ಮಂಡ್ಯದಲ್ಲಿ ನಾನು ಆಡಿದ ಮಾತುಗಳು ಇಲ್ಲಿವೆ.
ಈ ಎಲ್ಲ ಮಾತುಗಳನ್ನು ನಾನು ಹೀಗೆಯೇ ಆಡಿದ್ದೇನೆ ಎಂದಲ್ಲ. ಹಿಂದುಮುಂದಾಗಿರಬಹುದು. ಚೂರುಪಾರು ಬದಲಾಗಿರಬಹುದು.
ಆದರೆ ನನ್ನ ಮನಸ್ಸಿನಲ್ಲಿ ರೂಪಿಸಿಕೊಂಡಿದ್ದ ‘ಟಿಪ್ಪಣಿ’ಯಲ್ಲಿ ಈ ಎಲ್ಲ ಮಾತುಗಳು ಇದ್ದವು ಎಂಬುದು ನಿಜ.
ವಿಶ್ವಾಸದಿಂದ
ಜಿ ಪಿ ಬಸವರಾಜು
ಹಿರಿಯರೆ ಮತ್ತು ಸ್ನೇಹಿತರೆ,
ಸಂತೋಷ ಮತ್ತು ಸಂಕೋಚಗಳ ನಡುವೆ ನಿಮ್ಮ ಮುಂದೆ ನಿಂತಿದ್ದೇನೆ. ಸಂಕೋಚದ ಕಾರಣಗಳನ್ನು ವಿವರಿಸಬೇಕಾಗಿಲ್ಲ; ಅದೆಲ್ಲ ನಿಮಗೆ ಗೊತ್ತಾಗುತ್ತಿದೆ. ಸಂತೋಷದ ಕಾರಣಗಳೂ ನಿಮಗೆ ಗೊತ್ತು. ಆದರೆ ನನ್ನ ಕಾರಣಗಳನ್ನು ವಿವರಿಸುತ್ತೇನೆ:
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ಪ್ರಶಸ್ತಿ ಈ ಬಾರಿ ನನಗೆ ಸಿಕ್ಕಿದೆ. ಸಹಜವಾಗಿಯೇ ಸಂತೋಷವಾಗಿದೆ. ಖಾಸಗಿ ಸಂಸ್ಥೆಗಳು ನೀಡುವ ಹಲವು ಪ್ರಶಸ್ತಿಗಳು ಕನ್ನಡದಲ್ಲಿ, ಕರ್ನಾಟಕದಲ್ಲಿ ಇವೆ. ಆದರೆ ಇವುಗಳಲ್ಲಿ ಜನ ಗೌರವದ ಮೂಲಕ ಪ್ರತಿಷ್ಠೆಯನ್ನು ಪಡೆದುಕೊಂಡಿರುವ ಪ್ರಶಸ್ತಿಗಳು ಕೆಲವೇ ಕೆಲವು. ಅಂಥ ಪ್ರಶಸ್ತಿಗಳಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಯೂ ಒಂದು.
ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆಮಾಡುವಲ್ಲಿ ಈ ಪ್ರತಿಷ್ಠಾನ ಅನುಸರಿಸುತ್ತಿರುವ ಕಾರ್ಯವಿಧಾನ ಪಾರದರ್ಶಕವಾಗಿದೆ. ತೀರ್ಪುಗಾರರನ್ನು ಗೊತ್ತುಮಾಡುವಾಗ ಅರ್ಹರನ್ನೇ ಆಯ್ಕೆಮಾಡಿಕೊಳ್ಳುವುದು ಮತ್ತು ತೀರ್ಪುಗಾರರ ಆಯ್ಕೆಯನ್ನು ಗೌರವದಿಂದ ಒಪ್ಪಿಕೊಂಡು ಅಂಥವರಿಗೆ ಪ್ರಶಸ್ತಿಕೊಡುವುದು ಹಾಗೂ ತೀರ್ಪಿನ ವಿಚಾರದಲ್ಲಿ ಪ್ರತಿಷ್ಠಾನ ಮಧ್ಯೆ ಮೂಗು ತೂರಿಸದಿರುವುದು-ಇವೆಲ್ಲ ಪ್ರಶಸ್ತಿಗೆ ಘನತೆಯನ್ನು ತಂದುಕೊಡುತ್ತವೆ.
