಲವೆನ್ನಲಾಗದೇ ಮತ್ತೊಂದು ಗಂಟೆಯ ಕಾಯಕ ಮುಂದುವರಿಸುತ್ತಿದ್ದ ನೆನಪು ಇನ್ನೂ ಮಾಸಿಲ್ಲ.

ದೀಪಾವಳಿ ಮುಗಿದು ಮುಂದಿನ ದ್ವಾದಶಿಗೆ ತುಳಸಿ ಕಲ್ಯಾಣ. ತುಳಸಿಯ ಸುತ್ತ ಕಲ್ಲಿನ ಅಂಗಳವೂ, ಟೈಲ್ಸಗಳ ಹಾಸೂ, ಸಿಮೆಂಟಿನ ಲೇಪವೂ ಇಲ್ಲದ ಆ ಸಮಯದಲ್ಲಿ, ಕಲ್ಯಾಣದ ದಿನ ತುಳಸಿ ಕಟ್ಟೆಯ ಸುತ್ತ ಮಂಟಪ ಕಟ್ಟಿ ಮುಗಿಸುತ್ತಿದ್ದಂತೇ ಸಿಂಗಾರದ ತಯಾರಿ. ಬೆಳಗ್ಗೆ ಬೆಂಕಿಯಲ್ಲಿ ಕಪ್ಪಾಗುವಂತೆ ಆದರೆ ಬೂದಿಯಾಗದಂತೆ ಸುಟ್ಟು ಇಟ್ಟ ಒಣ ತೆಂಗಿನಕಾಯಿಯ ಸಿಪ್ಪೆಯನ್ನು ಪುಡಿ ಮಾಡಿ, ಕೊಂಚ ಸೆಗಣಿ ಬೆರೆಸಿ ನೀರಿನೊಂದಿಗೆ ಕಲೆಸಿ ತುಳಸಿ ಕಟ್ಟೆಯ ಸುತ್ತ ಅಡಿಕೆ ಹಾಳೆಯನ್ನು ಕತ್ತರಿಸಿ ಮಾಡಿದ ಹಾಳೆ ಕಡಿಯಿಂದ ಸಾರಣೆ ಮಾಡಿದರೆ ಕಪ್ಪಾದ, ನುಣುಪಾದ ನೆಲದ ಹಾಸು ಸಿದ್ಧ. ಬಾಗಿ ಕುಳಿತು ತನ್ಮಯತೆಯಿಂದ ಚಕಚಕನೆ ಕೈ ಓಡಿಸುತ್ತಾ, ಹಾಡೊಂದ ಗುನುಗುತ್ತಾ ಸುತ್ತೆಲ್ಲಾ ಬಣ್ಣ ಬಣ್ಣದ ಗೆರೆಗಳ ಅಲಂಕಾರ ಮೂಡಿಸಿದ್ದು ಕನಸಲ್ಲ.

ಈಗ ಸಿಂಗಾಪುರವೆಂಬ ಸಿಂಗಾರದೂರಿನಲ್ಲಿ ಕುಳಿತು ಮುಂಬಾಗಿಲ ಮುಂದಿರುವ ಪುಟ್ಟ ಜಾಗದ ಟೈಲ್ಸಿನ ಮೇಲೆ ಹೂವು ಬಳ್ಳಿಗಳ ಮೂಡಿಸುತ್ತಾ, ಗತಕಾಲದ ಪ್ರವಾಸ ಮುಗಿಸಿ ವಾಸ್ತವಕ್ಕೆ ಮರಳಿದ ಮನಸೀಗ ನಿರ್ಮಲ. ಜೇಡಿಮಣ್ಣಿಲ್ಲದಿದ್ದರೇನು? ರಂಗೋಲಿ ಹಿಟ್ಟಿಗೆ ಬರವಿಲ್ಲ, ಹೂವು ಎಲೆಗಳ, ಚುಕ್ಕಿ ಎಳೆಗಳ ಚಿತ್ತಾರ ಬರೆದು ಬಣ್ಣ ತುಂಬುವುದಕ್ಕೇನೂ ಅಡ್ಡಿಯಿಲ್ಲ. ಕಲಿತ ಕಲೆ, ಬಳುವಳಿಯಾಗಿ ಬಂದ ಸಂಸ್ಕಾರವನ್ನು ಇರುವುದರಲ್ಲೇ ಚಂದಗಾಣಿಸಿ, ಮುಂದಿನ ಪೀಳಿಗೆಗೂ ಸಾಧ್ಯವಿರುವಷ್ಟು ಕಟ್ಟಿಕೊಡುವ ಬಾಧ್ಯತೆ ನಮ್ಮ ಮೇಲೆ. ಮುಂಬಾಗಿಲು, ದೇವರ ಮನೆಯ ಮುಂದೆ ಅಲಂಕರಿಸಿ ಹೋಳಿಗೆಯೊಂದಿಗೆ ಹಬ್ಬದ ಪಾಕದ ಸಿದ್ಧತೆ. ಸಂಜೆ ಕತ್ತಲಾಗುತ್ತಿದ್ದಂತೇ ಕಾಂಕ್ರೀಟ್ ಕಾಡಿನ ನಮ್ಮ ಗೂಡಿನಲ್ಲಿ ಲೈಟಿನ ಸರದೊಂದಿಗೆ ಹಣತೆಯ ಮತ್ತು ಹಿತ್ತಾಳೆ ದೀಪಗಳ ಬೆಳಕಿನ ರಂಗಿನಾಟ. ಊರು ಬಿಟ್ಟರೂ ಬೇರು ತಾಯ್ನಾಡಿನದೇ ಎಂದಿಗೂ..

‍ಲೇಖಕರು Avadhi

December 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ದೀವಳಿಗೆಯ ಚಂದದ ನೆನಪುಗಳು, ರಂಗೋಲಿಯಷ್ಟೇ ಸುಂದರ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: