ವಿನಯ ಜೋಯಿಸ್ ಎಸ್
ಇಲ್ಲೆಲ್ಲ ಹೀಗೆ, ಮೊದಲಿನಂತಿಲ್ಲ
ಯಾವುದನು ಕೇಳಲು ಸಮಯವೇ ಇಲ್ಲ!!
ಬೆಳಗ್ಗೆ ಎದ್ದರೆ ಆರೋಗ್ಯಕಾಗಿ ಧ್ಯಾನ-ವ್ಯಾಯಾಮ
ಪಟಪಟನೆ ಉಂಡಿದ್ದೆ ತಿಂಡಿ
ನಂತರವೇನಿದ್ದರೂ ಆಫಿಸು ಕೆಲಸ
ಇದೆಲ್ಲದರ ನಡುವೆ ಉಳಿದು ಬಸವಳಿದಿದೆ ಮಾತು.
ಅಪ್ಪ ಅಮ್ಮನಿಗೆ ಬೆಳಗ್ಗೆ ಆಫಿಸಿಗೆ ಹೋಗುವ ಅವಸ
ಹಾಗೆಯೆ ಮಕ್ಕಳಿಗೆ ಶಾಲೆ
ಸಂಜೆ ಕೆಲಸ ಮಾಡಿದ ಸುಸ್ತು ಒಬ್ಬರಿಗೆ
ಮತ್ತೊಬ್ಬರು ‘ಹೋಮ್ ವರ್ಕ್ ‘ಗಳಲ್ಲೇ ಸಮಯ.
ಸಮಯವಾದಾಗ ಒಂದು ದೂರದೂರಿಗೆ ಪ್ರವಾಸ
ಅಲ್ಲೂ ಅವರಿವರ ಫೋನು!
ಮಾತು ಮನೆಯೊಳಗಿರದೆ ಮನಸೊಳಗೆ ಉಳಿಯುತಿದೆ
ಮರೆತು ಹೋಗುವ ಮುನ್ನ ಮಾತಾಡಿಬಿಡೋಣ.
ಮಾತೆಂಬುದೆ ಇಂದು ಗೊಂದಲಮಯವಾಗಿದೆ
ಮಾತಾಡದೆ ಇರುವವ ಬುದ್ದಿವಂತನೆನ್ನುತ್ತಾರೆ
ಮಾತಾಡಿದರೆ ವಟವಟವೆನ್ನುವ ಕಪ್ಪೆ
ಮಾತಿಗೂ ಲೆಕ್ಕವಿಟ್ಟರೆ ಮೆಚ್ಚನಾ ಪಾರಮಾತ್ಮನು.
ವಟವಟವೆಂದಾದರೂ ಸರಿಯೆ ಇದಕ್ಕಿಂತ
ಮಾತು ಬಾಯಲ್ಲಿದ್ದರೆ ಚಂದ ಮನಸಿನಲ್ಲಲ್ಲ
ಕಪ್ಪೆಯಾಗಿಸು ನನ್ನ ಮುಂದಿನ ಬದಲಾವಣೆಯಲಿ
ಕಲ್ಲಿಗಾದರು ಹೇಳಿಕೊಳ್ಳುವೆ ನನ್ನ ವಟವಟವ.
ನಾನು ಕಪ್ಪೆಯಾದಾಗ ಜೀವ ಕೊಡದಿರು ಕಲ್ಲು ಶಿಲ್ಪಕೆ
ಜೀವ ಬಂದು ಮಾನವನಾದರೆ, ಮತ್ತೆ ಕೇಳನು ಮಾತನು
ನಾನದರೋ ಶಿಲ್ಪಕೆ ವಟವಟ ಹೇಳಿಕೊಳ್ಳುವೆ
ಜೀವ ನೀಡಿರಿ ನಿಮ್ಮ ಶಿಲ್ಪಕೆ ನಿಮ್ಮ ವಟವಟಕೆ.





0 Comments