ಪ್ರಶಸ್ತಿ ಒಳಗೊಳ್ಳುವ ನಗದು ಹಣ ಹೆಚ್ಚಾದರೆ, ಪ್ರಶಸ್ತಿಯ ಗೌರವ ಹೆಚ್ಚುತ್ತದೆ ಎಂಬ ತಿಳುವಳಿಕೆ ಬಾಲಿಶವಾದದ್ದು.
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಪ್ರಶಸ್ತಿಯನ್ನು ವಿತರಿಸುವಾಗ ಅನುಸರಿಸುತ್ತಿರುವ ವಿಧಾನಗಳು ಕೂಡಾ ಲೇಖಕರ ಗೌರವವನ್ನು ಹೆಚ್ಚಿಸುವಂತಿವೆ.
ಪ್ರಶಸ್ತಿ ಪಡೆದವರಿಗೆ ಮಾತ್ರವಲ್ಲದೆ, ಪ್ರಶಸ್ತಿಯ ಪೈಪೋಟಿಯಲ್ಲಿ ಭಾಗವಹಿಸುವ ಎಲ್ಲ ಕತೆಗಾರರಿಗೂ ಫಲಿತಾಂಶವನ್ನು ತಿಳಿಸುವ ಒಳ್ಳೆಯ ಸಂಪ್ರದಾಯವೊಂದನ್ನು ಈ ಪ್ರತಿಷ್ಠಾನ ಆರಂಭಿಸಿದೆ. ಪ್ರಶಸ್ತಿಯನ್ನು ಸರಿಯಾದ ರೀತಿಯಲ್ಲಿ ಘೋಷಿಸುವುದು ಮತ್ತು ಪ್ರಶಸ್ತಿ ಕೊಡುವ ಸಮಾರಂಭವನ್ನು ಸಾಂಸ್ಕೃತಿಕ ಹಬ್ಬದಂತೆ ಆಚರಿಸುವುದು, ಪ್ರಶಸ್ತಿ ಪಡೆದವರು ಈ ಸಮಾರಂಭದ ಕೇಂದ್ರಬಿಂದು ಎಂಬುದನ್ನು ಎಚ್ಚರದಿಂದ ಪಾಲಿಸುವುದು; ಜೊತೆಗೆ ಈ ಸಮಾರಂಭದಲ್ಲಿ ಅರ್ಹ ವಿದ್ವಾಂಸರು, ಬರಹಗಾರರು ಭಾಗವಹಿಸುವಂತೆ ಮಾಡುವುದು-ಇವೆಲ್ಲ ಪ್ರಶಸ್ತಿ ಪಡೆದವರಿಗೆ ಸಂತೋಷವನ್ನು ಉಂಟುಮಾಡುತ್ತವೆ. ಪ್ರೊ. ಷ. ಶಟ್ಟರ್ ಮತ್ತು ದೇವನೂರ ಮಹಾದೇವ ಈ ಬಾರಿಯ ಸಮಾರಂಭದಲ್ಲಿದ್ದರು. ಇದೆಲ್ಲ ನನ್ನ ಸಂತೋಷವನ್ನು ಹೆಚ್ಚಿಸಿದೆ. ಹೀಗೆ ಇನ್ನಷ್ಟು ನನ್ನ ಸಂತೋಷದ ಕಾರಣಗಳನ್ನು ಪಟ್ಟಿಮಾಡಬಹುದು. ಅದನ್ನು ಇಲ್ಲಿಗೇ ಬಿಡುತ್ತೇನೆ.
ಕಳೆದ ಹತ್ತು ಹದಿನೈದು ವರ್ಷಗಳಿಂದ ಡಾ.ಬೆಸಗರಹಳ್ಳಿ ರಾಮಣ್ಣ ಈ ಪ್ರಶಸ್ತಿಯನ್ನು ಕೊಡುತ್ತ ಬಂದಿದೆ. ಅಂದರೆ ಇಷ್ಟು ವರ್ಷಗಳಲ್ಲಿ ಪ್ರಶಸ್ತಿಯನ್ನು ಪಡೆದಿರುವವರ ಒಂದು ಸಾಲೇ ಇದೆ. ಕತೆಗಾರ ರಾಮಣ್ಣನವರ ಸಾಲು ಇದು. ಈ ಸಾಲಿನಲ್ಲಿ ರಾಮಣ್ಣ ಕೂಡಾ ಇದ್ದಾರೆ. ಪ್ರತಿಷ್ಠಾನ ನನ್ನನ್ನು ತಂದು ಈ ಸಾಲಿನಲ್ಲಿ ನಿಲ್ಲಿಸಿದೆ. ನಾನು ಈಗ ಈ ಸಾಲಿನಲ್ಲಿ ಕೊನೆಯವನಾಗಿ ನಿಂತಿದ್ದೇನೆ. ಆದರೆ ನಾನು ಕೊನೆಯವನೂ ಅಲ್ಲ. ಮುಂದಿನ ವರ್ಷ ಇನ್ನೊಬ್ಬರು ಪ್ರಶಸ್ತಿ ಪಡೆದು ಕತೆಗಾರರ ಈ ಸಾಲಿನಲ್ಲಿ ನಿಲ್ಲುತ್ತಾರೆ. ಅದರ ಮುಂದಿನ ವರ್ಷ ಮತ್ತೊಬ್ಬರು, ಅದರ ಮುಂದಿನ ವರ್ಷ, ಅದರ ಮುಂದಿನ ವರ್ಷ. .. ಹೀಗೆ ಸಾಲು ಬೆಳೆಯುತ್ತಲೇ ಹೋಗುತ್ತದೆ.
ಈ ಸಾಲಿನಲ್ಲಿ ರಾಮಣ್ಣನವರ ಆಚೆಗೂ ಕತೆಗಾರರಿದ್ದಾರೆಯೇ? ಹೌದು ಇದ್ದಾರೆ. ಪಂಜೆ ಮಂಗೇಶರಾಯರು 1900ರಲ್ಲಿ ಬರೆದ ‘ನನ್ನ ಚಿಕ್ಕತಾಯಿ’ ಎನ್ನುವ ಕತೆಯನ್ನು ಆಧುನಿಕ ಕನ್ನಡದ ಮೊದಲ ಕತೆ ಎಂದು ಗುರುತಿಸಲಾಗುತ್ತಿದೆ. ಅದಕ್ಕಿಂತ ಹಿಂದೆಯೂ ಆಧುನಿಕ ಸಣ್ಣ ಕತೆಗಳು ಪ್ರಕಟವಾದದ್ದನ್ನು ಸಂಶೋಧಕರು ಹೇಳುತ್ತಾರೆ. ಅಂದರೆ ಆಧುನಿಕ ಕನ್ನಡ ಸಣ್ಣ ಕತೆಗಳ ಇತಿಹಾಸ ನೂರುವರ್ಷಕ್ಕೂ ಹೆಚ್ಚಿನ ಕಾಲಾವಧಿಗೆ ಚಾಚಿಕೊಳ್ಳುತ್ತದೆ. ಆಗಿನಿಂದ ಕತೆಗಾರರ ಸಾಲನ್ನು ಗುರುತಿಸಿದರೆ ರಾಮಣ್ಣ ಈ ಸಾಲಿನಲ್ಲಿದ್ದಾರೆ. ಅವರಿಗೊಂದು ಪ್ರಮುಖ ಸ್ಥಾನವೂ ಇದೆ. ಈ ಸಾಲನ್ನೇ ಪರಂಪರೆ ಎಂದು ಕರೆಯುವುದು. ಇವತ್ತಿನ ಕತೆಗಾರರ ಬೆನ್ನಿಗೆ ಈ ಒಂದು ಪರಂಪರೆ ಇದೆ.
ತನ್ನ ಬೆನ್ನಿಗೆ ಒಂದು ಪರಂಪರೆ ಇದೆ ಎಂಬ ಭಾವ ಕತೆಗಾರನಿಗೆ ಒಂದು ಸಮಾಧಾನದ, ನೆಮ್ಮದಿಯ ಸ್ಥಿತಿಯನ್ನು ತಂದುಕೊಡಬಹುದು. ಆದರೆ ಭೂತದ ಆಸರೆಗಿಂತ ವರ್ತಮಾನದ ಚಡಪಡಿಕೆ ಕತೆಗಾರನಿಗೆ ಮುಖ್ಯ. ಅದೇ ಅವನ ಕ್ರಿಯಾಶೀಲತೆಯನ್ನು ಹೆಚ್ಚಿಸುವಂಥದ್ದು. ವರ್ತಮಾನದ ಬೆಂಕಿಯ ಕೊಂಡವನ್ನು ಹಾಯದೆ ಕತೆಗಾರ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಲಾರ. ವರ್ತಮಾನ ಎಂಬುದು ಸದಾ ಉರಿಯುವ ಕೊಂಡವೇ. ಕತೆಗಾರ ಇದನ್ನು ಹಾಯಲೇಬೇಕು.
ರಾಮಣ್ಣ ಉರಿಯುವ ವರ್ತಮಾನದಲ್ಲಿ ನಿಂತು ಧಗಧಗ ಉರಿದವರು. ಉದ್ವೇಗ, ಚಡಪಡಿಕೆ, ಸಿಟ್ಟು, ಆಕ್ರೋಶ, ಇವೆಲ್ಲವೂ ಮಿಶ್ರಣಗೊಂಡ ಒಂದು ಬಗೆಯ ಭಾವೋದ್ವೇಗದಲ್ಲಿಯೇ ರಾಮಣ್ಣ ಕತೆಗಳನ್ನು ಕಟ್ಟಿದವರು.
ಅವರು ಜನರ ನಡುವೆ ನಿಂತವರು. ಅವರ ಕಷ್ಟಸುಖಗಳನ್ನು ಕಂಡವರು; ಮೌನದ ನಿಟ್ಟುಸಿರನ್ನು ಕೇಳಿಸಿಕೊಂಡವರು. ಇನ್ನೂ ನಿಖರವಾಗಿ ಹೇಳಬೇಕೆಂದರೆ ಅವರು ಮಣ್ಣಿನ ಮಗ; ಮಂಡ್ಯದ ಮಗ. ಮಂಡ್ಯದ ಭಾಷೆಯಲ್ಲಿಯೇ ಉಸಿರಾಡಿದರು. ಕತೆಗಳ ಉಸಿರಾಟಕ್ಕೂ ಅದೇ ಭಾಷೆಯನ್ನು ತುಂಬಿದವರು. ಮಂಡ್ಯದ ಭಾಷೆಯನ್ನು ಬಳಸಿದವರಲ್ಲಿ ರಾಮಣ್ಣ ಮೊದಲನೆಯವರೇನೂ ಅಲ್ಲ. ಹಿಂದೆ ಚದುರಂಗರು ರೂಪಿಸಿದ ಕಾದಂಬರಿಗಳಲ್ಲಿ ಮಂಡ್ಯದ ಭಾಷೆ ಉಸಿರಾಡಿತ್ತು. ಇನ್ನೂ ಅನೇಕರು ಮಂಡ್ಯದ ಮಣ್ಣಿನ ಭಾಷೆಯನ್ನು ಬಳಸಿದ್ದಾರೆ.
ಈಗಲೂ ಬರೆಯುತ್ತಿರುವ ಎಚ್.ಎಲ್.ಕೇಶವಮೂರ್ತಿ ಮಂಡ್ಯ ಭಾಷೆಯನ್ನು ಸಮರ್ಥವಾಗಿ ಬಳಸಿದವರು. ಈ ಭಾಷೆಯ ಮೂಲಕ, ಅದರ ಸೊಗಡು, ಗೇಲಿ, ವಿಡಂಬನೆ, ಹಾಸ್ಯ, ಕೊಂಕುಗಳ ಮೂಲಕ ಕನ್ನಡ ನಾಡಿನ ವೈಚಾರಿಕ ಪ್ರಜ್ಞೆಯನ್ನು, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿ ಪ್ರಜ್ಞೆಯನ್ನು ಎಚ್ಚರಗೊಳಿಸಲು ಹವಣಿಸುತ್ತಿರುವವರು. ರಾಮಣ್ಣ ಮಂಡ್ಯದ ಭಾಷೆಯನ್ನು ಇಷ್ಟೇ ಸಮರ್ಥವಾಗಿ ಬಳಸಿಕೊಂಡರು. ಅಲ್ಲಿನ ಜನ, ಅವರ ಬದುಕು, ರುಚಿ, ಅಭಿರುಚಿ, ಮೌಲ್ಯ, ದೊಡ್ಡತನ, ಸಣ್ಣತನ ಎಲ್ಲವನ್ನೂ ಕಲಸಿ ಮನುಷ್ಯನ ಒಳಗಣ್ಣನ್ನು ತೆರೆಸಲು ನೋಡಿದರು. ಮನುಷ್ಯರ ಒಳಗಿನ ಮನುಷ್ಯನನ್ನು ಕಾಣಿಸಲು ಹೆಣಗಿದರು.
ಮಂಡ್ಯದತ್ತ ಈಗ ಎಲ್ಲರ ಕಣ್ಣುಗಳೂ ತಿರುಗಿವೆ; ಮಂಡ್ಯದ ಭಾಷೆ, ಜನರನ್ನು ಎಲ್ಲರೂ ಕುತೂಹಲದಿಂದ ಆಸಕ್ತಿಯಿಂದ ನೋಡಲು ಕಾರಣ ಇತ್ತೀಚೆಗೆ ತೆರೆಕಂಡ ‘ತಿಥಿ’ ಸಿನಿಮಾ ವಿಶೇಷ ಕಾರಣ. ಈ ಚಿತ್ರದ ಭಾಷೆ, ಜನ, ಸಂಸ್ಕೃತಿ, ಮೌಲ್ಯ ಎಲ್ಲವೂ ಮಂಡ್ಯಭಾಗದವು. ಇದನ್ನೊಂದು ಕ್ಲಾಸಿಕ್ ಸಿನಿಮಾ ಎಂದು ಹೇಳಲಾರೆ. ಆದರೆ ಇದೊಂದು ಸಹಜ ಸಿನಿಮಾ. ಇದು ವರ್ತಮಾನಕ್ಕೆ ಮಿಡಿಯುವ ಚಿತ್ರ. ಇರುವುದನ್ನು ಕಾಣಿಸುತ್ತ ಹೋಗುತ್ತದೆ. ಆಯ್ಕೆಯನ್ನು ನೋಡುವವರಿಗೇ ಬಿಡುತ್ತದೆ. ಇಲ್ಲಿ ಹೀರೋ ಯಾರು, ಹೀರೋಯಿನ್ ಯಾರು? ಈ ಚಿತ್ರದ ‘ತಾತ್ವಿಕ ದರ್ಶನ’ ಏನು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ಸಿಕ್ಕುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಇದು ತೋರಿಸುತ್ತದೆ ಅಷ್ಟೆ; ಏನನ್ನೂ ಹೇರುವುದಿಲ್ಲ. ಮೌಲ್ಯ, ಅಪಮೌಲ್ಯ ಯಾವುದು ಎಂಬುದನ್ನು ನಿರ್ಧರಿಸಬೇಕಾದ ಹೊಣೆಗಾರಿಕೆಯನ್ನು ನೋಟಕರೇ ನಿಭಾಯಿಸಬೇಕಾಗುತ್ತದೆ. ಇದೇ ಈ ಚಿತ್ರದ ಹೆಗ್ಗಳಿಕೆ.
ಯಾವುದೇ ಕಲೆಯಾಗಲಿ, ಸಾಹಿತ್ಯವಾಗಲಿ, ಇದನ್ನೇ ಮಾಡಬೇಕು. ಮಾಸ್ತಿಯವರಾಗಲಿ, ರಾಮಣ್ಣನವರಾಗಲಿ ಇದನ್ನೇ ಮಾಡಿದರು. ತೋರಿಸಿದರು.
ವರ್ತಮಾನಕ್ಕೆ ಎದುರುಬದರಾಗಿ ನಿಲ್ಲದವನು ಸಾಹಿತಿಯಾಗಲಾರ. ವರ್ತಮಾನ ಸದಾ ಉರಿಉರಿ ಕೆಂಡವೇ. ನಮ್ಮದು ಪ್ರಜಾಪ್ರಭುತ್ವ ಎನ್ನುತ್ತೇವೆ; ಇಲ್ಲಿ ಎಲ್ಲರೂ ಸಮಾನ ಎಂದು ಹೇಳುತ್ತೇವೆ. ನಮ್ಮ ಸಂವಿಧಾನದಲ್ಲಿ ಮತಧರ್ಮನಿರಪೇಕ್ಷ (ಸೆಕ್ಯುಲರ್) ತತ್ವಕ್ಕೆ ಒತ್ತಿದೆ ಎಂದುಕೊಳ್ಳುತ್ತೇವೆ. ರಾಜ್ಯಾಂಗ, ನ್ಯಾಯಾಂಗ, ಕಾರ್ಯಾಂಗ ಏನೆಲ್ಲ ಇವೆ.
ಈ ಮುಸುಕನ್ನು ಸರಿಸಿನೋಡಿ. ಇಲ್ಲಿ ಜಾತಿಯ ಅಡ್ಡಗೋಡೆಗಳಿವೆ; ಧರ್ಮಗಳ ವಟವೃಕ್ಷದ ಬೇರುಗಳು ಎಲ್ಲೆಲ್ಲೂ ಚಾಚಿವೆ; ಗಂಡು ಹೆಣ್ಣಿನ, ಜಾತಿಗಳ, ಧರ್ಮಗಳ, ವರ್ಗಗಳ, ಮೇಲು ಕೀಳಿನ ಅಸಮಾನತೆಯಲ್ಲಿಯೇ ನಾವು ನಿತ್ಯ ಬದುಕುತ್ತಿದ್ದೇವೆ. ಇವತ್ತಿಗೂ ಹಳ್ಳಿಗಳಲ್ಲಿ ಪ್ರತ್ಯೇಕ ಬಾವಿಗಳಿವೆ; ಪ್ರತ್ಯೇಕ ಚಾ ಅಂಗಡಿಗಳಿವೆ. ಎಲ್ಲ ದೇವಾಲಯಗಳಿಗೆ ಎಲ್ಲರಿಗೂ ಪ್ರವೇಶವಿಲ್ಲ. ಎಲ್ಲ ‘ಪವಿತ್ರ’ ಕ್ಷೇತ್ರಗಳಿಗೆ ಎಲ್ಲರೂ ಹೋಗಬಹುದು ಎಂಬಂತಿಲ್ಲ. ಹಣವಿರುವವರಿಗೆ ನಗರಗಳಲ್ಲಿ ಬಾಡಿಗೆ ಮನೆಗಳು ಇವೆ ಎಂದುಕೊಂಡರೂ, ಅಲ್ಲಿ ಧರ್ಮ, ಜಾತಿಗಳ ಸರ್ಟಿಫಿಕೇಟ್ ಗಳನ್ನು ಕೇಳುವುದುಂಟು. ಹಾಗಾದರೆ ಎಲ್ಲರೂ ಸಮಾನ ಎನ್ನುವ ಮಾತು ಕೇವಲ ಪುಸ್ತಕಗಳಲ್ಲಿ.
ನಮ್ಮ ಮತಗಳು ಪವಿತ್ರ ಎನ್ನುತ್ತೇವೆ. ಪ್ರತಿಯೊಬ್ಬನೂ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎನ್ನುತ್ತೇವೆ. ಆದರೆ ಈ ‘ಪವಿತ್ರ’ ಮತಗಳು ಬಿಕರಿಯಾಗುತ್ತವೆ. ನಮ್ಮ ಶಾಸಕರ, ಸಂಸತ್ ಸದಸ್ಯರ ಮತಗಳನ್ನೇ ಮಾರಾಟ ಮಾಡುವ ವ್ಯವಸ್ಥೆಯನ್ನು ನಾವು ರೂಪಿಸಿಕೊಂಡಿದ್ದೇವೆ. ಭ್ರಷ್ಟತೆಯಿಂದ ನ್ಯಾಯಾಲಯಗಳು ಎಷ್ಟು ಮುಕ್ತವಾಗಿವೆ? ನಮ್ಮ ಮಾಧ್ಯಮಗಳಲ್ಲಿ ಹಣಕಾಸು ಹೇಗೆ ಹರಿದಾಡುತ್ತಿದೆ? ಹಣದ ಹೊಳೆಯಲ್ಲಿಯೇ ಮುಳುಗೇಳುವ ಮಾಧ್ಯಮದ ಕೆಲವು ಮಿತ್ರರು ಎಷ್ಟು ವಸ್ತುನಿಷ್ಠವಾಗಿ ಬರೆಯುತ್ತಿದ್ದಾರೆ? ಇವೆಲ್ಲ ಪ್ರಶ್ನೆಗಳನ್ನು ನಾವು ಹೊಸದಾಗಿ ಕೇಳಿಕೊಳ್ಳಬೇಕು.
ನಮ್ಮ ಕುಟುಂಬಗಳನ್ನೇ ನೋಡಿ. ಇವು ಜಗತ್ತಿಗೇ ಮಾದರಿಯಾದ ಕುಟುಂಬಗಳು ಎನ್ನತ್ತಾರೆ. ಇಲ್ಲಿ ಪ್ರೀತಿ ಮತ್ತು ಸಂಬಂಧಗಳೇ ಮುಖ್ಯ ಪಾತ್ರ ವಹಿಸುತ್ತಿವೆ ಎಂದು ಬೀಗುವುದೂ ಉಂಟು. ಆದರೆ ಇದೇ ಕುಟುಂಬಳಲ್ಲಿ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಸೊಸೆ ವಿಚಿತ್ರ ಹಿಂಸೆಯನ್ನು ಅನುಭವಿಸುತ್ತಾಳೆ. ಇವಳನ್ನು ಸುಟ್ಟು ಹಾಕುವುದೂ ಉಂಟು. ಸೊಸೆಯ ಮಾತು ಬಿಡಿ; ಮಗಳ ಗತಿ ಏನಾಗಿದೆ ನೋಡಿ: ಅವಳು ಬೇರೆ ಧರ್ಮದ ಹುಡುಗನನ್ನು ಪ್ರೀತಿಸಿದರೆ ಅದನ್ನು ನಾವು ಮೆಚ್ಚುವುದಿಲ್ಲ; ಅವಳನ್ನು ಕಡಿದು ಹಾಕುತ್ತೇವೆ.
ಇವೆಲ್ಲ ವರ್ತಮಾನದ ವಿದ್ಯಮಾನಗಳೇ. ಇದಕ್ಕೆ ಎದುರಾಗದವರು ಹೇಗೆ ಸಾಹಿತಿಯಾಗಲು ಸಾಧ್ಯ? ಈ ಬೆಂಕಿ ಬರಹಗಾರರನ್ನು ಸುಡಬೇಕು. ಸುಟ್ಟಾಗಲೇ ನಮ್ಮ ಕತೆಗಳು, ಕವಿತೆಗಳು, ಕಾದಂಬರಿಗಳು ಫಳಫಳ ಹೊಳೆಯುವುದು.
ನಮಸ್ಕಾರ.





0 Comments